ಇಂದು ಪುಣ್ಯಸ್ಮರಣೆ


ಭಾರತದ ಕ್ರಾಂತಿಕ್ರಾರಿ ಚಿಂತೆಗಳ ಪಿತಾಮಹ ಎಂದೇ ಗುರುತಿಸಿಕೊಂಡಿದ್ದ ಬಿಪಿನ್‌ ಚಂದ್ರಪಾಲ್‌ ಅವರು ಭಾರತೀಯ ರಾಷ್ಟ್ರೀಯವಾದಿ, ಬರಹಗಾರ, ವಾಗ್ಮಿ, ಸಮಾಜ ಸುದಾರಕ ಮತ್ತು ಸ್ವಾತಂತ್ರ್ಯ ಹೋರಾಟಗಾರರಾಗಿದ್ದರು. ಇವರು ಬ್ರಿಟಿಷ್‌ ವಸಾಹತುಶಾಹಿ ಸರ್ಕಾರದ ಬಂಗಾಳದ ವಿಭಜನೆಯನ್ನು ವಿರೋಧಿಸಿದ್ದರು. ಬಿಪಿನ್‌ ಚಂದ್ರಪಾಲ್‌ ಅವರು ಸ್ವಾತಂತ್ರ್ಯಕ್ಕೆ ನೀಡಿರುವ ಕೊಡಗೆ ಅವಿಸ್ಮರಣೀಯ. ಲಾಲ್ ಬಾಲ್ ಪಾಲ್ ಎಂದು ಕರೆಯಲ್ಪಡುವ ತ್ರಿಮೂರ್ತಿಗಳಲ್ಲಿ ಬಿಪಿನ್‌ ಚಂದ್ರಪಾಲ್‌ ಅವರು ಒಬ್ಬರು. ಇಂದು ಪುಣ್ಯಸ್ಮರಣೆ .


ಪರಿಚಯ
ಬಿಪಿನ್‌ ಚಂದ್ರಪಾಲ್‌ ಅವರು ನವೆಂಬರ್‌ 7, 1858 ರಂದು ಬಂಗಾಳದ ಸಿಲ್ಹಟ್ ಜಿಲ್ಲೆಯ ಹಬಿಗಂಜ್‌ನ ಪೈಲ್‌ ಎಂಬ ಗ್ರಾಮದಲ್ಲಿ ಜನಿಸಿದರು. ಇವರ ತಂದೆ ರಾಮ ಚಂದ್ರ ಪಾಲ್ ಅವರು ಪರ್ಷಿಯನ್‌ ವಿದ್ವಾಂಸರಾಗಿದ್ದರು. ಬಿಪಿನ್ ಚಂದ್ರಪಾಲ್‌ ಅವರು ತಮ್ಮ ಆರಂಭಿಕ ಶಿಕ್ಷಣವನ್ನು ಹುಟ್ಟೂರಿನಲ್ಲಿ ಪಡೆದರು. ನಂತರ ಕಲ್ಕತ್ತಾ ವಿಶ್ವವಿದ್ಯಾನಿಲಯದ ಚರ್ಚ್ ಮಿಷನ್ ಸೊಸೈಟಿ ಕಾಲೇಜಿನಲ್ಲಿ ಅಧ್ಯಯನ ನಡೆಸಿದರು. ಆದರೆ ಅವರು ಕಾರಣಾಂತರದಿಂದ ತಮ್ಮ ಶಿಕ್ಷಣವನ್ನು ಪೂರ್ಣಗೊಳಿಸಲು ಸಾಧ್ಯವಾಗಲಿಲ್ಲ. ಅವರು ಮುಖ್ಯೋಪಾಧ್ಯಾಯರಾಗಿ ಕೆಲಸ ಆರಂಭಿಸಿದರು. ಸಾರ್ವಜನಿಕ ಗ್ರಂಥಾಲಯದಲ್ಲಿ ಗ್ರಂಥಪಾಲಕರಾಗಿಯೂ ಇದ್ದರು. ಬಿಪಿನ್‌ ಚಂದ್ರಪಾಲ್‌ ಅವರು ಗ್ರಂಥಾಲಯಗಳಲ್ಲಿ ಕೆಲಸ ಮಾಡುವಾಗ ಶಿವನಾಥ ಶಾಸ್ತ್ರಿ, ಬಿ ಕೆ ಗೋಸ್ವಾಮಿ ಮತ್ತು ಸುರೇಂದ್ರ ನಾಥ್ ಬ್ಯಾನರ್ಜಿಯಂತಹ ವಿವಿಧ ಸಮಾಜ ಸುಧಾರಕರನ್ನು ಭೇಟಿಯಾದರು. ಸಮಾಜ ಸುಧಾರಕರೊಂದಿಗಿನ ಸಂವಾದದಿಂದ ಬಿಪಿನ್‌ ಚಂದ್ರಪಾಲ್‌ ಅವರಲ್ಲಿ ರಾಷ್ಟ್ರೀಯತೆಯ ಮನೋಭಾವ ಮೂಡಿತು.


ಚಂದ್ರಪಾಲ್‌ ಅವರು 1898 ರಲ್ಲಿ ಶಿಕ್ಷಣಕ್ಕಾಗಿ ಇಂಗ್ಲೆಂಡ್‌ ಗೆ ತೆರಳಿದ್ದರು. ಅಲ್ಲಿ ಅವರು ಅಧ್ಯಯನ ಪೂರ್ಣಗೊಳಿಸಿದ ನಂತರ ಮತ್ತೆ ಭಾರತಕ್ಕೆ ವಾಪಸ್‌ ಆಗುತ್ತಾರೆ. ನಂತರ ಅವರು ಭಾರತೀಯರಿಗೆ ‘ಸ್ವರಾಜ್’ ಕಲ್ಪನೆಯನ್ನು ಪ್ರಚಾರ ಮಾಡಲು ಪ್ರಾರಂಭಿಸಿದರು.
ಬಾಲಗಂಗಾಧರ್‌ ತಿಲಕ್‌ ಮತ್ತು ಲಾಲಾ ಲಜಪತ್‌ ರಾಯ್‌ ಅವರೊಂದಿಗೆ ಬ್ರಿಟಿಷರ ನಿಯಮಗಳನ್ನು ಬಹಿಷ್ಕರಿಸಿದ್ದು, ಕ್ರಾಂತಿಕಾರಿ ವಿಧಾನಗಳನ್ನು ಪ್ರತಿಪಾದಿಸಿದ ರಾಷ್ಟ್ರೀಯತೆಯ ತೀವ್ರವಾದ ರೂಪವನ್ನು ಬೋಧಿಸಿದರು.


ಸಾಹಿತ್ಯದ ಕೊಡುಗೆ
ಬಿಪಿನ್‌ ಚಂದ್ರಪಾಲ್‌ ಅವರು ಸಾಹಿತ್ಯದ ಕಡೆಗೂ ಹೆಚ್ಚು ಆಸಕ್ತಿ ಹೊಂದಿದ್ದವರು. ಅವರು ದೇಶಭಕ್ತಿ ಮತ್ತು ರಾಷ್ಟ್ರೀಯತೆಯ ಸಂದೇಶವನ್ನು ಹರಡುವ ಸಲುವಾಗಿ ಪತ್ರಕರ್ತರಾಗಿ ಕಾರ್ಯನಿರ್ವಹಿಸಿದರು. ‘ದಿ ಡೆಮಾಕ್ರಟಿಕ್’ ಮತ್ತು ‘ದಿ ಇಂಡಿಪೆಂಡೆಂಟ್’ ನಿಯತಕಾಲಿಕೆ ಪತ್ರಿಕೆಯಲ್ಲಿ ಸಂಪಾದಕರಾಗಿದ್ದರು. ಅವರು ‘ಪರಿದರ್ಶಕ್’, ವಂದೇ ಮಾತರಂ’, ‘ನವ ಭಾರತ’ ಮತ್ತು ‘ಸ್ವರಾಜ್’ ನಂತಹ ಅನೇಕ ಪತ್ರಿಕೆಗಳು ಮತ್ತು ನಿಯತಕಾಲಿಕೆಗಳನ್ನು ಪ್ರಾರಂಭಿಸಿದರು. ಜೊತೆಗೆ ಇವರು ಅನೇಕ ಪುಸ್ತಕಗಳನ್ನು ಬರೆದಿದ್ದಾರೆ. ಭಾರತೀಯ ರಾಷ್ಟ್ರೀಯತೆ’, ‘ಸ್ವರಾಜ್ ಮತ್ತು ಪ್ರಸ್ತುತ ಪರಿಸ್ಥಿತಿ’, ‘ರಾಷ್ಟ್ರೀಯತೆ ಮತ್ತು ಸಾಮ್ರಾಜ್ಯ’, ‘ಸಾಮಾಜಿಕ ಸುಧಾರಣೆಯ ಆಧಾರ’, ‘ಹಿಂದೂ ಧರ್ಮದಲ್ಲಿ ಹೊಸ ಚೈತನ್ಯ ಮತ್ತು ಅಧ್ಯಯನಗಳು’, ಮತ್ತು ‘ಭಾರತದ ಆತ್ಮ’ ಎಂಬ ಪುಸ್ತಕವನ್ನು ಬರೆದಿದ್ದಾರೆ.


ಬಿಪಿನ್‌ ಚಂದ್ರಪಾಲ್‌ ಅವರು ಮೇ 20, 1932 ರಂದು ತಮ್ಮ 73 ವಯಸ್ಸಿನಲ್ಲಿ ನಿಧನರಾದರು.

Leave a Reply

Your email address will not be published.

This site uses Akismet to reduce spam. Learn how your comment data is processed.