ಸಮಾಲ್ಖಾ, ಹರಿಯಾಣ : ರಾಷ್ಟ್ರ ಸೇವಿಕಾ ಸಮಿತಿಯ ಅಖಿಲ ಭಾರತೀಯ ಕಾರ್ಯಕಾರಿಣಿ ಹಾಗೂ ಪ್ರತಿನಿಧಿ ಮಂಡಲದ ಪ್ರಥಮ ಅರ್ಧವಾರ್ಷಿಕ ಬೈಠಕ್
ಸಮಾಲ್ಖಾ, ಹರಿಯಾಣ : ರಾಷ್ಟ್ರ ಸೇವಿಕಾ ಸಮಿತಿಯ ಅಖಿಲ ಭಾರತೀಯ ಕಾರ್ಯಕಾರಿಣಿ ಹಾಗೂ ಪ್ರತಿನಿಧಿ ಮಂಡಲದ ಪ್ರಥಮ ಅರ್ಧವಾರ್ಷಿಕ ಬೈಠಕ್ ಜುಲೈ 24- 26ರ ವರೆಗೆ ನಡೆಯಿತು. ಈ ಬೈಠಕ್ ನಲ್ಲಿ ರಾಷ್ಟ್ರ ಸೇವಿಕಾ ಸಮಿತಿಯ ಪ್ರಮುಖ ಸಂಚಾಲಿಕಾ ಶಾಂತಾಕುಮಾರಿ ಹಾಗೂ ಅಖಿಲ ಭಾರತೀತ ಪ್ರಮುಖ ಕಾರ್ಯವಾಹಿಕಾ ಸೀತಾ ಗಾಯತ್ರಿ ಸೇರಿದಂತೆ 40 ಪ್ರಾಂತಗಳಿಂದ 488 ಪ್ರತಿನಿಧಿಗಳು ಉಪಸ್ಥಿತರಿದ್ದರು.
ಬೈಠಕ್ ನಲ್ಲಿ ಫೆಬ್ರವರಿ 2026 ರಿಂದ ಇದುವರೆಗೆ ವಿವಿಧ ಸ್ತರಗಳಲ್ಲಿ ನಡೆದ ಸಮಿತಿಯ ಕಾರ್ಯಗಳ ಪರಾಮರ್ಶೆ ನಡೆಸಲಾಯಿತು. ಕಳೆದ 6 ತಿಂಗಳುಗಳಲ್ಲಿ ಕಾರ್ಯಯುಕ್ತ ಜಿಲ್ಲೆಗಳ ಹಾಗೂ ಶಾಖೆ ಮತ್ತು ಮಿಲನ್ ಗಳ ಸಂಖ್ಯೆಯಲ್ಲಿ ವೃದ್ಧಿಯಾಗಿದ್ದು, ಪ್ರಸ್ತುತ 852 ಜಿಲ್ಲೆಗಳಲ್ಲಿ 4886 ಶಾಖೆಗಳು, 1173 ಮಿಲನಗಳು ಮತ್ತು 1332 ಸೇವಾ ಕಾರ್ಯಗಳು ನಡೆಯುತ್ತಿವೆ.

ಬೈಠಕ್ ನಲ್ಲಿ ರಾಷ್ಟ್ರ ಸೇವಿಕಾ ಸಮಿತಿಯ ಸ್ಥಾಪನೆಯ 90 ವರ್ಷಗಳು ಪೂರ್ಣಗೊಳ್ಳುತ್ತಿರುವ ಹಿನ್ನೆಲೆಯಲ್ಲಿ ಕಾರ್ಯ ವಿಸ್ತರಣೆಗಾಗಿ ನಡೆಯುತ್ತಿರುವ ವಿವಿಧ ಉಪಕ್ರಮಗಳ ಚರ್ಚೆಯೊಂದಿಗೆ, ಪ್ರಸ್ತುತ ಸಾಮಾಜಿಕ ಪರಿದೃಶ್ಯ ಹಾಗೂ ಮಹಿಳೆಯರು ಮತ್ತು ಯುವಕರ ಸಮಸ್ಯೆಗಳು ಮತ್ತು ಅವುಗಳ ಸಂಭಾವ್ಯ ಪರಿಹಾರಗಳ ಕುರಿತು ಚರ್ಚಿಸಲಾಯಿತು
ಬೈಠಕ್ ನ ಕೊನೆಯ ದಿನದಂದು ಜನಸಂಖ್ಯಾ ಅಸಮತೋಲನದ ಕಾರಣಗಳು ಮತ್ತು ಪರಿಣಾಮಗಳ ಕುರಿತು ಚರ್ಚೆ ನಡೆದು, ಈ ವಿಷಯದ ಬಗ್ಗೆ ಗಂಭೀರ ಕಳವಳ ವ್ಯಕ್ತಪಡಿಸುತ್ತಾ ನಿರ್ಣಯವನ್ನು ಅಂಗೀಕರಿಸಲಾಯಿತು. ಅದರಲ್ಲಿ ದೇಶದ ಮತ್ತು ರಾಜ್ಯಗಳ ಸರ್ಕಾರಗಳು ಎಲ್ಲಾ ಸಮುದಾಯಗಳಿಗೆ ಸಮಾನ ರಾಷ್ಟ್ರೀಯ ಜನಸಂಖ್ಯಾ ನೀತಿ ಮತ್ತು ಸಮಾನ ನಾಗರಿಕ ಸಂಹಿತೆಯನ್ನು ಜಾರಿಗೆ ತರಬೇಕೆಂದು ಆಗ್ರಹಿಸಲಾಯಿತು.

ಮೂರು ದಿನಗಳ ಈ ಬೈಠಕ್ ನ ಸಮಾರೋಪದಲ್ಲಿ ಮಾರ್ಗದರ್ಶನ ನೀಡಿದ ಪ್ರಮುಖ ಸಂಚಾಲಿಕಾ ಶಾಂತಾಕುಮಾರಿ ಅವರು, ಕುರುಕ್ಷೇತ್ರದ ಭೂಮಿಯು ತನ್ನೊಳಗಿನ ದ್ವಂದ್ವಗಳನ್ನು ಕೊನೆಗೊಳಿಸಿ ಸ್ಥಿರ ಮನಸ್ಸಿನಿಂದ ಸಮಾಜದ ಹಿತಕ್ಕಾಗಿ ದೃಢ ಸಂಕಲ್ಪ ಮಾಡುವ ಸಂದೇಶವನ್ನು ನೀಡುತ್ತದೆ ಎಂದು ಹೇಳಿದರು. ಧರ್ಮ ಸಂಸ್ಥಾಪನೆಗಾಗಿ ಸರ್ವಸ್ವವನ್ನು ಅರ್ಪಿಸುವ ಸಂಕೇತ ನೀಡುವ ಈ ಭೂಮಿಯಿಂದ ಪ್ರೇರಣೆ ಪಡೆದು ನಾವು ಗುಣಮಟ್ಟದ ಕಾರ್ಯ ವಿಸ್ತರಣೆಯ ದೃಢ ಸಂಕಲ್ಪವನ್ನು ಮಾಡಬೇಕಾಗಿದೆ. ಜೊತೆಗೆ ಕಾರ್ಯಕರ್ತರಾಗಿ ನಮ್ಮ ವ್ಯಕ್ತಿತ್ವವನ್ನು ರೂಪಿಸಿಕೊಂಡು ಕಾರ್ಯಕ್ಕೆ ಸೂಕ್ತವಾಗುವಂತೆ ಮಾಡಿಕೊಳ್ಳಬೇಕಾಗಿದೆ. 90 ವರ್ಷಗಳ ಪ್ರಯಾಣವನ್ನು ಪೂರೈಸಿ ಶತಮಾನದತ್ತ ಸಾಗುತ್ತಿರುವಾಗ ನಮ್ಮ ಹೆಜ್ಜೆಗಳನ್ನು ದೃಢವಾಗಿ ಧ್ಯೇಯದ ಕಡೆಗೆ ನಿರಂತರವಾಗಿ ಮುನ್ನಡೆಸಬೇಕಾಗಿದೆ ಎಂದು ತಿಳಿಸಿದರು.
