ಬೆಂಗಳೂರು: ಸತ್ಯ ತುಂಬಾ ಬಾರಿ ಸರಳವಾಗಿರುತ್ತದೆ. ಅದಕ್ಕೆ ಬಣ್ಣ ಬಳಿಯಬೇಕಾಗಿಲ್ಲ, ತರ್ಕ ಮಾಡಬೇಕಾಗಿಲ್ಲ. ಆದರೆ ಅದನ್ನು ನಾವು ಸರಿಯಾಗಿ ಪ್ರಸ್ತುತ ಪಡಿಸದೇ, ಸುಲಭವಾಗಿ ಮರೆತು, ಇತರರಿಗೂ ಮರೆಸುವ ಹುನ್ನಾರ ವ್ಯವಸ್ಥಿತವಾಗಿ ನಡೆಯುತ್ತಿರುತ್ತದೆ. ಇಂತಹವುಗಳಿಗೆ ತಾರ್ಕಿಕವಾದ ಆಧಾರಗಳನ್ನು ಕೊಡುವ ಮೂಲಕ, ವಿವಿಧ ಮೂಲಗಳಲ್ಲಿ ಅಡಗಿರುವ ವಿಷಯಗಳನ್ನು ಪೋಣಿಸಿಕೊಡುವ ಕೆಲಸವನ್ನು ಮಾಧ್ಯಮಗಳು ಮಾಡಬೇಕಿವೆ ಎಂದು ಪದ್ಮಭೂಷಣ ಪುರಸ್ಕೃತ ಶತಾವಧಾನಿ ಡಾ. ಆರ್. ಗಣೇಶ್ ಹೇಳಿದರು.
ಬಸವನಗುಡಿಯ ಬಿಎಂಎಸ್ ತಾಂತ್ರಿಕ ಕಾಲೇಜಿನಲ್ಲಿ ರಾಜ್ಯದ ಸುದ್ದಿ ಸಂವಹನ ಸಂಸ್ಥೆ ವಿಶ್ವ ಸಂವಾದ ಕೇಂದ್ರ ಕರ್ನಾಟಕದ ವತಿಯಿಂದ ನಡೆದ ‘ವಿಎಸ್ ಕೆ ಮೀಡಿಯಾ ಅವಾರ್ಡ್ಸ್ – 2026’ ಪ್ರಶಸ್ತಿ ಪ್ರದಾನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಚಂದ್ರ ಗತಿಶೀಲನಾಗಿರುವುದರಿಂದ ಆತನ ಒಂದು ಮುಖವನ್ನು ಮಾತ್ರ ನಾವು ಕಂಡಿದ್ದೇವೆ. ಅವನ ಚಲನೆಯಿಂದಾಗಿ ಭೂಮಿಗೆ ಚಂದ್ರನ ಮತ್ತೊಂದು ಮುಖ ಎಂದಿಗೂ ಕಾಣಿಸದಂತಿದೆ. ಅಂತಹ ಅನಾವರಣಗೊಳ್ಳದ ಹಲವು ವಿಷಯಗಳನ್ನು ಜಗತ್ತಿಗೆ ತಲುಪಿಸುವಲ್ಲಿ ಮಾಧ್ಯಮಗಳ ಪಾತ್ರ ಮಹತ್ತರವಾದದ್ದು ಎಂದು ಅಭಿಪ್ರಾಯಪಟ್ಟರು.
ಶ್ರೇಷ್ಠವಾದುದು ವರ್ತಮಾನವನ್ನೂ ಮೀರಿ ನಿಲ್ಲುವಂತದ್ದು. ಶ್ರೇಷ್ಠತೆಯನ್ನು ಸಾರುವ ಘಟನೆಗಳು ಮರುಕಳಿಸುವ ನಿಟ್ಟಿನಲ್ಲಿ ನಾವು ಯೋಚಿಸಬೇಕು. ಸಂದಿಗ್ಧವಾದ ವರ್ತಮಾನದ ಜಗತ್ತನ್ನು ನೋಡುವುದೇ ಸಾಹಸಮಯವಾದದ್ದು. ವಿಶ್ವಾಸಾರ್ಹತೆ, ಅಭ್ಯುದಯ ಮತ್ತು ಒಳಿತಿನ ಕಡೆಗಿನ ದೃಷ್ಟಿ ಮುಖ್ಯವಾಗುತ್ತದೆ. ಲೋಕಹಿತವನ್ನು ಗಮನಿಸುವ ವೇದಿಕೆಗಳು ಅದನ್ನು ಮುಂದುವರಿಸಿದರೆ, ಜನಮಾನಸದಲ್ಲಿ ಚಲಾವಣೆಯನ್ನು ತಂದುಕೊಡುವ ನಿಟ್ಟಿನಲ್ಲಿ ಕಾರ್ಯಪ್ರವೃತ್ತವಾಗಬೇಕು. ಪ್ರತಿಕೂಲ ವಾತಾವರಣದಲ್ಲಿ ಒಳ್ಳೆಯದನ್ನು ಗುರುತಿಸುವುದು ಮತ್ತು ಅದಕ್ಕಾಗಿ ತೆರೆದುಕೊಳ್ಳುವುದು ಬಹಳ ಕಷ್ಟಕರವಾದ ಸಂಗತಿ. ವಿಶ್ವಸಂವಾದ ಕೇಂದ್ರ ಕಳೆದ 25 ವರ್ಷಗಳಿಂದ ಈ ನಿಟ್ಟಿನಲ್ಲಿ ಮಹತ್ತರವಾದ ಕಾರ್ಯವನ್ನು ಮಾಡುತ್ತಾ ಬಂದಿದೆ ಎಂದರು.



ಯಾವ ಜಾತಿಯಾಗಲಿ, ಯಾವ ಮತವಾಗಲಿ, ಯಾವ ವಯಸ್ಸಾಗಲಿ ಅದಕ್ಕೆ ಸಲ್ಲಿಸಬೇಕಾದ ಗೌರವವನ್ನು ಸಲ್ಲಿಸುವಲ್ಲಿ ಯಾವ ಚೌಕಾಸಿಯನ್ನೂ ಮಾಡಬೇಕಾಗಿಲ್ಲ. ಯಾಕೆಂದರೆ ಇನ್ಯಾವುದಕ್ಕೆ ಬೇಕಾದರೂ ನಾವು ಮೀಸಲಾತಿ ಇಡಬಹುದು, ಆದರೆ ಗೌರವಕ್ಕೆ ಮೀಸಲಾತಿ ಇಡಬಾರದು. ನಮ್ಮ ಪೂರ್ವಗ್ರಹಗಳಿಂದ ಗೌರವ ಯಾವತ್ತೂ ಕೂಡ ಮಲಿನವಾಗಬಾರದು ಎಂದರು.



ನಮ್ಮ ಪರಂಪರೆಯಲ್ಲಿ ಸತ್ಯ ಮತ್ತು ಋತ ಎಂಬ ಎರಡು ಶಬ್ದಗಳಿವೆ. ಸತ್ಯ ಸ್ಥಿತಿಯ ರೂಪದಲ್ಲಿದ್ದರೆ, ಋತ ಗತಿಶೀಲತೆಯನ್ನು ಹೇಳುತ್ತದೆ. ಪುರಾಣಗಳಲ್ಲಿ ಬರುವ ರಾಮ ಸತ್ಯ ಅಥವಾ ಸ್ಥಿತಿಯ ಸಂಕೇತವೆಂದೂ, ಕೃಷ್ಣ ಋತ ಅಥವಾ ಗತಿಯ ಸಂಕೇತವೆಂದೂ ವಿದ್ವಾಂಸರು ಅಭಿಪ್ರಾಯ ಪಡುತ್ತಾರೆ. ಪ್ರಜ್ಞೆಯನ್ನು ಪ್ರಧಾನವಾಗಿ ಗಮನದಲ್ಲಿಟ್ಟುಕೊಂಡು ಉದ್ಬೋಧನೆ ಮಾಡುವುದು ಮಾಧ್ಯಮದ ಒಂದು ಮುಖ್ಯವಾದ ಕೆಲಸ ಎಂದು ನುಡಿದರು.
ಕಾರ್ಯಕ್ರಮದಲ್ಲಿ ತಿ.ತಾ. ಶರ್ಮ ಪತ್ರಿಕೋದ್ಯಮ ಪ್ರಶಸ್ತಿಯನ್ನು ವಿಜಯವಾಣಿಯ ಸಂಪಾದಕ ಕೆ.ಎನ್. ಚನ್ನೇಗೌಡ ಅವರಿಗೆ, ಬೆ.ಸು.ನಾ. ಮಲ್ಯ ಪತ್ರಿಕೋದ್ಯಮ ಪ್ರಶಸ್ತಿಯನ್ನು ಅಡಿಕೆ ಪತ್ರಿಕೆಯ ಸಹಾಯಕ ಸಂಪಾದಕ ನಾ. ಕಾರಂತ ಪೆರಾಜೆ ಅವರಿಗೆ, ಎಂ.ವಿ.ಕಾಮತ್ ಪತ್ರಿಕೋದ್ಯಮ ಪ್ರಶಸ್ತಿಯನ್ನು ಇಂಡಿಯಾ ಟುಡೇಯ ದಕ್ಷಿಣ ಭಾರತ ಆವೃತ್ತಿಯ ಸಂಪಾದಕ ನಾಗಾರ್ಜುನ್ ದ್ವಾರಕನಾಥ್ ಅವರಿಗೆ, ಚಂದ್ರಶೇಖರ ಭಂಡಾರಿ ಪತ್ರಿಕೋದ್ಯಮ ಪ್ರಶಸ್ತಿಯನ್ನು ಟಿವಿ-9 ಕನ್ನಡದ ಮುಖ್ಯ ನಿರ್ಮಾಪಕ ರಂಗನಾಥ್ ಭಾರದ್ವಾಜ್ ಅವರಿಗೆ, ಹೊ.ವೆ. ಶೇಷಾದ್ರಿ ಅಂಕಣಕಾರ ಪ್ರಶಸ್ತಿಯನ್ನು ಹಿರಿಯ ಅಂಕಣಕಾರ ಡಾ|| ಅರಕಲಗೂಡು ಸೂರ್ಯಪ್ರಕಾಶ್ ಅವರಿಗೆ, ವಿ.ಎಸ್.ಕೆ. ಡಿಜಿಟಲ್ ಮೀಡಿಯಾ ಪ್ರಶಸ್ತಿಯನ್ನು ಆರ್‌ಜೆ ಹಾಗೂ ಯೂಟ್ಯೂಬರ್ ರಶ್ಮೀ ಆರ್ ರಾವ್ (ರ‍್ಯಾಪಿಡ್ ರಶ್ಮೀ) ಅವರಿಗೆ ಪ್ರದಾನ ಮಾಡಲಾಯಿತು.
ವೇದಿಕೆಯಲ್ಲಿ ವಿಶ್ವ ಸಂವಾದ ಕೇಂದ್ರ ಕರ್ನಾಟಕದ ನಿರ್ವಾಹಕ ವಿಶ್ವಸ್ಥ ಡಾ. ಎಂ.ಕೆ. ಶ್ರೀಧರನ್ ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ಪತ್ರಕರ್ತರು, ಅಂಕಣಕಾರರು, ಸಾಹಿತಿಗಳು, ಮಾಧ್ಯಮ ಆಸಕ್ತರು ಭಾಗವಹಿಸಿದ್ದರು.