ಇಂದೋರ್: ರಾಷ್ಟ್ರೀಯ ಸ್ವಯಂಸೇವಕ ಸಂಘದ (ಆರ್ಎಸ್ಎಸ್) ವಾರ್ಷಿಕ ಅಖಿಲ ಭಾರತೀಯ ಕಾರ್ಯಕಾರಿ ಮಂಡಲ ಬೈಠಕ್ ಮಧ್ಯಪ್ರದೇಶದ ಇಂದೋರ್ನ ಡೇಲಿ ಕಾಲೇಜಿನ ಸಂತ ಶ್ರೀ ರವಿದಾಸ್ ಸಭಾಂಗಣದಲ್ಲಿ ಆರಂಭಗೊಂಡಿತು.
ಸಂಘದ ಸರಸಂಘಚಾಲಕ ಡಾ. ಮೋಹನ್ ಭಾಗವತ್ ಹಾಗೂ ಸರಕಾರ್ಯವಾಹ ದತ್ತಾತ್ರೇಯ ಹೊಸಬಾಳೆ ಅವರು ಭಾರತ ಮಾತೆಯ ಭಾವಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸುವ ಮೂಲಕ ಬೈಠಕ್ ಗೆ ಚಾಲನೆ ನೀಡಿದರು.
ಸಭೆಯಲ್ಲಿ ಸರಸಂಘಚಾಲಕರು, ಸರಕಾರ್ಯವಾಹರು, ಎಲ್ಲ ಸಹ ಸರಕಾರ್ಯವಾಹರು, ಅಖಿಲ ಭಾರತೀಯ ಪದಾಧಿಕಾರಿಗಳು, ಕ್ಷೇತ್ರ ಹಾಗೂ ಪ್ರಾಂತ ಸ್ತರದ ಸಂಘಚಾಲಕರು, ಕಾರ್ಯವಾಹರು ಮತ್ತು ಪ್ರಚಾರಕರು ಭಾಗವಹಿಸುತ್ತಿದ್ದಾರೆ. ಇದರೊಂದಿಗೆ ಸಂಘ ಪ್ರೇರಿತ ವಿವಿಧ ಸಂಘಟನೆಗಳ ಅಖಿಲ ಭಾರತೀಯ ಸಂಘಟನಾ ಕಾರ್ಯದರ್ಶಿಗಳು ಸಭೆಯಲ್ಲಿ ಉಪಸ್ಥಿತರಿದ್ದಾರೆ.

ಬೈಠಕ್ ನ ಆರಂಭದಲ್ಲಿ ಸರಕಾರ್ಯವಾಹ ದತ್ತಾತ್ರೇಯ ಹೊಸಬಾಳೆ ಅವರು ಕಳೆದ ಕೆಲವು ತಿಂಗಳುಗಳಲ್ಲಿ ನಿಧನರಾದ ಸಮಾಜದ ಪ್ರಮುಖ ಗಣ್ಯರು ಹಾಗೂ ಕಾರ್ಯಕರ್ತರಿಗೆ ಶ್ರದ್ಧಾಂಜಲಿ ಸಲ್ಲಿಸಿದರು. ಇವರಲ್ಲಿ ಚಲನಚಿತ್ರ ನಟ ನಾನಾ ಪಾಟೇಕರ್, ಗಾಯಕಿ ಆಶಾ ಭೋಸ್ಲೆ, ಪದ್ಮಶ್ರೀ ಪುರಸ್ಕೃತ ಸಂತ ರಮೇಶ್ ಬಾಬಾ, ವಿವೇಕಾನಂದ ಕೇಂದ್ರದ ಮಾಜಿ ಅಧ್ಯಕ್ಷ ಬಾಲಕೃಷ್ಣನ್, ಬಲ್ವೀರ್ ಪುಂಜ್, ಎಸ್. ವೇದಾಂತಂ, ಪತ್ರಕರ್ತ ವಿರಾಗ್ ಪಾಚ್ಪೋರೆ, ಪರಾಗ್ ವೇದಿಕ್, ಮಾಜಿ ಕುಲಪತಿಗಳಾದ ದೇವೇಂದ್ರ ಪ್ರತಾಪ್ ಸಿಂಗ್ ಮತ್ತು ಸಚ್ಚಿದಾನಂದ ಮಹಾಂತಿ, ಖ್ಯಾತ ಗಾಯಕಿಯರಾದ ಎಸ್. ಜಾನಕಿ ಹಾಗೂ ಸುಮನ್ ಕಲ್ಯಾಣಪುರಿ ಮತ್ತು ಸಂಘದ ಹಿರಿಯ ಪ್ರಚಾರಕರಾಗಿದ್ದ ವಿನೋದ್ ಕುಮಾರ್ ಸೇರಿದಂತೆ ಹಲವು ಗಣ್ಯರು ಸೇರಿದ್ದಾರೆ.
ಮೂರು ಪ್ರಮುಖ ವಿಷಯಗಳ ಕುರಿತು ಹೇಳಿಕೆ ಪ್ರಕಟಣೆ
ಸಭೆಯಲ್ಲಿ ಸರಕಾರ್ಯವಾಹ ದತ್ತಾತ್ರೇಯ ಹೊಸಬಾಳೆ ಅವರು ಮೂರು ಮಹತ್ವದ ಐತಿಹಾಸಿಕ ಸಂದರ್ಭಗಳ ಕುರಿತು ಹೇಳಿಕೆಗಳನ್ನು ಬಿಡುಗಡೆ ಮಾಡಲಿದ್ದಾರೆ.
- ರಾಷ್ಟ್ರೀಯ ಚೇತನದ ಪಿತಾಮಹರೆಂದು ಗುರುತಿಸಲ್ಪಡುವ ರಾಜನಾರಾಯಣ ಬೋಸ್ ಅವರ 200ನೇ ಜನ್ಮಜಯಂತಿ ಹಿನ್ನೆಲೆಯಲ್ಲಿ.
- ಶುದ್ಧೀಕರಣ ಚಳವಳಿಯ ಪ್ರಮುಖ ಹರಿಕಾರ ಸ್ವಾಮಿ ಶ್ರದ್ಧಾನಂದ ಅವರ ಬಲಿದಾನದ 100ನೇ ವರ್ಷಾಚರಣೆ ಹಿನ್ನೆಲೆಯಲ್ಲಿ.
- ಒಡಿಶಾದ ಕಂಧಮಾಲ್ ಬುಡಕಟ್ಟು ಪ್ರದೇಶದಲ್ಲಿ ಸ್ವಾಭಿಮಾನ, ಸ್ವಾವಲಂಬನೆ ಮತ್ತು ಸ್ವಧರ್ಮದ ಜಾಗೃತಿಗಾಗಿ ಕಾರ್ಯನಿರ್ವಹಿಸಿದ ವೇದಾಂತ ಕೇಸರಿ ಸ್ವಾಮಿ ಲಕ್ಷ್ಮಣಾನಂದ ಸರಸ್ವತಿ ಅವರ ಜನ್ಮಶತಮಾನೋತ್ಸವದ ಹಿನ್ನೆಲೆಯಲ್ಲಿ. ಈ ಮೂರು ಐತಿಹಾಸಿಕ ವ್ಯಕ್ತಿಗಳ ಜೀವನ, ಕೊಡುಗೆ ಹಾಗೂ ಅವರು ಪ್ರತಿಪಾದಿಸಿದ ಮೌಲ್ಯಗಳನ್ನು ಸ್ಮರಿಸುವುದು ಈ ಹೇಳಿಕೆಗಳ ಪ್ರಮುಖ ಉದ್ದೇಶವಾಗಿದೆ.
