ಕಿಶೋರ ದೀಪಿಕಾ ಪುಸ್ತಕ ಬಿಡುಗಡೆ ಸಮಾರಂಭದಲ್ಲಿ ಅಭಿಮತ

ಶಿವಮೊಗ್ಗ, ಜುಲೈ 26: ಹದಿಹರೆಯದ ವಯಸ್ಸಿನಲ್ಲಿ ಮಕ್ಕಳಲ್ಲಿ ಸಾಕಷ್ಟು ದೈಹಿಕ, ಮಾನಸಿಕ ಹಾಗೂ ಭಾವನಾತ್ಮಕ ಬದಲಾವಣೆಗಳು ಸಂಭವಿಸುತ್ತವೆ. ಈ ಹಂತದಲ್ಲಿ ಮಕ್ಕಳಿಗೆ ಜೀವನ ಮೌಲ್ಯಗಳು ಮತ್ತು ನೀತಿ ಪಾಠಗಳನ್ನು ಸರಳವಾಗಿ ಅರ್ಥವಾಗುವ ರೀತಿಯಲ್ಲಿ ಬೋಧಿಸುವುದು ಅತ್ಯಗತ್ಯವಾಗಿದೆ. ಶಾಲೆಗಳಲ್ಲಿ ನೀತಿ ಶಿಕ್ಷಣಕ್ಕೆ ಪ್ರತ್ಯೇಕ ಸಮಯವನ್ನು ಮೀಸಲಿಡುವ ಪ್ರಯತ್ನಗಳು ನಡೆಯುತ್ತಿರುವುದು ಸಂತಸದ ಸಂಗತಿಯಾಗಿದೆ ಎಂದು ಕಿಶೋರ ದೀಪಿಕಾ ಪುಸ್ತಕದ ಸಂಪಾದಕಿ ಹೆಚ್. ಎಂ. ರುಕ್ಮಿಣಿ ನಾಯಕ್ ಅಭಿಪ್ರಾಯಪಟ್ಟರು.

ನಗರದ ಸನ್ ಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ಮಂಥನ ಹಾಗೂ ಸಂಸ್ಕಾರ ಭಾರತಿ ಸಂಯುಕ್ತ ಆಶ್ರಯದಲ್ಲಿ ಆಯೋಜಿಸಿದ್ದ ಕಿಶೋರ ದೀಪಿಕಾ ಪುಸ್ತಕ ಬಿಡುಗಡೆ ಸಮಾರಂಭದಲ್ಲಿ ಅವರು ಮಾತನಾಡಿದರು.

ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಅಶೋಕ್ ಕಾಮತ್ ಮಾತನಾಡಿ, ಸ್ವಾವಲಂಬನೆಯೇ ಯಶಸ್ವಿ ಜೀವನದ ಆಧಾರ ಎಂದು ತಿಳಿಸಿದರು. ಇಂದಿನ ಒತ್ತಡದ ಬದುಕಿನಲ್ಲಿ ಪೋಷಕರು ಮೊಬೈಲ್ ಹಾಗೂ ಕೆಲಸದಲ್ಲಿ ತೊಡಗಿಸಿಕೊಂಡು ಮಕ್ಕಳ ಮಾತುಗಳನ್ನು ಆಲಿಸಲು ಸಮಯ ನೀಡುತ್ತಿಲ್ಲ. ಶಾಲೆಯಲ್ಲಿ ನಡೆದ ಅನುಭವಗಳನ್ನು ಹಂಚಿಕೊಳ್ಳಲು ಮಕ್ಕಳಿಗೆ ಮೊದಲ ಆಶ್ರಯವೇ ತಂದೆ-ತಾಯಿಯರು. ಅವರ ಮಾತುಗಳನ್ನು ಕಾಳಜಿಯಿಂದ ಆಲಿಸಿದರೆ ಮಕ್ಕಳ ಮನಸ್ಸನ್ನು ಅರ್ಥಮಾಡಿಕೊಳ್ಳಲು ಸಾಧ್ಯವಾಗುತ್ತದೆ ಎಂದು ಅವರು ಸಲಹೆ ನೀಡಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಸನ್ ಸ್ಪೆಷಾಲಿಟಿ ಆಸ್ಪತ್ರೆಯ ಮುಖ್ಯಸ್ಥ ಡಾ. ಆಕಾಶ್ ಮಾತನಾಡಿ, ಮಕ್ಕಳ ಉತ್ತಮ ಬೆಳವಣಿಗೆಯಲ್ಲಿ ತಂದೆ-ತಾಯಿ, ಶಿಕ್ಷಕರು ಹಾಗೂ ಸಮಾಜ ಎಲ್ಲರೂ ಸಮಾನ ಹೊಣೆಗಾರಿಕೆಯನ್ನು ಹೊಂದಿದ್ದಾರೆ ಎಂದು ಹೇಳಿದರು. ಮಕ್ಕಳ ಜವಾಬ್ದಾರಿಯನ್ನು ಒಬ್ಬರ ಮೇಲೆ ಮತ್ತೊಬ್ಬರು ಹೊರಿಸುವ ಬದಲು ಪ್ರತಿಯೊಬ್ಬರೂ ತಮ್ಮ ಕರ್ತವ್ಯವನ್ನು ಸಮರ್ಪಕವಾಗಿ ನಿರ್ವಹಿಸಬೇಕು ಎಂದರು.

ಉತ್ತಮ ಸ್ನೇಹಿತರು ವ್ಯಕ್ತಿತ್ವ ನಿರ್ಮಾಣದಲ್ಲಿ ಮಹತ್ವದ ಪಾತ್ರವಹಿಸುತ್ತಾರೆ. ನಾವು ಮಾತ್ರ ಒಳ್ಳೆಯವರಾಗುವುದಲ್ಲ, ಸಮಾಜದಲ್ಲೂ ಉತ್ತಮ ಮೌಲ್ಯಗಳನ್ನು ಬೆಳೆಸುವ ಪ್ರಯತ್ನ ಮಾಡಬೇಕು ಎಂದು ಕರೆ ನೀಡಿದರು.

ಕಾರ್ಯಕ್ರಮದಲ್ಲಿ ಆರ್‌ಎಸ್‌ಎಸ್ ಜಿಲ್ಲಾ ಸಂಘಚಾಲಕ ರಂಗನಾಥ್ ಉಪಸ್ಥಿತರಿದ್ದರು. ವಿವಿಧ ಶಾಲೆಗಳ ಮುಖ್ಯಸ್ಥರು, ಶಿಕ್ಷಕರು ಹಾಗೂ ಅಖಿಲ ಭಾರತೀಯ ಸಾಹಿತ್ಯ ಪರಿಷತ್, ಬಾಲಗೋಕುಲ ಮತ್ತು ಸಂಸ್ಕಾರ ಭಾರತಿ ಸಂಸ್ಥೆಗಳ ಪದಾಧಿಕಾರಿಗಳು ಹಾಗೂ ಸದಸ್ಯರು ಭಾಗವಹಿಸಿದ್ದರು.

Leave a Reply

Your email address will not be published.

This site uses Akismet to reduce spam. Learn how your comment data is processed.