ಪ್ರಭು ಶ್ರೀ ರಾಮಚಂದ್ರನ ಶ್ರೇಷ್ಠ ಭಕ್ತ ಮತ್ತು ಧರ್ಮದ ವಿಜಯಕ್ಕಾಗಿ  ತನ್ನ ಸರ್ವಸ್ವವನ್ನು ಮುಡಿಪಾಗಿಟ್ಟ ಶ್ರೀ ಹನುಮಂತನು ಜನಿಸಿದ ಶುಭ ದಿನವನ್ನು ಹನುಮ ಜಯಂತಿ ಎಂದು ಆಚರಿಸಲಾಗುತ್ತದೆ. ಸಾಮಾನ್ಯವಾಗಿ ಹನುಮ ಜಯಂತಿಯನ್ನು ಚೈತ್ರ ಮಾಸದ ಹುಣ್ಣಿಮೆಯಂದು ಆಚರಿಸಲಾಗುತ್ತದೆ.


ಹನುಮಂತನ ಜೀವನದ ಮೌಲ್ಯಗಳು


ಧೈರ್ಯ: ಶ್ರೀರಾಮನ ಭಕ್ತ, ವಾಯುಪುತ್ರ, ಮಾರುತಿ, ಬಜರಂಗಬಲಿ ಎಂದೇ ಕರೆಯಲ್ಪಡುವ ಹನಮಂತನು ಧೈರ್ಯ ಮತ್ತು ಶಕ್ತಿಯ ಸಂಕೇತ. ತನ್ನ ಶಕ್ತಿ ಮತ್ತು ಧೈರ್ಯದ ಕಾರಣದಿಂದ ದೈತ್ಯ ರಾವಣನ ವಿರುದ್ಧ ಹೋರಾಡಲು, ಶ್ರೀರಾಮನ ಮಡದಿ ಸೀತಾ ಮಾತೆಯನ್ನು ರಕ್ಷಿಸಲು ಸಹಾಯ ಮಾಡಿದನು. ಹೀಗಾಗಿ ಎಂತಹ ಪರಿಸ್ಥಿತಿಯಲ್ಲೂ ಕೆಚ್ಚೆದೆಯಿಂದ ಹೋರಾಡಬೇಕು ಎನ್ನುವುದಕ್ಕೆ ಹನುಮ ನಿದರ್ಶನ.


ಸಾಹಸ ಗುಣ: ಬಾಲ್ಯದಲ್ಲೇ ಸೂರ್ಯನನ್ನು ಕಂಡು ಹಣ್ಣು ಎಂದು ಗಗನಕ್ಕೆ ಹಾರಿದವನು, ಯಾರೂ ಹಾರದ ಉಗ್ರ ಸಮುದ್ರವನ್ನು ಲಂಘಿಸಿ ಸೀತಾ ಮಾತೆಯು ಲಂಕೆಯಲ್ಲೇ ಇರುವಳು ಎನ್ನುವುದನ್ನು ಖಚಿತ ಪಡಿಸಿದವನು, ಯುದ್ಧದ ಸಂದರ್ಭದಲ್ಲಿ ಮೂರ್ಛೆ ತಪ್ಪಿದ್ದ ಲಕ್ಷ್ಮಣ ದೇವನ ಪ್ರಾಣವನ್ನು ಉಳಿಸಲು ಸಂಜೀವಿನಿ ಪರ್ವತವನ್ನೇ ಹೊತ್ತು ತಂದವನು ಹನುಮ.


ಸ್ನೇಹ: ರಾಮ ಮತ್ತು ಹನುಮಂತನ ಸ್ನೇಹ ಜಗತ್ತಿಗೆ ಆದರ್ಶ. ಇಬ್ಬರೂ ಸರ್ವಬಲ, ಸರ್ವಗುಣಗಳಲ್ಲಿ ಶ್ರೇಷ್ಠರಾದವರು. ಆದರೂ ಅವರ ನಡುವೆ ಪರಸ್ಪರ ಇದ್ದ ಗೌರವ, ಆತ್ಮೀಯತೆ, ನಿಸ್ವಾರ್ಥ ಮತ್ತು ನಿಷ್ಕಲ್ಮಶ ಸ್ನೇಹ, ಒಬ್ಬರನ್ನೊಬ್ಬರು ಅರ್ಥೈಸಿಕೊಂಡ ಬಗೆ ಅವರಿಬ್ಬರನ್ನೂ ಆರ್ಶನ ಮಿತ್ರರನ್ನಾಗಿಸಿತು. ಅಷ್ಟೇ ಅಲ್ಲದೇ ಬಾಂಧವ್ಯವನ್ನು ಬೆಸೆಯುವುದು ಹನುಮನ ಗುಣ. ಸುಗ್ರೀವನನ್ನು ರಾಮಲಕ್ಷ್ಮಣರಿಗೆ ಪರಿಚಯ ಮಾಡಿದವನು ಹನುಮ. ತನ್ನ ಎಲ್ಲಾ ಮಿತ್ರರೊಡನೆಯೂ ಆತ್ಮೀಯತೆಯನ್ನು ಹೊಂದಿದ ಹನುಮನ ಗುಣ ಪ್ರೇರಣೀಯ.


ಜ್ಞಾನ: ಹನುಮ ತನ್ನ ಬುದ್ಧಿವಂತಿಕೆ ಮತ್ತು ಪಾಂಡಿತ್ಯಕ್ಕಾಗಿಯೂ ಹೆಸರುವಾಸಿಯಾಗಿದ್ದವನು. ಹನುಮ ಮತ್ತು ರಾಮನ ಮೊದಲ ಭೇಟಿಯಲ್ಲಿಯೇ ಹನುಮನ ವಾಕ್ಪಟುತ್ವ, ವಿನಯ, ಜ್ಞಾನಕ್ಕೆ ರಾಮಲಕ್ಷ್ಮಣರು ಬೆರಗಾಗುತ್ತಾರೆ.  ಇಂದಿನ ಯುವಕರಿಗೆ ನೀತಿ ಪಾಠವಾಗಿದೆ. ಕಷ್ಟಗಳಿಗೆ ಹೆದರದೇ ಸೋಲದೇ ಅದನ್ನು ಎದುರಿಸುವ ಕೆಚ್ಚೆದೆಯನ್ನು ಸ್ಥೈರ್ಯವನ್ನು ಹನುಮಾನ್ ತೋರಿಸಿದವರು.

ಧ್ಯೇಯನಿಷ್ಠ: ಹನುಮ ರಾಮನೆಂಬ ಧ್ಯೇಯಕ್ಕಾಗಿ ಸಂಪೂರ್ಣವಾಗಿ ಶರಣಾಗತನಾದ ಮಹಾನ್ ಧ್ಯೇಯ ನಿಷ್ಠ. ರಾಮೋ ವಿಗ್ರಹವಾನ್ ಧರ್ಮಃ ಎನ್ನುವ ಮಾತಿನಂತೆ ಧರ್ಮದ ಮೂರ್ತರೂಪ ರಾಮನಾಗಿದ್ದನು. ಆತನ ಪ್ರತಿ ಹೆಜ್ಜೆಯಲ್ಲೂ ಜೊತೆಯಲ್ಲಿ ನಿಂತು ಬೆಂಬಲಿಸಿದವನು. ಒಂದು ಧ್ಯೇಯಕ್ಕಾಗಿ ಸಂಪೂರ್ಣವಾಗಿ ಸಮರ್ಪಿಸಿಕೊಂಡ ಹನುಮನ ನಿಷ್ಠೆ ಸದಾ ಪ್ರೇರಣೀಯ.

ಮಾನವೀಯತೆ: ಹನುಮ ಆಜಾನುಬಾಹು, ಬಲಶಾಲಿ. ಆದರೆ ಕಷ್ಟದಲ್ಲಿರುವವರನ್ನು ಕಂಡು ಕರಗುವ ಮಗುಮನಸ್ಸಿನ ವ್ಯಕ್ತಿತ್ವ‌. ತಕ್ಷಣ ಅವರ ಸಹಾಯಕ್ಕೆ ಧಾವಿಸುವ ವ್ಯಕ್ತಿತ್ವ. ಶಕ್ತಿಯನ್ನು ಪಡೆದುಕೊಂಡ ಅನೇಕರು ಅದನ್ನು ದುರುಪಯೋಗಪಡಿಸಿಕೊಳ್ಳುವುದೇ ಹೆಚ್ಚು. ಆದರೆ ಹನುಮ ಶಕ್ತಿವಂತನೂ, ಬಲಾಢ್ಯನೆಂದೆನಿಸಿದ್ದರೂ ಮಾನವೀಯತೆಯನ್ನು  ಕಳೆದುಕೊಳ್ಳಲಿಲ್ಲ. ಪರಿಸ್ಥಿತಿಗೆ ಅನುಗುಣವಾಗಿ ವರ್ತಿಸುತ್ತಾನೆ. ರಾಮನ ದೂತನಾಗಿ, ಸುಗ್ರೀವನ ಸ್ನೇಹಿತನಾಗಿ, ವಾನರವೀರರ ನಾಯಕನಾಗಿ, ರಾವಣನ ಸೇನೆಗೆ ಪ್ರಳಯರುದ್ರನಾಗಿ, ಲಕ್ಷ್ಮಣನ ಪ್ರಾಣವನ್ನು ಉಳಿಸಿದ ಆಪತ್ಬಾಂಧವನಾಗಿ ತನ್ನ ಪಾತ್ರವನ್ನು ನಿರ್ವಹಿಸಿದವನು. ಹೀಗೆ ಸನ್ನಿವೇಷಕ್ಕೆ ತಕ್ಕಂತೆ ನಮ್ಮ ಕರ್ತವ್ಯವನ್ನು ಮಾಡಬೇಕು ಎನ್ನುವುದಕ್ಕೆ ಹನುಮ ಪ್ರೇರಣೆ.

ಇಂದಿನ ಯುವಕರಿಗೂ ಹನುಮ ತನ್ನ ವ್ಯಕ್ತಿತ್ವದ ಮೂಲಕವೇ ಆದರ್ಶವಾಗಿದ್ದಾನೆ. ಸಕಲ ಸಂಕಷ್ಟಗಳನ್ನು ಧೈರ್ಯದಿಂದ ಎದುರಿಸುವ, ಜ್ಞಾನವನ್ನು ಹೆಚ್ಚಿಸಿಕೊಳ್ಳುವ, ಸರ್ವರನ್ನೂ ಸ್ನೇಹದಿಂದ ಕಾಣುವ, ಸಾಮರ್ಥ್ಯ ಹಮ್ಮು-ಬಿಮ್ಮುಗಳಿಲ್ಲದೇ ವಿನಯದಿಂದಿರುವ, ಮಹತ್ವದ ಧ್ಯೇಯವೊಂದಕ್ಕೆ ನಿಷ್ಠರಾಗಿರುವುದಕ್ಕೆ ಹನುಮಂತನೇ ಪ್ರೇರಣೆ.

ಹಾಗಾಗಿಯೇ ಮಂಕುತಿಮ್ಮನ ಕಗ್ಗದಲ್ಲಿ ಡಿ.ವಿ‌.ಜಿ. ಹೀಗೆಂದಿರುವುದು.

ಘನತತ್ತ್ವವೊಂದಕ್ಕೆ ದಿನರಾತ್ರಿ ಮನಸೋತು |

ನೆನೆಯದಿನ್ನೊಂದನೆಲ್ಲವ ನೀಡುತದರಾ ||

ಅನುಸಂಧಿಯಲಿ ಜೀವಭಾರವನು ಮರೆಯುವುದು |

ಹನುಮಂತನುಪದೇಶ – ಮಂಕುತಿಮ್ಮ ||

Leave a Reply

Your email address will not be published.

This site uses Akismet to reduce spam. Learn how your comment data is processed.