ಮೈಸೂರು:  ಜೆಎಸ್ ಎಸ್ ಕಾಲೇಜಿನಲ್ಲಿ ಹಲವು ವರ್ಷಗಳ ಕಾಲ ಕಾನೂನು ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿದ್ದ ನಾಡಿನ‌ ಹಿರಿಯ ಸಂಸ್ಕೃತಿ ಚಿಂತಕ,ರಾಷ್ಟ್ರೀಯ ಸ್ವಯಂಸೇವಕ ಸಂಘದ ಹಿರಿಯ ಸ್ವಯಂಸೇವಕ  ಪ್ರೊ. ಎಂ.ಎಸ್. ವೇಣುಗೋಪಾಲ್ ಅವರು ಫೆಬ್ರವರಿ 15ರ ರಾತ್ರಿ ಮೈಸೂರಿನ ನಿವೇದಿತಾನಗರದಲ್ಲಿರುವ ಸ್ವಗೃಹದಲ್ಲಿ ನಿಧನರಾದರು. ಅವರಿಗೆ 79 ವರ್ಷ ವಯಸ್ಸಾಗಿತ್ತು.

ಪರಿಚಯ

ಜೆಎಸ್ಎಸ್ ಕಾನೂನು ಕಾಲೇಜಿನಲ್ಲಿ ಸುದೀರ್ಘ ಕಾಲ ಕಾನೂನು ಪ್ರಾಧ್ಯಾಪಕರಾಗಿದ್ದ ವೇಣುಗೋಪಾಲ್ ಅವರು ವೇಣೂಜಿ ಎಂದೇ ಆತ್ಮೀಯ ವಲಯದಲ್ಲಿ ಕರೆಯಲ್ಪಡುತ್ತಿದ್ದರು. ಅವರು ಶೈಕ್ಷಣಿಕ ಹಾಗೂ ಬೌದ್ಧಿಕ ವಲಯದಲ್ಲಿ ಗುರುತಿಸಿಕೊಂಡವರು. ಕಾನೂನು, ನೀತಿ ಸಂಹಿತೆ, ಸಂವಿಧಾನ, ಸಮಾಜ ವಿಜ್ಞಾನ ಹೀಗೆ ಹಲವು ವಿಷಯಗಳ ಕುರಿತು ಅಗಾಧ ಜ್ಞಾನವನ್ನು ಹೊಂದಿದ್ದರು.

ಬಾಲ್ಯದಿಂದಲೂ ಆರ್ ಎಸ್ ಎಸ್, ಎಬಿವಿಪಿ‌ ಜತೆಯಲ್ಲಿ ತೊಡಗಿಸಿಕೊಂಡಿದ್ದ ವೇಣು ಅವರು ಅನೇಕ ದೇಶಭಕ್ತಿಗೀತೆಗಳು ಮತ್ತು ಸಂಘಗೀತೆಗಳನ್ನೂ ರಚಿಸಿದ್ದಾರೆ. ಅವರು ಬರೆದಿರುವ, ಹಾಡಿರುವ ದೇಶಭಕ್ತಿಗೀತೆಗಳು ಇಂದಿಗೂ ಅನುರಣಿಸುತ್ತಿದೆ.

ಸಂತಾಪ: ಅಗಲಿದ ಹಿರಿಯ ಸ್ವಯಂಸೇವಕರಿಗೆ ರಾಷ್ಟ್ರೀಯ ಸ್ವಯಂಸೇವಕ ಸಂಘದ ಸರಕಾರ್ಯವಾಹ ದತ್ತಾತ್ರೇಯ ಹೊಸಬಾಳೆ ಅವರು ಸಂತಾಪ ಸಲ್ಲಿಸಿದ್ದಾರೆ.

ಸಂತಾಪ ಸಂದೇಶ

ಮೈಸೂರಿನ ವೇಣು ಜೀ ‘ಸ್ವರ್ಗೀಯ ವೇಣು ಜೀ’ ಆಗಿಬಿಟ್ಟರೆಂಬ ಸುದ್ದಿ ಅತೀವ ವೇದನೆ ತಂದು, ಮನವನ್ನು ಕಲಕಿತು. ಮೊನ್ನೆಯಷ್ಟೆ ಮೈಸೂರಿಗೆ ಹೋದಾಗ ನಾವೆಲ್ಲ ಅವರನ್ನು ನೆನೆಸಿಕೊಂಡು ಮಾತಾಡಿದೆವು. ಆಗ ನಾನು “ಈ ಬಾರಿ ಸಮಯ ಸಿಗುತ್ತಿಲ್ಲ; ಮುಂದಿನ 3-4ತಿಂಗಳಲ್ಲಿ ಒಮ್ಮೆ ಬಂದು ಅವರನ್ನು ನೋಡೋಣ” ಎಂದು ಮನದಲ್ಲೆ ಅಂದುಕೊಂಡೆ. ಆದರೆ ಅವರೀಗ ಮರಳಿ ಬಾರದ ತಾಣಕ್ಕೆ ತೆರಳಿದ್ದಾರೆ.


ವೇಣು ಅವರ ಸ್ಮೃತಿಗೆ ನಮನಗಳು. ಅವರ ವ್ಯಕ್ತಿತ್ವ ಕರ್ತೃತ್ವಗಳ ಬಗ್ಗೆ ಡಾ. ನಿಂಗರಾಜರ ಕವನ ಕೈಗನ್ನಡಿ. ಅವರು ಪ್ರೀತಿಸಿದವರ ಮಿತ್ರ; ಕಲಿವವರಿಗೆ ಗುರು; ಪ್ರಶಂಸಕರಿಗೆ ಪ್ರತಿಭೆಯ ಕಣಜ; ರಸಿಕರಿಗೆ ಕವಿ; ಚಿಂತಕರಿಗೆ ವಿದ್ವಾಂಸ; ಕಾರ್ಯಕರ್ತರಿಗೆ ಪ್ರೇರಣೆ. ಎಲ್ಲರಿಗೆ ಪ್ರೀತಿ-ಗೌರವಗಳ ವೇಣು ಜೀ!

ವೇಣುವಿನ ನಾದವಡಗಿತು ಇಂದು
ಕೇಳಿಸದು ಕಾಣಿಸದು ಇನ್ನು ಎಂದೆಂದು.
ಬದುಕು ಸಾರ್ಥಕ ಬಾಳು ಪೂರ್ಣಾಂಕ
ನಿಜದ ನೇರಕೆ ನಡೆದ ಧೀಮಂತ;
ಜೀವನೋತ್ಸಾಹ ಮೆರೆದ ಪರಮವೀರ
ಗುಣದ ಗಣಿಗಳ ಮಹಾ ಶ್ರೀಮಂತ!


ನಿಮ್ಮನ್ನು ಕಂಡೆವು, ಸ್ನೇಹಿತರಾದೆವು. ಜೊತೆಗೆ ಕೆಲಸ ಮಾಡಿದೆವು. ನಾವು ಧನ್ಯ!

ಹೋಗಿ ಬನ್ನಿ. ನೆನಪಾಗಿರಿ-ಸದಾ ಕಾಲ. ಆ ತಾಣದಲ್ಲಿ ಸುಖವಾಗಿರಿ. ಇಲ್ಲಿನಂತೆ ಅಲ್ಲೂ ನೀವು ಆನಂದ ಹಂಚುವಿರೆಂಬ ಖಾತ್ರಿ ನನಗಿದೆ.

ಓಂ ಶಾಂತಿಃ॥


– ಶ್ರೀ ದತ್ತಾತ್ರೇಯ ಹೊಸಬಾಳೆ, ಸರಕಾರ್ಯವಾಹ, ರಾಷ್ಟ್ರೀಯ ಸ್ವಯಂಸೇವಕ ಸಂಘ

16-02-2024

Leave a Reply

Your email address will not be published.

This site uses Akismet to reduce spam. Learn how your comment data is processed.