ಪಂಚಮಿ ಬಾಕಿಲಪದವು, ದ್ವಿತೀಯ ಬಿ.ಎ, ಪತ್ರಿಕೋದ್ಯಮ ವಿಭಾಗ, ಅಂಬಿಕಾ ಮಹಾವಿದ್ಯಾಲಯ, ಬಪ್ಪಳಿಗೆ, ಪುತ್ತೂರು
ಪರಕೀಯರ ಆಳ್ವಿಕೆಯ ವಿರುದ್ಧ ಭಾರತೀಯರಲ್ಲಿ ಪ್ರತಿರೋಧವನ್ನು ಹುಟ್ಟಿಸಿ, ಸ್ವಾಭಿಮಾನವನ್ನು ಹೆಚ್ಚಿಸಿ ಆತ್ಮಗೌರವವನ್ನು ಬಡಿದೆಬ್ಬಿಸಿದ ಗೀತೆ “ವಂದೇ ಮಾತರಂ “! ರಕ್ತದ ಕಣಕಣಗಳಲ್ಲಿ ದೇಶಭಕ್ತಿಯನ್ನು ಆವಾಹನೆ ಮಾಡಿ, ಶತಮಾನಗಳ ಕಾಲ ಭದ್ರವಾಗಿ ಬೇರೂರಿದ್ದ ಬ್ರಿಟಿಷ್ ಸಾಮ್ರಾಜ್ಯದ ಬುಡವನ್ನೇ ಅಲುಗಾಡಿಸಿದ್ದ ರಣಮಂತ್ರ “ವಂದೇ ಮಾತರಂ”! ವಂದೇಮಾತರಂ ಗೀತೆಯನ್ನು “ಆನಂದಮಠ” ಎನ್ನುವ ಕಾದಂಬರಿಯಲ್ಲಿ ಬರೆದು ಭರತ ಭೂಮಿಯ, ತಾಯಿ ಭಾರತಿಯ ದಿವ್ಯತೆಯನ್ನು ಜನರಿಗೆ ತಿಳಿಸುವ ಶ್ರೇಷ್ಠ ಕೈಂಕರ್ಯವನ್ನು ಕೈಗೊಂಡವರು ಬಂಕಿಮ ಚಂದ್ರ ಚಟರ್ಜಿ ಅವರು.
ಬಂಕಿಮರು ಜೂನ್ 27, 1838ರಲ್ಲಿ ನೈಹತಿಯಲ್ಲಿರುವ ಕಂಥಾಲಪಾರ ಎನ್ನುವ ಹಳ್ಳಿಯಲ್ಲಿ ಜನಿಸಿದರು. ಹೂಗ್ಲಿಯಲ್ಲಿ ಪ್ರಾಥಮಿಕ ಶಿಕ್ಷಣವನ್ನು ಮುಗಿಸಿದರು. ತಮ್ಮ ಹನ್ನೊಂದನೆಯ ವಯಸ್ಸಿನಲ್ಲಿ ವೈವಾಹಿಕ ಜೀವನಕ್ಕೆ ಪಾದಾರ್ಪಣೆ ಮಾಡಿದರು. ದುರಾದೃಷ್ಟವಶಾತ್ ಮೊದಲನೆ ಹೆಂಡತಿಯಿ ಕೆಲವೇ ವರ್ಷಗಳಲ್ಲಿ ಮರಣವನ್ನಪ್ಪಿದರು. ನಂತರ ರಾಜಾದೇವಿ ಎಂಬುವರನ್ನು ವಿವಾಹವಾಗಿ, ಮೂರು ಹೆಣ್ಣು ಮಕ್ಕಳನ್ನು ಪಡೆದರು.
ಬಂಕಿಮರಿಗೆ 1857ರ ಪ್ರಥಮ ಸ್ವಾತಂತ್ರ್ಯ ಸಂಗ್ರಾಮ ನಡೆದಾಗ 19 ವರ್ಷದ ಹರೆಯ. 1858 ರ ಹೊತ್ತಿಗೆ ಸಂಗ್ರಾಮ ಕೊನೆಯ ಹಂತ ತಲುಪಿತ್ತು. ರಾಣಿ ಲಕ್ಷ್ಮೀಬಾಯಿ, ತಾತ್ಯಾಟೋಪೆ, ಕುವರಸಿಂಹ ಮೊದಲಾದ ವೀರರು ಪರಾಕ್ರಮ ಮೆರೆದಿದ್ದರು. ದೆಹಲಿಯ ಬಹದ್ದೂರ್ ಷಾ ಸೆರೆಮನೆ ಸೇರಿದ್ದರು. ಮತ್ತೋರ್ವ ನಾಯಕ ನಾನಾ ಸಾಹೇಬ್ ಪೇಶ್ವೆ ಅಜ್ಞಾತರಾಗಿದ್ದರು. ಬಂಕಿಮರು ವಿದ್ಯಾರ್ಥಿಯಾಗಿದ್ದುಕೊಂಡೇ, ಸ್ವಾತಂತ್ರ್ಯ ಸಂಗ್ರಾಮದ ಆಗುಹೋಗುಗಳನ್ನು ಸೂಕ್ಷ್ಮವಾಗಿ ಅವಲೋಕಿಸುತ್ತಿದ್ದರು. ಅದೇ ವರ್ಷ ಕಲ್ಕತ್ತಾ ವಿಶ್ವವಿದ್ಯಾನಿಲಯದಲ್ಲಿ ಪದವೀಧರರಾಗಿ, ತದನಂತರ ಕಾನೂನು ಪದವಿಯನ್ನು ಪಡೆದರು. ಬ್ರಿಟಿಷ್ ಸರ್ಕಾರದಲ್ಲಿ ಡೆಪ್ಯುಟಿ ಮ್ಯಾಜಿಸ್ಟ್ರೇಟ್ ಆಗಿ ಕೆಲಸ ನಿರ್ವಹಿಸಿದರು. ಆದರೆ ಬ್ರಿಟಿಷರು ದೇಶದಲ್ಲಿ ನಡೆಸುತ್ತಿದ್ದ ವಿಧ್ವಂಸಕ ಕೃತ್ಯಗಳನ್ನು ನೋಡಿ ನೊಂದು 1891ರಲ್ಲಿ ತಮ್ಮ ಸರ್ಕಾರಿ ಕೆಲಸಕ್ಕೆ ವಿದಾಯವನ್ನು ಹೇಳಿದರು.
ಮಹರ್ಷಿ ಅರವಿಂದರು ಹೇಳಿರುವಂತೆ “ಆರಂಭದ ದಿನಗಳ ಬಂಕಿಮರು ಕೇವಲ ಸಾಹಿತಿಯಷ್ಟೇ ಆಗಿದ್ದರು, ಪ್ರೌಢಾವಸ್ಥೆಯ ಬಂಕಿಮರಾದರೋ ಋಷಿಯೂ, ರಾಷ್ಟ್ರ ನಿರ್ಮಾಪಕರೂ ಆದರು”. ಬಂಕಿಮರು ಈಶ್ವರಚಂದ್ರಗುಪ್ತರ ಮಾದರಿಯಲ್ಲಿ ತಮ್ಮ ಸಾಹಿತ್ಯಿಕ ಜೀವನವನ್ನು ಪ್ರಾರಂಭ ಮಾಡಿದರಾದರೂ, ತಮ್ಮ ಪ್ರತಿಭೆಯು ಬೇರೆಯದೇ ದಿಕ್ಕಿನಲ್ಲಿ ಬೆಳಗಲಿದೆ ಎಂಬುದನ್ನು ಮನಗಂಡರು. ಕೇವಲ ಛಂದೋಬದ್ಧ ಪದ್ಯ ಪ್ರಕಾರವನ್ನು ಮಾತ್ರ ರಚಿಸುತ್ತಿದ್ದ ಬಂಕಿಮರು ಕಾದಂಬರಿಯನ್ನು ಬರೆಯತೊಡಗಿದರು. “ರಾಜ್ ಮೋಹನ್’ಸ್ ವೈಫ್” ಎನ್ನುವ ಇಂಗ್ಲೀಷ್ ಕಾದಂಬರಿಯನ್ನು ರಚಿಸಿದರು. ತದನಂತರ ದುರ್ಗೇಶನಂದಿನಿ, ಕಪಾಲಕುಂಡ, ವಿಷವೃಕ್ಷ, ರಾಜಸಿಂಹ, ದೇವಿ ಚೌದುರಾಣಿ ಇತ್ಯಾದಿ ಕೃತಿಗಳನ್ನು ರಚಿಸಿದರು. ಜೊತೆಗೆ ಭಗವದ್ಗೀತೆಯ ಭಾವಾರ್ಥವನ್ನು ಬರೆದರು. “ಅನುಶೀಲನ್ ತತ್ವ” ಎನ್ನುವ ಕೃತಿಯು ಅನುಶೀಲನಾ ಸಮಿತಿಯ ರಚನೆಗೆ ಕಾರಣವಾಯಿತು ಮತ್ತು ಯುವಜನತೆಗೆ ಪ್ರೇರೇಪಣೆ ನೀಡಿತು. ಬಂಗಾಳದ ಜನತೆಯಲ್ಲಿ ಸ್ವಾತಂತ್ರ್ಯ ಹೋರಾಟದ ಕಿಚ್ಚು ಹೆಚ್ಚಾಗಲು ಬಂಕಿಮರ ಸಾಹಿತ್ಯ ಕೃತಿಗಳು ಪ್ರಮುಖ ಕಾರಣವಾದವು ಎಂಬುದು ಗಮನಾರ್ಹ ವಿಚಾರ. ಬ್ರಿಟಿಷರ ದಾಸ್ಯದಿಂದ ಮುಕ್ತಿಪಡೆಯುವುದು ಮಾತ್ರವಲ್ಲದೆ ಸಮಾಜದಲ್ಲಿ ಹುಟ್ಟಿಕೊಂಡಿದ್ದ ಜಾತಿ ತಾರತಮ್ಯದ ಸಂಕೋಲೆಗಳನ್ನು ಕಳಚುವುದು, ಸ್ತ್ರೀ ಸಮಾನತೆಯನ್ನು ಕಾಪಾಡುವುದು ಇವರ ಗುರಿಯಾಗಿತ್ತು. ಇದರ ಬಗ್ಗೆ ಸಾಹಿತ್ಯದ ಮೂಲಕ ಅರಿವನ್ನು ಮೂಡಿಸುತ್ತಿದ್ದರು.
ಇಂದಿಗೂ ಲಕ್ಷಾಂತರ ಭಾರತೀಯರ ಹೃನ್ಮನಗಳನ್ನು ಪುಲಕಿತಗೊಳಿಸುವ ದೈವೀ ಗೀತೆಯನ್ನು ರಚಿಸಿದ “ಬಂಗಾಳಿ ಸಾಹಿತ್ಯದ ಸಾಮಾಟ್ರ” ಬಂಕಿಮರು 1894 ಎಪ್ರಿಲ್ 8 ರಂದು, ತಮ್ಮ 55ನೇ ವಯಸ್ಸಿನಲ್ಲಿ ಭಾರತಾಂಬೆಯ ಮಡಿಲಲ್ಲಿ ಲೀನರಾದರು. ಆದರೂ ತಮ್ಮ ಕೃತಿಗಳಿಂದ , ಕಾರ್ಯಗಳಿಂದ ನಮ್ಮೆಲ್ಲರ ನಡುವೆ ಜೀವಂತವಾಗಿರುವರು!