Mirage 2000, picture from the internet

Mirage 2000, picture from the internet

ಪಾಕಿಸ್ತಾನವು ಭಾರತದೊಡನೆ ನಡೆಸಿದ ಯುದ್ಧಗಳೆಲ್ಲದರಲ್ಲೂ ಸೋತಿದ್ದರೂ, ಭಾರತವು ತನ್ನ ಭೂಮಿಯನ್ನು ಕಳೆದುಕೊಂಡಿರುವುದು ಒಂದು ವಿಪರ್ಯಾಸ. ಇತರ ದೇಶಗಳನ್ನು ಅತಿಕ್ರಮಿಸದ, ಇತರರ ತಂಟೆಗೆ ಹೋಗದ ಭಾರತದ ಸ್ವಭಾವವನ್ನು ಪಾಕ್ ಮತ್ತು ಚೀನಾ ದೇಶಗಳು ದುರುಪಯೋಗಪಡಿಸಿಕೊಂಡಿವೆ. ಮತ್ತೂ ಮುಂದುವರೆದ ಪಾಕಿಸ್ತಾನವು ಭಯೋತ್ಪಾದನೆಯನ್ನು ಪೋಷಿಸುತ್ತಾ ಭಾರತವನ್ನು ಕಟ್ಟಿಹಾಕುವ ಯತ್ನ ನಡೆಸಿದೆ. ಭಾರತವನ್ನು ನೇರ ಯುದ್ಧದಲ್ಲಿ ಎದುರಿಸಲಾಗದ ವಾಸ್ತವತೆ ಮತ್ತು ಭಾರತವು ಗಡಿದಾಟಲಾರದೆಂಬ ವಿಶ್ವಾಸದಿಂದ ಪಾಕಿಸ್ತಾನವು ಭಯೋತ್ಪಾದನೆಯನ್ನು ತನ್ನ ಅಘೋಷಿತ ನೀತಿಯನ್ನಾಗಿಸಿಕೊಂಡಿರುವುದು ಬಹಿರಂಗ ಸತ್ಯ. ಉರಿ ಸೈನ್ಯಶಿಬಿರದ ಮೇಲೆ ನಡೆದ ದಾಳಿಯ ನಂತರದಲ್ಲಿ ಯೋಜಿತವಾಗುತ್ತಿದ್ದ ಇತರ ಸಂಭಾವ್ಯ ದಾಳಿಗಳನ್ನು ತಡೆಯಲು ಭಾರತ ನಿಯಂತ್ರಣ ಗೆರೆಯನ್ನು ದಾಟಿ ಸರ್ಜಿಕಲ್ ದಾಳಿ ನಡೆಸಿತು. ಈಗ, ಪಾಕಿಸ್ತಾನದೊಳಗಿನ ಬಾಲಕೋಟ, ಆಕ್ರಮಿತ ಕಾಶ್ಮೀರದ ಚಕೋತಿ ಮತ್ತು ಮುಜಾಫರಾಬಾದ್ ನಲ್ಲಿ ಭಾರತದ ಸೈನ್ಯ ನಡೆಸಿದ ಕಾರ್ಯಾಚರಣೆ ಭಾರತ-ಪಾಕಿಸ್ತಾನಗಳ ಮಧ್ಯದ ಸಂಬಂಧಗಳನ್ನು ಪೂರ್ಣವಾಗಿ ಬದಲಾಯಿಸಿದೆ. ಪುಲ್ವಾಮಾ ದಾಳಿಯ ರೂವಾರಿಗಳೂ, ಅವರ ಅನುಚರರೂ ಅಡಗಿದ್ದ ಪಾಕಿಸ್ತಾನದ ಆಳದ ಬಾಲಕೋಟದಲ್ಲಿ ವಿಮಾನದಾಳಿಯ ರೂಪದ ಮತ್ತೊಂದು ಸರ್ಜಿಕಲ್ ದಾಳಿ ಭಾರತದ ಭಯೋತ್ಪಾದನಾ ವಿರೋಧೀ ನೀತಿಯನ್ನು ಮತ್ತಷ್ಟು ನಿಚ್ಚಳಗೊಳಿಸಿದೆ. ಪಾಕಿಸ್ತಾನವು ಒಂದು ಹೊಸ ಭಾರತವನ್ನು ನೋಡುತ್ತಿದ್ದರೆ, ಭಾರತವು ತನ್ನಲ್ಲೇ ಹೊಸತನವನ್ನು ಕಂಡುಕೊಳ್ಳುತ್ತಿದೆ. ಪ್ರಪಂಚದ ಹಲವಾರು ದೇಶಗಳು ಭಾರತದ ಕ್ರಮವನ್ನು ಬೆಂಬಲಿರುವುದಷ್ಟೇ ಅಲ್ಲದೇ, ಪ್ರತಿಕ್ರಿಯಾತ್ಮಕ ದಾಳಿಗಳನ್ನು ನಡೆಸದಂತೆ ಪಾಕಿಸ್ತಾನದ ಮೇಲೆ ಒತ್ತಡ ಹೇರಿದ್ದಾರೆ.

ಪ್ರಸ್ತುತ ವಿಮಾನ ದಾಳಿಯ ನಿರ್ಧಾರವು ಸುಲಭವಾಗಿರಲಿಲ್ಲ. 1971 ರ ಯುದ್ಧದ ನಂತರ ಭಾರತವು ಸುಮಾರು 48 ವರ್ಷಗಳ ಕಾಲ ಪಾಕಿಸ್ತಾನದ ವಾಯುಪ್ರದೇಶವನ್ನು ಪ್ರವೇಶಿಸರಲಿಲ್ಲ. ಭಾರತದ ನೆಲದಲ್ಲಿ ಪದೇ ಪದೇ ನಡೆಯುತ್ತಿದ್ದ / ನಡೆಯಬಹುದಾಗಿದ್ದ ಭಯೋತ್ಪಾದಕ ದಾಳಿಗಳ ಸಂಚುಕೋರರು ಪಾಕಿಸ್ತಾನದಲ್ಲಿ ಅಡಗಿದ್ದು ಅವರನ್ನು ತಡೆಯಲೇ ಬೇಕಾದ ಅಗತ್ಯ ಭಾರತಕ್ಕಿತ್ತು. ಈ ರೀತಿ ತಡೆಯುವಲ್ಲಿ ಪಾಕಿಸ್ತಾನದ ನಾಗರೀಕರ ಮತ್ತು ಕಾಶ್ಮೀರದ ಮುಸ್ಲಿಮರ ಸಾವು-ನೋವುಗಳನ್ನು ತಡೆಯಬೇಕಿತ್ತು. ಪಾಕಿಸ್ತಾನವನ್ನು ಪ್ರವೇಶಿಸಿದರೆ ಅತಿಕ್ರಮಣದ ಅಪಾದನೆಯನ್ನು ಎದುರಿಸಬೇಕಿತ್ತು. ಪಾಕಿಸ್ತಾನವು ಇದೇ ನೆಪದಲ್ಲಿ ನಡೆಸಬಹುದಾಗಿದ್ದ ಪ್ರತಿದಾಳಿಯನ್ನು ಎದುರಿಸಬೇಕಿತ್ತು. ಭಯೋತ್ಪಾದಕರನ್ನು ನಿಯಂತ್ರಿಸುವ ಪ್ರಯತ್ನದಲ್ಲಿ ಆಗಬಹುದಾದ ಭಾರತದ ಸೈನಿಕರ ಸಾವು-ನೋವುಗಳ ಜವಾಬ್ದಾರಿ ಹೊರಬೇಕಾದ ಧೈರ್ಯ ತೋರಬೇಕಿತ್ತು. ವೈಮಾನಿಕ ದಾಳಿಯ ರೂಪದ ಸರ್ಜಿಕಲ್ ದಾಳಿ ಇವುಗಳಿಗೆಲ್ಲಾ ಉತ್ತರವಾಗಿತ್ತು. ಪುಲ್ವಾಮಾ ದಾಳಿಯ ನಂತರದಲ್ಲಿ ಪ್ರಧಾನಿ ಮೊದಲಾಗಿ ದೇಶದ ನಾಯಕತ್ವದಲ್ಲಿ ಒಂದು ಬಗೆಯ ವಿಷಾದ ಎದ್ದು ಕಾಣುತ್ತಿತ್ತು. ದೇಶದ ರಕ್ಷಣೆಯ ಬಗ್ಗೆ ದೃಢನಿಶ್ಚಯ ಇದ್ದೇ ಇತ್ತು. ಸರ್ಕಾರದ ಪ್ರತಿಕ್ರಿಯೆ ಮತ್ತು ನಿರ್ಧಾರಗಳಲ್ಲಿ ಖಚಿತತೆ ಇತ್ತು. ದಾಳಿಯ ಹಿಂದಿನ ದಿನಗಳಲ್ಲಿ ಪ್ರಧಾನ ಮಂತ್ರಿಗಳಾದ ಮೋದಿಯವರು ಗಂಗಾಸ್ನಾನಮಾಡಿ ಕೃತಜ್ಞತಾ ಪೂರ್ವಕವಾಗಿ ಸ್ವಚ್ಛತಾ ಕಾರ್ಮಿಕರ ಪಾದಗಳನ್ನು ಸ್ವಚ್ಛಗೊಳಿಸಿದುದು ಅಧ್ಯಾತ್ಮಿಕವಾಗಿ ಮಹತ್ವವುಳ್ಳ ಕ್ರಿಯೆಗಳೆಂದೂ, ದೇಶದ ರಕ್ಷಣೆಯ ಉದ್ದೇಶದ ನಿರ್ಧಾರಗಳ ಯಶಸ್ವಿಗಾಗಿ ಮಾಡಿದ ಪ್ರಾರ್ಥನೆಗಳೆಂದೂ ಸಾರ್ವಜನಿಕ ವಲಯಗಳಲ್ಲಿ ಚರ್ಚೆಯಾಗುತ್ತಿದೆ. ದೇಶದ ರಾಜಕೀಯ, ಸಾಮಾಜಿಕ, ಸಾಂಸ್ಕೃತಿಕ, ಸೈನಿಕ ವಲಯಗಳಲ್ಲಿ ಬಹು ಪ್ರಶಂಸೆಗೆ ಪಾತ್ರವಾಗಿರುವ ವಾಯುದಾಳಿಯು ಭಾರತೀಯ ಸಂಸ್ಕೃತಿಗೆ ಅನುಗುಣವಾಗಿದೆ ಎಂದು ಆರೆಸ್ಸೆಸ್ ನ ಸರಕಾರ್ಯವಾಹ ಭಯ್ಯಾಜಿ ಜೋಶಿ ಹೇಳಿದ್ದಾರೆ.

ತನ್ನ ವಾಯುಪ್ರದೇಶವನ್ನು ಉಲ್ಲಂಘಿಸಿದ ಕಾರಣವನ್ನು ನೆಪವಾಗಿಟ್ಟುಕೊಂಡು ಭಾರತದ ಮೇಲೆ ಪ್ರತಿದಾಳಿ ನಡೆಸುವ ಬೆದರಿಕೆ ಹಾಕಿರುವುದು ಪಾಕಿಸ್ತಾನದ ಭಯೋತ್ಪಾದಕ ಬೆಂಬಲದ ನಿಲುವನ್ನು ಬಹಿರಂಗಗೊಳಿಸಿದೆ. ಭಾರತವು ಸುರಕ್ಷಿತ ಹಸ್ತಗಳಲ್ಲಿದೆ ಎಂಬ ಪ್ರಧಾನಿ ಮೋದಿಯವರ ಮಾತುಗಳು ಭಾರತದ ಸ್ವಯಂರಕ್ಷಣೆಯ ನಿರ್ಧಾರವನ್ನು ತೋರಿಸುತ್ತಿದೆ. ಚೀನಾ ದೇಶವು ಪಾಕಿಸ್ತಾನಕ್ಕೆ ಸಂಯಮದ ಸಲಹೆ ನೀಡಿದೆ ಎಂಬ ವರದಿಗಳಿವೆ. ಹೊಸ ಭಾರತದ ಉದಯದ ಹಿನ್ನೆಲೆಯಲ್ಲಿ ಪಾಕಿಸ್ತಾನದಲ್ಲಿ ತನ್ನ ಹೂಡಿಕೆಯ ಸುರಕ್ಷತೆಯ ಬಗೆಗಿನ ಚಿಂತೆ ಈ ಸಲಹೆಯ ಹಿಂದಿನ ಕಾರಣಗಳಲ್ಲಿ ಒಂದು ಎನ್ನಲಾಗುತ್ತಿದೆ.

– ಶ್ರೀ ಎಂ ಕೆ ಶ್ರೀಧರನ್,

ವಿಶ್ವ ಸಂವಾದ ಕೇಂದ್ರ

 

Leave a Reply

Your email address will not be published.

This site uses Akismet to reduce spam. Learn how your comment data is processed.