ದೆಹಲಿ (23 ಸೆಪ್ಟೆಂಬರ್ 2022). ರಾಷ್ಟ್ರೀಯ ಸ್ವಯಂಸೇವಕ ಸಂಘದ ಸರಸಂಘಚಾಲಕರಾದ ಡಾ.ಮೋಹನ್ ಭಾಗವತ್ ಅವರು ಮಾತನಾಡುತ್ತಾ,”ಪ್ರತಿಯೊಬ್ಬರೂ ವಿಶ್ವದ ಮಾರುಕಟ್ಟೆಯ ಬಗ್ಗೆ ಮಾತನಾಡುತ್ತಾರೆ, ಭಾರತ ಮಾತ್ರ ವಿಶ್ವ ಕುಟುಂಬದ ಬಗ್ಗೆ ಮಾತನಾಡುತ್ತದೆ (ವಸುಧೈವ ಕುಟುಂಬಕಂ). ಅಷ್ಟೇ ಅಲ್ಲ ಜಗತ್ತನ್ನೇ ಒಂದು ಕುಟುಂಬವನ್ನಾಗಿಸುವ ಕೆಲಸವನ್ನೂ ನಾವು ಮಾಡುತ್ತೇವೆ” ಎಂದರು. ಡಾ.ಅಂಬೇಡ್ಕರ್ ಅಂತರಾಷ್ಟ್ರೀಯ ಕೇಂದ್ರದಲ್ಲಿ ಸಂಕಲ್ಪ್ ಫೌಂಡೇಶನ್ ಹಾಗೂ ಮಾಜಿ ನಾಗರಿಕ ಸೇವಾ ಅಧಿಕಾರಿ ಮಂಚ್ ಆಯೋಜಿಸಿದ್ದ ಉಪನ್ಯಾಸ ಸರಣಿಯನ್ನುದ್ದೇಶಿಸಿ ಅವರು ಮಾತನಾಡಿದರು.

“ನಮ್ಮ ರಾಷ್ಟ್ರೀಯತೆ” ವಿಷಯದ ಕುರಿತು ಮಾತನಾಡಿದ ಡಾ.ಭಾಗವತ್ ಮಾತನಾಡಿ, “ನಮ್ಮ ದೇಶ ಪ್ರಾಚೀನ ಕಾಲದಿಂದಲೂ ವೈವಿಧ್ಯತೆಯ ದೇಶವಾಗಿತ್ತು. ನಮ್ಮ ಭೂಮಿ ಎಲ್ಲರಿಗೂ ಕೊಡುವಂಥದ್ದು, ಭೂಮಿ, ಅನ್ನ, ನೀರು ಮಾತ್ರವಲ್ಲ, ಸಂಸ್ಕಾರವನ್ನೂ ನೀಡುತ್ತದೆ. ಅದಕ್ಕಾಗಿಯೇ ಈ ಭೂಮಿಯನ್ನು ‘ಭಾರತ ಮಾತಾ’ ಎಂದು ಕರೆಯಲಾಗುತ್ತದೆ. ನಾವು ಈ ಭೂಮಿಯ ಒಡೆಯರಲ್ಲ, ಅದರ ಮಕ್ಕಳು. ಇದು ನಮ್ಮ ಪುಣ್ಯಭೂಮಿ, ನಮ್ಮ ಕರ್ಮ ಭೂಮಿ. ನಮ್ಮ ಏಕತೆಯ ಎಳೆ ಸಂಸ್ಕೃತಿ ಮತ್ತು ನಾವು ಅದನ್ನು ಮನನ ಮಾಡುತ್ತಾ ಆಚರಣೆ ಮಾಡುತ್ತೇವೆ. ನಾವು ಒಂದೇ ರೀತಿಯವರಾಗಬಾರದು, ನಾವು ಒಂದೇ ಎನ್ನುವಂತಾಗಬೇಕು. ಇದನ್ನೇ ನಮ್ಮ ಪೂರ್ವಜರು ಕಲಿಸಿದ್ದು, ಹೇಳಿದ್ದು. ನಮ್ಮ ಪೂರ್ವಜರು ಸಂಸ್ಕೃತಿಯ ರಕ್ಷಣೆಗಾಗಿ ತ್ಯಾಗ, ಹೋರಾಟ, ಬಲಿದಾನ ಮಾಡಿದ್ದಾರೆ. ಮತ್ತು ನಮ್ಮ ಗುರುತು ನಮ್ಮ ಭಾರತ, ನಮ್ಮ ಪೂರ್ವಜರು, ನಮ್ಮ ಸಂಸ್ಕೃತಿಯೇ. ನಾವು ಅದನ್ನು ಬಿಡುವುದಿಲ್ಲ. ಈ ಮೂರೂ ವಿಷಯಗಳ ಕುರಿತು ಎಲ್ಲ ಭಾಷೆಯ ಜನರಲ್ಲಿ,ಎಲ್ಲ ಮತ ಪಂಥದ ಜನರಲ್ಲಿ ಶ್ರದ್ಧೆಯಿದೆ.” ಎಂದರು.

ಅವರು ಮುಂದುವರೆದು ಮಾತನಾಡಿ, “ಪಾಶ್ಚಿಮಾತ್ಯ ದೇಶದ ನೇಷನ್ ಬೆಳೆದುಬಂದ ರೀತಿಗೂ ನಮ್ಮ ರಾಷ್ಟ್ರ ವಿಕಾಸವಾದ ರೀತಿಗೂ ಬಹಳ ವ್ಯತ್ಯಾಸವಿದೆ. ನಮ್ಮದು ನೇಷನಲಿಸಂ ಅಲ್ಲ, ನಮ್ಮದು ರಾಷ್ಟ್ರವಾದ,ನಮ್ಮದು ರಾಷ್ಟ್ರೀಯತೆ.” ಎಂದರು.

ಪ್ರಧಾನಮಂತ್ರಿಗಳ ಮಾಜಿ ಪ್ರಧಾನ ಕಾರ್ಯದರ್ಶಿ ಹಾಗೂ ಶ್ರೀರಾಮ ಜನ್ಮಭೂಮಿ ಮಂದಿರ ನಿರ್ಮಾಣ ಸಮಿತಿಯ ಅಧ್ಯಕ್ಷರಾದ ನೃಪೇಂದ್ರ ಮಿಶ್ರಾ ಅವರು ಉಪನ್ಯಾಸ ಮಾಲಿಕೆಯ ಮೊದಲ ಅವಧಿಯ ಅಧ್ಯಕ್ಷತೆ ವಹಿಸಿ ಮಾತನಾಡಿ, “36 ವರ್ಷಗಳಿಂದ ಸಂಕಲ್ಪ ಅಕಾಡೆಮಿಯು ಭರವಸೆ ನೀಡುತ್ತಾ ಮತ್ತು ಸಂಪನ್ಮೂಲವಿಲ್ಲದ ವಿದ್ಯಾರ್ಥಿಗಳನ್ನು ಪ್ರೋತ್ಸಾಹಿಸುತ್ತಿದೆ. ಅವರ ಕೆಲಸಕ್ಕೆ ಧನ್ಯವಾದಗಳು. ಸಂಕಲ್ಪ ವಾಣಿಜ್ಯದ ದೃಷ್ಟಿಯಿಂದ ನಡೆಯುತಗತಿಲ್ಲ, ಸೇವಾ ಮನೋಭಾವದಿಂದ ಕೆಲಸ ಮಾಡುತ್ತಿದೆ” ಎಂದರು.”ಅಲ್ಲದೆ,ಸಮಾಜದಲ್ಲಿ ವಿಭಿನ್ನ ಕೊಡುಗೆ ನೀಡುತ್ತಿರುವವರು ವಿವಿಧ ಕೆಲಸಗಳಿಗೆ ಕೈಜೋಡಿಸಿ ದೇಶಕ್ಕಾಗಿ ದುಡಿಯಬಹುದು ಎಂದು ಸಂಘದಿಂದ ಸ್ಪೂರ್ತಿ ಹಾಗೂ ಮಾಹಿತಿ ಪಡೆದುಕೊಂಡಿದ್ದೇನೆ” ಎಂದರು.ವಿಶೇಷ ಅತಿಥಿಗಳಾಗಿ ಉಪಕುಲಪತಿ ಡಾ.ಜಗ್ಬೀರ್ ಸಿಂಗ್ ಉಪಸ್ಥಿತರಿದ್ದರು.

ಎರಡನೇ ಅವಧಿಯಲ್ಲಿ ರಾಷ್ಟ್ರೀಯ ಸ್ವಯಂಸೇವಕ ಸಂಘದ ಬಗ್ಗೆ ಚರ್ಚೆ ನಡೆಯಿತು, ಈ ಸಂದರ್ಭದಲ್ಲಿ ಸರಸಂಘಚಾಲಕರಾದ ಡಾ.ಮೋಹನ್ ಭಾಗವತ್ ಅವರು ಸಂಘದ ಬಗ್ಗೆ ಹಾಜರಿದ್ದ ಸಭಿಕರ ಜೊತೆ ಸಂವಾದ ನಡೆಸಿದರು. ಸಂಕಲ್ಪ ಫೌಂಡೇಶನ್ ಅಧ್ಯಕ್ಷ ಸಂತೋಷ್ ಕುಮಾರ್ ತನೇಜ ಉಪನ್ಯಾಸ ಮಾಲಿಕೆಯ ವಿವರ ನೀಡಿದರು.

ಮಾಜಿ ನಾಗರಿಕ ಸೇವಾ ಅಧಿಕಾರಿ ವೇದಿಕೆಯ ಐಎಎಸ್ (ಎಸ್‌ಇಎನ್) ಸಂಚಾಲಕ ಡಾ.ಜಿ.ಪ್ರಸನ್ನಕುಮಾರ್ ವಂದಿಸಿದರು. ವೇದಿಕೆಯನ್ನು ಕೇಂದ್ರೀಯ ಹಿಂದಿ ಶಿಕ್ಷಣ ಮಂಡಲದ ಉಪಾಧ್ಯಕ್ಷ ಅನಿಲ್ ಶರ್ಮಾ ಜೋಶಿ ನಿರ್ವಹಿಸಿದರು.

‘ಇಂಡಿಯನ್ ಪರ್ಸ್‌ಪೆಕ್ಟಿವ್’ ಪುಸ್ತಕ ಬಿಡುಗಡೆ

ಉಪನ್ಯಾಸದಲ್ಲಿ ರಾಷ್ಟ್ರೀಯ ಸ್ವಯಂಸೇವಕ ಸಂಘದ ಸರಸಂಘಚಾಲಕರಾದ ಡಾ. ಮೋಹನ್ ಭಾಗವತ್ ಅವರು ಸಂಕಲ್ಪ್ ಅವರು ಸಂಪಾದಿಸಿದ್ದ ‘ಇಂಡಿಯನ್ ಪರ್ಸ್ಪೆಕ್ಟಿವ್’ ಪುಸ್ತಕದ ಇಂಗ್ಲಿಷ್ ಆವೃತ್ತಿಯನ್ನು ಬಿಡುಗಡೆ ಮಾಡಿದರು. ಈ ಪುಸ್ತಕವು ಹಿಂದಿನ ವರ್ಷಗಳಲ್ಲಿ ಆಯೋಜಿಸಿದ್ದ ಉಪನ್ಯಾಸ ಮಾಲಿಕೆಯಲ್ಲಿ ಉಪನ್ಯಾಸಕರು ನೀಡಿದ ಉಪನ್ಯಾಸಗಳ ಸಂಕಲನವಾಗಿದ್ದು, ಡಾ. ಕೃಷ್ಣ ಗೋಪಾಲ್, ಡಾ. ಮುರಳಿ ಮನೋಹರ್ ಜೋಶಿ, ಗೃಹ ಸಚಿವ ಅಮಿತ್ ಶಾ, ದಿವಂಗತ ಸುಷ್ಮಾ ಸ್ವರಾಜ್, ದಿವಂಗತ ಅನಿಲ್ ಮಾಧವ್ ದವೆ ಸೇರಿದಂತೆ 12 ಪ್ರಮುಖ ಭಾಷಣಕಾರರ ಉಪನ್ಯಾಸಗಳನ್ನು ಒಳಗೊಂಡಿದೆ. ಕೇಂದ್ರ ಹಿಂದಿ ಶಿಕ್ಷಣ ಮಂಡಳಿಯ ಉಪಾಧ್ಯಕ್ಷ ಅನಿಲ್ ಶರ್ಮಾ ಜೋಶಿ ಮತ್ತು ಸಮಾಜ ಸೇವಕ ರಾಜೇಂದ್ರ ಆರ್ಯ ಅವರು ಪುಸ್ತಕವನ್ನು ಸಂಪಾದಿಸಿದ್ದು ಪುಸ್ತಕವನ್ನು ಪ್ರಭಾತ ಪ್ರಕಾಶನ ಪ್ರಕಟಿಸಿದೆ.

Leave a Reply

Your email address will not be published.

This site uses Akismet to reduce spam. Learn how your comment data is processed.