ಅಖಿಲ ಭಾರತೀಯ ಪ್ರತಿನಿಧಿ ಸಭಾದ ಕೊನೆಯ ದಿನವಾದ ಇಂದು ಆರೆಸ್ಸೆಸ್ ಸರಕಾರ್ಯವಾಹ (ಪ್ರಧಾನ ಕಾರ್ಯದರ್ಶಿ) ಭಯ್ಯಾಜಿ ಜೋಶಿ ಅವರು ಮೂರು ದಿನಗಳ ಕಲಾಪಗಳ ಬಗ್ಗೆ ಪತ್ರಕರ್ತರಿಗೆ ವಿವರ ಮಾಹಿತಿ ನೀಡಿದರು. ಪುತ್ತೂರಿನ ವಿವೇಕಾನಂದ ಕಾಲೇಜಿನ ಪರಿಸರದ ಎಬಿಪಿಎಸ್ ಮಾಧ್ಯಮ ಕೇಂದ್ರದಲ್ಲಿ ನಡೆದ ಸಂವಾದದಲ್ಲಿ ಅವರು ದೇಶ, ಸಮಾಜ, ಹಿಂದು ಸಂಘಟನೆ, ರಾಜಕಾರಣ ಹೀಗೆ ಹತ್ತಾರು ವಿಷಯಗಳ ಚರ್ಚೆಯಲ್ಲಿ ಪಾಲ್ಗೊಂಡಿದ್ದರು.

ಕಳೆದ ಒಂದು ವರ್ಷದ ಪ್ರಮುಖ ವಿದ್ಯಮಾನಗಳನ್ನು ನೆನಪಿಸಿಕೊಂಡ ಅವರು, ” ಭಯೋತ್ಪಾದನೆಯ ಪಟ್ಟವನ್ನು ಮೊದಲು ಹಿಂದು ಸಂಘಟನೆಗಳ ಮೇಲೆ ನಂತರ ಅದನ್ನು ಒಟ್ಟಾರೆ ಹಿಂದು ಸಮಾಜದ ಮೇಲೆ ಹೋರಿಸಲಾಯಿತು. ‘ಕೇಸರಿ ಭಯೋತ್ಪಾದನೆ’,  ‘ಭಗವಾ ಭಯೋತ್ಪಾದನೆ’ ಮುಂತಾದ ರೂಪದಲ್ಲಿ ಸಂಪೂರ್ಣ ಹಿಂದು ಸಮಾಜವನ್ನು ಆರೋಪಿಯ ಸ್ಥಾನದಲ್ಲಿ ನಿಲ್ಲಿಸಲಾಯಿತು. ಇದು ಕೇವಲ ಹಿಂದು ಸಮಾಜವನ್ನು ಅಪಮಾನಗೊಳಿಸುವ ಷಡ್ಯಂತ್ರವಿದು. ಹಿಂದು ಉಗ್ರವಾದಿಯಾದರೆ ಯಾರೂ ಉಳಿಯಲಾರರು. ಇದನ್ನು ಹಿಂದು ಭಯೋತ್ಪಾದನೆ ಎಂದು ಆರೋಪಿಸುವವರು ಯೋಚಿಸಬೇಕಿತ್ತು” ಎಂದರು.

“ಇಂದು ಭ್ರಷ್ಟಾಚಾರ ಪೆಡಂಭೂತದಂತೆ ಪ್ರತಿಯೊಬ್ಬರನ್ನು ಆವರಿಸಿದೆ.  ಕೆಲವರು ಪರಿಸ್ಥಿತಿಯ ಕಾರಣದಿಂದ ಇನ್ನು ಕೆಲವೊಮ್ಮೆ ಒತ್ತಡದಿಂದ ಭ್ರಷ್ಟಾಚಾರದ ಬಲೆಗೆ ಬಿದ್ದಿದ್ದಾರೆ. ಈ ದೃಷ್ಟಿಯಿಂದ ಸರಕಾರದ ನೀತಿಗಳು, ಒಟ್ಟು ಸಾಮಾಜಿಕ ವಾತಾವರಣ, ಶಿಕ್ಷಣ ಪದ್ಧತಿ, ಸುತ್ತುವರಿದು ಬರುವ ಆಡಳಿತ ರೀತಿ ಇವೆಲ್ಲವೂ ಇಂದಿನ ಭ್ರಷ್ಟಾಚಾರಕ್ಕೆ ಕಾರಣವಾಗಿವೆ. ಇದರಲ್ಲಿ ಹಿರಿಯ ಸರಕಾರಿ ಅಧಿಕಾರಿಗಳ ಪಾತ್ರವೂ ಇದೆ. ಮಂತ್ರಿ ರಾಜಕಾರಣಿಗಳು, ಹೀಗೆ ಮೇಲಿನಿಂದ ಕೆಳಗಿನವರೆಗೆ ನೈತಿಕ ಕುಸಿತವಾಗಿರುವುದು ಚಿಂತೆಯ ವಿಷಯವಾಗಿದೆ.

“ವಾಸ್ತವಿಕವಾಗಿ ನಮ್ಮ ನೆರೆಯ ದೇಶವಾದ ಚೀನಾ ನಮ್ಮ ಮಿತ್ರನಾಗಬೇಕಿತ್ತು. ಆದರೆ ಇತಿಹಾಸವನ್ನು ನೋಡಿದಾಗ ಯಾವುದೇ ದೇಶ ಚೀನಾದ ಮಿತ್ರನಾಗಿ ಉಳಿದಿಲ್ಲ. ಸ್ನೇಹದ ಮೂಲಕ ಸಣ್ಣ ಸಣ್ಣ ದೇಶಗಳನ್ನು ಆಕ್ರಮಿಸಿಕೊಂಡು ಇದೀಗ ಸವಾಲಿನ ರೂಪದಲ್ಲಿ ಬೆಳೆದು ನಿಂತಿದೆ.

“ಚೀನಾ ಸವಾಲನ್ನು ಎದುರಿಸುವ ದೃಷ್ಟಿಯಿಂದ ಅನೇಕ ಪರಿಹಾರರೂಪೀ ಸಲಹೆಗಳಲ್ಲಿ ಪೂರ್ವೋತ್ತರ ಗಡಿ ಪ್ರದೇಶದಲ್ಲಿ ಸಂವಹನ ಮತ್ತು ಸಾರಿಗೆ ವ್ಯವಸ್ಥೆಗಳನ್ನು ಬೆಳೆಸುವ ದೃಷ್ಟಿಯಿಂದ ಒಂದು ಕೇಂದ್ರ ಸರಕಾರದ ನಿಗಮದ ರಚನೆಯಾಗಬೇಕು. ಗಡಿ ಪ್ರದೇಶಗಳ ಅಭಿವೃದ್ಧಿ ದೃಷ್ಟಿಯಿಂದಲೂ ಇದರ ಬಳಕೆಯಾಗಬೇಕು.

“ಧನಾತ್ಮಕ ಸಂಗತಿಗಳ ದೃಷ್ಟಿಯಿಂದ ನೋಡಿದಾಗ ದೇಶದೆಲ್ಲೆಡೆ ಹಿಂದುತ್ವದ ಬಗ್ಗೆ ಜಾಗೃತಿಯ ವಾತಾವರಣ ಕಾಣುತ್ತಿದೆ. ಇತ್ತೀಚೆಗೆ ಬೆಂಗಳೂರಿನಲ್ಲಿ  ನಡೆದ ವಿಶ್ವ ಸಂಸ್ಕೃತ ಸಮ್ಮೇಳನದಲ್ಲಿ ಅತ್ಯಂತ ಸಾಮಾನ್ಯ ಜನರು ಭಾಗವಹಿಸಿದ್ದು, ಪ್ರಕಾಶಕರು ತಾವು ತಂದ ಎಲ್ಲ ಪುಸ್ತಕಗಳು ಮಾರಾಟವಾದವು. 4-5 ಲಕ್ಷ ಜನ ಈ ಮೇಳಕ್ಕೆ ಭೇಟಿ ನೀಡಿದ್ದರು.” ಎಂದು ತಮ್ಮ ವಿಚಾರಗಳನ್ನು ವ್ಯಕ್ತಪಡಿಸಿದರು.

“ಭ್ರಷ್ಟಾಚಾರದ ಆರೋಪ ಸಾಬಿತಾದರೆ ಅಂತಹವರ ವಿರುದ್ಧ ಕ್ರಮ ಕೈಗೊಳ್ಳಲು ಸಂಘದ ಕಡೆಯಿಂದ ಒತ್ತಡ ಹೇರಲಾಗುತ್ತದೆಯೇ ?” ಎಂಬ ಪ್ರಶ್ನೆಗೆ ಉತ್ತರಿಸುತ್ತಾ ಭಯ್ಯಾಜಿ ಅವರು “ಇಲ್ಲ, ಆ ಕೆಲಸವನ್ನು ಆ ಪಕ್ಷವೇ ನೋಡಿಕೊಳ್ಳಬೇಕು. ಅವರ ವಿಶ್ವಾಸಾರ್ಹತೆಯನ್ನು ಅವರೇ ಉಳಿಸಿಕೊಳ್ಳಬೇಕು” ಎಂದರು.

“ಭಾಜಪವು ಸಂಘದ ಅಂಗ ಸಂಸ್ಥೆಯಲ್ಲವೇ ?” ಎಂಬ ಪ್ರಶ್ನೆಗೆ, ಅವರು “35ಕ್ಕಿಂತ ಹೆಚ್ಚು ಸಂಸ್ಥೆಗಳು ಅಖಿಲ ಭಾರತೀಯ ಸ್ತರದಲ್ಲಿ ಕೆಲಸ ಮಾಡುತ್ತಿವೆ. ಆದರೆ ಅವು ಯಾವೂ ಸಂಘದ ಅಂಗ ಸಂಸ್ಥೆಗಳಲ್ಲ. ಅವು ಸ್ವತಂತ್ರ ಸಂಘಟನೆಗಳು. ಸ್ವಯಂಸೇವಕರ ನೆಲೆಯಲ್ಲಿ ಅವರು ಇಲ್ಲಿಗೆ (ಪ್ರತಿನಿಧಿ ಸಭೆಗೆ) ಬಂದು ಕಾರ್ಯದ ವರದಿ ಮಾಡುತ್ತಾರೆ ಅಷ್ಟೆ.” ಎಂದರು.

Leave a Reply

Your email address will not be published.

This site uses Akismet to reduce spam. Learn how your comment data is processed.