ಲೇಖನ: ರಾಜೇಶ್ ಪದ್ಮಾರ್, ಪ್ರಾಂತ ಪ್ರಚಾರ ಪ್ರಮುಖ್, ರಾಷ್ಟ್ರೀಯ ಸ್ವಯಂಸೇವಕ ಸಂಘ


ಸ್ವಸ್ಥ-ಸುಸ್ಥಿರ ಸಮಾಜನಿರ್ಮಾಣದ ಧ್ಯೇಯೋದ್ದೇಶಗಳೊಂದಿಗೆ ಶಿಕ್ಷಣ, ಸಾಹಿತ್ಯ, ಸೇವೆ, ಆರೋಗ್ಯ ಮುಂತಾದ ಬಹುಮುಖೀ ಚಟುವಟಿಕೆಗಳಲ್ಲಿ ನಿರತವಾಗಿರುವ ರಾಜ್ಯದ ವಿಶಿಷ್ಟ ಸಾಮಾಜಿಕ ಸೇವಾ ಸಂಸ್ಥೆಯಾದ ‘ರಾಷ್ಟ್ರೋತ್ಥಾನ ಪರಿಷತ್ ಇದೀಗ ಸೇವೆ-ಸಮಾಜ ಕಾರ್ಯದ 60 ಸಾರ್ಥಕ ಸಂವತ್ಸರಗಳನ್ನು ಪೂರೈಸುತ್ತಿದೆ.
1965 ಫೆಬ್ರವರಿಯಲ್ಲಿ ಬೆಂಗಳೂರಿನ ಸೌತ್ ಎಂಡ್ ರಸ್ತೆಯ ಬಾಡಿಗೆ ಕಟ್ಟಡವೊಂದರಲ್ಲಿ ಸೇವಾಸಂಸ್ಥೆಯ ರೂಪದಲ್ಲಿ ಕಾರ್ಯಾರಂಭಮಾಡಿದ ರಾಷ್ಟ್ರೋತ್ಥಾನ ಇದೀಗ 60 ವರ್ಷಗಳನ್ನು ಪೂರೈಸಿದೆ. ಇಂದು ರಾಜ್ಯದೆಲ್ಲೆಡೆ ಸಮಾಜದ ವಿವಿಧ ವಲಯಗಳಲ್ಲಿ ಕಾರ‍್ಯಪ್ರವೃತ್ತವಾಗಿದ್ದು ಸಮಾಜ ಪರಿವರ್ತನೆಗೆ ಮಹತ್ವದ ಕೊಡುಗೆ ನೀಡುತ್ತಿದೆ. ಸೇವೆಯ ಜಗತ್ತನ್ನು life’s mission ಆಗಿ ಸ್ವೀಕರಿಸಿರುವ `ರಾಷ್ಟ್ರೋತ್ಥಾನ ಪರಿಷತ್’ಗೆ ಬೀಜವನ್ನು ಬಿತ್ತಿದವರು, ರಾಷ್ಟ್ರೀಯ ಸ್ವಯಂಸೇವಕ ಸಂಘದ ಕರ್ನಾಟಕದ ಜ್ಯೇಷ್ಠ ಪ್ರಚಾರಕರಾಗಿದ್ದ ಸ್ವ. ಯಾದವರಾವ್ ಜೋಷಿ, ಹೊ.ವೆ. ಶೇಷಾದ್ರಿ, ನಂ. ಮಾಧವರಾವ್, ಎಂ. ಗೋವಿಂದರಾವ್, ಅರಕಲಿ ನಾರಾಯಣ್ ಮುಂತಾದವರು. ಮೈ.ಚ. ಜಯದೇವ್ ಅವರು ಸಂಸ್ಥೆಯ ಪ್ರಾರಂಭದಿಂದ ಹಿಡಿದು ತಮ್ಮ ಜೀವಿತಕಾಲದವರೆಗೆ ಸಂಸ್ಥೆಯ ದಿಕ್ಕು-ಓಘಗಳನ್ನು ನಿರ್ಧರಿಸುವಲ್ಲಿ ಮುಖ್ಯ ಪಾತ್ರ ವಹಿಸಿದರು.


ದೃಷ್ಟಿ-ಧ್ಯೇಯ:
“ಸಂದರ್ಭ ಅನುಕೂಲಕರವಾಗುವಂತೆ ಏರ್ಪಡಲಿ. ಆಮೇಲೆ ಕೆಲಸ ಮಾಡೋಣ ಎಂದು ಕಾಯುತ್ತಾ ಕೂರದೇ ಅಂತಹ ಸಂದರ್ಭವನ್ನು ಸೃಷ್ಟಿಮಾಡಿ ಮುಂದಕ್ಕೆ ಸಾಗುತ್ತಿರಬೇಕು” ಎಂದು ಆರೆಸ್ಸೆಸ್‌ನ ಜ್ಯೇಷ್ಠ ಪ್ರಚಾರಕರಾಗಿದ್ದ ಯಾದವರಾವ್ ಜೋಷಿಯವರು ಹೇಳುತ್ತಿದ್ದರು. ಅದರಂತೆ ನಿರಂತರವಾಗಿ ಸೇವಾವಕಾಶಗಳನ್ನು ಹುಡುಕಿಕೊಂಡು ನಮ್ಮ ಪರಿಧಿಯಲ್ಲಿ ಸಮಾಜವನ್ನು ಹೇಗೆ ಹೆಚ್ಚು ಸಚೇತನಗೊಳಿಸಬಹುದು ಎಂಬ ದಿಕ್ಕಿನಲ್ಲಿ ಚರೈವೇತಿ-ಚರೈವೇತಿ ಎಂದು ದೃಢವಾದ ಹೆಜ್ಜೆಗಳನ್ನಿಡುತ್ತಾ ರಾಷ್ಟ್ರೋತ್ಥಾನ ಪರಿಷತ್ ಮುಂದೆ ಸಾಗುತ್ತಿದೆ – ಎನ್ನುತ್ತಾರೆ ಪ್ರಧಾನ ಕಾರ್ಯದರ್ಶಿಗಳಾದ ದಿನೇಶ್ ಹೆಗ್ಡೆ.
ಸಮಾಜದ ಸರ್ವತೋಮುಖ ಅಭಿವೃದ್ಧಿಗಾಗಿ ಸ್ವಸ್ಥ-ಸುಸ್ಥಿರ ಸಮಾಜನಿರ್ಮಾಣಕ್ಕಾಗಿ ಶಿಕ್ಷಣ, ಆರೋಗ್ಯ, ಸಾಮಾಜಿಕ ಜಾಗೃತಿ, ಸೇವಾ ಚಟುವಟಿಕೆಗಳ ಮೂಲಕ ರಾಷ್ಟ್ರೋತ್ಥಾನ ಪರಿಷತ್ ಕಾರ್ಯೋನ್ಮುಖವಾಗಿದೆ. ರಾಷ್ಟ್ರೋತ್ಥಾನ ಪರಿಷತ್‌ನ ಸೇವಾ ಚಟುವಟಿಕೆಗಳು ರಾಜ್ಯದ ಲಕ್ಷಾಂತರ ಮಂದಿಗೆ ತಲುಪಿದೆ. ಮಾನವ ಸೇವೆಯನ್ನು ಅದರ ಅತ್ಯುತ್ತಮ ಅರ್ಥದಲ್ಲಿ ಮಾಡುವುದು ಹಾಗೂ ಭಾರತೀಯ ಚಿಂತನೆಗಳ ಆಧಾರದ ಮೇಲೆ ಸಾಮಾಜಿಕವಾಗಿ, ಆರ್ಥಿಕವಾಗಿ ಹಿಂದುಳಿದ ವರ್ಗಗಳ ಸಾಮಾಜಿಕ-ಆರ್ಥಿಕ-ಸಾಂಸ್ಕೃತಿಕ ಪುನರುತ್ಥಾನ, ಗ್ರಾಮೀಣಾಭಿವೃದ್ಧಿಯ ಮೂಲಕ ಸಮರಸ ಸಮಾಜ ನಿರ್ಮಾಣ – ಇದರ ದೃಷ್ಟಿ-ಧ್ಯೇಯ.


ಕಾರ್ಯಚಟುವಟಿಕೆಗಳು:
ಸೇವಾವಸತಿ: ಶಿಕ್ಷಣ, ಆರೋಗ್ಯ, ಸ್ವಾವಲಂಬನೆ, ಸಂಸ್ಕಾರ ಈ ನಾಲ್ಕು ಆಯಾಮಗಳಲ್ಲಿ ಸೇವಾವಸತಿ (ಸೇವಾಬಸ್ತಿ / ಸ್ಲಂ)ಗಳಲ್ಲಿ ಸೇವಾ ಚಟುವಟಿಕೆಗಳು ನಡೆಯುತ್ತಿವೆ. 1989ರಲ್ಲಿ ಸ್ಲಂಗಳಲ್ಲಿ ಅನೌಪಚಾರಿಕ ಶಿಕ್ಷಣ ನೀಡುವ ಉದ್ದೇಶದಿಂದ ಸೇವಾವಸತಿ ಪ್ರಕಲ್ಪವು ಪ್ರಾರಂಭಗೊಂಡಿತು. ನಿರಂತರ ಸೇವಾ ಚಟುವಟಿಕೆಗಳ ಮೂಲಕ ಸೇವಾಬಸ್ತಿಯ ಸಾವಿರಾರು ಮಕ್ಕಳು-ಮಹಿಳೆಯರು, ಯುವಕ-ಯುವತಿಯರಿಗೆ ಈ ಯೋಜನೆ ಅಪಾರ ಪ್ರಮಾಣದಲ್ಲಿ ನೆರವಾಗಿದ್ದು, ಸಾವಿರಾರು ಕುಟುಂಬಗಳ ಸರ್ವತೋಮುಖ ಪ್ರಗತಿಗೆ ಕಾರಣವಾಗಿದೆ.


ಪ್ರಸ್ತುತ ಬೆಂಗಳೂರಿನ 210 ಸ್ಲಂ(ಸೇವಾವಸತಿ)ಗಳಲ್ಲಿ ವ್ಯಾಸಂಗಕೇಂದ್ರ, ಶಿಶುಮಂದಿರ, ಬಾಲಗೋಕುಲ, ಅನೌಪಚಾರಿಕ ಶಿಕ್ಷಣ ಕೇಂದ್ರ, ಜೋಳಿಗೆ ಪುಸ್ತಕಾಲಯ, ಸ್ವ-ಸಹಾಯ ಸಂಘ ಇತ್ಯಾದಿ ಆಯಾಮಗಳಲ್ಲಿ 685 ವಿವಿಧ ಸೇವಾಚಟುವಟಿಕೆಗಳು ನಡೆಯುತ್ತಿವೆ. ಹೊಲಿಗೆ ಮತ್ತು ಕಂಪ್ಯೂಟರ್ ತರಬೇತಿ ಕೇಂದ್ರ, ಕಿಶೋರಿಯರ ಜಾಗೃತಿ ಕಾರ್ಯಕ್ರಮ, ಉಚಿತ ಚಿಕಿತ್ಸಾ ಕೇಂದ್ರಗಳು, ಆರೋಗ್ಯ ಹಾಗೂ ನೇತ್ರ ತಪಾಸಣಾ ಶಿಬಿರಗಳು, ಸ್ಕೂಲ್ ಬ್ಯಾಗ್ ವಿತರಣೆ ಇತ್ಯಾದಿ ಚಟುವಟಿಕೆಗಳು ನಿರಂತರವಾಗಿ ನಡೆಯುತ್ತಿವೆ. ರಾಷ್ಟ್ರೋತ್ಥಾನದ ಈ ಸೇವಾವಸತಿ ಪ್ರಕಲ್ಪದ ಚಟುವಟಿಕೆಗಳಿಂದ ಸ್ಲಂನಲ್ಲಿರುವ 56000 ಮಂದಿ ಪ್ರಯೋಜನ ಪಡೆದಿದ್ದಾರೆ. ಜೊತೆಗೆ 28000ಕ್ಕೂ ಹೆಚ್ಚು ಮಂದಿ ಆರೋಗ್ಯ ಸಂಬಂಧಿತ ಚಟುವಟಿಕೆಗಳಿಂದ ಪ್ರಯೋಜನ ಪಡೆದಿದ್ದಾರೆ. 9000 ಮಂದಿ ಹೊಲಿಗೆ ತರಬೇತಿಯನ್ನು, 8000 ಮಂದಿ ಕಂಪ್ಯೂಟರ್ ತರಬೇತಿ ಹಾಗೂ 8000ಕ್ಕೂ ಅಧಿಕ ಮಂದಿ ಸ್ವ ಉದ್ಯೋಗ ನಡೆಸುತ್ತಿದ್ದಾರೆ.

ರಾಷ್ಟ್ರೋತ್ಥಾನ ರಕ್ತಕೇಂದ್ರ: 1993ರ ಮೇ 30ರಂದು ಪ್ರಾರಂಭಗೊಂಡ ರಾಷ್ಟ್ರೋತ್ಥಾನ ರಕ್ತಕೇಂದ್ರವು ಅಹರ್ನಿಶಿಯಾಗಿ 24×7 ಮಾದರಿಯಲ್ಲಿ ಕಾರ್ಯನಿರ್ವಹಿಸುತ್ತಿದೆ. ರಾಜ್ಯದ ಅತ್ಯುತ್ತಮ ರಕ್ತನಿಧಿ ಎಂಬ ಪ್ರಮಾಣಪತ್ರವನ್ನು ಪಡೆದಿದೆ. ವಿವಿಧ ಸಂಘ-ಸಂಸ್ಥೆಗಳ ನೆರವಿನೊಂದಿಗೆ ರಕ್ತದಾನ ಶಿಬಿರಗಳನ್ನು ಆಯೋಜಿಸುತ್ತಾ, ರಕ್ತದ ತುರ್ತು ಅಗತ್ಯವಿರುವವರಿಗೆ ಸಮಯಕ್ಕೆ ಸರಿಯಾಗಿ ಗುಣಮಟ್ಟದ ರಕ್ತ ಪೂರೈಸುವ ದೃಷ್ಟಿಯಿಂದ ಕಾರ್ಯಪ್ರವೃತ್ತವಾಗಿದೆ. ರಾಷ್ಟ್ರೋತ್ಥಾನ ರಕ್ತಕೇಂದ್ರದಿಂದ ಈವರೆಗೆ 4ಲಕ್ಷ ಮಂದಿ ಪ್ರಯೋಜನ ಪಡೆದಿದ್ದಾರೆ. 6000ಕ್ಕೂ ಅಧಿಕ ರಕ್ತದಾನ ಸ್ವಯಂಪ್ರೇರಿತ ರಕ್ತದಾನ ಶಿಬಿರಗಳನ್ನು ಆಯೋಜಿಸಿ 11 ಲಕ್ಷ ಮಂದಿ ರಕ್ತದಾನಿಗಳಿಂದ 5 ಲಕ್ಷ ಯೂನಿಟ್ ರಕ್ತ ಸಂಗ್ರಹಿಸಿದೆ.
ತಲಸ್ಸೇಮಿಯಾ ಆನುವಂಶಿಕ ರೋಗದಿಂದ ಬಳಲುತ್ತಿರುವ ಮಕ್ಕಳಿಗೆ ‘ಸಂರಕ್ಷಾ ಯೋಜನೆ’, ಆಯುರ್ವೇದ ಪದ್ಧತಿಯನ್ನು ಪರಿಣಾಮಕಾರಿಯಾಗಿಸಲು ‘ಅಗ್ನಿವೇಶ ಆಯುರ್ವೇದ ಅನುಷ್ಠಾನ’ ಯೋಜನೆಗಳು ಕಾರ್ಯಪ್ರವೃತ್ತವಾಗಿದೆ. ಪ್ರಸ್ತುತ 400 ಮಂದಿ ಮಕ್ಕಳು ಸಂರಕ್ಷಾ ಕೇಂದ್ರದಲ್ಲಿ ಆರೈಕೆ ಪಡೆಯುತ್ತಿದ್ದಾರೆ. ಈವರೆಗೆ 25000 ಯುನಿಟ್ ರಕ್ತವನ್ನು ಉಚಿತವಾಗಿ ಪೂರೈಸಿದೆ. ಹಲವರಿಗೆ ಸೂಕ್ತ ಚಿಕಿತ್ಸೆಗೆ ಅಗತ್ಯ ವ್ಯವಸ್ಥೆ ಮಾಡಿ ಹೊಸಬದುಕು ಕಟ್ಟಿಕೊಟ್ಟಿದೆ.
ರಾಷ್ಟ್ರೋತ್ಥಾನ ಆಸ್ಪತ್ರೆ: 2022 ಡಿಸೆಂಬರ್‌ನಲ್ಲಿ ಜನಸಾಮಾನ್ಯರಿಗೆ ಕೈಗೆಟಕುವ ದರದಲ್ಲಿ ವೃತ್ತಿಪರ ಗುಣಮಟ್ಟದ ಆರೋಗ್ಯಸೇವೆ ನೀಡುವ ಉದ್ದೇಶದಿಂದ ಬೆಂಗಳೂರಿನ ರಾಜರಾಜೇಶ್ವರಿ ನಗರದಲ್ಲಿ ‘ಜಯದೇವ ಸ್ಮಾರಕ ರಾಷ್ಟ್ರೋತ್ಥಾನ ಆಸ್ಪತ್ರೆ ಮತ್ತು ಸಂಶೋಧನ ಕೇಂದ್ರ’ವನ್ನು ಪ್ರಾರಂಭಿಸಿದೆ. ಆಸ್ಪತ್ರೆಯು ಒಂದೇ ಸೂರಿನಡಿ ಆಧುನಿಕ ವೈದ್ಯಪದ್ಧತಿ(ಅಲೋಪತಿ), ಆಯುರ್ವೇದ, ಹೋಮಿಯೋಪತಿ, ಯೋಗ, ನ್ಯಾಚುರೋಪತಿ ಮೊದಲಾದ ಚಿಕಿತ್ಸಾ ಸೌಲಭ್ಯಗಳನ್ನು ಒಳಗೊಂಡಿರುವ ಒಂದು ‘ಸಮಗ್ರ ಚಿಕಿತ್ಸೆಯ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆ’ಯಾಗಿ ಸೇವೆ ಸಲ್ಲಿಸಲಿದೆ.


ರಾಷ್ಟ್ರೋತ್ಥಾನ ಯೋಗ ವಿಜ್ಞಾನ ಮತ್ತು ಸಂಶೋಧನಾ ಸಂಸ್ಥೆ: 1972ರಲ್ಲಿ ಪ್ರಾರಂಭಗೊಂಡ ರಾಷ್ಟ್ರೋತ್ಥಾನ ಯೋಗ ವಿಜ್ಞಾನ ಮತ್ತು ಸಂಶೋಧನಾ ಸಂಸ್ಥೆಯು ಆರೋಗ್ಯ ಪೂರ್ಣ ಜೀವನಶೈಲಿಯ ಮೂಲಕ ಸ್ವಸ್ಥ ಸಮಾಜ ನಿರ್ಮಾಣದ ಆಶಯದೊಂದಿಗೆ ಹತ್ತಾರು ಕಡೆಗಳಲ್ಲಿ ಯೋಗ ಕೇಂದ್ರಗಳನ್ನು ಹೊಂದಿದೆ. ಅಂತರಾಷ್ಟ್ರೀಯ ಯೋಗದಿನಾಚರಣೆ, ಆನ್‌ಲೈನ್ ಯೋಗ ತರಗತಿಗಳು, ಉಪನ್ಯಾಸ ಸರಣಿ ಕಾರ್ಯಕ್ರಮಗಳು, ಫಿಟ್ನೆಸ್ ಸೆಂಟರ್, ನೃತ್ಯ-ಸಂಗೀತ ಕೇಂದ್ರ, ಕರಾಟೆ ತರಗತಿಗಳು, ಅಂಗಮರ್ದನ ಚಿಕಿತ್ಸೆ, ಉಗಿಸ್ನಾನ ಚಿಕಿತ್ಸಾ ಕೇಂದ್ರ ಸೇರಿದಂತೆ ಅನೇಕ ಪೂರಕ ಚಟುವಟಿಕೆಗಳು ನಡೆಯುತ್ತಿವೆ.
ಪ್ರಸ್ತುತ ಬೆಂಗಳೂರಿನಲ್ಲಿ 23 ಯೋಗಕೇಂದ್ರಗಳು ಕಾರ್ಯನಿರ್ವಹಿಸುತ್ತಿದ್ದು ದಿನನಿತ್ಯ 220ಕ್ಕೂ ಅಧಿಕ ಯೋಗತರಗತಿಗಳು ನಡೆಯುತ್ತಿದ್ದು 4000ಕ್ಕೂ ಅಧಿಕ ಮಂದಿ ಅಭ್ಯಾಸ ನಡೆಸುತ್ತಿದ್ದಾರೆ. ಈವರೆಗೆ 1.5 ಲಕ್ಷಕ್ಕೂ ಅಧಿಕ ಮಂದಿ ಯೋಗಶಿಕ್ಷಣ ಪಡೆದಿದ್ದಾರೆ.


ರಾಷ್ಟ್ರೋತ್ಥಾನ ಗೋಶಾಲೆ: ಭಾರತೀಯ ದೇಸಿ ಗೋತಳಿಗಳ ಸಂರಕ್ಷಣೆ, ಸಂವರ್ಧನೆಯ ಉದ್ದೇಶದೊಂದಿಗೆ ದೊಡ್ಡಬಳ್ಳಾಪುರದ ಸಮೀಪದ ಶ್ರೀ ಘಾಟಿ ಸುಬ್ರಹ್ಮಣ್ಯ ಕ್ಷೇತ್ರದ ತಪ್ಪಲಿನ ‘ಶ್ರೀಮಾಧವಸೃಷ್ಟಿ’ಯಲ್ಲಿ ರಾಷ್ಟ್ರೋತ್ಥಾನ ಗೋಶಾಲೆ ಕಾರ‍್ಯನಿರ್ವಹಿಸುತ್ತಿದೆ. ಗಿರ್, ಸಾಹಿವಾಲ್, ಒಂಗೋಲ್, ಅಮೃತಮಹಲ್, ಮಲೆನಾಡುಗಿಡ್ಡ ಸೇರಿದಂತೆ 700ಕ್ಕೂ ಹೆಚ್ಚು ಗೋವುಗಳಿಗೆ ಆಶ್ರಯ ತಾಣವಾಗಿದೆ. ಗೋಶಾಲೆಯ ಪರಿಸರದಲ್ಲಿ ಕಾಡನ್ನು ಬೆಳೆಸುವ ‘ವೃಂದಾವನ’, ‘ಸಸಿನೆಡು’ ಯೋಜನೆಗಳ ಮೂಲಕ ಗಿಡನೆಟ್ಟು ಅರಣ್ಯಾಭಿವೃದ್ಧಿ ಮಾಡುವ ಯೋಜನೆ 2018ರಿಂದ ಪ್ರಾರಂಭವಾಗಿದ್ದು ಪರಿಸರ ಸಂರಕ್ಷಣೆಯಲ್ಲಿ ಮಹತ್ವದ ಪಾತ್ರ ವಹಿಸಿದೆ.
ಸ್ಥಳೀಯ ರೈತರಿಗೆ ನೆರವಾಗುವ ಉದ್ದೇಶದಿಂದ ಈವರೆಗೆ 5000ಕ್ಕೂ ಅಧಿಕ ಎತ್ತುಗಳನ್ನು ಕೃಷಿಕರಿಗೆ ನೀಡಲಾಗಿದೆ. 25 ಎಕರೆ ಪ್ರದೇಶದಲ್ಲಿ 15000ಕ್ಕೂ ಅಧಿಕ ಮರಗಳನ್ನು ಮರಗಳನ್ನು ನೆಟ್ಟು ಸಂರಕ್ಷಣೆ ಮಾಡುತ್ತಿದ್ದಾರೆ.
ರಾಷ್ಟ್ರೋತ್ಥಾನದ ಶೈಕ್ಷಣಿಕ ಸಂಸ್ಥೆಗಳು: 1972ರಲ್ಲಿ ಬಳ್ಳಾರಿಯ ಹಗರಿಬೊಮ್ಮನಹಳ್ಳಿಯಲ್ಲಿ ಶಿಶುಮಂದಿರದೊಂದಿಗೆ ಪ್ರಾರಂಭಗೊಂಡ ಶೈಕ್ಷಣಿಕ ಚಟುವಟಿಕೆಗಳು ಇಂದು 20 ಶಿಶುಮಂದಿರಗಳು, 9 ರಾಜ್ಯ ಪಠ್ಯಕ್ರಮ ಶಾಲೆಗಳು ಹಾಗೂ 17 ಕೇಂದ್ರ ಪಠ್ಯಕ್ರಮ (ಸಿಬಿಎಸ್‌ಸಿ) ಶಾಲೆಗಳು, 3 ಪದವಿ ಪೂರ್ವ ಕಾಲೇಜುಗಳು ಸೇರಿದಂತೆ ವಿವಿಧ ಶಿಕ್ಷಣ ಸಂಸ್ಥೆಗಳ ಮೂಲಕ ಶಿಕ್ಷಣ ಕ್ಷೇತ್ರದಲ್ಲಿ ಗಣನೀಯ ಕೊಡುಗೆ ನೀಡುತ್ತಿದೆ. ಪ್ರಸ್ತುತ 25000 ಮಂದಿ ವಿದ್ಯಾರ್ಥಿಗಳು ಶಿಕ್ಷಣ ಪಡೆಯುತ್ತಿದ್ದಾರೆ. ಆರ್ಥಿಕವಾಗಿ ಹಿಂದುಳಿದ ಕುಟುಂಬಗಳ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಉಚಿತ ಪಿ.ಯು ಶಿಕ್ಷಣದೊಂದಿಗೆ ಐಐಟಿ ಸೇರಿದಂತೆ ಪ್ರತಿಷ್ಠಿತ ಉನ್ನತ ಶಿಕ್ಷಣ ಸಂಸ್ಥೆಗಳ ಪ್ರವೇಶಕ್ಕೆ ತರಬೇತಿ ನೀಡುವ ಉದ್ದೇಶದಿಂದ ಬಾಲಕರಿಗಾಗಿ ‘ತಪಸ್’ ಹಾಗೂ ಬಾಲಕೀಯರಿಗಾಗಿ ‘ಸಾಧನಾ’ ಎಂಬ ವಿಶಿಷ್ಟ ಶೈಕ್ಷಣಿಕ ಯೋಜನೆಗಳನ್ನು ನಡೆಸಲಾಗುತ್ತಿದೆ. ತಪಸ್‌ನ ವಿದ್ಯಾರ್ಥಿಗಳಿಗೆ ಐಐಟಿ-ಜೆಇಇ ಪರೀಕ್ಷೆ ತರಬೇತಿ ಹಾಗೂ ‘ಸಾಧನಾ’ದ ವಿದ್ಯಾರ್ಥಿಗಳಿಗೆ ನೀಟ್/ಸಿಇಟಿ ತರಬೇತಿ ನೀಡಲಾಗುತ್ತಿದೆ. ಈವರೆಗೆ 525 ಮಂದಿ ಹುಡುಗರು ಹಾಗೂ 459 ಮಂದಿ ಹುಡುಗಿಯರು ಈ ಯೋಜನೆಯ ಪ್ರಯೋಜನ ಪಡೆದಿದ್ದಾರೆ. 60ಕ್ಕೂ ಅಧಿಕ ಬಡವಿದ್ಯಾರ್ಥಿಗಳು ಐಐಟಿ & ಐಐಐಟಿ ಶಿಕ್ಷಣವನ್ನು, 120 ಮಂದಿ ಎನ್‌ಐಟಿ ಹಾಗೂ 125 ಮಂದಿ ಎಂಬಿಬಿಎಸ್ ಸೇರಿದಂತೆ ಪ್ರತಿಷ್ಠಿತ ಶಿಕ್ಷಣ ಸಂಸ್ಥೆಗಳಿಗೆ ಪ್ರವೇಶ ಪಡೆದು ಉನ್ನತ ವಿದ್ಯಾಭ್ಯಾಸ ಪಡೆಯುತ್ತಿದ್ದಾರೆ. ಈ ಸಮಗ್ರ ಶಿಕ್ಷಣದ ಪದ್ಧತಿ ಹಾಗೂ ಶಿಕ್ಷಣ ನೀತಿಗಳ ಕುರಿತು ಸಂವಿತ್ ರಿಸರ್ಚ್ ಫೌಂಡೇಶನ್, ಅಧ್ಯಯನ ಹಾಗೂ ಸಂಶೋಧನೆ ದೃಷ್ಟಿಯಿಂದ ರಾಷ್ಟ್ರೋತ್ಥಾನ ರಿಸರ್ಚ್ ಫೌಂಡೇಶನ್ ಕಾರ‍್ಯಪ್ರವೃತ್ತವಾಗಿದೆ.


ರಾಷ್ಟ್ರೋತ್ಥಾನ ಸಾಹಿತ್ಯ: 1965ರಲ್ಲಿ ಪ್ರಾರಂಭಗೊಂಡ ರಾಷ್ಟ್ರೋತ್ಥಾನ ಸಾಹಿತ್ಯದ ಪ್ರಕಟಣೆಗಳ ಪ್ರಮುಖ ಉದ್ದೇಶ ಭಾರತೀಯ ಜೀವನದ ಜ್ಞಾನ-ನಿಷ್ಠೆಗಳನ್ನು ಜನಮನದಲ್ಲಿ ಬೇರೂರಿಸುವುದು, ಸಾಮಾಜಿಕ ಚಿಂತನ ಪ್ರಧಾನವಾದ ಗ್ರಂಥಗಳನ್ನು ಪ್ರಕಟಿಸುವುದು. ಹಾಗೆಯೇ ಮೂಲ ಕನ್ನಡ ಕೃತಿಗಳ ಜೊತೆಗೆ ಇತರ ಭಾಷೆಗಳಿಂದಲೂ ಉತ್ತಮ ರಾಷ್ಟ್ರೀಯ ಸಾಹಿತ್ಯವನ್ನು ಕನ್ನಡಕ್ಕೆ ಅನುವಾದದ ಮೂಲಕ ತರುವುದು. ಈ ದಿಶೆಯಲ್ಲಿ ಇದುವರೆಗೆ ಪ್ರಕಟವಾದ ಒಟ್ಟು ಪುಸ್ತಕಗಳ ಸಂಖ್ಯೆ 320ಕ್ಕೂ ಹೆಚ್ಚು. ‘ಭಾರತ-ಭಾರತಿ ಪುಸ್ತಕ ಸಂಪದ’ದ ಮೂಲಕ 610 ಕನ್ನಡ ಹಾಗೂ 225 ಇಂಗ್ಲೀಷ್ ಪುಸ್ತಕಗಳು ಪ್ರಕಟವಾಗಿದೆ.
ರಾಷ್ಟ್ರೀಯ ವಿಚಾರಗಳು, ಸಾಮಾಜಿಕ ಜಾಗೃತಿಯ ವಿಷಯಗಳು, ಸಂಸ್ಕೃತಿ-ಜೀವನಶೈಲಿ ಇತ್ಯಾದಿ ಹಲವಾರು ವಿಷಯಗಳಲ್ಲಿ ಶ್ರೇಷ್ಠಗುಣಮಟ್ಟದ ಪುಸ್ತಕಗಳು ಪ್ರಕಾಶಿತಗೊಂಡಿದೆ. ಜತೆಗೇ ರಾಷ್ಟ್ರೀಯ ಹಿತಾಸಕ್ತಿಯ ವಿಚಾರವನ್ನು ಪ್ರತಿಪಾದಿಸುವ ಸಾಹಿತ್ಯ ಸಿಂಧು, ಸಾಹಿತ್ಯ ಸಂಗಮ ಇನ್ನಿತರ ಪ್ರಕಾಶನ ಸಂಸ್ಥೆಗಳ ಪುಸ್ತಗಳನ್ನು ರಾಜ್ಯಾದ್ಯಂತ ತಲುಪಿಸಲಾಗುತ್ತಿದೆ.


ಗೀತಾಭಾರತಿ: 29ರಲ್ಲಿ ಪ್ರಾರಂಭಗೊಂಡ ‘ಗೀತಾಭಾರತಿ’ ಯೋಜನೆಯ ಮೂಲಕ ನೂರಾರು ಹಾಡುಗಳು ಧ್ವನಿಮುದ್ರಿಕೆಗಳ ಮೂಲಕ ಲಕ್ಷಾಂತರ ಕೇಳುಗರಿಗೆ ತಲುಪಿದೆ.


ರಾಷ್ಟೋತ್ಥಾನ ಮುದ್ರಾಣಾಲಯ: 1967ರ ಮೇ 29ರಂದು ಪ್ರಾರಂಭಗೊಂಡ ರಾಷ್ಟ್ರೋತ್ಥಾನ ಮುದ್ರಾಣಾಲಯವು ಅತ್ಯುತ್ತಮ ಮುದ್ರಣ ತಂತ್ರಜ್ಞಾನವನ್ನು ಹೊಂದಿದ್ದು, ಇಂದು ರಾಜ್ಯದ ಅತ್ಯುತ್ತಮ ಮುದ್ರಾಣಾಲಯಗಳಲ್ಲಿ ಒಂದು ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.


ಉತ್ಥಾನ: 1965ರ ವಿಜಯದಶಮಿಯಂದು ಪ್ರಾರಂಭಗೊಂಡ ಉತ್ಥಾನ ಮಾಸಪತ್ರಿಕೆಯು ತನ್ನದೇ ಆದ ಓದುಗರ ಬಳಗವನ್ನು ಹೊಂದಿದ್ದು ರಾಜ್ಯದ ಸದಭಿರುಚಿಯ ವಿಶಿಷ್ಟ ಮಾಸಪತ್ರಿಕೆ ಎಂಬ ಮನ್ನಣೆಗೆ ಪಾತ್ರವಾಗಿದೆ. ನಾಡಿನ ಹೆಸರಾಂತ ಲೇಖಕರು, ವಿದ್ವಾಂಸರು ಉತ್ಥಾನ ಪತ್ರಿಕೆಯಲ್ಲಿ ಲೇಖನಗಳನ್ನು ಬರೆದಿದ್ದಾರೆ. ಕಾಲೇಜು ವಿದ್ಯಾರ್ಥಿಗಳಿಗೆ ಪ್ರಬಂಧ ಸ್ಪರ್ಧೆ, ವಾರ್ಷಿಕ ಕಥಾ ಸ್ಪರ್ಧೆ ಇತ್ಯಾದಿ ಚಟುವಟಿಕೆಗಳ ಮೂಲಕ ಹೊಸಪೀಳಿಗೆ ಬರಹಗಾರಿಗೆ ಪ್ರೋತ್ಸಾಹ ನೀಡಲಾಗುತ್ತಿದೆ. ಆನ್‌ಲೈನ್ ಉಪನ್ಯಾಸ ಸರಣಿಗಳಲ್ಲಿ ದತ್ತಾತ್ರೇಯ ಹೊಸಬಾಳೆ, ಗುರುರಾಜ ಕರಜಗಿ, ಶತಾವಧಾನಿ ಆರ್. ಗಣೇಶ್, ತರುಣ್ ವಿಜಯ್ ಸೇರಿದಂತೆ ಗಣ್ಯರು ಪಾಲ್ಗೊಂಡಿದ್ದಾರೆ.
ಕೋವಿಡ್ ಸೇವಾ ಚಟುವಟಿಕೆಗಳು: ಕೋವಿಡ್ ಸಂಕಷ್ಟದ ಸಂದರ್ಭದಲ್ಲಿ ರಾಷ್ಟ್ರೋತ್ಥಾನ ಪರಿಷತ್ ಕಡೆಯಿಂದ ವಿವಿಧ ಪ್ರಕಾರದ ಸೇವಾ ಚಟುವಟಿಕೆಗಳು ನಡೆಯಿತು. ರಾಷ್ಟ್ರೋತ್ಥಾನ ವಿದ್ಯಾಕೇಂದ್ರದ ಬನಶಂಕರಿ, ರಾಮಮೂರ್ತಿನಗರದ ಶಾಲೆಗಳು ಕೋವಿಡ್ ಐಸೋಲೇಷನ್ ಕೇಂದ್ರಗಳಾಗಿ ಕಾರ್ಯನಿರ್ವಹಿಸಿದವು. ಹೆಬ್ಬಾಳದ ಸಂಜಯನಗರ, ಕೆಂಗೇರಿಯ ಬಂಡೆಮಠ ಸೇರಿದಂತೆ ಅನೇಕ ಸ್ಥಳಗಳಲ್ಲಿ ಕೋವಿಡ್ ಕೇಂದ್ರಗಳನ್ನು ತೆರೆಯಲಾಯಿತು. ರಾಜ್ಯಾದ್ಯಂತ ರಕ್ತದಾನ ಶಿಬಿರ ಸೇರಿದಂತೆ ಬಹುಮುಖೀ ಚಟುವಟಿಕೆಗಳಲ್ಲಿ ಜನರ ನೆರವಿಗಾಗಿ ರಾಷ್ಟ್ರೋತ್ಥಾನ ಪರಿಷತ್ ಗಣನೀಯ ಕೊಡುಗೆ ನೀಡಿದೆ.


ರಾಷ್ಟ್ರೋತ್ಥಾನ ಬಳಗ: ಸಮಾಜದ ವಿವಿಧ ಕ್ಷೇತ್ರಗಳಲ್ಲಿ ಕಾರ‍್ಯನಿರತರಾದ ಸಮಾನ ಮನಸ್ಕರು ಸೇರಿ ಸಮಗ್ರ ಸಮಾಜ ಪರಿವರ್ತನೆಗಾಗಿ ಶ್ರಮಿಸಲು ರೂಪಿಸಿರುವ ವೇದಿಕೆ, ರಾಷ್ಟ್ರೋತ್ಥಾನ ಬಳಗ. ವಿವಿಧ ಜಿಲ್ಲೆ ಹಾಗೂ ತಾಲೂಕುಗಳಲ್ಲಿ ರಾಷ್ಟ್ರೋತ್ಥಾನ ಬಳಗ ಘಟಕಗಳು ಸಕ್ರಿಯವಾಗಿದೆ. ಪ್ರಶಿಕ್ಷಣ ಭಾರತಿ ಎಂಬ ಪ್ರಕಲ್ಪದ ಮೂಲಕ ರಾಜ್ಯದೆಲ್ಲೆಡೆಯ ನೂರಾರು ಶಿಕ್ಷಕರಿಗೆ ತರಬೇತಿ ಮಾರ್ಗದರ್ಶನ ಮಾಡುತ್ತಿದೆ.
ರಾಷ್ಟ್ರೋತ್ಥಾನ ಪರಿಷತ್ತಿನ ಕೇಂದ್ರ ಕಛೇರಿ ಇರುವ ಬೆಂಗಳೂರಿನ ಕೇಶವಶಿಲ್ಪ ಕಟ್ಟಡಕ್ಕೆ ಐತಿಹಾಸಿಕ ಹಿನ್ನೆಲೆ ಇದೆ. 1947ರಲ್ಲಿ ಸ್ವಾತಂತ್ರ್ಯವೀರ ಸಾವರ್ಕರ್‌ರವರು ಬೆಂಗಳೂರಿಗೆ ಭೇಟಿ ನೀಡಿದ್ದಾಗ ಇದೇ ಕಟ್ಟಡದಲ್ಲಿ ತಂಗಿದ್ದರು. ಸಮಾಜಪರಿವರ್ತನೆಯ 60 ವಸಂತಗಳನ್ನು ಪೂರೈಸಿರುವ ರಾಷ್ಟ್ರೋತ್ಥಾನ ಪರಿಷತ್‌ಗೆ ಶುಭವನ್ನು ಹಾರೈಸುತ್ತಾ ತನ್ನ ಸ್ವಸ್ಥ-ಸುಸ್ಥಿರ ಸಮಾಜನಿರ್ಮಾಣ ಮಾಡುವ ಗುರಿಯನ್ನು ಸೇರಲೆಂದು ಆಶಿಸೋಣ.
ಸಂಪರ್ಕಕ್ಕಾಗಿ: www.rashtrotthana.org

Leave a Reply

Your email address will not be published.

This site uses Akismet to reduce spam. Learn how your comment data is processed.