Ananda Coomaraswamy

(ಈ ಲೇಖನದಲ್ಲಿ ಉಲ್ಲೇಖಿಸಿರುವ ಸ್ವಾಮಿಯವರ ಪುಸ್ತಕಗಳ ಪಿಡಿಎಫ಼್ ಅನ್ನು ಪುಸ್ತಕದ ಹೆಸರಿನ ಮೇಲೆ ಕ್ಲಿಕ್ಕಿಸಿ ಡೌನ್ಲೋಡ್ ಮಾಡಿಕೊಳ್ಳಬಹುದು)

ಆಗಸ್ಟ್ ೨೨ ಆನಂದ ಕುಮಾರಸ್ವಾಮಿಯವರು ಹುಟ್ಟಿದ ದಿನ. ಸನಾತನ ಧರ್ಮ ಮತ್ತು ಭಾರತೀಯ ಕಲಾತತ್ತ್ವವನ್ನು ವಿದೇಶಿ ವಿದ್ವತ್ ವಲಯಕ್ಕೆ ಅವರಷ್ಟು ಪರಿಣಾಮಕಾರಿಯಾಗಿ ತಲುಪಿಸಿದವರು ವಿರಳ.  ಹದಿನೇಳನೇ ವಯಸ್ಸಿನಿಂದಲೆ ಬರವಣಿಗೆಯಲ್ಲಿ ತೊಡಗಿದ್ದ ಕುಮಾರಸ್ವಾಮಿ ಅವರು, ತಮ್ಮ ಜೀವನದುದ್ದಕ್ಕೂ ನಿರಂತರವಾಗಿ ಲೇಖನ ಕೃಷಿ ಮಾಡಿದವರು. ಭಾರತೀಯತೆಯ ಅನುಸಂಧಾನ ಮಾಡಲು ಹಲವು ವಲಯಗಳಲ್ಲಿ ಆಸಕ್ತಿ ವ್ಯಕ್ತವಾಗುತ್ತಿರುವ ಇಂದಿನ ದಿನಮಾನದಲ್ಲಿ ಕುಮಾರಸ್ವಾಮಿಯವರ ಓದು ಬಹಳ ಉಪಕಾರಿಯಾಗುತ್ತದೆ.

ಕುಮಾರಸ್ವಾಮಿಯವರ ಚಿಂತನೆಯನ್ನು ತಿಳಿಯಬಯಸುವವರಿಗೆ, ಕನ್ನಡದಲ್ಲಿ ಕೆಲವು ಪುಸ್ತಕಗಳು ಬಂದಿವೆ.

ಬಿ. ಶ್ರೀನಿವಾಸರಾವ್ ಅವರ ’ಆನಂದ ಕುಮಾರಸ್ವಾಮಿ’ (ಭಾರತ-ಭಾರತಿ ಪುಸ್ತಕಮಾಲೆ)

ಸಾ. ಕೃ. ರಾಮಚಂದ್ರ ರಾಯರ ’ಕಲಾತತ್ತ್ವಮಹರ್ಷಿ ಆನಂದ ಕುಮಾರಸ್ವಾಮಿ

ಜಿ. ಬಿ. ಹರೀಶ ರವರ ’ಕಲಾಯೋಗಿ ಆನಂದ ಕುಮಾರಸ್ವಾಮಿ

ಇವು ಕುಮಾರಸ್ವಾಮಿಯವರ ಕುರಿತು ತಿಳಿದುಕೊಳ್ಳಲು ಸಹಾಯಕವಾಗಿವೆ.

ಅಭಿನವ ಪ್ರಕಾಶನದ, ವಿವಿಧ ಲೆಖಕರು ಬರೆದಿರುವ, ’ಆನಂದ ತಾಂಡವ’ ಪುಸ್ತಕ ಸ್ವಾಮಿಯವರ ಚಿಂತನೆಗಳ ಬಗ್ಗೆ ಇಣುಕು ನೋಟ ನೀಡುತ್ತದೆ.

ಎಸ್. ಎಲ್. ಭೈರಪ್ಪನವರ ಕಲಾತತ್ತ್ವ ದ ಕುರಿತಾದ ಬರಹಗಳಲ್ಲಿ ಕುಮಾರಸ್ವಾಮಿಯವರ ಚಿಂತನೆಗಳು ಕಾಣಿಸಿಕೊಳ್ಳುತ್ತವೆ. ಅಲ್ಲದೆ ಅವರ ’ಸತ್ಯ ಮತ್ತು ಸೌಂದರ್ಯ’ ಪುಸ್ತಕದ ’ಕಲೆಯಲ್ಲಿ ಸಾದೃಶ್ಯ’ ಎಂಬ ಅಧ್ಯಾಯವು ’ಕುಮಾರಸ್ವಾಮಿಯವರು ಕ್ರೋಢೀಕರಿಸಿರುವ ವಿಷಯವನ್ನೇ ಸಂಗ್ರಹವಾಗಿ ಹೇಳುತ್ತದೆ’ ಎಂದು ಅವರೇ ಬರೆದಿದ್ದಾರೆ.

ಕುಮಾರಸ್ವಾಮಿ ಮತ್ತು ಐ. ಬಿ. ಹಾರ್ನರ್ ಸೇರಿ ಬರೆದ “living thoughts of gotama the Buddha” ಪುಸ್ತಕವನ್ನು ಜಿ. ಸಚ್ಚಿದಾನಂದನ್ ರವರು ಕನ್ನಡಾನುವಾದ ಮಾಡಿದ್ದಾರೆ. ಇದನ್ನು ನ್ಯಾಷನಲ್ ಬುಕ್ ಟ್ರಸ್ಟ್ 1968 ರಲ್ಲಿ ‘ಗೌತಮ ಬುದ್ಧ‘ ಎಂಬ ಹೆಸರಿನಲ್ಲಿ ಪ್ರಕಟಿಸಿದೆ.

ಇವಲ್ಲದೆ ಕೆಲವು ಬಿಡಿಲೇಖನಗಳು ಕೂಡ ಕುಮಾರಸ್ವಾಮಿಯವರ ಬಗೆಗೆ ಬಂದಿವೆ.

*******

ಆನಂದ ಕುಮಾರಸ್ವಾಮಿಯವರ ಬರಹಗಳು ಕಠಿಣ ಎಂಬ ಪ್ರತೀತಿ ಇದೆ.

ಹಾಗೇನಿಲ್ಲ, ಅವೆಲ್ಲ ಪ್ರೌಢ ಪ್ರಬಂಧಗಳು ಎಂಬುದು ನಿಜ, ಆದರೆ ಸ್ವಲ್ಪ ಗಮನವಿಟ್ಟು ಓದಿದರೆ ಎಲ್ಲಾ ವಿಷಯಗಳೂ ಸರಳವಾಗಿಯೇ ಇರುವುದು ತಿಳಿಯುತ್ತದೆ.

ವಿಜ್ಞಾನದ ಓದಿನ ಹಿನ್ನೆಲೆಯಿಂದ ಬಂದ ಕಾರಣ, ಪರಿಕಲ್ಪನೆಗಳನ್ನು ಸ್ಫುಟವಾಗಿ ವಿವರಿಸುವುದರಲ್ಲಿ ಮತ್ತು ವ್ಯಾಖ್ಯಾನಿಸುವುದರಲ್ಲಿ ಕುಮಾರಸ್ವಾಮಿ ಅವರು ಪಂಟ ಎಂದೇ ಹೇಳಬೇಕು.ಕೆಲವೊಮ್ಮೆ ಅವರು ಪಾರಿಭಾಷಿಕ ಪದಗಳಿಗೆ ಕೊಡುವ ವ್ಯಾಖ್ಯಾನ ಇಡೀ ಲೇಖನದಷ್ಟೇ ಮಹತ್ತ್ವದ್ದಾಗಿರುತ್ತವೆ.

ದ್ರವ್ಯ ಮತ್ತು ಚೇತನಗಳ ಅವಿನಾಭಾವವನ್ನು ಹೇಳಲು each is both’ ಎಂಬ ಅದ್ಭುತ  ಪದಪುಂಜ ಬಳಸುತ್ತಾರೆ.

ರಸ ಎಂಬುದನ್ನು aesthetic emotion’ ಎನ್ನುತ್ತಾರೆ.

ಕಲೆ ಎಂದರೆ symbolic expression of  subjective experience’ ಎಂದು ವ್ಯಾಖ್ಯಾನಿಸುತ್ತಾರೆ. ಕಲೆ ಎಂದರೇನು ಎಂಬುದಕ್ಕೆ ಇದಕ್ಕಿಂತ ನಿಷ್ಕೃಷ್ಟ ಲಕ್ಷಣ ಕೊಡುವುದು ಕಷ್ಟಸಾಧ್ಯ.

ಕಲಾನುಭವದಲ್ಲಿ ಉತ್ತಮ ಕನಿಷ್ಟವೆಂಬುದಿಲ್ಲ, ರಸಾನುಭವವೀವ ಎಲ್ಲ ಕಲೆಗಳೂ ಸಮಾನವೇ ಎಂಬುದು ಸಾಮಾನ್ಯವಾಗಿ ಎಲ್ಲರೂ ಒಪ್ಪುವ ಮಾತು. ಸಂಕೀರ್ಣ ಕಲಾಕೃತಿಯೊಂದು ಕಲಾಸೋಪಾನದಲ್ಲಿ ಸರಳ ಕಲಾಕೃತಿಗಿಂತ ಮೇಲೇನೂ ಇರುವುದಿಲ್ಲ. ಕುಮಾರಸ್ವಾಮಿಯವರು ಇದನ್ನು ನಿರೂಪಿಸಲು ರ‍ೇಖಾಗಣಿತದ ಉದಾಹರಣೆಯನ್ನು ತೆಗೆದುಕೊಳ್ಳುತ್ತಾರೆ. “ಸಣ್ಣ ವೃತ್ತ ಮತ್ತು ದೊಡ್ಡ ವೃತ್ತಗಳ ನಡುವೆ ವ್ಯತ್ಯಾಸವಿರುವುದು ಗಾತ್ರದಲ್ಲೇ ಹೊರತು ವೃತ್ತತ್ತ್ವದಲ್ಲಲ್ಲ. ಎರಡೂ ವೃತ್ತಗಳೇ.”

ಇವು ಸ್ವಾಮಿಯವರ ಬರಹಗಳ ಸರಳತೆ ಮತ್ತು ಸ್ಪಷ್ಟತೆಗೆ ಒಂದೆರಡು ಉದಾಹರಣೆಗಳಷ್ಟೆ.

********

ಅವರ ಕೃತಿಗಳನ್ನೇ ನೇರವಾಗಿ ಓದಬಯಸುವವರು, ಸ್ವಾಮಿಯವರ ಅತಿ ಜನಪ್ರಿಯ ಕೃತಿ “The dance of shiva ” ದಿಂದ ಶುರು ಮಾಡಬಹುದು.

The Dance of Shiva pdf :

https://drive.google.com/file/d/1IoKyk1OTo5ovxrMBGH2qwHiRIXInS_YR/view?usp=sharing

ಈ ಪುಸ್ತಕ ಸ್ವಾಮಿಯವರ ಉಳಿದ ಬರವಣಿಗೆಗಳಿಗೆ ಮುಂದೀವಿಗೆಯಂತೆ.

ಅವರ ನಂತರದ ಹಲವು ಕೃತಿಗಳು ಘನವಾಗುತ್ತಾ ಹೋಗುತ್ತವಾದರೂ ಅವೆಲ್ಲದರ ಬೀಜರೂಪ ಈ ಪುಸ್ತಕದ ಲೇಖನಗಳಲ್ಲಿವೆ.

ಭಾರತೀಯತೆಯೇ ಜಗತ್ತಿಗೆ ಭಾರತದ ಕೊಡುಗೆ ಎಂಬ ಸರಳ ಸೂತ್ರದ ಲೇಖನದೊಂದಿಗೆ ಪ್ರಾರಂಭವಾಗುವ ಈ ಹೊತ್ತಗೆಯಲ್ಲಿ ಸನಾತನ ಮೌಲ್ಯಗಳ ಅನುಸಂಧಾನವಿದೆ. ಆ ಸನಾತನ ಮೌಲ್ಯಗಳೇ ಭಾರತೀಯತೆ ಮತ್ತು ಆ ಮೌಲ್ಯ ಯಾವುದೇ ಪ್ರಾಮಾಣಿಕ ಚಿಂತಕನಿಗೆ ದೇಶಕಾಲ ನಿರಪೇಕ್ಷವಾಗಿ ಸಾಕ್ಷಾತ್ಕಾರವಾಗುತ್ತವೆ ಎಂಬುದನ್ನು ತಮ್ಮೆಲ್ಲಾ ಬರವಣಿಗೆಗಳಲ್ಲಿ  ತೋರಿಸುವ ಪ್ರಯತ್ನ ಮಾಡಿದ್ದಾರೆ ಕುಮಾರಸ್ವಾಮಿ. ಮುಖ್ಯವಾಗಿ ವಿದೇಶಿ ವಿದ್ವಾಂಸರನ್ನು ಕಣ್ಣ ಮುಂದಿಟ್ಟುಕೊಂಡು ಇವುಗಳನ್ನು ಬರೆದಿದ್ದಾರಾದರೂ ನಮ್ಮ ಓದಿಗೂ ಇವು ಒದಗುತ್ತವೆ.

ಇದರಲ್ಲಿ ಭಾರತೀಯತೆ, ಕಲಾತತ್ತ್ವ ಮುಂತಾದವಕ್ಕೆ ಸಂಬಂಧಿಸಿದ ಹದಿನಾಲ್ಕು ಲೇಖನಗಳಿವೆ.

ಈ ವಿಷಯಗಳ ಕುರಿತಾಗಿಯೇ ಮುಂದೆ ಹಲವು ಪುಸ್ತಕಗಳನ್ನು ಸ್ವಾಮಿಯವರು ಬರೆದರು. ಅವುಗಳಲ್ಲಿ ಬಹುಮುಖ್ಯವಾದದ್ದು ಕಲಾತತ್ತ್ವದ ಕುರಿತಾದ ಅವರ ಬರಹಗಳು.

ಕಲಾತತ್ತ್ವದ ಬಗ್ಗೆ ಅವರು ಬರೆದ ನೂರಾರು ಲೇಖನಗಳಲ್ಲಿ ಯಾವುದನ್ನು ಓದಬೇಕು ಎಂಬುದಕ್ಕೆ ತಮ್ಮ ಕೊನೆಗಾಲದ ಹೊತ್ತಿಗೆ ಮರುಪ್ರಕಟವಾದ “figures of speech or figures of thought”  ಪುಸ್ತಕದ ಒಂದು ಆವೃತ್ತಿಗೆ ಮುನ್ನುಡಿ ಬರೆಯುತ್ತಾ ಸ್ವಾಮಿಯವರೇ ಒಂದು ಸಲಹೆ ನೀಡಿದ್ದಾರೆ.

This is not a systemic treatise: each of the seventeen chapters deals with some particular aspect or application of the traditional theory of art, and is complete in itself; a certain amount of repetition has been therefore inevitable. But if not systemic, the subject matter of the whole is consistently one and the same, and no other than that of my “Christian and oriental philosophy of art ” And ” transformation of nature in art “.  And I think I may say that whoever makes use of these three books and of the sources referred to in them will have a fairly complete view of the doctrine about art that the greater part of mankind has accepted from prehistoric times until yesterday.

figures of speech or figures of thought pdf :

https://drive.google.com/file/d/1zmqEZJDAiP83toQWBXSKsmgCiMppwO14/view?usp=sharing

Christian and oriental philosophy of art pdf :

https://drive.google.com/file/d/1mESyO8xXk1aIOUHzQqRYEPZt9hSGcGEB/view?usp=sharing

transformation of nature in art pdf :

https://drive.google.com/file/d/1OBOTfMlymdhAvT6egi993NWAW4chNiyQ/view?usp=sharing

ಹಾಗಾಗಿ ಮೇಲೆ ಹೆಸರಿಸಿರುವ ಮೂರು ಪುಸ್ತಕಗಳ (ಮತ್ತು ಅವುಗಳಲ್ಲಿ ಉಲ್ಲೇಖಿತ ಗ್ರಂಥಗಳ) ಅಧ್ಯಯನ ಮಾಡಿದರೆ, ಆದಿಕಾಲದಿಂದ ಜಗತ್ತಿನ ಬಹುಪಾಲು ಜನಾಂಗಗಳು ಒಪ್ಪಿಕೊಂಡು ಬಂದಿರುವ ಕಲಾಸಿದ್ಧಾಂತದ ಅವಲೋಕನ ಮಾಡಿದಂತೆ.

(ಈ ಮಾತುಗಳನ್ನು ಓದಿದಾಗ, ಇಷ್ಟೇ ಸಾಕಾ? ಎಂಬ ಭಾವ ಬರಬಹುದು. ಆದರೆ ಕುಮಾರಸ್ವಾಮಿಯವರು ತಮ್ಮ ಬರಹಗಳಲ್ಲಿ ಅನೇಕ ಉಲ್ಲೇಖಗಳನ್ನು ಮಾಡಿದ್ದಾರೆ. ಅಲ್ಲದೆ ಅಡಿಟಿಪ್ಪಣಿಗಳಲ್ಲೆಲ್ಲಾ ಬೇರೆಬೇರೆ ಸಂಸ್ಕೃತಿಯ ಮೂಲ ಗ್ರಂಥಗಳನ್ನು ಉದ್ಧರಿಸಿದ್ದಾರೆ. ಇದನ್ನೆಲ್ಲಾ ಓದುವುದೆಂದರೆ ಈ ವಿಷಯದಲ್ಲಿ ಸಮಗ್ರವಾದ ಅಧ್ಯಯನ ನಡೆಸಿದಂತೆ)

ಇನ್ನು ವಿಷಯಾಧಾರಿತವಾಗಿ ಕುಮಾರಸ್ವಾಮಿಯವರ ಚಿಂತನೆಯ ತುಣುಕುಗಳನ್ನು ಓದಬಯಸುವವರಿಗೆ,  ದೊರೈ ರಾಜ ಅವರು ” wisdom of ananda coomaraswamy” ಎಂಬ ಪುಸ್ತಕವನ್ನು ಸಂಕಲಿಸಿದ್ದಾರೆ. ಇದು ಸ್ವಾಮಿಯವರನ್ನು ಹೊಸದಾಗಿ ಓದಲು ಶುರುಮಾಡುವವರಿಗೆ ಸುಲಭದ ಆಯ್ಕೆ.  ಸಮಾಜ, ಕಲೆ, ಸಂಸ್ಕೃತಿ, ಧರ್ಮ ಇತ್ಯಾದಿ ಹಲವು ವಿಷಯಗಳಲ್ಲಿ ಕುಮಾರಸ್ವಾಮಿಯವರ ಮಾತುಗಳನ್ನು ಅವರ ಬರಹಗಳಿಂದ ಆಯ್ದು ಕೊಟ್ಟಿದ್ದಾರೆ. ಮೂಲ ಲೇಖನದ ಪಟ್ಟಿಯನ್ನು ಕಡೆಯಲ್ಲಿ ನೀಡಿದ್ದಾರೆ. ಆಸಕ್ತರು ಯಾದೃಚ್ಛಿಕವಾಗಿ ಯಾವುದೇ ಪುಟವನ್ನು ಓದಿ ನಂತರ ಅದರ ಮೂಲ ಲೇಖನವನ್ನು ಓದಬಹುದು.

Wisdom of Ananda coomaraswamy PDF :

https://drive.google.com/file/d/1EycYp-_GaacwzxbwQ4k0ApW5Keb9UCQ7/view?usp=sharing

ಸ್ವಾಮಿಯವರ ಮಗ ರಾಮ ಕುಮಾರಸ್ವಾಮಿಯವರು ಸಂಪಾದಿಸಿರುವ “The Essential Ananda K. Coomaraswamy” ಎಂಬ ಗ್ರಂಥದಲ್ಲಿ, ಸ್ವಾಮಿಯವರ ಹಲವು ಪುಸ್ತಕಗಳಿಂದ ಆಯ್ದ ಇಪ್ಪತ್ತು ಲೇಖನಗಳಿವೆ. ಅವರು ಬೇರೆ ಬೇರೆ ಸಂದರ್ಭಗಳಲ್ಲಿ ಬರೆದ ಪುಸ್ತಕಗಳ ಲೇಖನಗಳು ಇಲ್ಲಿರುವುದರಿಂದ, ಅವರ ಒಟ್ಟು ಚಿಂತನೆಯ ಜಾಡು ಹಿಡಿಯಲು ಕೂಡ ಇದು ಉಪಯುಕ್ತ.

The Essential Ananda K. Coomaraswamy pdf: https://drive.google.com/file/d/1sGBC_6WGEYAFSGTPrj2CkGVpAapysmim/view?usp=sharing

ಒಟ್ಟಾರೆಯಾಗಿ ಕುಮಾರಸ್ವಾಮಿಯವರ ಬರಹಗಳು ಅಗಾಧ ಪ್ರಮಾಣದಲ್ಲಿವೆ (ಸಾವಿರದೈನೂರಕ್ಕೂ ಹೆಚ್ಚು ಲೇಖನಗಳು). ಅವರ ಬರಹಗಳ ವಿಸ್ತಾರವನ್ನು ತಿಳಿಯಲು ಈ ಲೇಖನವನ್ನು ನೋಡಿ.

ಹಾಗೆಂದು ಕುಮಾರಸ್ವಾಮಿಯವರು ಕುಡುಮಿಯಂತೆ ಬದುಕಿದವರಲ್ಲ. ಅವರ ಜೀವನ ಸಿನಿಮೀಯ ರೀತಿಯದ್ದಾಗಿತ್ತು. ಹಲವಾರು ದೇಶಗಳ ಅತ್ಯಂತ ಪ್ರಭಾವಿ ವ್ಯಕ್ತಿಗಳು ಅವರಿಗೆ ಗೆಳೆಯರಾಗಿದ್ದರು. ನಾಲ್ಕು ಮದುವೆಯಾಗಿದ್ದರು. ಐಶಾರಾಮಿ ಬದುಕು ಮತ್ತು ಅರ್ಥಿಕ ಸಂಕಷ್ಟ ಎರಡನ್ನೂ ನೋಡಿದ್ದರು. ಅವರ ಜೀವನದಲ್ಲಿ ನಡೆದ ಕೆಲವು ಘಟನೆಗಳಿಂದಲೇ(ವಿಚ್ಛೇದನ, ಮಗನ ಅಕಾಲಿಕ ಸಾವು ಇತ್ಯಾದಿ) ಅವರ ಕೊನೆಕೊನೆಯ ಬರಹಗಳು ಗಂಭೀರವಾದವು ಎಂದು ಕೆಲವು ವಿಮರ್ಶಕರು ಹೇಳಿದ್ದಾರೆ. ಅವರ ರಂಗಾದ ಜೀವನದ ಒಂದು ಝಲಕ್ಕನ್ನು ಈ ಲೇಖನದಲ್ಲಿ ನೋಡಬಹುದು.

ಒಟ್ಟಿನಲ್ಲಿ ತುಂಬು ಜೀವನ ನಡೆಸಿದ ಕುಮಾರಸ್ವಾಮಿ ತಮ್ಮ ಕೊನೆಗಾಲದಲ್ಲಿ ಭಾರತಕ್ಕೆ ಬಂದು ನೆಲೆಸಿ ಆಧ್ಯಾತ್ಮಿಕ ಜೀವನ ನಡೆಸಬೇಕೆಂದಿದ್ದರು. ಆದರೆ ೧೯೪೭ ರಲ್ಲಿ ಬೋಸ್ಟನ್ ನಲ್ಲಿ ಹಠಾತ್ತನೆ ಅವರ ಮರಣವಾಯಿತು. ಅವರ ಅಸ್ಥಿಯನ್ನು ಅವರ ಮಗ ಗಂಗೆಯಲ್ಲಿ ವಿಸರ್ಜಿಸಿದರು.

– ಅರುಣ್ ಭಾರದ್ವಾಜ್,ಚಿಂತಕರು

Leave a Reply

Your email address will not be published.

This site uses Akismet to reduce spam. Learn how your comment data is processed.