ಇಂದು ಪುಣ್ಯಸ್ಮರಣೆ

ಚಿತ್ರರಂಗದಲ್ಲಿ ದಾದಾ ಸಾಹೇಬ್ ಫಾಲ್ಕೆ ಎಂದೇ ಗುರುತಿಸಿಕೊಂಡಿದ್ದ ದುಂಡಿರಾಜ್ ಗೋವಿಂದ ಫಾಲ್ಕೆ ಅವರು ಭಾರತೀಯ ನಿರ್ದೇಶಕ , ನಿರ್ಮಾಪಕ, ಚಿತ್ರಕಥೆಗಾರರಾಗಿದ್ದರು. ಇವರನ್ನು ಭಾರತೀಯ ಚಿತ್ರರಂಗದ ಪಿತಾಮಹ ಎಂದೂ ಕರೆಯುತ್ತಾರೆ. ಅವರ ನಿರ್ದೇಶನದ ಮೊದಲ ಚಿತ್ರ ರಾಜಾ ಹರಿಶ್ಚಂದ್ರ ಭಾರತದ ಮೊದಲ ಚಿತ್ರವೆಂಬ ಖ್ಯಾತಿ ಪಡೆದಿದೆ. ಮೂಕಿಚಿತ್ರಗಳು, ಚಲನಚಿತ್ರಗಳ ನಿರ್ಮಾಣವನ್ನು ಜೀವನದಲ್ಲಿ ಅತ್ಯಂತ ಆಸಕ್ತಿದಾಯಕ ಕಾರ್ಯವೆಂಬಂತೆ ಅದರಲ್ಲಿ ತೊಡಗಿದವರು. ಇಂದು ಅವರ ಪುಣ್ಯಸ್ಮರಣೆ.

ಪರಿಚಯ
ದುಂಡಿರಾಜ್ ಗೋವಿಂದ ಫಾಲ್ಕೆ ಅವರು ಏಪ್ರಿಲ್ 30,  1870ರಲ್ಲಿ ಮಹಾರಾಷ್ಟ್ರದ ನಾಸಿಕ್ ಜಿಲ್ಲೆಯ ತ್ರ್ಯಂಬಕೇಶ್ವರ ಎಂಬಲ್ಲಿ ಜನಿಸಿದರು. ಇವರ ತಂದೆ ಗೋವಿಂದ ಶಾಸ್ತ್ರಿ ಫಾಲ್ಕೆ ಸಂಸ್ಕೃತ ಶಿಕ್ಷಕರಾಗಿದ್ದರು. ಹೀಗಾಗಿ ದುಂಡಿರಾಜ್ ಗೋವಿಂದ್ ಫಾಲ್ಕೆ ಅವರಿಗೆ ತಂದೆಯೇ ಗುರುಗಳಾಗಿದ್ದರು. ಅವರು ಬಾಲ್ಯದಿಂದಲೂ ನಟನೆ, ನಾಟಕ , ರಂಗಸಜ್ಜಿಕೆ, ವೇಷಭೂಷಣಗಳ ಬಗ್ಗೆ ಹೆಚ್ಚು ಆಸಕ್ತಿ ಹೊಂದಿದ್ದರು.


ವೃತ್ತಿ ಜೀವನ
ದುಂಡಿರಾಜ್ ಗೋವಿಂದ್ ಪಾಲ್ಕೆ ಅವರು 1885 ರಲ್ಲಿ ಮುಂಬೈನ ವಿಲ್ಸನ್ ಕಾಲೇಜಿನಲ್ಲಿ ಸಂಸ್ಕೃತ ಪ್ರಾಧ್ಯಾಪಕರಾಗಿ ಕೆಲಸ ಸಿಕ್ಕಿತು. ಹೀಗಾಗಿ ಇಡೀ ಕುಟುಂಬವು ಮುಂಬೈಗೆ ಸ್ಥಳಾಂತರವಾಗಿತ್ತು. ಮುಂಬೈನ ಪ್ರಸಿದ್ಧ ಜೆ.ಜೆ.ಸ್ಕೂಲ್ ಆಫ್ ಆರ್ಟ್ಸ್ನಲ್ಲಿ ಚಿತ್ರಕಲಾ ತರಗತಿಗೆ ಪ್ರವೇಶ ಪಡೆದ ಮೇಲೆ ಅವರ ಸಿನೆಮಾಸಕ್ತಿ ಹೆಚ್ಚಾಯಿತು.

ಸಿನಿಮಾ ಮಾಡಬೇಕು ಎಂಬ ಆಸೆ ಕಟ್ಟಿಕೊಂಡಿದ್ದ ಅವರು ತಮ್ಮ ಬಳಿಯಿದ್ದ ಎಲ್ಲ ವಸ್ತುಗಳನ್ನು ಅಡವಿಟ್ಟು ಚಿತ್ರ ನಿರ್ಮಾಣಕ್ಕೆ ಬೇಕಾಗುವ ಯಂತ್ರೋಪಕರಣಗಳನ್ನು ಖರೀದಿಸಲು ಲಂಡನ್ನಿಗೆ ಹೋಗಿದ್ದರು. ಅಲ್ಲಿ ಸಿನಿಮಾ ನಿರ್ಮಾಪಕ ಸಿಸಿಲ್ ಅವರ ಜೊತೆಗೆ ಚಲನಚಿತ್ರ ನಿರ್ಮಾಣದ ಎಲ್ಲಾ ವಿಭಾಗಗಳನ್ನು ಅಧ್ಯಯನ ನಡೆಸಿ ಭಾರತಕ್ಕೆ ಮರಳಿದರು.


ಸಾಧನೆ
ವಿದೇಶದಿಂದ ಹಿಂತಿರುಗಿದ ಇವರು ಮೊದಲು ರಾಮ, ಕೃಷ್ಣರ ಕಥೆಯನ್ನು ಚಿತ್ರ ಮಾಡಬೇಕೆಂದಿದ್ದರೂ ಕಾರಣಾಂತರಗಳಿಂದ ಕೊನೆ ಗಳಿಗೆಯಲ್ಲಿ ರಾಜಾ ಹರಿಶ್ಚಂದ್ರನ ಕಥೆಯನ್ನು ಚಿತ್ರ ಮಾಡಲು ನಿರ್ಧರಿಸಿದರು. ತಾಂತ್ರಿಕ ಸೌಲಭ್ಯ ಇರದಿದ್ದ ಕಾಲದಲ್ಲಿ ಚಿತ್ರವನ್ನು ನಿರ್ಮಿಸುವ ಗುರಿ ಹೊಂದಿದ ಅವರು ರಾಜಾ ಹರಿಶ್ಚಂದ್ರ ಚಿತ್ರದ ಕಥೆ, ನಿರ್ಮಾಣ, ನಿರ್ದೇಶನ, ನಟನೆ ಮತ್ತು ಛಾಯಾಗ್ರಹಣದ ಜವಾಬ್ದಾರಿ ಹೊಣೆ ಹೊತ್ತು ಯಶಸ್ವಿಯಾಗಿ ನಿರ್ವಹಿಸಿದ್ದರು. ಚಿತ್ರೀಕರಣದ ಸಮಯದಲ್ಲಿ ಕಾಡುತ್ತಿದ್ದ ಆರ್ಥಿಕ ಮುಗ್ಗಟ್ಟಿನ ಕಾರಣದಿಂದ ಚಿತ್ರೀಕರಣಕ್ಕಾಗಿ ಸೆಟ್ ಹಾಕಲು ಸಾಧ್ಯವಾಗಿರಲಿಲ್ಲ. ತಮ್ಮ ಚಿತ್ರದ ಚಿತ್ರೀಕರಣ ಸುಗಮವಾಗಿ ಸಾಗಬೇಕೆಂಬ ಉದ್ದೇಶದಿಂದ ತಮ್ಮ ಮನೆಯನ್ನೇ ಫಾಲ್ಕೆ ಫಿಲಂ ಸಂಸ್ಥೆಯಾಗಿ ಮಾರ್ಪಡಿಸಿ ಅಲ್ಲಿಯೇ ಕಾಳಗದ ದೃಶ್ಯದ ಚಿತ್ರೀಕರಣವನ್ನು ಮಾಡಿದ್ದರು. ಅಲ್ಲದೇ ಚಿತ್ರ ತಂಡದ ಸದಸ್ಯರಿಗೆ ತಮ್ಮ ಮನೆಯಲ್ಲಿ ಊಟ, ಉಪಚಾರದ ವ್ಯವಸ್ಥೆಯನ್ನು ಮಾಡಿದ್ದರು. ಬಂದ ಹಲವಾರು ಅಡೆತಡೆಗಳನ್ನು ಎದುರಿಸಿ ತಮ್ಮ ಚಿತ್ರದ ಚಿತ್ರೀಕರಣವನ್ನು ಯಶಸ್ವಿಯಾಗಿ ಮುಗಿಸಿದರು.

ಚಲನಚಿತ್ರರಂಗದ ಆವಿಷ್ಕಾರಕ್ಕಾಗಿ ಮತ್ತು ಅಭಿವೃದ್ಧಿಗಾಗಿ ತಮ್ಮ ಜೀವನವನ್ನೇ ಪಣಕ್ಕಿಟ್ಟು ಹಗಲುರಾತ್ರಿ ಎನ್ನದೇ ಶ್ರಮವಹಿಸಿದರು. ಚಲನಚಿತ್ರ ರಂಗದ ಮಾಯಾಲೋಕವನ್ನು ಹರಿಶ್ಚಂದ್ರ ಎಂಬ ಚಿತ್ರದ ಮೂಲಕ ಭಾರತೀಯ ಚಿತ್ರರಂಗದ ಇತಿಹಾಸದಲ್ಲಿ ಒಂದು ವಿಶಿಷ್ಟ ದಾಖಲೆಯನ್ನು ಬರೆದರು. ಬಳಿಕ ಅವರು ಸಮಾರು 95 ಸಿನಿಮಾ ನಿರ್ದೇಶನ, 27 ಕಿರುಚಿತ್ರ ನಿರ್ದೇಶನವನ್ನು ಮಾಡಿದರು. ‘ಮೋಹಿನಿ ಬಸ್ಮಾಸುರ್’, ‘ಸತ್ಯವಾನ್ ಸಾವಿತ್ರಿ’, ‘ಲಂಕಾ ದಹನ್’ ಮತ್ತು ‘ಶ್ರೀ ಕೃಷ್ಣ ಜನ್ಮ’ ಇವರ ಪ್ರಮುಖ ಸಿನಿಮಾಗಳಾಗಿವೆ.


ಸಿನೆಮಾ ಕ್ಷೇತ್ರದಲ್ಲಿ ದುಂಡಿರಾಜ್ ಗೋವಿಂದ್ ಫಾಲ್ಕೆ ಅವರು ನೀಡಿದ ಕೊಡುಗೆಯನ್ನು ಗೌರವಿಸುವ ಸಲುವಾಗಿ ಸಿನೆಮಾ ಕ್ಷೇತ್ರದ ಸಾಧಕರಿಗೆ ಅವರ ಹೆಸರಿನಲ್ಲಿ ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿಯನ್ನು ನೀಡಲಾಗುತ್ತದೆ.

ದುಂಡಿರಾಜ್ ಗೋವಿಂದ್ ಫಾಲ್ಕೆ ಅವರು ಫೆಬ್ರವರಿ 16, 1944 ರಂದು ತಮ್ಮ 73 ನೇ ವಯಸ್ಸಿನಲ್ಲಿ ನಿಧನರಾದರು

Leave a Reply

Your email address will not be published.

This site uses Akismet to reduce spam. Learn how your comment data is processed.