ಬೆಂಗಳೂರು: “ಭೀಷ್ಮ, ದ್ರೋಣ, ಕರ್ಣ ಮುಂತಾದವರು ದುರ್ಯೋಧನನ ಉಪ್ಪಿನ ಋಣವನ್ನು ಬದುಕಿಡೀ ತೀರಿಸಿ ಕೊನೆಯ ನಿರ್ಣಾಯಕ ಕ್ಷಣದಲ್ಲಿ ತಮ್ಮ ತಮ್ಮ ಪ್ರತಿಜ್ಞೆ – ಮೋಹಗಳಿಗೆ ಕಟ್ಟುಬಿದ್ದು ಉಪ್ಪಿನ ಋಣದಿಂದ ಹೊರತಾಗಿ ನಂಬಿದವನ ಕೈ ಬಿಡುತ್ತಾರೆ. ಇದು ಇಡಿಯ ಕತೆಗೆ ಒಂದು ತಿರುವನ್ನು ಕೊಡುತ್ತದೆ” ಎಂದು ಖ್ಯಾತ ಸಾಹಿತಿ ಈಶ್ವರ ಚಂದ್ರ ಹೇಳಿದ್ದಾರೆ.

Sahitya Parishad
ಅಖಿಲ ಭಾರತೀಯ ಸಾಹಿತ್ಯ ಪರಿಷತ್ ನ ಬೆಂಗಳೂರು ಘಟಕವು ಭಾನುವಾರ ಏರ್ಪಡಿಸಿದ ವ್ಯಾಸ ಜಯಂತಿ ನಿಮಿತ್ತ ಕಾರ್ಯಕ್ರಮದಲ್ಲಿ ‘ವ್ಯಾಸ ಸಾಹಿತ್ಯದಲ್ಲಿ ಸಾಮಾಜಿಕ ಮೌಲ್ಯಗಳು’ ಎಂಬ ವಿಷಯದ ಮೇಲೆ ಅವರು ಮುಖ್ಯ ವಕ್ತಾರರಾಗಿ ಮಾತನಾಡಿದರು. ದ್ರೋಣನಿಗೆ ದ್ರುಪದಗೈದ ಅಪಮಾನ, ದ್ರುಪದನನ್ನು ಶಿಷ್ಯ ಅರ್ಜುನನಿಂದ ದ್ರೋಣ ಸೋಲಿಸಿದ್ದು, ಮಯ ಸಭಾಭವನದಲ್ಲಿ ದ್ರೌಪದಿ ಕೌರವನನ್ನು ನಕ್ಕು ಅಪಮಾನಿಸಿದ್ದು, ದ್ರೌಪದಿಯ ವಸ್ತ್ರಾಪಹಾರ, ಕೌರವರಿಂದ ಅನ್ಯಾಯದ ಅಭಿಮನ್ಯು ವದೆ, ಇವೆಲ್ಲವೂ ದುರಂತ ಬೀಜಗಳಾಗಿದ್ದು, ಅವುಗಳ ದುರಂತ ಪರಿಣಾಮವನ್ನು ಮುಂದಕ್ಕೆ ಕತೆಯಲ್ಲೇ ಕಾಣುತ್ತೇವೆ. ಮಹಾಭಾರತದ ಕತೆಯಿಂದ ಇಂತಹ ಅನೇಕ ಕಾರ್ಯಕಾರಣ ಸಂಬಂಧಗಳ ಕಥಾನಕದ  ಮೂಲಕ ನಮಗೆ ಬದುಕಿನ ಪಾಠ ಲಭ್ಯವಾಗುತ್ತದೆ ಎಂದು ಅವರು ಹೇಳಿದರು. ಚತುಸ್ಸಮುದ್ರಪರ್ಯಂತ ವಿಶಾಲ ದೇಶವನ್ನು ಆಳಿದ ದುರ್ಯೋಧನ ಕೊನೆಗೆ ರಣರಂಗದಲ್ಲಿ ಅನಾಥನಾಗಿ ಸತ್ತ. ಮೂರ ಲೋಕದ ಗಂಡ ಎನಿಸಿದ ಅರ್ಜುನ ಕೊನೆಗೆ ಕಳ್ಳಕಾಕರಿಯೆಂದ ದೋಚಲ್ಪಟ್ಟ. ಇವೆಲ್ಲವೂ ದೃಷ್ಟಾಂತಗಳು ಜೀವನ ದುಃಖ ಮಯ, ನಾವದನ್ನು ಋಜುಮಾರ್ಗದಿಂದ ಬದುಕಬೇಕು ಎಂಬುದನ್ನು ಬಿಂಬಿಸುತ್ತದೆ ಎಂದವರು ವಿಶ್ಲೇಷಿಸಿದರು.
Sahitya Parishad 2
ಅಖಿಲ ಭಾರತೀಯ ಸಾಹಿತ್ಯ ಪರಿಷತ್ ನ ಕರ್ನಾಟಕ ರಾಜ್ಯ ಪ್ರಧಾನ ಕಾರ್ಯದರ್ಶಿ ರಘುನಂದನ್ ಭಟ್ ಮಾತನಾಡಿ, ಒಂದು ಸಂಸ್ಕೃತಿಯನ್ನು ರೂಪಿಸಿದ ರಾಮಾಯಣದಂತಹ ಕೃತಿ ರೂಪುಗೊಳ್ಳಲು ವಾಲ್ಮೀಕಿಯ ಕಠೋರ ತಪಸ್ಸೇ ಕಾರಣ, ಅಂತಹ ತಪಸ್ಸಿನಿಂದಲೇ ಬಂಚಿಮರು ವಂದೇಮಾತರಂ ರಚಿಸಿದರು. ಮತ್ತದು ಲಕ್ಷಾಂತರ ಜನರು ರಾಷ್ಟ್ರಕ್ಕಾಗಿ ಬದುಕುವಂತೆ ಹಾಗು ಬಲಿದಾನಗೈಯುವಂತೆ ಪ್ರೇರಣೆ ನೀಡಿತು ಎಂದರು. ಅಖಿಲ ಭಾರತೀಯ ಸಾಹಿತ್ಯ ಪರಿಷತ್ ನ ಸಂಕ್ಷಿಪ್ತ ಪರಿಚಯ ಮಾಡಿದ ಅವರು ಸರ್ವ ಭಾಷೆಗಳ ಸೇವೆ ಮತ್ತು ಸರ್ವಭಾಷಾ ಸಮಭಾವ ಪರಿಷತ್ ನ ಉದ್ದೇಶವಾಗಿದೆ ಎಂದು ವಿವರಿಸಿದರು.

ಜಗತ್ತಿನಲ್ಲಿಯೇ ಅತ್ಯಂತ ಹೆಚ್ಚು ಪ್ರಾಣಿ ವೈವಿಧ್ಯ ಮತ್ತು ಸಸ್ಯ ವೈವಿಧ್ಯ ಭಾರತದಲ್ಲಿ ಇದೆ ಎಂಬ ತಜ್ಞ ವರದಿಯ ಉಲ್ಲೇಖ ಮಾಡಿದ ರಘುನಂದನ್ ಭಟ್ ಅವರು ಇದಕ್ಕೆ ಭಾರತೀಯರ ರಕ್ತದಲ್ಲೇ ಇರುವ ಸೈಷ್ಣುತೆಯ ಸ್ವಭಾವ ಕಾರಣ ಎಂದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಯೋಗ ತಜ್ಞ  ಗೋಪಾಲ ಕೃಷ್ಣ ಅವರು ಮಾತನಾಡಿ ವ್ಯಾಸರು ವೇದ ಸಾಹಿತ್ಯದ  ಮೂಲಕ ಸಮಾಜದಲ್ಲಿ ಜ್ಞಾನ ಜಾಗೃತಿ ಮೂಡಿಸಿದರೆ ಕನಕದಾಸರು ದಾಸ ಸಾಹಿತ್ಯದ ಮೂಲಕ ಮೌಲ್ಯ ಜಾಗೃತಿಯನ್ನು ಒಂಟು ಮಾಡಿದರು ಎಂದರು.

ಅಖಿಲ ಭಾರತೀಯ ಸಾಹಿತ್ಯ ಪರಿಷತ್ ನ ಬೆಂಗಳೂರು ಘಟಕದ ಸಂಚಾಲಕಿ ಛಾಯ ಭಗವತಿ ಅವರು ಕಾರ್ಯಕ್ರಮ ನಿರೂಪಿಸಿದರು. ಘಟಕದ ಸಹ-ಸಂಚಾಲಕರಾದ ವಿರೂಪಾಕ್ಷ ಬೆಳವಾಡಿ ವಂದಿಸಿದರು.

Leave a Reply

Your email address will not be published.

This site uses Akismet to reduce spam. Learn how your comment data is processed.