ಇಂದು ಪುಣ್ಯಸ್ಮರಣೆ

‘ಗಣೇಶ್ ದಾ’ ಎಂದೇ ಗುರುತಿಸಿಕೊಂಡಿದ್ದ ಗಣೇಶ್ ಶಂಕರ್ ವಿದ್ಯಾರ್ಥಿ ಅವರು ಪ್ರಮುಖ ಭಾರತೀಯ ಪತ್ರಕರ್ತ, ಸ್ವಾತಂತ್ರ್ಯ ಹೋರಾಟಗಾರ ಮತ್ತು ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ನಾಯಕರಾಗಿ ಪ್ರಸಿದ್ಧಿ ಹೊಂದಿದರು. ಇವರು ಪ್ರತಿಕೋದ್ಯಮ ಮಾತ್ರವಲ್ಲದೆ ರಾಜಕೀಯ ಕ್ಷೇತ್ರದಲ್ಲಿ ತಮ್ಮದೇಯಾದ ಛಾಪು ಮೂಡಿಸಿದ್ದಾರೆ. ಇಂದು ಇವರ ಪುಣ್ಯಸ್ಮರಣೆ.


ಪರಿಚಯ
ಗಣೇಶ್ ಶಂಕರ್ ವಿದ್ಯಾರ್ಥಿ ಅವರು 26, 1890 ರಂದು ಉತ್ತರಪ್ರದೇಶದ ಕಾನ್ಪುರ್ ಬಳಿಯ ಫತೇಪುರದಲ್ಲಿ ಜನಿಸಿದರು. ಇವರ ತಂದೆ ಜಯನಾರಾಯಣ್‌ ಮತ್ತು ತಾಯಿ ಗೋಮತಿ ದೇವಿ. ಮಧ್ಯಪ್ರದೇಶದ ಗ್ವಾಲಿಯರ್ ನಲ್ಲಿ ಪ್ರಾಥಮಿಕ ಶಿಕ್ಷಣ ಮುಗಿಸಿ ಉನ್ನತ ವಿದ್ಯಾಭ್ಯಾಸಕ್ಕಾಗಿ ಅಲಹಾಬಾದ್‌ ಕಾಲೇಜಿಗೆ ಸೇರಿದರು. ನಂತರ ವಿದ್ಯಾಭ್ಯಾಸವನ್ನು ಮುಂದುವರಿಸುವುದಕ್ಕಾಗದೆ ಗುಮಾಸ್ತರಾಗಿ ಕೆಲಸಕ್ಕೆ ಸೇರಿದರು. ನಂತರ ಕಾನ್ಪುರದ ಪ್ರೌಢಶಾಲೆಯಲ್ಲಿ ಶಿಕ್ಷಕರಾಗಿ ತಮ್ಮ ವೃತ್ತಿಜೀವನವನ್ನು ಪ್ರಾರಂಭಿಸಿದರು. ಚಿಕ್ಕ ವಯಸ್ಸಿನಿಂದಲೂ ಪತ್ರಿಕೋದ್ಯಮ ಮತ್ತು ರಾಜಕೀಯದಲ್ಲಿ ಆಸಕ್ತಿ ಹೊಂದಿದ್ದ ಇವರು  1913ರಲ್ಲಿ ತಮ್ಮದೇಯಾದ ಹಿಂದಿ ಸಾಪ್ತಾಹಿಕ ಪತ್ರಿಕೆ ಅನ್ನು ಸ್ಥಾಪಿಸಿದರು.


ಪ್ರತಿಕೋದ್ಯಮ ಮತ್ತು ರಾಜಕೀಯ ಕ್ಷೇತ್ರದಲ್ಲಿ ಭಾಗಿ

‘ಕರ್ಮಯೋಗಿ’ ಮತ್ತು ‘ಸ್ವರಾಜ್ಯ’ ಎಂಬ ಜನಪ್ರಿಯ ಹಿಂದಿ ಮತ್ತು ಉರ್ದು ನಿಯತಕಾಲಿಕಗಳ ಏಜೆಂಟ್ ಆಗಿಯೂ ಕಾರ್ಯನಿರ್ವಹಿಸಿದರು. 1911 ರಲ್ಲಿ ಅವರು ಪಂಡಿತ್ ಮಹಾಬೀರ್ ಪ್ರಸಾದ್ ಅವರ ಮಾಸಿಕ ‘ದಿ ಸರಸ್ವತಿ’ಯ ಉಪ ಸಂಪಾದಕರಾದರು . ನಂತರ ಹಿಂದಿಯ ವಾರಪತ್ರಿಕೆ ‘ಅಭ್ಯುದಯ’ ಎಂಬ ರಾಜಕೀಯ ನಿಯತಕಾಲಿಕ ಪತ್ರಿಕೆಗೆ ಸೇರಿದರು. ಗಣೇಶ್‌ ಶಂಕರ್‌ 1917-1918 ರಲ್ಲಿ ಹೋಮ್ ರೂಲ್ ಚಳವಳಿಯಲ್ಲಿ ಸಕ್ರಿಯವಾಗಿ ಭಾಗವಹಿಸಿದರು. ಕಾನ್ಪುರದ ಜವಳಿ ಕಾರ್ಮಿಕರ ಮೊದಲ ಮುಷ್ಕರದ ನೇತೃತ್ವ ವಹಿಸಿದರು. ಸರ್ಕಾರದ ವಿರುದ್ಧ ರಾಯ್ ಬರೇಲಿಯಲ್ಲಿ ರೈತರ ಪರ ಧ್ವನಿಯೆತ್ತಿ ಪ್ರತಿಭಟನೆಯ ನೇತೃತ್ವ ವಹಿಸಿದ್ದಕ್ಕಾಗಿ 1920 ರಲ್ಲಿ ಬಂಧಿಸಲಾಯಿತು. 1922 ರಲ್ಲಿ ಜೈಲಿನಿಂದ ಬಿಡುಗಡೆಯಾದ ತಕ್ಷಣ ಗಣೇಶ್‌ ಶಂಕರ್‌ ವಿದ್ಯಾರ್ಥಿ ಫತೇಘರ್ ನಲ್ಲಿ ಪ್ರಾಂತೀಯ ರಾಜಕೀಯ ಸಮ್ಮೇಳನದ ಅಧ್ಯಕ್ಷರಾಗಿದ್ದಾಗ ಪ್ರಚೋದನಾಕಾರಿ ಭಾಷಣ ಮಾಡಿದ್ದಕ್ಕಾಗಿ ಅವರನ್ನು ಮತ್ತೆ ಜೈಲಿಗೆ ಕಳಿಸಲಾಯಿತು. ಎರಡು ವರ್ಷಗಳ ನಂತರ ಮತ್ತೆ ಅವರನ್ನು ಬಿಡುಗಡೆಗೊಳಿಸಲಾಯಿತು.

ಬಿಡುಗಡೆಗೊಂಡ ನಂತರ ಭಗತ್ ಸಿಂಗ್, ಚಂದ್ರಶೇಖರ್ ಆಜಾದ್ ಅವರೊಂದಿಗೆ ಸೇರಿ ರಾಷ್ಟ್ರದ ಸ್ವಾತಂತ್ರ್ಯಕ್ಕಾಗಿ ಹೋರಾಡಿದರು. ಇವರು 1925ರಲ್ಲಿ ಅಖಿಲ ಭಾರತ ಕಾಂಗ್ರೆಸ್ ಸಮಿತಿಯ ಅಧ್ಯಕ್ಷರಾಗಿದ್ದರು. ಅದಾಗಲೇ ಪ್ರಮುಖ ಕಾಂಗ್ರೆಸ್ ನಾಯಕರಾಗಿ ಗುರುತಿಸಿಕೊಂಡಿದ್ದ ಅವರು ತಮ್ಮ ಕೊನೆಯ ಕ್ಷಣದ ವರೆಗೂ ಮಜ್ದೂರ್ ಸಭಾವನ್ನು ಮುನ್ನಡೆಸಿದರು.  1926 ರಲ್ಲಿ ಯುಪಿ ವಿಧಾನ ಪರಿಷತ್‌ ಸದಸ್ಯರಾಗಿ ಆಯ್ಕೆಯಾದರು. 1929 ರಲ್ಲಿ, ಗಣೇಶ್ ಶಂಕರ್ ಫರೂಕಾಬಾದ್ನಲ್ಲಿ ನಡೆದ ಯುಪಿ ರಾಜಕೀಯ ಸಮ್ಮೇಳನದ ಅಧ್ಯಕ್ಷರಾದರು ಮತ್ತು 1930 ರಲ್ಲಿ ಯುಪಿ ಕಾಂಗ್ರೆಸ್ ಸಮಿತಿಯ ಅಧ್ಯಕ್ಷರಾದರು.

ಗೌರವ
ಕಾನ್ಪುರದಲ್ಲಿ ವೈದ್ಯಕೀಯ ಕಾಲೇಜಿಗೆ ಅವರ ನೆನಪಿಗಾಗಿ ಗಣೇಶ್‌ ಶಂಕರ್‌ ವಿದ್ಯಾರ್ಥಿ ಹೆಸರಿಡಲಾಗಿದೆ. ಫೂಲ್ ಬಾಗ್ ಅನ್ನು ಅವರ ಗೌರವಾರ್ಥವಾಗಿ ಗಣೇಶ್ ವಿದ್ಯಾರ್ಥಿ ಉದ್ಯಾನ್ ಎಂದೂ ಕರೆಯಲಾಗಿದೆ.


ಗಣೇಶ್ ಶಂಕರ್ ವಿದ್ಯಾರ್ಥಿ ಮಾರ್ಚ್ 25 , 1931 ರಂದು ನಿಧನರಾದರು.

Leave a Reply

Your email address will not be published.

This site uses Akismet to reduce spam. Learn how your comment data is processed.