ಕನ್ನಡದ ಹಿರಿಯ ಕವಿ ಶಾಂತರಸರು. ಶಾಂತರಸ ಅವರು ರಾಯಚೂರು ಜಿಲ್ಲೆಯ ಹೆಂಬೆರಳು ಹಳ್ಳಿಯಲ್ಲಿ ಜನಿಸಿದರು. ಕನ್ನಡದ ಹೆಸರಾಂತ ಸಾಹಿತಿ,ಕನ್ನಡಪರ ಹೋರಾಟಗಾರರು.ಗಜ಼ಲ್ ಸಾಹಿತ್ಯ,ಕಥೆ,ಹೀಗೆ ಅನೇಕ ಪ್ರಕಾರಗಳಲ್ಲಿ ಸಾಹಿತ್ಯ ಕೃಷಿ ನಡೆಸಿದವರು.ಅಲ್ಲದೆ ಪ್ರಕಟಣೆಯನ್ನು ಮಾಡಿದವರು.

ಇವರು 2006ರಲ್ಲಿ ಬೀದರದಲ್ಲಿ ಜರುಗಿದ 72ನೇ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆ ವಹಿಸಿದ್ದರು.ಈ ಸಂದರ್ಭದಲ್ಲಿ ಅವರ ಅಧ್ಯಕ್ಷೀಯ ನುಡಿಯ ಕೆಲವು ತುಣುಕುಗಳು ಇಂದಿಗೂ ಸ್ಮರಣಾರ್ಹ.

1.ಸಮ್ಮೇಳನ ಪಟ್ಟ ದಲಿತರಿಗೆ ಸಿಗಲಿ
ಎಪ್ಪತ್ತೊಂದು ಅಖಿಲ ಭಾರತ ಮಟ್ಟದ ಕನ್ನಡ ಸಾಹಿತ್ಯ ಸಮ್ಮೇಳನಗಳು ಮೇಲು ಜಾತಿಯ ಪ್ರತಿಭೆಗಳಲ್ಲೆ ಹಂಚಿಹೋಗಿವೆ.  ಮುಂಬರುವ ಸಮ್ಮೇಳನದಲ್ಲಾದರೂ  ದಲಿತ ಪ್ರತಿಭೆಗಳನ್ನು ಗುರುತಿಸಿ ಕನ್ನಡ ನುಡಿ ತಾಯಿಯ ಚೊಚ್ಚಲ ಪಟ್ಟ ನೀಡಲಿ. ತನ್ಮೂಲಕ ನೆಲಪರಂಪರೆ ಉತ್ತರೋತ್ತರವಾಗಿ ಉತ್ತುಂಗಕ್ಕೇರಲಿ ಎಂದು ಆಶಿಸೋಣ.

2.ಪ್ರಾದೇಶಿಕ ಅಸಮಾನತೆ
ಅಖಂಡ ಕರ್ನಾಟಕದ ಶಿರೋಮಕುಟವೂ, ಹೈದ್ರಾಬಾದ್ ಕರ್ನಾಟಕ ಧರಿಸೀಮೆಯೂ ಎನಿಸಿಕೊಂಡಿರುವ ಈ ಬೀದರಿನಲ್ಲಿ ಈಗಾಗಲೇ ಅಖಿಲ ಭಾರತ ಮಟ್ಟದ ಎರಡು ಸಮ್ಮೇಳನಗಳು ಜರುಗಿಹೋಗಿವೆ. ಇದು ಮೂರನೇ ಸಮ್ಮೇಳನ. ಬದುಕಿನುದ್ದಕ್ಕೂ ಈ ಭಾಗವನ್ನು ಕುರಿತು ಧ್ವನಿ ಎತ್ತಿದ ನಾನು ಪ್ರಸ್ತುತ ಸಮ್ಮೇಳನಾಧ್ಯಕ್ಷನಾಗಿರುವ ವಿಶೇಷ ಅವಕಾಶವನ್ನು ಬಳಸಿಕೊಂಡು ಕೆಲವು ವಿಷಯಗಳನ್ನು ಪ್ರಸ್ತಾಪಿಸಬೇಕು. ಹೈದ್ರಾಬಾದ್ ಕರ್ನಾಟಕದ ಸ್ವಾತಂತ್ರ್ಯ ಚಳುವಳಿ, ಸ್ವಾತಂತ್ರ್ಯೋತ್ತರ ಇತಿಹಾಸ ಮತ್ತು ನನ್ನ ಬದುಕಿನ ಚರಿತ್ರೆ ಅಭಿನ್ನ. ನೈಜಾಂ ಇಲಾಖೆಯ ಹೃದಯಭಾಗವಾಗಿದ್ದ ಬೀದರ, ಗುಲಬರ್ಗಾ, ರಾಯಚೂರು, ಕೊಪ್ಪಳ ಈ ಜಿಲ್ಲೆಗಳು ಸ್ವಾತಂತ್ರ್ಯಪೂರ್ವಕಾಲದಿಂದಲೂ ಕನ್ನಡವನ್ನು ಉಳಿಸಿ ಬೆಳೆಸಲು ಅವಿರತ ಶ್ರಮಪಟ್ಟಿವೆ. ಭಾಲ್ಕಿಯ ಚೆನ್ನಬಸವ ಪಟ್ಟದ್ದೇವರು ಆಳರಸ ನಿಜಾಮರ ಒತ್ತಡದ ನಡುವೆಯೂ ಹೊರಗೆ ಉರ್ದು ಬೋರ್ಡು ಹಾಕಿ ಒಳಗೆ ಕನ್ನಡ ಶಾಲೆಗಳನ್ನು ನಡೆಸಿದ್ದಾರೆ.  ನನ್ನಂಥ ಬಡವಿದ್ಯಾಗಳಿಗಾಗಿ ಮುಷ್ಟಿ ಫಂಡ್ ಅಂದರೆ ಮನೆಮನೆಗೆ ಭಾರವಾಗದಂತೆ ಒಂದು ಹಿಡಿಹಿಟ್ಟು ಭಿಕ್ಷೆ ಎತ್ತಿ ವಸತಿ  ನಿಲಯಗಳನ್ನು  ನಡೆಸಿದ್ದಾರೆ. ಅಂದು ಭಾಲ್ಕಿ ಅಪ್ಪನವರು, ಪ್ರಭುರಾವ ಕಂಬಳಿವಾಲಾ ಇಂಥವರು ಆಳರಸರನ್ನು ಎದುರು ಹಾಕಿಕೊಂಡು ಕನ್ನಡ ಶಾಲೆಗಳನ್ನು ನಡೆಸಿರದಿದ್ದರೆ ನಾನು ಕನ್ನಡ ಕವಿಪಟ್ಟ ಹೊತ್ತು ಇವತ್ತು ಈ ವೇದಿಕೆ ಮೇಲೆ ನಿಲ್ಲುವ ಪ್ರಮೇಯವೇ ಬರುತ್ತಿರಲಿಲ್ಲ.

3.ಸ್ವಾಯತ್ತ ಸಂಸ್ಥೆಗಳು
ಸರಕಾರವು ರಾಜ್ಯದಲ್ಲಿರುವ ವಿವಿಧ ಅಕಾಡೆಮಿಗಳು, ಕನ್ನಡ ಸಾಹಿತ್ಯ ಪರಿಷತ್ತು, ಕನ್ನಡ ಅಭಿವೃದ್ಧಿ ಪ್ರಾಧಿಕಾರ, ಕನ್ನಡ ಪುಸ್ತಕ ಪ್ರಾಧಿಕಾರ, ಗ್ರಂಥಾಲಯ ಸಮಿತಿ ಮುಂತಾದ ಸ್ವಾಯುತ್ತ ಸಂಸ್ಥೆಗಳಿಗೆ ಹೆಚ್ಚಿನ ಹಣಕಾಸು ನೆರವು ನೀಡಿ ಅಷ್ಟೇ ಅಲ್ಲ ಅಕಾಡೆಮಿಗಳು ಬೆಂಗಳೂರಿಗೆ ಮಾತ್ರ ಸೀಮಿತವಾಗದೆ ವಿವಿಧ ಜಿಲ್ಲೆಗಳಲ್ಲಿ ವಿಕೇಂದ್ರೀಕರಣಗೊಂಡು ಕಾರ್ಯ ನಿರ್ವಹಿಸುವಂತಾಬೇಕು. ಈ ಸಂಸ್ಥೆಗಳಾದರೂ ರಾಜಧಾನಿ ಕೇಂದ್ರಿತ ಕಾರ್ಯಕ್ರಮಗಳನ್ನು ಮೊಟಕುಗೊಳಿಸಿ ಪ್ರತಿ ಹಳ್ಳಿ, ಪ್ರತಿ ವ್ಯಕ್ತಿಗೂ ಕಾರ್ಯಕ್ರಮಗಳನ್ನು ಮುಟ್ಟಿಸಬೇಕು. ಇಲ್ಲಿ ದಲಿತರು, ಮಹಿಳೆಯರು, ಅಲ್ಪಸಂಖ್ಯಾತರು, ಅಲಕ್ಷಿತರು ಹೆಚ್ಚೆಚ್ಚು ತೊಡಗುವಂತೆ ನಿಗಾ ವಹಿಸಬೇಕು. ಈ ಮೇಲಿನ ಎಲ್ಲ ಅಕಾಡೆಮಿಗಳು ಗಡಿಭಾಗಗಳಲ್ಲಿ ವಿಶೇಷ ಮುತುವರ್ಜಿ ವಹಿಸಿ ಕಾರ್ಯಕ್ರಮ ನಡೆಸುವ ಮೂಲಕ ಈ ಜನತೆಯಲ್ಲಿ ನಾಡು-ನುಡಿಯ ಪ್ರೇಮ ಗಟ್ಟಿಗೊಳಿಸುವಂತೆ ಮಾಡಬೇಕು. ಈ ತೆರನ ಸಾಂಸ್ಕೃತಿಕ ಅಸ್ಮಿತೆಯನ್ನು  ತಾಜಾಗೊಳಿಸುವ ಮೂಲಕವೇ ಅವರಲ್ಲಿ ಅವರಿಸಿಕೊಂಡಿರುವ ಅನಾಥ ಪ್ರಜ್ಞೆ, ಅಭದ್ರತೆಯನ್ನು ಹೋಗಲಾಡಿಸಬೇಕು.

4.ಸಮ್ಮೇಳನಗಳು ಸಾರ್ಥಕವೆನಿಸಬೇಕು
ಮಹನೀಯರೇ, ನಮ್ಮ ಮುಂದಿನ ಸಮಸ್ಯೆಗಳು, ಸವಾಲುಗಳು ಸಂಖ್ಯಾತೀತವಾಗುತ್ತಿವೆ.  ಮಾಡಬೇಕಾದ ಕೆಲಸಗಳು ಬೆಟ್ಟದಷ್ಟಿವೆ. ಕಳೆದ ಅರ್ಧ ಶತಮಾನದಿಂದಲೂ ಈ ನಾಡ ಮನೆಯ ಅಂಗಳದ ಮೂಲೆ ಮೊಡಕುಗಳಲ್ಲಿ ಕಸ ತುಂಬಿಟ್ಟಿದ್ದೇವೆ. ನಮ್ಮ ಮನಸ್ಸುಗಳಲ್ಲಿಯೂ ಸಹಸ್ರಮಾನದ ಮೌಢ್ಯವೆಂಬ ಧೂಳು ತುಂಬಿಬಿಟ್ಟಿದ್ದೇವೆ. ಇದನ್ನು ಹಸನುಗೊಳಿಸಲು ಸಾವಿರ, ಲಕ್ಷ, ಕೋಟಿ ಅಸಂಖ್ಯ ಕೈಗಳು ಮುಂದೆ ಬರಬೇಕು.  ದೇಶವನ್ನು ಆಳುತ್ತಿರುವ ಸರಕಾರ, ಪಕ್ಷಗಳು ನಿಜವಾದ ಜನಪರ ಕಾಳಜಿಯೊಂದಿಗೆ ಮುನ್ನುಗ್ಗಬೇಕು. ಧರ್ಮದ ಮುಖಂಡರು ಸ್ವಾರ್ಥ ಸಂಕುಚಿತತೆಯ ಪರದೆ ಹರಿದು ಅಸಲಿ ಮಾನವೀಯತೆಯ ಹಣತೆ ಹಚ್ಚಬೇಕು. ಅಂದಾಗಲೇ ಇಂಥ ನುಡಿ ಶಬ್ದಗಳಿಗೆ ಅರ್ಥ ಮತ್ತು ಗೌರವ ಬರುತ್ತದೆ. ಇಲ್ಲವಾದರೆ ಸಮ್ಮೇಳನಗಳು ಬರುತ್ತವೆ ಹೋಗುತ್ತವೆ. ಜನರ ಬದುಕು ಮಾತ್ರ ಅದೇ ದುಃಖ ದುಮ್ಮಾನಗಳಲ್ಲಿ ಕೊಳೆಯುತ್ತಿದ್ದರೆ ಇವು ಯಾರಿಗಾಗಿ ಮತ್ತು ಏತಕ್ಕಾಗಿ ಎಂಬ ಪ್ರಶ್ನೆಗಳು ಕಾಡುತ್ತಲೆ ಇರುತ್ತವೆ. ಈ ಪ್ರಶ್ನೆಗಳಿಗೆ ಉತ್ತರ ಹಂಚಿಕೊಳ್ಳುವ ಹಾದಿಯಲ್ಲಿ ನಾವೂ ನೀವೂ ಹಣತೆಯ ಒಂದೊಂದೇ ಹನಿ ಎಣ್ಣೆಯಾಗಿ ಒಂದಾಗಿ ಜಗವ ಬೆಳೆಸೋಣ.

Leave a Reply

Your email address will not be published.

This site uses Akismet to reduce spam. Learn how your comment data is processed.