ಬೆಂಗಳೂರು, ಜೂನ್ 05: ಲಲಿತಾ ಸಹಸ್ರನಾಮದ ‘ಇಚ್ಛಾಶಕ್ತಿ ಜ್ಞಾನಶಕ್ತಿ ಕ್ರಿಯಾಶಕ್ತಿ ಸ್ವರೂಪಿಣಿ’ ಎಂಬ ಸಾಲುಗಳಿಗೆ ರುಕ್ಮಿಣಿ ಅಕ್ಕನವರು ಪರಿಪೂರ್ಣ ಉದಾಹರಣೆಯಾಗಿದ್ದರು. ಅತ್ಯಂತ ಆತ್ಮವಿಶ್ವಾಸ ಹಾಗೂ ನಿಖರತೆಯಿಂದ ಕಾರ್ಯನಿರ್ವಹಿಸುತ್ತಿದ್ದ ಅವರು, ‘ವಸುಧೈವ ಕುಟುಂಬಕಂ’ ಎಂಬ ಭಾವನೆಯನ್ನು ಮೈಗೂಡಿಸಿಕೊಂಡು ಎಲ್ಲಾ ವರ್ಗದ ಕಾರ್ಯಕರ್ತರನ್ನು ಸಮಾನವಾಗಿ ಪ್ರೀತಿಸುತ್ತಿದ್ದರು ಎಂದು ರಾಷ್ಟ್ರ ಸೇವಿಕಾ ಸಮಿತಿಯ ಪ್ರಮುಖ ಸಂಚಾಲಿಕಾ ವಿ.ಶಾಂತಾಕುಮಾರಿ ಅವರು ಹೇಳಿದರು.
ರಾಷ್ಟ್ರ ಸೇವಿಕಾ ಸಮಿತಿಯ ವತಿಯಿಂದ ಕೆಂಪೇಗೌಡ ನಗರದ ರಾಷ್ಟ್ರೋತ್ಥಾನ ಪರಿಷತ್ ನ ಕೇಶವಶಿಲ್ಪಾ ಸಭಾಂಗಣದಲ್ಲಿ ಜರುಗಿದ ರಾಷ್ಟ್ರ ಸೇವಿಕಾ ಸಮಿತಿಯ ಪೂರ್ವ ಅಖಿಲ ಭಾರತೀಯ ಸಹ ಕಾರ್ಯವಹಿಕರಾಗಿದ್ದ ದಿ.ರುಕ್ಮಿಣಿ ಅವರ ಶ್ರದ್ಧಾಂಜಲಿ ಸಭೆಯಲ್ಲಿ ಅವರು ಮಾತನಾಡಿದರು.

ರುಕ್ಮಿಣಿ ಅಕ್ಕನವರ ವಿಶಿಷ್ಟ ಸಂಘಟನಾ ಶೈಲಿಯನ್ನು ಸ್ಮರಿಸಿದ ಶಾಂತಾಕುಮಾರಿ ಅವರು “ಅತ್ಯಂತ ಸುಂದರವಾಗಿ ರಂಗೋಲಿ ಬಿಡಿಸುತ್ತಿದ್ದ ರುಕ್ಮಿಣಿ ಅಕ್ಕ, ರಂಗೋಲಿಯಲ್ಲಿನ ಚುಕ್ಕೆಗಳಂತೆ ಸಮಿತಿಯ ಸೇವಿಕೆಯರೂ ಕೂಡ ಕೇಂದ್ರಬಿಂದುವಿನ ಕಾರ್ಯವನ್ನು ನಿರ್ವಹಿಸಬೇಕೆಂದು ಮಾರ್ಗದರ್ಶನ ಮಾಡುತ್ತಿದ್ದರು” ಎಂದು ನೆನೆದರು.

ಅಸ್ಸಾಂನ ಪಾಲಕ ಅಧಿಕಾರಿಯಾಗಿದ್ದ ಎಲ್ಲಾ ಪ್ರತಿಕೂಲ ಸಂಗತಿಗಳನ್ನೂ, ಧೃತಿಗೆಡದೆ, ಸಮರ್ಥವಾಗಿ ನಿಭಾಯಿಸಿ ಹಲವು ಕಾರ್ಯಗಳನ್ನು ಯಶಸ್ವೀ ಗೊಳಿಸಿದ ಅವರ ಕರ್ತವ್ಯನಿಷ್ಠೆ ಅನುಕರಣೀಯ. ಅಲ್ಲದೆ, ಕಾಲಕ್ಕೆ ತಕ್ಕಂತೆ ರಾಷ್ಟ್ರ ಸೇವಿಕಾ ಸಮಿತಿಯಲ್ಲಿ ಮಹತ್ವದ ಬದಲಾವಣೆ ತರುವಲ್ಲಿ ಹಾಗೂ ಸಮಿತಿಯ ಪ್ರಚಾರ ಕೈಪಿಡಿ ರಚನೆಯಲ್ಲಿ ಅವರ ಕೊಡುಗೆ ಅಪಾರವಾಗಿತ್ತು ಎಂದು ಶ್ಲಾಘಿಸಿದರು.
ಸಮಾಜದೇವನ ಪೂಜೆಗೆ ಅರಳಿದ ಕಮಲ ರುಕ್ಮಿಣಿ ಅಕ್ಕ: ವಿ.ನಾಗರಾಜ್
ಕಾರ್ಯಕ್ರಮದಲ್ಲಿ ರಾಷ್ಟ್ರೀಯ ಸ್ವಯಂಸೇವಕ ಸಂಘದ ಕ್ಷೇತ್ರೀಯ ಕಾರ್ಯಕಾರಿಣಿ ಸದಸ್ಯ ವಿ.ನಾಗರಾಜ್ ಅವರು ಮಾತನಾಡಿ ಮಾ.ರುಕ್ಮಿಣಿ ಅವರು ಸಮಾಜದೇವನ ಪೂಜೆಗೆ ಅರಳಿದ ಕಮಲ. ಸಾಮಾಜಿಕವಾಗಿ ಪ್ರತಿಕೂಲ ವಾತಾವರಣ ಇದ್ದಾಗಲೂ ಸಮಿತಿಯ ಕಾರ್ಯವನ್ನು ಶ್ರಮವಹಿಸಿ ನಿರ್ವಹಣೆ ಮಾಡಿದವರು. ಕರ್ನಾಟಕ ಮಾತ್ರವಲ್ಲದೆ ಅಸ್ಸಾಂನಲ್ಲಿಯೂ ರುಕ್ಮಿಣಿ ಅವರ ಕೊಡುಗೆ ಅಪಾರ ಮತ್ತು ಅನುಪಮವಾಗಿರುವಂತಹದ್ದು. ಅವರ 97 ವರ್ಷಗಳ ತುಂಬು ಜೀವನ ಕೂಡ ಸಮಾಜಕ್ಕೆ ಸಮರ್ಪಿತವಾಗಿದ್ದು, ಆದರ್ಶಪ್ರಾಯವಾದದ್ದು ಎಂದು ಹೇಳಿದರು.

ರುಕ್ಮಿಣಿ ಅವರು ಗಣಿತಶಾಸ್ತ್ರದ ಮೇಷ್ಟ್ರಾದ ಕಾರಣ ನಿಖರತೆ, ಖಚಿತತೆ, ಅಚ್ಚುಕಟ್ಟುತನ, ಶಿಸ್ತು ಅವರ ಸ್ವಭಾವವಾಗಿತ್ತು. ಅದನ್ನು ಉಳಿದ ಕಿರಿಯರಿಗೆ ಕಠೋರತೆಯಿಂದ ತಿಳಿಸದೇ, ನಿರ್ಮಲ ಪ್ರೀತಿ ಮತ್ತು ಮೃದು ಮಾತಿನಿಂದ ತಿದ್ದಿ ತೀಡಿದರು. ಸಮಾಜ ಕಾರ್ಯ ಮಾಡುವಾಗ ಸಮಾಜದ ಬಗ್ಗೆ ಅತ್ಯಂತ ಆದರ ಇರಬೇಕು ಮತ್ತು ನಮ್ಮ ಅಪೇಕ್ಷೆಯಂತೆ ಆ ಗುಣಗಳನ್ನು ನಾವು ಬಯಸುವ ವ್ಯಕ್ತಿಗಳಲ್ಲಿ ನಿರ್ಮಾಣ ಮಾಡಬೇಕು ಎನ್ನುವುದು ಅವರ ಆಶಯವಾಗಿತ್ತು ಎಂದರು.
ನನ್ನ ಬೆಳವಣಿಗೆಗೆ ರುಕ್ಮಿಣಿ ಅಕ್ಕನವರೇ ಪ್ರೇರಣೆ: ಸಂಸದೆ ಶೋಭಾ ಕರಂದ್ಲಾಜೆ

ಸಭೆಯಲ್ಲಿ ಉಪಸ್ಥಿತರಿದ್ದ ಸಂಸದೆ ಶೋಭಾ ಕರಂದ್ಲಾಜೆಯವರು ಮಾತನಾಡಿ, “ನಾನು ಸಾಮಾನ್ಯ ಕಾರ್ಯಕರ್ತೆಯಾಗಿ ಬೆಂಗಳೂರಿಗೆ ಬಂದಾಗ ‘ಸುಕೃಪ’ದಲ್ಲಿ ನನಗೆ ಆಶ್ರಯ ಸಿಕ್ಕಿತು. ಹೆಣ್ಣುಮಕ್ಕಳು ಮನಸ್ಸನ್ನು ಗಟ್ಟಿ ಮಾಡಿಕೊಂಡು ದೇಶಸೇವೆಯಲ್ಲಿ ತೊಡಗಿಸಿಕೊಳ್ಳಲು ರುಕ್ಮಿಣಿ ಅಕ್ಕನವರೇ ಪ್ರೇರಣೆ. ಹೊರಗಿನ ಅತ್ಯಂತ ಕಟ್ಟುನಿಟ್ಟಿನ ಶಿಸ್ತಿನ ನಡುವೆಯೂ, ಅವರು ಅಕ್ಕರೆಯಿಂದ ಸ್ವತಃ ಅಡುಗೆ ಮಾಡಿ ಬಡಿಸುತ್ತಿದ್ದರು. ತಪ್ಪು ಮಾಡದ ಮನಸ್ಥಿತಿಯನ್ನು ಬೆಳೆಸಿಕೊಟ್ಟು, ಸ್ವಂತ ಜಾಗವನ್ನು ಸಮಿತಿಯ ಕಾರ್ಯಕ್ಕೆ ದಾನ ಮಾಡುವ ಉದಾತ್ತ ಕಲ್ಪನೆ ನೀಡಿದ ಹಾಗೂ ಸಮಾಜಕ್ಕಾಗಿ ಇಡೀ ಜೀವನವನ್ನು ಮುಡುಪಾಗಿಟ್ಟ ರುಕ್ಮಿಣಿ ಅಕ್ಕ ನನಗೆ ಸದಾ ಆದರ್ಶ, ನಾನು ಈ ಹಂತಕ್ಕೆ ಬೆಳೆಯಲು ಕಾರಣರಾದ ರುಕ್ಮಿಣಿ ಅಕ್ಕನವರಿಗೆ ನನ್ನ ಶ್ರದ್ಧಾಪೂರ್ವಕ ಪ್ರಣಾಮಗಳು” ಎಂದು ಭಾವುಕರಾಗಿ ನುಡಿದರು.
ಕಾರ್ಯಕ್ರಮದಲ್ಲಿ ದಕ್ಷಿಣ ಮಧ್ಯ ಕ್ಷೇತ್ರ ಕಾರ್ಯವಾಹಿಕ ಮಾ. ಸಾವಿತ್ರಿ ಸೋಮಯಾಜಿ, ದಕ್ಷಿಣ ಕ್ಷೇತ್ರ ಕಾರ್ಯವಾಹಿಕ ಮಾ.ಗೀತಾ ರವೀಂದ್ರನ್, ರಾಷ್ಟ್ರೀಯ ಸೇವಾ ಭಾರತಿಯ ಟ್ರಸ್ಟಿ ಶಿಲ್ಪಾ ವರಣಿಕರ್, CBR ನೆಟ್ವರ್ಕ್ ನ ರಿಜಿನಲ್ ಅಡ್ವೈಸರ್ ಇಂದುಮತಿ ರಾವ್, ಪೂರ್ವ ಸೇವಾವ್ರತಿ ಹಾಗೂ ಪೂರ್ವ ಪ್ರಚಾರಿಕಾ ಭಾಗಿರತಿ, ಉದ್ಯಮಿ ಕೃಷ್ಣ, ಎಂಎಲ್ಎ ಕಾಲೇಜಿನ ಉಪಾಧ್ಯಕ್ಷೆ ಕವಿತಾ, ಎಂಎಲ್ಎ ಕಾಲೇಜಿನ ಪೂರ್ವ ಪ್ರಾಂಶುಪಾಲೆ ತ್ರಿವೇಣಿ ಸೇರಿದಂತೆ ಇತರೆ ಗಣ್ಯರು ನುಡಿನಮನವನ್ನು ಸಲ್ಲಿಸಿದರು.







ವೇದಿಕೆಯಲ್ಲಿ ರಾಷ್ಟ್ರ ಸೇವಿಕಾ ಸಮಿತಿಯ ಹೊಯ್ಸಳ ಪ್ರಾಂತದ ಕಾರ್ಯವಾಹಿಕ ವಸಂತಾ ಸ್ವಾಮಿ ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ರಾಷ್ಟ್ರೀಯ ಸ್ವಯಂಸೇವಕ ಸಂಘದ ಕ್ಷೇತ್ರೀಯ ಸಂಪರ್ಕ ಪ್ರಮುಖ್ ಟಿ.ಎಸ್.ವೆಂಕಟೇಶ್, ಕರ್ನಾಟಕ ದಕ್ಷಿಣ ಪ್ರಾಂತ ಸಂಘಚಾಲಕ ಜಿ.ಎಸ್.ಉಮಾಪತಿ, ಕರ್ನಾಟಕ ದಕ್ಷಿಣ ಪ್ರಾಂತ ಪ್ರಚಾರಕ ಗುರುಪ್ರಸಾದ್, ಖ್ಯಾತಾ ಹೃದ್ರೋಗ ತಜ್ಞೆ ಡಾ.ವಿಜಯಲಕ್ಷ್ಮೀ ಬಾಳೆಕುಂದ್ರಿ, ವಿಧಾನ ಪರಿಷತ್ ಸದಸ್ಯೆ ಭಾರತೀ ಶೆಟ್ಟಿ, ನಟಿ ಮಾಳವಿಕಾ ಅವಿನಾಶ್ ಸೇರಿದಂತೆ ಅನೇಕ ಗಣ್ಯರು, ರಾಷ್ಟ್ರ ಸೇವಿಕಾ ಸಮಿತಿಯ ಪ್ರಮುಖರು, ಕಾರ್ಯಕರ್ತೆಯರು ಹಾಗೂ ಸಮಾಜಬಂಧುಗಳು ಉಪಸ್ಥಿತರಿದ್ದರು.




