ಬೆಂಗಳೂರಿನ ಬಸವನಗುಡಿಯ ಗೋಖಲೆ ವಿಚಾರ ಸಂಸ್ಥೆಯ ಡಿವಿಜಿ ಸಭಾಂಗಣದಲ್ಲಿ ನಾಡೋಜ ಎಸ್.ಆರ್.ರಾಮಸ್ವಾಮಿಯವರ ಅಭಿನಂದನಾ ಗ್ರಂಥ ದೀಪಸಾಕ್ಷಿ ಪುಸ್ತಕದ ಬಿಡುಗಡೆ ಕಾರ್ಯಕ್ರಮ ಜರುಗಿತು.

ರಾಷ್ಟ್ರೀಯ ಸ್ವಯಂಸೇವಕ ಸಂಘದ ಸಹಸರಕಾರ್ಯವಾಹರಾದ ಶ್ರೀಮುಕುಂದ ಅವರು ಮಾತನಾಡುತ್ತಾ, “ಎಂ.ಎನ್.ಕೃಷ್ಣರಾವ್ ಪಾರ್ಕಿನಲ್ಲಿ ಮೊದಲ ಬಾರಿ ಸಾಂಫಿಕ್‌ನಲ್ಲಿ ರಾಮಸ್ವಾಮಿಯವರನ್ನು ಭೇಟಿಯಾಗಿದ್ದು, ಸಾಮಾನ್ಯರ ಜೊತೆಗೆ ವಿದ್ವಾಂಸರೆಂಬ ಹಮ್ಮಿಲ್ಲದೆ ಬೆರೆಯುತ್ತಿದ್ದ ಅವರು, ಸಂಘಟನೆಗಳ ವಾತಾವರಣಗಳಲ್ಲಿ ಅತ್ಯಂತ ಕ್ರಿಯಾಶೀಲವಾಗಿ ಮಾರ್ಗದರ್ಶನ ಮಾಡುತ್ತಿದ್ದರು. ಅವರಿಂದ ಪ್ರೇರಿತರಾಗಿ ಅನೇಕರು ಬರವಣಿಗೆಗೆ ತೊಡಗಿಸಿಕೊಂಡಿದ್ದವರಿದ್ದಾರೆ. ಅವರು ಗಡಿಬಿಡಿಯ ವಾತಾವರಣದ ನಡುವೆಯೂ ಪ್ರೇರಣೆಯನ್ನು ಸತತವಾಗಿ ನೀಡುತ್ತಿದ್ದರು. ಅವರೊಬ್ಬ ಸಾಮಾಜಿಕ ಕೋಗಿಲೆ,ಹೇಗೆ ಕೋಗಿಲೆ ಎಂತಹ ಕಾಗೆಗಳ ಮಧ್ಯೆಯಿದ್ದರೂ ಸ್ವಂತ ಸ್ವತ್ವ ಬಿಡುವುದಿಲ್ಲವೋ ಹಾಗೆ ರಾಮಸ್ವಾಮಿಯವರು, ನಮ್ಮಂಥವರ ನಡುವೆ ಗೌಜು ಗದ್ದಲದಲ್ಲಿದ್ದರೂ ಚಿಂತನೆ ನಡೆಸಿದವರು. ವೈಚಾರಿಕ ಮತ್ತು ರಾಷ್ಟ್ರೀಯ ಆಂದೋಲನದ ಪ್ರಯತ್ನಗಳ ಹಿನ್ನೆಲೆಯಲ್ಲಿ ರಾಮಸ್ವಾಮಿಯವರು ಮಾಡಿದ ಲೇಖನ ಕಾರ್ಯ ಈ ಸ್ಥಿತ್ಯಂತರ ಕಾಲದಲ್ಲಿ ನಮಗೆಲ್ಲರಿಗೂ ಅತ್ಯಂತ ಅಗತ್ಯವಾದ ಸಾಮಗ್ರಿ. ಧರ್ಮಪಾಲ್ ಅವರ ಭಾರತೀಯ ಚಿತ್ತ,ಮಾನಸಿಕತೆ ಮತ್ತು ಕಾಲ ಪುಸ್ತಕಕ್ಕೆ ಬರೆದ ಉಪೋದ್ಘಾತವು ಇವತ್ತಿನ ಸಾಮಾಜಿಕ ಬದಲಾವಣೆಗಳಿಗೆ ಮಾನ್ಯತೆ ಸಿಗುತ್ತಿರುವ ಇಂದಿಗೆ ಅತ್ಯಂತ ಪ್ರಸ್ತುತ. ವಸಾಹತುಶಾಹಿ ಮನಸ್ಥಿಯಿಂದ ಹೊರಬರುತ್ತಿರುವ ಈ ಕಾಲಘಟ್ಟದಲ್ಲಿ ಅವರು ನೀಡಿದ ದೃಷ್ಟಿ ಪ್ರೇರಣಾದಾಯಿ” ಎಂದರು.

ಟಿ.ವಿ.ವೆಂಕಟಾಚಲ ಶಾಸ್ತ್ರಿಗಳು ಮಾತನಾಡುತ್ತಾ, “ಇದೊಂದು ದೇವದುರ್ಲಭ ಸಭೆಯೆಂದರೆ ತಪ್ಪಾಗಲಿಕ್ಕಿಲ್ಲ. ಡಿವಿಜಿಯವರ ವನಸುಮದೊಳೆನ್ನ ಒಂದು ಸೂತ್ರ, ಎಸ್.ಆರ್.ರಾಮಸ್ವಾಮಿಯವರ ಜೀವನ ಅದಕ್ಕೆ ಒಂದು ಭಾಷ್ಯ.ಅವರ ಸಾರ್ಥಕ 85ವರ್ಷಗಳಿಗೆ ನಮ್ಮ ಗೌರವ ಸಮರ್ಪಣೆ. ಜಾರಿ ಎಂಬ ಜರ್ಮನ್ ವಿದ್ವಾಂಸ ಕಲ್ಕತ್ತಾದ ವಿಶ್ವವಿದ್ಯಾಲಯದಲ್ಲಿ ವಿದ್ವತ್‌ನ ಪರಂಪರೆ ಎನ್ನುವುದು ವಂಶಪಾರಂಪರ್ಯವಾಗಿ ಹರಿದುಬಂದಿರುವುದು ಭಾರತದಲ್ಲಿ ಮಾತ್ರ ಎಂದಿದ್ದರು. ಇದನ್ನೇ ಗುಂಡಪ್ಪನವರು ಹೇಳಿದ್ದರು ರಾಮಸ್ವಾಮಿಯವರು ಬರೆದಿದ್ದರು. ಒಮ್ಮೆ ವಿಶ್ವೇಶ್ವರಯ್ಯನವರ ತಂದೆ ಬರೆದ ಒಂದು ಕಾಗದ ಸಿಕ್ಕಾಗ ಅದನ್ನು ಅವರಿಗೆ ತೋರಿಸಿ ಇದನ್ನು ಕುರಿತು ವಿವರಿಸಿದ್ದರು. ಇದೇ ರೀತಿ ರಾಮಸ್ವಾಮಿಯವರ ಕುಟುಂಬದಲ್ಲೂ ಹಾಗೆಯೇ ಅವರ ತಾತ, ತಂದೆ, ಅಣ್ಣ ಮುಂತಾದವರ ಪರಂಪರೆಯಲ್ಲೂ ಮುಂದುವರೆದಿದೆ. ತಮ್ಮ ಬರಹಗಳಲ್ಲಿ ಇತಿಹಾಸದ ಪೂರ್ವಕಥನಗಳ ಪುನಃವಿಮರ್ಶೆಗೆ ಒಡ್ಡಿಕೊಂಡು ಬರೆದವರು ಅವರು. ಅವರದ್ದು ಶ್ರದ್ಧೆಯ, ಶ್ರಮದ ಬರವಣಿಗೆ, ಪ್ರೌಢ ಬರವಣಿಗೆ ಅವರೊಬ್ಬ ವಿಶ್ವ ಕುಟುಂಬಿ, ವಿರಕ್ತ ರಾಷ್ಟ್ರಕರು ರಾಮಸ್ವಾಮಿಯವರು” ಎಂದರು.

ಶತಾವಧಾನಿ ಆರ್.ಗಣೇಶ್ ಅವರು ಮಾತನಾಡಿ, “ಉಪಾಧಿಗಳು ಸಮೀಕೃತವಾಗುವುದು ಬಹಳ ವಿರಳ, ಅಂಥದ್ದೊಂದು ಸಮಯವಿದು. ದೀಪಸಾಕ್ಷಿ ಗ್ರಂಥದ ಕೆಲಸಕ್ಕೆ ನಾವೊಂದು ನಿಮಿತ್ತ ಮಾತ್ರ. ರಾಮಸ್ವಾಮಿಯವರು ಅಕಸ್ಮಾತ್ ತಮ್ಮ ಆತ್ಮಕಥೆ ಬರೆದಿದ್ದರೆ ಕರ್ನಾಟಕದ ಸುಮಾರು 150 ವರ್ಷಗಳ ಸಾಂಸ್ಕೃತಿಕ ಇತಿಹಾಸವಾಗುತ್ತಿತ್ತು.ಈ ಹಿಂದೆ ಮೈ.ಚ.ಜಯದೇವರು ಇದಕ್ಕೆ ಬೀಜಾರೋಪಣ ಮಾಡಿದ್ದವರು, ಅದಕ್ಕೆ ನೀರೆರೆದು ಮರವಾಗಿರುವುದು ಈ ಕೃತಿ. ಅದರ ನಂತರದಲ್ಲಿ ಅನೇಕ ವಿದ್ವಾಂಸರು, ಸಮಾಜದ ಮಹನೀಯರು ಈ ಪುಸ್ತಕಕ್ಕೆ ಅನುವು ಮಾಡಿದ್ದಾರೆ.ರಾಮಸ್ವಾಮಿಯವರೇ ಬರೆದ ಸುಮಾರು 500 ಪುಟಗಳಷ್ಟರ 15 ಸಂಪುಟವನ್ನು ಅವರು ಬರೆದು ಸಮಾಜಕ್ಕೆ ಕೊಡುಗೆ ನೀಡಿದ್ದಾರೆ” ಎಂದರು.

ಅಧ್ಯಕ್ಷತೆ ವಹಿಸಿದ್ದ ಡಾ.ಎಸ್.ಎಲ್.ಭೈರಪ್ಪನವರು ಮಾತನಾಡಿ, “ದೀಪ ಸಾಕ್ಷಿ ಪ್ರಕಟವಾಗುವುದಕ್ಕೆ ಮೊದಲೇ ಓದಿದ್ದೇನೆ, ಇದರಲ್ಲಿ ನನಗೆ ಬಹಳ ಮನಸ್ಸಿಗೆ ತಟ್ಟಿದ ವಿಷಯ ಏನೆಂದರೆ ಯಾದವರಾವ್ ಜೋಷಿಯವರು ಕರ್ನಾಟಕಕ್ಕೆ ಬಂದು, ಆರ್‌ಎಸ್ಎಸ್ ಅನ್ನು ಬೆಳೆಸುವುದಕ್ಕಾಗಿ ಕೇಶವ್ ಅವರನ್ನು ಕಳುಹಿಸಿದರು. ಅವರಿಗೆ ಸಂಗೀತವೂ ಗೊತ್ತಿತ್ತು. ಅವರಿಗೆ ಒಮ್ಮೆ ಕರ್ನಾಟಕದಲ್ಲಿ ವೇದ ಪಠಣವನ್ನು ಹೇಗೆ ಮಾಡುತ್ತಾರೆ ಎಂದು ಕೇಳುವ ಆಸೆಯಾಯಿತು. ರಾಮಸ್ವಾಮಿಯವರು ಒಪ್ಪಿಕೊಂಡರು. ಆದರೆ ಸಮಯದಲ್ಲಿ ಇದು ಆಗಲಿಲ್ಲ.ಅವರು ನಂತರದಲ್ಲಿ ಖಾಯಿಲೆಯಾಗಿ ತೀರಿಕೊಂಡರು. ನಂತರ ಕೇಶವಕೃಪಾದಲ್ಲಿ ಅಂತಿಮ ಕಾರ್ಯ ನಡೆಯುವಾಗ ರಾಮಸ್ವಾಮಿಯವರು ಪಂಚೆ ಉತ್ತರೀಯ ಹೊದ್ದು ಬಂದು ನಾಲ್ಕು ಗಂಟೆಗಳ ಕಾಲ ವೇದ ಪಠಣ ಮಾಡಿದರು. ಆ ವ್ಯಕ್ತಿಗೆ ಇವರು ಕೊಟ್ಟ ಮಾತು ತಲುಪಿಸಬೇಕಿತ್ತು, ಆದರೆ ವ್ಯಕ್ತಿಯೇ ಇರಲಿಲ್ಲ, ಆದರೆ ಅವರ ಫೋಟೋದ ಎದುರಿಗೆ ವೇದ ಪಠಣ ಮಾಡಿದರು. ತೀರಿ ಹೋದರೂ ಸಹ ಋಣ ತೀರಿಸುವುದು ಅತ್ಯಂತ ಮಹತ್ವದ ವಿಚಾರ.ಈ ರೀತಿಯ ಗುಣ ರಾಮಸ್ವಾಮಿಯವರಲ್ಲಿ ಇದ್ದದ್ದು. ರಾಮಸ್ವಾಮಿಯವರು ಈಗ ಕಣ್ಣಲ್ಲಿ ನೀರು ತರಿಸಿಕೊಂಡಿದ್ದಾರೆ, ಇದನ್ನು ಕೇಳಿದಾಗ ನನಗೂ ಹೀಗೆ ಕಣ್ಣಲ್ಲಿ ನೀರು ಬಂದಿತ್ತು. ಈ ಸಂದರ್ಭದಲ್ಲಿ ನನಗನಿಸುವುದು ವಿದ್ವತ್ತು ಎನ್ನುವುದು ಮುಗಿಯುವ ಕಾಲ ಘಟ್ಟವೂ ಬರುತ್ತಿದೆ. ಒಬ್ಬ ಸೃಜನಶೀಲ ಲೇಖಕನಾಗಿ ಬಹಳ ವಿದ್ವತ್ತನ್ನ ಸಂಪಾದನೆ ಮಾಡುವುದಕ್ಕೆ ಸಾಧ್ಯವಿಲ್ಲ. ವಿದ್ವತ್ ಜನರ ಸಂಪರ್ಕವು ಸೃಜನಶೀಲ ಬರಹಗಾರನಿಗೆ ಇರಬೇಕು. ವಿದ್ವತ್ ಜನ ಸೃಜನಶೀಲ ಬರಹಗಾರನಿಗೆ ಬೆನ್ನೆಲುಬಾಗಿ ಇರಬೇಕು. ಇತ್ತೀಚೆಗೆ ಸತ್ವಯುತ ಬರಹ ಬರುತ್ತಿಲ್ಲ, ಯಾಕೆಂದರೆ ನವೋದಯ ಕಾಲದಲ್ಲಿ ಸೃಜನಶೀಲ ಬರಹಗಾರರಿಗೆ ಇದ್ದ ವಿದ್ವತ್ ಸಹಾಯ ಈಗ ದೊರೆಯುತ್ತಿಲ್ಲ. ನನ್ನ ಅನುಭವಕ್ಕೆ ಬಂದದ್ದು, ಇದೇ ಬಸವನಗುಡಿಯ ಬಂಡೆಯ ನಡುವೆ ನನಗೊಂದು ಸನ್ಮಾನವಾಯಿತು.ನನ್ನ ಬಗ್ಗೆ ಮಾತನಾಡಲು ರಾಮಸ್ವಾಮಿಯವರು ಮಾತನಾಡಿದರು. ಅವರು ಮಾತನಾಡುವಾಗ ಕಾದಂಬರಿ ಎಂದರೇನು? ಅದರ ಹುಟ್ಟು ಬೆಳವಣಿಗೆ, ಭಾರತದಲ್ಲಿ ಅದರ ಸ್ಥಾನವನ್ನ ಸ್ಥೂಲವಾಗಿ ಹೇಳಿ ನಂತರ ನನ್ನ ಕಾದಂಬರಿಯ ಕುರಿತು ಮಾತನಾಡಿದರು‌. ಅದು ನನ್ನ ಬಗ್ಗೆ ಕರ್ನಾಟಕದಲ್ಲಿ ಬಂದಂತಹ ಮೊಟ್ಟ ಮೊದಲ ತೂಕದ ವಿಮರ್ಶೆ.ಆನಂತರದಲ್ಲಿ ಇತರರು ಬರೆಯಲು ಆರಂಭಿಸಿದರು.” ಎಂದರು

ಗೌರವ ಸಮರ್ಪಣೆಯ ನಂತರ ಮಾತನಾಡಿದ ಎಸ್‌.ಆರ್‌.ರಾಮಸ್ವಾಮಿ ಅವರು, “ಪ್ರಸಿದ್ಧ ಹಿಂದೂಸ್ಥಾನಿ ಗಾಯಕರು, ಆಗ್ರಾ ಘರಾಣೆಯ ರಾಮಾರಾವ್ ನಾಯಕ್ ,ಅವರ ಅಭಿನಂದನಾ ಸಮಾರಂಭದಲ್ಲಿ ಮಾತನಾಡಿ ನನಗೆ 77ವರ್ಷವಾದರೆ ನೀವ್ಯಾಕೆ ಅಡಾವುಡಿ ಮಾಡ್ತೀರಿ ಎಂದರು, ಅದೇ ವೇದಿಕೆಯಲ್ಲಿ ವೀಣಾ ದೊರೆಸ್ವಾಮಿ ಅಯ್ಯಂಗಾರ್ ಮಾತನಾಡಬೇಕಾದಾಗ ಯಾವ ಭಾಷೆಯಲ್ಲೂ ನಾನು ಮಾತನಾಡಲಾರೆ ಎಂದರು. ನನ್ನದೂ ಈಗ ಅದೇ ಪರಿಸ್ಥಿತಿ. ಪ್ರೀತಿಯಿಂದ ಮಾತನಾಡುವವರು ಎಂದೂ ಇಂಚುಪಟ್ಟಿ ಹಿಡಿದು ಮಾತನಾಡುವುದಿಲ್ಲ. ಅವರೆಲ್ಲರಿಗೂ ನನ್ನ ಧನ್ಯವಾದಗಳು. ನಿಮ್ಮೆಲ್ಲರ ಪ್ರೀತಿಯ ಋಣದ ಭಾರ ನನ್ನಮೇಲಿದೆ. ಇದು ನನಗೆ ಬಹಳ ಇರುಸು ಮುರುಸಿನ ಸಂದರ್ಭವೇ. 25ವರ್ಷಗಳ ಹಿಂದೆ ಹೃದಯಾಘಾತವಾಯಿತು. ಆಸ್ಪತ್ರೆಯಿಂದ ಹೊರಗೂ ಬಂದೆ. ನನ್ನ ಮೂವರು ಸ್ನೇಹಿತರು ಆಸ್ಪತ್ರೆಯ ಹೊರಗೆ ಬಿಲ್ ನಾನು ಕೊಡಬೇಕು ನಾನು ಕೊಡಬೇಕು ಎಂದು ಜಗಳವಾಡಿದ್ದರು. ನನಗೆ ಜನರ ಸ್ನೇಹದ ಕೊರತೆಯಾಗಿಲ್ಲ‌. ನನ್ನ ಪಾತ್ರತೆಗಿಂತ ಹೆಚ್ಚು ಪ್ರೀತಿ ಸ್ನೇಹ ಸಿಕ್ಕಿರುವುದು ನನ್ನ ಅದೃಷ್ಟ. ಗೌರವಗ್ರಂಥದ ಗಾತ್ರ, ಇಂಥವು ನೋಡಿದಾಗ ನನ್ನ ಗುರುಗಳಿಗಿಂತ ಹೆಚ್ಚು ಮಾನ್ಯತೆ ದೊರೆತಿದೆ. ಡಿವಿಜಿಯವರು ಯಾವಾಗಲೂ ಯಾವಾಗಲೂ ಹೇಳುತ್ತಿದ್ದರು ನೀನು ನನಗಿಂತ ದೊಡ್ಡ ಪಂಡಿತ ಎನ್ನುತ್ತಿದ್ದರು ಯಾಕೆಂದರೆ ಅವರು ಹೈಸ್ಕೂಲಿನಲ್ಲಿ ಡುಮ್ಕಿ, ನಾನು ಕಾಲೇಜಿನಲ್ಲಿ ಡುಮ್ಕಿ. ವೇದಿಕೆಯ ಎಲ್ಲ ಮಾನ್ಯರೂ ನನ್ನೊಂದಿಗೆ ಅನೇಕ ಸಮಯದಿಂದ ಜೊತೆಗೆ ನಡೆದಿದ್ದಾರೆ. ದೀಪಸಾಕ್ಷಿ ಹೊರತಂದು ನನ್ನ ಋಣ ಭಾರ ಹೆಚ್ಚಿಸಿದ್ದಾರೆ. ಗೋಖಲೆ ಸಂಸ್ಥೆಯಂತೂ ನನ್ನ ಎರಡನೇಯ ಮನೆಯೇ. ಇದು ಕೃತಜ್ಞತೆಯ ಸಮಯವಷ್ಟೇ ನನ್ನ ಪಾಲಿಗೆ‌. ಹೀಗೆ ಎಲ್ಲ ಹಿತೈಷಿಗಳ ಋಣವನ್ನ ತೀರಿಸಲು ಸಾಧ್ಯವೇ ಇಲ್ಲ.ನಾನೊಂದು ಮಾಧ್ಯಮವಷ್ಟೆ.ನನ್ನಿಂದ ಚೂರು ಪಾರು ಕೆಲಸಗಳನ್ನು ಹಿಂದಿನಿಂದ ದೊಡ್ಡವರು ನಿಂತು ಮಾಡಿಸಿದ್ದಾರೆ. ಸಂಸ್ಕೃತ ಶ್ಲೋಕವೊಂದರಲ್ಲಿ ಹೇಳಿದ ಹಾಗೆ ಗಾಳಿಯ ಸಹಾಯವಿಲ್ಲದೆ ಬೆಂಕಿಯು ಸಣ್ಣ ಹೊಟ್ಟನ್ನೂ ಉರಿಸಲು ಸಾಧ್ಯವಿಲ್ಲ ಎನ್ನುವಂತೆ ನಾನು. ಡಿವಿಜಿಯವರ ಹಾಗೆ ತಮ್ಮ ನೆಲದೊಂದಿಗೆ ಜನರೊಂದಿಗೆ ಸಹಜವಾಗಿ ಬೆರೆತ ಮತ್ತೊಬ್ಬರನ್ನು ನಾನು ನೋಡಿಲ್ಲ. ಹೂವು ಮಾರುವವ, ಬಡಗಿ, ಕೃಷಿಕ ಎಲ್ಲರನ್ನೂ ತಮ್ಮ ಬದುಕಿನ ಭಾಗವನ್ನಾಗಿಸಿಕೊಂಡಿದ್ದವರು ಡಿವಿಜಿ. ಲಾಭದ ಮಾತು ಹಾಗಿರಲಿ, ಮನ್ನಣೆಯನ್ನೂ ಬೇಡವೆಂದು ಬದುಕಿದವರು. ವಿ.ಸೀತಾರಾಮಯ್ಯವನರೊಂದಿಗೂ ನನ್ನ ನಂಟಿತ್ತು.ಹತ್ತಿರದಿಂದ ನೋಡಿದಾಗಲೂ ಎತ್ತರವಾಗಿಯೇ ಕಾಣುತ್ತಿದ್ದರು.ಇವರನ್ನು ನೋಡಿ ಲೋಕದ ಜೊತೆಗೆ ತಾದಾತ್ಮ್ಯ ನಮಗೇಕೆ ಸಾಧ್ಯವಾಗುತ್ತಿಲ್ಲ ಎಂದು ಮನಸ್ಸು ಕೇಳುತ್ತಿತ್ತು.ರಾಳಪಳ್ಳಿ ಅನಂತ ಕೃಷ್ಣಶರ್ಮರಂತಹ ರಸಿಕತನ ಮತ್ತೆಲ್ಲೂ ಸಿಗುವುದಿಲ್ಲ.ಸಂಸ್ಕೃತಿಯ ರಸಿಕತೆಯ ಪ್ರವಾಹ ಅವರು‌.ಅವರ ಜೊತೆಗಿದ್ದಾಗ ಸಮಯ ನಿಂತುಬಿದ್ದರು‌
ಯಾದವರಾವ್ ಜೋಷಿಯವರು ತಂದೆಯ ಸ್ಥಾನದಲ್ಲಿದ್ದರು. ಅವರ ಸಂಪರ್ಕಕ್ಕೆ ಬಂದರೆ ಪ್ರಭಾವಗೊಳ್ಳದಿರಲು ಸಾಧ್ಯವೇ ಇಲ್ಲ.ಅವರಿಗೇ ಖಾಸಗಿ ಜೀವನವೇ ಇರಲಿಲ್ಲ. ಸಮಾಜಕ್ಕೋಸ್ಕರ ತಮ್ಮ ದೀರ್ಘ ಜೀವನವನ್ನು ಸವೆಸಿದರು. ವಿಷಮ ಪರಿಸ್ಥಿತಿ ಬಂದಾಗಲೂ ಹಾಗೇ ನಿಂತಿದ್ದರು.
ವಿದ್ವಾನ್ ಎನ್‌. ರಂಗನಾಥ್ ಶರ್ಮ,ಮಾಸ್ತಿಯವರು, ಎಲ್‌ಎನ್.ಶೇಷಗಿರಿರಾಯರು, ನನ್ನನ್ನು ಬೆಳಿಸಿದರು‌.ಅವರೆಲ್ಲರ ಅವ್ಯಾಜ ಪ್ರೀತಿಯ ಭಾರ ನನ್ನ ಮೇಲಿದೆ. ಹೀಗಿರಬೇಕಿತ್ತು,ಹಾಗಾಗಬೇಕಿತ್ತು ಎಂದು ಯಾವತ್ತೂ ಅನಿಸಲಿಲ್ಲ. Aim high dream big ಅಂತಾರೆ.ನಾನು ಅಂಥವನಲ್ಲ. ರಾಳಪಲ್ಲಿಯವರು ಹೇಳುವಂತೆ ನನನ್ನ ಕೈಯಲ್ಲಿ ಏನು ಮಾಡುವುದಕ್ಕಾಯ್ತೋ ಅದಕ್ಕೆ ಅಹಂಕಾರ ಬೇಡ, ಏನು ಮಾಡಲಾಗಲಿಲ್ಲವೋ ಅದಕ್ಕೆ ಹಳಹಳಿಕೆ ಬೇಡ ಎನ್ನುವುದು ನನ್ನ ರೂಢಿ.ಹೀಗೆ ಹೇಳುತ್ತಾ ಎಲ್ಲರಿಗೂ ವಂದನೆ ಸಲ್ಲಿಸುತ್ತೇನೆ”ಎಂದರು‌.

ಗೋಖಲೆ ಸಂಸ್ಥೆಯ ಕೊರ್ಗಿ ಶಂಕರನಾರಾಯಣ ಉಪಾಧ್ಯಾಯರು, ರಾಷ್ಟ್ರೀಯ ಸ್ವಯಂಸೇವಕ ಸಂಘದ ಕ್ಷೇತ್ರೀಯ ಸಂಘಚಾಲಕರಾದ ವಿ ನಾಗರಾಜ, ಹಿರಿಯ ಪ್ರಚಾರಕರಾದ ಕಾ.ಶ್ರೀ.ನಾಗರಾಜ, ಮಾಜಿ ವಿಧಾನ ಪರಿಷತ್ ಸದಸ್ಯರಾದ ಎಂ.ಬಿ.ಭಾನುಪ್ರಕಾಶ್, ಚಿಂತಕರಾದ ವಿ.ಬಿ.ಆರತಿ,ಪತ್ರಕರ್ತರಾದ ಸೂರ್ಯಪ್ರಕಾಶ್ ಪಂಡಿತ್ ಇನ್ನಿತರರು ಉಪಸ್ಥಿತರಿದ್ದರು.

Leave a Reply

Your email address will not be published.

This site uses Akismet to reduce spam. Learn how your comment data is processed.