ನಮ್ಮ ದೇಶಕ್ಕಾಗಿ ಹೋರಾಡಿ ಮಡಿದ ವೀರರು ಅಸಂಖ್ಯಾತ. ಅವರಲ್ಲಿ ಯುವಕರಿಗೆ ಸದಾ ಆದರ್ಶವಾಗುವ ಕ್ರಾಂತಿಕಾರಿಗಳು ಭಗತ್ ಸಿಂಗ್,ಸುಖದೇವ್ ಥಾಪರ್ ಹಾಗೂ ಶಿವರಾಮ್ ರಾಜಗುರು. ಇವರು ಸ್ವಾತಂತ್ರ್ಯ ಸಂಗ್ರಾಮದಲ್ಲಿ ತಮ್ಮನ್ನು ತಾವು ಸಮರ್ಪಿಸಿಕೊಂಡು ಬಲಿದಾನಿಗಳಾಗಿ ತಮ್ಮ ಪ್ರಾಣವನ್ನು ಅರ್ಪಿಸುತ್ತಾರೆ. ಇವರ ತ್ಯಾಗ, ಬಲಿದಾನವನ್ನು ನೆನೆಯಲು ಪ್ರತೀ ವರ್ಷ ಮಾರ್ಚ್ 23 ರಂದು “ಬಲಿದಾನ ದಿವಸ” ಎಂದು ಆಚರಿಸಲಾಗುತ್ತದೆ.

ಜಲಿಯನ್ ವಾಲಾಭಾಗ್ ನಲ್ಲಾದ ಭಾರತೀಯರ ದಾರುಣ ಹತ್ಯಾಕಾಂಡಕ್ಕೆ ಸೇಡು ತೀರಿಸಿಕೊಳ್ಳ ಕ್ರಾಂತಿಕಾರಿ ಹೋರಾಟಕ್ಕೆ ಹೊಸ ಲಗ್ಗೆ ಇಟ್ಟ ಭಗತ್ ಸಿಂಗ್ ಹಾಗೂ ಕ್ರಾಂತಿಕಾರ್ಯದ ಮೂಲಕವೇ ಬ್ರಿಟಿಷರಿಗೆ ಉತ್ತರಿಸಬೇಕೆಂದು ನಿರ್ಧರಿಸಿದ್ದ ಸುಖದೇವ್ ಥಾಪರ್ ಹಾಗೂ ಶಿವರಾಮ್ ರಾಜಗುರು ಹಿಂದುಸ್ಥಾನ್ ಸೋಷಿಯಾಲಿಸ್ಟ್ ರಿಪಬ್ಲಿಕನ್ ಅಸೋಸಿಯೇಷನ್ ನಲ್ಲಿ ಜತೆಯಲ್ಲಿ ಕ್ರಾಂತಿಕಾರ್ಯದಲ್ಲಿ ಜೊತೆಯಾದವರು. ಬ್ರಿಟಿಷರು ಭಾರತೀಯರ ಮೇಲೆ ಎಸಗುತ್ತಿದ್ದ ಅನ್ಯಾಯಗಳ ವಿರುದ್ಧ ದಂಗೆದ್ದು, ಬ್ರಿಟೀಷ್ ಸರ್ಕಾರವನ್ನು ಸದೆಬಡಿಯಲು ಪಣತೊಡುತ್ತಾರೆ. ಅವರ ಮುಖ್ಯ ಉದ್ದೇಶ ಒಂದೇಯಾಗಿತ್ತು, ಅದು ಬ್ರಿಟಿಷ್ ಆಡಳಿತವನ್ನು ಭಾರತದಿಂದ ಕಿತ್ತೆಸೆಯಬೇಕು ಎಂಬುದು.

1928ರ ಅಕ್ಟೋಬರ್ 30ರಂದು ಸೈಮನ್ ಆಯೋಗದ ವಿರುದ್ಧ ನಡೆದ ಅಹಿಂಸಾತ್ಮಕ ಪ್ರತಿಭಟನೆಯಲ್ಲಿ ಲಾಲಾ ಲಜಪತ್ ರಾಯ್ ಅವರ ಮೇಲಾದ ಮಾರಣಾಂತಿಕ ಹಲ್ಲೆಯಿಂದ ಅವರು ಸಾವಿಗೀಡಾದರು. ಇದರಿಂದ ಭಗತ್ ಸಿಂಗ್, ಸುಖದೇವ್ ಮತ್ತು ರಾಜಗುರು ತೀವ್ರವಾಗಿ ಕೋಪಗೊಂಡರು. ಲಾಲಾ ಲಜಪತ್ ರಾಯ್ ಅವರ ಸಾವಿಗೆ ಕಾರಣವಾದ ಲಾಠಿ ಪ್ರಹಾರದ ನೇತೃತ್ವ ವಹಿಸಿದ್ದ ಪೊಲೀಸ್ ಅಧಿಕಾರಿ ಸ್ಕಾಟ್ ನನ್ನು ಸಂಹರಿಸಲು ನಿರ್ಧರಿಸಿದ್ದರು. ಆದರೆ ಸ್ಕಾಟ್ ನ ಬದಲು ಇನ್ನೋರ್ವ ಅಧಿಕಾರಿ ಸಾಂಡರ್ಸ್ ನನ್ನು ಎಚ್ಎಸ್ಆರ್‌ ಎನ್ ಸದಸ್ಯರು ಹತ್ಯೆ ಮಾಡಿದರು.


ಅದಾದ ನಂತರ ಬ್ರಿಟಿಷರಿಗೆ ಅರ್ಥವಾಗುವ ರೀತಿಯಲ್ಲಿ ನಮ್ಮ ರಾಷ್ಟ್ರದ ಬೇಡಿಕೆಗಳನ್ನು ತಿಳಿಸಬೇಕು ಎನ್ನುವ ಕಾರಣದಿಂದ 1929 ರ ಏಪ್ರಿಲ್ 8 ರಂದು ಕೇಂದ್ರ ಶಾಸಕಾಂಗ ಸಭೆಯಲ್ಲಿ ಬಾಂಬ್ ಎಸೆದರು. ಅವರ ಮುಖ್ಯ ಉದ್ದೇಶ ಕೊಲ್ಲುವುದಲ್ಲ, ಕಿವುಡರಿಗೆ ಕೇಳುವಂತೆ ಮಾಡುವುದಾಗಿತ್ತು. ಸ್ಯಾಂಡರ್ಸ್ ಹತ್ಯೆ ಮತ್ತು ಬಾಂಬ್ ಎಸೆದ ಕಾರ್ಯಕ್ಕಾಗಿ ಭಗತ್ ಸಿಂಗ್, ಶಿವರಾಮ್ ರಾಜಗುರು, ಸುಖದೇವ್ ಥಾಪರ್ ಅವರನ್ನು ಬಂಧಿಸಲಾಯಿತು.ಅನೇಕ ದಿನಗಳ ಕಾಲ ವಿಚಾರಣೆ ನಡೆದರೂ ಇವರನ್ನು ಬಂಧಮುಕ್ತಗೊಳಿಸುವ ಪ್ರಮೇಯವೇ ಇರಲಿಲ್ಲ. ಬ್ರಿಟಿಷರು ಎಷ್ಟೇ ಹಿಂಸಿಸಿದರು ಮೂವರು ಕ್ರಾಂತಿಕಾರಿಗಳ ಛಲವು ಎಲ್ಲೂ ಕಡಿಮೆಯಾಗದೇ ಅವರಲ್ಲಿನ ದೇಶ ಪ್ರೇಮವು ಎದ್ದು ಕಾಣುತ್ತಿತ್ತು. ಕೊನೆಗೆ ಮಾರ್ಚ್ 23, 1931 ರಂದು ಭಗತ್ ಸಿಂಗ್ ಹಾಗೂ ಅವರ ಜೊತೆಗಿದ್ದ ಉಳಿದಿಬ್ಬರನ್ನು ಗಲ್ಲಿಗೇರಿಸಲು ಬ್ರಿಟಿಷ್ ಸರ್ಕಾರ ತೀರ್ಪು ನೀಡಿತು.

ಅವರ ಪ್ರಾಣವನ್ನು ತೆಗೆಯುತ್ತಾರೆ ಎಂಬ ಯಾವುದೇ ಭಯದ ದುಗುಡವು ಅವರ ಮುಖದಲ್ಲಿರದೆ ಶಾಂತಚಿತ್ತರಾಗಿರುತ್ತಾರೆ. ನೇಣಿಗೆ ಶರಣಾಗುವ ಸಮಯ ಹತ್ತಿರ ಬಂದಂತೆ ಅವರ ಗುಂಡಿಗೆಯಲ್ಲಿನ ಧೈರ್ಯವೂ ಇನ್ನಷ್ಟು ಹೆಚ್ಚುತ್ತಾ ಹೋಯಿತು.ಇನ್ನೇನು ಗಲ್ಲಿಗೆರಿಸುತ್ತಾರೆ ಎನ್ನುವಾಗ “ಇನ್‌ಕ್ವಿಲಾಬ್ ಜಿಂದಾಬಾದ್” ಎಂಬ ಘೋಷಣೆಯನ್ನು ಮೊಳಗುತ್ತಾ ಭಾರತಾಂಬೆಯನ್ನು ನೆನೆಯುತ್ತಾ ನೇಣಿನ ಕುಣಿಕೆಗೆ ನಮಸ್ಕರಿಸಿ ತಮ್ಮ ಪ್ರಾಣವನ್ನು ಅರ್ಪಿಸಲು ಮುಂದಾಗುತ್ತಾರೆ. 1931 ರ ಮಾರ್ಚ್ 23 ರಂದು ಗಲ್ಲಿಗೇರಿಸಲಾಯಿತು.ಈ ರೀತಿಯಾಗಿ ತಮ್ಮ ಪ್ರಾಣವನ್ನು ನೀಡುವ ಕೊನೆಗಳಿಗೆಯಲ್ಲೂ ತಮ್ಮ ದೇಶವನ್ನು ನೆನೆದು ಪ್ರಾಣವನ್ನು ಅರ್ಪಿಸಿದ ಅವರನ್ನು ಸತ್ಯಕ್ಕೂ ಮೆಚ್ಚಲೇಬೇಕಾದದ್ದು.  ಹೀಗಾಗಿ ಇಂದು ಆ ದಿನವನ್ನು ಬಲಿದಾನ  ದಿನವಾಗಿ ಆಚರಿಸಲಾಗುತ್ತದೆ.

ಅವರಲ್ಲಿನ ಈ ದೇಶ ಪ್ರೇಮವು, ಛಲವು ಬ್ರಿಟೀಷರನ್ನು ಸದೆಬಡಿಯಲು ಸಾಧ್ಯವಾಯಿತು. ಅಂದು ಇವರ ತ್ಯಾಗ ಬಲಿದಾನವು ಇಂದು ನಮ್ಮ ದೇಶದಲ್ಲಿ ಶಾಂತಿ ನೆಲೆಸಲು ಕಾರಣವಾಯಿತು. ಅಲ್ಲದೆ ಇಂದಿನ ಯುವಜನರಿಗೆ ಇವರ ತ್ಯಾಗ ಬಲಿದಾನವು ಮಾದರಿಯಾಗುವುದರ ಜೊತೆಗೆ ಅವರಂತೆಯೇ ದೇಶಪ್ರೇಮವನ್ನು ಬೆಳೆಸಿಕೊಳ್ಳಲ್ಲು ಒಂದು ಸ್ಪೂರ್ತಿದಾಯಕ ಶಕ್ತಿಯು ದೊರೆತಂತಾಗಿದೆ.

Leave a Reply

Your email address will not be published.

This site uses Akismet to reduce spam. Learn how your comment data is processed.