ಬೆಂಗಳೂರು ಆ.1: ಇಂದು ಭಾರತವು ಯಾವುದೇ ಜಾಗತಿಕ ವೇದಿಕೆಯಲ್ಲಿ ಕುಳಿತರೂ, ಆ ವೇದಿಕೆಗೆ ಭಾರತದ ಉಪಸ್ಥಿತಿಯಿಂದಾಗಿ ಹೆಚ್ಚಿನ ಶಕ್ತಿ ಬರುತ್ತದೆ. ಭಾರತವು “ಒಂದು ಭೂಮಿ, ಒಂದು ಕುಟುಂಬ, ಒಂದು ಭವಿಷ್ಯ” (One Earth, One Family, One Future) ಎಂದು ಹೇಳಿದಾಗ ಇಡೀ ಜಗತ್ತು ಭಾರತದ ಮಾತನ್ನು ಆಲಿಸುತ್ತಿದೆ. ಭಾರತವು ಸ್ಪರ್ಧಾತ್ಮಕ ಯುಗದಲ್ಲಿ ಜಾಗತಿಕ ಶಕ್ತಿಯಾಗಿ ಜಗತ್ತಿನೆದುರು ನಿಂತಿದೆ ಎಂದು ಜೆಎನ್ ಯು ವಿಶ್ವವಿದ್ಯಾಲಯದ ಪ್ರೊಫೆಸರ್ ಅಂಶು ಜೋಶಿ ನುಡಿದರು.

ದಿಶಾ ಭಾರತ್ ಮತ್ತು ಕೇಂದ್ರ ಸಂಸ್ಕೃತಿ ಸಚಿವಾಲಯದ ಸಹಯೋಗದಲ್ಲಿ ದಿ ಕ್ಯಾಪಿಟಲ್ ನಲ್ಲಿ ಆಯೋಜಿಸಿದ್ದ ಮೈ ಭಾರತ್ ಕಾನ್ ಕ್ಲೇವ್-2026 ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಭಾರತ ಈ ಹಿಂದೆ ಬಾಹ್ಯಶಕ್ತಿಗಳಿಂದ ಕ್ರೂರ ದಾಳಿಗಳನ್ನು ಎದುರಿಸುವುದರೊಂದಿಗೆ ಬ್ರಿಟಿಷರ ವಸಾಹತುಶಾಹಿ ಆಡಳಿತದ ಕರಿಛಾಯೆಯನ್ನೂ ಹೊಂದಿತ್ತು. 1947ರಲ್ಲಿ ಸ್ವಾತಂತ್ರ್ಯವನ್ನು ಪಡೆದುಕೊಂಡಾಗ ‘ಇಂಡಿಯಾ’ ಎಂಬ ಹೆಚ್ಚುವರಿ ಹೆಸರನ್ನು ನಮ್ಮ ದೇಶ ಪಡೆದಿತ್ತು. ಭಾರತದಿಂದ ಇಂಡಿಯಾಗೆ, ಇಂಡಿಯಾದಿಂದ ಮತ್ತೆ ಭಾರತಕ್ಕೆ ಮರಳುವಲ್ಲಿ ಈ ದೇಶ ಹಲವು ಹಂತಗಳನ್ನು ದಾಟಿಬಂದಿದೆ ಎಂದರು.

2014ರಿಂದ ಪ್ರಾರಂಭವಾದ ನವಭಾರತದ ಪ್ರಯಾಣವು ಭಾರತದ ಪ್ರಾಚೀನ ವೈಭವ, ಜ್ಞಾನ ಮತ್ತು ಸಂಸ್ಕೃತಿಯನ್ನು ಮರಳಿ ತಂದು ಜಾಗತಿಕ ನಾಯಕತ್ವದತ್ತ ಸಾಗಿದೆ. ಇಂದು ಪ್ರಪಂಚದ ಯಾವುದೇ ಭಾಗದಲ್ಲಿ ಸಂಘರ್ಷಗಳು ನಡೆದರೂ, ಅದನ್ನು ಬಗೆಹರಿಸಲು ಭಾರತ ಮುಂದೆ ಬರಬೇಕು ಎಂದು ಪ್ರಪಂಚದ ಇತರ ದೇಶಗಳು ಬಯಸುತ್ತವೆ. 2014ರ ನಂತರ ಪ್ರಪಂಚದಾದ್ಯಂತ ಸಂಪರ್ಕಗಳನ್ನು ಸ್ಥಾಪಿಸುವ ಮೂಲಕ ‘ಭಾರತದ’ ವೈಭವವನ್ನು ಮರಳಿ ತರುವ ಪ್ರಯತ್ನ ಆರಂಭವಾಯಿತು. ಈ ಹಿಂದೆ ಯಾರೂ ಗಮನಹರಿಸದ, ನೈಸರ್ಗಿಕ ಸಂಪನ್ಮೂಲಗಳನ್ನು ಹೊಂದಿರುವ ಲ್ಯಾಟಿನ್ ಅಮೆರಿಕದ ದೇಶಗಳಿಗೂ ಪ್ರಧಾನಿ ಪ್ರವಾಸ ಮಾಡಿದರು. ದ್ವಿಧ್ರುವೀಯ ಜಗತ್ತಿನಿಂದ ಹೊರಬಂದು ಬಹುಧ್ರುವೀಯ ಜಗತ್ತನ್ನು ಭಾರತ ಪ್ರತಿಪಾದಿಸಿತು. ಹಾರ್ಡ್ ಪವರ್ ಮತ್ತು ಸಾಫ್ಟ್ ಪವರನ್ನು ಹೊರತುಪಡಿಸಿ ನವೀನ ತಂತ್ರಜ್ಞಾನಗಳ ಸಹಾಯದಿಂದ ಸಹಜೀವನದ ಸಂಬಂಧ (Symbiotic Relationship) ಮತ್ತು ಸಹಕಾರದ ಪ್ರಗತಿ (Collaborative Growth) ಎಂದು ಅಧಿಕಾರಕ್ಕೆ ಹೊಸ ಆಯಾಮವನ್ನು ನೀಡಿತು. ಭಾರತವು ಇನ್ನು ಮುಂದೆ ಅಲಿಪ್ತ ದೇಶವಲ್ಲ, ನಾವು ಎಲ್ಲರೊಂದಿಗೂ ಉತ್ತಮ ಬಾಂಧವ್ಯ ಹೊಂದಿದ (All-aligned) ದೇಶ ಎಂಬುದನ್ನು ಸ್ಪಷ್ಟಪಡಿಸಿದರು ಎಂದರು.

ಪಾಶ್ಚಿಮಾತ್ಯ ಪ್ರಬಲ ರಾಷ್ಟ್ರಗಳೊಂದಿಗೆ ಬಾಂಧವ್ಯವನ್ನು ಬಲಪಡಿಸುವುದರ ಜೊತೆಗೆ, ಭಾರತವು ಗ್ಲೋಬಲ್ ಸೌತ್ ರಾಷ್ಟ್ರಗಳ ಪ್ರಮುಖ ಧ್ವನಿಯಾಗಿ ಹೊರಹೊಮ್ಮಿದೆ. 1990ರ ದಶಕದಲ್ಲಿ ನಾವು ‘ಲುಕ್ ಈಸ್ಟ್’ ನೀತಿಯನ್ನು ಹೊಂದಿದ್ದೆವು. ಆದರೆ ಈಗಿನ ನವ ಭಾರತವು ಪೂರ್ವ ಏಷ್ಯಾ ಮತ್ತು ಆಗ್ನೇಯ ಏಷ್ಯಾದೊಂದಿಗೆ ತನ್ನ ನಾಗರಿಕತೆಯ ಹಳೆಯ ನಂಟನ್ನು ಮರುಸ್ಥಾಪಿಸಿ ‘ಆಕ್ಟ್ ಈಸ್ಟ್’ ನೀತಿಯನ್ನು ತಂದಿತು. ಸಾಗರ್, ಮಹಾಸಾಗರ್ ಎಂಬ ಹೊಸ ನೀತಿಗಳ ಮೂಲಕ ಗ್ಲೋಬಲ್ ಸೌತ್ ವಿಷಯವನ್ನು ಜಾಗತಿಕ ವೇದಿಕೆಗೆ ತಂದಿದೆ. 2023ರಲ್ಲಿ ಭಾರತವು G20 ಅಧ್ಯಕ್ಷತೆಯನ್ನು ವಹಿಸಿದಾಗ, ಆಫ್ರಿಕನ್ ಯೂನಿಯನ್ ಅನ್ನು G20ಯ ಕಾಯಂ ಸದಸ್ಯನನ್ನಾಗಿ ಮಾಡುವ ಮೂಲಕ ಐತಿಹಾಸಿಕ ಹೆಜ್ಜೆಯಿಟ್ಟಿತು ಎಂದು ಅಭಿಪ್ರಾಯಪಟ್ಟರು.

ಕೋವಿಡ್-19ನ ಸಂದರ್ಭದಲ್ಲಿ ಭಾರತವು “ವಸುಧೈವ ಕುಟುಂಬಕಂ” ಮತ್ತು “ಸರ್ವೇ ಭವಂತು ಸುಖಿನಃ” ತತ್ವಗಳನ್ನು ಆಧರಿಸಿ ‘ವ್ಯಾಕ್ಸಿನ್ ಮೈತ್ರಿ’ ಪ್ರಾರಂಭಿಸಿತು. ನಮ್ಮ 140 ಕೋಟಿ ಜನರಿಗೆ ಮಾತ್ರವಲ್ಲದೆ, 150ಕ್ಕೂ ಹೆಚ್ಚು ದೇಶಗಳಿಗೆ ಭಾರತದಲ್ಲೇ ತಯಾರಿಸಿದ ಲಸಿಕೆಗಳನ್ನು ಕಳುಹಿಸಿಕೊಡಲಾಯಿತು. ಭಾರತದ ಈ ಉಪಕ್ರಮ ಭಾರತವನ್ನು ಜಾಗತಿಕ ನಾಯಕನಾಗಿ ಗುರುತಿಸಲು ಪ್ರಾರಂಭಿಸಿತು. ಕೇವಲ ತನ್ನ ಸ್ವಂತ ಹಿತಾಸಕ್ತಿಯಿಂದ ಯಾರೂ ನಾಯಕನಾಗುವುದಿಲ್ಲ, ಆತನ ಕಾರ್ಯಗಳೇ ಆತನನ್ನು ನಾಯಕನನ್ನಾಗಿ ಮಾಡುತ್ತವೆ. ಆ ಸಮಯದಲ್ಲಿ ಬ್ರೆಜಿಲ್ ಅಧ್ಯಕ್ಷರಾದ ಜೈರ್ ಬೊಲ್ಸೊನಾರೊ ಅವರು ಹನುಮಂತನು ಸಂಜೀವಿನಿ ಪರ್ವತವನ್ನು ಒಯ್ಯುತ್ತಿರುವ ಚಿತ್ರವನ್ನು ಹಂಚಿಕೊಂಡು, ಕೋವಿಡ್ ಸಮಯದಲ್ಲಿ ಸಹಾಯ ಮಾಡಿದ್ದಕ್ಕಾಗಿ ಭಾರತ ಮತ್ತು ಭಾರತದ ಪ್ರಧಾನಿಗೆ ಧನ್ಯವಾದ ಅರ್ಪಿಸಿದ್ದರು ಎಂದು ನೆನಪಿಸಿಕೊಂಡರು.

ಭಯೋತ್ಪಾದನೆಯ ವಿರುದ್ಧ ಜಾಗತಿಕ ಚಳವಳಿಯನ್ನು ಪ್ರಾರಂಭಿಸಿತು. BRICS, SCO, G20, G7ನಂತಹ ವೇದಿಕೆಗಳಲ್ಲಿ ಭಯೋತ್ಪಾದನೆ ಮುಕ್ತ ಜಗತ್ತಿಗಾಗಿ ಭಾರತದೊಂದಿಗೆ ಎಲ್ಲರೂ ಕೈಜೋಡಿಸಿದ್ದಾರೆ. ಭಾರತವು ಶಾಂತಿಯನ್ನು ಬಯಸುತ್ತದೆ, ಆದರೆ ದೇಶದ ಮೇಲೆ ದಾಳಿಯಾದಾಗ ತನ್ನ ನೈಜ ಶಕ್ತಿಯನ್ನು ಪ್ರದರ್ಶಿಸುತ್ತದೆ, ಅಗತ್ಯ ಬಿದ್ದಾಗ ಭಾರತವು ಕಠಿಣ ನಿರ್ಧಾರಗಳನ್ನು ತಳೆಯಬಲ್ಲದು ಎಂಬುದನ್ನು ಸರ್ಜಿಕಲ್ ಸ್ಟ್ರೈಕ್ ಮತ್ತು ಆಪರೇಷನ್ ಸಿಂದೂರ ಮೂಲಕ ಜಗತ್ತಿಗೆ ತೋರಿಸಿಕೊಟ್ಟಿದೆ ಎಂದು ಹೇಳಿದರು.

ಬೆಂಗಳೂರಿನ ಇಂಡಿಕಾ ಕೌಟಿಲ್ಯ ಕೇಂದ್ರದ ನಿರ್ದೇಶಕ ಶಿವಕುಮಾರ್ ಜಿ.ವಿ ಮಾತನಾಡಿ 30-40 ವರ್ಷಗಳ ಹಿಂದಕ್ಕೆ ಹೋಲಿಸಿದರೆ ಇಂದು ನಾವು ಗಮನಾರ್ಹ ಭೌತಿಕ ಸಮೃದ್ಧಿಯನ್ನು ಹೊಂದಿದ್ದೇವೆ. ಇವೆಲ್ಲಾ ಕಡೆಗಣಿಸಲು ಸಾಧ್ಯವಿಲ್ಲದ ಪ್ರಮುಖ ಸಾಧನೆಗಳು. ಆದರೆ ನಾಗರಿಕತೆಯ ನಿರಂತರತೆಯನ್ನು ಹೊಂದುವುದು ಎಂದರೆ ನಿಜವಾಗಿಯೂ ಏನು ಎಂಬುದನ್ನು ನಾವು ಪ್ರಶ್ನಿಸಿಕೊಳ್ಳಬೇಕಿದೆ. ನಮ್ಮ ಕುಟುಂಬ, ಸಮಾಜ, ಸಮುದಾಯ ಮತ್ತು ಸಂಸ್ಕೃತಿ, ರಾಜ್ಯದ ಪರಿಕಲ್ಪನೆ ಇವೆಲ್ಲದಕ್ಕೂ ನಾವು ಪಾಶ್ಚಾತ್ಯ ಮಾದರಿಗಳನ್ನೇ ಬಳಸುತ್ತಿದ್ದರೆ, ನಾವು ಭಾರತೀಯ ನಾಗರಿಕತೆಯ ನಿರಂತರತೆಯಲ್ಲಿದ್ದೇವೆ ಎಂದು ಹೇಳಲಾಗುವುದಿಲ್ಲ ಎಂದರು.

17-18ನೇ ಶತಮಾನದವರೆಗೆ ಪ್ರತಿಯೊಂದು ಸಣ್ಣ ಸಂಸ್ಥಾನವೂ ತನ್ನನ್ನು ಭರತವರ್ಷಕ್ಕೆ ಸೇರಿದ್ದು ಎಂದು ಭಾವಿಸಿತ್ತು. ಕರ್ನಾಟಕದ ಕೆಳದಿ ಸಂಸ್ಥಾನವು ಅತ್ಯಂತ ಸಣ್ಣ ಸಂಸ್ಥಾನವಾಗಿದ್ದರೂ, ತನ್ನ ಎಲ್ಲಾ ಕಲ್ಲಿನ ಶಾಸನಗಳಲ್ಲಿ ತನ್ನನ್ನು ಭರತವರ್ಷಕ್ಕೆ ಸೇರಿದ್ದು ಎಂದು ಹೇಳಿಕೊಳ್ಳುತ್ತದೆ. ಆದ್ದರಿಂದ, ನಮ್ಮ ಭರತವರ್ಷವು ಸಾಂಸ್ಕೃತಿಕ ಮತ್ತು ರಾಜಕೀಯ ಗಡಿಗಳನ್ನು ಮೀರಿದ್ದು. ರಾಜಕೀಯ, ಸಾಂಸ್ಕೃತಿಕ ನೆಲೆಗಟ್ಪನ್ನು ಮೀರಿ ಒಂದು ದಾರ್ಶನಿಕ ಒಗ್ಗಟ್ಟನ್ನು (Philosophical Unity) ಈ ರಾಷ್ಟ್ರ ಹೊಂದಿದೆ ಎಂದರು.

ಕಳೆದ 75 ವರ್ಷಗಳಲ್ಲಿ ನಾವು ಒಂದು ನಿರ್ದಿಷ್ಟ ರೀತಿಯ ಪ್ರಯಾಣವನ್ನು ಮಾಡಿದ್ದೇವೆ. ಸ್ಥಿರವಾದ, ಸುಸ್ಥಿರ ಗಣರಾಜ್ಯವನ್ನು ನಿರ್ಮಿಸಿದ್ದೇವೆ. ಪಾಶ್ಚಾತ್ಯ ದೇಶಗಳ ಸಂವಿಧಾನಗಳಿಂದ ಏನೇ ಅಂಶಗಳನ್ನು ಅಳವಡಿಸಿಕೊಂಡಿದ್ದರೂ, ಭಾರತೀಯ ನಾಗರಿಕತೆಯ ನಿರಂತರತೆಯನ್ನು ಕಾಯ್ದುಕೊಳ್ಳುವುದು ಒಂದು ಪ್ರಮುಖ ಗುರಿಯಾಗಿತ್ತು ಎಂಬುದನ್ನು ಸಂವಿಧಾನ ಸಭೆಯ ಚರ್ಚೆಗಳು ಸ್ಪಷ್ಟಪಡಿಸುತ್ತವೆ. ಮುಂದಿನ 30 ವರ್ಷಗಳಲ್ಲಿ ಕೆಲವು ಸಿದ್ಧಾಂತಗಳ ಕಾರಣದಿಂದಾಗಿ ಅದಕ್ಕೆ ಧಕ್ಕೆಯಾಗಿರಬಹುದು, ಆದರೆ ಅವೆಲ್ಲವನ್ನೂ ಮೀರಿ ಭಾರತ ತನ್ನ ತನದ ಆಧಾರದ ಮೇಲೆಯೇ ಬೆಳೆಯಲು ಪ್ರಯತ್ನಿಸುತ್ತಿದೆ ಎಂದು ಹೇಳಿದರು.

2014ರಿಂದ ಪ್ರಧಾನಮಂತ್ರಿ ನರೇಂದ್ರ ಮೋದಿಯವರ ನಾಯಕತ್ವದ ಹಾದಿಯಲ್ಲಿ ನಾವು ಗಮನಾರ್ಹ ಪ್ರಗತಿಯನ್ನು ಸಾಧಿಸಿದ್ದೇವೆ. ಇದಕ್ಕೆ ನಾನು ಸ್ವತಃ ಸಾಕ್ಷಿಯಾಗಿದ್ದೇನೆ. 2020ರಲ್ಲಿ ಶಿಕ್ಷಣ ಸಚಿವಾಲಯದ ಅಡಿಯಲ್ಲಿ ಐ.ಕೆ.ಎಸ್ (Indian Knowledge Systems – ಭಾರತೀಯ ಜ್ಞಾನ ಪರಂಪರೆ) ವಿಭಾಗವನ್ನು ಪ್ರಾರಂಭಿಸಲಾಯಿತು. ಇದರ ಮೂಲಕ ಇಂದು ಎಲ್ಲಾ ಕ್ಷೇತ್ರಗಳಲ್ಲಿ ಭಾರತೀಯ ಜ್ಞಾನ ಪರಂಪರೆಗಳ ಪ್ರಚಾರ ಪ್ರಾರಂಭವಾಗಿದೆ. ಇದು ನಾಗರಿಕತೆಯ ನಿರಂತರತೆಯ ‘ಸಂಸ್ಥಾಗತ ಮರುಪಡೆಯುವಿಕೆಯ’ (Institutional Reclamation) ಮೊದಲ ಹೆಜ್ಜೆಯಾಗಿದೆ.ಎಂದು ಸಂತಸ ವ್ಯಕ್ತಪಡಿಸಿದರು.

ವಿಕಸಿತ ಭಾರತ’ಕ್ಕಾಗಿ, ನಮ್ಮ ಸ್ವಂತ ಬೌದ್ಧಿಕ ಸಾಮರ್ಥ್ಯ ಮತ್ತು ಶಕ್ತಿಯ ಮೇಲೆ ನಂಬಿಕೆ ಹಾಗೂ ಆತ್ಮವಿಶ್ವಾಸವನ್ನು ಹೊಂದುವುದು ಅತ್ಯಂತ ಅವಶ್ಯಕವಾಗಿದೆ. ಆಧುನಿಕ ಪ್ರಪಂಚವು ‘ವಿಜ್ಞಾನಮಯ ಕೋಶ’ ಮತ್ತು ‘ಆನಂದಮಯ ಕೋಶ’ಗಳನ್ನು ಗುರುತಿಸುವುದಿಲ್ಲ. ಸಮಾಜ ವಿಜ್ಞಾನಗಳ ವಿಷಯದಲ್ಲಿ ಭಾರತವು ಮಾನವಕುಲಕ್ಕೆ ಕೊಡುಗೆ ನೀಡಲು ಸಾಕಷ್ಟು ವಿಷಯಗಳನ್ನು ಹೊಂದಿದೆ ಎಂದರು.

ಭಾರತದ ನಾಗರಿಕತೆಯ ನಿರಂತರತೆಯನ್ನು ಜಾಗತಿಕ ನಾಯಕತ್ವದತ್ತ ಕೊಂಡೊಯ್ಯುವ ಆತ್ಮವಿಶ್ವಾಸ ನಮ್ಮಲ್ಲಿರಬೇಕು. ಅದಕ್ಕೆ ಶೈಕ್ಷಣಿಕ ಕ್ಷೇತ್ರವು ದೊಡ್ಡ ಕೊಡುಗೆ ನೀಡುತ್ತದೆ. ಬ್ರಿಟಿಷರು ಅವರ ಜ್ಞಾನವನ್ನು ನಮ್ಮ ಮೇಲೆ ಹೇರುವ ಮೂಲಕ ಮತ್ತು ಅವರ ದೃಷ್ಟಿಕೋನದಿಂದ ನಮ್ಮನ್ನು ಅಧ್ಯಯನ ಮಾಡುವ ಮೂಲಕ ಭಾರತವನ್ನು ಆಳಿದರು. ನಾವೂ ಜಗತ್ತನ್ನು ನಮ್ಮ ದೃಷ್ಟಿಕೋನದಿಂದ ಅಧ್ಯಯನ ಮಾಡಲು ಪ್ರಾರಂಭಿಸಬೇಕು, ಆ ಮೂಲಕ ಜ್ಞಾನವನ್ನು ಸೃಷ್ಟಿಸಬೇಕು, ನಮ್ಮ ಎಲ್ಲಾ ಸಂಸ್ಥೆಗಳು ಭಾರತೀಯತೆಯ ದೃಷ್ಟಿಕೋನವನ್ನು ಹೊಂದುವಂತೆ ಮಾಡಬೇಕು ಮತ್ತು ಜಾಗತಿಕ ವ್ಯವಸ್ಥೆಯ ಮೇಲೆ ಪ್ರಭಾವ ಬೀರಬೇಕು ಎಂದರು.

ಒಂದು ಕಾಲದಲ್ಲಿ ಚೀನಾ ಸೇರಿದಂತೆ ಇಡೀ ಆಗ್ನೇಯ ಏಷ್ಯಾ ಶಿಕ್ಷಣಕ್ಕಾಗಿ ಭಾರತಕ್ಕೆ ಬರುತ್ತಿತ್ತು. ಇಂಡೋನೇಷ್ಯಾದಲ್ಲಿ ಜನರನ್ನು ಭಾರತಕ್ಕೆ ಕಳುಹಿಸಲು ಪ್ರವೇಶ ಪರೀಕ್ಷೆ ಇತ್ತು. ಆದರೆ ಇಂದು ನಮ್ಮ ಶ್ರೇಷ್ಠ ಪ್ರತಿಭೆಗಳು ಬೇರೆಡೆಗೆ ಹೋಗುತ್ತಿದ್ದಾರೆ. ಶಿಕ್ಷಣಕ್ಕಾಗಿ ವಿದ್ಯಾರ್ಥಿಗಳು ವಿದೇಶಗಳಿಗೆ ಹೋಗುವುದು ನಿಯಂತ್ರಣವಾಗಬೇಕಿದೆ. ಏಕೆಂದರೆ ಜ್ಞಾನವೇ ಜಾಗತಿಕ ನಾಯಕತ್ವವನ್ನು ಮತ್ತೆ ಭಾರತಕ್ಕೆ ತರುವ ಏಕೈಕ ಮಾರ್ಗವಾಗಿದೆ ಎಂದರು.

ಉದ್ಘಾಟನಾ ಕಾರ್ಯಕ್ರಮದಲ್ಲಿ ದಿಶಾ ಭಾರತ್ ಸಂಸ್ಥೆಯ ಅಧ್ಯಕ್ಷ ಡಾ. ರಘುರಾಮ್ ಎನ್.ವಿ, ಸಂಸ್ಥಾಪಕಿ ರೇಖಾ ರಾಮಚಂದ್ರನ್ ಉಪಸ್ಥಿತರಿದ್ದರು.

ಎರಡನೇ ಅವಧಿಯಲ್ಲಿ ಜೆಎನ್ ಯು ವಿಶ್ವವಿದ್ಯಾಲಯದ ಪ್ರೊಫೆಸರ್ ಅಂಶು ಜೋಶಿ, ದಿಶಾ ಭಾರತ್ ಟ್ರಸ್ಟಿ ಕ್ಷಮಾ ನರಗುಂದ್, ಲೇಖಕಿ ರಶ್ಮೀ ಸಾಮಂತ್ ‘ಸ್ವಾತಂತ್ರ್ಯೋತ್ತರ ಭಾರತ: ರಾಷ್ಟ್ರನಿರ್ಮಾಣ, ಪ್ರಜಾಪ್ರಭುತ್ವ ಮತ್ತು ಸಂವಿಧಾನ’ ವಿಷಯದ ಕುರಿತು ಸಂವಾದದಲ್ಲಿ ಭಾಗವಹಿಸಿದರು. ಥಿಂಕರ್ಸ್ ಫೋರಮ್ ಕರ್ನಾಟಕದ ಸಂಯೋಜಕಿ ಸ್ಪೂರ್ತಿ ಮುರಳೀಧರ್ ಕಾರ್ಯಕ್ರಮವನ್ನು ನಿರ್ವಹಿಸಿದರು.

ಮೂರನೇ ಅವಧಿಯಲ್ಲಿ ಹೈದರಾಬಾದ್ ವಿಶ್ವವಿದ್ಯಾನಿಲಯದ ರಾಜ್ಯಶಾಸ್ತ್ರ ಪ್ರಾಧ್ಯಾಪಕ ಡಾ. ಅಂಶುಮಾನ್ ಬೆಹ್ರಾ, ಬೆಂಗಳೂರಿನ ಅಜಿಂ ಪ್ರೇಂ ಜಿ ವಿಶ್ವವಿದ್ಯಾನಿಲಯ ರಿಜಿಸ್ಟ್ರಾರ್ ಪ್ರೊ.ರಿಶಿಕೇಶ್ ‘ಶಿಕ್ಷಣ ಮತ್ತು ತಂತ್ರಜ್ಞಾನ: ಭಾರತದ ಜಾಗತಿಕ ಸ್ಥಾನಮಾನ’ ವಿಷಯದ ಕುರಿತು ಸಂವಾದ ನಡೆಸಿದರು. ದಿಶಾಭಾರತ್ ಸಂಯೋಜಕಿ ಡಾ. ಸೌಮ್ಯ ಸಂವಾದವನ್ನು ನಡೆಸಿಕೊಟ್ಟರು.

ಸಮಾರೋಪ ಸಮಾರಂಭ

ಬೆಂಗಳೂರು: ಜಗತ್ತಿನಲ್ಲಿ 32ಕ್ಕೂ ಅಧಿಕ ನಾಗರಿಕತೆಗಳಿದ್ದವು. ಇಂದು ಅವುಗಳ ಕರುಹುಗಳೇ ಇಲ್ಲದಂತೆ ಆಗಿದೆ. ಆದರೆ ಭಾರತ ತನ್ನ ಸಾಂಸ್ಕೃತಿಕ ನಿರಂತರತೆಯನ್ನು ಕಾಯ್ದುಕೊಂಡಿದೆ. ಇದಕ್ಕೆ ಕಾರಣ ಮೂವರು. ನಮ್ಮ ಸಂಸ್ಕೃತಿಯನ್ನು ಉಳಿಸುವುದಕ್ಕಾಗಿ ಯೋಧರು ಜೀವ ನೀಡಿದ್ದಾರೆ. ವಿದ್ವಾಂಸರು ನಮ್ಮ ಜ್ಞಾನ ಪರಂಪರೆಯನ್ನು ಉಳಿಸುವ ಮೂಲಕ ಸಂಸ್ಕೃತಿಯನ್ನು ಕಾಯ್ದುಕೊಂಡಿದ್ದಾರೆ. ಸಾಮಾನ್ಯ ಜನರು, ಅದರಲ್ಲೂ ಪ್ರಮುಖವಾಗಿ ಮಾತೆಯರು ತಮ್ಮ ಸಂಸ್ಕೃತಿಯನ್ನು ಮನೆಯಲ್ಲಿ ಆಚರಿಸುವ ಮೂಲಕ ಸಂಸ್ಕೃತಿಯನ್ನು ಉಳಿಸಿದ್ದಾರೆ ಎಂದು ದಿ ಮಿಥಿಕ್ ಸೊಸೈಟಿಯ ಅಧ್ಯಕ್ಷ ವಿ.ನಾಗರಾಜ ಹೇಳಿದರು.

ದಿಶಾಭಾರತ್ ಮತ್ತು ಕೇಂದ್ರ ಸಂಸ್ಕೃತಿ ಸಚಿವಾಲಯ ವತಿಯಿಂದ ‘ಮೈ ಭಾರತ್’ ಅಭಿಯಾನದ ನಿಮಿತ್ತ ದಿ ಕ್ಯಾಪಿಟಲ್ ನಲ್ಲಿ ಆಯೋಜಿಸಲಾದ ‘ಮೈ ಭಾರತ್ ಕಾನ್ ಕ್ಲೇವ್’ ನ ಸಮಾರೋಪ ಸಮಾರಂಭದಲ್ಲಿ ಅವರು ಮಾತನಾಡಿದರು.

ಭಾರತ ಲೌಕಿಕ ಮತ್ತು ಆಧ್ಯಾತ್ಮಿಕ ಸಂಗತಿಗಳನ್ನು ಸಮನಾಗಿ ಕಂಡಂತಹ ರಾಷ್ಟ್ರ. ಮನುಷ್ಯನಿಗೆ ಆಂತರಿಕ ಶಕ್ತಿ ಇರುವ ಹಾಗೆ, ಪ್ರತಿ ರಾ಼ಷ್ಟ್ರಕ್ಕೂ ತನ್ನದೇ ಆದ ಆಂತರಿಕ ಶಕ್ತಿ ಇದೆ. ನಮ್ಮ ದೇಶದ ಶಕ್ತಿ ಆಧ್ಯಾತ್ಮ. ವಿದೇಶಿಗರ ಆಕ್ರಮಣದ ಉದ್ದೇಶ ನಮ್ಮ ಅಧ್ಯಾತ್ಮದ ಆಧಾರಿತವಾಗಿ ಬೆಳೆದು ಬಂದ ಸಂಸ್ಕೃತಿಯನ್ನು ನಾಶಗೊಳಿಸುವುದಾಗಿತ್ತು. ಆದರೆ ಅದು ಸಾಧ್ಯವಾಗಲಿಲ್ಲ. ಸಾವಿರಾರು ವರ್ಷಗಳ ದಾಸ್ಯದ ಪರಿಣಾಮ ಎಲ್ಲಾ ಕ್ಷೇತ್ರಗಳಲ್ಲಿ ನಮ್ಮ ಸಾಮರ್ಥ್ಯವನ್ನು ನಾವು ಅನುಮಾನದಿಂದ ನೋಡುವಂತೆ ಮಾಡಲಾಯಿತು ಎಂದು ಅಭಿಪ್ರಾಯಪಟ್ಟರು.

ಡಾ.ಬಿಆರ್ ಅಂಬೇಡ್ಕರ್ ಸತ್ಯಾಗ್ರಹ, ಪ್ರತಿಭಟನೆ ಎಲ್ಲವೂ ಸಂವಿಧಾನದ ಭಾಗವೇ. ಆದರೆ ಅದು ತನ್ನ ಮಿತಿಯನ್ನು ಮೀರಿದರೆ ಅರಾಜಕತೆಯಾಗುತ್ತದೆ ಎಂದು ಅಭಿಪ್ರಾಯಪಟ್ಟಿದ್ದರು. ಯುವಜನತೆ ಇದನ್ನು ಅರಿತುಕೊಳ್ಳಬೇಕು. ಪ್ರತಿ ಪೀಳಿಗೆಗೂ ದೇಶಕ್ಕಾಗಿ ಮಾಡಬೇಕಾದ ಒಂದು ಕರ್ತವ್ಯ ಇರುತ್ತದೆ. ನಮ್ಮ ಸಂಸ್ಕೃತಿಯನ್ನು ಉಳಿಸುವ, ಪೋಷಿಸುವ ಜವಾಬ್ದಾರಿ ನಮ್ಮ ಮೇಲಿದೆ. ಭಾರತದ ಉದ್ಧಾರಕ್ಕಾಗಿಯೇ ನಮ್ಮಯ ನಾಳೆಗಳನ್ನು ಮೀಸಲಿರಿಸಬೇಕು ಎಂದು ನುಡಿದರು.

ವಿಭು ಅಕಾಡೆಮಿ ನಿರ್ದೇಶಕಿ ಡಾ.ವಿ.ಬಿ.ಆರತಿ ಮಾತನಾಡಿ ತನ್ನ ಇತಿಹಾಸವನ್ನು ಮರೆತ ರಾಷ್ಟ್ರ ತನ್ನ ಭವಿಷ್ಯವನ್ನು ಮರೆತಂತೆ ಎಂಬ ವಿವೇಕವಾಣಿಯಂತೆ ನಮ್ಮ ದೇಶದ ಬಗ್ಗೆ ನಾವು ಅರ್ಥಮಾಡಿಕೊಳ್ಳುವ ಪ್ರಯತ್ನ ಮಾಡಬೇಕು. ನಮ್ಮ ಋಷಿಗಳ ಪರಂಪರೆಯನ್ನು ಮುಂದುವರೆಸುವವರು ನಾವಾಗಬೇಕು. ಪ್ರತಿ ಭಾರತೀಯ ಉತ್ತಮ ಭಾರತೀಯನಾಗಬೇಕೇ ಹೊರತೂ, ಇನ್ಯಾವುದೋ ದೇಶದವರ ಮಾನಸಿಕತೆಯನ್ನು ಹೊಂದಿದವನಾಗಬಾರದು ಎಂದು ನುಡಿದರು.

ಸಂಸ್ಕೃತ ಪದಗಳನ್ನು ಇಂಗ್ಲಿಷ್ ನಲ್ಲಿ ಹಾಗೆಯೇ ಬಳಸಬೇಕು. ಭಾರತೀಯತೆಯನ್ನು ಎಲ್ಲಾ ವಿಭಾಗಗಳಲ್ಲಿ ಕಾಣಬೇಕು. ನಾವು ಭಾರತದ ಸ್ವತ್ವವನ್ನರಿತ ಭಾರತೀಯರಾಗಬೇಕು. ನಮ್ಮ ಇತಿಹಾಸವನ್ನು ಅದರ ದಾಖಲೆಗಳನ್ನು ಉಳಿಸಬೇಕು. ಎಲ್ಲಾ ವಿಶ್ವವಿದ್ಯಾನಿಲಯಗಳಲ್ಲಿ ಭಾರತೀಯ ಜ್ಞಾನ ಪರಂಪರೆಗಳ ಕುರಿತು ಅಧ್ಯಯನಕ್ಕಾಗಿ ವಿಭಾಗಗಳನ್ನು ಆರಂಭಿಸಬೇಕು. ಭಾರತದ ಕಥಾ ನಿರೂಪಣಾ ಶೈಲಿ ಮರಳಬೇಕು ಎಂದು ಅಭಿಪ್ರಾಯಪಟ್ಟರು.

ನಾವು ನಮ್ಮ ಪರಂಪರೆಯನ್ನು ಗೌರವಿಸಬೇಕು. ಆದರೆ ಯುಗಾನೂಕೂಲವನ್ನು ಮಾತ್ರ ಉಳಿಸಿಕೊಂಡು ಉಳಿದವುಗಳನ್ನು ಬಿಡಬೇಕು. ಪೂರ್ವಾಚಾರ್ಯರನ್ನ ಮರೆಯಬಾರದು. ಭಾರತೀಯ ಜ್ಞಾನ ಪರಂಪರೆಗಳಲ್ಲಿ ಯಾವುದಾದರೂ ಒಂದನ್ನು ಚೆನ್ನಾಗಿ ಕಲಿತು ಅದನ್ನು ಮುಂದಿನ ಪೀಳಿಗೆಗೆ ಹಸ್ತಾಂತರಿಸಬೇಕು ಎಂದರು.

ಸಾಮಾಜಿಕ ಜಾಲತಾಣ ವಿಶ್ಲೇಷಕ ಕಿರಣ್ ಕೆ.ಎಸ್ ಮಾತನಾಡಿ ವಿಕಸಿತ ಭಾರತವನ್ನು ನಾವು ನಿರ್ಮಿಸಬೇಕಾದರೆ ನಾವು ಪ್ರಸ್ತುತ ಯಾವ ಸ್ತರದಲ್ಲಿದ್ದೇವೆ, ಎಲ್ಲಿಗೆ ತಲುಪಬೇಕು ಎನ್ನುವುದನ್ನು ಸರಿಯಾಗಿ ಅಧ್ಯಯನ ಮಾಡಬೇಕು. ವಿಕಸಿತ ಭಾರತವಾಗಬೇಕಾದರೆ ಬಡತನ ನಿರ್ಮೂಲನೆ ಆಗಬೇಕು. ಯುವಕರು, ರೈತರು, ನಾರಿಶಕ್ತಿ ಸದೃಢರಾಗಬೇಕು ಎಂದರು.

ಡಿಜಿಟಲ್ ಸಾಮರ್ಥ್ಯವನ್ನು ಹೆಚ್ಚಿಸಿಕೊಳ್ಳುವುದು, ಸಾರಿಗೆ ಸೌಕರ್ಯವನ್ನು ಉತ್ತಮಗೊಳಿಸುವುದು, ರಕ್ಷಣಾ ವ್ಯವಸ್ಥೆಯನ್ನು ಬಲಿಷ್ಠಗೊಳಿಸುವ ಕಡೆಗೆ ಮುಂದಿನ ಭಾರತ ಯೋಚಿಸಬೇಕು. ಈಗಿನ ಯುವಕರು ಭಾರತಕ್ಕೆ ಹೆಮ್ಮೆಯನ್ನು ತರುವಂತಹ ಅನೇಕ ಸಾಧನೆಗಳನ್ನು ಮಾಡುತ್ತಿದ್ದಾರೆ. ಅವರ ಸಾಧನೆಯನ್ನು ಗುರುತಿಸಬೇಕು. ನಕಾರಾತ್ಮಕ ಸಂಗತಿಗಳ ಕಡೆಗೆ ಗಮನಕೊಡದೆ, ಸಕಾರಾತ್ಮಕವಾಗಿ ದೇಶಕಟ್ಟುವಲ್ಲಿ ಭಾಗಿಯಾಗುತ್ತಿರುವ ಜೆನ್-ಜಿಗಳನ್ನು ವಿದ್ಯಾರ್ಥಿಗಳಿಗೆ ಪರಿಚಯಿಸಬೇಕು ಎಂದು ನುಡಿದರು.

ಡಬ್ಲ್ಯು ಎಂ ಜಿ ಎಲೈಟ್ ಸಿಎಕ್ಸ್ ಒ ಫೋರಮ್ ನ ಪ್ರೋಗ್ರಾಂ ಹೆಡ್ ಅದಿತಿ ಅವಿನಾಶ್ ಮಾತನಾಡಿ ಭಾರತ ಪ್ರಸ್ತುತ ನಾವೀನ್ಯತೆಯ ಕೇಂದ್ರವಾಗಿ ಹೊರಹೊಮ್ಮಿದೆ. ಆದರೆ ಭಾರತವನ್ನು 2047ರಲ್ಲಿ ವಿಶ್ವಗುರುವಾಗಿಸಬೇಕಾದರೆ ಇನ್ನೂ ಹೆಚ್ಚಿನ ಕಾರ್ಯವಾಗಬೇಕಿದೆ. ಪ್ರಮುಖವಾಗಿ ಪ್ರಸ್ತುತ ನಮ್ಮ ದೇಶದ ಒಟ್ಟು ಬಜೆಟ್ ನ ಶೇ.0.6 ಮಾತ್ರ ಸಂಶೋಧನೆಗೆ ನೀಡುತ್ತಿದ್ದೇವೆ. ಸಂಶೋಧನೆಗೆ ಹೆಚ್ಚು ಆದ್ಯತೆ ನೀಡಿದಷ್ಟು ಭಾರತ ಸ್ವಾವಲಂಬಿಯಾಗುತ್ತದೆ ಎಂದು ನುಡಿದರು.

ಯುವಕರಿಗೆ ಸ್ವರಾಷ್ಟ್ರದಲ್ಲಿ ಅವಕಾಶಗಳು ನಿರ್ಮಾಣವಾಗಬೇಕು. ಯುವ ಪ್ರತಿಭೆಗಳನ್ನು ಗುರುತಿಸಿ ಅವರವರ ಕ್ಷೇತ್ರದಲ್ಲಿ ಅವಕಾಶಗಳನ್ನು ಕಲ್ಪಿಸಬೇಕು. ಆತ್ಮನಿರ್ಭರವಾಗಿ ಭಾರತೀಯ ಕಂಪನಿಗಳೇ ಇಂದು ಭಾರತೀಯರ ಅಗತ್ಯತೆಗಳನ್ನು ಪೂರೈಸುವುದರ ಜೊತೆಗೆ ವಿದೇಶಗಳಿಗೂ ರಫ್ತು ಮಾಡುತ್ತಿದೆ. ಪ್ರಮುಖವಾಗಿ ಭಾರತದ ರಕ್ಷಣಾ ಕ್ಷೇತ್ರದಲ್ಲಿ ರಫ್ತಿನ ಪ್ರಮಾಣ ಹೆಚ್ಚುತ್ತಿದೆ. 2047ರ ಹೊತ್ತಿಗೆ ಭಾರತದ ರಕ್ಷಣಾ ರಫ್ತಿನ ಪ್ರಮಾಣ ವಿಶ್ವದಲ್ಲೇ ಮುಂಚೂಣಿಯಲ್ಲಿರುತ್ತದೆ ಎಂದು ನುಡಿದರು.

ಕಾರ್ಯಕ್ರಮದಲ್ಲಿ ಶಿಕ್ಷಣತಜ್ಞರು, ಚಿಂತಕರು, ಸಂಶೋಧಕರು, ಸಂಶೋಧನಾ ವಿದ್ಯಾರ್ಥಿಗಳು ಭಾಗವಹಿಸಿದ್ದರು.

Leave a Reply

Your email address will not be published.

This site uses Akismet to reduce spam. Learn how your comment data is processed.