ಬೆಂಗಳೂರು: ನಮ್ಮದು 1947ರ ನಂತರ ಬೆಳೆದ ನಾಗರಿಕತೆಯಲ್ಲ. ನಮ್ಮ ನಾಗರಿಕತೆಗೆ 5000 ವರ್ಷಗಳಿಗೂ ಮಿಗಿಲಾದ ಅಭೂತಪೂರ್ವ ಇತಿಹಾಸವಿದೆ. ಜ್ಞಾನವನ್ನು ಪವಿತ್ರವೆಂದು ಭಾವಿಸಿದ ನಮ್ಮ ನಾಗರಿಕತೆಯ ಭಾಗವಾದ ಜ್ಞಾನಪರಂಪರೆಯ ಆಧಾರಿತವಾಗಿ ನಮ್ಮ ಶಿಕ್ಷಣ ವ್ಯವಸ್ಥೆ ರಚನೆಯಾಗಬೇಕು ಎಂದು ನವದೆಹಲಿಯ ಜೆಎನ್ ಯು ವಿಶ್ವವಿದ್ಯಾನಿಲಯದ ಕುಲಪತಿ ಡಾ.ಶಾಂತಿಶ್ರೀ ಧುಲಿಪುಡಿ ಪಂಡಿತ್ ಅವರು ಹೇಳಿದರು.

ದಿಶಾಭಾರತ್ ಸಂಸ್ಥೆಯ ‘ನನ್ನ ಭಾರತ’ ಅಭಿಯಾನದ ಅಂಗವಾಗಿ ಆಯೋಜಿಸಲಾಗಿರುವ ತಜ್ಞರಿಂದ ಉಪನ್ಯಾಸ ಕಾರ್ಯಕ್ರಮದ ಹನ್ನೆರಡನೇ ದಿನ ‘ಶಿಕ್ಷಣ ಮತ್ತು 2047ರ ಗುರಿ’ ಎಂಬ ವಿಷಯದ ಕುರಿತು ಅವರು ಮಾತನಾಡಿದರು.

ಇಂದು ನಮ್ಮ ಶಿಕ್ಷಣ ಕ್ಷೇತ್ರದಲ್ಲಿ ನಮ್ಮತನದ ಆಧಾರದ ಮೇಲೆ ವೈಚಾರಿಕತೆಯನ್ನು ಸೃಜಿಸುವ ಕಾರ್ಯವಾಗಬೇಕಿದೆ. ಸತ್ಯ ಪವಿತ್ರವಾದದ್ದು ಮತ್ತು ವೈಚಾರಿಕತೆ ಸೃಷ್ಟಿಯಾಗಿರುವುದು. ಆದರೆ ವೈಚಾರಿಕತೆಯೇ ಪವಿತ್ರವಾದದ್ದು ಎಂಬ ನಿಟ್ಟಿನಲ್ಲಿ ಇಂದಿನ ಶೈಕ್ಷಣಿಕ ಕ್ಷೇತ್ರ ಕಾರ್ಯನಿರ್ವಹಿಸುತ್ತಿದೆ. ಹಾಗಾಗಿಯೇ ನಮ್ಮದು ಸೋಲಿನ ಇತಿಹಾಸ ಎಂದು ಬಿಂಬಿಸಲಾಗುತ್ತಿದೆ. ಆದರೆ ನಮ್ಮದು ಶೌರ್ಯದ ಇತಿಹಾಸ ಎನ್ನುವುದನ್ನು ತಿಳಿಸುವ ನಿಟ್ಟಿನಲ್ಲಿ ಭಾರತೀಯ ಸತ್ಯಕಥನವನ್ನು ತಿಳಿಸಬೇಕಿದೆ ಎಂದರು.

ಭಾರತೀಯ ಜ್ಞಾನಪರಂಪರೆಯ ಆಧಾರಿತವಾಗಿ ನಮ್ಮ ಶಿಕ್ಷಣ ವ್ಯವಸ್ಥೆ ರಚನೆಯಾಗಬೇಕು. ನಮ್ಮ ಪ್ರಾಚೀನರು ಉಪಯೋಗಿಸಿದ ಜ್ಞಾನವನ್ನು ಅರಿತುಕೊಳ್ಳುವಲ್ಲಿ ನಾವು ಸೋತಿದ್ದೇವೆ. ಭಾರತೀಯತೆಯ ಪ್ರಾಮುಖ್ಯತೆಯನ್ನು ಜಗತ್ತಿಗೆ ತಿಳಿಸಲು ಸಂಶೋಧನೆ ಕ್ಷೇತ್ರದಲ್ಲಿ ಹೆಚ್ಚು ಕೆಲಸವಾಗಬೇಕಿದೆ. ನಮ್ಮ ಮೌಲ್ಯಾಧಾರಿತವಾಗಿ ಶೈಕ್ಷಣಿಕ ಕ್ಷೇತ್ರದಲ್ಲಿ ಸೆಟೆದು ನಿಲ್ಲುವ ಧೈರ್ಯ ನಮಗೆ ಇಂದು ಬೇಕಾಗಿದೆ ಎಂದು ಅಭಿಪ್ರಾಯಪಟ್ಟರು.

ಭಾರತೀಯ ನಾಗರಿಕತೆ ಯಾವುದರಲ್ಲೂ ಬೇಧಭಾವವನ್ನು ಕಾಣಲಿಲ್ಲ ಮತ್ತು ಒಂದೇ ವೈಚಾರಿಕ ಸಂಗತಿ ಸತ್ಯ ಎನ್ನುವುದನ್ನು ಒಪ್ಪಲಿಲ್ಲ. ಹಾಗಾಗಿ ಶಿಕ್ಷಣ ಕ್ಷೇತ್ರದಲ್ಲೂ ಎಲ್ಲಾ ವಿಷಯಗಳನ್ನು ಸಮಗ್ರವಾಗಿ, ಸಮಾನವಾಗಿ ಅಧ್ಯಯನ ಮಾಡುವ ಜೊತೆಗೆ ಸತ್ಯಾಧಾರಿತವಾದ ಎಲ್ಲಾ ವೈಚಾರಿಕ ಸಂಗತಿಗಳ ಅಧ್ಯಯನ ಸಾಧ್ಯವಾಗಬೇಕು. ಆಧುನಿಕತೆಯ ಜಗತ್ತಿನಲ್ಲಿ ಪ್ರಮುಖ ಪಾತ್ರ ವಹಿಸುತ್ತಿರುವ ತಂತ್ರಜ್ಞಾನಕ್ಕೆ ಯಾವುದೇ ವೈಚಾರಿಕತೆಯ ಲೇಪ ಇಲ್ಲದಿರುವುದರಿಂದ ಅವುಗಳನ್ನು ಜಾಗರೂಕವಾಗಿ ಬಳಸಿಕೊಂಡು ವಿಶ್ವವೇ ಮೆಚ್ಚುವಂತಹ ವಿಷಯಗಳನ್ನು ಸಂಶೋಧನೆಯ ಮೂಲಕ ನೀಡಬೇಕು ಎಂದು ನುಡಿದರು.

ರಾಷ್ಟ್ರೀಯ ಶಿಕ್ಷಣ ನೀತಿಯ ಮೂಲಕ ರಾಷ್ಟ್ರದ ಶಿಕ್ಷಣ ಕ್ಷೇತ್ರದಲ್ಲಿ ಅಪಾರ ಬದಲಾವಣೆಯಾಗುತ್ತಿದೆ. ಆದರೆ ಶೈಕ್ಷಣಿಕ ಕ್ಷೇತ್ರದಲ್ಲಿ ಬದಲಾವಣೆ ತರುವುದು ಕೇವಲ ಸರ್ಕಾರದ ಮತ್ತು ಶಿಕ್ಷಣ ಸಂಸ್ಥೆಗಳ ಜವಾಬ್ದಾರಿ ಮಾತ್ರವಲ್ಲ. ಬದಲಾಗಿ ಪ್ರತಿ ನಾಗರಿಕನೂ ನಮ್ಮ ಮೌಲ್ಯಾಧಾರಿತ ಶಿಕ್ಷಣ ವ್ಯವಸ್ಥೆಗೆ ಬೆಂಬಲವಾಗಿ ನಿಲ್ಲುವ ಜವಾಬ್ದಾರಿಯನ್ನು ಹೊಂದಿದ್ದಾರೆ. ಜ್ಞಾನವೇ ಶಕ್ತಿ, ಶಕ್ತಿಯೇ ಜ್ಞಾನವಾಗಿರುವುದರಿಂದ ಜ್ಞಾನನೀಡುವ ಶಿಕ್ಷಣ ಕ್ಷೇತ್ರಕ್ಕೆ ಹೆಚ್ಚು ಅನುದಾನಗಳು ಸಿಗುವಂತಾಗಿ, ಜಾಗತಿಕ ಮಟ್ಟದಲ್ಲಿ ಸ್ಪರ್ಧಾತ್ಮಕವಾಗಿ ನಮ್ಮ ಶಿಕ್ಷಣ ವ್ಯವಸ್ಥೆ ಬೆಳೆಯಬೇಕು ಎಂದು ಆಶಿಸಿದರು.

Leave a Reply

Your email address will not be published.

This site uses Akismet to reduce spam. Learn how your comment data is processed.