ಬೆಂಗಳೂರು: ರಾಷ್ಟ್ರೀಯ ಸ್ಥಯಂಸೇವಕ ಸಂಘ ಬೆಂಗಳೂರು ಆಯೋಜಿಸಿದ್ದ ದೀನದಯಾಳ್ ಉಪಾಧ್ಯಾಯ ಅವರ ಸಂಸ್ಮರಣಾ ಕಾರ್ಯಕ್ರಮದಲ್ಲಿ ಬಿಜೆಪಿಯ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿಗಳಾದ ಶ್ರೀ ಬಿ.ಎಲ್.ಸಂತೋಷ್ ಅವರು ಮಾತನಾಡಿ, “ದೀನದಯಾಳರು ಒಬ್ಬ ಸಂಘಟಕರಾಗಿ, ದೂರದೃಷ್ಟಿಯ ನಾಯಕರಾಗಿ, ವಾಸ್ತವವಾದಿ ನೆಲೆಗಟ್ಟಿನ ಮೇಲೆ ರಾಜಕೀಯ ಕ್ಷೇತ್ರದಲ್ಲಿ ನಿರಂತರವಾಗಿ ಸಮಾಜದ ಮಧ್ಯೆ ಕೆಲಸ ಮಾಡುತ್ತಲೇ ಮಂಡಿಸಿದ ವಿಚಾರ ಏಕಾತ್ಮ ಮಾನವತಾವಾದ. ರಾಜಕೀಯವಾಗಿ ಅದನ್ನು ನೀತಿಯಾಗಿ ಅಥವಾ ಪಾಲಿಸಿಯ ರೂಪದಲ್ಲಿ ಮೈಗೂಡಿಸಿಕೊಳ್ಳಲು ಅನುಕೂಲವಾಗುವಂತೆ ಲೋಕಹಿತಕ್ಕಾಗಿ ಜನಹಿತಕ್ಕಾಗಿ ಸಿದ್ಧಾಂತದ ರೂಪದಲ್ಲಿ ನೀಡಿದರು.” ಎಂದರು.
ಮುಂದುವರೆದು ಮಾತನಾಡುತ್ತಾ, “ದೀನದಯಾಳರು ಹೇಳುವ ಅನೇಕ ವಿಚಾರಗಳು ಹೇಳುವುದಕ್ಕೆ ಕಷ್ಟವಾಗಿದ್ದರೂ, ಬಹಳ ಸುಲಭವಾಗಿ ಅರ್ಥವಾಗುವುದು ಮತ್ತು ಆ ಎಲ್ಲ ವಿಚಾರಗಳು ಈ ದೇಶದ ಮಣ್ಣಿನ ಸೊಗಡಿಗೆ, ಜನಜೀವನಕ್ಕೆ ತುಂಬಾ ಹತ್ತಿರವಾಗಿ ಬದುಕುತ್ತಿರುವವರಿಗೆ ದಿನನಿತ್ಯದ ಆಚರಣೆಯಲ್ಲಿ ಅನೇಕ ವರ್ಷದಿಂದ ನಡೆದುಕೊಂಡೇ ಬಂದಿದೆ. ಮನುಷ್ಯ ಜೀವನದ ಅನೇಕ ಪ್ರಶ್ನೆಗಳಿಗೆ ತಂತ್ರಜ್ಞಾನ, ವಿಜ್ಞಾನ ಮತ್ತು ನಗರೀಕರಣ ಪರಿಹಾರ ರೂಪವಾಗಿ ಬಂದಿದೆ. ಬಡತನವನ್ನು ಅತ್ಯಂತ ಕಡಿಮೆಗೊಳಿಸುವುದರಲ್ಲಿ ಅವುಗಳ ಪಾತ್ರ ಅತ್ಯಂತ ಹಿರಿದು.ಕಳೆದ ಒಂದು ಶತಮಾನದಲ್ಲಿ ಬಡತನ ಅತ್ಯಂತ ವೇಗವಾಗಿ ಕಡಿಮೆಯಾದದ್ದು ಈ ಎರಡು ದಶಕಗಳಲ್ಲೇ ಎಂದರೆ ತಪ್ಪಾಗಲಿಕ್ಕಿಲ್ಲ.ಆದರೆ ಆ ಎಲ್ಲ ವಿಜ್ಞಾನ ತಂತ್ರಜ್ಞಾನಗಳು ನಮ್ಮೊಳಗಿನ ಮಾನವೀಯ ಮೌಲ್ಯಗಳನ್ನು ಕಡಿಮೆ ಮಾಡುತ್ತಿದೆಯೇ ಎಂಬ ಪ್ರಶ್ನೆಯನ್ನು ಕೇಳಿಕೊಳ್ಳಬೇಕಿದೆ.ಅದಕ್ಕೆ ಪರಿಹಾರವನ್ನೂ ಹುಡುಕಬೇಕಿದೆ” ಎಂದರು.
“ಅಧ್ಯಾತ್ಮವಿಲ್ಲದ, ವಿಜ್ಞಾನ ಶುಷ್ಕವಾಗುತ್ತದೆ. ಇತ್ತೀಚಿನ ವರ್ಷಗಳಲ್ಲಿ ಉದ್ಯೋಗ ಮತ್ತು ನಗರೀಕರಣದಿಂದಾಗ ಅನೇಕರನ್ನು ಆರ್ಥಿಕವಾಗಿ ಸದೃಢರನ್ನಾಗಿಸಿದೆ. ಆದರೆ ಮಾನವೀಯ ಸಂಬಂಧಗಳ ಬೆಸೆಯುವಿಕೆಯ ಕೊಂಡಿ ಕಾಣುತ್ತಿಲ್ಲ. ವ್ಯಷ್ಟಿ, ಸಮಷ್ಟಿ, ಸೃಷ್ಟಿ, ಪರಮೇಷ್ಠಿಗಳ ಒಟ್ಟು ಸಮ್ಯಕ್ ಶೃತಿಗೆ ಓಗೊಟ್ಟಾಗ ಸಹಜವಾಗಿಯೇ ಒಟ್ಟು ಅಭ್ಯುದಯಕ್ಕೆ ಭದ್ರವಾದ ಬುನಾದಿಯನ್ನ ನೀಡುತ್ತದೆ. ಸಮಗ್ರವಾದ ದೃಷ್ಟಿಕೋನದ ಮೂಲಕ ವ್ಯಕ್ತಿ, ಕುಟುಂಬ, ಸಮಾಜ, ವಿಶ್ವ ಪೂರಕವಾಗಿ ಕೆಲಸ ಮಾಡಿದಾಗ ಮಾತ್ರವೇ ಆಮೂಲಾಗ್ರ ಬದಲಾವಣೆ ಸಾಧ್ಯ.”
‘ಸಮಗ್ರ ದೃಷ್ಟಿಯಿಲ್ಲದೆ ಸಂಘರ್ಷಗಳಿಂದ ದೇಶ ಬೆಳೆಯುವುದಿಲ್ಲ. ಅಮೆರಿಕ, ರಷ್ಯ, ಚೀನಾ ಮುಂತಾದ ಜಾಗತಿಕ ಶಕ್ತಿಗಳು ಇವತ್ತು ಕುಟಿಲತನಗಳಿಗೆ ಇನ್ನೊಂದು ಹೆಸರಾಗುತ್ತಿದೆ. ವಿಶ್ವಶಾಂತಿಯ ಮಾರ್ಗದಲ್ಲಿ ಈ ಜಾಗತಿಕ ಶಕ್ತಿಗಳು ನಡೆಯುತ್ತಿಲ್ಲ, ಬದಲಾಗಿ ವ್ಯಾಪಾರದ ಸಲುವಾಗಿ ತಮ್ಮ ಕುಟಿಲ ರಾಜನೀತಿಗಳಿಂದಾಗಿಯೇ ಜಗತ್ತನ್ನು ಧ್ವಂಸ ಮಾಡುತ್ತಿದೆ. ಅಮೆರಿಕ ಮಧ್ಯ ಪ್ರವೇಶ ಮಾಡುವ ಮುನ್ನ ಇರಾನ್ ಹೇಗಿತ್ತು? ಈಗ ಹೇಗಿದೆ? ಎಂಬುದನ್ನ ನೋಡಿದರೆ ಇದಕ್ಕೊಂದು ಸ್ಪಷ್ಟ ಚಿತ್ರಣ ದೊರೆಯಬಹುದು. ನಾನು ಹೇಳಿದ್ದೇ ಸತ್ಯ, ನನ್ನ ಪುಸ್ತಕ, ಮತವೇ ಅಂತಿಮ ಎನ್ನುವುದನ್ನು ಭಾರತ ಪ್ರತಿಪಾದಿಸಿಲ್ಲ. ಭಾರತ ಯಾವುದನ್ನೂ ‘ ಇದಮಿತ್ಥಂ’ ಎಂದಿಲ್ಲ, ನಾವು ಹೇಳಿದ್ದು ಅಂತಿಮ ಎಂದಿಲ್ಲ, ಮುಂದೆ ಯಾರಾದರೂ ಇದಕ್ಕಿಂತ ಮುಂದೆ ಇಣುಕಿದರೆ ಸಿಗಬಹುದು, ನಮಗೆ ಗೋಚರವಾದದ್ದಿಷ್ಟು ಎಂಬ ಸಮನ್ವಯದ ದೃಷ್ಟಿ ಭಾರತೀಯರದ್ದು, ಇನ್ನೊಬ್ಬರನ್ನು ಹಾಳು ಮಾಡಬೇಕೆಂಬ ದೃಷ್ಟಿ ಭಾರತದ ಮಣ್ಣಿನಲ್ಲಿಲ್ಲ.”
“ಎಲ್ಲಾಕಡೆ ಸಂಘರ್ಷವಿದ್ದರೂ ಭಾರತೀಯ ಚಿಂತನೆ ಇಂಥ ಸಂಘರ್ಷವನ್ನು ಬೆಂಬಲಿಸಲಿಲ್ಲ. ಗೆಲುವಿನಲ್ಲಿಯ ಶತ್ರುಗಳನ್ನು ಸೋಲಿಸಬೇಕೇ ಹೊರತು, ಶತ್ರುಗಳನ್ನು ಸಾಯಿಸಬೇಕು ಎಂದು ಹೇಳಿಲ್ಲ.ಮಹಾಭಾರತ ಯುದ್ಧದಲ್ಲಿ ಯುದ್ಧ ವಿರಾಮ ಸಿಕ್ಕಾಗ ಎಲ್ಲರೂ ಎಲ್ಲರ ಗಾಯಗಳಿಗೆ ಮುಲಾಮು ಹಚ್ಚುತ್ತಿದ್ದರು, ಶವಗಳ ಸಂಸ್ಕಾರ ಮಾಡುತ್ತಿದ್ದರು. ಪರಸ್ಪರ ಸಂಘರ್ಷಗಳಿಂದ ಎಂದಿಗೂ ಯಾವ ದೇಶವೂ ಬೆಳೆಯಲು ಸಾಧ್ಯವಿಲ್ಲ, ಪರಸ್ಪರ ಪೂರಕವಾಗಿ ಬೆರೆತಾಗ ಮಾತ್ರ ಅದು ಸಾಧ್ಯವಿದೆ.”
“ಗಾಂಧಿಜಿಯವರು ರಾಮರಾಜ್ಯದ ಕಲ್ಪನೆ ನೀಡಿದರು,ಸರ್ವೋದಯದ ಪರಿಕಲ್ಪನೆ ನೀಡಿದರು,ದೀನದಯಾಳರು ಅಂತ್ಯೋದಯದ ಕುರಿತಾಗಿ ಮಾತನಾಡಿದರು, ಅಂದರೆ ಅಂತ್ಯೋದಯದಿಂದ ಸರ್ವೋದಯ,ಸರ್ವೋದಯದಿಂದ ರಾಮರಾಜ್ಯದ ಕಡೆಗೆ ನಾವು ನಡೆಯಬಹುದು” ಎಂದು ಬಿ.ಎಲ್. ಸಂತೋಷ್ ವಿವರಿಸಿದರು.
ಇದೇ ಸಂದರ್ಭದಲ್ಲಿ ವಿಕಾಸ್ ಕುಮಾರ್.ಪಿ ಅವರು ಬರೆದಿರುವ ದೇಸಿ ಪ್ರಜಾತಂತ್ರ ಪುಸ್ತಕವನ್ನು ವೇದಿಕೆಯಲ್ಲಿ ಬಿಡುಗಡೆ ಮಾಡಲಾಯಿತು.
ರಾಷ್ಟ್ರೀಯ ಸ್ವಯಂಸೇವಕ ಸಂಘದ ದಕ್ಷಿಣ ಮಧ್ಯ ಕ್ಷೇತ್ರೀಯ ಸಂಘಚಾಲಕರಾದ ವಿ, ನಾಗರಾಜ್, ಬೆಂಗಳೂರು ಮಹಾನಗರ ಸಂಘಚಾಲಕ ಡಾ. ಎಂ.ಕೆ. ಶ್ರೀಧರ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಹಾಗು ಸಹಸರಕಾರ್ಯವಾಹರಾದ ಶ್ರೀ ಮುಕುಂದ, ಚಂದ್ರಶೇಖರ ಬಂಢಾರಿ,ಕಾ.ಶ್ರೀ.ನಾಗರಾಜ ಮುಂತಾದ ಹಿರಿಯ ಸ್ವಯಂಸೇವಕರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.