ಅರುಣ್ ಕಿರಿಮಂಜೇಶ್ವರ, ಬೆಂಗಳೂರು

“ಜಹಂಗೀರನು ಪ್ರಯಾಗದಲ್ಲಿ ಅವಿನಾಶಿ ಎಂದು ವಿಖ್ಯಾತವಾಗಿದ್ದ ಅಕ್ಷಯ ವಟವೃಕ್ಷವನ್ನು ಬುಡಸಹಿತ ಕಡಿಸಿ, ಅದರ ಬೇರುಗಳ ಮೇಲೆ ಕುದಿಯುವ ಸೀಸ ಸುರಿಸಿ ಆ ವೃಕ್ಷ ಇನ್ನು ತಲೆಯೆತ್ತದಂತೆ ತಾನು ಸಂಪೂರ್ಣ ನಾಶಗೊಳಿಸಿದುದಾಗಿ ಗರ್ವದಿಂದ ಘೋಷಿಸಿದ. ಆದರೆ ವರ್ಷದೊಳಗಾಗಿ ಸುಟ್ಟು ಬೂದಿಯಾದ ಬುಡದಿಂದಲೇ ಆ ವಟವೃಕ್ಷ ಮತ್ತೆ ಚಿಗುರೊಡೆಯಿತು. ಮೇಲೆ ಹೆಪ್ಪುಗಟ್ಟಿ ತನ್ನನ್ನು ಅದುಮಿಟ್ಟಿದ ಸೀಸದ ದುರ್ಭೇದ್ಯ ಪದರುಗಳನ್ನು ಸೀಳಿ ತಲೆಯೆತ್ತಿ ಬೆಳೆಯಿತು. ಹಾಗೆಯೇ ಹಿಂದುತ್ವದ ವಟವೃಕ್ಷವನ್ನು ನೂರಾರು ವರ್ಷಗಳವರೆಗೆ ಧ್ವಂಸಗೊಳಿಸಿ, ದಾಸ್ಯದ ಶೃಂಖಲೆ ದಬ್ಬಾಳಿಕೆಗಳು ಮೆಟ್ಟಿ ಕುಳಿತಿದ್ದವು. ಆದರೆ ಆ ವಟವೃಕ್ಷವು ಪರರ ದಮನದ ಭಾರಕ್ಕೆ ಸಿಕ್ಕಿಯೂ ಸಾಯದೆ, ಮತ್ತೊಮ್ಮೆ ಹೊಸ ಚಿಗುರೊಡೆದಂತೆ ಶಿವಾಜಿ ಮಹಾರಾಜರು ಹಿಂದೂ ಸಾಮ್ರಾಜ್ಯವನ್ನು ಸಮರ್ಥವಾಗಿ ಉಜ್ಜೀವನಗೊಳಿಸಿದರು” ಎಂದು ಇತಿಹಾಸಕಾರ ಜದುನಾಥ ಸರಕಾರರು ಭೀಷಣವಾಗಿದ್ದ ಸನ್ನಿವೇಷದಲ್ಲಿ ಅಸಾಧಾರಣವಾಗಿ ರಾಷ್ಟ್ರವನ್ನು ಕಟ್ಟಿದ ಛತ್ರಪತಿ ಶಿವಾಜಿ ಮಹಾರಾಜರ ಕುರಿತು ತಿಳಿಸುತ್ತಾರೆ.

ಒಂದು ಸಮಾಜದ ಪುನರುಜ್ಜೀವನಕ್ಕಾಗಿ ಸರ್ವಸ್ವವನ್ನೂ ಧಾರೆಯೆರೆದ ಯಾವುದೇ ವ್ಯಕ್ತಿ ಆ ಸಮಾಜದ ಪ್ರಾತಃಸ್ಮರಣೆಯ ಭಾಗವಾಗುತ್ತಾರೆ. ಆದರೆ ದುರ್ದೈವದ ಸಂಗತಿಯೆಂದರೆ ಶಿವಾಜಿ ಮಹಾರಾಜರು ವಿವಾದದ ವಸ್ತುವಾಗುತ್ತಾರೆ! ಪ್ರಸ್ತುತದ ಸನ್ನಿವೇಷದಲ್ಲಿ ವಿವಾದಗಳ ಮೂಲಕವಾದರೂ ಅನೇಕ ಮಹಾನ್ ವ್ಯಕ್ತಿಗಳ ಶ್ರಮದ ಬೆಲೆಯ ಅರಿವಾಗುತ್ತಿದೆ ಎನ್ನುವ ತಾತ್ಕಾಲಿಕ ಸಂತಸಪಡಬೇಕಷ್ಟೆ!

ಶಿವಾಜಿ ಮಹಾರಾಜರ ಜೀವನದ ಅಧ್ಯಯನ ಇಂದಿನ ಜ್ವಲಂತ ಸಮಸ್ಯೆಗಳಿಗೂ ಹೇಗೆ ಪರಿಹಾರವನ್ನು ಕೊಡಬಲ್ಲದು ಎನ್ನುವುದನ್ನು ಪ್ರಸ್ತಾಪಿಸುವ ಪ್ರಯತ್ನವನ್ನಷ್ಟೇ ಈ ಲೇಖನ ಮಾಡುತ್ತದೆ.

ಮಾನಸಿಕ ಕ್ರಾಂತಿಯ ಹರಿಕಾರ ಶಿವಾಜಿ: ಶಿವಾಜಿ ಮಹಾರಾಜರು ಹಿಂದವಿ ಸಾಮ್ರಾಜ್ಯವನ್ನು ಸ್ಥಾಪಿಸಿದರು ಎನ್ನುವುದು ಎಷ್ಟು ಸತ್ಯವೋ, ಹಿಂದುವಿನ ಮನಸ್ಸೂ ಅದಕ್ಕಾಗಿಯೇ ದುಡಿಯುವಂತೆ ಮಾಡಿದ್ದೂ ಅಷ್ಟೇ ಸತ್ಯ. ಅನೇಕ ಬಾರಿ ಸಮಾಜದ ಮಾನಸಿಕತೆಯ ದೋಷದ ಕುರಿತಾದ ಧ್ವನಿಗಳು ಭುಗಿಲೇಳುತ್ತಿರುತ್ತವೆ. ಶಿವಾಜಿ ಮಹಾರಾಜರ ಕಾಲಘಟ್ಟ ಇದಕ್ಕೇನು ಹೊರತಾಗಿರಲಿಲ್ಲ. ಧಾರ್ಮಿಕ, ಸಾಮಾಜಿಕ, ರಾಜಕೀಯ ಮೌಢ್ಯಗಳಿಂದ ಕೂಡಿದ್ದವು.

ಆಗ್ರದಿಂದ ಶಿವಾಜಿ ಮಹಾರಾಜರು ತಪ್ಪಿಸಿಕೊಂಡು ಬಂದಾಗ ಮಥುರೆಯಲ್ಲಿ ಕೃಷ್ಣಾಜಿ ತ್ರಿಮಲ್ ಎನ್ನುವ ಬ್ರಾಹ್ಮಣನ ಬಳಿ ತನ್ನ ಮಗ ಸಂಭಾಜಿಯನ್ನು ಬಿಟ್ಟು ಹೊರಡುತ್ತಾರೆ. ಕೃಷ್ಣಾಜಿ ಅನುಕೂಲ ಪರಿಸ್ಥಿತಿಯಲ್ಲಿ ಸಂಭಾಜಿಯನ್ನು ಶಿವಾಜಿಯ ಬಳಿ ತಲುಪಿಸುವ ಕ್ಲಿಷ್ಟಕರ ಜವಾಬ್ದಾರಿಯನ್ನೂ ಹೊರುತ್ತಾನೆ. ಸಂಭಾಜಿಯನ್ನು ತನ್ನ ಸ್ವಂತ ಮಗನಂತೆ ಬೆಳೆಸಿ ಆತನ ರಕ್ಷಣೆಯ ದೃಷ್ಟಿಯಿಂದ ಉಪನಯನವನ್ನೂ ಮಾಡಿಸುತ್ತಾನೆ. ಆದರೂ ಸಂಭಾಜಿಯನ್ನು ಶಿವಾಜಿಯ ಬಳಿ ತಲುಪಿಸುವ ಹಾದಿಯಲ್ಲಿ ಮುಸಲ್ಮಾನ ಸೈನಿಕನೊಬ್ಬನ ಅನುಮಾನಕ್ಕೆ ಗುರಿಯಾಗಬೇಕಾಗುತ್ತದೆ. ಆ ಮುಸಲ್ಮಾನ ಸೈನಿಕನ ಮನಸ್ಸಿನಲ್ಲಿ ಒಬ್ಬ ಬ್ರಾಹ್ಮಣ, ಯುವರಾಜನನ್ನಾದರೂ ಒಪ್ಪಿಸಿಯಾನು, ಆದರೆ ತನ್ನ ಧರ್ಮಾಚರಣೆಯನ್ನು ಮುರಿದು, ಕೆಳಜಾತಿಯವನೊಂದಿಗೆ ಜೊತೆಗೆ ಕೂತ ಊಟ ಮಾಡಲಾರನು ಎನ್ನುವುದು ತಿಳಿದಿದ್ದರಿಂದ ಇಬ್ಬರೂ ಜೊತೆಗೆ ಕೂತು ಊಟ ಮಾಡಲು ಹೇಳುತ್ತಾನೆ. ಆಗ ಕೃಷ್ಣಾಜಿ ಕಿಂಚಿತ್ತೂ ಯೋಚಿಸದೆ ಸಂಭಾಜಿಯ ಜೊತೆಗೂಡಿ ಊಟ ಮಾಡಿ ಸೈನಿಕನ ಅನುಮಾನ ದೂರಗೊಳಿಸಿ ಮುನ್ನಡೆಯುತ್ತಾನೆ. ಇಲ್ಲಿ ಕೃಷ್ಣಾಜಿ ತ್ರಿಮಲ್ ಅವರ ನಡೆ, ಸ್ವರಾಜ್ಯವೆಂಬ ಧ್ಯೇಯಮಂತ್ರದ ಪ್ರಕಾಶಕ್ಕೆ ಜಾತಿಯ ಕಟ್ಟಳೆ ಮುರಿದು ಬೀಳುವುದರ ಪ್ರತೀಕವಾಗಿದೆ.

ಸುರಾಜ್ಯಕ್ಕಾಗಿ ಧ್ಯೇಯನಿಷ್ಠ ಮನಸ್ಸುಗಳು ಬೇಕು: ವ್ಯಕ್ತಿನಿಷ್ಠೆಗಿಂತ ಧ್ಯೇಯನಿಷ್ಠೆ ಹೃದಯದಲ್ಲಿ ಅಂಕಿತಗೊAಡಾಗ ಮಾತ್ರ ಸುರಾಜ್ಯದ ಕನಸ್ಸು ನನಸಾಗುವುದಕ್ಕೆ ವೇಗ ಸಿಗುತ್ತದೆ ಎನ್ನುವುದಕ್ಕೆ ಹಲವು ನಿದರ್ಶನಗಳು ಶಿವಾಜಿ ಮಹಾರಾಜರ ಕುರಿತಾದ ಅಧ್ಯಯನ ತಿಳಿಸಿಕೊಡುತ್ತದೆ. ವರ್ಷಾನುಗಟ್ಟಲೆ ಶಿವಾಜಿ ಮಹಾರಾಜರು ಬಂಧಿಯಾಗಿದ್ದಾಗಲೂ ಸುಲಲಿತವಾಗಿ ನಡೆದ ರಾಜ್ಯಭಾರಕ್ಕಿಂತ ಮಿಗಿಲಾದ ಸುರಾಜ್ಯದ ಉದಾಹರಣೆ ಬೇಕೆ? ನಮ್ಮವರಿಂದಲೇ ನಾವು ಸೋತ ಉದಾಹರಣೆಗಳು ಇತಿಹಾಸದ ಓದಿನ ವೇಳೆ ಕರುಳುಕಿವುಚಿದಂತೆ ಮಾಡುವಾಗ, ಇಂದಿಗೂ ಗೆರಿಲ್ಲಾ ಯುದ್ಧತಂತ್ರದ ಮೂಲಕ ಸೋಲರಿಯದ ಸರದಾರನಾಗಿ ಮೆರೆದ ಶಿವಾಜಿ ಮಹಾರಾಜರ ಕುರಿತಾದ ಘಟನೆ ಹೆಮ್ಮೆಯ ಭಾವ ಸ್ಪುರಣಗೊಳಿಸುತ್ತದೆ. ಈ ವಿಷಯದಲ್ಲಿ ವಿಶ್ವಕ್ಕೆ ಗೆರಿಲ್ಲಾ ಯುದ್ಧತಂತ್ರವನ್ನು ಕೊಟ್ಟ ಗರಿಮೆಯನ್ನಷ್ಟೇ ನಾವು ಶಿವಾಜಿಯ ಕಿರೀಟಕ್ಕೆ ಸೇರಿಸಿದರೆ ಸಾಲದು. ಬದಲಾಗಿ ಜನಮನದಲ್ಲಿನ ಆತ್ಮೀಯತೆಯೇ ಗೆರಿಲ್ಲಾ ಯುದ್ಧ ತಂತ್ರದ ಬೆನ್ನುಮೂಳೆಯಾದ್ದರಿಂದ ಆತ್ಮೀಯತೆಯ ವಾತಾವರಣದ ನಿರ್ಮಾಣಕ್ಕಾಗಿ, ಆ ಮೂಲಕ ರಾಷ್ಟçದ ಏಕತೆಯನ್ನಾಧರಿಸಿದ ಸುರಾಜ್ಯಕ್ಕಾಗಿ ಶಿವಾಜಿ ವ್ಯಯಿಸಿದ ಶ್ರಮವನ್ನೂ ಗುರುತಿಸಬೇಕು.

ನೂತನ ಧರ್ಮದೃಷ್ಟಿಯ ಹರಿಕಾರ: ಧರ್ಮ ಬಿಟ್ಟು ಹೋದವರ ಕುರಿತಾಗಿ ಆತ್ಮಘಾತಕ ದೃಷ್ಟಿಕೋನ ನಮ್ಮ ನಾಡಿನಲ್ಲಿತ್ತು. ಇಂದಿಗೂ ಇದೆ. ಪ್ರಲೋಭನೆಯಿಂದಲೋ, ಪ್ರಾಣಭಯದಿಂದಲೋ ಮತಾಂತರವಾದ ಹಿಂದೂಗಳನ್ನು ಮರಳಿ ಹಿಂದೂಧರ್ಮಕ್ಕೆ ತರಲು ಯಾವ ಆಚಾರ್ಯರೂ ಅಂದು ಸಿದ್ಧರಿರಲಿಲ್ಲ. ಇದರಿಂದಾಗಿ ಮತಾಂತರಗೊAಡವನು ಮುಂದೆ ಮರಳಿ ಮಾತೃಧರ್ಮಕ್ಕೆ ಬರಲು ಇಚ್ಛಿಸಿದರೂ ಬರಲಾಗದೆ ಶತ್ರು ಪಕ್ಷವನ್ನು ಕೂಡಿಕೊಳ್ಳುತ್ತಿದ್ದ, ನಮ್ಮವರ ವಿರುದ್ಧವೇ ಹೋರಾಡುತ್ತಿದ್ದ. ಈ ಪ್ರಕ್ರಿಯೆ ನಮ್ಮ ಸಮಾಜದ ಸ್ವನಾಶದ ಭಾಗವೇ ಆಗಿತ್ತು. ಇದನ್ನು ಶಿವಾಜಿ ಮಹಾರಾಜರು ರಾಷ್ಟçದ ಹಿತದೃಷ್ಟಿಯಿಂದ ಸರಿಪಡಿಸಲೇಬೇಕಾದ ಅನಿವಾರ್ಯತೆ ನಿರ್ಮಾಣವಾಯಿತು. ಬಿಜಾಪುರದ ಬಾದಶಹನಿಂದ ಮತಾಂತರಿಸಲ್ಪಟ್ಟ ಬಜಾಜಿ ನಿಂಬಾಳಕರ್ ಮತ್ತು ಔರಂಗಜೇಬನು ಮತಾಂತರಿಸಿದ ನೇತಾಜಿ ಪಾಲಕರನನ್ನು ಶುದ್ಧಿಗೊಳಿಸಿ ಹಿಂದೂಧರ್ಮಕ್ಕೆ ಮರಳಿ ತಂದರಲ್ಲದೆ, ಅವರನ್ನು ಮುಕ್ತವಾಗಿ ಒಪ್ಪಿಕೊಳ್ಳಬೇಕು ಎನ್ನುವ ಮನಸ್ಥಿತಿಯನ್ನು ಅವರನ್ನು ತಮ್ಮ ಪರಿವಾರದೊಂದಿಗೆ ರಕ್ತಸಂಬಂಧಿಗೊಳಿಸುವ ಮೂಲಕ ಹೊಸ ಧರ್ಮದೃಷ್ಟಿಯನ್ನು ಕಟ್ಟಿಕೊಟ್ಟರು. ಪ್ರಸ್ತುತ ಘರ್ ವಾಪಸಿಗೆ ಹಿಂದೂ ಸಮಾಜ ತೆರೆದುಕೊಂಡಿದ್ದರೂ, ಲವ್ ಜಿಹಾದ್‌ಗೆ ಬಲಿಯಾಗಿ, ನಂತರ ತಪ್ಪಿನ ಅರಿವಾಗಿ ಮರಳಿ ಮಾತೃಧರ್ಮಕ್ಕೆ ಬರಲು ಸಿದ್ಧರಿರುವ ಹೆಣ್ಣುಮಕ್ಕಳನ್ನು ನಮ್ಮ ಸಮಾಜದ ಇಂದಿಗೂ ಸ್ವೀಕರಿಸಲು ಒಪ್ಪುತ್ತಿಲ್ಲ! ಅನ್ಯ ಜಾತೀಯ ವಿವಾಹಕ್ಕೆ ಪ್ರತಿಭಟಿಸುವ ನಮ್ಮ ಕುಟುಂಬಗಳು, ಲವ್ ಜಿಹಾದ್ ವಿಷಯಗಳಲ್ಲಿ ಸೊಲ್ಲೆತ್ತುವುದಿಲ್ಲ.

ನಮ್ಮ ಯುದ್ಧನೀತಿಗಳು ಸಹ ಧರ್ಮ ಮಾರ್ಗದಿಂದಲೇ ಕೂಡಿದ್ದವು. ಧರ್ಮ ಅರ್ಥವಾಗುವವರಿಗೆ ಧರ್ಮ ಯುದ್ಧದ ಪಾಲನೆಯೂ ಅಗತ್ಯವೆಂದೇ ಕಾಣುತ್ತದೆ. ಆದರೆ ಇದರ ಪರಿವೆಯೇ ಇಲ್ಲದೆ ಇರುವ ವಿದೇಶಿಗರಿಗೆ ಧರ್ಮಯುದ್ಧ ನಮ್ಮ ವೈಫಲ್ಯದ ಒಂದು ಭಾಗವಾಯಿತು. ಪೃಥ್ವಿರಾಜ ಚೌಹಾಣ ಆದಿಯಾಗಿ ಅನೇಕ ನಿದರ್ಶನಗಳು ಇದಕ್ಕೆ ಸಾಕ್ಷಿಯಾಗಿವೆ. ಆದರೆ ಶಿವಾಜಿ ಮಹಾರಾಜರು ಇದಕ್ಕೆ ಕಟ್ಟುಬೀಳದೆ, ಶತ್ರುವಿಗೆ ತಕ್ಕಂತೆ ಸಮರ ನೀತಿಯನ್ನು ಹೆಣೆಯುತ್ತಿದ್ದರು. ಒಮ್ಮೆ ಉಪಯೋಗಿಸಿದ ತಂತ್ರ ಮತ್ತೊಮ್ಮೆ ಉಪಯೋಗಿಸುತ್ತಿರಲಿಲ್ಲ. ಅಫ್ಜಲ್ ಖಾನ್ ಸಂಹಾರ, ಶಾಯಿಸ್ತೆ ಖಾನ್‌ನನ್ನು ಓಡಿಸಿದ ಪರಿ, ಜಯಸಿಂಹನೊಂದಿಗಿನ ಒಪ್ಪಂದ, ಕೋಟೆಗಳ ರಚನೆ, ದಕ್ಷಿಣದ ಯುದ್ಧಗಳು ಎಲ್ಲವೂ ವಿಭಿನ್ನವಾದ ತಂತ್ರಗಳೇ ಆಗಿದ್ದವು. ಎಲ್ಲಕ್ಕಿಂತ ಮಿಗಿಲಾಗಿ ಶಿವಾಜಿ ಮಹಾರಾಜರು ವೀರಸ್ವರ್ಗ, ಹೌತಾತ್ಮ್ಯಗಳ ಆದರ್ಶವನ್ನು ತೆಗೆದು ಹಾಕಿ ವಿಜಯೋಪಾಸನೆಯ ಸಾರ್ಥಕ ನೀತಿಯನ್ನು ತಂದರು. ಯುದ್ಧ ಮಾಡುವುದು ಗೆಲ್ಲುವುದಕ್ಕಾಗಿಯೇ ಎಂಬ ಮನೋಭಾವ ಜಾಗೃತಿ ಮತ್ತು ಆ ಗೆಲುವಿಗಾಗಿ ನಾವು ಮಾಡುವ ತಯಾರಿಯ ಪರಿಯೇ ಅನೇಕ ಬಾರಿ ವಿರೋಧಿಗಳನ್ನು ಸೋಲಿಸಿರುತ್ತದೆ.

ಅನಾದಿ ಕಾಲದಿಂದಲೂ ಭಾರತದ ಸಮುದ್ರಗಳು ಜಾಗತಿಕ ಮಟ್ಟದಲ್ಲಿ ರಾಜತಾಂತ್ರಿಕ ಮಹತ್ವವುಳ್ಳದ್ದು. ನಮ್ಮ ನಾಡಿಗೆ ಬಹುತೇಕ ಪಾಶ್ಚತ್ಯರ ಆಗಮನ ಸಮುದ್ರದ ಮೂಲಕವೇ ಆಗಿದೆ. ಆದರೆ ಸಮುದ್ರಯಾನದಿಂದ ಧರ್ಮಭ್ರಷ್ಠರಾಗುತ್ತಾರೆ ಎಂಬ ಧಾರ್ಮಿಕ ಕಟ್ಟಳೆಯಿಂದ ರಾಜತಾಂತ್ರಿಕ ನೆಲೆಗಟ್ಟಿನಲ್ಲಿ ನಾವು ಸಮುದ್ರವನ್ನು ಕಾಣಲೇ ಇಲ್ಲ. ಆದರೆ ಶಿವಾಜಿ ಮಹಾರಾಜರು ಸಮುದ್ರಯಾನಕ್ಕಿದ್ದ ಧಾರ್ಮಿಕ ವಿರೋಧದ ಮೂಢನಂಬಿಕೆಯನ್ನು ಕಿತ್ತೆಸೆದು ಜಲದುರ್ಗಗಳನ್ನು ನಿರ್ಮಿಸಿ ನೌಕಾದಳದ ಹೊಸ ಆಯಾಮವನ್ನೇ ಶುರು ಮಾಡಿದರು. ಈ ಕಾರಣದಿಂದಲೇ ಇತ್ತೀಚೆಗೆ ನಮ್ಮ ನೌಕಾದಳದ ಧ್ವಜದಲ್ಲಿದ್ದವಿದೇಶಿ ಕುರುಹುಗಳನ್ನು ಕಿತ್ತೊಗೆದು, ಸ್ವಾಭಿಮಾನವನ್ನು ಅರಳಿಸುವ ಶಿವಾಜಿ ಮಹಾರಾಜರ ರಾಜಮುದ್ರೆಯನ್ನು ಅಳವಡಿಸಲಾಯಿತು.

ಅಭಿವ್ಯಕ್ತಿ ಸ್ವಾತಂತ್ರ್ಯದ ಕೂಗಿಗಿಂತ ರಾಷ್ಟ್ರಪೋಷಕ ಅಭಿಮಾನವೇ ದೊಡ್ಡದು: ನನ್ನ ಹಕ್ಕುಗಳು ಮತ್ತು ನನ್ನ ಸ್ವಾಭಿಮಾನ ಎನ್ನುವುದು ರಾಷ್ಟ್ರಘಾತಕ ವ್ಯಕ್ತಿಪ್ರತಿಷ್ಠೆಯಲ್ಲ, ಬದಲಾಗಿ ರಾಷ್ಟ್ರಪೋಷಕ ಅಭಿಮಾನ ಎನ್ನುವುದನ್ನು ಶಿವಾಜಿ ಮಹಾರಾಜರು ತನ್ನ ಪ್ರಜೆಗಳಲ್ಲಿ ಭಿತ್ತಿದ್ದರು. ಪ್ರತಿ ಸೈನಿಕನಲ್ಲೂ ಸ್ವಾಮಿನಿಷ್ಠೆಗಿಂತ ಮಿಗಿಲಾದ ಧ್ಯೇಯನಿಷ್ಠೆ ಇದ್ದಿದ್ದರಿಂದಲೇ ಅನೇಕ ದುರ್ಗಮ ಸನ್ನಿವೇಷಗಳಲ್ಲೂ ಜಯ ಗಳಿಸುವುದಕ್ಕೆ ಸಾಧ್ಯವಾಗಿದ್ದು. ಇಂದು ಭಾರತೀಯರಾದ ನಾವು ಭಾರತವೆಂಬ ಧ್ಯೇಯಕ್ಕೆ ಕಟಿಬದ್ಧರಾಗಬೇಕಾದ ಅನಿವಾರ್ಯತೆ ಇದೆ. ವೈಯಕ್ತಿಕ, ಸೈದ್ಧಾಂತಿಕ, ರಾಜಕೀಯದ ಕಾರಣಕ್ಕಾಗಿ ರಾಷ್ಟ್ರದ ಗೌರವವನ್ನು ಕಳೆಯುವ ಕೆಲಸಗಳಾಗಬಾರದು. ಬದಲಾಗಿ ಈ ಎಲ್ಲಾ ಕಾರಣಗಳಲ್ಲೂ ರಾಷ್ಟ್ರವೇ ಮೊದಲು, ಎಲ್ಲಕ್ಕಿಂತ ಮಿಗಿಲು ಎಂಬ ಭಾವಜಾಗೃತಿ ಆಗಬೇಕು.

Leave a Reply

Your email address will not be published.

This site uses Akismet to reduce spam. Learn how your comment data is processed.