

ಬೆಂಗಳೂರು: ನಾಯಕನಾದವನು ಕೇವಲ ಹಿಂಬಾಲಕರನ್ನು ಸೃಷ್ಟಿಸುತ್ತಾನೆ ಆದರೆ ಉತ್ತಮ ನಾಯಕನಾದವನು ನಾಯಕರನ್ನು ಸೃಷ್ಟಿಸುತ್ತಾರೆ. ಅಂತಹ ನಾಯಕರಾಗಲು ಹಲವು ಮೌಲ್ಯಗಳನ್ನು ಅವರು ತಮ್ಮ ವ್ಯಕ್ತಿತ್ವದಲ್ಲಿ ಅಳವಡಿಸಿಕೊಳ್ಳಬೇಕು. ಅಂತಹ ಮೌಲ್ಯಾಧಾರಿತ ನಾಯಕರನ್ನು ಸೃಷ್ಟಿಸುವ ವಾತಾವರಣ ಮನೆ, ವಿದ್ಯಾಸಂಸ್ಥೆಗಳು ಮತ್ತು ಸಮಾಜದಲ್ಲಿ ಆಗುವಂತೆ ನಾವೆಲ್ಲರೂ ಶ್ರಮವಹಿಸಬೇಕು ಎಂದು ಆರ್ವಿ ವಿದ್ಯಾಸಂಸ್ಥೆಗಳ ನಿರ್ದೇಶಕ ಡಾ. ಟಿ.ವಿ. ರಾಜು ಹೇಳಿದರು.
ದಿಶಾ ಭಾರತ್ ಸಂಸ್ಥೆಯ ‘ನನ್ನ ಭಾರತ’ ಅಭಿಯಾನದ ಅಂಗವಾಗಿ ಬೆಂಗಳೂರಿನ ಜಯನಗರದ ಆರ್ವಿ ಕಾನೂನು ಕಾಲೇಜಿನ ಶಾಶ್ವತಿ ಸಭಾಂಗಣದಲ್ಲಿ ನಡೆದ ರಾಜ್ಯಮಟ್ಟದ ವಿಚಾರ ಸಂಕಿರಣವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಭಾರತದಲ್ಲಿ ಶೇ.50ರಷ್ಟು ಮಂದಿ 25 ವರ್ಷದೊಳಗಿನ ಯುವಕರಿದ್ದಾರೆ. ಅದರಲ್ಲಿ ಪ್ರತಿ ಯುವಕರಲ್ಲೂ ಅಗಾಧವಾದ ಕೊಡುಗೆಗಳನ್ನು ನೀಡಲು ಸಾಮರ್ಥ್ಯವನ್ನು ಹೊಂದಿದ್ದಾರೆ. ಕೇವಲ ಉದ್ಯೋಗಿಗಳಾಗಿರದೇ ಉದ್ಯೋಗದಾತರಾಗುವ ಬೌದ್ಧಿಕ ಶ್ರೀಮಂತತೆ ನಮ್ಮ ಯುವಜನರಿಗಿದೆ. ಅವರಿಗೆ ಸರಿಯಾದ ಶಿಕ್ಷಣ, ಉದ್ಯೋಗ ಸೃಷ್ಟಿ ಮತ್ತು ಉದ್ಯೋಗಾವಕಾಶ, ತಂತ್ರಜ್ಞಾನದ ಬಳಕೆ ಮತ್ತು ಸಾಮಾಜಿಕ ಜವಾಬ್ದಾರಿಯ ಕುರಿತು ಮಾರ್ಗದರ್ಶನ ಮಾಡಿದರೆ ಬಲಿಷ್ಠ ರಾಷ್ಟ್ರವನ್ನು ಕಟ್ಟುವಲ್ಲಿ ಅವರು ಅದ್ಭುತ ಕೆಲಸ ಮಾಡುತ್ತಾರೆಂಬ ನಂಬಿಕೆ ನನಗಿದೆ ಎಂದು ನುಡಿದರು.
ಶಿಕ್ಷಣ ಕ್ಷೇತ್ರದ ಕುರಿತು ಹಲವಾರು ಆರೋಪಗಳು ಇರುವ ಸಮಯದಲ್ಲೇ ವಿದ್ಯಾರ್ಥಿಗಳಿಗೆ ನಾವು ಎಂತಹ ಶಿಕ್ಷಣವನ್ನು ನೀಡುತ್ತಿದ್ದೇವೆ ಎಂಬ ಪ್ರಶ್ನೆಯನ್ನು ಕೇಳಿಕೊಳ್ಳಬೇಕಾಗುತ್ತದೆ. ಯುವಕರ ಪ್ರತಿಭೆಯನ್ನು ಪೋಷಿಸುವಲ್ಲಿ ಶಿಕ್ಷಣದ ಗುಣಮಟ್ಟ ಮುಖ್ಯವಾಗುತ್ತದೆ. ಈ ನಿಟ್ಟಿನಲ್ಲಿ ನಡೆದ ಪ್ರಯತ್ನವಾದ ರಾಷ್ಟ್ರೀಯ ಶಿಕ್ಷಣ ನೀತಿ ಭಾರತಕ್ಕೆ ಉತ್ತಮ ಭವಿಷ್ಯವನ್ನು ಸೃಷ್ಟಿಸುವ ಧ್ಯೇಯದೊಂದಿಗೆ ಜಾರಿಯಾಗಿದೆ.

ಭಾರತೀಯ ಯುವಕರು ಸೃಜನಶೀಲರಾಗಿದ್ದಾರೆ. ಅಂತಹ ಕ್ರಿಯಾಶೀಲ ಮನಸ್ಸುಗಳಿಗಾಗಿಯೇ ಕೇಂದ್ರ ಸರ್ಕಾರ ಸ್ಟರ್ಟ್ ಅಪ್ ಇಂಡಿಯಾ, ಸ್ಕಿಲ್ ಇಂಡಿಯಾ ಮೊದಲಾದ ಯೋಜನೆಗಳನ್ನು ಜಾರಿಗೊಳಿಸಿದೆ. ವಿನೂತನ ಆಲೋಚನೆಗಳುಳ್ಳ ಯುವಕರು ತಂತ್ರಜ್ಞಾನವನ್ನು ಸಮರ್ಥವಾಗಿ ಬಳಸಿಕೊಂಡು ಸರ್ಕಾರದ ಯೋಜನೆಗಳನ್ನು ಸಮರ್ಪಕ ಉಪಯೋಗ ಮಾಡಿಕೊಂಡು ಸದೃಢ ರಾಷ್ಟç ನಿರ್ಮಾಣಕ್ಕೆ ಮುಂದಾಗಬೇಕು ಎಂದರು.

ಕಾರ್ಯಕ್ರಮದಲ್ಲಿ ಮಾತನಾಡಿದ ದಿಶಾಭಾರತದ ಮಾಗದರ್ಶನ ಮಂಡಲಿಯ ಸದಸ್ಯ ಡಾ.ಗಣೇಶ ಭಟ್ಟ ಯುವಕರು ಇಂದು ತಮ್ಮನ್ನು ತಾವು ಅರ್ಥ ಮಾಡಿಕೊಳ್ಳಬೇಕಾದ ಅನಿವಾರ್ಯ ಪರಿಸ್ಥಿತಿ ಇದೆ. ನಮ್ಮ ಜೀವನವನ್ನು ಉತ್ತಮಗೊಳಿಸಿಕೊಳ್ಳಲು ಯಾವುದನ್ನು ನಾವು ಒಪ್ಪಿಕೊಳ್ಳಬೇಕು, ಯಾವುದನ್ನು ತ್ಯಜಿಸಬೇಕು ಎಂಬ ವಿವೇಚನೆ ಯುವಕರಿಗಿರಬೇಕು. ಅಧ್ಯಯನಶೀಲರಾಗಿ, ತಂತ್ರಜ್ಞಾನದ ಮೂಲಕ ಇರುವಂತಹ ಅವಕಾಶಗಳನ್ನು ಸಮರ್ಥವಾಗಿ ಬಳಸಿಕೊಂಡು, ಮಾಡುವ ಕೆಲಸವನ್ನು ಕಿರಿದೆನ್ನದೆ ನಿಷ್ಠೆಯಿಂದ ಮಾಡಬೇಕು ಎಂದರು.

ಮೂರು ಅವಧಿಗಳಲ್ಲಿ ನಡೆದ ವಿಚಾರ ಸಂಕಿರಣದ ಮೊದಲ ಅವಧಿಯಲ್ಲಿ ಹಿರಿಯ ವಕೀಲ ಡಾ.ಅರುಣ ಶ್ಯಾಮ್, ಆಳ್ವಾಸ್ ಫೌಂಡೇಶನ್ನ ಆಡಳಿತ ಮಂಡಳಿಯ ವಿಶ್ವಸ್ಥ ವಿವೇಕ್ ಆಳ್ವ ಮಾತನಾಡಿದರು.




ಎರಡನೇ ಅವಧಿಯಲ್ಲಿ ಕರ್ನಾಟಕ ಕೌಶಲ್ಯ ಅಭಿವೃದ್ಧಿ ನಿಗಮದ ವ್ಯವಸ್ಥಾಪಕ ನಿರ್ದೇಶಕ ಅಶ್ವಿನ ಡಿ. ಗೌಡ ಹಾಗೂ ಚಾಯ್ ಪಾಯಿಂಟ್ ಸಂಸ್ಥೆಯ ಸಹ ಸಂಸ್ಥಾಪಕ ನಿಕುಂಜ್ ಗುಪ್ತ ನೈತಿಕ ನಾಯಕತ್ವದ ಸವಾಲುಗಳು ಎಂಬ ವಿಷಯದ ಕುರಿತು ಸಂವಾದದಲ್ಲಿ ಭಾಗವಹಿಸಿದರು.



ಮೂರನೇ ಅವಧಿಯಲ್ಲಿ ಸ್ವಾಮಿ ವಿವೇಕಾನಂದ ಯೂಥ್ ಮೂಮೆಂಟ್ ಸಂಸ್ಥೆಯ ಸಿಇಒ ಕಛೇರಿಯ ಹಿರಿಯ ಮ್ಯಾನೇಜರ್ ಸಂದೀಪ್ ವಸಿಷ್ಠ, ಶ್ರೀ ಸತ್ಯ ಸಾಯಿ ವಿಶ್ವವಿದ್ಯಾನಿಲಯದ ಶ್ರೀನಿಕೇತ್ ಲಕ್ಕುರ್, ದಿಶಾ ಭಾರತ್ ಸಂಸ್ಥೆಯ ಸಂಸ್ಥಾಪಕಿ ರೇಖಾ ರಾಮಚಂದ್ರನ್ ನೈತಿಕ ನಾಯಕತ್ವವನ್ನು ಪೋಷಿಸುವಲ್ಲಿ ತಮ್ಮ ಸಂಸ್ಥೆಗಳು ವಹಿಸುತ್ತಿರುವ ಪಾತ್ರವನ್ನು ಪ್ರಸ್ತುತ ಪಡಿಸಿದರು.



ಸಮಾರೋಪ ಸಮಾರಂಭದಲ್ಲಿ ಮಾತನಾಡಿದ ವಿಭು ಅಕಾಡೆಮಿಯ ಸಂಸ್ಥಾಪಕಿ ಡಾ.ಆರತಿ ವಿ. ಬಿ ಅವರು ಇತ್ತೀಚೆಗೆ ಭಾರತದ ನೂತನ ಸಂಸತ್ ಭವನದಲ್ಲಿ ಇಡಲಾದ ಧರ್ಮದಂಡ ನೈತಿಕ ನಾಯಕತ್ವದ ಸಂಕೇತವಾಗಿದೆ. ನಾಯಕನಾದವನಿಗೆ ತ್ಯಾಗಪ್ರಧಾನ ಧರ್ಮ ಪ್ರಜ್ಞೆ ಇರಬೇಕು. ಅದು ಸಮಷ್ಟಿಯ ಒಳಿತನ್ನು ಒಳಗೊಂಡಿರಬೇಕು. ನಮ್ಮ ದಾರಿಯನ್ನು ತಪ್ಪಿಸುವ ಅನೇಕ ಪ್ರಯತ್ನಗಳು ನಮ್ಮ ದೇಶದೊಳಗೆ ಮತ್ತು ಹೊರಗೆ ನಡೆಯುತ್ತಿರುವಾಗ ಅವುಗಳ ಚಿಕ್ಕ ಕಿಡಿಯೂ ಉಳಿಯದಂತೆ ನಾಶ ಮಾಡುವ ಶಕ್ತಿ ನಾಯಕನಲ್ಲಿರಬೇಕು ಎಂದು ನುಡಿದರು.





