ಪ್ರಜ್ಞಾ ಪ್ರವಾಹ ಕರ್ನಾಟಕ ವತಿಯಿಂದ ‘ಏಕಾತ್ಮ ಮಾನವ ದರ್ಶನ: ಭಾರತೀಯ ವಿಶ್ವದೃಷ್ಟಿ’ ವಿಷಯದ ಕುರಿತು ಆಯೋಜಿಸಲಾದ ಮೂರು ದಿನಗಳ ಅಂತರರಾಷ್ಟ್ರೀಯ ವಿಚಾರ ಸಂಕಿರಣ ಸಂಪನ್ನ
ಮೈಸೂರು: ಏಕಾತ್ಮ ಮಾನವ ದರ್ಶನ ಎನ್ನುವುದು ಭಾರತೀಯ ಜೀವನದರ್ಶನ. ಅದು ಹೊಸ ಸಿದ್ಧಾಂತವಲ್ಲ. ಭಾರತದ ಜೀವನ ವಿಧಾನವನ್ನು ಸಿದ್ಧಾಂತಗೊಳಿಸಲಾಗಿದೆ. ಅದರ ಪ್ರಕಾರ ಸಾಮಾಜಿಕ ವ್ಯವಸ್ಥೆ ರಾಜಕೀಯ ವ್ಯವಸ್ಥೆಗಿಂತ ಸದೃಢವಾಗಬೇಕು. ನಮ್ಮ ಕರ್ತವ್ಯ ಭಾರತೀಯ ಸಾಮಾಜಿಕ ವ್ಯವಸ್ಥೆಯನ್ನು ಉಳಿಸುವುದು. ಅದಾಗಲೇ ಕುಟುಂಬ ವ್ಯವಸ್ಥೆ ನಶಿಸುತ್ತಿರುವ ಅನೇಕ ನಿದರ್ಶನವನ್ನು ನಾವು ಕಾಣುತ್ತಿದ್ದೇವೆ. ನಮ್ಮ ಕುಟುಂಬ ವ್ಯವಸ್ಥೆ ಮಾಡಬೇಕಾದ ನಿರ್ಣಯವನ್ನೂ ರಾಜ್ಯ ಮಾಡಬೇಕಾದ ಸ್ಥಿತಿಗೆ ತಲುಪಿದೆ. ಇದು ಭಾರತೀಯ ವಿಧಾನವಲ್ಲ ಎನ್ನುವುದನ್ನು ಜನರಿಗೆ ತಿಳಿಸಬೇಕು.ಎಂದು ಪ್ರಜ್ಞಾ ಪ್ರವಾಹದ ಅಖಿಲ ಭಾರತೀಯ ಟೋಳಿ ಸದಸ್ಯ ರಘುನಂದನ ಹೇಳಿದರು.

ಪ್ರಜ್ಞಾ ಪ್ರವಾಹ ಕರ್ನಾಟಕದ ವತಿಯಿಂದ ಮೈಸೂರಿನ ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯದಲ್ಲಿ ಆಯೋಜಿಸಲಾದ ‘ಏಕಾತ್ಮ ಮಾನವ ದರ್ಶನ : ಭಾರತದ ವಿಶ್ವದೃಷ್ಟಿ’ ವಿಚಾರ ಸಂಕಿರಣದ ಸಮಾರೋಪ ಸಮಾರಂಭದಲ್ಲಿ ಅವರು ಮಾತನಾಡಿದರು.
ಪುರುಷಾರ್ಥಗಳನ್ನು ಸರಿಯಾದ ದೃಷ್ಟಿಕೋನದಲ್ಲಿ ನೀಡಬೇಕಾದ ಅವಶ್ಯಕತೆ ಇದೆ. ಶೈಕ್ಷಣಿಕ ವಲಯದಲ್ಲಿ ಧರ್ಮ ಪದವನ್ನು ಬಳಸುವುದು ಕಷ್ಟ. ಆಹಾರ, ನಿದ್ರೆ, ಭಯ, ಮೈಥುವ ಎಲ್ಲವೂ ಪ್ರಾಣಿಗಳು ಮತ್ತು ಮನುಷ್ಯರಲ್ಲಿ ಸಮಾನವಾದದ್ದು. ಆದರೆ ಪ್ರಾಣಿಗಳಿಗೂ ಮತ್ತು ಮಾನವರಿಗೂ ವ್ಯತ್ಯಾಸವನ್ನು ತರುವುದು ಧರ್ಮದ ಪರಿಪಾಲನೆ. ಆದರೆ ಪ್ರಸ್ತುತ ಧರ್ಮವನ್ನು ರಿಲಿಜನ್ ಗೆ ಸಂವಾದಿಯಾಗಿ ಬಳಸಲಾಗುತ್ತಿದೆ. ಅದು ಸರಿಯಾದುದಲ್ಲ. ಪದಗಳು ಮಾದರಿಗಳನ್ನು ರಚಿಸುವಲ್ಲಿ ಸಹಕರಿಸುವ ಕಾರಣ ಅವುಗಳ ಬಳಕೆ ಸರಿಯಾಗಿ ಇರಬೇಕು ಎಂದರು.
ವಿದೇಶಿಯನ್ನು ಸ್ವದೇಶಾನುಕೂಲ ಮಾಡಬೇಕು. ಸ್ವದೇಶಿಯನ್ನು ಯುಗಾನುಕೂಲ ಮಾಡಬೇಕು ಎಂದು ದೀನದಯಾಳ ಉಪಾಧ್ಯಾಯರು ಹೇಳಿದ್ದರು. ಅದರ ಜವಾಬ್ದಾರಿ ಯಾರದ್ದು? ಜವಾಬ್ದಾರಿಯ ವಿಷಯ ಬಂದಾಗ ಭಾರತೀಯ ವೈಚಾರಿಕ ವಲಯ ರಾಜ್ಯದ ಮೇಲೆ ಬೊಟ್ಟು ಮಾಡಿ ತೋರಿಸುತ್ತದೆ. ಆ ಜವಾಬ್ದಾರಿಯನ್ನು ವೈಚಾರಿಕ ವಲಯವೇ ವಹಿಸಬೇಕು. ನಾವು ಹೇಳುವ ತತ್ತ್ವವನ್ನು ನಾವು ಪಾಲಿಸಬೇಕು ಎಂದರು.
ಭಾರತೀಯತೆಯು ಅನನ್ಯವಾದ ವಿಧಾನ. ಅದನ್ನು ವ್ಯವಸ್ಥೆಯಲ್ಲೂ ತರಬೇಕು. ವಿಚಾರ ಮತ್ತು ಅದಕ್ಕೆ ಅನುಕೂಲ ವ್ಯವಹಾರ ಮೂಡಿಬರಬೇಕು. ಹಿಂದೆ ಯಾವುದನ್ನು ವಿಜ್ಞಾನದ ಹೆಸರಲ್ಲಿ ತಿರಸ್ಕರಿಸಲಾಗಿತ್ತೋ, ಅದನ್ನೂ ಇಂದು ವಿಜ್ಞಾನ ಎಂದು ಪರಿಗಣಿಸಲಾಗುತ್ತಿದೆ. ವಿಶ್ವದ ಕುರಿತು ಒಳ್ಳೆಯದನ್ನೇ ಯೋಚಿಸುವ ಭಾರತೀಯ ತತ್ತ್ವಜ್ಞಾನವನ್ನು ವಿಶ್ವದಾದ್ಯಂತ ಮತ್ತು ಎಲ್ಲಾ ವ್ಯವಸ್ಥೆಗಳಲ್ಲೂ ಪಸರಿಸುವ ಕರ್ತವ್ಯ ಸಮಾಜದ್ದೇ ಹೊರತು ಸರ್ಕಾರದ್ದಲ್ಲ ಎಂದು ನುಡಿದರು.

ಕಾರ್ಯಕ್ರಮದಲ್ಲಿ ಮಾತನಾಡಿದ ಡಾ. ಶ್ಯಾಮಪ್ರಸಾದ ಮುಖರ್ಜಿ ಸಂಶೋಧನಾ ಫೌಂಡೇಶನ್ ನ ನಿರ್ದೇಶಕ ಬಿನಯ್ ಕುಮಾರ್ ಸಿಂಗ್ ಮಾತನಾಡಿ ದೀನ ದಯಾಳ ಹೆಸರಿನ ಅರ್ಥವೇ ದೀನರನ್ನು ಪೊರೆಯುವವನು ಎಂದು. ಪ್ರಭು ಶ್ರೀರಾಮನಿಗೂ ಈ ಹೆಸರಿತ್ತು. ಅಂತ್ಯೋದಯದ ಕಲ್ಪನೆಯೂ ರಾಮರಾಜ್ಯದ ಕಲ್ಪನೆಯಿಂದ ಪ್ರೇರಿತವಾದದದ್ದು. ದೀನರನ್ನು ಸಮರ್ಥಗೊಳಿಸುವುದು ಅಂತೋದಯದ ಕಲ್ಪನೆಯಾಗಿತ್ತು ಎಂದರು.
ಪ್ರೀತಿ ಮತ್ತು ಯುದ್ಧದ ಹೆಸರಿನಲ್ಲಿ ಮಾಡಲಾಗುವ ಎಲ್ಲಾ ಕಾರ್ಯಗಳು ಸರಿಯೇ ಎನ್ನುವುದು ಇತರರ ಕಲ್ಪನೆ. ಆದರೆ ಪ್ರೀತಿ ಮತ್ತು ಯುದ್ಧದ ಹೆಸರಿನಲ್ಲಿ ಮಾಡಲಾಗುವ ಎಲ್ಲಾ ಕಾರ್ಯಗಳು ಸರಿಯಲ್ಲ ಎನ್ನುವುದು ಭಾರತೀಯ ಕಲ್ಪನೆ. ಅದನ್ನು ಆಪರೇಷನ್ ಸಿಂದೂರದಲ್ಲೂ ಅನುಸರಿಸಸಿದ್ದೇವೆ. ಯುದ್ಧದ ಸಂದರ್ಭದಲ್ಲಿಯೂ ನಮ್ಮ ದೇಶದ ಸಾಮೂಹಿಕ ಪ್ರಜ್ಞೆಯಾದ ವಸುಧೈವ ಕುಟುಂಬಕಮ್ ಅನ್ನು ನಾವು ಪಾಲಿಸುತ್ತೇವೆ. ಹಾಗಾಗಿಯೇ ನಮ್ಮ ಗುರಿಯ ಹೊರತಾಗಿ ಯಾರಿಗೂ ನಾವು ತೊಂದರೆಯಾಗದಂತೆ ಎಚ್ಚರವಹಿಸುತ್ತೇವೆ. ಇಂದು ವಿಶ್ವದ ಎದರು ಎರಡು ಸವಾಲಿದೆ. ಒಂದು ವಿಶ್ವ ಯುದ್ಧ, ಇನ್ನೊಂದು ಸಾಮಾಜಿಕ ಘನೀಕರಣ. ಈ ಎರಡೂ ಸವಾಲುಗಳಿಗೆ ಭಾರತೀಯ ಚಿಂತನೆಯಲ್ಲಿ ಪರಿಹಾರವಿದೆ ಎಂದು ನುಡಿದರು.
ಅಭಿವೃದ್ಧಿ ಹೊಂದಿದ ದೇಶದ ಕುರಿತು ಭಾರತೀಯ ಕಲ್ಪನೆ ಏನು? ಆರ್ಥಿಕವಾಗಿ ಸಮರ್ಥವಾಗುವುದು ಈ ಅಭಿವೃದ್ಧಿಯ ಒಂದು ಭಾಗ. ಸಾಮಾಜಿಕವಾಗಿ, ಸಾಂಸ್ಕೃತಿಕವಾಗಿ ಮತ್ತು ಮೌಲ್ಯಾಧಾರಿತವಾಗಿಯೂ ಸಮರ್ಥವಾಗಬೇಕು ಎನ್ನುವ ಅಶಯಗಳೂ ಭಾರತೀಯ ಅಭಿವೃದ್ಧಿಯ ದೃಷ್ಟಿಕೋನ ಹೊಂದಿದೆ. ಸೂಪರ್ ಪವರ್ ಆಗುವುದಕ್ಕೆ ನಮ್ಮ ಮಾನದಂಡ ಬೇರೆ, ನಮ್ಮ ಸಾಮೂಹಿಕ ಪ್ರಜ್ಞೆಯಾದ ಚಿತಿಯೂ ಬೇರೆ ಎಂದು ನುಡಿದರು.
ವೇದಿಕೆಯಲ್ಲಿ ಪ್ರಜ್ಞಾಪ್ರವಾಹದ ಕರ್ನಾಟಕ ಉತ್ತರ ಪ್ರಾಂತದ ಸಂಯೋಜಕ ಡಾ. ನಿರಂಜನ ಪೂಜಾರ್ ಉಪಸ್ಥಿತರಿದ್ದರು.
ನಿಯಮಾಧಾರಿತ ಸಮಾಜದ ಬದಲು ಮೌಲ್ಯಾಧಾರಿತ ಸಮಾಜವಾಗಬೇಕು : ಬಿ ಎಲ್ ಸಂತೋಷ್
ಮೈಸೂರು: ಒಬ್ಬ ವ್ಯಕ್ತಿ ತನ್ನ ಮೌಲ್ಯಗಳಿಂದ ದೇವರಾಗಬಹುದು ಎನ್ನುವುದನ್ನು ತೋರಿಸಿಕೊಟ್ಟು ಸಕಲ ಕಾಲಕ್ಕೂ ಮಾದರಿಯಾದವನು ಪ್ರಭು ಶ್ರೀರಾಮ. ಇಂದು ನಿಯಮಾಧಾರಿತವಾಗಿರುವ ಸಮಾಜದಿಂದ ಮೌಲ್ಯಾಧಾರಿತ ಸಮಾಜದೆಡೆಗೆ ಸಾಗಬೇಕಾದ ಅನಿವಾರ್ಯತೆ ಇದೆ ಎಂದು ಭಾರತೀಯ ಜನತಾ ಪಕ್ಷದ ಅಖಿಲ ಭಾರತೀಯ ಸಂಘಟನಾ ಕಾರ್ಯದರ್ಶಿ ಬಿ ಎಲ್ ಸಂತೋಷ್ ಹೇಳಿದರು.

ಪ್ರಜ್ಞಾ ಪ್ರವಾಹ ಕರ್ನಾಟಕದ ವತಿಯಿಂದ ಮೈಸೂರಿನ ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯದಲ್ಲಿ ಆಯೋಜಿಸಲಾದ ‘ಏಕಾತ್ಮ ಮಾನವ ದರ್ಶನ : ಭಾರತದ ವಿಶ್ವದೃಷ್ಟಿ’ ವಿಚಾರ ಸಂಕಿರಣದಲ್ಲಿ Philosophy to Policy Contemporary Political, Economic and Civilizational Challenges: Bharatiya Perspective ವಿಷಯದ ಕುರಿತು ನಡೆದ ವಿಶೇಷ ಸಂವಾದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಭಾರತೀಯ ದೃಷ್ಟಿಕೋನದ ಅನುಷ್ಠಾನಕ್ಕೆ ವ್ಯಕ್ತಿ, ಸಮಾಜ, ಶಿಕ್ಷಣ ಕ್ಷೇತ್ರ, ನೀತಿ ನಿರೂಪಕರು ಮತ್ತು ಅಧಿಕಾರಿ ವರ್ಗ, ಜನಪ್ರತಿನಿಧಿಗಳ ಹಂತಗಳಲ್ಲಿ ಸವಾಲುಗಳು ಎದುರಾಗಬಹುದು. ಇದೆಲ್ಲದಕ್ಕಿಂತಲೂ ಒಂದು ದೊಡ್ಡ ಸವಾಲಾಗಿ ಪಾಶ್ಚಾತ್ಯ ಯೋಚನೆ ಮತ್ತು ಜೀವನಶೈಲಿಯಿಂದ ಪ್ರಭಾವಕ್ಕೆ ಒಳಗಾಗಿರುವ ಜನಮಾನಸ ನಮ್ಮ ಮುಂದಿದೆ. ಸಮಾಜವನ್ನು ನಿರ್ವಸಾಹತೀಕರಣ ಮಾಡಬೇಕು, ಆದರೆ ಅದಕ್ಕಾಗಿ ಪ್ರಯತ್ನಿಸುವವರೇ ವಸಾಹತು ಶಾಹಿ ಮಾನಸಿಕತೆಗೆ ಒಳಗಾಗಿರುವಾಗ ಈ ಪ್ರಯತ್ನ ಸಫಲಗೊಳ್ಳುವುದಾದರೂ ಹೇಗೆ ಎಂದು ಪ್ರಶ್ನಿಸಿದರು.

ಸಿದ್ದಾಂತ ಹೀನ ಮತದಾರ, ಸಿದ್ಧಾಂತ ಹೀನ ರಾಜ್ಯವ್ಯವಸ್ಥೆಯನ್ನು ನಿರ್ಮಿಸುತ್ತಾನೆ. ಇದರಿಂದಾಗಿ ಭವಿಷ್ಯದಲ್ಲಿ ಅನೇಕ ಸಮಸ್ಯೆಗಳು ಎದುರಾಗುತ್ತದೆ. ಅನ್ಯ ರಾಜ್ಯಗಳಲ್ಲಿ ರಾಜ ಮತ್ತು ಋಷಿಯ ವ್ಯವಸ್ಥೆ ಇದೆ. ಭಾರತದಲ್ಲಿ ಮಾತ್ರ ಅವುಗಳ ಸಮನ್ವಯಗೊಂಡ ರಾಜರ್ಷಿ ಎಂಬ ಕಲ್ಪನೆಯೂ ಇದೆ. ಎಲ್ಲಾ ರಾಜಕೀಯ ವ್ಯವಸ್ಥೆಯಲ್ಲಿ ಉತ್ತಮ ಜನಪ್ರತಿನಿಧಿಗಳಿದ್ದಾರೆ. ಆದರೆ ಪೀಳಿಗೆಗೊಬ್ಬ ಉತ್ತಮ ಜನಪ್ರತಿನಿಧಿಯ ನಿರ್ಮಾಣವಾಗುತ್ತಿದೆ. ಅಂತಹವರ ಸಂಖ್ಯೆ ಹೆಚ್ಚಾಗಬೇಕು. ರಾಜ್ಯದ ನಿಯಂತ್ರಣ ಕಡಿಮೆಯಾಗಿ ಸಮಾಜಕೇಂದ್ರಿತ ನಿರ್ವಹಣೆ ಜಾಸ್ತಿಯಾಗಬೇಕು. ಹೆಚ್ಚು ಮೌಲ್ಯಗಳು ಮುನ್ನೆಲೆಗೆ ಬರಬೇಕು. ಅದಕ್ಕಾಗಿ ಮತದಾರ ಜಾಗೃತನಾಗಬೇಕು ಎಂದು ಅಭಿಪ್ರಾಯಪಟ್ಟರು.
ಕಾರ್ಯಕ್ರಮದಲ್ಲಿ ಮಾತನಾಡಿದ ಪ್ರಧಾನಮಂತ್ರಿಗಳ ಆರ್ಥಿಕ ಸಲಹಾ ಮಂಡಳಿಯ ಸದಸ್ಯ ಪ್ರೊ.ಕೆ.ವಿ.ರಾಜು ವಿವಿಧ ಕ್ಷೇತ್ರದಲ್ಲಿ ಏಕಾತ್ಮ ಮಾನವ ದರ್ಶನವನ್ನು ಯಾವ ಹಂತದಲ್ಲಿ ಅಳವಡಿಸಿಕೊಳ್ಳಬೇಕು ಎಂಬ ಸ್ಪಷ್ಟತೆ ನಮಗೆ ಇರಬೇಕು. ಯಾವುದೇ ವಿಚಾರ ಸಂಕಿರಣದ ನಂತರ ಅದರಲ್ಲಿ ಚರ್ಚೆಯಾದ ವಿಷಯಗಳ ಆಧಾರಿತವಾಗಿ ಮುಂದಿನ ಕಾರ್ಯ ಏನು ಮಾಡಬೇಕು, ಹೇಗೆ ಮಾಡಬೇಕು, ಯಾರು ಮಾಡಬೇಕು, ಇದರಿಂದ ಏನು ಪ್ರಯೋಜನ, ಅದನ್ನು ಹೇಗೆ ಮಾಪನಮಾಡುವ ಬಗೆ ಮತ್ತು ಅದರಿಂದ ಯಾರಿಗೆ ಪ್ರಯೋಜನವಾಗುತ್ತದೆ ಎನ್ನುವುದು ತಿಳಿದಿರಬೇಕು ಎಂದರು.

ಶಿಕ್ಷಣ ಕ್ಷೇತ್ರದಲ್ಲಿ ಅಧ್ಯಯನ ಮತ್ತು ಅಧ್ಯಾಪನದ ವಸ್ತು ಹೇಗಿದೆ ಮತ್ತು ಹೇಗಿರಬೇಕು ಎನ್ನುವುದರ ವಿಮರ್ಶೆ ಮುಖ್ಯ. ನಾವು ಪ್ರಸ್ತುತ ಅಳವಡಿಸಿಕೊಡಿರುವ ಅಧ್ಯಯನ ಮತ್ತು ಅಧ್ಯಾಪನದ ಮಾದರಿ ಸರಿಯಿದೆಯೇ ಎಂದು ಅಳೆಯುವುದಕ್ಕೆ ಸರಿಯಾದ ಮಾನದಂಡಗಳನ್ನು ಗುರುತಿಸಬೇಕು. ಈಗಾಗಲೇ ಏಕಾತ್ಮ ಮಾನದ ದರ್ಶನದ ಹಾದಿಯಲ್ಲಿ ಮುನ್ನಡೆಯುತ್ತಿರುವ ರಾಷ್ಟ್ರೀಯ ಸ್ವಯಂಸೇವಕ ಸಂಘ, ರಾಷ್ಟ್ರೋತ್ಥಾನ ಪರಿಷತ್, ಅನೇಕ ಗುರುಕುಲಗಳು, ರಾಮಕೃಷ್ಣ ಮಿಷನ್ ಆದಿಯಾಗಿ ಅನೇಕ ಸಾಮಾಜಿಕ ಮತ್ತು ಧಾರ್ಮಿಕ ಸಂಸ್ಥೆಗಳ ಅಳವಡಿಸಿಕೊಳ್ಳಬೇಕಾದ ಮಾದರಿಗಳನ್ನು ನಮ್ಮ ಅನೇಕ ಕ್ಷೇತ್ರಗಳಲ್ಲಿ ಅಳವಡಿಸಿಕೊಳ್ಳಬೇಕಾದ ಅವಶ್ಯಕತೆ ಇದೆ ಎಂದು ಅಭಿಪ್ರಾಯಪಟ್ಟರು.

ನವದೆಹಲಿಯ ಜವಾಹರಲಾಲ್ ನೆಹರು ವಿಶ್ವವಿದ್ಯಾನಿಲಯದ ಕುಲಪತಿ ಪ್ರೊ. ಶಾಂತಿಶ್ರೀ ಧುಲಿಪುಡಿ ಪಂಡಿತ್ ಮಾತನಾಡಿ ಭಾರತೀಯ ಕಥನವನ್ನು ಸಮರ್ಥವಾಗಿ ಜಗತ್ತಿನ ಎದುರು ಇಡುವುದಕ್ಕೆ ಸಹಕಾರಿಯಾಗುವಂತೆ ಶಿಕ್ಷಣ ವ್ಯವಸ್ಥೆಯನ್ನು ಸಿದ್ಧಪಡಿಸಬೇಕು. ಧೃವೀಕರಣಗೊಂಡಿರುವ ಇಂದಿನ ಜಾಗತಿಕ ಪರಿಸ್ಥಿತಿಯಲ್ಲಿ ಭಾರತೀಯ ನಾಗರಿಕತೆಯ ಮತ್ತು ಸಾಂಸ್ಕೃತಿಕ ಮೌಲ್ಯಗಳನ್ನು ಪಸರಿಸುವ ಅವಶ್ಯಕತೆ ಹೆಚ್ಚಿದೆ ಎಂದು ನುಡಿದರು.