ಹಿರಿದು ಮನಸ್ಸು
ಹಿರಿದಾದ ಭಾವ
ಮುಗಿಲಗಲವಾಗಬೇಕು
ಇದು ನಮ್ಮನ್ನಗಲಿದ ಕನ್ನಡ ಸಾಹಿತ್ಯ ಕ್ಷೇತ್ರದ ಹಿರಿಯ ಮತ್ತು ಪ್ರಮುಖ ಕವಿಗಳಾದ ನಾಡೋಜ ಚನ್ನವೀರ ಕಣವಿ ಅವರ ಆಶಯ.ವ್ಯಕ್ತಿಯ ಮನಸ್ಸು ವಿಶಾಲವಾಗಿ ಯೋಚಿಸುವಂತಾಗ ಬೇಕೆಂಬ ನಿಲುವು ಅವರ ಕಾವ್ಯದ ಮೂಲಕ ಹೊರಹೊಮ್ಮಿದೆ; ಅದು ಮುಗಿಲ ಗಲವಾಗ ಬೇಕೆನ್ನುತ್ತಾರೆ. ಸಮಾಜ ಆರೋಗ್ಯ ಪೂರ್ಣ ಸಂಬAಧಗಳಿAದ ವಿಕಾಸಗೊಳ್ಳಬೇಕೆಂಬುದನ್ನು ಅವರು ಕಾವ್ಯಮಯವಾಗಿ ಹೃದಯ ಮುಟ್ಟುವಂತೆ ಹೇಳುವುದು

ಮನುಕುಲವು ಹೂವಾಗಿ
ಜಗವು ಜೇಂಗೊಡವಾಗಿ
ಮನವು ತನಿವೆಣ್ಣಾಗಲಿ
ಎಂದು. ಅವರ ವೇಷ್ಠಿಯಿಂದ ಸಮಷ್ಠಿಯತ್ತ ಹೊರಳುತ್ತದೆ. ಅವರ ಕಾವ್ಯದ ಬಹುಮುಖ್ಯ ಪ್ರೇರಣೆಯೇ ಸಮಭಾವ. ಕವಿ ಕಾವ್ಯಾಸಕ್ತರ ಆಡೊಂಬೊಲವಾದ ಧಾರವಾಡ ಅವರ ಕಾವ್ಯ ಕೃಷಿಗೆ ಒತ್ತು ಕೊಟ್ಟು ಬೆಳೆಸಿದ ನೆಲ. ನವೋದಯ ಕಾವ್ಯ ಉತ್ತುಂಗದಲ್ಲಿದ್ದಾಗಲೇ ಕಣವಿ ಅವರ ಕಾವ್ಯ ರಚನೆ ಆರಂಭವಾಯಿತು. ಅವರು ನವೋದಯ ಕವಿಗಳ ನೆರಳಿನಲ್ಲಿ ಬೆಳೆದರೂ,ಆ ನೆರಳನ್ನು ದಾಟಿ ತಮ್ಮದೇ ಆದ ಒಂದು ಕಾವ್ಯ ಮಾರ್ಗವನ್ನು ಸೃಷ್ಠಿಸಿಕೊಂಡರು. ಅಂದಿನ ಸಾಹಿತ್ಯದ ದಾರಿಗಳನ್ನವರು ನಿರ್ಲಕ್ಷಿಸದೆ ಅದಕ್ಕೆ ಸ್ಪಂದಿಸುತ್ತಲೇ ಸ್ವೋಪಜ್ಞತೆಯನ್ನು ತಮ್ಮ ಕಾವ್ಯ ಮಾರ್ಗದಲ್ಲಿ ಸ್ಪಷ್ಟವಾಗಿಸಿದವರು ಕಣವಿ.

ನವೋದಯ ಆನಂತರದ ನವ್ಯ,ಬಂಡಾಯ ಈ ರೀತಿ ಕಾವ್ಯ ಮಾರ್ಗಗಳು ನಿರ್ಮಾಣವಾದಾಗ ಅವುಗಳಲ್ಲಿ ಹೆಜ್ಜೆಯೂರಿದರೂ,ಅದು ಅವರ ನಿರ್ಧಿಷ್ಠ ಹೆಜ್ಜೆ ಗುರುತಾಗದೆ ತಮ್ಮದೇ ಆದ ಒಂದು ಅನನ್ಯತೆಯನ್ನು ,ಕಾವ್ಯ ವಿಶೇಷವನ್ನು ಪ್ರಕಟಪಡಿಸಿಕೊಂಡು ಮುನ್ನಡೆದರು. ಕಣವಿ ಅವರ ಮೇಲೆ ಪೂರ್ವಸೂರಿಗಳ ಪ್ರಭಾವವಿಲ್ಲವೇ ಇಲ್ಲ ಎನ್ನಲಾಗದು, ಬೇಂದ್ರೆ ,ಮಧುರ ಚೆನ್ನ,ಕುವೆಂಪು ಹೀಗೆ ಅಂದಿನ ಕಾವ್ಯ ದಿಗ್ಗಜಗಳ ಸ್ಪುರಣೆ,ಪ್ರಭಾವ ಅವರ ಕಾವ್ಯದಲ್ಲಿದ್ದರೂ ಅವರ ಕಾವ್ಯ ಆ ಪ್ರಭಾವಗಳಿಂದ ಹೊರ ಬಂದು ಭಿನ್ನ ನೆಲೆಯಲ್ಲಿ ಸಾಗಿತೆಂಬುದು ಅಷ್ಟೆ ಸ್ಪಷ್ಟ. ಗೋಪಾಲಕೃಷ್ಣ ಅಡಿಗರಂತಹವರು ನವ್ಯಕಾವ್ಯ ಮಾರ್ಗಕ್ಕೊಂದು ಸ್ಪಷ್ಟ ದಾರಿ ನಿರ್ಮಿಸಿದ್ದರು. ಅವರನ್ನು ಅನುಸರಿಸಿದ ಆ ಮಾರ್ಗದ ಬಹುಮುಖ್ಯ ಕವಿಗಳ ಮಧ್ಯದಲ್ಲೂ,ನವ್ಯದ ಗಾಳಿಗೆ ಅಲುಗಾಡದೆ,ಆದರೆ ಆ ಮಾರ್ಗವನ್ನು ತಿರಸ್ಕರಿಸದೆ ಆ ಎಲ್ಲಾ ಪ್ರಭಾವಗಳಿಗೆ ಸಿಕ್ಕು ಹೊಯ್ದಾಟಕ್ಕೆ ಎಡೆಯಾಗದೆ ಎಲ್ಲಾ ಕಾವ್ಯಮಾರ್ಗಗಳ ಉತ್ತಮಾಂಶಗಳನ್ನು ಆಯ್ದುಕೊಂಡು ತಮ್ಮ ಸ್ವಂತಿಕೆಗೆ ಅವು ಚ್ಯುತಿತಾರದಂತೆ ಎಚ್ಚರ ವಹಿಸಿದ ಕವಿ ಅವರು.

ಅವರ ಮೊದಲ ಕವನ ಸಂಕಲನ ಕಾವ್ಯಾಕ್ಷಿಯಿಂದ ಹಿಡಿದು ಈವರೆಗಿನ ಕಾವ್ಯ ಸಂಕಲನಗಳಲ್ಲಿ ಪ್ರಕೃತಿ,ಸಾಮಾಜಿಕ ದೋಷ,ನಿಸರ್ಗದೊಂದಿಗಿನ ಮುಖಾಮುಖಿ, ಅನುಭಾವಿಕದೃಷ್ಟಿಕೋನ,ಬದುಕಿನ ಮೌಲ್ಯಗಳತ್ತ ದೃಷ್ಟಿ,ಮಾನವೀಯ ತಹತಹ ಈ ರೀತಿ ಅವರ ಕಾವ್ಯಗಂಗೆ ಮೃದುವಾಗಿ,ಶಾಂತವಾಗಿ, ಆಗಾಗ ರಭಸದಿಂದ ಕೆಲವೊಮ್ಮೆ ಸಣ್ಣ ಜಲಪಾತದ ಸದ್ದಿನಿಂದಲೂ ಕೂಡಿ ಕನ್ನಡ ಸಾಹಿತ್ಯ ಸಾಗರ ಸೇರಿ ಸಹೃದಯರ ಮನಸ್ಸನ್ನು ಸೆಳೆದು ಅದರಲ್ಲಿ ಸೇರಿಹೋಗಿದೆ.

ಅವರ ಪ್ರಕೃತಿಗೀತೆಗಳತ್ತ ಒಮ್ಮೆ ದೃಷ್ಟಿ ಹಾಯಿಸಿದರೆ,ಅವರ ಕಾವ್ಯದ ಸೊಗಸು,ಶಬ್ದ ಜೋಡಣೆ,ವರ್ಣನೆಯ ವೈಶಿಷ್ಟö್ಯತೆ ನಮ್ಮ ಕಣ್ಣುಗಳನ್ನು ಹಿಡಿದಿಟ್ಟು ಹೃದಯ ತಣಿಸುತ್ತವೆ. ಅವರ ಮೇಘೋಪಾಸನೆ ಕವನದಲ್ಲಿ ಆಕಾಶದಲ್ಲಿ ಒಟ್ಟುಗೂಡಿದ ಮೋಡಗಳ ತರಹೇವಾರಿ ಚಿತ್ರವನ್ನವರು ನೀಡುವ ರೀತಿಯ ಸೊಗಸು ಯಾವ ರೀತಿ ಎಂದರೆ,

ಎAದಿನಿAದಲೋ ಬಾನ ಬಟ್ಟೆಯಲಿ ಮೋಡ ಓಡುತಿಹವು?
ನೋಡ ನೋಡುತಿರೆ ಕಾಡುಮೇಡುಗಳ ದಾಟಿ ಸಾಗುತಿಹವು;
……………………………………………………
ಉಣ್ಣೆಯಾಗಿ ಮಿದು ಬೆಣ್ಣೆಯಾಗಿ ಹಿಂಜಿರುವ ಅರಳೆಯಾಗಿ
ತೊಟ್ಟಿಲಾಗಿ ತೂಗುವವು ಮೋಡ ಪಡೆ ನಡುವೆ ಬೆಟ್ಟವಾಗಿ
ಈ ರೀತಿ ಪದಗಳ ಮೂಲಕವೇ ಮೋಡದ ಚಿತ್ರಣವನ್ನು ಕಣ್ಣಿಗೆ ಕಟ್ಟಿಸಿ ಬಿಡುವ ಕಾವ್ಯ ಶೈಲಿ ಅವರದು. ಚಂದಿರನ ಬಗ್ಗೆ ಬರೆವಾಗ ಕವಿ ಆ ಹುಣ್ಣಿಮೆಯ ರಾತ್ರಿಯಲ್ಲಿ ತಮ್ಮ ಮನಸ್ಸಿನ ಮೂಲಕವೆ ಆಕಾಶಕ್ಕೇಣಿ ನಿರ್ಮಿಸಿದಂತೆ ಆ ದೃಶ್ಯದ ವರ್ಣನೆಯನ್ನು ಬಿಂಬಿಸುವ ರೀತಿ ಹೀಗೆ.

ನೀಲ ನಿರ್ಮಲದಾಗಸದಿ ನಿಶ್ಚಿಂತನಾಗಿಹೆ ಚಂದಿರ
ಬಾನು ತೊಳಗಿದೆ,ಭುವಿಯ ಬೆಳಗಿದೆ ಶುದ್ಧ ಪಳುಕಿನ ಮಂದಿರ

ತುAತುರು ಮಳೆಯನ್ನು ಕವಿ ನೋಡುತ್ತಲೇ ಗುನುಗಿಕೊಳ್ಳುತ್ತಾರೆ. ಅದೊಂದು ಆ ಸೋನೆ ಮಳೆಯನ್ನು ಕಟ್ಟಿಕೊಟ್ಟ ಚಿತ್ರವಾಗಿ ಬಿಡುತ್ತದೆ. ಶ್ರಾವಣ ಅವರನ್ನು ಬಹಳಷ್ಟು ಆಕರ್ಷಿಸಿದ ಮಾಸ,ಶ್ರಾವಣದ ಲಾವಣ್ಯ ಕವನದಲ್ಲಿ ಆ ಮಾಸದ ಸೊಗಸನ್ನು

ಹುಲ್ಲು ಹಾಸಿದೆ ಹೂವು ಸೂಸಿದೆ
ಗಾಳಿ ಮೂಸಿದೆ ಕಂಪನು
ಶ್ರಾವಣದ ಲಾವಣ್ಯ ಕುಣಿದಿದೆ
ಮಳೆಯು ಹಣಿಸಿದೆ ತಂಪನು

ಎAದು ಹೇಳಿದರೆ,ಶ್ರಾವಣ ಎಂಬ ಇನ್ನೊಂದು ಕವನದಲ್ಲಿ ಶ್ರಾವಣ ಮಾಸದಲ್ಲಿ ಬಂದ ಮಳೆಗೆ ಕವಿ ಸ್ಪಂದಿಸುವುದು

ನೆತ್ತಿಯ ಮೇಲೆ ಸಮುದ್ರ ತೇಲಿದ ಹಾಗೆ ಮುಗಿಲು
ಸುರಿವ ಜಡಿಮಳೆ,ತುಂಬಿ ಹೊರಚಲ್ಲಿದುದ್ವೇಗ
ಮನೆಯ ಮನೆಯು ನಡುಗಡ್ಡೆ,ಮನ-ದಿಗಂತಕೆ ದಿಗಿಲು

ಎಂದು. ಮಳೆಯ ರಭಸದ ಆತಂಕದಿAದ ಸಾಗಿ ಅದು ಸೃಷ್ಟಿಸುವ ಸುಂದರ ಚಿತ್ರವನ್ನೂ ಕವನವಾಗಿಸಿ ಮುಂದಿಡುತ್ತಾರೆ. ಶ್ರಾವಣದ ಒಂದು ಸಂಜೆ ಕವನದಲ್ಲಿ

ಬಾನೆಲ್ಲ ಮೋಡದ ಮುಸುಕು ಮುಬ್ಬುಗತ್ತಲು ಕೋಣೆ
ಸಣ್ಣಗೆ ಹಿಡಿದು ಬಿಟ್ಟ ತುಂತುರು ಮಳೆ.
ದುರಸ್ತಿ ಕಾಣದ ರಸ್ತೆ-ಗುಂಡಿಗಳ ತುಂಬ ರಾಡಿನೀರು
ಗಾಳಿ ಬೀಸಿ,ಮೋಡ ಚದುರಿದರೆ ಒಂದಿಷ್ಟು ಹೂಬಿಸಿಲು

ಈ ರೀತಿ ಶ್ರಾವಣದ ವೈವಿಧ್ಯತೆ,ಅದರ ಸೌಂದರ್ಯದ ಪುಲಕವನ್ನು ಕವಿ ತಮ್ಮ ಕಲ್ಪಕತೆಯ ಉತ್ತಮಿಕೆಯ ದರ್ಶನ ಮಾಡಿಯೇ ಬಿಡುತ್ತಾರೆ.

ನವೋದಯ ಕವಿಯೆಂದೇ ಹಣೆಪಟ್ಟಿ ಹಚ್ಚಿಕೊಳ್ಳದಿದ್ದರೂ ನವೋದಯ ಕಾಲದ ಪ್ರಕೃತಿ ವರ್ಣನೆ,ಪ್ರೀತಿ,ಪ್ರೇಮದ ಸೆಲೆ ಅವರ ಕಾವ್ಯದಲ್ಲಿ ಹೊರಹೊಮ್ಮಿದೆ. ಪ್ರೀತಿ-ಪ್ರೇಮವನ್ನು ನೇರವಾಗಿ ಎರಡು ಮನಸುಗಳು ಹೇಳುವ ರೀತಿಗಿಂತ ಅವರ ಮಧುಚಂದ್ರ ಕವನ ಸಂಗ್ರಹದಲ್ಲಿ ಹೂವುಗಳು,ಅವುಗಳ ಸೌಂದರ್ಯ,ಸುವಾಸನೆಯ ಮೂಲಕ ಪರೋಕ್ಷವಾಗಿ ಗಂಡು-ಹೆಣ್ಣಿನ ಮನಸ್ಸುಗಳನ್ನು ಬಿಚ್ಚಿಡುತ್ತವೆ.

ಚೆಲುವಾಗಿದೆ
ಬನವೆಲ್ಲವೂ
ಗೆಲುವಾಗಿದೆ ಮನವು;
ಉಸಿರುಸಿರಿಗು
ತಂಪೆರೆಚಿದೆ
ನಿನ್ನದೆ ಪರಿಮಳವು
ಎನ್ನುತ್ತಾ ಒಂದು ಮಲ್ಲಿಗೆಯ ಹೂವಿಗೆ ಆ ಪ್ರೇಮದ ಸಂಕಲ್ಪವನ್ನು ಆರೋಪಿಸಿ ಪ್ರೀತಿಯ-ಪ್ರೇಮದನುಭವವನ್ನು ನಿವೇದಿಸುತ್ತಾರೆ. ಹಾಗೆಯೇ ಜೀವಜೀವಾಳದಲಿ ಕೂಡಿದವಳು ಒಂದು ದಾಂಪತ್ಯಗೀತೆಯಾಗಿ ಬಂದಿದೆ. ಆಕೆ;-

ಹಾಲುಗಲ್ಲಿನ ಮೇಲೆ
ಬೆಳೆದಿಂಗಳಿಳಿದAತೆ
ನಗೆಯ ಹೊಂಗೇದಿಕೆಯ ಮುಗುದೆಯಿವಳು
ಮುಂಜಾವು ಉಷೆಯಂತೆ
ಸAಜೆ ಅಪ್ಸರೆಯಂತೆ ಕಣ್ಣುಕಣ್ಣಿಗೆ ದೀಪ ಮಿನುಗಿಸುವಳು!

ಹೀಗೆಯೇ ಉಷೆಯ ಗೆಳತಿ,ನಿರೀಕ್ಷೆ,ಮೌನಭಾರ ಕವನಗಳನ್ನು ನೋಡಬಹುದು. ಕಾಲದ ಬಗ್ಗೆ ಸಹ ಕಣವಿಯವರ ಕಾವ್ಯ ಚಿಂತನೆ ನಡೆದಿದೆ. ಅವರ ಕವನ ಕಾಲದ ಬಗ್ಗೆ ಹೇಳುತ್ತದೆ.

ಈ ಕಾಲನೆಂಬ ಪ್ರಾಣಿ
ಕೈಗೆ ಸಿಕ್ಕರೆ ಚೆನ್ನಾಗಿ ಥಳಿಸಬೇಕೆಂದಿದ್ದೆ
ಎಲ್ಲೋ ತಲೆಮರೆಸಿಕೊಂಡು ಓಡಾಡುತ್ತಿದ್ದಾನೆ.
ಆಕಾಶದಲ್ಲಿ ಮಿಂಚಿ,
ಭೂಕAಪದಲ್ಲಿ ಗದಗದ ನಡುಗಿ,
ಜ್ವಾಲಾಮುಖಿಯೊಳಗೆ ಸಿಡಿದು ನುಚ್ಚುನೂರಾಗಿ,
ನದಿನದಿಯ ಗರ್ಭವ ಹೊಕ್ಕು,ಮಹಾಪೂರದಲಿ ಹೊರಬಂದು
ನಮ್ಮೆದೆಯಲಿ ತುಡಿವ ತಬಲವಾಗಿದ್ದಾನೆ
ಹಿಡಿಯಿರೋ ಅವನ………
ಹೀಗೆಂದು ಕಾಲವನ್ನು ಹಿಡಿಯಲಾಗದೆಂಬ ಅರಿವಿದ್ದರೂ,ಆ ಕಾಲನೆಂಬ ಪ್ರಾಣಿ ಕೈಗೆ ಸಿಕ್ಕಲ್ಲಿ ಎಂಬ ಆಶಯವಿದೆ. ಸಿಕ್ಕುತ್ತಿಲ್ಲ,ಆದರಾತ ಭೂಕಂಪದಲ್ಲಿ, ನದಿಯ ಪ್ರವಾಹದಲ್ಲಿ, ಜ್ವಾಲಾಮುಖಿಯ ಸಿಡಿತದಲ್ಲಿ ಇದ್ದಾನೆ. ಆದರೆ ಕೈಗೆ ಸಿಗನು ಎಂದು ಕಾಲದ ಸಾಧ್ಯತೆ,ಸಂಕೀರ್ಣತೆಗಳನ್ನು ಕಟ್ಟಿಕೊಡುತ್ತಾ,ಕಾಲದ ಚಲನೆ,ಅದು ತರುವ ಬದಲಾವಣೆಗೆ ಒತ್ತುಕೊಟ್ಟು ಕೊನೆಗೆ -ಕಾಲ ನಿಲ್ಲುವುದಿಲ್ಲ; ನಾವು ಕೂಡುವುದಿಲ್ಲ ಎಂಬ ತೀರ್ಮಾನಕ್ಕೆ ಬರುತ್ತಾರೆ. ಅವರ ವರ್ತುಳ,ಪ್ರಣಯ ಪ್ರೀತಿ,ದಾಹ,ಉಪ್ಪುನೀರು,ಕತ್ತಲೆಬೆಳಕು,ರಾತ್ರಿ ಈ ರೀತಿ ಸಂಕೀರ್ಣ ಕವನಗಳು ಗಮನ ಸೆಳೆಯುತ್ತವೆ. ಅವರ ಬಹುತೇಕ ಕವನಗಳಲ್ಲಿ ಅನುಭೂತಿ ಅಥವಾ ದೇವತ್ವದ ಗುಣಕ್ಕಿಂತ ಹೆಚ್ಚಿನಂಶ ಮನುಷ್ಯ,ಆತನ ಬದುಕಿನತ್ತ ಸುತ್ತುತ್ತವೆ. ಆಧ್ಯಾತ್ಮಕತೆಯ ತುಡಿತವಿದ್ದರೂ ಅದು ಹೆಚ್ಚಿನ ಮಟ್ಟದಲ್ಲಿ ಕಾಣ ಸಿಗುವುದಿಲ್ಲ. ಕಣವಿಯವರಿಗೆ ಇಷ್ಟವಾದ ಕರಗತವಾಗಿರುವ ಸಾನೆಟ್‌ಗಳಲ್ಲೂ ಸಹ ಅವರು ಪ್ರತಿಮೆಗಳ ಮೂಲಕ ಮನುಷ್ಯ ಬದುಕಿನ ವಿವರಗಳನ್ನು ಪರಿಪಕ್ವಗೊಳಿಸಿ ನೀಡಿದ್ದಾರೆ. ನೆಲ-ಮುಗಿಲಿನ ಸಂಬAಧ ಹೇಳುತ್ತಾ ಎಚ್ಚರಿಕೆಯ ದನಿ ನೀಡಿ-ವಿಶ್ವವೆಲ್ಲವೂ ತೆರೆದ ಬಾಗಿಲೆ ಎನ್ನುತ್ತಾರೆ. ಬಿಸ್
ಮಿಲ್ಲಾರ ಶಹನಾಯಿವಾದನ ಕೇಳಿ,ಶತಾಯುಷಿ ವಿಶ್ವೇಶ್ವರಯ್ಯನವರು,ಉತ್ತಂಗಿಯವರನ್ನು ನೆನೆದು,ನಮಿಸು:ಗೋವಿಂದ ಪೈ,ಅರವಿಂದರು,ಬೇAದ್ರೆ,ಗಾAಧಿ,ಶಾಸ್ತಿçಗಳ ಬಗ್ಗೆ ಬರೆದ ಸಾನೆಟ್ಟುಗಳಲ್ಲಿ ಅ ವ್ಯಕ್ತಿತ್ವದ ಸಾಧನೆ,ವಿಶೇಷತೆಗಳನ್ನು ಅತ್ಯಂತ ಹೃದ್ಯವಾಗಿ ನಿಲ್ಲುವಂತೆ ನೀಡಿರುವುದು ಸುನೀತಗಳ ಪ್ರಕಾರ ಅವರಿಗೆ ಕರತಲಾಮಲಕವಾಗಿರು ವುದನ್ನು ಸ್ಪಷ್ಟಪಡಿಸುತ್ತವೆ.

ಆಕಾಶಬುಟ್ಟಿ ಕವನ ಸಂಕಲನದಲ್ಲಿ ಹೊಸಬಾಳು ನಮ್ಮದಿದೆ ಕವನದಲ್ಲಿ ಕುವೆಂಪು ಪ್ರಭಾವ ಕಂಡರೂ,

ಹೊಸ ಜಗವು ರೂಪುಗೊಂಡಿಹುದೀಗ;ಹೊಸಬಾಳು
ನಮ್ಮದಿದೆ,ಹೊಸತೆಲ್ಲ ನಮ್ಮದಿನ್ನು
ಹಳೆಯ ಕಾಲದ ರೂಢಿ-ಜಡಮತಿಯರನೆಲ್ಲ
ಬಿಟ್ಟುಬಿಡಿ ಅವರವರ ಪಾಡಿಗಿನ್ನು
ಎಂದು ಯುವ ಜನಾಂಗಕ್ಕೆ-ನೀಡುವ ಕರೆ ನವ ಸಮಾಜದ ಕನಸು ಕವನವಾಗಿದ್ದರೂ ಕೊನೆಯ ಎಚ್ಚರಿಕೆ ಕವನದಲ್ಲಿ ಸಮಾಜ ಬದಲಾಗದ ಒಂದು ವಿಷಾದ ಅವರನ್ನು ಕಾಡಿದಂತಿದೆ.

ಏಸುಕ್ರಿಸ್ತ ಏಸುಬುದ್ಧ
ಏಸು ಬಸವ ಬಂದರೂ,
ತಮ್ಮ ಅಂತರAಗವನ್ನೆ
ಲೋಕದೆದುರು ತೆರೆದರೂ
ನಶ್ವರದಲಿ ಈಶ್ವರನು
ಕಂಡುಜಗದ ಕಲ್ಯಾಣಕೆ
ಎದೆಯ ಪ್ರಣತಿ ಜ್ಯೋತಿಯಲ್ಲಿ
ದಯೆಯ ತೈಲವೆರದರೂ
ಪುಣ್ಯಪುರುಷ ಗಾಂಧಿ ತಂದೆ
ನೆತ್ತರಲಿ ನಾಂದರೂ
ನೀನು ಮಾತ್ರ ಬೋರ್ಕಲ್ಲೆಲೆ ಪಡಂಭೂತನAತಿಹೆ
ಮತ್ತೆ ಹೊಲಸು ಕೆಸರಿನಲ್ಲಿ ಮತ್ತನಂತೆ ಬಿದ್ದಿಹೆ
ಎಂಬ ಎಚ್ಚರಿಕೆ,ಜೊತೆಗೆ ನೋವನ್ನು ಹೊರಹಾಕುತ್ತಲೇ ಈ ಸ್ಥಿತಿಯನ್ನು ಬದಲಾಯಿಸುವ ಯುವಶಕ್ತಿ ಬರುತ್ತಿದೆ ಎಂಬ ಆಶಯದ ಧ್ವನಿಯೂ ಇದೆ.

ಅವರ ಕವನಗಳು ಬದುಕಿನ ಧಾರುಣತೆಯನ್ನೂ ಹೇಳುತ್ತವೆ-ಮಧ್ಯಾಹ್ನದ ಮಜಲು ಕವನದಲ್ಲಿ ಬರುವ ಎಲ್ಲಾ ಪ್ರತಿಮೆಗಳು ನೇತ್ಯಾತ್ಮಕವಾದ ದನಿಯಿಂದಲೇ ಕೂಡಿವೆ.

ಕಾಗೆ ಬೇವಿನಕಾಯಿ ಕುಕ್ಕಿ ಚುಂಚನು ತಿಕ್ಕಿ
ಹೊತ್ತು ಗೊತ್ತಿಲ್ಲದೆ ಕಿರುಚುತ್ತಿದ್ದರೆ,
ಗಿಡದ ಬೊಡ್ಡೆಯನಾತು ಮಲಗಿರುವ ಭಿಕ್ಷÄಕನ ಮುತ್ತಿ ಜೊಮ್ಮೆಂದಿಹುದು. ನೊಣದ ಪರಿಸೆ; ಬಾಡಿಗೆಯ ಚಕ್ಕಡಿಗೆ ಎಣ್ಣೆಯಿಲ್ಲದ ಕೀಲು ಈ ರೀತಿ ಕವನ ಒಂದು ಭೀಕರ ಚಿತ್ರಣವನ್ನು ನೀಡುತ್ತಾ ಬಂದರೆ,ಅಪರಾವತಾರದAತ ಕವನದಲ್ಲಿ ರಾಜಕಾರಣದ ಕುಲಗೆಟ್ಟ ಸ್ಥಿತಿಯ ಚಿತ್ರಣವಿದೆ. ವಕ್ರರೇಖೆ,ನಾಳಿನ ನವೋದಯ ಈ ಕವನಗಳಲ್ಲಿ ಪ್ರಸ್ತುತ ಸ್ಥಿತಿಯ ಅನಾವರಣವಿದೆ ಹಾಗೆಯೇ ಒಂದು ಆಶಯವೂ ಇದೆ.

ಎಂಥ ಕತ್ತಲೆಯಲ್ಲಿ ಸ್ವಂತ ತೇಜವ ಬಿಡದೆ
ಚಿಕ್ಕೆ ಬೆಳಗಿನ ಧೈರ್ಯ,ಶಾಂತಿ ಔದಾರ್ಯ
ಈ ನಾಡಿನೆದೆಯಲ್ಲಿ ಮೂಡಬಹುದೆಂದು
ಹೇಳುತ್ತಾರೆ.

ಈ ರೀತಿ ನಿಸರ್ಗದ ಸೌಂದರ್ಯದಿAದ ಹಿಡಿದು ಬದುಕಿನ ಒಳಹೆಣಿಗೆ,ಮನುಷ್ಯನ ಸ್ವಭಾವ,ಹೇಗಿರಬೇಕಿತ್ತು,ಹೇಗಾಗಿದ್ದೇವೆ ಎಂಬ ವಿಷಾದ,ಗಂಡು ಹೆಣ್ಣಿನ ಮನದಾಳದ ಪ್ರೀತಿ,ಕಾಲ,ಋತು,ಮಳೆ,ಮೋಡ ಇವುಗಳನ್ನು ಶಬ್ದದಲ್ಲೇ ಚಿತ್ರಿಸುವ ಕಾವ್ಯಕಲೆ ಅವರ ವೈಶಿಷ್ಟö್ಯ. ಅವರ ಕಾವ್ಯದಲ್ಲಿ ಸ್ಪಷ್ಟತೆ ಇದೆ,ಬದುಕಿನ ಚಿತ್ರಣವಿದೆ,ಅವರು ಬಳೆಸುವ ರೂಪಕ ಪ್ರತಿಮೆಗಳು ಅರ್ಥಪೂರ್ಣವಾಗಿವೆ.

ಹಿರಿಯ ಕವಿಗಳ ಹಾದಿಯಲ್ಲೆ ಸಾಗಿದರೂ,ತಮ್ಮದೇ ದಾರಿ ನಿರ್ಮಿಸಿಕೊಂಡ,ಯಾವ ಸಿದ್ಧಾಂತಕ್ಕೂ ಜೋತುಬೀಳದೆ ತಮ್ಮದೆ ಲಯ,ಬದುಕಿನಲ್ಲಿ ಮುಖಾಮುಖಿಯಾದು ದಕ್ಕೆ ಕಾವ್ಯದ ಸ್ಪರ್ಷ ನೀಡಿದ ಚಂಬೆಳಕಿನ ಕವಿ ಚನ್ನವೀರ ಕಣವಿ. ಎಂದೂ ಒಂದು ಸಿದ್ಧಾಂತಕ್ಕೆ ಅಂಟಿ ಕೂರಲಿಲ್ಲ.ಸಾಹಿತ್ಯ ಸಮಾಜ ಪರಿವರ್ತನೆಯ ಅಸ್ತçವೆಂದೂ ಭಾವಿಸದೆ ಬದುಕಿನ ಏರಿಳಿತಗಳಲ್ಲಿ ಸಾಗುವಾಗ ಅವರ ದೃಷ್ಠಿಗೆ ಎಡೆ ತಾಕಿದ್ದನ್ನು ಕಾವ್ಯದಲ್ಲಿ ಹಿಡಿದಿಟ್ಟು ಅರ್ಥಪೂರ್ಣವಾಗಿ ನೀಡಿದರು.

ಕಣವಿ ಅವರ ಹುಟ್ಟೂರು ಧಾರವಾಡ ಜಿಲ್ಲೆಯ ಹೊಂಬಳ. ಜನನ ಜೂನ್-೧೯೨೮.ಪಾರ್ವತವ್ವ ಮತ್ತು ಸಕರೆಪ್ಪ ಅವರ ತಾಯಿತಂದೆ. ಬಡತನದ ಬಾಲ್ಯವಾದರೂ ಧಾರವಾಡ ನಗರದಲ್ಲಿ ಶಿಕ್ಷಣ ಮುಂದುವರೆದು ಸ್ನಾತಕೋತ್ತರ ಪದವಿಯನ್ನೂ ಕರ್ನಾಟಕ ವಿವಿಯಲ್ಲಿ ಪಡೆದು ವೃತ್ತಿ ಜೀವನಕ್ಕೆ ಕಾಲಿಟ್ಟರು. ಪತ್ನಿ ಶಾಂತಾದೇವಿ. ಅವರೂ ಸಹ ಕವಿ. ಸಾಹಿತ್ಯ ಸಂಸ್ಕೃತಿಯಲ್ಲಿ ಒಲವು ಹೊಂದಿದ ಜೀವ. ದಂಪತಿಗಳಿಬ್ಬರೂ ಸಹ ಸೌಜನ್ಯ ವಿನಯವನ್ನು ಮೈಗೂಡಿಸಿಕೊಂಡವರು. ಕಣವಿ ಅವರ ಸಾಹಿತ್ಯ ಸಾಧನೆಯನ್ನು ಅವರ ಸಾಹಿತ್ಯ ಮಿತ್ರರ ಸಹೃದಯರು-ಚಂಬೆಳಕು ಎಂಬ ಅಭಿನಂದನಾ ಗ್ರಂಥದಲ್ಲಿರಿಸಿ ಅವರಿಗೆ ಅರ್ಪಿಸಿದ್ದಾರೆ.ಡಾ.ಚೆನ್ನವೀರ ಕಣವಿ ಭೌತಿಕವಾಗಿ ಇಂದು ನಮ್ಮೊಂದಿಗಿಲ್ಲ. ಆದರೆ ಅವರ ಕವನಗಳ ಮೂಲಕ ನಮ್ಮ ಹೃನ್ಮನದಲ್ಲಿ ಚಿರಸ್ಥಾಯಿಯಾಗಿದ್ದಾರೆ.

ಸ. ಗಿರಿಜಾಶಂಕರ
ಚಿಕ್ಕಮಗಳೂರು

Leave a Reply

Your email address will not be published.

This site uses Akismet to reduce spam. Learn how your comment data is processed.