ಇಂದು ಜಯಂತಿ

ಸುಷ್ಮಾ ಸ್ವರಾಜ್ ಅವರು ಈ ರಾಷ್ಟ್ರ ಕಂಡಂತಹ ಅದ್ಭುತ ರಾಜಕಾರಣಿ. ಸುಪ್ರೀಂಕೋರ್ಟ್ ನಲ್ಲಿ ವಕೀಲರಾಗಿಯೂ ಕಾರ್ಯ ನಿರ್ವಹಿಸಿದ್ದ ಅವರು ಮಹಿಳಾ ರಾಜಕಾರಣಿಯಾಗಿ ಹಲವು ಪ್ರಥಮಗಳಿಗೆ ಕಾರಣೀಭೂತರಾದವರು. ಭಾರತದ ವಿದೇಶಾಂಗ ಸಚಿವೆಯಾಗಿ ಜಾಗತಿಕ ಮಟ್ಟದಲ್ಲಿ ಭಾರತದ ಅಂತರಾಷ್ಟ್ರೀಯ ಸಂಬಂಧವನ್ನು ಉತ್ತಮ ಪಡಿಸುವಲ್ಲಿ ಪ್ರಮುಖ ಪಾತ್ರವಹಿಸಿದವರು. ಇಂದು ಅವರ ಜಯಂತಿ

ಪರಿಚಯ
ಸುಷ್ಮಾ ಸ್ವರಾಜ್‌ ಅವರು ಫೆಬ್ರವರಿ 14, 1952 ರಲ್ಲಿ ಹರಿಯಾಣದ ಅಂಬಾಲಾ ಎಂಬ ಗ್ರಾಮದಲ್ಲಿ ಜನಿಸಿದರು. ಅವರ ತಂದೆ ಹರ್ದೇವ್ ಶರ್ಮಾ, ತಾಯಿ ಶ್ರೀಮತಿ ಲಕ್ಷ್ಮಿದೇವಿ. ಅವರ ತಂದೆ ರಾಷ್ಟ್ರೀಯ ಸ್ವಯಂಸೇವಕ ಸಂಘದಲ್ಲಿ ಸಕ್ರಿಯರಾಗಿದ್ದರು. ಅಂಬಾಲಾದ ಸನಾತನ ಧರ್ಮ ಕಾಲೇಜಿನಲ್ಲಿ ಅವರು ಸಂಸ್ಕೃತ ಮತ್ತು ರಾಜ್ಯಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿ ಪಡೆದರು. ನಂತರ ಪಂಜಾಬ್‌ ವಿಶ್ವವಿದ್ಯಾಲಯದಲ್ಲಿ ಕಾನೂನು ಅಧ್ಯಯನ ನಡೆಸಿದರು.

ವೃತ್ತಿ
ಸುಷ್ಮಾ ಸ್ವರಾಜ್‌ ಅವರು 1970 ರಲ್ಲಿ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ತಿನಲ್ಲಿ ವಿದ್ಯಾರ್ಥಿ ನಾಯಕಿಯಾಗಿ ಗುರುತಿಸಿಕೊಂಡಿದ್ದ ಸುಷ್ಮಾ ಸ್ವರಾಜ್ ಅವರು 1973ರಿಂದ ಸುಪ್ರೀಂಕೋರ್ಟ್‌ ನಲ್ಲಿ ವಕೀಲರಾಗಿ ಕಾನೂನು ಅಭ್ಯಾಸ ಪ್ರಾರಂಭಿಸಿದರು. ಅಲ್ಪಕಾಲ ವಕೀಲರಾಗಿ ಸೇವೆ ಸಲ್ಲಿಸಿದ ಅವರು ನಂತರದ ದಿನಗಳಲ್ಲಿ ರಾಜಕೀಯದಲ್ಲಿ ಸಕ್ರಿಯರಾದರು.


ರಾಜಕೀಯ ಜೀವನ
ಹರಿಯಾಣದ ವಿಧಾನಸಭೆ ಚುನಾವಣೆಯಲ್ಲಿ ಸ್ಪರ್ಧಿಸಿ 1977 – 82 ಮತ್ತು 1987 – 90 ಎರಡು ಬಾರಿ ಗೆದ್ದರು.1979ರಲ್ಲಿ ಜನತಾ ಪಕ್ಷದ ರಾಜ್ಯಾಧ್ಯಕ್ಷರಾಗಿ ಆಯ್ಕೆಯಾದರು. 1987 ರಿಂದ 1990 ರವರೆಗೆ ಭಾರತೀಯ ಜನತಾ ಪಕ್ಷ-ಲೋಕದಳ (ಐಎನ್‌ಎಲ್‌ಡಿ) ಮೈತ್ರಿ ಸರ್ಕಾರದಲ್ಲಿ ಹರಿಯಾಣದ ಶಿಕ್ಷಣ ಸಚಿವರಾಗಿ ಸೇವೆ ಸಲ್ಲಿಸಿದರು.

1990ರಲ್ಲಿ ಮೊದಲ ಬಾರಿಗೆ ರಾಜ್ಯಸಭಾ ಸದಸ್ಯರಾಗಿ ಆಯ್ಕೆಯಾದ ಅವರು 1996ರಲ್ಲಿ ದೆಹಲಿ ಕ್ಷೇತ್ರದಿಂದ ಲೋಕಸಭೆಗೆ ಸ್ಪರ್ಧಿಸಿದ್ದರು.
1996ರಲ್ಲಿ ಅಟಲ್ ಬಿಹಾರಿ ವಾಜಪೇಯಿ ಅವರು ಪ್ರಧಾನಮಂತ್ರಿಯಾಗಿದ್ದಾಗ ಮಾಹಿತಿ ಮತ್ತು ಪ್ರಸಾರದ ಕೇಂದ್ರ ಕ್ಯಾಬಿನೆಟ್‌ ಸಚಿವರಾಗಿ ಕರ್ತವ್ಯ ನಿಭಾಯಿಸಿದ್ದರು. 1998ರಲ್ಲಿ ದೂರಸಂಪರ್ಕ ಸಚಿವಾಲಯದ ಜವಾಬ್ದಾರಿಯನ್ನು ಹೊಂದಿದ್ದರು. 2000 ರಿಂದ ಜನವರಿ 2003 ರವರೆಗೆ ಮಾಹಿತಿ ಮತ್ತು ಪ್ರಸಾರ ಸಚಿವರಾಗಿ ನೇಮಕಗೊಂಡರು.

2003 ರಿಂದ 2004 ರವರೆಗೆ ಕುಟುಂಬ ಕಲ್ಯಾಣ ಮತ್ತು ಸಂಸದೀಯ ವ್ಯವಹಾರಗಳ ಸಚಿವರಾಗಿ ಸೇವೆ ಸಲ್ಲಿಸಿದ ಸುಷ್ಮಾ ಸ್ವರಾಜ್‌ ಅವರು ಕೇಂದ್ರ ಆರೋಗ್ಯ ಸಚಿವರಾಗಿ ಸೇವೆ ಸಲ್ಲಿಸಿದ ಸಮಯದಲ್ಲಿ, ಅವರು ಭೋಪಾಲ್ , ಭುವನೇಶ್ವರ , ಜೋಧ್‌ಪುರ , ಪಾಟ್ನಾ , ರಾಯ್‌ಪುರ ಮತ್ತು ಋಷಿಕೇಶನಲ್ಲಿ ಆರು ಅಖಿಲ ಭಾರತೀಯ ವೈದ್ಯಕೀಯ ವಿಜ್ಞಾನ ಸಂಸ್ಥೆಯನ್ನು ಸ್ಥಾಪಿಸಿದರು.

2014 ರಿಂದ ಮೇ 2019 ರವರೆಗೆ ವಿದೇಶಾಂಗ ಸಚಿವರಾಗಿ ಸೇವೆ ಸಲ್ಲಿಸಿದ ಅವರು ಅಂತರಾಷ್ಟ್ರೀಯ ಮಟ್ಟದಲ್ಲಿ ಭಾರತೀಯ ವಿದೇಶಾಂಗ ನೀತಿಗೆ ಹೊಸ ಛಾಪನ್ನು ನೀಡಿದರು. ಜಗತ್ತಿನ ಯಾವುದೇ ಭಾಗದಲ್ಲಿ ತೊಂದರೆಗೊಳಗಾಗುವ ಭಾರತೀಯರ ರಕ್ಷಣೆಗೆ ತಕ್ಷಣ ಸ್ಪಂದಿಸುವ ಅವರ ಕಾರ್ಯವೈಖರಿಗೆ ವಿಶ್ವದ ಭಾರತೀಯರಿಂದ ಶ್ಲಾಘನೆಗೆ ಅರ್ಹವಾಗಿತ್ತು.


ಪ್ರಶಸ್ತಿ
ಸುಷ್ಮಾ ಸ್ವರಾಜ್‌ ಅವರಿಗೆ 2020 ರಲ್ಲಿ ಭಾರತ ಸರ್ಕಾರದಿಂದ ಮರಣೋತ್ತರ ಪದ್ಮವಿಭೂಷಣ ಪ್ರಶಸ್ತಿ ನೀಡಿ ಗೌರವಿಸಲಾಯಿತು.


ಸುಷ್ಮಾ ಸ್ವರಾಜ್‌ ಅವರು ಆಗಸ್ಟ್‌ 6 , 2019 ರಲ್ಲಿ ಹೃದಯಾಘಾತದಿಂದ ನಿಧನರಾದರು.

Leave a Reply

Your email address will not be published.

This site uses Akismet to reduce spam. Learn how your comment data is processed.