ನಿನ್ನೆ ನಡೆದ ರಾಷ್ಟ್ರಪತಿ ಚುನಾವಣೆಯಲ್ಲಿ ದ್ರೌಪದಿ ಮುರ್ಮು ಅವರು ರಾಷ್ಟ್ರಪತಿಯಾಗಿ ಆಯ್ಕೆಯಾಗಿದ್ದಾರೆ.ಅವರನ್ನು ಎನ್ ಡಿ ಎ ಮೈತ್ರಿಕೂಟ ಅಭ್ಯರ್ಥಿಯಾಗಿ ಆಯ್ಕೆ ಮಾಡಿದಾಗ ಅನೇಕ ಮಾಧ್ಯಮಗಳಲ್ಲಿ ಇದೊಂದು ಪೊಲಿಟಿಕಲ್‌ ಮಾಸ್ಟರ್‌ ಸ್ಟ್ರೋಕ್‌ ಎಂಬ ಚರ್ಚೆ ಆರಂಭವಾಯಿತು. ಆದರೆ ಇದೆಲ್ಲದರ ಆಚೆಗೆ ಮೆರಿಟ್‌ನ ದೃಷ್ಟಿಯಿಂದ ಮತ್ತು ಸಾಮಾಜಿಕ ನ್ಯಾಯದ ದೃಷ್ಟಿಯಿಂದ ದ್ರೌಪದಿ ಮುರ್ಮು ಅವರ ಆಯ್ಕೆ ಭಾರತದ ಪ್ರಜಾಪ್ರಭುತ್ವಕ್ಕೆ ಅತ್ಯಂತ ವಿಶೇಷವಾದ ಸ್ಥಾನಮಾನವನ್ನು ದೊರಕಿಸಿಕೊಡುತ್ತಾ ನಿಜಾರ್ಥದಲ್ಲಿ ಪ್ರಜಾತಂತ್ರ ವ್ಯವಸ್ಥೆಯ ಕಾರ್ಯರೂಪಕ್ಕೊಂದು ರೂಪುರೇಷೆಯಾಗಿತ್ತು ಎಂದರೆ ಅತಿಶಯೋಕ್ತಿಯಲ್ಲ.

ಅನೇಕ ಬಾರಿ ರಾಷ್ಟ್ರಪತಿಗಳೆಂದರೆ ರಾಜಕಾರಣಿಗಳ ಸನ್ನೆಗೆ ಕುಣಿಯುವ ಬೊಂಬೆಗಳು, ರಬ್ಬರ್‌ ಸ್ಟಾಂಪ್‌, ನಾಂ ಕೆ ವಾಸ್ಥೆ ಎನ್ನುವ ಸಂದರ್ಭಗಳು ಸ್ವತಂತ್ರ ಭಾರತದ ಇತಿಹಾಸದಲ್ಲಿ ನಡೆದುಹೋಗಿವೆ. ಆದರೆ ಇವೆಲ್ಲಕ್ಕೂ ಅಪಚಾರವೆಂಬಂತೆ ಡಾ.ಎಪಿಜೆ ಅಬ್ದುಲ್‌ ಕಲಾಮ್‌, ಪ್ರಣಬ್‌ ಮುಖರ್ಜಿ ಮುಂತಾದವರು ಆ ಖುರ್ಚಿಯಲ್ಲಿ ಕೂತು ದೇಶವನ್ನು ಸರಿಯಾದ ದಿಸೆಯಲ್ಲಿ ಮುನ್ನಡೆಸುವ ಪ್ರಯತ್ನವನ್ನು ಮಾಡಿದ್ದಾರೆ,ಮಾತ್ರವಲ್ಲದೆ ರಾಷ್ಟ್ರಪತಿ ಹುದ್ದೆಯ ಘನತೆಯನ್ನು ಹಿಗ್ಗಿಸಿದ್ದಾರೆ.

ಈ ಹಿಂದೆ ಪರಿಶಿಷ್ಟ ಜಾತಿಗೆ ಸೇರಿದ್ದ ಕೋಳಿ ಸಮುದಾಯದ ಅತ್ಯಂತ ಬಡತನದ ಹಿನ್ನೆಲೆಯಿಂದ ಬಂಧಿದ್ದ ರಾಮನಾಥ್‌ ಕೋವಿಂದ್‌ ಅವರು ರಾಷ್ಟ್ರಪತಿಯಾಗಿ ದೇಶವನ್ನು ಅತ್ಯಂತ ಸಮರ್ಥವಾಗಿ ಮುನ್ನಡೆಸಿದ್ದರು.

 ಇದೀಗ ಪಶ್ಚಿಮೀ ಓಡಿಸ್ಸಾದ ವನವಾಸಿ ಸಮುದಾಯವಾದ ಸಂಥಾಲ್‌ ಸಮಾಜದಿಂದ ಅತ್ಯಂತ ತಳಮಟ್ಟದಿಂದ ಹೋರಾ ನಡೆಸಿ ಬದುಕನ್ನು ಕಟ್ಟಿಕೊಂಡು ತನ್ನ ಸಮಾಜವನ್ನು ಮುನ್ನಡೆಸಿಕೊಂಡು ಅಭಿವೃದ್ದೀಯೆಡೆಗೆ, ಸಮಾಜದ ಮುಖ್ಯ ವಾಹಿನಿಯ ಕಡೆಗೆ ಕರೆದೊಯ್ಯುವ ಪ್ರಯತ್ನ ಮಾಡಿದ ದಕ್ಷ ಮಹಿಳೆ ದ್ರೌಪದಿ ಮುರ್ಮು ಅವರು ಆಯ್ಕೆಯಾಗಿದ್ದಾರೆ. ಒಂದರ್ಥದಲ್ಲಿ ಉಪೇಕ್ಷಿತ, ಅಲಕ್ಷಿತ ಸಮುದಾಯದಿಂದ ಬಂದು, ತಮ್ಮ ಸಾಮರ್ಥ್ಯದ ಬಲದ ಆಧಾರದ ಮೇಲೆ ಅನ್ಯನ್ಯ ಜವಾಬ್ದಾರಿ ನಿರ್ವಹಿಸಿದ ಮುರ್ಮು ಅವರ ಆಯ್ಕೆ ದೇಶದ ಎಲ್ಲ ವನವಾಸಿಗಳ ಅನೇಕ ಶತಮಾನಗಳ ಹೋರಾಟಕ್ಕೆ, ಅವರ ಕೊಡುಗೆಗೆ ಸಂದ ಗೌರವ.

ನ್ಯಾಯವಾಗಿ ಭಾರತದ ಪ್ರತಿಯೊಬ್ಬ ಪ್ರಜೆಗೂ ಸಮಾನವಾಗಿ ಸಿಗಬೇಕಾದ ಅಧಿಕಾರದ ಹಕ್ಕು ಕೆಲವೇ ಕೆಲವು ಕುಟುಂಬಗಳ, ಪಕ್ಷಗಳ, ಕೆನೆಪದರದಲ್ಲಿದ್ದ ಮಂದಿಯ ಕಪಿಮುಷ್ಠಿಯಿಂದ ಹೊರಬಂದು ಸಮಾಜದ ಕಟ್ಟಕಡೆಯ ವ್ಯಕ್ತಿಯೂ ಕೂಡ ತನ್ನ ಕೌಟುಂಬಿಕ ಹಿನ್ನೆಲೆ, ಹಣಕಾಸು ಪರಿಸ್ಥಿತಿ, ಸಾಮಾಜಿಕ ಅಸಮಾನತೆಯ ಪ್ರವಾಹದ ವಿರುದ್ಧ ಈಜುತ್ತಾ ಮೇಲೇರಿ ಬರುವ ಅವಕಾಶವನ್ನು ಪ್ರಜಾತಂತ್ರ ವ್ಯವಸ್ಥೆಯು ಅತ್ಯಂತ ಅಚ್ಚುಕಟ್ಟಾಗಿ ನೀಡಿದೆ. ಆದರೆ ನಿಜ ಪ್ರಜಾಪ್ರಭುತ್ವದ ಬಗೆಗೆ ದೂರದೃಷ್ಟಿಯುಳ್ಳ ವ್ಯಕ್ತಿಗಳು, ಮತ್ತು ಸ್ವಾರ್ಥ ಬಿಟ್ಟು ರಾಷ್ಟ್ರೀಯ ಹಿತಾಸಕ್ತಿಯ ಚಿಂತನೆಯಿರುವ ವ್ಯಕ್ತಿಗಳ ಕೈಯಲ್ಲಿ ಈ ರೀತಿಯ ವ್ಯವಸ್ಥೆಯ ಚುಕ್ಕಾಣಿ ಬಂದಾಗ ಮಾತ್ರವೇ ಅದು ಕಾರ್ಯರೂಪಕ್ಕೆ ಬರಲು ಸಾಧ್ಯ ಎಂಬುದು ಗೋಚರವಾಗುತ್ತದೆ.

ಸ್ವಾತಂತ್ರ್ಯಾ ನಂತರದಲ್ಲಿ ಪರಿಶಿಷ್ಟ ಜಾತಿ, ಪಂಗಡ, ವನವಾಸೀ, ಆದಿವಾಸಿ, ಹಿಂದುಳಿದ ವರ್ಗಗಳು ಹೀಗೆ ತಳ ಸಮುದಾಯವನ್ನು ಕೇವಲ ಅದರ ಅಭ್ಯುದಯದ ಹೆಸರಿನ ರಾಜಕೀಯದಲ್ಲೇ ಕಳೆದುಹೋಯಿತೇ ವಿನಃ ಸಮಾಜದ ಮುಖ್ಯವಾಹಿನಿಗೆ ಅವರನ್ನು ಜೋಡಿಸುವ ಕೆಲಸ ಆಗದೆ ಹೋದದ್ದು ವಿಷಾದನೀಯ. ಪ್ರಜಾಪ್ರಭುತ್ವದ ಪರಿಕಲ್ಪನೆ ಭಾರತಕ್ಕೇನೂ ಹೊಸದಲ್ಲ. ಗುಪ್ತ ಮೌರ್ಯರ ಕಾಲದಲ್ಲಿದ್ದ ಜನಪದಗಳು, ನಂತರ ಬಂದ ಬೌದ್ಧ ಭಿಕ್ಷುಗಳ ನಡುವಣ ಪ್ರಜಾಪ್ರಭುತ್ವದ ಅಂಶಗಳು, ಅನುಭವ ಮಂಟಪದಲ್ಲಿ ಆಧ್ಯಾತ್ಮಿಕ ನೆಲೆಗಟ್ಟಿನಲ್ಲಿ ರೂಪುಗೊಂಡ ಪ್ರಜಾಪ್ರಭುತ್ವದ ವ್ಯವಸ್ಥೆ ಇವೆಲ್ಲವನ್ನೂ ಗಮನಿಸಿದರೆ ಇಲ್ಲೆಲ್ಲೂ ಸಹ ಯಾವುದೇ ಪಂಗಡವನ್ನೂ ಸಮುದಾಯವನ್ನೂ ಹೊರಗಿಟ್ಟ ಪ್ರಕರಣಗಳು ಕಾಣುವುದಿಲ್ಲ. ಈ ಸನಾತನ ಇತಿಹಾಸದ ನೆಲೆಗಟ್ಟಿನಲ್ಲಿ ರೂಪುಗೊಂಡ ಮೌಲ್ಯಗಳನ್ನು ಪುನರ್‌ ಪ್ರತಿಷ್ಠಾಪಿಸುವ ಅತ್ಯಂತ ಸಮರ್ಥವಾದ ಪ್ರಯೋಗಗಳು ಸದ್ಯದ ಪ್ರಜಾಪ್ರಭುತ್ವದ ವ್ಯವಸ್ಥೆಯಲ್ಲಿ ನಡೆಯುತ್ತಿದೆ ಎನ್ನುವುದು ಸಮಾಧಾನಕರವಾದ ಅಂಶ.

ಅನೇಕ ಬಾರಿ ಪರಿಶಿಷ್ಟ ಜಾತಿ, ಪರಿಶಿಷ್ಟ ವರ್ಗ, ಆದಿವಾಸಿಗಳಿಗೆ ತಮ್ಮ ಹಕ್ಕುಗಳನ್ನು ಪಡೆದುಕೊಳ್ಳುವ ಸಲುವಾಗಿ ಕಮ್ಯೂನಿಸ್ಟ್‌ ವಿಚಾರಧಾರೆಯನ್ನು ತುಂಬಿ ವ್ಯವಸ್ಥೆಯ ವಿರುದ್ಧ ಹೋರಾಟ ನಡೆಸುವ, ಮುಗ್ಧ ಯುವಜನರ ಕೈಗೆ ಹಕ್ಕುಗಳ ನೆಪದಲ್ಲಿ ಬಂದೂಕುಗಳನ್ನು ಕೊಟ್ಟು ನಕ್ಸಲ್‌ ಆಂದೋಲನವನ್ನು ನಡೆಸುವ, ಮತ್ತು ಆ ಮೂಲಕ ಸಮಾಜವನ್ನು, ದೇಶವನ್ನು ಒಡೆಯುವ ಸಂಚು ರೂಪಿಸಿ, ಇದ್ಯಾವುದರ ಅರಿವಿಲ್ಲದ ಬಡ, ಆದಿವಾಸಿ, ಹಿಂದುಳಿದ ವರ್ಗದ ಮಕ್ಕಳನ್ನು ಸಮಾನತೆಯ ಹೆಸರಿನಲ್ಲಿ ವ್ಯವಸ್ಥೆಯ ವಿರುದ್ಧ ಎತ್ತಿಕಟ್ಟುವುದಕ್ಕಿಂತ ಸಂವಿಧಾನಬದ್ಧವಾಗಿ ಶಿಕ್ಷಣದ ಮೂಲಕ ಮೇಲೆತ್ತಿ ಬೆಳೆಯುವ ವ್ಯವಸ್ಥೆ ರೂಪಿಸಿ ರಾಷ್ಟ್ರದ ಅತ್ಯುನ್ನತ ಸ್ಥಾನದಲ್ಲಿ ನೋಡುವುದು ಭಾರತದ ಆರೋಗ್ಯಕರವಾದ ಪ್ರಜಾಪ್ರಭುತ್ವಕ್ಕೊಂದು ಮಾದರಿ.  ಈ ನಿಟ್ಟಿನಲ್ಲಿ ದ್ರೌಪದಿ ಮುರ್ಮು ಅವರ ಆಯ್ಕೆ ಪ್ರಜಾಪ್ರಭುತ್ವದ ಆರೋಗ್ಯಕರವಾದ ಬೆಳವಣಿಗೆಯ ನಿಟ್ಟಿನಲ್ಲಿ ಅತ್ಯಂತ ಮಹತ್ವದ ಹೆಜ್ಜೆಯೆಂದರೆ ತಪ್ಪಾಗಲಿಕ್ಕಿಲ್ಲ.

Leave a Reply

Your email address will not be published.

This site uses Akismet to reduce spam. Learn how your comment data is processed.