ಮಹಾರಾಷ್ಟ್ರದ ಪ್ರವಾಸದಲ್ಲಿ ರಾಷ್ಟ್ರೀಯ ಸ್ವಯಂಸೇವಕ ಸಂಘದ ಸ್ಥಾಪಕರಾದ ಡಾಕ್ಟರಜಿಯವರು ಕೊಲ್ಲಾಪುರಕ್ಕೆ ಬಂದಿದ್ದ ಸಂದರ್ಭ ಅಲ್ಲಿ ಸಂಘದ ಕಾರ್ಯಕ್ರಮಕ್ಕೆ ಅತಿರಿಕ್ತವಾಗಿ ನಗರದ ವೈದ್ಯರ ಸಮಿತಿಯೊಂದು ಅವರನ್ನು ವಿಶೇಷ ಕಾರ್ಯಕ್ರಮವೊಂದನ್ನು ಏರ್ಪಡಿಸಿ ಸತ್ಕರಿಸಿತು. ಇದರಲ್ಲಿ ಡಾಕ್ಟರಜಿಯವರು ಕೆಲವೇ ಶಬ್ದಗಳಲ್ಲಿ ಸಂಘದ ಪರಿಚಯ ಮಾಡಿಸಿದ ನಂತರ ಮುಕ್ತ ಚರ್ಚೆಗೆ ಅವಕಾಶ ಒದಗಿಸಿದರು. ಈ ಚರ್ಚೆಯಲ್ಲಿ ನಗರದ ಓರ್ವ ವೈದ್ಯರು ಓರ್ವಅನಾಥ ಹಿಂದು ಮಹಿಳೆಯ ಕರುಣಕತೆಯನ್ನು ತಿಳಿಸಿ ಆಕೆಗೆ ಸಂಘವು ಹೇಗೆ ನೆರವಾಗಬಲ್ಲದು?’ ಎಂದು ಪ್ರಶ್ನಿಸಿದರು.
ಅದಕ್ಕುತ್ತರವಾಗಿ ಡಾಕ್ಟರಜಿಯವರು “ಸದ್ಯಕ್ಕಂತೂ ಏನೂ ಮಾಡಲಾರದು. ಆದರೆ ಈ ಕೆಲಸದ ಹೊಣೆ ವಹಿಸಲು ನೀವು ತಯಾರಿದ್ದಲ್ಲಿ, ವೈಯಕ್ತಿಕವಾಗಿ ನಾನು ಸಹ ಒಂದಿಷ್ಟು ನೆರವಾಗಬಲ್ಲೆ” ಎಂದರು. “ಹಾಗಿದ್ದಲ್ಲಿ ನಿಮ್ಮ ಸಂಘ ಇರುವುದೇಕೆ? ನೀವು ಮಾಡುವುದಾದರೂ ಏನು?” ಎಂದು ತುಸು ಅಸಮಾಧಾನವನ್ನೇ ಅವರು ಪ್ರಕಟಿಸಿದರು.
ಆಗ ಡಾಕ್ಟರಜಿಯವರು ತುಸು ನಗುತ್ತ “ನೀವು ಹೇಳಿರುವುದು ನೀವು ಸ್ವತಃ ತಿಳಿದಿರುವ ಸಂಗತಿಯಲ್ಲವೇ? ಕ್ಷಣ ಕಾಲ ಯೋಚಿಸಿ, ಒಂದು ಮನೆಗೆ ಬೆಂಕಿ ಬಿದ್ದಾಗ, ಕೆಲವರು ಅಲ್ಲಿದ್ದವರನ್ನು ಬಚಾಯಿಸುವ ಪ್ರಯತ್ನದಲ್ಲಿ ತೊಡಗುತ್ತಾರೆ. ಆಗ ಯಾರೋ ಇನ್ನೊಬ್ಬರು ಬಂದು “ನೋಡಿ ಅಲ್ಲಿ ಜಗಲಿಯಲ್ಲಿನ ಒಂದು ಜಂತಿ ಹೊತ್ತಿ ಉರಿಯುತ್ತಿದೆ. ಮೊದಲು ಅದನ್ನು ಉಳಿಸಿ. ಅದನ್ನು ಮಾಡದಿದ್ದಲ್ಲಿ ನಿಮ್ಮ ಪರಿಶ್ರಮವೆಲ್ಲ ವ್ಯರ್ಥ” ಎಂದರೆ ಹೇಗಾದೀತು? ಸಮಸ್ಯೆ ಜಗಲಿಯಲ್ಲಿನ ಒಂದು ಜಂತಿ ಉರಿಯುವುದಷ್ಟೇ ಅಲ್ಲ, ಇಡೀ ಮನೆಯೇ ಉರಿಯುತ್ತಿರುವುದು.”
“ಅದೇ ರೀತಿಯಲ್ಲಿ ಸಂಕಷ್ಟಕ್ಕೊಳಗಾಗಿರುವುದು ಇಡೀ ಹಿಂದು ಸಮಾಜವೇ, ಕೇವಲ ಯಾರೋ ಒಬ್ಬಳು ಅನಾಥ ಮಹಿಳೆಯಷ್ಟೇ ಅಲ್ಲ. ಸಂಘವು ಕೈಗೆತ್ತಿಕೊಂಡಿರುವ ಕೆಲಸ ಸಂಪೂರ್ಣ ಸಮಾಜದ ಜಾಗೃತಿಯದು, ಅದರ ರಕ್ಷಣೆಯದು. ಆದರೆ ಯಾರಿಗಾದರೂ ಇನ್ನಾವುದೋ ಸಣ್ಣ ಸಮಸ್ಯೆಯೊಂದು ಲಕ್ಷಕ್ಕೆ ಬಂದು, ಅದೇ ಗಂಭೀರವೆನಿಸಿ, ಅದಕ್ಕಾಗಿ ಮನ ತಳಮಳಿಸುತ್ತಿದ್ದಲ್ಲಿ ಅದನ್ನು ಸರಿಪಡಿಸಲು ಅವರು ಸ್ವತಃ ಮುಂದಾಗಬೇಕು. ಸಂಘವಂತೂ ಒಟ್ಟು ಹಿಂದು ಸಮಾಜವನ್ನು ಎಚ್ಚರಿಸಿ ಸಂಘಟಿಸುವ ಕೆಲಸವನ್ನು ಕೈಗೆತ್ತಿಕೊಂಡಿದೆ. ಎಲ್ಲ ಕೆಲಸಗಳನ್ನು ಸಂಘವೇ ಮಾಡಬೇಕೆಂದೇನಿಲ್ಲ. ನಾವು ಮಾಡುವ ಕೆಲಸ ಸಂಘವು ಏನು ಮಾಡುತ್ತದೆ ಎಂದು ಕೇಳುವ ಅಗತ್ಯವೇ ಉಂಟಾಗದಂತಹ ಸ್ಥಿತಿಯನ್ನು ಸಮಾಜದಲ್ಲಿ ರೂಪಿಸುವುದು ಅಷ್ಟೇ.” ಈ ಉತ್ತರ ಅಲ್ಲಿದ್ದವರೆಲ್ಲರಿಗೆ ಸರಿಯೆನಿಸಿತು.
ಕೃಪೆ : ಸ್ಮೃತಿ ಮಂದಾರ, ಸಾಹಿತ್ಯ ಸಂಗಮ