ಬೆಂಗಳೂರು, ಅಕ್ಟೋಬರ್ 31, 2026: ಕರತಲದಲ್ಲಿ ಮೂರು ಲೋಕಗಳ ವಿಷಯಗಳು ಸಿಗಬಹುದು. ಆದರೆ ಕಣ್ಣಿಗೆ ಹಿತವನ್ನು ನೀಡುವುದು ಪುಸ್ತಕವೇ ಆಗಿದೆ. ಆದರೆ ಇಂದು ಪುಸ್ತಕ ಪ್ರಕಾಶನ ಅತಂತ್ರದ ಸ್ಥಿತಿಯಲ್ಲಿದೆ. ಅವುಗಳನ್ನು ಸಮರ್ಥಗೊಳಿಸುವ ಬಾಧ್ಯತೆ ನಮ್ಮ ಮೇಲಿದೆ. ಕನ್ನಡವನ್ನು ನಾವು ಉಳಿಸಿಕೊಳ್ಳದೇ ಬೇರೆ ಯಾರೂ ಉಳಿಸಿಕೊಳ್ಳಲು ಮುಂದೆ ಬರುವುದಿಲ್ಲ. ನಾವು ಕನ್ನಡದ ಮೂಲಕವೇ ಇತರೆ ಜಗತ್ತನ್ನು ನೋಡಿದ್ದು. ಗದ್ಯ, ಪದ್ಯ, ಗೀತೆ ಮೂರರಲ್ಲೂ ಸಾಹಿತ್ಯ ರಚಿಸುವ ಸಾಮರ್ಥ್ಯ ಕನ್ನಡಾದಿಯಾಗಿ ಎಲ್ಲಾ ಭಾರತೀಯ ಭಾಷೆಗಳಿಗಿವೆ. ಅವುಗಳನ್ನು ಉಳಿಸಿಕೊಳ್ಳುವ ಅಗತ್ಯತೆ ಇದೆ ಎಂದು ಪದ್ಮಭೂಷಣ ಪ್ರಶಸ್ತಿ ಪುರಸ್ಕೃತ ಶತಾವಧಾನಿ ಡಾ. ಆರ್. ಗಣೇಶ್ ಹೇಳಿದರು.

ರಾಷ್ಟ್ರೋತ್ಥಾನ ಸಾಹಿತ್ಯದ ವತಿಯಿಂದ ಕೆಂಪೇಗೌಡನಗರದ ರಾಷ್ಟ್ರೋತ್ಥಾನ ಪರಿಷತ್ ನ ಕೇಶವಶಿಲ್ಪದಲ್ಲಿ ಅಕ್ಟೋಬರ್ 31, 2026ರಿಂದ ಡಿಸೆಂಬರ್ 6, 2026ರವರೆಗೆ 37 ದಿನಗಳ ಕಾಲ ಆಯೋಜಿಸಲಾಗಿರುವ 6ನೇ ಕನ್ನಡ ಪುಸ್ತಕ ಹಬ್ಬದ ಉದ್ಘಾಟನಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಇವತ್ತಿನ ಪೀಳಿಗೆಗೆ ಮಾಹಿತಿ ಸಿಗುತ್ತಿದೆ. ಆದರೆ ಅದರಾಚೆ ಈಚೆಗಿನ ಪರಿಶ್ರಮದ ಅರಿವು ಸಿಗಿತ್ತಿಲ್ಲದಿರುವುದು ಇಂದಿನ ಸಮಸ್ಯೆ. ಕೇವಲ ಮಾಹಿತಿಯನ್ನು ಪಡೆಯುವುದರಿಂದ ಜ್ಞಾನ ಬೆಳೆದುಬಂದಿದ್ದು ಗೊತ್ತಾಗುವುದಿಲ್ಲ. ಸಾಹಿತ್ಯದ ಮೂಲಕ ಜೀವಶಕ್ತಿ ಹರಿದಿರುವುದು ಗಮನಕ್ಕೆ ಬರುವುದಿಲ್ಲ, ಸಾಹಿತ್ಯ ರಚನೆಯ ಪರಿಪೂರ್ಣತೆಯ ಅರಿವಾಗುವುದಿಲ್ಲ. ಅದರಿಂದಾಗಿ ಓದುವವರಿಗೆ ಋಣಪ್ರಜ್ಞೆಯು ಮೂಡುವುದಿಲ್ಲ ಎಂದು ಅಭಿಪ್ರಾಯಪಟ್ಟರು.
ನಾವು ಹಲವು ವಿಷಯಗಳ ಸಾರಾಗ್ರಹಿಗಳಾಗುವುದರ ಜೊತೆಗೆ ಕೆಲವು ವಿಷಯಗಳಲ್ಲಿ ಸಂಪೂರ್ಣಗ್ರಾಹಿಗಳಾಗಬೇಕು. ಸಂಪೂರ್ಣ ವ್ಯಕ್ತಿತ್ವವನ್ನು ರೂಪಿಸಲು ಸಹಕಾರಿಯಾಗುವ ಕೆಲವು ಪುಸ್ತಕಗಳನ್ನು ಸಂಪೂರ್ಣವಾಗಿ ಓದುಬೇಕು. ರಾಮಾಯಣದ ಕೆಲವು ಸಾಲುಗಳು ರಾಮನ ಸಂಪೂರ್ಣ ವ್ಯಕ್ತಿತ್ವವನ್ನು ಹೇಳುವುದಿಲ್ಲ. ಆದ್ದರಿಂದ ಸೆಲೆಕ್ಟಿವ್ ಅಮ್ನೇಶಿಯಾ ಇಂದಿನ ಸವಾಲಾಗಿದೆ ಎಂದು ನುಡಿದರು.
ಪ್ರಾದೇಶಿಕ ಭಾಷೆಗಳ ಪುಸ್ತಕಗಳ ಕುರಿತಾದ ಉಪೇಕ್ಷೆ ಸಮಾಜದಲ್ಲಿ ಹೆಚ್ಚುತ್ತಿದೆ. ಅದರ ಜೊತೆಗೆ ತಂತ್ರಜ್ಞಾನದ ಆವಿಷ್ಕಾರಗಳು ನೂತನ ಸಮಸ್ಯೆಗಳಿಗೂ ಎಡೆಮಾಡಿಕೊಡುತ್ತಿವೆ. ಎಲ್ಲಾ ಪುಸ್ತಕಗಳನ್ನು ಡಿಜಿಟೈಸ್ ಮಾಡಿ ಪುಸ್ತಕಗಳನ್ನು ಉಳಿಸಿಕೊಳ್ಳದ ಹಾಗೆ ಮಾಡಲು ವಿದೇಶಿ ತಂತ್ರಜ್ಞಾನ ಕಂಪೆನಿಗಳು ಕರೆಕೊಡುತ್ತಿವೆ. ಇದರಿಂದಾಗಿ ಪುಸ್ತಕಗಳನ್ನೆಲ್ಲಾ ಡಿಜಿಟೈಸ್ ಮಾಡಿ, ಮುದ್ರಿತ ಪುಸ್ತಕಗಳನ್ನು ಇಲ್ಲವಾಗಿಸಿದ ನಂತರ ಅವುಗಳನ್ನು ಬಳಸಬೇಕಾದ ಸಂದರ್ಭಕ್ಕೆ ನಾವು ವಿದೇಶಿ ತಂತ್ರಜ್ಞಾನದ ಕಂಪೆನಿಗಳ ಅನುಮತಿಗೆ ಕಾಯಬೇಕಾಗುತ್ತದೆ. ನಮ್ಮ ಜ್ಞಾನಪರಂಪರೆಗಳು ನಮಗೇ ಸಿಗದಂತಾಗುತ್ತದೆ. ಹಾಗಾಗಿ ಜ್ಞಾನಕ್ಕೆ ನಾವು ಪರಾಧೀನರಾಗದೆ ನಮ್ಮ ಜ್ಞಾನಪರಂಪರೆಗಳನ್ನು, ಅದರ ಅಧಿಕೃತ ಜ್ಞಾನವನ್ನು ಸಂರಕ್ಷಿಸುವ ಕೆಲಸ ನಮ್ಮಿಂದಾಗಬೇಕು ಎಂದು ನುಡಿದರು.
ಸಭೆಗೆ ಜನರನ್ನು ಸೇರಿಸುವುದು, ಜನರು ಪುಸ್ತಕವನ್ನು ಓದುವಂತೆ ಮಾಡುವುದು ಹಿಮಾಲಯವನ್ನು ಕೈಯಲ್ಲೆತ್ತಿಕೊಳ್ಳುವಷ್ಟು ಕಷ್ಟಕರವಾದ ಸಂಗತಿಯಾಗಿದೆ. ಅದರ ನಡುವೆ ಕಳೆದ ಹಲವು ವರ್ಷಗಳಿಂದ ರಾಷ್ಟ್ರೋತ್ಥಾನ ಸಾಹಿತ್ಯ ಅತ್ಯಂತ ಸೊಗಸಾಗಿ ಪುಸ್ತಕ ಪ್ರದರ್ಶನ ಮತ್ತು ಮಾರಾಟದ ಜೊತೆಗೆ ವಿವಿಧ ಸಾಹಿತ್ಯಿಕ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಕೈಗೊಳ್ಳುತ್ತಿರುವುದು ಸ್ವಾಗತಾರ್ಹ ಎಂದರು.
ಪುಸ್ತಕ ಹಬ್ಬದಲ್ಲಿ ಮಾತನಾಡಿದ ಸರ್ವೋಚ್ಚ ನ್ಯಾಯಾಲಯದ ನ್ಯಾಯಮೂರ್ತಿ ಅರವಿಂದ ಕುಮಾರ್ ಅವರು ಕನ್ನಡ ಭಾಷೆಯ ಮೇಲಿನ ಅಭಿಮಾನ, ಭಾರತೀಯ ಸಾಹಿತ್ಯ ಮತ್ತು ವೇದ ಪರಂಪರೆಯ ಮಹತ್ವ ಹಾಗೂ ರಾಷ್ಟ್ರಪ್ರೇಮದ ಅಗತ್ಯವನ್ನು ಒತ್ತಿಹೇಳಿದರು. ರಾಷ್ಟ್ರದ ಏಕತೆಗಾಗಿ ಪ್ರತಿಯೊಬ್ಬರೂ ಬದ್ಧತೆ ಮತ್ತು ಜವಾಬ್ದಾರಿಯಿಂದ ನಡೆದುಕೊಳ್ಳಬೇಕು. ನಮ್ಮ ಹಕ್ಕುಗಳ ಜೊತೆಗೆ ನಮ್ಮ ಕರ್ತವ್ಯವನ್ನು ನಾವು ನಿಭಾಯಿಸಬೇಕು ಎಂದು ಹೇಳಿದರು.

ಜ್ಞಾನವನ್ನು ಇತರರೊಂದಿಗೆ ಹಂಚಿಕೊಳ್ಳುವುದು ಭಾರತೀಯ ಸಂಸ್ಕೃತಿಯ ಶ್ರೇಷ್ಠ ಪರಂಪರೆಯಾಗಿದೆ ಎಂದ ಅವರು, ಜಗತ್ತನ್ನು ಅರಿಯಬೇಕು ಮತ್ತು ಜಗತ್ತಿನ ಉತ್ತಮ ವಿಚಾರಗಳನ್ನು ಕನ್ನಡಕ್ಕೆ ತರಬೇಕು. ಕನ್ನಡ ನಾಡಿನಲ್ಲೇ ಜನಿಸಿದ ಉತ್ತಮ ಚಿಂತನೆಗಳನ್ನು ಜಗತ್ತಿಗೆ ತಲುಪಿಸಬೇಕು. ಈ ನಿಟ್ಟಿನಲ್ಲಿ ಕನ್ನಡ ಕೃತಿಗಳ ರಚನೆಯಾಗಿ, ಓದುಗರಿಗೆ ಅದು ಸಲಭವಾಗಿ ಸಿಗುವಂತಾಗಬೇಕು. ಸಾಹಿತ್ಯವು ಮಾನವೀಯ ಗುಣಗಳನ್ನು ಹೆಚ್ಚಿಸಿ, ಜೀವನಕ್ಕೆ ಅರಿವಿನ ಬೆಳಕನ್ನು ನೀಡುವಂತಾಗಬೇಕು ಎಂದು ನುಡಿದರು.
ದಿ ಮಿಥಿಕ್ ಸೊಸೈಟಿ ಅಧ್ಯಕ್ಷ ವಿ ನಾಗರಾಜ್ ಅವರು ಮಾತನಾಡಿ ಕನ್ನಡ ಪುಸ್ತಕ ಹಬ್ಬದ ಚಾಲನೆ ಡಿ ವಿ ಜಿ ಅವರ ಸ್ಥಾಪಿಸಿದ ಗೋಖಲೆ ವಿಚಾರ ಸಂಸ್ಥೆಯಿಂದ ಪ್ರಾರಂಭವಾಯಿತು. ಡಿವಿಜಿ ಅವರ ಚಿಂತನೆಗಳು ಸಮಾಜದಲ್ಲಿ ಜಾಗೃತಿ ಮೂಡಿಸುವುದರ ಜೊತೆಗೆ ಸಾಹಿತ್ಯ, ಸಂಸ್ಕೃತಿ ಮತ್ತು ಮೌಲ್ಯಗಳ ಮಹತ್ವವನ್ನು ಜನರಿಗೆ ಪರಿಚಯಿಸುವ ಕೆಲಸ ಮಾಡಿದ್ದವು. ಅದೇ ಆಶಯ ಮತ್ತು ಉದ್ದೇಶದೊಂದಿಗೆ ರಾಷ್ಟ್ರೋತ್ಥಾನವೂ ಕಾರ್ಯನಿರ್ವಹಿಸುತ್ತಿದ್ದು 6ನೇ ಕನ್ನಡ ಪುಸ್ತಕ ಹಬ್ಬಕ್ಕೆ ಸಾಕ್ಷಿಯಾಗಿದೆ ಎಂದು ಹೇಳಿದರು.

ಕನ್ನಡ ಭಾಷೆ, ಸಾಹಿತ್ಯ ಮತ್ತು ಜ್ಞಾನ ಪರಂಪರೆಯನ್ನು ಮುಂದಿನ ಪೀಳಿಗೆಗೆ ಪರಿಚಯಿಸುವಲ್ಲಿ ಪುಸ್ತಕಗಳ ಪಾತ್ರ ಮಹತ್ವದ್ದಾಗಿದೆ. ಪುಸ್ತಕ ಓದುವ ಅಭ್ಯಾಸವು ವ್ಯಕ್ತಿಯ ಜ್ಞಾನವನ್ನು ವಿಸ್ತರಿಸುವುದರ ಜೊತೆಗೆ ಚಿಂತನಾ ಶಕ್ತಿ ಮತ್ತು ವ್ಯಕ್ತಿತ್ವ ವಿಕಸನಕ್ಕೂ ಸಹಕಾರಿಯಾಗಿದೆ. 37 ದಿನಗಳ ಕಾಲ ನಡೆಯಲಿರುವ ಕನ್ನಡ ಪುಸ್ತಕ ಹಬ್ಬವು ಪುಸ್ತಕ ಪ್ರಿಯರು, ಸಾಹಿತ್ಯಾಸಕ್ತರು ಹಾಗೂ ವಿದ್ಯಾರ್ಥಿಗಳಿಗೆ ಕನ್ನಡ ಸಾಹಿತ್ಯದ ವಿವಿಧ ಆಯಾಮಗಳನ್ನು ಪರಿಚಯಿಸುವ ವೇದಿಕೆಯಾಗಲಿದೆ. ಅದರ ಸದುಪಯೋಗವನ್ನು ಎಲ್ಲರೂ ಪಡೆದುಕೊಳ್ಳಬೇಕು ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಎಂ.ಪಿ. ಕುಮಾರ್ ಅವರು, ಕನ್ನಡ ಪುಸ್ತಕ ಹಬ್ಬವು ಕನ್ನಡ ಭಾಷೆಯ ಮಹತ್ವ, ವೈಶಿಷ್ಟ್ಯ ಮತ್ತು ಶ್ರೀಮಂತ ಪರಂಪರೆಯನ್ನು ನೆನಪಿಸುವುದರ ಜೊತೆಗೆ ಭಾಷೆಯ ಬಗ್ಗೆ ಸಮಾಜದಲ್ಲಿ ಜಾಗೃತಿ ಮೂಡಿಸುವ ವೇದಿಕೆಯಾಗಿದೆ ಎಂದರು.

ಭಾಷೆಯು ಕೇವಲ ಸಂವಹನದ ಮಾಧ್ಯಮವಲ್ಲ; ಅದು ಸಂಸ್ಕೃತಿ, ಪರಂಪರೆ ಮತ್ತು ಮೌಲ್ಯಗಳನ್ನು ಪ್ರತಿಬಿಂಬಿಸುವ ಸ್ವರೂಪವಾಗಿದೆ. ಪ್ರತಿಯೊಂದು ಭಾಷೆಯೂ ತನ್ನದೇ ಆದ ಭಾವನೆ ಮತ್ತು ಅಭಿವ್ಯಕ್ತಿಯ ವೈಶಿಷ್ಟ್ಯವನ್ನು ಹೊಂದಿದೆ. ಭಾಷಾಂತರದ ಸಂದರ್ಭದಲ್ಲಿ ಮೂಲ ಭಾಷೆಯ ಭಾವನೆ, ಅರ್ಥ ಮತ್ತು ಆಶಯಗಳು ಕೆಲವೊಮ್ಮೆ ಬದಲಾಗುವ ಸಾಧ್ಯತೆಗಳಿದ್ದು, ಭಾಷೆಯ ಸೂಕ್ಷ್ಮತೆಗಳನ್ನು ಅರ್ಥಮಾಡಿಕೊಳ್ಳುವುದು ಅತ್ಯಗತ್ಯ ಎಂದು ಅಭಿಪ್ರಾಯಪಟ್ಟರು.
ಭಾರತೀಯ ಶಿಕ್ಷಣ ಪರಂಪರೆಯಲ್ಲಿನ ಭಾಷಾ ಮೌಲ್ಯಗಳನ್ನು ಆಧುನಿಕ ಶಿಕ್ಷಣ ವ್ಯವಸ್ಥೆಯೊಂದಿಗೆ ಸಮನ್ವಯಗೊಳಿಸುವ ಅಗತ್ಯವಿದೆ ಎಂದು ಅವರು ಹೇಳಿದರು. ರಾಷ್ಟ್ರೀಯ ಶಿಕ್ಷಣ ನೀತಿಯ ಆಶಯದಂತೆ ಮಾತೃಭಾಷಾ ಶಿಕ್ಷಣ, ಸಮಗ್ರ ಕಲಿಕೆ ಮತ್ತು ವಿದ್ಯಾರ್ಥಿಗಳ ವ್ಯಕ್ತಿತ್ವ ವಿಕಸನಕ್ಕೆ ಆದ್ಯತೆ ನೀಡಬೇಕು ಎಂದು ತಿಳಿಸಿದರು.
ಭವ್ಯ ಶೋಭಾಯಾತ್ರೆ:

6ನೇ ಕನ್ನಡ ಪುಸ್ತಕ ಹಬ್ಬದ ಉದ್ಘಾಟನೆಗೂ ಮುನ್ನ ಬಸವನಗುಡಿಯ ಗೋಖಲೆ ಸಾರ್ವಜನಿಕ ವಿಚಾರ ಸಂಸ್ಥೆಯಿಂದ ಕೆಂಪೇಗೌಡನಗರದ ರಾಷ್ಟ್ರೋತ್ಥಾನ ಪರಿಷತ್ ನವರೆಗೆ ಭವ್ಯವಾದ ಶೋಭಾಯಾತ್ರೆಯನ್ನು ಆಯೋಜಿಸಲಾಗಿತ್ತು. ಗೋಖಲೆ ಸಾರ್ವಜನಿಕ ವಿಚಾರ ಸಂಸ್ಥೆಯ ಗೌರವ ಕಾರ್ಯದರ್ಶಿ ವಿ.ನಾಗರಾಜ್, ರಾಷ್ಟ್ರೋತ್ಥಾನ ಪರಿಷತ್ ನ ಪ್ರಧಾನ ಕಾರ್ಯದರ್ಶಿ ನಾ. ದಿನೇಶ್ ಹೆಗ್ಡೆ ಹಾಗೂ ಲೇಖಕ ಡಾ.ರೋಹಿಣಾಕ್ಷ ಶಿರ್ಲಾಲು ಅವರು ನಾಡಿನ ಖ್ಯಾತ ಸಾಹಿತಿ ಹಾಗೂ ಗೋಖಲೆ ಸಾರ್ವಜನಿಕ ವಿಚಾರ ಕೇಂದ್ರದ ಸ್ಥಾಪಕ ಡಿ.ವಿ.ಗುಂಡಪ್ಪನವರ ಪುತ್ಥಳಿಗೆ ಪುರ್ಷಾರ್ಚನೆ ಮಾಡಿ ಭವ್ಯವಾದ ಶೋಭಾಯಾತ್ರೆಗೆ ಚಾಲನೆ ನೀಡಿದರು.


