ದಿವ್ಯಾಂಗರ ಸಬಲೀಕರಣಕ್ಕಾಗಿ ಸಮರ್ಪಿತ ಸಂಸ್ಥೆ ಸಕ್ಷಮ, ರಾಜ್ಯದ ದಿವ್ಯಾಂಗರು ಎದುರಿಸುತ್ತಿರುವ ಸಮಸ್ಯೆಗಳಿಗೆ ಪರಿಹಾರ ಕೋರಿ ರಾಜ್ಯಪಾಲರಿಗೆ ಮನವಿ ಪತ್ರವನ್ನು ಸಲ್ಲಿಸಿತು. ಅಂಗವಿಕಲ ವ್ಯಕ್ತಿಗಳ ಹಕ್ಕುಗಳ ಕಾಯ್ದೆಯ ಸಮರ್ಪಕ ಅನುಷ್ಠಾನ, ವಿವಿಧ ಇಲಾಖೆಗಳಲ್ಲಿ ಶೇಕಡ ಐದರಷ್ಟು ಅನುದಾನದ ಸಮರ್ಪಕ ಬಳಕೆ, ಕಾಲೇಜು ಶಿಕ್ಷಣ ಇಲಾಖೆ ಸೇರಿದಂತೆ ವಿವಿಧ ಸರ್ಕಾರಿ ಇಲಾಖೆಗಳಲ್ಲಿ ನಡೆಯುತ್ತಿರುವ ವರ್ಗಾವಣೆಗಳಲ್ಲಿ ನೈಜ ವಿಶೇಷ ಚೇತನರಿಗೆ ಆಗುತ್ತಿರುವ ಅನ್ಯಾಯ, ಸುಳ್ಳು ಅಂಗವಿಕಲ ಪ್ರಮಾಣ ಪತ್ರಗಳ ಹಾವಳಿ ವಿ ಆರ್ ಡಬ್ಲ್ಯೂ ಮತ್ತು ಎಂ ಆರ್ ಡಬ್ಲ್ಯೂ ಗಳಿಗೆ ಕನಿಷ್ಠ ವೇತನ ಜಾರಿ, ರಾಜ್ಯದ ವೈದ್ಯಕೀಯ ಕಾಲೇಜುಗಳಲ್ಲಿ ಜೆನಿಟಿಕ್ ಲ್ಯಾಬ್ ಗಳ ಸ್ಥಾಪನೆ, ವಿಶೇಷ ಚೇತನರ ಮಾಸಾಶನ ಹೆಚ್ಚಳ ಮತ್ತು ಅದಕ್ಕಾಗಿ ವಿಶೇಷ ನಿಧಿಯ ಸ್ಥಾಪನೆ ಮುಂತಾದ ಸಮಸ್ಯೆಗಳನ್ನು ಕುರಿತು ಸರ್ಕಾರದ ಗಮನ ಸೆಳೆಯಲು ಸಕ್ಷಂ ಸಂಸ್ಥೆಯ ರಾಷ್ಟ್ರೀಯ ಮಟ್ಟದ ಕಾರ್ಯಕರ್ತರ ವಿನೋದ್ ಪ್ರಕಾಶ್ ಆರ್, ರಾಜ್ಯದ ಅಧ್ಯಕ್ಷ ಕೇಶವ್ ಕುಮಾರ್ ಅವರ ನೇತೃತ್ವದಲ್ಲಿ ಸಕ್ಷಮದ ನಿಯೋಗವು ರಾಜ್ಯಪಾಲ ಥಾವರ್ ಚಂದ್ ಗೆಹ್ಲೋತ್ ಅವರನ್ನು ಲೋಕಭವನದಲ್ಲಿ ಭೇಟಿಯಾಗಿ ವಿಶೇಷ ಚೇತನರ ಜ್ವಲಂತ ಸಮಸ್ಯೆಗಳನ್ನು ಕುರಿತು ಚರ್ಚೆ ನಡೆಸಿತು.

ಈ ಸಂದರ್ಭದಲ್ಲಿ ಸಕ್ಷಮದ ಕಾರ್ಯದರ್ಶಿ ನಾಗರಾಜ್, ಸಹ ಕಾರ್ಯದರ್ಶಿ ಮುನಿರಾಜು, ಕೋಶಾಧ್ಯಕ್ಷ ಉಮೇಶ್ ಮತ್ತು ರಾಜ್ಯ ಪ್ರಶಸ್ತಿ ವಿಜೇತ ದಿವ್ಯಾಂಗರು ಮತ್ತು ಸೇವಾ ಭಾರತಿ ಸಂಸ್ಥೆಯ ಮುಖ್ಯಸ್ಥ ವಿನಾಯಕ ರಾವ್ ಕೆ ಉಪಸ್ಥಿತರಿದ್ದರು.

ನಿಯೋಗದ ಅಹವಾಲುಗಳನ್ನು ಆಲಿಸಿದ ರಾಜ್ಯಪಾಲರು ಸರ್ಕಾರದ ಸಂಬಂಧಿತ ಇಲಾಖೆಗಳಿಗೆ ಸಮಸ್ಯೆಗಳ ಪರಿಹಾರಕ್ಕೆ ಕ್ರಮ ಕೈಗೊಳ್ಳಲು ತಿಳಿಸುವುದಾಗಿ ಭರವಸೆ ನೀಡಿದರು. ಅಗತ್ಯ ವಿಷಯಗಳಲ್ಲಿ ಕೇಂದ್ರ ಸರ್ಕಾರದ ಗಮನಕ್ಕೂ ತರುವುದಾಗಿ ತಿಳಿಸಿದರು ಎಂದು ನಿಯೋಗವು ತಿಳಿಸಿದೆ.

Leave a Reply

Your email address will not be published.

This site uses Akismet to reduce spam. Learn how your comment data is processed.