ABVP- Karnataka unit in a recent protest program

ABVP- Karnataka unit in a recent protest program

ವಿದ್ಯಾರ್ಥಿ ಶಕ್ತಿ ಗುಡುಗಿದರೆ ವಿಧಾನಸೌಧ ನಡುಗುವುದು. ಹೌದು ಭ್ರಷ್ಟಾಚಾರಿಗಳ ವಿರುದ್ಧ, ಭ್ರಷ್ಟ ಸರ್ಕಾರಗಳ ವಿರುದ್ಧ ವಿದ್ಯಾರ್ಥಿಗಳು ಗುಡುಗಲಿದ್ದಾರೆ. ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್(ಎಬಿವಿಪಿ) ನೇತೃತ್ವದಲ್ಲಿ ಭ್ರಷ್ಟಾಚಾರ ವಿರೋಧಿಸಿ 10 ಲಕ್ಷಕ್ಕಿಂತ ಅಧಿಕ ವಿದ್ಯಾರ್ಥಿಗಳು ಬೀದಿಗಿಳಿಯಲಿದ್ದಾರೆ.

ಇದೇ ತಿಂಗಳು July 27ನೇ ತಾರೀಖು ದೇಶದ ಎಲ್ಲಾ ಜಿಲ್ಲಾ ಕೇಂದ್ರಗಳಲ್ಲಿ ಬೃಹತ್ ಪ್ರಮಾಣದ ರ‍್ಯಾಲಿ ನಡೆಸಿ, ಯುವಜನತೆ ಭ್ರಷ್ಟಾಚಾರವನ್ನು ಸಹಿಸುವದಿಲ್ಲ, ಭ್ರಷ್ಟಾಚಾರಿಗಳೇ ಎಚ್ಚರಿಕೆ – ಜಾಗೃತಗೊಂಡಿದೆ ಯುವಜನತೆ ಎಂಬ ಸ್ಪಷ್ಟ ಸಂದೇಶವನ್ನು ಯುವಕರು ರವಾನಿಸಲಿದ್ದಾರೆ. ಇದು ಯಾವುದೋ ರಾಜಕೀಯ ಲಾಭಕ್ಕೋಸ್ಕರ, ಯಾವುದೋ ರಾಜಕೀಯ ಪಕ್ಷದ ಮುಂದಾಳತ್ವದಲ್ಲಿ ನಡೆಯುತ್ತಿರುವ ಕೃಪಾಶ್ರಯದ ಹೋರಾಟ ಅಲ್ಲ. ಈಜಿಪ್ಟ ದೇಶದಲ್ಲಿ ಸರ್ವಾಧಿಕಾರಿಯನ್ನು ಕೆಳಗಿಳಿಸಲು ನಡೆದ ಹೋರಾಟದ ಮಾದರಿಯಲ್ಲಿ ಸಮಾಜದ ಎಲ್ಲ ವರ್ಗದ, ಎಲ್ಲ ಸ್ಥರದ ವಿದ್ಯಾರ್ಥಿಗಳನ್ನು ಒಳಗೊಂಡ ಹೋರಾಟ. ಯೂತ್ ಅಗೆನಸ್ಟ್ ಕರಪ್ಶನ್ (Youth Against Corruption)ಎಂಬ ಹೆಸರಿನ ಹೋರಾಟಕ್ಕೆ ಮೇ 12 ರಂದು ದೇಹಲಿಯಲ್ಲಿ ಚಾಲನೆ ನೀಡಲಾಗಿದೆ.

ಆಮ್ ಆದ್ಮಿಯ ಹೆಸರಿನಲ್ಲಿ ದೇಶದ ಖಜಾನೆಯಿಂದ ಕೋಟಿ ಕೋಟಿ ಹಣವನ್ನು ಯಾವುದೇ ಅಳುಕಿಲ್ಲದೆ ಲೂಟಿ ಮಾಡಲಾಗುತ್ತಿದೆ. ಈ ಎಲ್ಲ ಲೂಟಿಯ ನೇರ ಬಲಿಪಶು ಇದೇ ಆಮ್ ಆದ್ಮಿ. ಈ ಆಮ್ ಆದ್ಮಿ ಹೆಸರಿನಲ್ಲಿಯೇ ಅಧಿಕಾರಕ್ಕೆ ಬಂದು ಅದೇ ಆಮ್ ಆದ್ಮಿಯನ್ನು ಲೂಟಿ ಮಾಡುವುದು ಮತ್ತು ರೈತನ ಹೆಸರಿನಲ್ಲಿ ಅಧಿಕಾರ ಹಿಡಿದು ಅದೇ ರೈತನ ಆಧಾರವಾದ ಜಮೀನನ್ನು ಕೈಗಾರಿಕೆಯ ಹೆಸರಿನಲ್ಲಿ ಕಸಿದುಕೊಂದು ಅವನನ್ನು ಬೀದಿ ಪಾಲುಮಾಡುವುದು ನಮ್ಮ ರಾಜಕಾರಣಿಗಳು ನಮ್ಮ ಸಂವಿದಾನಕ್ಕೆ ಮಾಡುವ ಅಪಚಾರವಾಗಿದೆ.

ಈ ಹೋರಾಟದ ಮುಖ್ಯ ಧ್ಯೇಯೋದ್ದೇಶಗಳು:

ತೆರಿಗೆಗಳ್ಳರ ಸ್ವರ್ಗವಾಗಿರುವ ವಿದೇಶಿ ಬ್ಯಾಂಕುಗಳಲ್ಲಿ ಕಪ್ಪು ಹಣವನ್ನು ಒಯ್ದು ಇಟ್ಟಿರುವವರ ಹೆಸರನ್ನು ಸಾರ್ವಜನಿಕವಾಗಿ ಬಹಿರಂಗಗೊಳಿಸುವುದು ಮತ್ತು ಆ ಹಣವನ್ನು ಮುಟ್ಟುಗೋಲು ಹಾಕಿಕೊಳ್ಳಲು ಸರ್ಕಾರದ ಮೇಲೆ ಒತ್ತಡ.

ಭ್ರಷ್ಟಾಚಾರದ ವಿರುದ್ಧ ಕಠಿಣ ಕಾನೂನು ರೂಪಿಸುವುದು: ಭ್ರಷ್ಟಾಚಾರವನ್ನು ಯುವಕರು ಬಹಳ ಗಂಭೀರವಾಗಿ ತೆಗೆದುಕೊಳ್ಳಬೇಕಾಗಿದೆ. ೭೦ ವರ್ಷ ಇಳಿ ವಯಸ್ಸಿನ ಅಣ್ಣಾ ಹಜಾರೆ ಭ್ರಷ್ಟಾಚಾರದ ವಿರುದ್ಧ ಸಮರವನ್ನೇ ಸಾರಿರುವಾಗ ಬಿಸಿ ರಕ್ತದವರಾದ ನಮಗೇನಾಗಿದೆ ಎನ್ನುವುದನ್ನು ನಾವೆಲ್ಲರೂ ಯೋಚಿಸಬೇಕಾಗಿದೆ. ಸ್ವಾತಂತ್ರ್ಯಕ್ಕಾಗಿ ನಡೆದ ಹೋರಾಟವಿರಬಹುದು ಅಥವಾ ಮತ್ಯಾವುದೋ ಚಳುವಳಿ ಇರಬಹುದು ಯಾವಾಗ ಯುವಶಕ್ತಿ ತನ್ನ ಅಸ್ತಿತ್ವವನ್ನು ಬಹಳ ಸ್ಪಷ್ಟವಾಗಿ ತೋರಿಸಿದೆವೋ ಆ ಹೋರಾಟಗಳೆಲ್ಲ ಯಶಸ್ವಿಯಾಗಿ ಅನೇಕ ಬೃಹತ್ ಮರಗಳೇ ಉರುಳಿ ಬಿದ್ದಿವೆ. ಈ ಹೋರಾಟಕ್ಕೆ ವಿದ್ಯಾರ್ಥಿಗಳನ್ನು ಸನ್ನದ್ಧಗೊಳಿಸುವುದು.

ಅಣ್ಣಾ ಹಜಾರೆ, ಬಾಬಾ ರಾಮದೇವ್ ಆಧಿಯಾಗಿ ರಾಷ್ಟ್ರವ್ಯಾಪಿಯಾಗಿರುವ ಭ್ರಷ್ಟಾಚಾರವನ್ನು ವಿರೋಧಿಸಿ ಹೋರಾಟ ನಡೆಸಿರುವ ಎಲ್ಲರನ್ನು ಬೆಂಬಲಿಸುವುದು.

ಭವಿಷ್ಯದಲ್ಲಿ ಸರ್ಕಾರಿ, ಖಾಸಗಿ ಸೇವೆಗಳಲ್ಲಿ ಸೇರುವ ವಿದ್ಯಾರ್ಥಿಗಳನ್ನು ಈಗಲೇ ಭ್ರಷ್ಟಾಚಾರದ ವಿರುದ್ಧ ಜಾಗೃತಗೊಳಿಸುವುದು.

ಮಾಹಿತಿ ಹಕ್ಕು ಕಾಯ್ದೆ, ಲೋಕಾಯುಕ್ತ ಮುಂತಾದ ವಿಷಯಗಳ ಬಗ್ಗೆ ಯುವ ಸಮುದಾಯಕ್ಕೆ ಮಾಹಿತಿ ಒದಗಿಸಿ ಅವುಗಳ ಪರಿಣಾಮಕಾರಿ ಬಳಕೆ ಬಗ್ಗೆ ತಿಳುವಳಿಕೆ ಮೂಡಿಸುವುದು.

ಹೀಗೆ ಇನ್ನೂ ಅನೇಕ ಸದುದ್ಧೇಶಗಳೊಂದಿಗೆ ಯುವ ಆಂದೋಲನವನ್ನು ರೂಪಿಸಲಾಗಿದೆ.

ಹೋರಾಟವನ್ನು ಸಂಘಟಿಸಲು ಬಳಕೆಯಾಗುತ್ತಿರುವ ಮಾಧ್ಯಮಗಳು:

ಈ ಹೋರಾಟದಲ್ಲಿ ಮುಖ್ಯ ಪಾತ್ರವಹಿಸಿರುವುದು ಮತ್ತು ವಿದ್ಯಾರ್ಥಿಗಳನ್ನು ತಲುಪಲು ಮಾಧ್ಯಮವಾಗಿ ಬಳಕೆಯಾಗುತ್ತಿರುವದು ಅಂತರ್ಜಾಲ, ಅದರಲ್ಲಿ ಅತಿ ಹೆಚ್ಚಾಗಿ ಬಳಕೆಯಾಗುತ್ತಿರುವುದು ಪೇಸ್ ಬುಕ್. ಈಗಾಗಲೇ ಈ ಹೋರಾಟದ ಪೂರ್ವಭಾವಿಯಾಗಿ ಪೇಸ್‌ಬುಕ್ ನಲ್ಲಿ ಅನೇಕ ವೇದಿಕೆಗಳು ಸೃಷ್ಟಿಯಾಗಿವೆ. ಭೃಷ್ಟಾಚಾರದ ಹಲವಾರು ಮಜಲುಗಳು ಮತ್ತು ಅದನ್ನು ನಿರ್ನಾಮ ಮಾಡುವಲ್ಲಿ ತಮ್ಮ ಪಾತ್ರವೇನು ಎಂಬುದರ ಬಗ್ಗೆ ವಿದ್ಯಾರ್ಥಿಗಳು ಗಹನವಾದ ಚರ್ಚೆಯಲ್ಲಿ ತೊಡಗಿದ್ದಾರೆ. ಅದೇ ರೀತಿ www.youthagainstcorruption.net ಎಂಬ ವೆಬ್‌ಸೈಟ್ ಇದೇ ಉದ್ದೇಶಕ್ಕಾಗಿ ನಿರ್ವಹಿಸಲಾಗುತ್ತಿದೆ.

ಇವಷ್ಟೇ ಅಲ್ಲದೆ ಕರಪತ್ರಗಳು, ಬ್ಯಾನರ್‌ಗಳು, ಪತ್ರಿಕಾ ಗೋಷ್ಠಿಗಳನ್ನು ಆಯೋಜಿಸುವ ಮೂಲಕ ವಿಷಯವನ್ನು ಪಸರಿಸಲಾಗುತ್ತಿದೆ. ಶಾಲಾ ಕಾಲೇಜುಗಳಲ್ಲಿ ಚರ್ಚೆ, ಉಪನ್ಯಾಸಗಳನ್ನು ಹಮ್ಮಿಕೊಳ್ಳುವ ಮೂಲಕ, ಹಾಸ್ಟೆಲ್‌ಗಳಲ್ಲಿ ವಿದ್ಯಾರ್ಥಿಗಳನ್ನು ಸಂಪರ್ಕಿಸುವ ಮೂಲಕ, ಬೀದಿ ನಾಟಕಗಳ ಮೂಲಕ ಈ ಹೋರಾಟವನ್ನು ಬೃಹತ್ ಪ್ರಮಾಣದಲ್ಲಿ ಸಂಘಟಿಸಲಾಗುತ್ತಿದೆ.

ಈ ಹೋರಾಟದ ಚಾಲನಾ ಶಕ್ತಿಗಳು:

೧.    ಆರ್. ಬಾಲಸುಬ್ರಮಣ್ಯಂ(ಮೈಸೂರು):

ಇವರು ಮೂಲತಃ ಬೆಂಗಳೂರಿನವರು. ಹಾರ್ವರ್ಡ್ ವಿಶ್ವವಿದ್ಯಾಲಯದ ಅತಿಥಿ ಉಪನ್ಯಾಸಕರು. ೧೯೮೪ ರಲ್ಲಿ ತಮ್ಮ ವಿದ್ಯಾರ್ಥಿ ದೆಶೆಯಲ್ಲಿ ಸ್ವಾಮಿ ವಿವೇಕಾನಂದ ಯೂತ್ ಮೂವಮೆಂಟ್ ಹೆಸರಿನಲ್ಲಿ ವನವಾಸಿಗಳಿಗಾಗಿ ಪ್ರಾರಂಭಿಸಿದ ಶಾಲೆಗಳು, ಆಸ್ಪತ್ರೆಗಳು ಆ ಜನಾಂಗದವರಲ್ಲಿ ಕ್ರಾಂತಿಕಾರಿ ಬದಲಾವಣೆಯನ್ನು ತಂದಿವೆ. ಅಲ್ಲದೆ ಇವರು ನಮ್ಮ ರಾಜ್ಯದ ಹೆಸರಾಂತ ಮಾಹಿತಿ ಹಕ್ಕು ಹೋರಾಟಗಾರರು ಮತ್ತು ರಾಜ್ಯ ಸರ್ಕಾರದ ವಿಜ್ಹನ್ – ೨೦೨೦ ಯ ಸದಸ್ಯರೂ ಹೌದು. ಕರ್ನಾಟಕದ ಭ್ರಷ್ಟಾಚಾರದ ವಿರುದ್ಧ ಸಮರವನ್ನೇ ಸಾರಿದವರು.

೨.    ಅಶೋಕ ಭಗತ್(ರಾಂಚಿ):

೧೯೮೩ ರಲ್ಲಿ ಜಾರ್ಖಂಡಗೆ ಮರಳಿದ ಇವರು ವಿಕಾಸ ಭಾರತಿ ಎಂಬ ಹೆಸರಿನ ಸಾಮಾಜಿಕ ಸಂಘವನ್ನು ಹುಟ್ಟು ಹಾಕಿದರು. ಇವತ್ತು ಈ ಸಂಘಟನೆ ಜಾರ್ಖಂಡ ರಾಜ್ಯದ ಎಲ್ಲ ಜಿಲ್ಲೆಗಳ ಆಧಿವಾಸಿ, ವನವಾಸಿಗರ ಅಭ್ಯುದ್ಯಯಕ್ಕಾಗಿ ಶಿಕ್ಷಣ, ಆರೋಗ್ಯ, ಕೃಷಿ, ಮಹಿಳಾ ಸಶಕ್ತಿಕರಣ, ನಿಸರ್ಗ ಸಂರಕ್ಷಣೆ ಮುಂತಾದ ಕ್ಷೇತ್ರಗಳಲ್ಲಿ ಕಾರ್ಯನಿರ್ವಹಿಸುತ್ತಿದೆ. ಇವರು ನಿಸರ್ಗ ಸಂಪತ್ತನ್ನು ಉಳಿಸಲು ಒಂದು ಲಕ್ಷಕ್ಕಿಂತ ಅಧಿಕ ಗಿಡಗಳನ್ನು ನೆಟ್ಟಿದ್ದಕ್ಕಾಗಿ ಇವರಿಗೆ ಇಂದಿರಾ ಗಾಂಧಿ ವಿಕಾಸ ಪ್ರಿಯದರ್ಶಿನಿ ಪ್ರಶಸ್ತಿಯನ್ನು ನೀಡಿ ಗೌರವಿಸಲಾಗಿದೆ. ಇವರ ಸಾಮಾಜಿಕ ಸೇವೆಗಾಗಿ ಇನ್ನೂ ಅನೇಕ ಪ್ರಶಸ್ತಿಗಳು ಇವರನ್ನು ಹುಡುಕಿಕೊಂಡು ಬಂದಿವೆ.

ಇಂತಹ ಹೋರಾಟಗಾರರು ಈ ವಿದ್ಯಾರ್ಥಿ ಆಂದೋಲನಕ್ಕೆ ಬೆನ್ನೆಲಬು ಮತ್ತು ಪ್ರೇರಕ ಶಕ್ತಿಯಾಗಿರುವುದು ಈ ವಿದ್ಯಾರ್ಥಿ ಹೋರಾಟ ಸೂಕ್ತ ದಿಕ್ಕಿನಲ್ಲಿ ಸಾಗಿ ನಿಶ್ಚಿತ ಫಲ ನೀಡುತ್ತದೆ ಎಂಬುದಕ್ಕೆ ಸಾಕ್ಷಿ.

ಹೋರಾಟದ ಹಾದಿ:

ಜುಲೈ ೨೭ ರಂದು ದೇಶದ ಎಲ್ಲಾ ಜಿಲ್ಲಾ ಕೇಂದ್ರಗಳಲ್ಲಿ ಏಕಕಾಲಕ್ಕೆ ಬೃಹತ್ ರ‍್ಯಾಲಿಗಳನ್ನು ಆಯೋಜಿಸಿ ವಿದ್ಯಾರ್ಥಿಗಳು ತಮ್ಮ ಶಕ್ತಿ ಪ್ರದರ್ಶಿಸಿ ಭ್ರಷ್ಟಾಚಾರದ ವಿರುದ್ಧ ಕಠಿಣ ಕಾನೂನು, ಕಪ್ಪು ಹಣ ದೇಶಕ್ಕೆ ತರುವುದು, ಶಕ್ತಿಶಾಲಿ ಲೋಕಪಾಲ ಕಾಯ್ದೆಯನ್ನು ಜಾರಿಗೆ ತರುವುದು ಮುಂತಾದ ಬೇಡಿಕೆಗಳನಿಡಲಿದ್ದಾರೆ.

ನಂತರದ ದಿನಗಳಲ್ಲಿ ಈ ಹೋರಾಟವನ್ನು ತಾಲೂಕು ಮಟ್ಟ, ವಿಶ್ವವಿದ್ಯಾಲಯ ಮತ್ತು ಕಾಲೇಜು ಮಟ್ಟದಲ್ಲಿ ಆಯೋಜಿಸಲಾಗುತ್ತದೆ.

ನಂತರ ವಿದ್ಯಾರ್ಥಿಗಳು ದಿಲ್ಲಿ ಚಲೋ ಕರೆ ಕೊಟ್ಟಾಗ ದೇಶಾದ್ಯಂತ ಎಲ್ಲ ವಿದ್ಯಾರ್ಥಿಗಳು ದೇಶದ ರಾಜಧಾನಿ ದೇಹಲಿಯಲ್ಲಿ ಸರ್ಕಾರದ ವಿರುದ್ಧ ಪ್ರತಿಭಟನೆ ನಡೆಸಲಿದ್ದಾರೆ.

ಇದರ ಜೊತೆ ಜೊತೆಗೆ ಭ್ರಷ್ಟಾಚಾರದ ವಿರುದ್ಧ ಕಾನೂನು ಸಮರ, ವೈಚಾರಿಕ ಸಮರವೂ ನಡೆಯಲಿದೆ.

ಮೊದಲ ಹಂತದಲ್ಲಿ ಈ ಹೋರಾಟದಲ್ಲಿ ವಿದ್ಯಾರ್ಥಿಗಳು ಮಾತ್ರ ಪಾಲ್ಗೊಳ್ಳಲಿದ್ದು, ಮುಂದಿನ ಹಂತಗಳಲ್ಲಿ ಇದು ರೈತರು, ಕಾರ್ಮಿಕರು ಮುಂತಾದವರನ್ನು ಒಳಗೊಂಡ ಸಾರ್ವಜನಿಕ ಹೋರಾಟವಾಗಲಿದೆ.

ಈ ಎಲ್ಲ ಹೋರಾಟಗಳು ಶಾಂತಿಯುತವಾಗಿ ನಡೆಯಲಿದ್ದು, ಈ ಹೋರಾಟದ ರೂಪುರೇಷೆಗಳನ್ನು ಈಗಾಗಲೇ ಸಿದ್ಧಪಡಿಸಲಾಗಿದ್ದು, ರಾಜ್ಯವಾರು, ಜಿಲ್ಲಾವಾರು ಜವಾಬ್ಧಾರಿಯನ್ನು ಈಗಾಗಲೇ ನೀಡಲಾಗಿದೆ.

ಈ ಹೋರಾಟದಲ್ಲಿ ನಮ್ಮ ಕರ್ತವ್ಯವೇನು?

ನೀವು ವಿದ್ಯಾರ್ಥಿಗಳಾಗಿದ್ದರೆ: ನೀವು ಹತ್ತನೇ ತರಗತಿ ಮೇಲ್ಪಟ್ಟ ವಿದ್ಯಾರ್ಥಿಗಳಾಗಿದ್ದರೆ ನಿಮ್ಮದೇ ಹೋರಾಟವಾಗಿರುವ ಈ ಆಂದೋಲನದಲ್ಲಿ ಪಾಲ್ಗೊಳ್ಳಿ. ಅನೇಕ ವಿದ್ಯಾರ್ಥಿಗಳು ಭ್ರಷ್ಟಾಚಾರದ ವಿರುದ್ಧ ’ಪೆಸ್‌ಬುಕ್’, ’ಆರ್ಕೂಟ್‌ನಲ್ಲಿ’ ತಮ್ಮ ಸಿಟ್ಟನ್ನು ತೋರ್ಪಡಿಸಿಕೊಳ್ಳುತ್ತಾರೆ. ಆ ನಿಮ್ಮೆಲ್ಲ ಸಿಟ್ಟನ್ನು ಕಾರ್ಯಗತಗೊಳಿಸಲು ಇದೊಂದು ಗಂಭೀರ ವೇದಿಕೆ.

ನೀವು ಹಿರಿಯ ನಾಗರಿಕರಾಗಿದ್ದರೆ: ವಿದ್ಯಾರ್ಥಿಗಳನ್ನು ಈ ಹೋರಾಟದಲ್ಲಿ ಭಾಗವಹಿಸಲು ಪ್ರೇರೆಪಿಸಿ. ಈ ಹೋರಾಟ ಯಶಸ್ವಿಯಾಗಲು ನಿಮ್ಮ ತನು, ಮನ, ದನ ಅರ್ಪಿಸಿ.

ಪತ್ರಿಕಾ ಮಾದ್ಯಮಗಳ ಕಾರ್ಯ ಈ ನಿಟ್ಟಿನಲ್ಲಿ ಮಹತ್ತರವಾಗಿದೆ.

ನೀವು ಶಿಕ್ಷಕರಾಗಿದ್ದರೆ ಭ್ರಷ್ಟಾಚಾರದ ವಿರುದ್ಧ ನಿಮ್ಮ ವಿದ್ಯಾರ್ಥಿಗಳನ್ನು ಜಾಗೃತಗೊಳಿಸಿ.

ಒಟ್ಟಿನಲ್ಲಿ ಇದೊಂದು ಭ್ರಷ್ಟಾಚಾರ ವಿರುದ್ಧದ ಸಾರ್ವತ್ರೀಕ ಮತ್ತು ಅಂತೀಮ ಹೋರಾಟವಾಗಲಿದೆ. ವಿದ್ಯಾರ್ಥಿ ಶಕ್ತಿಯ ಈ ಗುಡುಗಿನಿಂದ ವಿಧಾನ ಸಭೆ ಮತ್ತು ಲೋಕಸಭೆಗಳು ನಡುಗಲಿವೆ.

Article by  ಬಸವರಾಜ ಚ. ಕುಳಲಿ

 

Leave a Reply

Your email address will not be published.

This site uses Akismet to reduce spam. Learn how your comment data is processed.