ರಾಜನಾರಾಯಣ ಬಸು: ರಾಷ್ಟ್ರೀಯ ಚೇತನದ ಮುಂಚೂಣಿಯ ಹರಿಕಾರ
2, 3, 4 ನವೆಂಬರ್ 2026 ಇಂದೋರ್: ಭಾರತದ ಸ್ವಾತಂತ್ರ್ಯ ಸಂಗ್ರಾಮವು ಭಾರತೀಯ ಇತಿಹಾಸದ ಒಂದು ಗೌರವಯುತ ಅಧ್ಯಾಯವಾಗಿದೆ. ಬ್ರಿಟಿಷರ ಆಕ್ರಮಣ ಎಷ್ಟು ಸರ್ವವ್ಯಾಪಿಯಾಗಿತ್ತೋ, ಅದಕ್ಕೆ ನಮ್ಮ ಪ್ರತಿಕ್ರಿಯೆಯೂ ಅಷ್ಟೇ ಸಮಗ್ರವಾಗಿತ್ತು. ಬ್ರಿಟಿಷರ ಆಕ್ರಮಣದ ಪರಿಣಾಮವಾಗಿ ನಮ್ಮ ವಿದ್ಯಾವಂತ ಸಮಾಜವು ತನ್ನ ಮೂಲ ಬೇರುಗಳಿಂದ ದೂರವಾಗಿ, ಆತ್ಮವಿಸ್ಮೃತಿಗೆ ಒಳಗಾಗಿ, ಆತ್ಮಗೌರವವನ್ನು ಕಳೆದುಕೊಳ್ಳುವ ಸ್ಥಿತಿಗೆ ತಲುಪಿತ್ತು. ಅಂತಹ ಸಂದರ್ಭದಲ್ಲಿ ರಾಷ್ಟ್ರೀಯ ಚೇತನವನ್ನು ಜಾಗೃತಗೊಳಿಸಲು ಮತ್ತು ರಾಷ್ಟ್ರದ ಸ್ವರೂಪದ ಕುರಿತು ಸುಸ್ಪಷ್ಟ ಪರಿಕಲ್ಪನೆಯನ್ನು ರೂಪಿಸಲು ಅನೇಕ ಮಹಾಪುರುಷರು ಪರಿಣಾಮಕಾರಿ ಪ್ರಯತ್ನಗಳನ್ನು ಮಾಡಿದರು. ಅವರಲ್ಲಿ ರಾಜನಾರಾಯಣ ಬಸು ಅವರ ಹೆಸರು ಅಗ್ರಗಣ್ಯವಾಗಿದೆ.
1826ರ ಡಿಸೆಂಬರ್ 7ರಂದು ಬಂಗಾಳದ ದಕ್ಷಿಣ 24 ಪರಗಣ ಜಿಲ್ಲೆಯ ಬೋರಾಲ್ ಗ್ರಾಮದಲ್ಲಿ ಜನಿಸಿದ ರಾಜನಾರಾಯಣ ಬಸು ಅವರ ದ್ವಿಶತಮಾನೋತ್ಸವವನ್ನು ಆಚರಿಸಲಾಗುತ್ತಿದೆ. ಶಿಕ್ಷಣ ಪೂರ್ಣಗೊಳಿಸಿದ ನಂತರ ಸಂಸ್ಕೃತ ಶಾಲೆಯಲ್ಲಿ ಅಧ್ಯಾಪಕರಾಗಿ ಕಾರ್ಯನಿರ್ವಹಿಸಿದ ಅವರು ತಮ್ಮ ಜೀವನವನ್ನು ಸಾಮಾಜಿಕ ಸುಧಾರಣಾ ಕಾರ್ಯಗಳಿಗೆ ಸಮರ್ಪಿಸಿಕೊಂಡರು. ವಿಶೇಷವಾಗಿ ಬಡವರ ಉತ್ಥಾನ, ವ್ಯಸನಮುಕ್ತಿ, ಮಹಿಳಾ ಶಿಕ್ಷಣದ ಪ್ರಸಾರ ಹಾಗೂ ವಿಧವಾ ಪುನರ್ವಿವಾಹಕ್ಕಾಗಿ ವಿಶೇಷ ಪ್ರಯತ್ನಗಳನ್ನು ಮಾಡಿದರು. ಈ ನಿಟ್ಟಿನಲ್ಲಿ ತಮ್ಮ ಸಹೋದರನ ವಿವಾಹವನ್ನು ಒಬ್ಬ ವಿಧವೆಯೊಂದಿಗೆ ನೆರವೇರಿಸುವ ಮೂಲಕ ಸಮಾಜದ ಮುಂದೆ ಉತ್ಕೃಷ್ಠ ಉದಾಹರಣೆಯನ್ನು ಪ್ರಸ್ತುತಪಡಿಸಿದರು.
ವಿದ್ಯಾವಂತ ವರ್ಗದಲ್ಲಿ ರಾಷ್ಟ್ರೀಯ ಚೇತನವನ್ನು ಜಾಗೃತಗೊಳಿಸಿ, ಅವರಲ್ಲಿ ಆತ್ಮಗೌರವ ಮತ್ತು ಆತ್ಮವಿಶ್ವಾಸದ ಭಾವನೆ ಬೆಳೆಸಲು ಅವರು ನಿರಂತರವಾಗಿ ಶ್ರಮಿಸಿದರು. ಈ ಅಗತ್ಯ ಗುಣಗಳಿಲ್ಲದೆ ಯಾವುದೇ ರಾಷ್ಟ್ರದ ಉನ್ನತಿ ಸಾಧ್ಯವಿಲ್ಲ ಎಂಬುದು ಅವರ ದೃಢ ನಂಬಿಕೆಯಾಗಿತ್ತು.
ತಮ್ಮ ಉದ್ದೇಶಗಳ ಸಾಧನೆಗಾಗಿ ರಾಷ್ಟ್ರೀಯ ಭಾವನೆಯ ಸಂವರ್ಧನೆಗೆ ಸಂಬಂಧಿಸಿದಂತೆ ‘ಪ್ರಾಸ್ಪೆಕ್ಟಸ್ ಆಫ್ ಎ ಸೊಸೈಟಿ ಫಾರ್ ಪ್ರಮೋಷನ್ ಆಫ್ ನ್ಯಾಷನಲ್ ಫೀಲಿಂಗ್‘ ಎಂಬ ಸಂಸ್ಥೆಯ ಪ್ರರೂಪವನ್ನು ಸಿದ್ಧಪಡಿಸಿದರು. ಅವರ ನಿರಂತರ ಪ್ರಯತ್ನಗಳ ಫಲವಾಗಿ ನವಗೋಪಾಲ್ ಮಿತ್ರ ಅವರು 1867ರಲ್ಲಿ ಆರಂಭಿಸಿದ ‘ಹಿಂದು ಮೇಳ‘ ರಾಷ್ಟ್ರೀಯ ಚೇತನದ ಪೋಷಣೆ ಮತ್ತು ಸಂವರ್ಧನೆಗೆ ಪ್ರಮುಖ ವೇದಿಕೆಯಾಗಿ ಹೊರಹೊಮ್ಮಿತು. ರಾಜನಾರಾಯಣ ಬಸು ಅವರು ಸ್ವದೇಶಿ ವಸ್ತುಗಳ ಬಳಕೆಯನ್ನು ಪ್ರಬಲವಾಗಿ ಪ್ರತಿಪಾದಕರಾಗಿದ್ದರು ಹಾಗೂ ಹಿಂದು ಮೇಳದ ಮೂಲಕ ಸ್ವದೇಶಿ ಭಾವನೆಯನ್ನು ಮುನ್ನಡೆಸಿದರು.
ಮಾತೃಭಾಷೆಯ ಬಳಕೆಯ ಮಹತ್ವವನ್ನು ಅವರು ನಿರಂತರವಾಗಿ ಪ್ರತಿಪಾದಿಸುತ್ತಿದ್ದರು. ಮಾತೃಭಾಷೆಯು ಆತ್ಮಗೌರವ ಮತ್ತು ರಾಷ್ಟ್ರೀಯ ಚೇತನದ ಪ್ರಮುಖ ಅಡಿಪಾಯವಾಗಿದೆ ಎಂಬುದು ಅವರ ನಂಬಿಕೆಯಾಗಿತ್ತು. ಹಿಂದು ಧರ್ಮವನ್ನು ಭಾರತದ ಸಾಂಸ್ಕೃತಿಕ ಹಾಗೂ ರಾಷ್ಟ್ರೀಯ ಏಕತೆಯ ಆಧಾರವೆಂದು ಅವರು ಪರಿಗಣಿಸಿದ್ದರು.
1873ರಲ್ಲಿ ಅವರು ದಿ ಸುಪೀರಿಯಾರಿಟಿ ಆಫ್ ಹಿಂದೂಯಿಸಂ (ಹಿಂದು ಧರ್ಮದ ಶ್ರೇಷ್ಠತೆ) ಎಂಬ ಗ್ರಂಥವನ್ನು ರಚಿಸಿದರು. ಈ ಕೃತಿಯಲ್ಲಿ ಹಿಂದು ಸಂಸ್ಕೃತಿಯ ತಾತ್ವಿಕ ಸಾಮರ್ಥ್ಯ ಮತ್ತು ಅದರ ವಿಶಿಷ್ಟ ಲಕ್ಷಣಗಳನ್ನು ಪರಿಣಾಮಕಾರಿಯಾಗಿ ಅಭಿವ್ಯಕ್ತಿಪಡಿಸಿದರು. ಭಾರತದ ರಾಷ್ಟ್ರೀಯ ಚೇತನದ ಪಿತಾಮಹರೆಂದು ಪ್ರಸಿದ್ಧರಾದ ರಾಜನಾರಾಯಣ ಬಸು ಅವರು ಸಾಂಸ್ಕೃತಿಕ ಹಾಗೂ ರಾಷ್ಟ್ರೀಯ ಜಾಗೃತಿಯ ಮೂಲಭೂತ ಸಾಧನವಾಗಿ ‘ಮಹಾ ಹಿಂದು ಸಮಿತಿ‘ಯ ಪರಿಕಲ್ಪನೆಯನ್ನು ಮುಂದಿಟ್ಟರು. 1880ರ ದಶಕದಲ್ಲಿ ಪ್ರಕಟವಾದ ತಮ್ಮ ಪ್ರಸಿದ್ಧ ಕಿರುಪುಸ್ತಕ ದಿ ಓಲ್ಡ್ ಹಿಂದುಸ್ ಹೋಪ್ (The Old Hindu’s Hope) ನಲ್ಲಿ ಈ ವಿಚಾರವನ್ನು ಪ್ರಸ್ತಾಪಿಸಿದ್ದರು.
ರಾಜನಾರಾಯಣ ಬಸು ಅವರು ಮಹರ್ಷಿ ಶ್ರೀ ಅರವಿಂದರ ತಾಯಿಯ ತಂದೆಯಾಗಿದ್ದರು. ಅವರ ವಿಚಾರಗಳು ಮತ್ತು ರಾಷ್ಟ್ರೀಯತೆಯ ದೃಷ್ಟಿಕೋನವು ಯುವ ಅರವಿಂದರ ಮೇಲೆ ಆಳವಾದ ಪ್ರಭಾವ ಬೀರಿತ್ತು.
ಭಾರತದ ರಾಷ್ಟ್ರೀಯ ಪುನರುಜ್ಜೀವನ ಮತ್ತು ಸ್ವಾತಂತ್ರ್ಯ ಚಳವಳಿಯ ಅನೇಕ ಮಹನೀಯರಾದ ರವೀಂದ್ರನಾಥ ಠಾಕೂರ್, ಸ್ವಾಮಿ ವಿವೇಕಾನಂದ ಹಾಗೂ ಭಗಿನಿ ನಿವೇದಿತಾ ಸೇರಿದಂತೆ ಹಲವರು ರಾಜನಾರಾಯಣ ಬಸು ಅವರ ಬಗ್ಗೆ ಅಪಾರ ಗೌರವ ಹೊಂದಿದ್ದರು ಮತ್ತು ಅವರ ಜೀವನ ಹಾಗೂ ವಿಚಾರಗಳಿಂದ ಪ್ರೇರಣೆ ಪಡೆದಿದ್ದರು.
ರಾಷ್ಟ್ರೀಯ ಚೇತನದ ಮುಂಚೂಣಿಯ ಹರಿಕಾರ, ಮಹಾನ್ ದೇಶಭಕ್ತ, ಸಮಾಜ ಸುಧಾರಕ ಹಾಗೂ ದೂರದೃಷ್ಟಿಯುಳ್ಳ ವ್ಯಕ್ತಿತ್ವದ ರಾಜನಾರಾಯಣ ಬಸು ಅವರ 200ನೇ ಜನ್ಮ ಜಯಂತಿಯ ಸಂದರ್ಭದಲ್ಲಿ ಅವರಿಗೆ ನಮ್ಮ ಶ್ರದ್ಧಾಪೂರ್ವಕ ನಮನಗಳನ್ನು ಸಲ್ಲಿಸುತ್ತೇವೆ.
ಅವರು ಪ್ರತಿಪಾದಿಸಿದ ವಿಚಾರಗಳು ಮತ್ತು ತತ್ವಗಳು ಇಂದಿಗೂ ಅಷ್ಟೇ ಪ್ರಸ್ತುತವಾಗಿವೆ. ಆತ್ಮಗೌರವ, ನಮ್ಮ ಸಾಂಸ್ಕೃತಿಕ ಪರಂಪರೆಯ ಬೇರುಗಳೊಂದಿಗಿನ ನಂಟು ಹಾಗೂ ರಾಷ್ಟ್ರೀಯ ಏಕತೆಯ ಶಾಶ್ವತ ಮಹತ್ವವನ್ನು ಅವು ನಮಗೆ ನೆನಪಿಸುತ್ತವೆ. ರಾಷ್ಟ್ರವು ಅವರ ಕೊಡುಗೆಗಳಿಗಾಗಿ ಸದಾ ಕೃತಜ್ಞವಾಗಿರುತ್ತದೆ.