ಸಾಮಾಜಿಕ ತಾಣಗಳಲ್ಲಿ ಬರಗೂರರ ಸಾಹಿತ್ಯದ ಚರ್ಚೆ

ಇತ್ತೀಚೆಗೆ ಸಾಮಾಜಿಕ ಮಾಧ್ಯಮದಲ್ಲಿ ಬರಗೂರರ ಸಾಹಿತ್ಯದಲ್ಲಿರುವ ಸಮಸ್ಯಾತ್ಮಕ ಅಂಶಗಳ ಬಗ್ಗೆ ಚರ್ಚೆ ನಡೆಯಿತು. ಬರಗೂರರು ತಮ್ಮ ಬರಹಗಳ ಮೂಲಕ ದೇಶ-ಜನ-ಸಂಸ್ಕೃತಿ-ಸಂವಿಧಾನ ವಿರೋಧೀ ಚಿಂತನೆಗಳನ್ನು ಮಾಡುತ್ತಿದ್ದಾರೆ ಎಂಬುದು ಇದರ ಸಾರಾಂಶವಾಗಿತ್ತು.  ಇವುಗಳನ್ನು ಜನರು ಅರ್ಥೈಸಿಕೊಳ್ಳುವುದರೊಳಗಾಗಿ ಬರಗೂರರದು ಎಂದು ಹೇಳಲಾದ ‘ಸತ್ಯ ಸ್ಪಷ್ಟನೆ’ಯೊಂದು ಜಾಲತಾಣಗಳಲ್ಲಿ ಲಭ್ಯವಾಯಿತು. ಈ ಸ್ಪಷ್ಟನೆಯು ಬರಗೂರರ ‘ನಗರಗೀತೆ’ ಕಾದಂಬರಿಯ ಬಗ್ಗೆ ಲೇಖಕರ ವಿವರಣೆ ಆಗಿದ್ದು ಪ್ರಶ್ನಾರ್ಹವಾಗಿರುವ ಬರಹವನ್ನು ಲೇಖಕರು ‘ಸಾಹಿತ್ಯ’,  ‘ಸಾಮಾಜಿಕ ಕಾಳಜಿ’ ಮತ್ತು ‘ಸಹೃದಯತೆ’ಯ ನೆಲೆಗಳಲ್ಲಿ ಸಮರ್ಥಿಸಿಕೊಂಡಿದ್ದಾರೆ.

ಬರಗೂರರ ಸ್ಪಷ್ಟನೆ

ನಲವತ್ತು ವರ್ಷಗಳ ಹಿಂದೆ ಬರೆದ ‘ನಗರಗೀತೆ’ ಎಂಬ ಕಾದಂಬರಿಯ ಬಗ್ಗೆ ಈಗ ಆಕ್ಷೇಪ ಕೇಳಿಬಂದಿರುವುದು ಆಶ್ಚರ್ಯತಂದಿದೆ ಎಂದು ಹೇಳುತ್ತಾ ಪ್ರಾರಂಭವಾಗುವ ‘ಸ್ಪಷ್ಟನೆ’ಯು ‘ಆಕ್ಷೇಪಗಳು ಒಂದು ಹುನ್ನಾರವಾಗಿರಬಹುದು’ ಎಂಬ ಗುಮಾನಿಯನ್ನು ವ್ಯಕ್ತಪಡಿಸುತ್ತದೆ. ಈ ಸ್ಪಷ್ಟನೆಯ ಮುಖ್ಯಭಾಗದಲ್ಲಿ  ಸೃಜನಶೀಲ ಸಾಹಿತ್ಯದ ಬಗ್ಗೆ ತಮ್ಮ ವಿವರಣೆಗಳನ್ನು ನೀಡುತ್ತಾ ಆಕ್ಷೇಪಗಳನ್ನು ಆಲ್ಲಗೆಳೆಯಲು ಲೇಖಕರು ಪ್ರಯತ್ನಿಸಿದ್ದಾರೆ. ನಂತರ ತಮ್ಮನ್ನು ‘ಸದಾ ಸಾಮಾಜಿಕ ಕಾಳಜಿಯ ದೇಶನಿಷ್ಠ ಲೇಖಕ’ ಎಂದು ಕರೆದುಕೊಂಡು, ಸಹೃದಯ ಓದುಗರಿಗೆ ತಮ್ಮಲ್ಲಿರುವ ‘ಸಮಾಜ ಬದಲಾವಣೆಯ ಆಶಯ ಮತ್ತು ದೇಶ ಬದ್ಧತೆ ಅರ್ಥವಾಗುತ್ತದೆ’ ಎಂದು ಹೇಳುತ್ತಾ ಆಕ್ಷೇಪ ಮಾಡುತ್ತಿರುವವರು ಸಹೃದಯರಲ್ಲ ಎಂಬ ಟೀಕೆಯನ್ನು ಪರೋಕ್ಷವಾಗಿ ಮಾಡಿದ್ದಾರೆ. ಕೊನೆಗೆ, ಇನ್ನೂ ತಪ್ಪು ಅಭಿಪ್ರಾಯ ಉಳಿದಿದ್ದರೆ ಜನರಲ್ಲಿ ವಿಷಾದ ವ್ಯಕ್ತಪಡಿಸುತ್ತಾ – ಈ ವಿಷಾದವನ್ನು ತಾವು ‘ಜನರಿಗೆ ಕೊಡುವ ಗೌರವ’ ಎಂದು ಬಣ್ಣಿಸಿಕೊಂಡಿದ್ದಾರೆ.

ಬರಗೂರರ ಸ್ಪಷ್ಟನೆಯು ಚದುರಂಗದಲ್ಲಿ ಸ್ಥಳಾತ್ಮಕ ಆಟದ ನಡೆಯಂತೆ ರಾಜಕೀಯ ಮನೋಭಾವದಿಂದ ಬರೆದಂತೆ ಕಾಣುತ್ತದೆ. ಬರಗೂರರ ಚಿಂತನೆ ಮತ್ತು ವರ್ತನೆಗಳ ಬಗ್ಗೆ ಒಂದು ಒಳನೋಟವನ್ನು ನೀಡುತ್ತಿದೆ.  ಇಲ್ಲಿ ‘ಭರತನಗರಿ’ ಕಾದಂಬರಿಯನ್ನು ಸಮರ್ಥಿಸಿಕೊಳ್ಳುವ ಆತುರವಿದೆ. ಈ ವಿವಾದದ ಬಗ್ಗೆ ಅವರಲ್ಲಿರುವ ಆತಂಕಗಳನ್ನು ತೋರಿಸುತ್ತಿದೆ. ಸ್ಪಷ್ಟನೆಗೆ ಹಲವಾರು ಕುತೂಹಲಕರ ಮುಖಗಳಿದ್ದು ಅವುಗಳ ವಿಶ್ಲೇಷಣೆ ಇಲ್ಲಿದೆ.

ಪಠ್ಯ ಮತ್ತು ನಾಡಗೀತೆಗಳಲ್ಲಿ ಬರಗೂರರ ನಿಲುವುಗಳು

ಇತ್ತೀಚೆಗೆ ಬರಗೂರರು ಪಠ್ಯ ಪುಸ್ತಕದ ವಿವಾದದಲ್ಲಿ ಮುಂಚೂಣಿಯಲ್ಲಿ ಗುರುತಿಸಿಕೊಂಡಿದ್ದರು. ಕಾಂಗ್ರೆಸ್ ಸರ್ಕಾರ ರಚಿಸಿದ್ದ ಹಿಂದಿನ ಪಠ್ಯಪುಸ್ತಕ ರಚನೆಯ ಮುಖ್ಯಸ್ಥರಾಗಿ ಹಲವಾರು ಅರಾಷ್ಟ್ರೀಯ ಸಂಗತಿಗಳನ್ನು ಪಠ್ಯದಲ್ಲಿ ಸೇರಿಸಿದ ಆರೋಪಕ್ಕೆ ಗುರಿಯಾಗಿದ್ದವರು.   ಹೊಸದಾಗಿ ರಚಿತವಾಗಿದ್ದ ರೋಹಿತ್ ಚಕ್ರತೀರ್ಥ ಸಮಿತಿಯ ಮೂಲಕ ಪಠ್ಯಪುಸ್ತಕದ ಪರಿಷ್ಕರಣೆ  ನಡೆಯುತ್ತಿದ್ದಾಗ ಅದನ್ನು ವಿರೋಧಿಸಿದ ಪ್ರತಿಪಕ್ಷಗಳ ಜೊತೆಯಲ್ಲಿ ಬರಗೂರರು ಸಕ್ರಿಯವಾಗಿದ್ದರು. ಅವರು ಕಾಂಗ್ರೆಸ್ ಪಕ್ಷದ ನಾಯಕರ ಜೊತೆ ಒಡನಾಟ ಉಳ್ಳವರು. ಈ ಸಂದರ್ಭದಲ್ಲಿ ಎದ್ದ ‘ಚಕ್ರತೀರ್ಥರು ನಾಡಗೀತೆಗೆ ಅವಮಾನ ಎಸಗಿದ್ದಾರೆ’ ಎಂಬ ಗುಲ್ಲಿಗೆ ಧ್ವನಿಕೊಟ್ಟು ನಿಂತವರು. ಈಗ ಅವರದೇ ಆದ ಕಾದಂಬರಿಯಲ್ಲಿ ರಾಷ್ಟ್ರಗೀತೆಯನ್ನು ವಿಡಂಬನೆ ಮಾಡಿರುವ ಗುರುತರ ಆರೋಪ ಬಂದಿರುವುದರ ಹಿನ್ನೆಲೆಯಲ್ಲಿ ತಮ್ಮ ನಿಲುವನ್ನು ದ್ವಂದ್ವವಿಲ್ಲದೇ ವಿವರಿಸುವ ಒತ್ತಡದಲ್ಲಿ ಸಿಲುಕಿದ್ದಾರೆ. ನಾಡಗೀತೆಯ ಆರೋಪದಲ್ಲಿ ಚಕ್ರತೀರ್ಥರನ್ನು ಸಿಕ್ಕಿಸಬಹುದಾದರೆ, ರಾಷ್ಟ್ರಗೀತೆಯ ವಿಡಂಬನೆಯಲ್ಲಿ ತಾವೂ ಸಿಕ್ಕಿಕೊಳ್ಳಬಹುದು ಎಂಬ ಅರಿವು ಅವರು ಹೇಳುತ್ತಿರುವ ಹುನ್ನಾರದ ಗುಮಾನಿಯಲ್ಲಿದೆ.

ಸಾಮಾಜಿಕ  ವಿಮರ್ಶೆಯ ನೆಲೆ

ರಾಷ್ಟ್ರಗೀತೆಯನ್ನು ವಿಡಂಬಿಸುವುದು ಒಂದು ಕಾನೂನಾತ್ಮಕ ಅಪರಾಧ. ಅದನ್ನು ನ್ಯಾಯಾಲಯಗಳು ಶಿಕ್ಷಿಸಬಹುದು. ಎಷ್ಟು ವರ್ಷಗಳ ಹಿಂದೆ ವಿಡಂಬನೆ ಮಾಡಲಾಯಿತು ಅಥವಾ ಇಲ್ಲಿಯವರೆಗೆ ಏಕೆ ಈ ವಿಡಂಬನೆಯನ್ನು ಕಾನೂನಿನ ಗಮನಕ್ಕೆ ತರಲಿಲ್ಲ ಎಂಬ ಪ್ರಶ್ನೆಗಳು ಇಲ್ಲಿ ಅಷ್ಟು ಪ್ರಸ್ತುತವಲ್ಲ. ಈ ಹಿನ್ನೆಲೆಯಲ್ಲಿ ಭರತನಗರಿ ಬರೆದಿರುವ ಬರಗೂರರ ವಿರುದ್ಧ ಕಾನೂನು ಸಮರದ ಸಾಧ್ಯತೆ ಇರುವುದು ನಿಚ್ಚಳವಾಗಿದೆ.   ಕಾಂಗ್ರೆಸ್ ದೇಶವನ್ನು ಆಳುತ್ತಿದ್ದ ಕಾಲದಲ್ಲಿ ರಾಜಕೀಯ ವ್ಯವಸ್ಥೆ ಹದಗೆಟ್ಟಿತ್ತೆಂದೂ, ಭರತನಗರಿ ಕಾದಂಬರಿ ಆ ಕಾಲದ ಕಾಂಗ್ರೆಸ್ ಆಡಳಿತ ವ್ಯವಸ್ಥೆಯನ್ನು ವ್ಯಂಗ್ಯ – ವಿಡಂಬನೆಗಳಿಂದ ಚಿತ್ರಿಸಿದೆ ಎಂದೂ ಲೇಖಕರು ಹೇಳಿದ್ದಾರೆ. ವಾಸ್ತವದಲ್ಲಿ ಬಿಜೆಪಿ ವಿರೋಧಿಯಾಗಿರುವ  ಲೇಖಕರು ಕಾಂಗ್ರೆಸ್ ಪಕ್ಷದ ಹಿತೈಷಿಗಳಾಗಿದ್ದಾರೆ. ಅವರ ಕಾಂಗ್ರೆಸ್ ಬಗೆಗಿನ ಟೀಕೆಗಳು ಸರಕಾರದ ಗಮನದಿಂದ ಹೊರಗುಳಿಯಲು ನಡೆಸಿರುವ ಪ್ರಯತ್ನದ ಭಾಗವಾಗಿರುವಂತೆ ಕಾಣುತ್ತಿದೆ. 

ದೇಶದ ಆಡಳಿತವು ಮತ್ತು ರಾಜಕೀಯ ರಂಗವು ಸಂವಿಧಾನಕ್ಕೆ ಬದ್ಧವಾಗಿರುತ್ತದೆ. ಯಾವುದೋ ಒಂದು ಆಡಳಿತ ಚಲನಶೀಲತೆಯನ್ನು ಕಳೆದುಕೊಂಡಿರಬಹುದು.  ಅಂಥಹಾ ಆಡಳಿತವನ್ನು ವಿಡಂಬಿಸಲು ವಿರೂಪ ಮಾಡಿದ ಭಾರತದ ರಾಷ್ಟ್ರಗೀತೆಯನ್ನು ಉಪಯೋಗಿಸುವುದು ಸೂಕ್ತವಾಗಿ ಕಾಣುವುದಿಲ್ಲ.    ಸಂವಿಧಾನ ದತ್ತ ವಾಕ್ ಸ್ವಾತಂತ್ರ್ಯವನ್ನು ಉಪಯೋಗಿಸುತ್ತಾ, ಸಂವಿಧಾನವನ್ನೂ, ರಾಷ್ಟ್ರೀಯ ಚಿಹ್ನೆಗಳನ್ನೂ ಲೇಖಕನಾದವನು ವಿರೋಧ ಮಾಡಬಹುದೇ? ಆಡಳಿತ ಮತ್ತು ಸಂವಿಧಾನಗಳ ಮಧ್ಯದ ವ್ಯತ್ಯಾಸವನ್ನು ಗುರುತಿಸಲಾಗದ ಮನಸ್ಥಿತಿ ಅಪಕ್ವ ಅಥವಾ ರಾಷ್ಟ್ರವಿರೋಧೀ ಚಿಂತನೆಗಳಿಂದ ರೂಪಿತವಾಗಿರಬೇಕು. 

ಹಿಂದೂ ಧರ್ಮ – ಜೀವನ ಪದ್ಧತಿಯನ್ನು ಆಚರಿಸುತ್ತಾ ಗಂಗಾನದಿಯನ್ನು ಶ್ರದ್ಧೆಯಿಂದ ನೋಡುವ ಕೋಟ್ಯಾಂತರ ಜನರ ಭಾವನೆಗಳಿಗೆ ಘಾಸಿ ಆಗುವ ಬರಹಗಳು ಕಾದಂಬರಿಯಲ್ಲಿ ಇದೆ ಎಂಬುದು ಬರಗೂರು ಅವರ ಮೇಲಿನ ಆರೋಪ. ಆದರೆ, ಇದೊಂದು ಸೃಜನಶೀಲ ಕೃತಿಯೆಂದೂ, ಗಂಗೆಯಂಥಾ ಸತ್ಯ-ಸಮಾನತೆಗಳನ್ನು ರಾಜಕೀಯವು ಅತ್ಯಾಚಾರ ಮಾಡುತ್ತಿದೆ ಎಂದು ಕಾದಂಬರಿಯಲ್ಲಿ ಹೇಳಲಾಗಿದೆ ಎಂಬುದು ಲೇಖಕರ ವಿವರಣೆ. ಕೃತಿಕಾರನು ಎಲ್ಲಾ ಪಾತ್ರಗಳನ್ನೂ ಆಯಾ ಪಾತ್ರಗಳ ಗುಣಧರ್ಮ, ಸ್ವಭಾವಕ್ಕೆ ತಕ್ಕಂತೆ ಚಿತ್ರಿಸಬೇಕಾಗುತ್ತದೆ ಮತ್ತು ಆ ಪಾತ್ರಗಳ ಮಾತು ಮತ್ತು ನಡವಳಿಕೆ ಕೃತಿಕಾರರದಾಗಿರುವುದಿಲ್ಲ. ಕೃತಿಯು ಹೊರಡಿಸುವ ಆಶಯ ಮಾತ್ರ ಕೃತಿಕಾರರದು. ಆದ್ದರಿಂದಲೇ ದೇಶದ ಆಡಳಿತವೊಂದನ್ನು ಕಾದಂಬರಿಯ ಪಾತ್ರವು ಟೀಕಿಸುವಾಗ ಜನಗಣಮನದ ಲಯವನ್ನು ಬಳಸಿಕೊಳ್ಳುತ್ತದೆ. ಅದನ್ನು ಆ ಪಾತ್ರದ ಸ್ವಭಾವ ಮತ್ತು ನಡವಳಿಕೆಯಾಗಿದೆ ಎಂಬುದಾಗಿ ಮಾತ್ರ ಅರ್ಥೈಸಬೇಕು ಎಂಬುದು ಬರಗೂರರ ಸಾಹಿತ್ಯಕ ನಿಲುವು. ಜೊತೆಗೆ, ಆ ಪಾತ್ರವು ಗುಂಡೇಟು ತಿಂದು ಸಾಯುತ್ತಾನೆ ಎಂಬ ಸಮಾಧಾನವನ್ನೂ ಲೇಖಕರು ಹೇಳುತ್ತಾರೆ. ಕಾನೂನು ಪ್ರಕ್ರಿಯೆ ಪ್ರಾರಂಭವಾದರೆ ಬಹುಶಃ ನ್ಯಾಯಾಲಯಗಳಲ್ಲಿ ಅವರ ವಾದ ಇದೇ ಆಗಲಿದೆ.

ಸಾಹಿತ್ಯ ವಿಮರ್ಶೆಯ ನೆಲೆ

ಸಾಹಿತ್ಯ ವಿಮರ್ಶೆಯ ನೆಲೆಯಲ್ಲಿ ಈ ನಿಲುವನ್ನು ನೋಡಿದಾಗ, ಬರಗೂರು ಅವರು ಭೈರಪ್ಪನವರ ವಾದಗಳನ್ನೇ ಯಥಾವತ್ತಾಗಿ ನಕಲು ಮಾಡಿದ್ದಾರೆ ಎನ್ನುವುದು ಗಮನಕ್ಕೆ ಬರುತ್ತದೆ. ಹಲವು ದಶಕಗಳ ಹಿಂದೆಯೇ, ಭೈರಪ್ಪನವರ

ತಮ್ಮ ಸಾಹಿತ್ಯದ ಬಗ್ಗೆ  ಪ್ರಗತಿಪರರ ಟೀಕೆಗಳಿಗೆ ಉತ್ತರವೆಂಬಂತೆ ಈ ನಿಲುವನ್ನು ವ್ಯಕ್ತಪಡಿಸಿದ್ದರು. ಪಾತ್ರಗಳ ಹುಟ್ಟು ಮತ್ತು ಅವುಗಳ ನಡವಳಿಕೆಗಳಲ್ಲಿ ಲೇಖಕನ ಬುದ್ಧಿ ಮತ್ತು ಸೃಜನಾತ್ಮಕತೆಯ ಪಾತ್ರ ಏನು? ಸಾಹಿತ್ಯ ರಚನೆಯ ಪ್ರಕ್ರಿಯೆಯು ಹೇಗೆ ಕೆಲಸ ಮಾಡುತ್ತದೆ? ಎಂಬ ಪ್ರಶ್ನೆಗಳು ಟೀಕೆಗಳ ಮೂಲದಲ್ಲಿದ್ದವು. ಸೃಜನಶೀಲತೆಯ ಒತ್ತಡದಲ್ಲಿ ಕಾದಂಬರಿಗಳನ್ನು ರಚಿಸುತ್ತಿದ್ದ ಭೈರಪ್ಪನವರು ತಮ್ಮ ಮೇಲೆ ಬಂದ ಆರೋಪಗಳಿಗೆ ಪ್ರತಿಕ್ರಿಯೆ ನೀಡುತ್ತಾ ಈ ಪ್ರಶ್ನೆಗಳಿಗೆ ಉತ್ತರ ನೀಡಿದ್ದರು. ಸ್ಥೂಲವಾಗಿ ಹೇಳಬಹುದಾದರೆ, ಸಾಂಗತ್ಯವನ್ನು ಸಾಧಿಸುವ ಲೇಖಕನ ಸಾಮರ್ಥ್ಯವು ಕೃತಿಯೊಂದರ ಸೌಂದರ್ಯದಲ್ಲಿ ವ್ಯಕ್ತವಾಗುತ್ತದೆ. ಕೃತಿಯಲ್ಲಿ ಕಾಣುವ ಪ್ರತಿಗಾಮಿತನ ಅಥವಾ ಸಂಪ್ರದಾಯವಾದ ಎನಿಸಬಹುದಾದ ಸಂಗತಿಗಳಲ್ಲಿ ಲೇಖಕನ ವ್ಯಕ್ತಿತ್ವದ ಪಾತ್ರವನ್ನು ಪರಿಶೀಲಿಸುವ ಬದಲು ಈ ಸಂಗತಿಗಳು ಸಾಂಗತ್ಯವನ್ನು ಸಾಧಿಸಿವೆಯೇ ಎಂಬ ವಿಶ್ಲೇಷಣೆ ಹೆಚ್ಚು ಸೂಕ್ತ ಎಂಬ ಪ್ರಾಮಾಣಿಕ ಗ್ರಹಿಕೆ ಅದಾಗಿತ್ತು. ಸಾಮಾಜಿಕ ಪರಿವರ್ತನೆಯು ಶುದ್ಧ ಸಾಹಿತ್ಯದ ಗುರಿ ಆಗಲಾರದು.  ಸೃಜನಶೀಲತೆಯಿಂದ ಬರುವ ಸಾಹಿತ್ಯವನ್ನು ಲೇಖಕನ ವ್ಯಕ್ತಿತ್ವವನ್ನು ವಿಶ್ಲೇಷಿಸಲು ಉಪಯೋಗಿಸಬಾರದು ಎನ್ನುವುದು  ಈ ಅಭಿಪ್ರಾಯದ ಸಾರಾಂಶ. 

ಈ ಪ್ರತಿಪಾದನೆಯು ಪ್ರಸ್ತುತ ಕನ್ನಡ ಸಾಹಿತ್ಯ ಲೋಕದಲ್ಲಿ ವ್ಯಾಪಕವಾಗಿ ಸ್ವೀಕೃತವಾಗಿದೆ.  ಶುದ್ಧ ಸಾಹಿತ್ಯವನ್ನು ನೀಡುವ ತಮ್ಮ ಪ್ರಯತ್ನದಲ್ಲಿ ವಿವಿಧ ಗುಣಮಟ್ಟಗಳನ್ನು ಮುಟ್ಟಬಲ್ಲ ಲೇಖಕರೆಲ್ಲರೂ ಭೈರಪ್ಪನವರ ಪ್ರಸ್ತುತಿಯನ್ನು ತಮ್ಮ ಅನುಕೂಲಕ್ಕನುಗುಣವಾಗಿ ಬಳಸಿಕೊಳ್ಳುತ್ತಿದ್ದಾರೆ. ಕಾನೂನು ಪ್ರಕ್ರಿಯೆಯ ಅಂಚಿನಲ್ಲಿರುವ ಬರಗೂರರು ಸಾಹಿತ್ಯಿಕ ಪರಿಧಿಯಲ್ಲಿ ಹುಟ್ಟಿ ಸಾಮಾಜಿಕ ನೆಲೆಯಲ್ಲಿ ಚರ್ಚಿತವಾಗುತ್ತಿದ್ದ ಈ ವಾದವನ್ನು ರಾಜಕೀಯಕ್ಕಿಳಿಸಿ ನ್ಯಾಯಾಲಯದಲ್ಲಿ ಪ್ರಸ್ತುತ ಪಡಿಸಲು ಸಿದ್ಧತೆ ನಡೆಸಿದ್ದಾರೆ.

ಸಾಮಾಜಿಕ ಹಿತದೃಷ್ಟಿಯಿಂದಲೇ ಕಲಾಕೃತಿಗಳ ರಚನೆಯಾಗಬೇಕು ಎಂದು ಹೇಳಬೇಕಿಲ್ಲ.  ಈ ನಿಲುವು ಭಾರತೀಯ ಕಲಾ ಅಭಿವ್ಯಕ್ತಿಯ ಪರಂಪರೆಗೆ ಅನುಗುಣವಾಗಿದೆಯೇ ಇಲ್ಲವೇ ಎಂಬುದು ಬೇರೆಯೇ ಚರ್ಚೆ. ಅದರೆ, ಸೃಜನಾತ್ಮಕ ಕೃತಿಯೊಂದು ಸಾಮಾಜಿಕ ಹಿತವನ್ನು ಪರಿಗಣಿಸಬಾರದು ಎಂದೋ, ನಿರ್ಲಿಪ್ತವಾಗಿರಬೇಕೆಂದೋ ಅಥವಾ ನಿರಾಕರಿಸಬಹುದು ಎಂದೋ ಹೇಳುವ ಅಗತ್ಯವೂ ಇಲ್ಲ. ಕೃತಿಯೊಂದು ಸಮಾಜದಲ್ಲಿ ಅಲ್ಪಕಾಲೀನ ಸಮಸ್ಯೆಗಳನ್ನಾಗಲೀ, ದೀರ್ಘಕಾಲೀನ ದುಷ್ಪರಿಣಾಮಗಳನ್ನಾಗಲೀ ಉಂಟುಮಾಡಿದರೆ, ಅದನ್ನು ಸಾಹಿತ್ಯಕವಾಗಿ ಹೇಗೆ ನೋಡಬೇಕು? ಸಮಸ್ಯೆಗಳನ್ನು ಸೃಷ್ಟಿ ಮಾಡಬಹುದಾದ ಸೃಜನಶೀಲ ಕೃತಿ ಒಳ್ಳೆಯ ಸಾಹಿತ್ಯ ಎನ್ನಲಾಗದು.  ಸಮಾಜ ಪರಿವರ್ತನೆಯನ್ನು ಗುರಿಯಾಗಿರಿಸಿಕೊಂಡಿರದ ಲೇಖಕ ಸೃಜನಶೀಲ ಪ್ರಕ್ರಿಯೆಯ ಕಷ್ಟಗಳನ್ನೂ,  ಮಿತಿಗಳನ್ನೂ ಸೂಚಿಸುತ್ತಿರಬಹುದು. ಆದರೆ, ಈ ನಿಲುವೇ ಸಾರ್ವತ್ರಿಕ ಸಾಹಿತ್ಯಿಕ ಮೌಲ್ಯ ಎಂದು ಹೇಳಲಾಗದು. 

ಸೃಜನಶೀಲ ಲೇಖಕನ ಬುದ್ಧಿಯು ಕಥಾಹಂದರವನ್ನೂ ಮತ್ತು ವ್ಯಾಪ್ತಿಯನ್ನು ಒಂದು ನೆಲೆಯಲ್ಲಿ ಆಯ್ಕೆಮಾಡುತ್ತದೆ. ಲೇಖಕನ ತನ್ಮಯತೆ, ಭಾವನೆಗಳ ತೀವ್ರತೆಯನ್ನನುಸರಿಸಿ ಬುದ್ಧಿ ಮತ್ತು ಸೃಜನಶೀಲತೆಯ ಸಂಮಿಶ್ರಣವು ಕಥೆಯ ವಿವರಗಳನ್ನು ಅನಾವರಣಗೊಳಿಸುತ್ತದೆ. ಕೃತಿಯೊಂದರ ಮೂಲಕವೇ ಓದುಗನಿಗೆ ಅದರ ಅರ್ಥ ಮತ್ತು ಮೌಲ್ಯಗಳು ಸಿಗಬೇಕೇ ಹೊರತು, ಪುನಃ ಲೇಖಕನ ಸಹಾಯವು ಓದುಗನಿಗೆ ಬೇಕಾಗಬಾರದು. ಕೃತಿಯ ಮೂಲಕ ಲೇಖಕನಿಗೆ ತಾನು ಹೇಳಬೇಕಾದ್ದನ್ನು ತಿಳಿಸಲಾಗದಿದ್ದರೆ, ಅದು ಲೇಖಕನ ಯಶಸ್ಸೆಂದು ಪರಿಗಣಿಸಲಾದೀತೇ?

ವ್ಯಾವಹಾರಿಕವಾಗಿ, ಕೃತಿಯೊಂದು ಕಾನೂನನ್ನು ಮೀರಿದಾಗ, ಆಗುವ ಅನ್ಯಾಯ ಮತ್ತು ಅನಾಹುತಗಳಿಗೆ ಕಾಲ್ಪನಿಕ ಪಾತ್ರಗಳನ್ನು ನ್ಯಾಯಾಲಯದಲ್ಲಿ ನಿಲ್ಲಿಸುವುದು ಹೇಗೆ? ಲೇಖಕನನ್ನಲ್ಲದೇ ಪಾತ್ರವನ್ನು ಜವಾಬ್ದಾರಿ ಮಾಡಿ ನ್ಯಾಯವನ್ನು ಕೊಡಿಸಲಾದೀತೇ?   ಆಶಯವನ್ನು ಕೃತಿಕಾರ ನಿಶ್ಚಯಿಸುವುದಾದರೆ, ಆ ಆಶಯವನ್ನು ಸರಿಯಾದ ಪಾತ್ರ ಮತ್ತು ಪಾತ್ರದ ನಡವಳಿಕೆಯ ಮೂಲಕ ವ್ಯಕ್ತಪಡಿಸುವ ಜವಾಬ್ದಾರಿ ಲೇಖಕನನ್ನು ಬಿಟ್ಟು ಬೇರೆಯವರದು ಆಗಲಾರದು.

ಲೇಖಕರ ಸೃಜನಶೀಲತೆ ಮತ್ತು ಬುದ್ಧಿಮತ್ತೆಗಳು ಒಳ ಮತ್ತು ಹೊರ ಸಾಂಗತ್ಯವನ್ನು ಸಾಧಿಸುತ್ತಾ  ಸುಂದರ ಕಲಾಕೃತಿಯನ್ನು ರಚಿಸುತ್ತವೆ. ಒಳ ಸಾಂಗತ್ಯವು ಕಲಾತ್ಮಕವಾಗಿದ್ದರೆ, ಹೊರ ಸಾಂಗತ್ಯವು ವ್ಯಾವಹಾರಿಕ ಸಂಗತಿಗಳನ್ನೂ ಪ್ರಯತ್ನರಹಿತವಾಗಿ ಒಳಗೊಳ್ಳುತ್ತದೆ.  ಅಂಥಹಾ ಕಲಾಕೃತಿಯು ಕಾನೂನಾತ್ಮಕ ಅಥವಾ ಸಾಮಾಜಿಕ ವಿಪ್ಲವಗಳನ್ನಾಗಲೀ ಹುಟ್ಟುಹಾಕಲಾರದು.  ಸೌಂದರ್ಯವನ್ನು ಬಲಿಕೊಡದೇ ಸಮಾಜ ಹಿತದ ಗುರಿಯನ್ನು ಸಾಧಿಸಬಹುದಾದರೆ, ಸದುದ್ದೇಶದ ಕೃತಿಕಾರ ಅದನ್ನು ಪ್ರಯತ್ನಿಸುತ್ತಾನೆ. 

ಸಾಮಾಜಿಕ ಹಿತವನ್ನು ಗುರಿಯಾಗಿಟ್ಟುಕೊಂಡು ಆದ್ಯತೆಯಾಗಿ ಸಾಂಗತ್ಯವನ್ನು ಸಾಧಿಸಲು ಪ್ರಯತ್ನಿಸುವುದು ಉತ್ತಮ ಲೇಖಕನ ಲಕ್ಷಣ. 

ಸಮರ್ಥನೆಯ ಮೌಲ್ಯ

ವ್ಯವಸ್ಥೆಯ ವಿರುದ್ಧ ಅತಾರ್ಕಿಕ ಅಸಮಾಧಾನವನ್ನು ಹುಟ್ಟಿಸಲು ಪ್ರಯತ್ನಿಸುವ ಭರತನಗರಿ ಸಾಮಾಜಿಕವಾಗಿಯೇ ಸೋತಿದೆ. ಸಾಹಿತ್ಯ ವಿಮರ್ಶೆಯ ದೃಷ್ಟಿಯಿಂದಲೂ ಮಹತ್ವವಿರದ ಈ ಕಾದಂಬರಿಯನ್ನು ಸೃಜನಶೀಲತೆಯ ನೆಲೆಯಿಂದಾಗಲೀ, ಅಭಿವ್ಯಕ್ತಿ ಸ್ವಾತಂತ್ರ್ಯದ ನೆಲೆಯಿಂದಾಗಲೀ ಸಮರ್ಥಿಸಿಕೊಳ್ಳುವುದರಲ್ಲಿ ಲಾಭವೇನೂ ಆಗಲಾರದು. ಬರಗೂರರು ತಮ್ಮ ಘನತೆಯನ್ನು ಈ ಅಪಕ್ವ ಕಾದಂಬರಿಗೆ ಸಮೀಕರಿಸಿಕೊಂಡು ಅದನ್ನು ಸಮರ್ಥಿಸಿಕೊಳ್ಳುತ್ತಿರುವಂತಿದೆ. ಈ ನಿಟ್ಟಿನಲ್ಲಿ ಸಾಹಿತ್ಯ ಮೀಮಾಂಸೆಯ ಚರ್ಚೆಯನ್ನು ಬಾಲಿಶವೆನಿಸಬಹುದಾದ ಮಟ್ಟಕ್ಕೆ ‘ಸತ್ಯ ಸ್ಪಷ್ಟನೆ’ ಮೂಲಕ ತಂದು ಬರಡಾಗಿಸಿದ್ದಾರೆ. ಪ್ರಜ್ಞಾವಂತರೂ,ಸಾಹಿತ್ಯಾಸಕ್ತರೂ ಈ ಸತ್ಯವನ್ನು ಸ್ಪಷ್ತವಾಗಿ ಕಾಣಬಲ್ಲವರಾಗಿದ್ದಾರೆ.

ಎಂ.ಕೆ.ಶ್ರೀಧರನ್,ನಿರ್ವಾಹಕ ವಿಶ್ವಸ್ಥರು, ವಿಶ್ವ ಸಂವಾದ ಕೇಂದ್ರ, ಕರ್ನಾಟಕ

2 thoughts on “ಬರಗೂರರ ಬರಡು ಬರಹದ ಮೀಮಾಂಸೆ

  1. ಲೇಖಕ ಮತ್ತು ಪಾತ್ರಗಳು ತಮ್ಮ ತಮ್ಮ ನಿಲುವುಗಳಿಂದ ಮುಗ್ದ ಪ್ರಾಮಾಣಿಕತೆ ಮೆರೆದರೂ ಪ್ರಕಾಶಕರು ಜವಾಬ್ದಾರಿಯನ್ನು ಹೊರಲೇಬೇಕಲ್ಲ?
    ಲೇಖಕರು ನಾಡಗೀತೆಯ ಪ್ರಸಂಗದಲ್ಲಿ ತಳೆದ ನಿಲುವಿನ ಬೆನ್ನಲ್ಲೇ ನಲವತ್ತು ವರ್ಷಗಳ ನಂತರ ತಮ್ಮದೇ ಕೃತಿಯನ್ನು ಮೂರನೆಯ ವ್ಯಕ್ತಿಯಂತೆ ವಿಮರ್ಶೆ ಮಾಡಲಿ., ಸಮರ್ಥನೆ ಮಾಡುವುದನ್ನು ಬಿಟ್ಟು.

  2. A good article. But show me the action on the ground. Why any of the trustees didn’t file a complaint yet!
    When will you learn from Khangis and Amin Mattu and Siddramanullakhan? Show the action please.

Leave a Reply

Your email address will not be published.

This site uses Akismet to reduce spam. Learn how your comment data is processed.