ಮೈಸೂರು, ಮಾರ್ಚ್ 25, 2026: ದೀನದಯಾಳ ಉಪಾಧ್ಯಾಯರ ಏಕಾತ್ಮ ಮಾನವ ದರ್ಶನ ಕೇವಲ ದಾರ್ಶನಿಕ ಉದಾಹರಣೆ ಮಾತ್ರವಾಗಿರದೆ ಬದಲಾಗಿ ಭಾರತದ ಆತ್ಮ, ಸಂಸ್ಕೃತಿ, ಯೋಚನೆ ಮತ್ತು ಜೀವನ ಪದ್ಧತಿಯ ಮೂಲಾಧಾರವಾಗಿದೆ. ಈ ವಿಚಾರಧಾರೆಯು ಭಾರತೀಯ ಸಂಸ್ಕೃತಿ, ಆಧ್ಯಾತ್ಮಿಕತೆ ಮತ್ತು ಜೀವನ ಮೌಲ್ಯಗಳಾಧಾರಿತ ಸಮಗ್ರದೃಷ್ಟಿಕೋನವನ್ನು ಪ್ರಸ್ತುತ ಪಡಿಸುವ ಏಕಾತ್ಮ ಮಾನವ ದರ್ಶನ ಭಾರತೀಯ ಸಂಸ್ಕೃತಿಯ ಜೀವನದರ್ಶನವಾಗಿದೆ ಎಂದು ಕರ್ನಾಟಕದ ರಾಜ್ಯಪಾಲ ಥಾವರ್ ಚಾಂದ್ ಗೆಹ್ಲೋತ್ ಹೇಳಿದರು.

ಪ್ರಜ್ಞಾ ಪ್ರವಾಹ ಕರ್ನಾಟಕದ ವತಿಯಿಂದ ಮೈಸೂರಿನ ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯದಲ್ಲಿ ಆಯೋಜಿಸಲಾದ ‘ಏಕಾತ್ಮ ಮಾನವ ದರ್ಶನ : ಭಾರತದ ವಿಶ್ವದೃಷ್ಟಿ’ ವಿಷಯದ ಕುರಿತಾದ ವಿಚಾರ ಸಂಕಿರಣದಲ್ಲಿ ಅವರು ಮಾತನಾಡಿದರು.

ಭಾರತ ದೇಶ ತನ್ನ ಮಹಾನ್ ನಾಗರಿಕತೆ ಮತ್ತು ಸಂಸ್ಕೃತಿಯ ಕಾರಣ ಜಾಗತಿಕ ವೇದಿಕೆಯಲ್ಲಿ ಪ್ರಸಿದ್ಧಿ ಪಡೆದಿದೆ. ಕಾಲಕಾಲಕ್ಕೆ ಅನೇಕ ಮಹಾನ್ ವಿಭೂತಿಪುರುಷರು ಭಾರತದಲ್ಲಿ ಅವತರಿಸಿ ಇಲ್ಲಿನ ಮಹಾನ್ ಪರಂಪರೆಯನ್ನು ಸಮೃದ್ಧಗೊಳಿಸಿದ್ದಾರೆ. ಈ ಮಹಾನ್ ಪುರುಷರ ಮೂಲಕ ಸ್ಥಾಪಿತಗೊಂಡ ಮಹಾನ್ ಪರಂಪರೆಯು ಸಮಾಜ ಮತ್ತು ರಾಷ್ಟ್ರಕ್ಕೆ ಕಾಲಕಾಲಕ್ಕೆ ಪಥದರ್ಶಕದಂತೆ ಕಾರ್ಯನಿರ್ವಹಿಸಿದೆ. ಕುಶಲ ಸಂಘಟಕ, ದಾರ್ಶನಿಕ, ಪ್ರಖರ ವಾಗ್ಮಿ, ಆರ್ಥಿಕ ತಜ್ಞ, ಕಾರ್ಯಕರ್ತ ಪಂಡಿತ ದೀನ ದಯಾಳ ಉಪಾಧ್ಯಾಯರು ತಮ್ಮ ಐತಿಹಾಸಿಕ ವ್ಯಾಖ್ಯಾನಮಾಲೆಯಲ್ಲಿ ಏಕಾತ್ಮ ಮಾನವದರ್ಶನವೆಂಬ ಸಮಗ್ರದರ್ಶನದ ದೃಷ್ಟಿಕೋನವನ್ನು 60 ವರ್ಷಗಳ ಹಿಂದೆ ನೀಡಿದ್ದರು. ಅದು ವ್ಯಕ್ತಿ, ಸಮಾಜ ಮತ್ತು ಪ್ರಕೃತಿಯ ನಡುವಿನ ಸಮನ್ವಯದ ಕುರಿತು ತಿಳಿಸುವ ಅದ್ಭುತ ದರ್ಶನವಾಗಿದೆ ಎಂದರು.

ಶರೀರ, ಮನ, ಬುದ್ಧಿ ಮತ್ತು ಆತ್ಮದಿಂದ ಕೂಡಿದ, ಧರ್ಮ, ಅರ್ಥ, ಕಾಮ, ಮೋಕ್ಷವೆಂಬ ಚತುರ್ವಿಧ ಪುರುಷಾರ್ಥದ ಸಾಧನೆಯನ್ನು ಮಾಡುವ, ಅವರ ಜೊತೆಗೆ ಕುಟುಂಬ, ಜಾತಿ, ರಾಷ್ಟ್ರವೆಂಬ ಮಾನವ ಸಮಾಜದ ವಿವಿಧ ಏಕಾತ್ಮ ಸಮಷ್ಟಿಯ ಪ್ರತಿನಿಧಿತ ಮಾಡುವ ಕ್ಷಮತೆಯನ್ನು ಇಟ್ಟುಕೊಂಡಿರುವ ಮಾನವ ಈ ದರ್ಶನದ ಕೇಂದ್ರ ಬಿಂದು. ಈ ದರ್ಶನದಲ್ಲಿ ವ್ಯಕ್ತಿ ಸಮಾಜ, ರಾಷ್ಟ್ರ ಮತ್ತು ವಿಶ್ವದ ವಿಕಾಸ ಮತ್ತು ವಿಶ್ವ ಕಲ್ಯಾಣದ ಭಾವವನ್ನು ಮೂಡಿಸಿದ್ದಾರೆ. ಈ ದರ್ಶನದ ಅನುಸಾರ ಸಮಾಜವು ಒಂದು ಜೀವಂತ ಘಟಕ. ಶರೀರದ ಎಲ್ಲಾ ಅಂಗಗಳು ಸೇರಿ ಹೇಗೆ ಕಾರ್ಯನಿರ್ವಹಿಸುತ್ತದೆಯೋ, ಹಾಗೆಯೇ ಸಮಾಜದ ವಿಭಿನ್ನ ವರ್ಗಗಳು ಜೊತೆಯಾಗಿ ಒಂದು ಸಮಗ್ರ ವ್ಯವಸ್ಥೆಯನ್ನು ಮಾಡುತ್ತದೆ. ಆದ್ದರಿಂದ ಸಮಾಜದ ವಿಕಾಸಕ್ಕೆ ಎಲ್ಲಾ ವರ್ಗಗಳ ಸಮನ್ವಯ ಮತ್ತು ಸಹಯೋಗ ಅವಶ್ಯಕವಾದದ್ದು ಎಂದು ಅಭಿಪ್ರಾಯಪಟ್ಟರು.

ಕಾರ್ಯಕ್ರಮದಲ್ಲಿ ಮಾತನಾಡಿದ ಶ್ರೀ ವೀರಸಿಂಹಾಸನ ಮಹಾಸಂಸ್ಥಾನ ಮಠ, ಸುತ್ತೂರು ಶ್ರೀ ಕ್ಷೇತ್ರದ ಪೂಜ್ಯ ಜಗದ್ಗುರು ಶ್ರೀ ಶಿವರಾತ್ರಿ ದೇಶಿಕೇಂದ್ರ ಮಹಾಸ್ವಾಮಿಗಳು ದೀನ ದಯಾಳ ಉಪಾಧ್ಯಾಯರ ಚಿಂತನೆಗಳನ್ನು ಸಾಮಾಜಿಕವಾಗಿ ಮತ್ತು ಶೈಕ್ಷಣಿಕ ಅನುಷ್ಠಾನಗೊಳಿಸುವುದಕ್ಕಾಗಿ ದೇಶದಾದ್ಯಂತ ಕಾರ್ಯಕ್ರಮಗಳು ನಡೆಯುತ್ತಿವೆ. ಅದರ ಭಾಗವಾಗಿ ಮೈಸೂರಿನಲ್ಲಿ ನಡೆಯುತ್ತಿರುವ ಕಾರ್ಯಕ್ರಮ ಶ್ಲಾಘನೀಯ. ಬಾಲ್ಯದಲ್ಲಿ ತಂದೆ ತಾಯಿಯನ್ನು ಕಳೆದುಕೊಂಡರೂ ಜೀವನೋತ್ಸಾಹವನ್ನು ಕಳೆದುಕೊಳ್ಳದೇ ತಮ್ಮ ಜೀವನವನ್ನು ಮುನ್ನಡೆಸಿದರು. ಅವರ ಕನಸು ಮತ್ತು ನನಸಿನಲ್ಲೂ ರಾಷ್ಟ್ರೀಯ ಪ್ರಜ್ಞೆ ಜಾಗೃತವಾಗಿತ್ತು ಎಂದರು.

ಜಗತ್ತಿನಲ್ಲಿ ಶಾಂತಿ ನೆಲೆಸಲು ಪ್ರಗತಿಯ ಜೊತೆಗೆ ಸಮಾನತೆ, ಸಹಕಾರ, ಪ್ರಕೃತಿಯೊಂದಿಗೆ ಸಮನ್ವಯದ ಕುರಿತು ತಿಳಿಸುವ ಭೌತಿಕ ಪ್ರಗತಿಯ ಜೊತೆಗೆ ಆಧ್ಯಾತ್ಮಿಕ ಮೌಲಗಳ ಮೇಳೈಸುವಿಕೆಯ ದೀನ ದಯಾಳರ ಏಕಾತ್ಮ ಮಾನವದರ್ಶನದ ಚಿಂತನೆಗಳು ಅತ್ಯಗತ್ಯ. ರಾಜಕೀಯದಲ್ಲಿ ಮೌಲ್ಯಾಧಾರಿತ ಪ್ರಜ್ಞೆಯನ್ನು ಮೂಡಿಸುವುದಕ್ಕೆ, ಗ್ರಾಮದಲ್ಲಿ ಸುಸ್ಥಿರ ಅಭಿವೃದ್ಧಿಯನ್ನು ಮೂಡಿಸುವುದಕ್ಕೆ ದೀನದಯಾಳರ ಅಂತ್ಯೋದಯದ ಕಲ್ಪನೆ ಸಹಕಾರಿ. ಇಂದು ಇಡೀ ಜಗತ್ತು ಶಾಂತಿಯಿಂದ ಇರಬೇಕು ಎಂದು ಬಯಸುವ ಏಕೈಕ ರಾಷ್ಟ್ರ ಭಾರತ. ಅಂತಹ ಭಾರತೀಯ ಚಿಂತನೆಯ ಮೌಲ್ಯಗಳ ರೂಪ ದೀನದಯಾಳ ಉಪಾಧ್ಯಾಯರಾಗಿದ್ದರು ಎಂದು ನುಡಿದರು.

ಕಾರ್ಯಕ್ರಮದಲ್ಲಿ ವೀಡಿಯೋ ಮೂಲಕ ಮಾತನಾಡಿದ ಉಪರಾಷ್ಟ್ರಪತಿ ಸಿ ಪಿ ರಾಧಾಕೃಷ್ಣನ್ ದೀನದಯಾಳ ಉಪಾಧ್ಯಾಯ ಅವರ ಏಕಾತ್ಮ ಮಾನವ ದರ್ಶನದ 60ನೇ ವರ್ಷದ ನಿಮಿತ್ತ ಆಯೋಜಿಸಿರುವ ಈ ಕಾರ್ಯಕ್ರಮ ಒತ್ತಡ ಮತ್ತು ನಂಬಿಕೆಯನ್ನು ಕಳೆದುಕೊಳ್ಳುತ್ತಿರುವ ಇಂದಿನ ದಿನಮಾನಗಳಲ್ಲಿ ಧರ್ಮದ ಮೂಲಕ ಜೀವನವನ್ನು ಸಮೃದ್ಧಗೊಳಿಸುವ ಕುರಿತು ತಿಳಿಸುತ್ತದೆ. ದೀನ ದಯಾಳರ ಚಿಂತನೆಗಳು ನಮ್ಮ ಹಕ್ಕುಗಳು ಮಾತ್ರವಲ್ಲದೇ, ನಮ್ಮ ಕರ್ತವ್ಯದ ಕುರಿತು ತಿಳಿಸುತ್ತದೆ. 2047ರ ವಿಕಸಿತ ಭಾರತ ಕಲ್ಪನೆಯು ದೀನದಯಾಳ ಉಪಾಧ್ಯಯ ಅವರ ಏಕಾತ್ಮ ಮಾನವ ದರ್ಶನದ ಆಶಯವನ್ನು ಹೊಂದಿದೆ. ಅದು ಕೇವಲ ಆರ್ಥಿಕ ಮತ್ತು ತಂತ್ರಜ್ಞಾನದ ಬೆಳವಣಿಗೆಯಾಗಿರದೇ ಸರ್ವಾಂಗೀಣ ವಿಕಾಸವಾಗಿದೆ ಎಂದು ಹೇಳಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯದ ಕುಲಪತಿ ಪ್ರೊ.ಶರಣಪ್ಪ ವಿ ಹಲಸೆ ವಹಿಸಿದ್ದರು. ವೇದಿಕೆಯಲ್ಲಿ ಪ್ರಜ್ಞಾಪ್ರವಾಹದ ಕರ್ನಾಟಕ ದಕ್ಷಿಣ ಸಂಯೋಜಕ ಡಾ.ಪ್ರದೀಪ ಭಾರದ್ವಾಜ ಉಪಸ್ಥಿತರಿದ್ದರು.


ಕಾರ್ಯಕ್ರಮದಲ್ಲಿ ಪ್ರಜ್ಞಾ ಪ್ರವಾಹದ ಅಖಿಲ ಭಾರತೀಯ ಟೋಳಿ ಸದಸ್ಯ ರಘುನಂದನ್, ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯದ ಕುಲಸಚಿವ ಪ್ರೊ.ನವೀನಕುಮಾರ ಎಸ್ ಕೆ, ನವದೆಹಲಿಯ ಡಾ.ಶ್ಯಾಮಪ್ರಸಾದ್ ಮುಖರ್ಜಿ ಸಂಶೋಧನಾ ಪ್ರತಿಷ್ಠಾನದ ನಿರ್ದೇಶಕ ಡಾ.ಬಿನಯಕುಮಾರ್ ಸಿಂಗ ಉಪಸ್ಥಿತರಿದ್ದರು.

ಏಕಾತ್ಮ ಮಾನವ ದರ್ಶನ ಸಮ್ಮೇಳನದ ‘ಭಾರತ ದರ್ಶನ’ ಪ್ರದರ್ಶಿನಿ ಉದ್ಘಾಟಸಿದ ಖ್ಯಾತ ಶಿಲ್ಪಿ ಅರುಣ ಯೋಗಿರಾಜ

ಮೈಸೂರು: ನಗರದ ಕರ್ನಾಟಕ ಮುಕ್ತ ವಿಶ್ವವಿದ್ಯಾಲಯದಲ್ಲಿ ನಡೆಯುತ್ತಿರುವ ಏಕಾತ್ಮ ಮಾನವ ದರ್ಶನ ಸಮ್ಮೇಳನದ ಪ್ರದರ್ಶನಿ ಉದ್ಘಾಟನೆಯನ್ನು ಖ್ಯಾತ ಶಿಲ್ಪಕಾರ ಅರುಣ ಯೋಗಿರಾಜ ನೆರವೇರಿಸಿದರು.

ಈ ವೇಳೆ ಮಾತನಾಡಿದ ಅವರು, ಜಗತ್ತು ಯುದ್ಧದ ಕಾರ್ಮೋಡ ಕವಿದು ತತ್ತರಿಸಿರುವ ಈ ಕಾಲದಲ್ಲಿ ನಾವು ಆನಂದವಾಗಿರಲು ಕಾರಣ ಇಲ್ಲಿನ ಪರಂಪರೆ. ಏಕಾತ್ಮ ಮಾನವ ದರ್ಶನ ಮೈಸೂರು ನಗರದಲ್ಲಿ ನಡೆಯುತ್ತಿರುವುದು ಯೋಗಾಯೋಗ. ಮಾನವ- ಪ್ರಕೃತಿ ನಡುವಿನ ಸಮನ್ವಯದ ಸಿದ್ಧಾಂತ ಇಂದು ಜಗತ್ತಿಗೆ ಅಗತ್ಯವಾಗಿದೆ. ಈ ಮೂಲ ಶ್ರೇಷ್ಠ ಚಿಂತನೆಯನ್ನು ನೀಡಲು ಶ್ರಮಿಸುತ್ತಿರುವ ಆಯೋಜಕರಿಗೆ ಅಭಿನಂದನೆಗಳು ಎಂದರು.

ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಪ್ರಜ್ಞಾಪ್ರವಾಹದ ಅಖಿಲ ಭಾರತೀಯ ಟೋಳಿ ಸದಸ್ಯರಾದ ರಘುನಂದನ ಅವರು ಮಾತನಾಡಿ, ಭಾರತ ದರ್ಶನ ಪ್ರದರ್ಶಿನಿ ಇಡೀಯ ದೇಶದ ಚಿತ್ರಣ ಕಟ್ಟಿಕೊಡುತ್ತದೆ. ಚಿತಿ ಹಾಗೂ ವಿರಾಟ್ ಎಂಬ ಎರಡು ಭಾಗಗಳಿದ್ದು, ಚಿತಿಯು ಆತ್ಮತತ್ವವನ್ನು, ವಿರಾಟ್ ಅದರ ಪ್ರಕಟೀಕರಣವನ್ನು ಹೇಳುತ್ತದೆ. ಭಾರತವನ್ನು ನಾವು ತಿಳಿದು, ಮುಂದಿನ ಪೀಳಿಗೆಗೆ ದಾಟಿಸುವ ಪ್ರಯತ್ನವಾಗಲಿ ಎಂದು ಹೇಳಿದರು.

ಈ ಸಂದರ್ಭದಲ್ಲಿ ಕರ್ನಾಟಕ ಮುಕ್ತ ವಿಶ್ವವಿದ್ಯಾಲಯದ ಉಪಕುಲಪತಿ ಪ್ರೊ. ಶರಣಪ್ಪ ಹಲಸೆ ಉಪಸ್ಥಿತರಿದ್ದರು.

Leave a Reply

Your email address will not be published.

This site uses Akismet to reduce spam. Learn how your comment data is processed.