ಜಗತ್ತಿನ ಸುಭದ್ರತೆ ಮತ್ತು ಶಾಂತಿಗೆ ದೊಡ್ಡ ಕಂಟಕವಾಗಿರುವುದು ಭಯೋತ್ಪಾದನೆ. ಈ ಕಾರಣಕ್ಕಾಗಿ ಭಯೋತ್ಪಾದನೆಯ ಅಪಾಯ ಮತ್ತು ಅದರ ಪರಿಣಾಮದ ಕುರಿತು ಸಾರ್ವಜನಿಕರಿಗೆ ಅರಿವು ಮೂಡಿಸುವ ಸಲುವಾಗಿ ಭಾರತದಲ್ಲಿ ಪ್ರತಿ ವರ್ಷ 21 ರಂದು ರಾಷ್ಟ್ರೀಯ ಭಯೋತ್ಪಾದನಾ ವಿರೋಧಿ ದಿನವನ್ನಾಗಿ ಆಚರಣೆ ಮಾಡಲಾಗುತ್ತದೆ.

ಭಯೋತ್ಪಾದಕರು ಸಾಮಾನ್ಯ ಜನರ ಮನಸ್ಸಿನಲ್ಲಿ ಭಯವನ್ನು ಸೃಷ್ಟಿಸುತ್ತಾರೆ. ತಮ್ಮ ಪೂರ್ವಗ್ರಹಪೀಡಿತ ಮನಸ್ಥಿತಿಯ ಕಾರಣಗಳ ಸಾಕಾರಕ್ಕಾಗಿ ಹಿಂಸೆಯನ್ನೇ ಪ್ರಧಾನವನ್ನಾಗಿರಿಸಿಕೊಂಡು ರಾಷ್ಟ್ರದ ಸುಭದ್ರತೆಗೆ ಧಕ್ಕೆ ತರುವಂತಹ, ಜನಸಾಮಾನ್ಯರ ಜೀವನಕ್ಕೆ ಸಂಕಷ್ಟವನ್ನುಂಟುಮಾಡುವ, ಅಶಾಂತಿಯನ್ನು ಸೃಷ್ಟಿಸುವುದೇ ಗುರಿಯಾಗಿಸಿಕೊಂಡು ನಾನಾ ವಿಧ್ವಂಸಕ ಕೃತ್ಯಗಳಿಗೆ ಮುಂದಾಗುತ್ತಾರೆ. ಆದ್ದರಿಂದ ಇಂತಹ ಸವಾಲುಗಳಿಗೆ ಸನ್ನಧ್ಧರಾಗಿದ್ದುಕೊಂಡು, ಮಾನವೀಯತೆ ಮತ್ತು ಶಾಂತಿಯ ಸಂದೇಶವನ್ನು ಪ್ರಚಾರ ಮಾಡುತ್ತಾ ಭಯೋತ್ಪಾದನೆಯ ಚಟುವಟಿಕೆಗಳ ವಿರುದ್ಧ ಹೋರಾಡುವ ಪ್ರಾಮುಖ್ಯತೆಯನ್ನು ಎತ್ತಿ ಹಿಡಿಯಲು ಭಾರತ ಸರ್ಕಾರವು ಪ್ರತಿ ವರ್ಷ ರಾಷ್ಟ್ರೀಯ ಭಯೋತ್ಪಾದನೆ ವಿರೋಧಿ ದಿನವನ್ನು ಆಚರಿಸುವ ಕ್ರಮವನ್ನು ಕೈಗೊಂಡಿದೆ.


ಏಕೆ ಭಯೋತ್ಪಾದನೆ ವಿರೋಧಿ ಆಚರಣೆ ಮಾಡುತ್ತೇವೆ?
1991ರಲ್ಲಿ ತಮಿಳುನಾಡಿನ ರಾಜಕೀಯ ಪ್ರಚಾರದ ವೇಳೆ ಆಗಿನ ಪ್ರಧಾನಮಂತ್ರಿಯಾಗಿದ್ದ ರಾಜೀವ್ ಗಾಂಧಿ ಅವರನ್ನು ಆತ್ಮಹತ್ಯಾ ಬಾಂಬರ್‌ನಿಂದ ಹತ್ಯೆ ಮಾಡಲಾಯಿತು. ಈ ಕಾರಣಕ್ಕಾಗಿ ಅವರ ನೆನಪಿಗಾಗಿ ಪ್ರತಿ ವರ್ಷ 21 ರಂದು ಭಯೋತ್ಪಾದನಾ ವಿರೋಧಿ ದಿನವನ್ನು ಆಚರಿಸಲಾಗುತ್ತದೆ.


ಇತಿಹಾಸ
ರಾಜೀವ್‌ ಗಾಂಧಿ ಅವರು 40ನೇ ವಯಸ್ಸಿನಲ್ಲಿ ಭಾರತದ ಪ್ರಧಾನಿಯಾಗಿದ್ದರಿಂದ ಅತ್ಯಂತ ಕಿರಿಯ ವಯಸ್ಸಿಗೆ ಪ್ರಧಾನಿಯಾದವರು ಎಂದೆನಿಸಿಕೊಂಡವರು. 1984ರ ಅಕ್ಟೋಬರ್ 31ರಂದು ತಮ್ಮ ತಾಯಿ ಇಂದಿರಾ ಗಾಂಧಿಯುವರ ಬರ್ಬರ ಹತ್ಯೆಯ ನಂತರ ರಾಜೀವ್‌ ಗಾಂಧಿ ಯವರು ಪ್ರಧಾನಿಯಾಗಿ ಅಧಿಕಾರ ಸ್ವೀಕರಿಸಿದರು. 1991ರ ಮೇ 21ರಂದು ಪ್ರಧಾನಿಯಾಗಿದ್ದ ಸಂದರ್ಭದಲ್ಲಿ ರಾಜೀವ್ ಗಾಂಧಿ ಅವರು ತಮಿಳುನಾಡಿನ ಶ್ರೀಪೆರಂಬದೂರ್‌ಗೆ ರ್ಯಾಲಿಯಲ್ಲಿ ಭಾಗವಹಿಸಲು ತೆರಳಿದ್ದರು. ಲಿಬರೇಶನ್ ಆಫ್ ತಮಿಳು ಟೈಗರ್ಸ್ ಈಳಂ (ಎಲ್‌ಟಿಟಿಇ) ಭಯೋತ್ಪಾದಕ ಗುಂಪಿನ ಸದಸ್ಯರಾಗಿದ್ದ ಮಹಿಳೆಯೊಬ್ಬರು ಪ್ರಧಾನಮಂತ್ರಿ ಬಳಿ ಬಂದರು. ಅವರ ಪಾದಕ್ಕೆ ಸ್ಪರ್ಶಿಸಬೇಕೆಂದು ಬಾಗಿದಳು. ಇದ್ದಕ್ಕಿದ್ದಂತೆ ಬಾಂಬ್ ಸ್ಫೋಟ ಸಂಭವಿಸಿ ಪ್ರಧಾನಿ ಸೇರಿದಂತೆ 25 ಜನರು ಸಾವನ್ನಪ್ಪಿದರು . ಹೀಗಾಗಿ ಅವರ ಸ್ಮರಣಾರ್ಥವಾಗಿ ಭಾರತ ಸರ್ಕಾರವು 1998ರಲ್ಲಿ ಮೇ 21 ಅನ್ನು “ರಾಷ್ಟ್ರೀಯ ಭಯೋತ್ಪಾದನಾ ವಿರೋಧಿ ದಿನ” ಎಂದು ಘೋಷಿಸಿತು.


ಮಹತ್ವ


ಜಾಗೃತಿ ಮೂಡಿಸುವುದು: ಭಯೋತ್ಪಾದನೆಯ ವಿಕಸನದ ಸ್ವರೂಪ ಮತ್ತು ವ್ಯಕ್ತಿಗಳು ಹಾಗೂ ಸಮುದಾಯಗಳ ಮೇಲೆ ಅದರ ಪರಿಣಾಮದ ಕುರಿತು ನಾಗರಿಕರಿಗೆ ಜಾಗೃತಿ ಮೂಡಿಸಲು ಸಹಕಾರಿ.


ಏಕತೆ ಮತ್ತು ಒಗ್ಗಟ್ಟನ್ನು ಉತ್ತೇಜಿಸುವುದು: ಭಯೋತ್ಪಾದನೆಯನ್ನು ಎದುರಿಸುವಲ್ಲಿ ರಾಷ್ಟ್ರೀಯ ಏಕತೆಯ ಪ್ರಜ್ಞೆ ಮತ್ತು ಸಾಮೂಹಿಕ ಸಂಕಲ್ಪವನ್ನು ಬೆಳೆಸುವುದಕ್ಕೆ ಈ ದಿನ ಸಹಾಯಕವಾಗಿದೆ.


ಸಾಮೂಹಿಕ ಕ್ರಮವನ್ನು ಉತ್ತೇಜಿಸುವುದು: ಭಯೋತ್ಪಾದನೆಯನ್ನು ತಡೆಗಟ್ಟುವಲ್ಲಿ ಮತ್ತು ನಿಭಾಯಿಸುವಲ್ಲಿ ನಾಗರಿಕರು, ಸರ್ಕಾರ ಮತ್ತು ಸಂಸ್ಥೆಗಳ ನಿರ್ಣಾಯಕ ಪಾತ್ರವನ್ನು ಎತ್ತಿ ಹಿಡಿಯಲಾಗಿದೆ.


ಸಂತ್ರಸ್ತರ ಪರ ಬೆಂಬಲ: ಭಯೋತ್ಪಾದನೆ ಸಂತ್ರಸ್ತರ ಕುಟುಂಬಗಳು ಮತ್ತು ಪ್ರೀತಿಪಾತ್ರರನ್ನು ಬೆಂಬಲಿಸುವುದು ಮತ್ತು ಅವರಿಗೆ ನ್ಯಾಯವನ್ನು ಒದಗಿಸುವ ಕೆಲಸದಲ್ಲಿ ಸಹಾಯ ಮಾಡುವುದು.

Leave a Reply

Your email address will not be published.

This site uses Akismet to reduce spam. Learn how your comment data is processed.