ಧರ್ಮರಕ್ಷಣೆಗಾಗಿ ಪ್ರಾಣಾರ್ಪಣೆ ಮಾಡಿದ ತ್ಯಾಗಮಯಿ ಸಂತ ಸ್ವಾಮಿ ಲಕ್ಷ್ಮಣಾನಂದ ಸರಸ್ವತಿ

ಭಗವಾನ್ ಜಗನ್ನಾಥನ ಪವಿತ್ರ ಭೂಮಿಯಾದ ಒಡಿಶಾದಲ್ಲಿ ಸಮಾಜಕ್ಕೆ ಮಾರ್ಗದರ್ಶನ ನೀಡುವಲ್ಲಿ ಅನೇಕ ಮಹನೀಯರು ಮಹತ್ವದ ಕೊಡುಗೆ ನೀಡಿದ್ದಾರೆ. ಇದೇ ಪರಂಪರೆಯಲ್ಲಿ ಅಂಗುಲ್ ಜಿಲ್ಲೆಯ ಗುರುಜಾಂಗ್ ಗ್ರಾಮದಲ್ಲಿ 1926ರ ಆಗಸ್ಟ್ 15ರಂದು ಜನಿಸಿದ ಸ್ವಾಮಿ ಲಕ್ಷ್ಮಣಾನಂದ ಸರಸ್ವತಿ ಅವರು ವಿಶಿಷ್ಟ ಸಂತರಾಗಿದ್ದರು. ಹಿಂದು ವಿರೋಧಿ ಶಕ್ತಿಗಳ ವಿರುದ್ಧ ಹೋರಾಡುತ್ತಾ ಅವರು ವೀರಮರಣವನ್ನಪ್ಪಿದರು.

ಸ್ವಾಮೀಜಿಯವರು ತಮ್ಮ ಯುವಾವಸ್ಥೆಯಲ್ಲಿ ಪ್ರಜಾಮಂಡಲದೊಂದಿಗೆ ಸೇರಿ ಸ್ವಾತಂತ್ರ್ಯ ಚಳವಳಿಯಲ್ಲಿ ಭಾಗವಹಿಸಿದರು. ವಿವಾಹದ ನಂತರ ದೀಕ್ಷೆ ಪಡೆದು ಸನ್ಯಾಸ ಸ್ವೀಕರಿಸಿದರು. ಹಿಂದು ಧರ್ಮಶಾಸ್ತ್ರಗಳು ಹಾಗೂ ಸಂಸ್ಕೃತ ವ್ಯಾಕರಣವನ್ನು ಆಳವಾಗಿ ಅಧ್ಯಯನ ಮಾಡಿದರು.

ಒಡಿಶಾದ ಕಂಧಮಾಲ್ ಪ್ರದೇಶದಲ್ಲಿ ಸಕ್ರಿಯವಾಗಿದ್ದ ಸ್ಥಳೀಯ ಸಮಾಜವಿರೋಧಿ ಮತ್ತು ರಾಷ್ಟ್ರವಿರೋಧಿ ಶಕ್ತಿಗಳ ವಿರುದ್ಧ ಕಾರ್ಯನಿರ್ವಹಿಸಲು ಅವರು ಅದೇ ಪ್ರದೇಶದ ಚಕಾಪಾದ್‌ನಲ್ಲಿ ತಮ್ಮ ಕೇಂದ್ರವನ್ನು ಸ್ಥಾಪಿಸಿಕೊಂಡು ಅಲ್ಲಿಯೇ ನೆಲೆಸಿದರು. ಆಧ್ಯಾತ್ಮಿಕತೆಯ ಆಧಾರದ ಮೇಲೆ ಬುಡಕಟ್ಟು ಸಮಾಜದ ಭೌತಿಕ ಉನ್ನತಿ ಹಾಗೂ ತಮ್ಮ ಸಂಸ್ಕೃತಿಯ ಬಗ್ಗೆ ಸ್ವಾಭಿಮಾನದ ಭಾವನೆ ಬೆಳೆಸಲು ವ್ಯಾಪಕ ಪ್ರಯತ್ನಗಳನ್ನು ಕೈಗೊಂಡರು.

ಸಂಸ್ಕೃತ ಶಿಕ್ಷಣ, ಮಹಿಳಾ ಭಜನಾ ಕೇಂದ್ರಗಳು, ಕೃಷಿ, ಗೋಸಂರಕ್ಷಣೆ ಮತ್ತು ಜಲಸಂರಕ್ಷಣೆಯಂತಹ ಕಾರ್ಯಗಳಲ್ಲಿ ಬುಡಕಟ್ಟು ಪ್ರದೇಶದ ಜನರನ್ನು ಪ್ರೇರೇಪಿಸುವ ಮೂಲಕ ಸ್ವಾಭಿಮಾನ ಮತ್ತು ಸ್ವಾವಲಂಬನೆಯ ಮಾರ್ಗವನ್ನು ತೋರಿಸಿದರು. ಶುದ್ಧಿ ಯಜ್ಞಗಳನ್ನು ಆಯೋಜಿಸಿ ಬುಡಕಟ್ಟು ಸಮಾಜದ ಜನರಿಗೆ ಸದಾಚರಣೆಯ ಸಂಕಲ್ಪ ಮಾಡಿಸುತ್ತಿದ್ದರು.
ಸಮಾಜದ ಶ್ರದ್ಧೆಯ ಪ್ರತೀಕವಾಗಿರುವ ‘ಧರಣಿಪೇನು’ ದೇವತೆಯ ಆರಾಧನೆಯನ್ನು ಸಮಕಾಲೀನ ಸಂದರ್ಭಗಳಿಗೆ ಅನುಗುಣವಾಗಿ ಪರಿಚಯಿಸುವ ಮೂಲಕ ಸಮಾಜದ ಸಾಂಸ್ಕೃತಿಕ ಬೇರುಗಳನ್ನು ಮತ್ತಷ್ಟು ಬಲಪಡಿಸಿದರು.

ಭಗವಾನ್ ಜಗನ್ನಾಥನ ಯಾತ್ರೆಗಳು ಹಾಗೂ ಯಜ್ಞಾದಿ ಕಾರ್ಯಕ್ರಮಗಳ ಮೂಲಕ ಅಲ್ಲಿನ ಸಮಾಜದಲ್ಲಿ ಧಾರ್ಮಿಕ ನಂಬಿಕೆಗಳನ್ನು ಪುನಃ ದೃಢಗೊಳಿಸಿ, ಪರಂಪರೆಗಳ ಬಗ್ಗೆ ಗೌರವದ ಭಾವನೆ ಮೂಡಿಸಿದರು. ಈ ಉದ್ದೇಶಕ್ಕಾಗಿ ಜಗನ್ನಾಥನ ನಿರ್ಮಾಲ್ಯ, ತುಳಸಿ ಗಿಡದ ಮಣ್ಣು ಮತ್ತು ಎಲೆಗಳು ಹಾಗೂ ಗಂಗಾಜಲವನ್ನು ಬಳಸಿಕೊಂಡು ಘರ್‌ವಾಪಸಿ ಪ್ರಕ್ರಿಯೆಯನ್ನು ಸರಳ ಮತ್ತು ಸುಲಭಗೊಳಿಸಿದರು.

ಸ್ವಾಮೀಜಿಯವರ ಈ ಪ್ರಯತ್ನಗಳಿಂದಾಗಿ ಆ ಪ್ರದೇಶದಲ್ಲಿ ಸಕ್ರಿಯವಾಗಿದ್ದ ಸಮಾಜವಿರೋಧಿ ಮತ್ತು ರಾಷ್ಟ್ರವಿರೋಧಿ ಶಕ್ತಿಗಳು ಅಸಹನೆಯನ್ನು ವ್ಯಕ್ತಪಡಿಸತೊಡಗಿದವು. ಅವರ ಮೇಲೆ ಹಲವು ಬಾರಿ ನೇರ ದಾಳಿಗೆ ಪ್ರಯತ್ನಿಸಲಾಯಿತು. ಆದರೆ ಸ್ವಾಮೀಜಿಯವರು ಇನ್ನಷ್ಟು ದೃಢತೆಯಿಂದ ತಮ್ಮ ಕಾರ್ಯದಲ್ಲಿ ನಿರಂತರವಾಗಿ ತೊಡಗಿಸಿಕೊಂಡರು.
ಅಂತಿಮವಾಗಿ, ಅಸಹಿಷ್ಣು ಮತ್ತು ಮತಾಂಧ ಶಕ್ತಿಗಳು ಪವಿತ್ರ ಜನ್ಮಾಷ್ಟಮಿಯ ದಿನದಂದು ಜಲೇಶಪಟ್ಟಾ ಆಶ್ರಮದ ಮೇಲೆ ದಾಳಿ ನಡೆಸಿ, ಸ್ವಾಮೀಜಿಯವರು ಸೇರಿದಂತೆ ಅವರ ನಾಲ್ವರು ಶಿಷ್ಯರನ್ನು ಕ್ರೂರವಾಗಿ ಹತ್ಯೆಗೈದರು.

ಮಹಾನ್ ತ್ಯಾಗಿ ಸಂತ ಸ್ವಾಮಿ ಲಕ್ಷ್ಮಣಾನಂದ ಸರಸ್ವತಿ ಅವರ ಜೀವನವು ಮಾತೃಭೂಮಿ ಮತ್ತು ಧರ್ಮರಕ್ಷಣೆಗಾಗಿ ಸಂಪೂರ್ಣವಾಗಿ ಸಮರ್ಪಿತವಾಗಿತ್ತು. ಈ ಪವಿತ್ರ ಕಾರ್ಯವೇ ಅವರ ಜೀವನದ ಉದ್ದೇಶವಾಗಿತ್ತು. ಅವರ ವ್ಯಕ್ತಿತ್ವ ಮತ್ತು ಕಾರ್ಯಗಳು ಒಂದಕ್ಕೊಂದು ಅವಿಭಾಜ್ಯವಾಗಿದ್ದು, ಅವರ ವಿಚಾರಗಳು ಮತ್ತು ನಡವಳಿಕೆಯ ನಡುವಿನ ಅಚಲ ಏಕತೆಯನ್ನು ಪ್ರತಿಬಿಂಬಿಸುತ್ತಿದ್ದವು. ಇಂದು ಅನೇಕ ಕಾರ್ಯಕರ್ತರು ಅವರ ಬಲಿದಾನದ ಪ್ರೇರಣೆಯನ್ನು ಹೃದಯದಲ್ಲಿ ಧರಿಸಿ, ಧಾರ್ಮಿಕ ನಂಬಿಕೆಗಳನ್ನು ದೃಢಗೊಳಿಸುವ ಮತ್ತು ಪರಂಪರೆಗಳ ಸಂರಕ್ಷಣೆಗಾಗಿ ಸಂಕಲ್ಪಬದ್ಧರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.

ವೇದಾಂತ ಕೇಸರಿ ಸ್ವಾಮಿ ಲಕ್ಷ್ಮಣಾನಂದ ಸರಸ್ವತಿ ಅವರ ಜನ್ಮಶತಮಾನೋತ್ಸವದ ಸಂದರ್ಭದಲ್ಲಿ ರಾಷ್ಟ್ರೀಯ ಸ್ವಯಂಸೇವಕ ಸಂಘವು ಅವರಿಗೆ ಗೌರವಪೂರ್ವಕ ಶ್ರದ್ಧಾಂಜಲಿ ಸಲ್ಲಿಸುತ್ತದೆ.

Leave a Reply

Your email address will not be published.

This site uses Akismet to reduce spam. Learn how your comment data is processed.