21ನೆಯ ಶತಮಾನದಲ್ಲೂ ಕೂಡ ಐವತ್ತಕ್ಕೂ ಅಧಿಕ ಜನರನ್ನು ಕೂಲಿ ಕೆಲಸ ನೀಡುವುದಾಗಿ ಕರೆದುಕೊಂಡು ಹೋಗಿ ಜೀತ ಪದ್ಧತಿಯಂತೆ ಬಳಸಿಕೊಂಡಿರುವ ಅಮಾನವೀಯ ಕೃತ್ಯ ಹಾಸನದಲ್ಲಿ ನಡೆದಿದೆ.ನಿಜಕ್ಕೂ ಮಾನವೀಯ ಸಮಾಜ ತಲೆ ತಗ್ಗಿಸುವ ಘಟನೆಯಾಗಿದ್ದು ತಪ್ಪಿತಸ್ಥ ಮುನೇಶ್ನನ್ನು ಹಾಸನದ ಪೋಲೀಸರು ವಶಕ್ಕೆ ತೆಗೆದುಕೊಳ್ಳಲು ಬಲೆ ಬೀಸಿದ್ದಾರೆ.
ಹಾಸನ ಜಿಲ್ಲೆಯ ಅರಸೀಕೆರೆ ತಾಲೂಕಿನ ಅಣ್ಣೇನಹಳ್ಳಿ ಗ್ರಾಮದ ಸಮೀಪದಲ್ಲಿ ಈ ರೀತಿಯ ಪೀಡನೆ ನಡೆದಿದೆ. ಕೆಲಸ ಕೊಡಿಸುವ ಸುಳ್ಳು ಆಶ್ವಾಸನೆ ನೀಡಿ ನಿರ್ಗತಿಕ ಕಾರ್ಮಿಕರನ್ನು ಒಂದು ಶೆಡ್ ನಲ್ಲಿ ಕೂಡಿಹಾಕಿ ಅಗತ್ಯವಾದಷ್ಟು ಊಟ ತಿಂಡಿಯನ್ನು ನೀಡದೆ, ಮೂಲಭೂತ ಸೌಕರ್ಯ ನೀಡದೆ ಅಮಾನವೀಯವಾಗಿ ನಡೆಸಿಕೊಂಡಿದ್ದ ಮುನೇಶ್ ಚಿತ್ರ ಹಿಂಸೆ ನೀಡುತ್ತಿದ್ದ ಎನ್ನಲಾಗಿದೆ.
ವಿಪರ್ಯಾಸವೆಂದರೆ ಈ ಕೃತ್ಯವನ್ನು ಎಸಗಿದ ಆರೋಪಿ ಎರಡು ವರ್ಷಗಳ ಹಿಂದೆಯೂ ಕೂಡ ಇದೇ ರೀತಿಯ ಕೃತ್ಯದಲ್ಲಿ ಭಾಗಿಯಾಗಿದ್ದ. ಆ ಸಂದರ್ಭದಲ್ಲೂ ಕೂಡ ಪೊಲೀಸರು ದಾಳಿ ನಡೆಸಿ ಅಮಾಯಕರನ್ನು ರಕ್ಷಣೆ ಮಾಡಿದ್ದರು. ಆಗಲೂ ಬಂಧಿತನಾಗಿದ್ದ ಮುನೇಶ್ ಕೆಲ ಸಮಯದ ನಂತರ ಜಾಮೀನು ಪಡೆದು ಹೊರಬಂದಿದ್ದ. ಆದರೆ ಹೊರಬಂದ ನಂತರ ಮತ್ತೆ ಇಂಥಹುದೇ ಕೃತ್ಯವನ್ನು ಎಸಗಿದ್ದಾನೆ.
ಈ ವಿಚಾರ ಗಮನಕ್ಕೆ ಬರುತ್ತಿದ್ದಂತೆ ಅರಸೀಕೆರೆ ಡಿವೈಎಸ್ಪಿ ಅಶೋಕ್ ಹಾಗೂ ಸರ್ಕಲ್ ಇನ್ಸ್ಪೆಕ್ಟರ್ ವಸಂತ್ ನೇತೃತ್ವದ ತಂಡ ಪ್ರಕರಣವನ್ನು ಬೇಧಿಸಿ ದಾಳಿ ನಡೆಸಿ ಅಮಾಯಕರನ್ನು ಜೀತದಿಂದ ಹೊರ ತರುವಲ್ಲಿ ಯಶಸ್ವಿಯಾಗಿದ್ದಾರೆ. ಬೆಳ್ಳಂಬೆಳಗ್ಗೆ ದಾಳಿ ನಡೆಸಿದ ಪೊಲೀಸರು ಅಮಾಯಕರ ರಕ್ಷಣೆ ಮಾಡಿದ್ದಾರೆ. ಚಿಕ್ಕಮಗಳೂರು, ಹಾಸನ , ಶಿವಮೊಗ್ಗ , ಮಂಡ್ಯ ಸೇರಿದಂತೆ ಅನೇಕ ಕಡೆಗಳ ಕಾರ್ಮಿಕರು ಪೊಲೀಸರ ಈ ಕಾರ್ಯಾಚರಣೆಯಿಂದ ರಕ್ಷಿಸಲ್ಪಟ್ಟಿದ್ದಾರೆ.
ಬೆಳಗ್ಗೆ 5 ರಿಂದ ಕತ್ತಲಾಗುವವರೆಗೂ ಕಾರ್ಮಿಕರನ್ನು ಶುಂಠಿ ಕೆಲಸಕ್ಕೆ ಬಳಸಿಕೊಳ್ಳುತ್ತಿದ್ದ ಮುನೇಶ್ ಮಿನಿ ಲಾರಿಯೊಳಗೆ ಕುರಿಮಂದೆಯಂತೆ ಜನರನ್ನು ತುಂಬಿಸಿಕೊಂಡು ಬಂದು ಕೆಲಸ ಮಾಡಿಸಿಕೊಳ್ಳುತ್ತಿದ್ದ.
“ಬೆಳಗ್ಗೆ ಅನ್ನಸಾಂಬಾರ್ ಮಾಡಿದ್ರೆ ಆಯ್ತು, ಅಷ್ಟೇ ಊಟ ಮಾಡಬೇಕಿತ್ತು, ಇಪ್ಪತ್ತು ದಿನ ಮೂರ್ನಾಲ್ಕು ಮಂದಿ ಸೇರಿ ಒಂದೇ ಸೋಪು ಬಳಸಬೇಕಿತ್ತು, ಶೆಡ್ ನಂತಿರೋ ಒಂದೇ ಶೌಚಾಲಯವನ್ನ ಎಲ್ಲರೂ ಬಳಸಬೇಕಿತ್ತು, ನಾವು ಊರಿಗೆ ಹೋಗ್ತೀವಿ ಅಂದ್ರೆ ಮನಸ್ಸೋ ಇಚ್ಚೆ ಥಳಿಸುತ್ತಿದ್ದ, ನೀರನ್ನೂ ಹೆಚ್ಚು ಬಳಸುವಂತಿರಲಿಲ್ಲ.” ಹೀಗೆ ಬಂಧಿಯಾಗಿದ್ದ ಕಾರ್ಮಿಕರು ನರಕಯಾತನೆಯನ್ನು ಅನುಭವಿಸುತ್ತಿದ್ದರು.ಅವರೆಲ್ಲಾ ಸ್ನಾನ ಮಾಡಿಯೇ ಎರಡು ತಿಂಗಳ ಮೇಲಾಗಿದೆ. ಜೀತವಿಮುಕ್ತರು ಅಲ್ಲಿ ನಡೆಯುತ್ತಿದ್ದ ಅಮಾನವೀಯ ಘಟನೆಯನ್ನ ಕಣ್ಣೀರಿಡ್ತಾ ಹೇಳಿಕೊಂಡಿದ್ದಾರೆ.
ಬಸ್ ನಿಲ್ದಾಣ, ರೈಲ್ವೇ ನಿಲ್ದಾಣಗಳಲ್ಲಿ ಕೆಲಸವನ್ನರಸಿ ನಿರ್ಗತಿಕರಾಗಿ ಕಾಣುವ ಕಾರ್ಮಿಕರು ಮುನೇಶ್ನ ಮುಖ್ಯ ಟಾರ್ಗೆಟ್. ಈ ರೀತಿ ಕಾಣುವ ವ್ಯಕ್ತಿಗಳಿಗೆ ಕೆಲಸ ಕೊಡಿಸುವುದಾಗಿ ನಂಬಿಸಿ ಅಲ್ಲಿಂದ ಶೆಡ್ಗೆ ಕರೆದುಕೊಂಡು ಬಂದು ಅವರನ್ನು ಬಂಧನದಲ್ಲಿರಿಸಿ ಬೇಕಾಬಿಟ್ಟಿಯಾಗಿ ಅವರಿಗೆ ಸಂಬಳ ನೀಡದೆ ಜೀತ ಪದ್ಧತಿಯಂತೆ ಕೆಲಸ ಮಾಡಿಸಿಕೊಳ್ಳುತ್ತಿದ್ದ.
ಈ ಹಿಂದೆಯೂ ಕೂಡ ಇದೇ ರೀತಿಯ ಕೃತ್ಯದಲ್ಲಿ ಭಾಗಿಯಾಗಿದ್ದು, ಪೊಲೀಸರ ಅತಿಥಿಯಾಗಿದ್ದವನು ಹೊರಬಂದ ನಂತರವೂ ಕೂಡ ಇದೇ ಕ್ರೌರ್ಯವನ್ನು ಮುಂದುವರಿಸಿ ಅಮಾಯಕರ ಜೀವನದ ಜೊತೆಗೆ ವ್ಯವಹರಿಸಿರುವುದು ಸಾರ್ವಜನಿಕ ವಲಯದಲ್ಲಿ, ಮುಖ್ಯವಾಗಿ ಸ್ಥಳೀಯರಲ್ಲಿ ಆಕ್ರೋಶ ಉಂಟುಮಾಡಿದೆ. ಈ ಕುರಿತು ಅಗತ್ಯ ಕಠಿಣ ಶಿಕ್ಷೆ ಗಳನ್ನು ಜಾರಿಗೊಳಿಸಿ ಈ ರೀತಿಯ ಕೃತ್ಯ ಎಸಗುವವರಿಗೆ ತಕ್ಕ ಪಾಠ ಕಲಿಸಬೇಕಿದೆ ಎನ್ನುವುದು ಸಾರ್ವಜನಿಕರ ಆಗ್ರಹವಾಗಿದೆ.
ಸದ್ಯ ಮುನೇಶ್ ಪತ್ತೆಗೆ ಖಾಕಿ ಪಡೆ ಬಲೆ ಬೀಸಿದೆ. ಎಸ್ಪಿ ಶ್ರೀನಿವಾಸ್ಗೌಡ ಸೂಚನೆ ಮೇರೆಗೆ ಡಿವೈಎಸ್ಪಿ ಅಶೋಕ್, ಸರ್ಕಲ್ ಇನ್ಸಪೆಕ್ಟರ್ ವಸಂತ್ ಕುಮಾರ್ ಸಬ್ಇನ್ಸ್ ಪೆಕ್ಟರ್ ಲಕ್ಷ್ಮಣ್ ನೇತೃತ್ವದ ತಂಡ ದಾಳಿ ನಡೆಸಿದೆ.