– ಶ್ರೀಕಂಠ ಬಾಳಗಂಚಿ,ಹವ್ಯಾಸಿ ಬರಹಗಾರರು
ಅದು ಸೆಪ್ಟೆಂಬರ್ 27,1907 ಅಂದು ಅಖಂಡ ಭಾರತದ ಅಂಗವಾಗಿದ್ದ ಇಂದಿನ ಪಾಕೀಸ್ಥಾನದ ಜರನವಾಲಾ ತಾಲ್ಲೂಕಿನ ಬಂಗಾ ಎಂಬ ಹಳ್ಳಿಯಲ್ಲಿ. ಶ್ರೀಮತಿ ವಿದ್ಯಾವತಿ ಮತ್ತು ಶ್ರೀ ಕಿಶನ್ ಸಿಂಗ್ ಎಂಬ ದಂಪತಿಗಳಿಗೆ ಗಂಡು ಮಗು ಜನವಾಯಿತು. ಮುದ್ದು ಮುದ್ದಾಗಿ ಸ್ವಲ್ಪ ಉದ್ದವಾಗಿದ್ದ ಮುಖ, ನೀಳ ನಾಸಿಕವಾಗಿದ್ದ ಮಗುವಿಗೆ ಭಗತ್ ಸಿಂಗ್ ಎಂದು ಹೆಸರಿಟ್ಟರು. ಅವರದ್ದು ಕೃಷಿ ಆಧಾರಿತ ಕುಟುಂಬ ತಂದೆ ಕೃಷಿಯ ಜೊತೆಜೊತೆಗೆ ಜೀವ ವಿಮಾ ಕಂಪನಿಯಲ್ಲಿ ಏಜೆಂಟರಾಗಿ ವೃತ್ತಿ ಮಾಡುತ್ತಿದ್ದರು. ಅವರ ಚಿಕ್ಕಪ್ಪ ಶ್ರೀ ಅಜಿತ್ ಸಿಂಗರು ಅದಾಗಲೇ ಸ್ವಾತಂತ್ರ್ಯ ಚಳುವಳಿಯಲ್ಲಿ ಧುಮಿಕಿ ಸುತ್ತ ಮುತ್ತಲಿನ ಹಳ್ಳಿಗಳ ಜನರನ್ನು ಸ್ವಾತಂತ್ರ್ಯ ಚಳುವಳಿಯಲ್ಲಿ ಭಾಗವಹಿಸಲು ತಮ್ಮ ಉಗ್ರ ಭಾಷಣಗಳ ಮೂಲಕ ಪ್ರೇರೇಪಿಸುತ್ತಿದ್ದರು. ಇಂತಹ ವಾತವರಣದಲ್ಲಿ ಬೆಳೆದ ಭಗತ್ ಸಿಂಗರಿಗೆ ಸಹಜವಾಗಿಯೇ ಸ್ವಾತಂತ್ಯ್ರದ ಕಿಚ್ಚು ಬಾಲ್ಯದಲ್ಲಿಯೇ ಹತ್ತಿತ್ತು ಎಂದರೆ ತಪ್ಪಾಗಲಾರದು. ಅದೊಮ್ಮೆ ಹರಸಾಹಸ ಮಾಡಿ ಅವರ ಚಿಕ್ಕಪ್ಪನವರನ್ನು ಸೆರೆ ಹಿಡಿದ ಬ್ರಿಟೀಷರು ಅವರನ್ನು ಜೈಲಿನಲ್ಲಿ ಬಂಧಿಸಿಟ್ಟಿದ್ದರು. ಹಾಗೆ ಚಿಕ್ಕಪ್ಪನ್ನನ್ನು ನೋಡಲೂ ಹೋಗಿದ್ದ ಬಾಲಕ ಭಗತ್ ಸಿಂಗ್ ಅಲ್ಲಿದ್ದ ಬಂದೂಕುಗಳನ್ನು ನೋಡಿ ಮನೆಗೆ ಬಂದು ತಮ್ಮ ತಾಯಿಯವರಿಗೆ ಬ್ರಿಟಿಷರೊಂದಿಗೆ ಹೋರಾಟ ನಡೆಸಲು ನಮ್ಮ ಹೊಲ ಗದ್ದೆಗಳಲ್ಲಿ ಭತ್ತ, ಜೋಳದ ಬದಲು ಬಂದೂಕುಗಳನ್ನು ಬೆಳೆದು ಅದನ್ನು ಎಲ್ಲರಿಗೂ ಹಂಚಿ ಬ್ರಿಟಿಷರನ್ನು ದೇಶದಿಂದ ಓಡಿಸಬಹುದಲ್ಲವೇ? ಎಂದು ಮುಗ್ಧನಾಗಿ ಕೇಳಿದ್ದನೆಂದರೆ ಸ್ವಾತಂತ್ಯ್ರದ ಪ್ರೇಮ ರಕ್ತಗತವಾಗಿತ್ತು ಎನ್ನಬಹುದು.
ಭಗತ್ ಸಿಂಗ್ ಅವರು 12ನೇ ವಯಸ್ಸಿನಲ್ಲಿದ್ದಾಗ, ಏಪ್ರಿಲ್ 13, 1919ರಂದು ಅಂದರೆ ಸರಿಯಾಗಿ ನೂರು ವರ್ಷಗಳ ಹಿಂದೆ ಬ್ರಿಟಿಷರ ವಿರುದ್ಧ ಪ್ರತಿಭಟನೆ ಮಾಡಲು ಜಲಿಯನ್ ವಾಲಾ ಬಾಗ್ ಎಂಬ ಪ್ರದೇಶದಲ್ಲಿ ನ್ರೆರೆದಿದ್ದ ಸಾವಿರಾರು ಮುಗ್ಧ ಜನರ ಮೇಲೆ ಡಯರ್ ಎಂಬ ಕ್ರೂರ ಅಧಿಕಾರಿ ಮಾರಣ ಹೋಮ ನಡೆಸಿ ಸಾವಿರಾರು ಅಮಾಯಕರನ್ನು ಬಲಿ ತೆಗೆದುಕೊಂಡ ದುರಂತ ಭಗತ್ ಸಿಂಗರ ಮೇಲೇ ಭಾರಿ ಪ್ರಭಾವ ಬೀರಿತು. ಆ ಘಟನೆ ಆದ ಎರಡು ಮೂರು ದಿನಗಳ ನಂತರ ಶಾಲೆಯಿಂದ ಚಕ್ಕರ್ ಹಾಕಿ ದುರಂತ ನಡೆದ ಸ್ಥಳಕ್ಕೆ ಹೋದ ಬಾಲಕ ಭಗತ್ ಸಿಂಗ್ ಒಂದು ಖಾಲಿ ಬಾಟಲಿಯಲ್ಲಿ ರಕ್ತಸಿಕ್ತವಾಗಿದ್ದ ಮಣ್ಣನ್ನು ತುಂಬಿಕೊಂಡು ಬಂದು ಅದನ್ನು ತನ್ನ ಮನೆಯ ದೇವರ ಕೋಣೆಯಲ್ಲಿಟ್ಟು ಇತರೇ ದೇವರುಗಳ ಜೊತೆ ಆ ಮಣ್ಣಿಗೂ ಪ್ರತಿದಿನವೂ ಪೂಜಿಸುತ್ತಿದ್ದನೆಂದರೆ ಅವರ ದೇಶಪ್ರೇಮ ಇನ್ನೆಷ್ಟು ಇತ್ತು ಎಂಬುದು ತಿಳಿಯುತ್ತದೆ, ಇದೇ ಘಟನೆ ಅವರ ಮೇಲೆ ಬಹಳ ಪ್ರಭಾವ ಬೀರಿ ಸ್ವಾತಂತ್ರ್ಯ ಹೋರಾಟದ ಕಿಚ್ಚನ್ನು ಹುಚ್ಚೆಬ್ಬಿಸಿ ಅಂದಿನಿಂದಲೇ ಮನಸ್ಸಿನಲ್ಲಿ ಹೋರಾಟದ ಚಿತ್ತಾರ ಮೂಡಿಸಿತ್ತು. ತಾನು ಹುಟ್ಟಿರುವುದೇ ದೇಶದ ವಿಮೋಚನೆಗಾಗಿಯೇ ಎಂದು ಎಲ್ಲರೊಡನೆ ಹೇಳುತ್ತಿದ್ದರು.
ಪಂಜಾಬಿನ ಕ್ರಾಂತಿಕಾರಿ ಚಟುವಟಿಕೆಗಳಲ್ಲಿ ನಿರತರಾಗಿದ್ದು, ಲಾಹೋರ್ ಪಿತೂರಿ ಪ್ರಕರಣದಲ್ಲಿ ಪ್ರಮುಖ ಆರೋಪಿಯಾಗಿದ್ದ ಕರ್ತಾರ್ ಸಿಂಗ್ ಸರಭ್ ರವರನ್ನು 1915 ರಲ್ಲಿ ಅವರ 20 ನೇ ವಯಸ್ಸಿನಲ್ಲೇ ನೇಣಿಗೇರಿಸಲಾಗಿತ್ತು. ರಾಷ್ಟ್ರ ವಿಮೋಚನೆಯೊಂದೇ ನನ್ನ ಗುರಿ. ಯಾವುದೇ ವ್ಯಕ್ತಿ, ರಾಷ್ಟ್ರ, ಧರ್ಮ ಅಥವಾ ಜನಾಂಗದ ಮೇಲೆ ದ್ವೇಷ ಸಾಧಿಸಲು ನಾನಾವುದನ್ನೂ ಮಾಡಿಲ್ಲ. ನನಗೆ ಬೇಕಾಗಿರುವುದೊಂದೆ – ಸ್ವಾತಂತ್ರ್ಯ. ಅದೊಂದೇ ನನ್ನ ಕನಸು ಎಂಬ ಸರಭ್ರ ಕೊನೆಗಾಲದ ಮಾತುಗಳು ಅವರಲ್ಲಿ ಕ್ರಾಂತಿಯ ಉದ್ದೀಪನ ಹಚ್ಚಿದ್ದವು. ಇದು ಭಗತ್ರನ್ನು ಮೈನವಿರೇಳಿಸಿ ಸಾವಿಗೇ ಸವಾಲು ಹಾಕುವ ಗುಣವನ್ನು ಮೈಗೂಡುವಂತೆ ಮಾಡಿತ್ತು.
ಭಗತ್ ಸಿಂಗ್ ಸುಮಾರು 18-19ರ ವಯಸ್ಸಿಗೆ ಬಂದಾಗ ಹೀಗೆಯೇ ಬಿಟ್ಟು ಬಿಟ್ಟರೆ ತಮ್ಮ ಕೈ ತಪ್ಪಿ ಹೋದಾನು ಎಂದು ಭಾವಿಸಿದ ಅವರ ಪೋಷಕರು ಮದುವೆ ಮಾಡಲು ಮುಂದಾದಾಗ ಆ ಬಾಲ್ಯ ವಿವಾಹವನ್ನು ತಪ್ಪಿಸಿಕೊಳ್ಳಲು ಭಗತ್ ಮನೆಯಿಂದ ಓಡಿಹೋಗಿದ್ದದು. ಮದುವೆಯಾಗುವುದೇ ಒಂದು ದೊಡ್ಡ ಸಾಧನೆಯಾ? ಮದುವೆ ಯಾರು ಬೇಕಾದರೂ ಆಗಬಹುದು, ಆದರೆ ನನ್ನ ಗುರಿ ಬ್ರಿಟಿಷರನ್ನು ಭಾರತದಿಂದ ಓಡಿಸುವುದು ಎಂದು ಎದೆತಟ್ಟಿ ಎಲ್ಲರ ಬಳಿ ಹೇಳಿದ ದಿಟ್ಟ ಯುವಕ ಭಗತ್.
ಮುಂದೆ ತಮ್ಮ ವಿದ್ಯಾಭ್ಯಾಸವನ್ನು ಮೊಟುಕುಗೊಳಿಸಿ ಮಹಾತ್ಮಾ ಗಾಂಧೀಯವರ ನೇತೃತ್ವದಲ್ಲಿ ನಡೆಯುತ್ತಿದ್ದ ಸ್ವಾತಂತ್ಯ್ರ ಸಂಗ್ರಾಮದಲ್ಲಿ ಸಕ್ರೀಯವಾಗಿ ಧುಮುಕಿದರು. ಬ್ರಿಟಿಷರ ವಿರುದ್ಧ ಗಾಂಧಿಯವರ ಅಹಿಂಸಾ ಹೋರಾಟ ಅನೇಕ ಯುವಕರುಗಳಿಗೆ ಇಷ್ಟವಾಗುತ್ತಿರಲಿಲ್ಲ. ದಂಡ ದಶಗುಣಂ ಭವೇತ್ ಎನ್ನುವಂತೆ ಮುಳ್ಳನ್ನು ಮುಳ್ಳಿನಿಂದಲೇ ತೆಗೆದು ಹಾಕುವಂತೆ ಬ್ರಿಟಿಯರ ವಿರುದ್ಧ ಉಗ್ರವಾದ ಹೋರಾಟವನ್ನು ಮಾಡಿಯಾದರೂ ಅವರನ್ನು ಓದಿಸಬೇಕೆಂದು ಹೇಳುತ್ತಿದ್ದ ಅನೇಕ ಯುವಕರುಗಳಲ್ಲಿ ಭಗತ್ ಸಿಂಗ್, ಚಂದ್ರಶೇಖರ ಆಝಾದ್ ರಾಜಗುರು, ಸುಖದೇವ್ ಮುಂತಾದವರು ಪ್ರಮುಖರು.
ಭಾರತೀಯರು ಕೇವಲ ಅಂಹಿಂಸಾವಾದಿಗಳಲ್ಲ. ನಮ್ಮಲ್ಲೂ ಕ್ಷಾತ್ರವಿದೆ ಎಂದು ತೋರಿಸುವ ಸಲುವಾಗಿಯೇ, ಅದೊಂದು ದಿನ ದೆಹಲಿಯ ಸೆಂಟ್ರಲ್ ಅಸೆಂಬ್ಲಿಯ ಮೇಲೆ ಭಗತ್ ಮತ್ತು ಸಹಚರರು ಕಡಿಮೆ ತಾಕತ್ತಿನ ಬಾಂಬುಗಳು ಸ್ಫೋಟಿಸಿದ್ದರು. ಈ ಸ್ಪೋಟ ಕೇವಲ ಅಲ್ಲಿ ಕಾರಿಡಾರಿನಲ್ಲಿ ನೆರೆದಿದ್ದ ಜನರನ್ನು ಬೆದರಿಸಿ ಓಡಿಸಲು ಮಾತ್ರ ಅವನ್ನು ಬಳಸಲಾಗಿತ್ತೇ ಹೊರತು ಯಾರನ್ನು ಬಲಿ ತೆಗೆದುಕೊಳ್ಳುವ ಉದ್ದೇಶವಾಗಿರಲಿಲ್ಲ. ಆದರೆ ಭಾರತೀಯರಿಂದ ಇಂತಹ ಉಗರ ಪ್ರತಿಭಟನೆಯನ್ನು ನಿರೀಕ್ಷಿಸಿರದಿದ್ದ ಬ್ರಿಟೀಷರು ಇದನ್ನು ಹೀಗೆಯೇ ಬಿಟ್ಟರೆ ನಾವು ಅಸಹಾಯಕರು ಎಂದು ತೋರಿಸಿಕೊಂಡಂತೆ ಆಗುತ್ತದೆ ಎಂದು ಭಾವಿಸಿ ತೀವ್ರತರವಾಗಿ ತನಿಖೆ ನಡೆಸಿ, ಕಡೆಗೆ ಈ ಕೃತ್ಯದ ಕಾರಣೀಭೂತರದಾದ ಭಗತ್ ಸಿಂಗ್, ರಾಜಗುರು ಮತ್ತು ಸುಖದೇವ್ ಅವರನ್ನು ಬಂಧಿಸಲು ಯಶಸ್ವಿಯಾಗಿ ಅವರನ್ನು ಎಲ್ಲಾ ಖೈದಿಗಳ ಜೊತೆಯಲ್ಲಿ ಸೆರೆಮನೆಗೆ ತಳ್ಳಿದರು.
ಬ್ರಿಟೀಷರ ಈ ರೀತಿಯ ದೌರ್ಜನ್ಯವನ್ನು ಪ್ರತಿಭಟಿಸಿದ ಭಗತ್ ಸಿಂಗರು, ಆವೇನೂ ಕಳ್ಳತನ ಮಾಡಿಲ್ಲ ದರೋಡೆ ಮಾಡಿಲ್ಲ. ನಾವು ಮಾಡಿರುವುದು ಸ್ವಾತಂತ್ಯ್ರ ಹೋರಾಟ ಹಾಗಾಗಿ ನಮ್ಮನ್ನು ಎಲ್ಲಾ ಖೈದಿಗಳಂತೆ ಭಾವಿಸದೇ, ರಾಜಕೀಯ ಸೆರೆಯಾಳು ಎಂಬುದಾಗಿ ಕಾಣಬೇಕೆಂದು ತಿಳಿಸಿ, ತನಗೆ ಮತ್ತು ತನ್ನ ಸಹಚರರಿಗೆ ಎಲ್ಲ ಸವಲತ್ತುಗಳನ್ನು ಕೊಡಬೇಕೆಂದು ಆಗ್ರಹಿಸಿದ್ದರು. ಅಲ್ಲಿ ಬ್ರಿಟಿಷ್ ಕಳ್ಳರು, ದಂಗೆಕೋರರಿಗೆ ನೀಡುತ್ತಿದ್ದ ಸವಲತ್ತುಗಳನ್ನು ಭಾರತೀಯ ಕೈದಿಗಳಿಗೆ ನೀಡುತ್ತಿರಲಿಲ್ಲ
ಬಂಗಾಲದಿಂದ ವಂದೇ ಮಾತರಂ ಪ್ರತಿಧ್ವನಿಸಿದರೆ ಇನ್ ಕ್ವಿಲಾಬ್ ಜಿಂದಾಬಾದ್ ಎಂಬ ಮತ್ತೊಂದು ವೀರ ಘೋಷಣೆಯನ್ನು ಹುಟ್ಟುಹಾಕಿದ್ದೇ ಭಗತ್ ಸಿಂಗ್. ಮುಂದೆ ಈ ಎರಡು ಘೋಷಣೆಗಳೂ ಭಾರತದ ಸ್ವಾತಂತ್ರ್ಯ ಹೋರಾಟಗಾರರ ಘೋಷವಾಕ್ಯವಾಗಿ ಹೋಯಿತು.
ಭಗತ್ ಸಿಂಗ್ ಮತ್ತು ಅವರ ಸಹಚರರ ಅಪರಾಧ ಅಂತಹ ಗಂಭೀರವಲ್ಲದ ಕಾರಣ ಅವರಿಗೆ ಗಲ್ಲು ಶಿಕ್ಷೆ ಅಧಿಕವಾಯಿತೆಂದು ಬ್ರಿಟಿಷರಿಗೆ ತಿಳಿಸಿ ಅವರನ್ನು ಬಿಡುಗಡೆ ಮಾಡಿಸಬೇಕೆಂದು ಕೇಳಿಕೊಳ್ಳಲು, ಗಾಂಧಿಯವರನ್ನು ಪರಿ ಪರಿಯಾಗಿ ಕೇಳಿಕೊಂಡರೂ, ನಮ್ಮದು ಅಂಹಿಸಾವಾದ. ಅವರದ್ದು ಹಿಂಸಾವಾದ. ಅವರನ್ನು ಸಮರ್ಥನೆ ಮಾಡಲಾಗದು ಎಂಬ ವಿತಂಡ ವಾದ ಮಂಡಿಸಿದ ಗಾಂಧಿಯವರು, ಭಗತ್ ಸಿಂಗ್ ಅವರ ಪರವಾಗಿ ಬ್ರಿಟಿಷರ ವಿರುದ್ಧ ವಾದ ಮಾಡಿದ ಪರಿಣಾಮವಾಗಿ ಭಗತ್ ಸಿಂಗ್ ಮತ್ತವರ ಸಹಚರರನ್ನು ಮಾರ್ಚ್ 25, 1931 ರಂದು ಗಲ್ಲಿಗೆ ಏರಿಸಲು ನಿರ್ಧರಿಸಿ ಕಡೆಯ ಬಾರಿಗೆ ಅವರ ತಾಯಿಯವರನ್ನು ಭೇಟಿ ಮಾಡಲು ಅನುವು ಮಾಡಿಕೊಡಲಾಯಿತು. ಭಗತ್ ಅವರನ್ನು ನೋಡಿ ಅವರ ತಾಯಿಯವರು ಕಣ್ಣೀರು ಹಾಕಿದಾಗ, ಅಮ್ಮಾ ಇದೇನಿದು? ಒಬ್ಬ ಸ್ವಾತಂತ್ರ್ಯ ಹೋರಾಟಗಾರರ ಹೆಂಡತಿ, ಅತ್ತಿಗೆ ಮತ್ತು ತಾಯಿಯಾಗಿ ಈ ರೀತಿ ಆಳುವುದು ತರವಲ್ಲ. ಹುಟ್ಟಿದವರು ಎಂದಾದರೂ ಒಮ್ಮೆ ಸಾಯಲೇ ಬೇಕಲ್ಲವೇ? ಎಂದೋ, ಹೇಗೋ ಸಾಯುವ ಬದಲು ಈಗಲೇ, ನಮ್ಮ ದೇಶಕ್ಕಾಗಿ ದೇಹತ್ಯಾಗ ಮಾಡುವುದು ಎಷ್ಟು ಜನರಿಗೆ ಸಿಗುತ್ತದೆ. ಅಂತಹ ಸದಾವಕಾಶ ನಿಮ್ಮ ಮಗನಿಗೆ ಸಿಕ್ಕಿರುವುದರಿಂದ ಸಂತೋಷದಿಂದ ಕಳುಹಿಸಿಕೊಡಿ ಎಂದು ತಾಯಿಯನ್ನು ಸಮಾಧಾನ ಪಡಿಸಿದ ದಿಟ್ಟ ಯುವಕ ಭಗತ್ ಸಿಂಗ್.