ಅವಿನಾಶ್ ವಿ.ಜಿ, ಹವ್ಯಾಸಿ ಬರಹಗಾರರು

ಎಂ. ಗೋಪಾಲಕೃಷ್ಣ ಅಡಿಗರ ಬರಹಗಳಲ್ಲಿ ನನ್ನ ಮೆಚ್ಚಿನದು ‘ವಿಜಯನಗರದ ನೆನಪು’. ಈ ಕವನವು ಅಡಿಗರ ‘ಕಟ್ಟುವೆವು ನಾವು’ ಕವನ ಸಂಕಲನದ ಒಂದು ಕವನ. ‘ಅಡಿಗರ ಕವನದಲ್ಲಿ ಯಕ್ಷಗಾನ ಗತ್ತು ಎದ್ದು ತೋರುತ್ತದೆ’ ಎಂದು ಲಂಕೇಶರು ಒಂದು ಕಡೆ ಹೇಳಿದ್ದಾರೆ. ಆ ಮಾತಿಗೆ ಈ ಕವನವು ಒಂದು ಸೂಕ್ತ ಉದಾಹರಣೆ ಎಂದು ಹೇಳಬಹುದು. ಪ್ರತಿ ಕನ್ನಡಿಗನಿಗೂ ತನ್ನ ಉತ್ಕೃಷ್ಟ ಪರಂಪರೆಯ ಬಗ್ಗೆ, ಈ ಕವನ ಓದಿದರೆ ಮಿಂಚಿನ ಸಂಚಾರವಾಗುವುದು ಖಂಡಿತ. ಹಾಗೆಯೇ ಇಂಥ ಸಾಮ್ರಾಜ್ಯದ ಇತಿಹಾಸದ ಬಗ್ಗೆ ಇಂದಿನ ವ್ಯವಸ್ಥೆಗಳು ತೋರುತ್ತಿರುವ ನಿರ್ಲಕ್ಷ ಕೂಡ ನಮ್ಮಲ್ಲಿ ಜಿಜ್ಞಾಸೆ ಹುಟ್ಟು ಹಾಕುತ್ತದೆ. ಅಷ್ಟರ ಮಟ್ಟಿಗೆ ಈ ಕವನ ನಮ್ಮನ್ನು ಆವರಿಸುತ್ತದೆ. ಒಮ್ಮೆ ಈ ಕವನವನ್ನು ಓದೋಣ.

ಆರ್ನೂರು ವರ್ಷಗಳ ಜವನಿಕೆಯ ತೆರೆದು ನ-
ಮ್ಮಾ ರಾಜ್ಯದಾ ವಿಭವದುನ್ನತಿಯ ನೋಡು;
ಧೀರ ಗಂಭೀರತೆಯ, ತತ್ವಸತ್ಪೋನ್ನತಿಯ
ವಾರಿಧಿಯಲಿ ಮಿಂದು ಬಳಿಕ ಮುಂದೋಡು!
ಭಾರತವನಳುರಿ ಮಸಗಿಹ ಕಾಳಮೇಘಗಳ
ತೂರಿ ಬಂದುದು ಕನ್ನಡಿಗರಾತ್ಮ ತೇಜ;
ಬೀರಸಿರಿ ನಭವನಂಡಲೆದು ವಿಜಯಶ್ರೀಯು
ಸೇರಿ ಬಿತ್ತರಗೊಂಡುದೆಮ್ಮ ಸಾಮ್ರಾಜ್ಯ!
ಒಮ್ಮೆ ಭಾರತದ ಧರ್ಮಜ್ಯೋತಿ ನಂದುತಿರೆ
ನಮ್ಮ ರಕ್ತದ ತೈಲವೆರೆದು ಬೆಳಗಿಸಿದ
ಹೆಮ್ಮೆ ನಮಗುಂಟು: ಭಾರತದ ಸಂಸ್ಕೃತಿಗೆ ಕುಡಿ
ಹೊಮ್ಮಿಸಿದಬಲುಹುಂಟು ಸಿರಿಗೆ ಕನ್ನಡದ.
ನಮ್ಮ ಹೆಮ್ಮೆಯ ಮುಕುಟ, ಗಂಡುತನದೇರಾಟ
ನಮ್ಮ ಸಂಸ್ಕೃತಿ ಕಲೆಗಳಿಗೊಂದು ಸವಿಯೂಟ;
ನಮ್ಮ ಬೆಳ್ಜಸದ ಗುಡಿ, ಸಾಹಸದ ತುತ್ತತುದಿ,
ನಮ್ಮ ಸ್ವತ್ವದ ಸತ್ವದುರಿ ವಿಜಯನಗರಿ!
ಕಾಡ ಹೊನಲಿದಿರು ಮಳಲೊಟ್ಟಿಲಂತರಿಯ ದ
ಬ್ಬಾಳಿಕೆಗೆ ಭಾರತದ ಕೋಟಿ ಕೋಟಿಗಳು
ಬೀಳುತಿರೆ ನೆಲೆಗಟ್ಟು, ಪೌರುಷದ ಬಗೆಗಿಟ್ಟು
ಮೇಲೆದ್ದು ಬಂದ ಗಿರಿಯಿದು ವಿಜಯನಗರಿ!
ಇಂದು ಜಡತೆಯ ಹುದುಲೊಳಾಳ್ದ ಕನ್ನಡದ ಹೃದ
ಯಾಂಧಕಾರದಿ ವಿಜಯನಗರದಾ ನೆನಪು
ಬಂದೆಮ್ಮ ಧಮಧನಿಯಲಿ ಧುಮುಧುಮಿಸಿದರೆ
ಬಂದೇ ಬರುವುದೆಮ್ಮ ಮುಂಬಾಳ್ಗೆ ಬೆಳಕು!
ಕವನವು ಎಷ್ಟೊಂದು ಅದ್ಬುತವಾಗಿ ಆರಂಭವಾಗುತ್ತದೆ ಎಂದರೆ, ನಾವೊಂದು ಪಯಣಕ್ಕೆ ಸಜ್ಜಾಗಿದ್ದೇವೆ, ಅಡಿಗರು ನಮ್ಮನ್ನು ಕೈ ಹಿಡಿದು ಕರೆದೊಯ್ಯುತ್ತಿದ್ದಾರೆ ಎಂಬ ಕಲ್ಪನೆ ಮೂಡುವುದು ಸಹಜ. ಕವಿ ಹೇಳುತ್ತಾರೆ,

ಆರ್ನೂರು ವರ್ಷಗಳ ಜವನಿಕೆಯ ತೆರೆದು ನ-
ಮ್ಮಾ ರಾಜ್ಯದಾ ವಿಭವದುನ್ನತಿಯ ನೋಡು;
ಧೀರ ಗಂಭೀರತೆಯ, ತತ್ವಸತ್ಪೋನ್ನತಿಯ
ವಾರಿಧಿಯಲಿ ಮಿಂದು ಬಳಿಕ ಮುಂದೋಡು!

ಆರು ನೂರು ವರ್ಷಗಳ ಹಿಂದೆ ಅಂದರೆ ಕ್ರಿ.ಶ.1300ರ (ಅಡಿಗರು ಬರೆದದ್ದು ಇಪ್ಪತ್ತನೇ ಶತಮಾನವಾದ್ದರಿಂದ) ಆಸುಪಾಸಿನ ಇತಿಹಾಸಕ್ಕೆ ತೆರಳಿದರೆ, ವಿದೇಶೀ ಅಕ್ರಮಣದಿಂದ ಹೊಯ್ಸಳ ಸಾಮ್ರಾಜ್ಯದ ಪತನ, ನಮ್ಮ ಸಂಸ್ಕೃತಿಯ ವಿನಾಶದ ಅಂಚು, ನಮ್ಮ ಕಲೆ ಶಿಲ್ಪ ಕಲೆಗಳು ಅಲ್ಲಾವುದ್ದೀನ್ ಖಿಲ್ಜಿ, ಮಲಿಕಾಫರ್ ಎಂಬ ಕ್ರೂರಿಗಳ ಬೆಂಕಿಗೆ ಆಹುತಿಯಾದ ಬಗೆ ಹಾಗೂ ಹೊಯ್ಸಳೇಶ್ವರ ವೀರ ಬಲ್ಲಾಳರ ಘೋರ ಅಂತ್ಯ ಕಾಣಿಸುತ್ತದೆ. ಹೀಗೆ ರಕ್ತ ಸಿಕ್ತ ಪ್ರತಿಮೆಗಳು ಒಂದರ ಹಿಂದೆ ಒಂದರಂತೆ ಕನ್ನಡಿಗರ ಮೇಲೆ ಎರಗಿದವು. ಇಂಥಾ ಒಂದು ಅವಧಿಯ “gravity of the situation” ಅನ್ನು ಅಡಿಗರು ತಿಳಿಸ ಬಯಸುತ್ತಾರೆ.

 ಇಂತಹ ಒಂದು ‘Period of uncertainity’ ಯ ಚಿತ್ರಣವನ್ನು ಕವಿಗಳು ಎರಡನೇ ಪದ್ಯದ ಮೊದಲಾರ್ಧದಲ್ಲಿ ಕೊಟ್ಟಿದ್ದಾರೆ.

ಭಾರತವನಳುರಿ ಮಸಗಿಹ ಕಾಳಮೇಘಗಳ
ತೂರಿ ಬಂದುದು ಕನ್ನಡಿಗರಾತ್ಮ ತೇಜ;

ಕ್ರೌರ್ಯದ ಎಲ್ಲೆಗೆ ಗುರಿಯಾದ ನಮ್ಮ ಜನ ಹೇಗೆ ಹೆದರದೆ ಬೆದರದೆ ಆತ್ಮಸ್ಥೈರ್ಯದಿಂದ ಮತ್ತೆ ಎದ್ದು ಬಂದರು ಎಂಬುದನ್ನು ತಿಳಿಸುತ್ತಾರೆ. ನಮ್ಮನ್ನು ಸುಟ್ಟು ವಿಜೃಂಭಿಸಿದ ಆ ಎಲ್ಲಾ ಪರಿಸ್ಥಿತಿಗಳನ್ನು ಮೆಟ್ಟಿದ ಪರಿ ಕಟ್ಟಿಕೊಡುತ್ತದೆ. ‘Like the Phoenix they rose from the ashes’ ಈ ಮಾತು ಈ ಸಂದರ್ಭಕ್ಕೆ ಬಹಳ ಸೂಕ್ತವೆನಿಸುತ್ತದೆ. ಅದುವೇ ನಮ್ಮವರ ಯಶ ಮತ್ತು ತೇಜಸ್ಸು. ಹಕ್ಕ, ಬುಕ್ಕ ಹಾಗೂ ವಿದ್ಯಾರಣ್ಯ ತ್ರಯರು ಈ ದೃಢತೆಯ ಪ್ರತೀಕವಾಗಿದ್ದಾರೆ. ಮುಂದಿನ ಪದ್ಯಕ್ಕೆ ಹೋದರೆ,

ಒಮ್ಮೆ ಭಾರತದ ಧರ್ಮಜ್ಯೋತಿ ನಂದುತಿರೆ
ನಮ್ಮ ರಕ್ತದ ತೈಲವೆರೆದು ಬೆಳಗಿಸಿದ
ಹೆಮ್ಮೆ ನಮಗುಂಟು: ಭಾರತದ ಸಂಸ್ಕೃತಿಗೆ ಕುಡಿ
ಹೊಮ್ಮಿಸಿದ ಬಲುಹುಂಟು ಸಿರಿಗೆ ಕನ್ನಡದ.

 ಹನ್ನೆರಡನೇ ಶತಮಾನ ಮತ್ತು ಅನಂತರದ ಚಿತ್ರಣ ಗಮನಿಸಿದರೆ ಭಾರತದ ಉದ್ದಗಲಕ್ಕೂ ಇದ್ದ ಸಾಮ್ರಾಜ್ಯಗಳು ವಿದೇಶೀ ಹೊಡೆತ ತಾಳಲಾಗದೆ ತರಗೆಲೆಗಳಂತೆ ಉದುರುತಿದ್ದವು. ಭಾರತೀಯ ಸಂಸ್ಕೃತಿಯ ಕೊನೆಗಾಲವೇ, ಎಂಬ ಪ್ರಶ್ನೆ ಉದ್ಭವವಾಯಿತು. ಈ age of turmoil ನಲ್ಲಿ ವಿಜಯನಗರ ಸಾಮ್ರಾಜ್ಯದ ಉದಯ ಬರೀ ಕರ್ನಾಟಕಕ್ಕೆ ಅಲ್ಲದೇ, ಇಡೀ ಭಾರತಕ್ಕೆ ಕೊಟ್ಟ ಆ ಆತ್ಮವಿಶ್ವಾಸ, ಸಂಸ್ಕೃತಿಯ ಪುನರುತ್ತಾನದ ಕೋಲ್ಮಿಂಚುಗಳಿಗೆ ಬೆಲೆ ಕಟ್ಟಲಾಗದು. ಕನ್ನಡದ ಸಿರಿಗೆ ಅಂತಹ ಸಾಮರ್ಥ್ಯವಿತ್ತು.    “ನಮ್ಮ ರಕ್ತದ ತೈಲವೆರೆದು ಬೆಳಗಿಸಿದಹೆಮ್ಮೆ ನಮಗುಂಟು”, ಈ ಸಾಲಿಗೆ ಬಲ್ಲಾಳರ ಕೊನೆ, ಸೂಕ್ತ ಉಪಮೆ. ಎರಡನೇ ವೀರ ಬಲ್ಲಾಳರು ತಮ್ಮ ಎಂಬತ್ತರ ಇಳೀ ವಯಸ್ಸಿನಲ್ಲಿ ತಾಯ್ನಾಡಿಗಾಗಿ ಕಾದುತ್ತಿದ್ದರು. ದುರದೃಷ್ಟವಶಾತ್ ವೈರಿಗಳ ವಶರಾದಾಗ ಅವರನ್ನು ಇಡೀ ದೇಹದ ಚರ್ಮ ಸುಲಿಸಿ ಪ್ರಜೆಗಳೆದುರಲ್ಲೇ ಅಮಾನುಷವಾಗಿ ಕೊಲ್ಲಲಾಯಿತು. ಈ ಮನಕಲಕಿದ ಸಾವು ಭವಿಷ್ಯತ್ ಕರ್ನಾಟಕ(ವಿಜಯನಗರ) ಸಾಮ್ರಾಜ್ಯದ ಉದಯಕ್ಕೆ ನಾಂದಿಯಾಯಿತು.

ಕಾಡ ಹೊನಲಿದಿರು ಮಳಲೊಟ್ಟಿಲಂತರಿಯ ದ
ಬ್ಬಾಳಿಕೆಗೆ ಭಾರತದ ಕೋಟಿ ಕೋಟಿಗಳು
ಬೀಳುತಿರೆ ನೆಲೆಗಟ್ಟು, ಪೌರುಷದ ಬಗೆಗಿಟ್ಟು
ಮೇಲೆದ್ದು ಬಂದ ಗಿರಿಯಿದು ವಿಜಯನಗರಿ!

   ಈ ಕವನ ಮತ್ತೆ ಮತ್ತೆ ಓದಿದಾಗ ನನಗೆ ಅನ್ನಿಸುವುದು, ““This is not a poem of glorification but a poem of pride”. ಅನಾಗರಿಕರ ಪ್ರವಾಹದೆದುರು ಅಗಾಧ ಗೋಡೆಯಾಗಿ ಅವರ ಮುಂದೋಟವನ್ನು ನಮ್ಮ ಕರ್ನಾಟಕ ಸಾಮ್ರಾಜ್ಯ ತಡೆದ ಪರಿ ಅಕ್ಷರಗಳಲ್ಲಿ ವಿಜ್ರೃಂಭಿಸಿದೆ. ಮೂರನೇ ಸಾಲಿನಲ್ಲಿ ಪ್ರಾಸವು ಕವಿಗಳ ಇಚ್ಛೆ ಇದ್ದೋ, ಇಲ್ಲದೆಯೋ ಓದುಗನಿಗೆ ಮೈ ನವಿರೇಳೆಸಿವುದು. ಕೊನೇ ಸಾಲು ಉತ್ಕೃಷ್ಟತೆಯ, ಹೆಮ್ಮೆಯ ಪ್ರತೀಕ. ಗಿರಿ ಇಲ್ಲಿ ಮೊದಲು ಹೇಳಿದ ಗೋಡೆಯಾಗ ಬಹುದು, ಅಥವ ವಿಜಯನಗರ ತಲುಪಿದ ಉತ್ತುಂಗದ ಚಿನ್ನ್ಹೆ ಎಂದೂ ಗ್ರಹಿಸಬಹುದು. 

ಇಂದು ಜಡತೆಯ ಹುದುಲೊಳಾಳ್ದ ಕನ್ನಡದ ಹೃದ
ಯಾಂಧಕಾರದಿ ವಿಜಯನಗರದಾ ನೆನಪು
ಬಂದೆಮ್ಮ ಧಮಧನಿಯಲಿ ಧುಮುಧುಮಿಸಿದರೆ
ಬಂದೇ ಬರುವುದೆಮ್ಮ ಮುಂಬಾಳ್ಗೆ ಬೆಳಕು!

ಕೊನೇ ಪದ್ಯ ವಾಸ್ತವ ಕಾಲಮಾನದ ಪರಿಸ್ಥಿತಿ. ಇದರಲ್ಲಿದೆ ಕವಿಗಳ ಪ್ರಾಮಾಣಿಕ ಕಾಳಜಿ. ತನ್ನ ಇತಿಹಾಸದ ಅರಿವಿರದ ವ್ಯಕ್ತಿ ಭವಿಷ್ಯತ್ ರೂಪಿಸಲಾರ. ಐತಿಹಾಸಿಕ ಸತ್ಯ-ಸತ್ವ, ಸ್ವತ್ವದ ಬುನಾದಿ. ತನ್ನತನದ ಬಗ್ಗೆ ಅನುಮಾನ, ಹೊಯ್ದಾಟ ಅಂತಿಮವಾಗಿ ನಮ್ಮನ್ನು ಜಡತೆ ಎಡೆಗೆ ತಂದು ನಿಲ್ಲಿಸುತ್ತದೆ. ಆದರೆ ಕವಿಗಳ ಆಶಾವಾದವೇನೆಂದರೆ, ಪ್ರತಿಯೊಬ್ಬ ಕನ್ನಡಿಗನ ಆತ್ಮ/ರಕ್ತದಲ್ಲಿ ವಿಜಯನಗರದ ಅಂತಃಸತ್ವ ಹುದುಗಿದೆ. ಅದನ್ನು ನಾವು ಬಡಿದೆಬ್ಬಿಸಿದರೆ, ಆತ್ಮ ವಿಮರ್ಶೆಯಲ್ಲಿ ಪ್ರವಹಿಸಿದ್ದೇ ಆದರೆ ಕನ್ನಡಿಗರ ತೇಜದ ಕಾಂತಿಯ ಪಟ ಬೆಳಗಿ ಕಂಗೊಳಿಸುತ್ತದೆ. ಅದು ನಮ್ಮ ಜೀವನದಲ್ಲಿ ಆತ್ಮಸ್ಥೈರ್ಯ ಮೊಳಗಿಸುವುದು ಖಚಿತವೆಂಬುದು ವ್ಯಕ್ತವಾಗಿದೆ. ಇದುವೇ ಮಾನ್ಯ ಕವಿ ಶ್ರೇಷ್ಠರ ವಿಜಯ. ನಮ್ಮ ಹೆಮ್ಮೆಯ ವಿಜಯನಗರದ ವೀರರಸ, ಸಾಹಸಗಾಥೆ.

- ಅವಿನಾಶ್ ವಿ.ಜಿ, ಹವ್ಯಾಸಿ ಬರಹಗಾರರು

Leave a Reply

Your email address will not be published.

This site uses Akismet to reduce spam. Learn how your comment data is processed.