ನೇರ ನೋಟ: ದು.ಗು.ಲಕ್ಷ್ಮಣ

ಪರಪ್ಪನ ಅಗ್ರಹಾರದಲ್ಲಿ ಬಂಧಿತನಾಗಿರುವ ಮದನಿಗೆ ಕೊಂಚ ಕಾಲು ನೋವಾದರೂ ತಕ್ಷಣ ತಜ್ಞ ವೈದ್ಯರ ತಂಡ ಧಾವಿಸಿ ಬರುತ್ತದೆ. ಆತನನ್ನು ಕಾಡದಿರುವ ಖಾಯಿಲೆಗಳ ಪತ್ತೆಗೆ ಇನ್ನಿಲ್ಲದಂತೆ ಆ ತಂಡ ಶ್ರಮಿಸುತ್ತದೆ! ಆದರೂ ಮದನಿಗೆ ಸೂಕ್ತ ಚಿಕಿತ್ಸೆ ದೊರೆಯುತ್ತಿಲ್ಲವೆಂದು ಆತನ ಅನುಯಾಯಿಗಳು ಹೊರಗೆ ಬೊಬ್ಬೆ ಹೊಡೆಯುತ್ತಾರೆ. ಸಾಧ್ವಿ ಪ್ರಜ್ಞಾಸಿಂಗ್ ಕ್ಯಾನ್ಸರ್ ಪೀಡಿತಳಾಗಿ ಈಗಲೋ ಆಗಲೋ ಎಂಬ ಜೀವಚ್ಛವ ಸ್ಥಿತಿಗೆ ತಲುಪಿದ್ದರೂ ಜೈಲು ಅಧಿಕಾರಿಗಳಿಗಾಗಲಿ, ಸರ್ಕಾರಕ್ಕಾಗಲಿ ಯಾವುದೇ ಕರುಣೆ ಉಕ್ಕುತ್ತಿಲ್ಲ. ಸಾಧ್ವಿ ಪ್ರಜ್ಞಾಸಿಂಗ್ ಒಬ್ಬ ಹಿಂದು ಎನ್ನುವುದೊಂದೇ ಇದಕ್ಕೆ ಕಾರಣ.

 Sadhvi Prajna Singh 2

ಳೆ ನಿಂತರೂ ಮಳೆಯ ಹನಿ ನಿಂತಿಲ್ಲವೆಂಬಂತೆ ಕೆಲವು ಬುದ್ಧಿಜೀವಿಗಳು (ಅವರನ್ನು ಬುದ್ಧಿಗೇಡಿಗಳೆಂದು ನೀವು ತಿದ್ದಿಕೊಳ್ಳಬಹುದು!), ವಿಕೃತ ವಿಚಾರವಾದಿಗಳು ಪ್ರಜಾತಂತ್ರದ ಹೃದಯದೇಗುಲವಾದ ಪಾರ್ಲಿಮೆಂಟ್ ಭವನಕ್ಕೆ ಬಾಂಬಿಟ್ಟು ಉಡಾಯಿಸಲು ಸಂಚು ರೂಪಿಸಿದ ಅಫ್ಜಲ್ ಗುರುವನ್ನು ನೇಣಿಗೇರಿಸಿದ್ದು ಸರಿಯೇ ತಪ್ಪೇ, ಆತನ ಕುಟುಂಬಕ್ಕೆ ಈ ವಿಚಾರವನ್ನು ಮುಂಚಿತವಾಗಿ ಏಕೆ ತಿಳಿಸಲಿಲ್ಲ, ಆತನನ್ನು ಗಲ್ಲಿಗೇರಿಸಿದ್ದಕ್ಕೆ ಪಟಾಕಿ ಸಿಡಿಸಿ, ಲಡ್ಡು ಹಂಚಿ ಸಂಭ್ರಮಪಡುವುದು ಸರಿಯೇ… ಇತ್ಯಾದಿ ಕೆಲಸಕ್ಕೆ ಬಾರದ ಅನಗತ್ಯ ವಿಚಾರಗಳ ಬಗ್ಗೆ ತಲೆಕೆಡಿಸಿಕೊಂಡು ಮಾಧ್ಯಮಗಳಲ್ಲಿ ಚರ್ಚಿಸುತ್ತಿದ್ದಾರೆ. ತಮಾಷೆಯೆಂದರೆ ಈ ಪರಿಯ ಗಂಭೀರ ಚರ್ಚೆಯನ್ನು ಅಫ್ಜಲ್ ಹುನ್ನಾರದಿಂದ ಅನ್ಯಾಯವಾಗಿ ಸಾವಿಗೀಡಾದ ಪಾರ್ಲಿಮೆಂಟ್ ರಕ್ಷಣಾ ಸಿಬ್ಬಂದಿಗಳ ಬಗ್ಗೆ ಈ ಮಂದಿ ಯಾವತ್ತೂ ಮಾಡಿರಲಿಲ್ಲ. ಅಫ್ಜಲ್‌ನ ಜೀವಕ್ಕೆ ಕೊಟ್ಟಷ್ಟು ಮಹತ್ವವನ್ನು ಈ ಮತಿಗೇಡಿಗಳು ಅನ್ಯಾಯವಾಗಿ ಸಾವಿಗೀಡಾದ ಕರ್ತವ್ಯನಿರತ ಆ ರಕ್ಷಣಾ ಸಿಬ್ಬಂದಿಗಳ ಜೀವಕ್ಕೆ ಕೊಡಲಿಲ್ಲ. ಹಾಗಿದ್ದರೆ ಆ ಸಿಬ್ಬಂದಿಗಳ ಜೀವಕ್ಕೆ ಬೆಲೆಯೇ ಇಲ್ಲವೆ? ಪಾರ್ಲಿಮೆಂಟ್ ಭವನದ ರಕ್ಷಣೆಗಾಗಿ ಪ್ರಾಣಾರ್ಪಣೆ ಮಾಡಿದ ಅವರೆಲ್ಲ ದೇಶದ್ರೋಹಿಗಳೆ? ಪಾರ್ಲಿಮೆಂಟ್ ಉಡಾಯಿಸಲು ಹುನ್ನಾರ ನಡೆಸಿದ ಅಫ್ಜಲ್ ದೇಶಭಕ್ತನೆ? ದೇಶಭಕ್ತರಾರು, ದೇಶದ್ರೋಹಿಗಳಾರು ಎಂಬ ವಿವೇಚನೆಯೇ ಇಲ್ಲದ ಇವರೆಂತಹ ದೇಶದ ಪ್ರಜೆಗಳು! ಮಾಜಿ ಭೂಗತ ಪಾತಕಿ ಹಾಗೂ ಹಾಲಿ ಪತ್ರಕರ್ತ ಆಗಿರುವ ಒಬ್ಬರಂತೂ ಅಫ್ಜಲ್‌ನನ್ನು ಸಂಗೊಳ್ಳಿ ರಾಯಣ್ಣನಿಗೆ ಹೋಲಿಸಿ ದಿನಪತ್ರಿಕೆಯೊಂದರಲ್ಲಿ ಲೇಖನ ಬರೆದಿದ್ದಾರೆ. ಸಂಗೊಳ್ಳಿ ರಾಯಣ್ಣ ಬ್ರಿಟಿಷರ ವಿರುದ್ಧ ಹೋರಾಡಿದ್ದರೆ ಅಫ್ಜಲ್ ಪ್ರತ್ಯೇಕ ಕಾಶ್ಮೀರದ ಸ್ವಾತಂತ್ರ್ಯಕ್ಕಾಗಿ ಹೋರಾಡಿದ ಯೋಧನಂತೆ! ಹೀಗೆಲ್ಲ ಬಡಬಡಿಸುವುದಕ್ಕೂ ಒಂದು ಮಿತಿಯಿರಬೇಕು. ಬಾಯಿಗೆ ಬಂದಂತೆ ಬರೆದರೆ, ವದರಿದರೆ ಅದನ್ನೆಲ್ಲ ನಂಬುವಷ್ಟು ಮೂರ್ಖರು ಓದುಗರಲ್ಲ ಎಂಬುದು ಇಂತಹ ಬುದ್ಧಿಗೇಡಿಗಳಿಗೆ ತಿಳಿದಿರಬೇಕು.

ಅಫ್ಜಲ್‌ನನ್ನು ಗಲ್ಲಿಗೇರಿಸಿದ್ದರ ಬಗ್ಗೆ ಘನಗಂಭೀರವಾಗಿ ಚರ್ಚಿಸುವ ಈ ಮಂದಿಯ ಮಾನವೀಯತೆ ಮಾತ್ರ ಎಷ್ಟು ಪೊಳ್ಳೆಂಬುದು ಬಯಲಾಗಲು ಹೆಚ್ಚು ಕಾಲ ಬೇಕಿಲ್ಲ. ಈ ಮಂದಿ ಸಹಾನುಭೂತಿ ವ್ಯಕ್ತಪಡಿಸುವುದು ಎಂಥವರಿಗೆ ಎಂಬುದು ಈಗ ಗುಟ್ಟಲ್ಲ. ಭಯೋತ್ಪಾದಕರು, ನಕ್ಸಲ್‌ವಾದಿಗಳು, ಮೂಲಭೂತವಾದಿಗಳೆಂದರೆ ಈ ವಿಕೃತವಾದಿಗಳಿಗೆ ಅದೇನೋ ಕಕ್ಕುಲತೆ! ರಾಷ್ಟ್ರೀಯ ವಿಚಾರಧಾರೆಯುಳ್ಳ ವ್ಯಕ್ತಿಗಳನ್ನು ಅನವಶ್ಯಕವಾಗಿ ಬಂಧಿಸಿ, ಅನ್ಯಾಯವಾಗಿ ಜೈಲಿನಲ್ಲಿ ನರಕಯಾತನೆ ನೀಡಿದರೆ ಆಗ ಮಾತ್ರ ಈ ಮಂದಿಯ ‘ಮಾನವೀಯತೆ’ಗೆ ತುಕ್ಕು ಹಿಡಿದಿರುತ್ತದೆ. ಉದಾಹರಣೆಗೆ 2008ರ ಮಾಲೆಗಾಂವ್ ಸ್ಫೋಟ ಪ್ರಕರಣದಲ್ಲಿ ಬಂಧನಕ್ಕೊಳಗಾಗಿ 5 ವರ್ಷಗಳಾದರೂ ಆರೋಪವನ್ನು ಸಾಬೀತುಪಡಿಸಲಾಗದ ಸಾಧ್ವಿ ಪ್ರಕರಣವನ್ನೇ ತೆಗೆದುಕೊಳ್ಳಿ. ಈ 5 ವರ್ಷಗಳಲ್ಲಿ ಸಾಧ್ವಿ ಪ್ರಜ್ಞಾಸಿಂಗ್ ಠಾಕೂರ್‌ಗೆ ಜೈಲಿನಲ್ಲಿ ನೀಡಿದ ಹಿಂಸೆ ಅಷ್ಟಿಷ್ಟಲ್ಲ. ಆಕೆ ಒಬ್ಬ ಮಹಿಳೆ ಎಂದು ಗೊತ್ತಿದ್ದರೂ ಮಹಿಳಾ ಆರೋಪಿಗೆ ತಕ್ಕಂತೆ ಆಕೆಯನ್ನು ಜೈಲು ಸಿಬ್ಬಂದಿ ಮಾನವೀಯವಾಗಿ ನಡೆಸಿಕೊಂಡಿಲ್ಲ. ಪೊಲೀಸರ ತೀವ್ರ ಶಾರೀರಿಕ, ಮಾನಸಿಕ ಹಿಂಸಾಚಾರಗಳು ಸಾಧ್ವಿಯನ್ನು ಜರ್ಜರಿತಳನ್ನಾಗಿ ಮಾಡಿದೆ. 2008ರಲ್ಲಿ ಬಂಧನಕ್ಕೆ ಮೊದಲು ಉತ್ಸಾಹದಿಂದ ಪುಟಿಯುತ್ತಿದ್ದ , ಆರೋಗ್ಯವಂತ ಸಾಧ್ವಿ ಪ್ರಜ್ಞಾಸಿಂಗ್ ಈಗ ಕ್ಯಾನ್ಸರ್ ಪೀಡಿತ, ನಿಶ್ಶಕ್ತ ರೋಗಿಯಾಗಿದ್ದಾರೆ. ತನ್ನ ಪಾಡಿಗೆ ತಾನು ಕುಳಿತುಕೊಳ್ಳಲಾಗುತ್ತಿಲ್ಲ.ಇನ್ನು ತನ್ನ ಪಾಡಿಗೆ ನಿಲ್ಲುವ, ನಡೆಯುವ ಮಾತಂತೂ ದೂರವೇ. ನ್ಯಾಯಾಲಯ ಆಕೆಗೆ ಚಿಕಿತ್ಸೆ ನೀಡಬೇಕೆಂದು ಆದೇಶಿಸಿದ್ದರೂ ಎಟಿಎಸ್ ಸೂಕ್ತ ಚಿಕಿತ್ಸೆ ಕೊಡಿಸುತ್ತಿಲ್ಲ. ಚಿಕಿತ್ಸೆ ಕೊಡಿಸುವ ನಾಟಕವನ್ನು ಮಾತ್ರ ಯಶಸ್ವಿಯಾಗಿ ನಡೆಸಿ ನ್ಯಾಯಾಲಯದ ಕಣ್ಣಿಗೆ ಮಣ್ಣೆರಚುತ್ತಿದೆ. ಬಂಧಿಸಿ 5 ವರ್ಷಗಳ ನಂತರವೂ ಆಕೆಯ ಮೇಲಿನ ಆರೋಪಗಳನ್ನು ಸಾಬೀತುಪಡಿಸಲು ಸಾಧ್ಯವಾಗಿಲ್ಲವೆಂದರೆ ಸಾಧ್ವಿಯನ್ನು ಉದ್ದೇಶಪೂರ್ವಕವಾಗಿಯೇ ಈ ಮೊಕದ್ದಮೆಯಲ್ಲಿ ಸಿಲುಕಿಸಲು ಕೇಂದ್ರ ಸರ್ಕಾರ ಹುನ್ನಾರ ನಡೆಸಿದೆ ಎಂಬುದು ಹಗಲಿನಷ್ಟು ಸ್ಪಷ್ಟ. ಈ ಬಗ್ಗೆ ವಿಚಾರವಾದಿಗಳು, ಮಾನವಹಕ್ಕುಗಳ ಕುರಿತು ಬೊಬ್ಬೆ ಹೊಡೆಯುವವರು ಏಕೆ ಧ್ವನಿ ಎಬ್ಬಿಸುತ್ತಿಲ್ಲ?

ಸಾಧ್ವಿ ಪ್ರಜ್ಞಾಸಿಂಗ್ ಬಾಲ್ಯದಿಂದಲೂ ರಾಷ್ಟ್ರೀಯ ವಿಚಾರಗಳಿಗೆ ಬದ್ಧತೆ ವ್ಯಕ್ತಪಡಿಸಿ ಬದುಕಿದ ಒಬ್ಬ ಶ್ರದ್ಧಾವಂತ ಸಾಮಾಜಿಕ ಕಾರ್ಯಕರ್ತೆ. ಜೊತೆಗೆ ಓರ್ವ ಸಂನ್ಯಾಸಿನಿ ಕೂಡ. 2006ರಲ್ಲಿ ಸಂಭವಿಸಿದ ಮಾಲೆಗಾಂವ್ ಸ್ಫೋಟ ಪ್ರಕರಣದಲ್ಲಿ ಬಂಧಿತರಾದ 9 ಮಂದಿಯನ್ನು ಅನಂತರ ಸೂಕ್ತ ಸಾಕ್ಷ್ಯಾಧಾರಗಳಿಲ್ಲವೆಂದು ಹೇಳಿ ಬಿಡುಗಡೆ ಮಾಡಲಾಯಿತು. ಆದರೆ ಕೇಂದ್ರ ಸರ್ಕಾರಕ್ಕೆ ಹೇಗಾದರೂ ಮಾಡಿ ‘ಹಿಂದು ಭಯೋತ್ಪಾದನೆ’ ಕೂಡ ಈ ದೇಶದಲ್ಲಿದೆ ಎಂದು ಜನರಿಗೆ ಸುಳ್ಳು ಮಾಹಿತಿ ನೀಡುವ ಜರೂರತ್ತು ಇತ್ತು. ಹೆಚ್ಚುತ್ತಿರುವ ಮುಸ್ಲಿಂ ಭಯೋತ್ಪಾದನೆಯ ಕಾವನ್ನು ತಗ್ಗಿಸಲು ಇಂತಹದೊಂದು ಪರ್ಯಾಯ ನಾಟಕವನ್ನು ಅದು ಆಡಲೇಬೇಕಿತ್ತು. ಅದೇ ಉದ್ದೇಶದಿಂದ 2008ರಲ್ಲಿ ಮಾಲೆಗಾಂವ್ ಸ್ಫೋಟ ಪ್ರಕರಣದ ಸಂಬಂಧವಾಗಿ ಸಾಧ್ವಿ ಪ್ರಜ್ಞಾ ಸಿಂಗ್ ಅವರನ್ನು ಬಂಧಿಸಲಾಯಿತು. ಆ ಸ್ಫೋಟ ಪ್ರಕರಣದಲ್ಲಿ ಶಾಮೀಲಾಗಿದ್ದ ಒಬ್ಬ ವ್ಯಕ್ತಿಯ ಬೈಕ್ ಬಗ್ಗೆ ಮಾಹಿತಿ ನೀಡಲು ಬರಬೇಕೆಂದು ಆಕೆಗೆ 2008ರ ಅ.7ರಂದು ಎಟಿಎಸ್‌ನ ಇ.ಸಾವಂತ್ ಫೋನ್ ಮೂಲಕ ತಿಳಿಸಿದರು. ಅದರಂತೆ ಆ.10ರಂದು ಸೂರತ್‌ಗೆ ತೆರಳಿದ ಪ್ರಜ್ಞಾಸಿಂಗ್‌ಗೆ ಅಲ್ಲಿ ಕಾದಿದ್ದು ಬಂಧನದ ಉಡುಗೊರೆ. ತನ್ನ ಸಹೋದ್ಯೋಗಿಗಳ ಜೊತೆಗೆ ಬಂದ ಇ.ಸಾವಂತ್, ಸಾಧ್ವಿಯನ್ನು ಬಂಧಿಸಿ ಮುಂಬೈನ ಎಟಿಎಸ್ ಕಚೇರಿಗೆ ಕರೆತಂದರು. 13 ದಿನಗಳ ಕಾಲ ಅಲ್ಲಿ ಕಾನೂನುಬಾಹಿರವಾಗಿ ಬಂಧಿಸಿಟ್ಟರು. ಅಷ್ಟೇ ಅಲ್ಲ, ಮಾನಸಿಕವಾಗಿ ಶಾರೀರಿಕವಾಗಿ ಹಾಗೂ ಅವಾಚ್ಯ

ಶಬ್ದಗಳಿಂದ ಭಯಾನಕವಾದ ಹಿಂಸೆ ನೀಡಿದರು. ಸಾಧ್ವಿ ಒಬ್ಬ ಮಹಿಳೆ ಎಂಬುದು ಗೊತ್ತಿದ್ದರೂ ಆಕೆಯನ್ನು ಸುತ್ತುವರಿದ ಪುರುಷ ಪೊಲೀಸ್ ಅಧಿಕಾರಿಗಳು ಸಾಧ್ವಿಯನ್ನು ಮನಸೋಇಚ್ಛೆ ಬೆಲ್ಟ್‌ಗಳಿಂದ ಬಾರಿಸಿದರು. ನೆಲದ ಮೇಲೆ ಕೆಡವಿ ಅವಾಚ್ಯ ಶಬ್ದಗಳಿಂದ ನಿಂದಿಸಿದರು. ಅಶ್ಲೀಲ ಸಿಡಿಯೊಂದನ್ನು ಆಲಿಸುವಂತೆ ಬಲವಂತಪಡಿಸಿದರು. ಒಟ್ಟಾರೆ ಪ್ರಜ್ಞಾಸಿಂಗ್‌ರಿಂದ ಮಾಲೆಗಾಂವ್ ಸ್ಫೋಟಕ್ಕೆ ಸಂಬಂಧಿಸಿ ತಪ್ಪೊಪ್ಪಿಗೆ ಪಡೆಯುವ ಹುನ್ನಾರ ಪೊಲೀಸರ ಈ ಹಿಂಸಾಚಾರದ ಹಿಂದಿತ್ತು. ಪೊಲೀಸರ ನಿರಂತರ ಹಿಂಸಾಚಾರಕ್ಕೆ ಸಾಧ್ವಿ ಮಾತ್ರ ಬಗ್ಗಲಿಲ್ಲ. ಆಕೆಯ ಅಂಗಾಂಗ ಹಾಗೂ ಹೊಟ್ಟೆಗೆ ತೀವ್ರ ಗಾಸಿಯಾಗಿ, ಪ್ರಜ್ಞಾಹೀನಳಾಗಿ ಉಸಿರಾಡುವುದಕ್ಕೂ ಕಷ್ಟವಾದಾಗ ಮುಂಬೈನ ಶುಶ್ರೂಷಾ ಎಂಬ ಖಾಸಗಿ ಆಸ್ಪತ್ರೆಗೆ ದಾಖಲಿಸಿದರು. ಆಕೆಯ ಮಿದುಳಿಗೆ ಹಾನಿಯಾಗಿರುವ ಮಾಹಿತಿ ಆಸ್ಪತ್ರೆಯ ಆ ವರದಿಯಲ್ಲಿದೆ. ಆ ಆಸ್ಪತ್ರೆಯಲ್ಲಿದ್ದಷ್ಟೂ ದಿನವೂ ಸಾಧ್ವಿಯನ್ನು ವೆಂಟಿಲೇಟರ್‌ನಲ್ಲಿಡಲಾಗಿತ್ತು. ಅಲ್ಲಿಂದ ಇನ್ನೊಂದು ದೊಡ್ಡ ಆಸ್ಪತ್ರೆಗೆ ಸ್ಥಳಾಂತರಿಸುವಾಗಲೂ ವೆಂಟಿಲೇಟರ್ ನೆರವಿನಿಂದ ಆಕೆ ಉಸಿರಾಡುತ್ತಿದ್ದರು. ಈ ಎಲ್ಲ ಹಿಂಸಾಚಾರ ನಡೆಸಿ 13 ದಿನಗಳ ಬಳಿಕ ಸಾಧ್ವಿಯ ಮೇಲೆ ಎಫ್‌ಐಆರ್ ದಾಖಲಿಸಿದ ಪೊಲೀಸರು ಅನಂತರ ನ್ಯಾಯಾಲಯಕ್ಕೆ ಹಾಜರುಪಡಿಸಿದರು.

ಸಾಧಾರಣವಾಗಿ ಪ್ರಜ್ಞಾಹೀನ ಸ್ಥಿತಿಯಲ್ಲಿದ್ದಾಗ ಎಂತಹ ಕಟುಕ ಹೃದಯದವರೂ ಅಮಾನವೀಯವಾಗಿ ನಡೆದುಕೊಳ್ಳುವುದಿಲ್ಲ. ಆದರೆ ಎಟಿಎಸ್ ಪೊಲೀಸರಿಗೆ ಅಂತಹ ಮಾನವೀಯತೆಯೇ ಇರಲಿಲ್ಲ, ಬಿಡಿ. ಪ್ರಜ್ಞಾಹೀನಳಾಗಿದ್ದ ಸಾಧ್ವಿ ಧರಿಸಿದ್ದ ಕಾವಿ ಉಡುಪನ್ನು ತೆಗೆದು ಅಂತಹ ಸ್ಥಿತಿಯಲ್ಲೇ ಸಲ್ವಾರ್ ತೊಡಿಸಲಾಯಿತು. ಪ್ರಜ್ಞೆ ಬಂದ ಬಳಿಕ ನ್ಯಾಯಾಲಯದ ಅನುಮತಿಯಿಲ್ಲದೆಯೇ ಕಾನೂನುಬಾಹಿರವಾಗಿ ಸಾಧ್ವಿಯನ್ನು ನಾರ್ಕೊ, ಪಾಲಿಗ್ರಾಫ್ ಮತ್ತು ಬ್ರೈನ್ ಮ್ಯಾಪಿಂಗ್ ಪರೀಕ್ಷೆಗಳಿಗೆ ಒಳಪಡಿಸಲಾಯಿತು. ಅಂತಹ ಪರೀಕ್ಷೆ ನಡೆಸಿದಾಗಲೂ ಎಟಿಎಸ್‌ಗೆ ಬೇಕಾಗಿದ್ದ ಯಾವುದೇ ಸಾಕ್ಷ್ಯಾಧಾರ, ಸುಳಿವುಗಳು ಸಿಗಲಿಲ್ಲ. ಅಸಲಿಗೆ ಸಾಧ್ವಿ ಪ್ರಜ್ಞಾಸಿಂಗ್ ಸ್ಫೋಟ ಪ್ರಕರಣದಲ್ಲಿ ಶಾಮೀಲಾಗಿದ್ದರೆ ತಾನೆ ಅಂತಹ ಸಾಕ್ಷ್ಯಾಧಾರ ಸಿಗುವುದು?

MOCOCA ಎಟಿಎಸ್ ಪೊಲೀಸರಿಗೆ ಮಾತ್ರ ಸಾಧ್ವಿ ನಿರಪರಾಧಿ, ಅಮಾಯಕ ಹೆಣ್ಣು ಎಂದೆನಿಸಲೇ ಇಲ್ಲ. ಆಕೆಯನ್ನು ಹೇಗಾದರೂ ಮಾಡಿ ಮಾಲೆಗಾಂವ್ ಸ್ಫೋಟ ಪ್ರಕರಣದಲ್ಲಿ ಸಿಲುಕಿಸಲೇಬೇಕು ಎಂಬ ಹಠ ಪೊಲೀಸ್ ಅಧಿಕಾರಿಗಳಿಗಿತ್ತು. ಪಾಲಿಗ್ರಾಫ್, ಬ್ರೈನ್ ಮ್ಯಾಪಿಂಗ್ ಪರೀಕ್ಷೆಗಳ ನಂತರವೂ ಮತ್ತೆ ಮತ್ತೆ ಆಕೆಯನ್ನು ನಾನಾ ಬಗೆಯ ಶಾರೀರಿಕ, ಮಾನಸಿಕ ಹಿಂಸೆಗೆ ಒಳಪಡಿಸಲಾಯಿತು. ಆದರೂ ಎಟಿಎಸ್ ಬಯಸಿದ ಯಾವ ಸಾಕ್ಷ್ಯಾಧಾರಗಳೂ ದೊರಕಲಿಲ್ಲ. ಆದರೆ ಈ ಎಲ್ಲ ಶಾರೀರಿಕ, ಮಾನಸಿಕ ಹಿಂಸಾಚಾರಗಳಿಂದ ಸಾಧ್ವಿ ಪ್ರಜ್ಞಾಸಿಂಗ್ ಮಾತ್ರ ಹೈರಾಣವಾಗಿ ಹೋಗಿದ್ದಳು. ಪೊಲೀಸರ ಹಿಂಸೆಯನ್ನು ಸಹಿಸುವ ಶಕ್ತಿ ಕೂಡ ಕ್ರಮೇಣ ಕುಸಿದುಹೋಗಿ ತುಂಬಾ ನಿತ್ರಾಣಳಾಗಿದ್ದಳು. ಆಕೆಯ ಸಾತ್ವಿಕತೆಯನ್ನು ನಾಶಪಡಿಸಲು ಜೈಲಿನಲ್ಲಿ ಬೇಕೆಂದೇ ಆಹಾರದಲ್ಲಿ ಮೊಟ್ಟೆ ಬೆರೆಸಿ ಕೊಡಲಾಯಿತು. ಇವೆಲ್ಲದರ ಪರಿಣಾಮವಾಗಿ ಗಂಭೀರ ಖಾಯಿಲೆಗಳು ಆಕೆಯನ್ನು ಕಾಡತೊಡಗಿದವು. ಕ್ಯಾನ್ಸರ್ ಮಹಾಮಾರಿ ಖಾಯಿಲೆ ಕೂಡ ಸಾಧ್ವಿಯನ್ನು ಕಂಗೆಡಿಸಿತು. 2009ರಲ್ಲಿ ಆಸ್ಪತ್ರೆಯಲ್ಲಿ ಸ್ತನ ಕ್ಯಾನ್ಸರ್ ಶಸ್ತ್ರಚಿಕಿತ್ಸೆ ನಡೆಸಲಾಯಿತು. ಅದಾದ ಮೇಲೂ ಆಕೆಗೆ ಪದೇಪದೇ ನೋವು ಕಾಡುತ್ತಿತ್ತು. ಇಷ್ಟೊಂದು ಅನಾರೋಗ್ಯದಲ್ಲಿದ್ದರೂ ಸಾಧ್ವಿ ಪ್ರಜ್ಞಾಸಿಂಗ್ ಕಾಯ್ದೆಯಡಿಯಲ್ಲಿ ಬಂಧನದಲ್ಲಿರಬೇಕಾಗಿತ್ತು. ನಡುವೆ ಆ ಕಾಯ್ದೆಯನ್ನು ಸಡಿಲಗೊಳಿಸಿದ್ದರೂ ಮತ್ತೆ ಹೇರಲಾಯಿತು. ನ್ಯಾಯಾಲಯ ಸಾಧ್ವಿಗೆ ಸೂಕ್ತ ಚಿಕಿತ್ಸೆ ಕೊಡಿಸಬೇಕೆಂದು ಪದೇಪದೇ ಆದೇಶ ನೀಡುತ್ತಿತ್ತು. ಎಟಿಎಸ್ ಪೊಲೀಸ್ ಅಧಿಕಾರಿಗಳು ಆ ಆದೇಶದಂತೆ ಆಸ್ಪತ್ರೆಗೆ ಕರೆದುಕೊಂಡು ಹೋಗುತ್ತಿದ್ದರು. ಆದರೆ ಅಲ್ಲಿ ಚಿಕಿತ್ಸೆ ಮಾತ್ರ ಲಭ್ಯವಾಗುತ್ತಿರಲಿಲ್ಲ. ಪೊಲೀಸ್ ಅಧಿಕಾರಿಗಳು ಹಾಗೂ ಆಸ್ಪತ್ರೆಯ ಆಡಳಿತ ವರ್ಗದ ನಡುವೆ ಸಾಧ್ವಿಗೆ ಸೂಕ್ತ ಚಿಕಿತ್ಸೆ ನೀಡಬಾರದೆಂಬ ಗುಪ್ತ ಒಪ್ಪಂದ ನಡೆದಿರಲೇಬೇಕು. ಹಾಗಲ್ಲದಿದ್ದರೆ ಆಕೆಗೆ ಆಸ್ಪತ್ರೆ ಸಿಬ್ಬಂದಿ ಏಕೆ ಸೂಕ್ತ ಚಿಕಿತ್ಸೆ ನೀಡಲು ನಿರಾಕರಿಸುತ್ತಿದ್ದರು?

ಸಾಧ್ವಿಯ ಕುರಿತು ಇಲ್ಲಿ ವಿವರಿಸಲಾಗಿರುವ ಈ ಎಲ್ಲಾ ಮಾಹಿತಿಗಳಲ್ಲಿ ಯಾವುದೇ ಉತ್ಪ್ರೇಕ್ಷೆಯಿಲ್ಲ. ಸಾಧ್ವಿಯ ಮೇಲೆ ಕರುಣೆ ತೋರಿ ಸರ್ಕಾರ ಆಕೆಯನ್ನು ಬಿಡುಗಡೆ ಮಾಡಲಿ ಎಂಬ ದುರುದ್ದೇಶವೂ ಇದರ ಹಿಂದಿಲ್ಲ. ಇತ್ತೀಚೆಗೆ, ಅಂದರೆ ಕಳೆದ ಜ.17ರಂದು ಬಂಧನದಲ್ಲಿರುವ ಸಾಧ್ವಿ ಪ್ರಜ್ಞಾಸಿಂಗ್ ಅವರೇ ಮುಂಬೈ ಹೈಕೋರ್ಟ್‌ನ ಗೌರವಾನ್ವಿತ ನ್ಯಾಯಮೂರ್ತಿಗಳಿಗೆ ತನ್ನ ಅನಾರೋಗ್ಯ ಸ್ಥಿತಿಯ ಕುರಿತು ಬರೆದ ಪತ್ರದಲ್ಲಿ ಈ ಎಲ್ಲ ಸಂಗತಿಗಳನ್ನು ತೆರೆದಿಟ್ಟಿದ್ದಾರೆ. ಕಳೆದ 5 ವರ್ಷಗಳಿಂದ ತನಗೆ ಪೊಲೀಸರು ನೀಡುತ್ತಿರುವ ಭಯಾನಕ ಹಿಂಸೆಯನ್ನು ಈ ಪತ್ರದಲ್ಲಿ ವಿವರಿಸಿದ್ದಾರೆ.

ಪತ್ರದ ಕೊನೆಯ ಕೆಲವು ಪ್ಯಾರಾಗ್ರಾಫ್‌ಗಳು ಹೀಗಿವೆ : ‘…ಸ್ವಾಮಿ, ನಾನೀಗ ನನ್ನನ್ನು ಬಾಧಿಸುತ್ತಿರುವ ಎಲ್ಲ ಖಾಯಿಲೆಗಳೊಂದಿಗೆ ಬದುಕಲು ನಿರ್ಧರಿಸಿರುವೆ. ನನ್ನ ಉಳಿದ ಜೀವಿತಾವಧಿಯಲ್ಲಿ ಯೋಗ ಮತ್ತು ಪ್ರಾಣಾಯಾಮಗಳನ್ನು ಮಾಡುತ್ತಾ ಜೈಲ್ ಕಸ್ಟಡಿಯಲ್ಲಿರುವ ತನಕ ಯಾವುದೇ ಚಿಕಿತ್ಸೆಯನ್ನು ಪಡೆದುಕೊಳ್ಳಬಾರದೆಂದು ನಿರ್ಧರಿಸಿರುವೆ. ಇದು ನಾನೊಬ್ಬಳೇ ವೈಯಕ್ತಿಕವಾಗಿ ತೆಗೆದುಕೊಂಡ ನಿರ್ಧಾರವಲ್ಲ. ಆರೋಗ್ಯದ ಮೇಲೆ ಎಲ್ಲ ನಿರ್ಬಂಧಗಳು ಹಾಗೂ ಅವುಗಳ ವ್ಯತಿರಿಕ್ತ ಪರಿಣಾಮಗಳ ಕಾರಣದಿಂದಾಗಿ ಇಂತಹದೊಂದು ನಿರ್ಧಾರಕ್ಕೆ ನಾನು ಬಲವಂತವಾಗಿ ಬರಬೇಕಾಯಿತು. ನನ್ನ ಈ ನಿರ್ಧಾರವನ್ನು ತಾವು ತಪ್ಪಾಗಿ ಭಾವಿಸಲಾರಿರಿ ಎಂದಾಶಿಸುವೆ. ನನ್ನ ಭಾವನೆಗಳು ಮತ್ತು ಪರಿಸ್ಥಿತಿಗಳನ್ನು ತಾವು ಅರ್ಥಮಾಡಿಕೊಳ್ಳಬಲ್ಲಿರಿ ಎಂದು ಭಾವಿಸಿರುವೆ.

ಸ್ವಾಮಿ, ನಾನೊಬ್ಬಳು ಸಂನ್ಯಾಸಿನಿ. ನನ್ನ ಬದುಕು ಸ್ವಾರ್ಥರಹಿತ ಹಾಗೂ ಶಿಸ್ತಿನಿಂದ ಕೂಡಿದ್ದು. ಮುಕ್ತ ವಾತಾವರಣದಲ್ಲಿ ಮಾತ್ರ ಇದನ್ನು ಮುಂದುವರಿಸಿಕೊಂಡು ಹೋಗಲು ಸಾಧ್ಯ. ಯಾವುದೇ ಕಾರಣವಿಲ್ಲದೆ ಕಳೆದ 5 ವರ್ಷಗಳಿಂದ ನನ್ನನ್ನು ಜೈಲಿನಲ್ಲಿ ಬಂಧಿಸಿಡಲಾಗಿದ್ದು , ನನ್ನ ಬದುಕಿನ, ಸ್ವಭಾವದ, ದೈನಂದಿನ ದಿನಚರಿಗಳಿಗೆ ವಿರುದ್ಧವಾಗಿದೆ. ಜೈಲಿನಲ್ಲಿ ಸಂನ್ಯಾಸಿ ಬದುಕನ್ನು ನಡೆಸುವುದು ಕಷ್ಟಸಾಧ್ಯ.

ಪ್ರತಿಕೂಲ ಪರಿಸ್ಥಿತಿಯಿಂದ ಕಂಗೆಡದೆ ದೂರವಿರಲು ನಾನು ಪ್ರಯತ್ನಿಸಿರುವೆ. ನನ್ನ ಠಾಕೂರ್‌ಜಿ (ದೇವರು)ಯವರನ್ನು ನೆನೆಯುತ್ತ ಕಾಲ ಹಾಕುತ್ತಿರುವೆ. ನಾನಿನ್ನು ಎಷ್ಟು ದಿನಗಳವರೆಗೆ ಬದುಕಿರಬಲ್ಲೆ ಎಂಬುದು ನನಗೆ ಗೊತ್ತಿಲ್ಲ. ಆದರೆ ಬದುಕಿರುವುದಕ್ಕಾಗಿ ಚಿಕಿತ್ಸೆಯನ್ನು ಈ ಪರಿಸ್ಥಿತಿಯಲ್ಲಿ ನಾನು ಖಂಡಿತ ಪಡೆಯಲಾರೆ. ನನ್ನನ್ನು ಜೈಲಿನಿಂದ ಬಿಡುಗಡೆ ಮಾಡಿದಲ್ಲಿ ಹಾಗೂ ಯಾವುದೇ ನಿರ್ಬಂಧ ಹೇರದಿದ್ದಲ್ಲಿ ನಾನು ಚಿಕಿತ್ಸೆ ಪಡೆಯಲಿಚ್ಛಿಸುವೆ. ಆಗ ನನ್ನ ಆರೋಗ್ಯ ಸುಧಾರಿಸಬಹುದು ಹಾಗೂ ಸಂನ್ಯಾಸಿನಿಯ ಬದುಕು ಸಾಗಿಸಲು ಸಾಧ್ಯವಾಗಬಹುದು.

ಸ್ವಾಮಿ, ಭಾರತೀಯ ಸಂಸ್ಕೃತಿಯಲ್ಲಿ ಸಂನ್ಯಾಸಿ ಬದುಕಿಗಿರುವ ಗೌರವದ ಕುರಿತು ತಮಗೆ ಗೌರವ ಭಾವನೆ ಇರಬಹುದೆಂದು ಆಶಿಸುವೆ. ನನ್ನ ಸಂನ್ಯಾಸಿ ಬದುಕನ್ನು ತಾವು ಗೌರವಿಸಬೇಕೆಂದು ಪ್ರಾರ್ಥಿಸುವೆ. ನಾನು ಕೇವಲ ಒಬ್ಬ ಆರೋಪಿಯಾಗಿರುವುದರಿಂದ, ನನ್ನ ಮೇಲಿನ ಆರೋಪಗಳು ಈಗಲೂ ಸಾಬೀತಾಗದಿರುವುದರಿಂದ, ಕಾನೂನಿನಲ್ಲಿ ನನಗೆ ಜಾಮೀನು ಪಡೆಯಲು ಏನಾದರೂ ಅವಕಾಶವಿದ್ದರೆ ದಯವಿಟ್ಟು ನಿಮ್ಮ ನಿರ್ದೇಶನದಂತೆ ನನಗೆ ಜಾಮೀನು ಮಂಜೂರು ಮಾಡಿ. ನನಗೆ ಕಾನೂನಿನ ಅವಕಾಶಗಳ ಕುರಿತು ಗೊತ್ತಿಲ್ಲ ಅಥವಾ ಮಾಹಿತಿ ಇಲ್ಲ. ನಾನು ಯಾವುದೇ ತಪ್ಪು ಎಸಗಿಲ್ಲ ಎಂಬುದು ಮಾತ್ರ ನನಗೆ ಗೊತ್ತು. ಸಂವಿಧಾನವನ್ನು ಅನುಸರಿಸುತ್ತಾ ಶಿಸ್ತುಬದ್ಧ ರೀತಿಯಲ್ಲಿ ನಾನು ಒಬ್ಬ ರಾಷ್ಟ್ರವಾದಿಯ ಬದುಕನ್ನು ನಡೆಸಿರುವೆ. ಹಾಗಾಗಿ ನನ್ನ ಮೇಲೆ ಯಾವುದೇ ಹಿಂದಿನ ಕ್ರಿಮಿನಲ್ ದಾಖಲೆಗಳಿರುವುದಿಲ್ಲ. ಎಟಿಎಸ್ ನನ್ನನ್ನು ಅನ್ಯಾಯವಾಗಿ ಹಾಗೂ ತಪ್ಪಾಗಿ ಈ ಮೊಕದ್ದಮೆಯಲ್ಲಿ ಎಳೆದು ತಂದು ಹಾಕಿದೆ.’

ಸಾಧ್ವಿ ನ್ಯಾಯಾಧೀಶರಿಗೆ ಬರೆದ ಆ ಪತ್ರ ಎಂಥವರ ಹೃದಯವನ್ನೂ ಕಲಕುವಂತಿದೆ. ಸಣ್ಣಪುಟ್ಟ ಆರೋಪ ಹೊತ್ತು ಜೈಲು ಸೇರಿದ ಆರೋಪಿಗಳನ್ನೂ ಯಾವುದೇ ಹಿಂಸೆ ನೀಡದೆ ಚೆನ್ನಾಗಿ ನೋಡಿಕೊಳ್ಳಬೇಕೆಂದು ಕಾಯ್ದೆ ಹೇಳುತ್ತದೆ. ಹೀಗಿರುವಾಗ ಸುಸಂಸ್ಕೃತ ಬದುಕು ನಡೆಸಿದ ಸಾಧ್ವಿ ಪ್ರಜ್ಞಾಸಿಂಗ್ ಅವರನ್ನು ಜೈಲಿನಲ್ಲಿ ಅತ್ಯಂತ ಅಮಾನವೀಯವಾಗಿ ನಡೆಸಿಕೊಂಡಿದ್ದು ಸಮಂಜಸವೆ? ಮುಂಬೈ ಮೇಲೆ ದಾಳಿ ಮಾಡಿ ಪೊಲೀಸ್ ಅಧಿಕಾರಿಗಳು ಸೇರಿದಂತೆ ನೂರಾರು ಜನರನ್ನು ಸಾಯಿಸಿದ ಉಗ್ರ ಕಸಬ್‌ಗೆ, ಪಾರ್ಲಿಮೆಂಟ್ ಭವನದ ದಾಳಿ ಸಂಚುರೂಪಿಸಿದ ಅಫ್ಜಲ್‌ಗೆ, ಕೊಯಮತ್ತೂರು ಸ್ಫೋಟದ ಆರೋಪಿ ಸಯ್ಯದ್ ಮದನಿಗೆ ಜೈಲಿನಲ್ಲಿ ಬಿರಿಯಾನಿ, ಕಬಾಬ್‌ಗಳ ರಾಜೋಪಚಾರ! ಯಾವುದೇ ದೇಶದ್ರೋಹವೆಸಗದ, ಆದರೆ ಪ್ರಕರಣವೊಂದರಲ್ಲಿ ಆರೋಪಿಯೆನಿಸಿರುವ ಸಾಧ್ವಿಗೆ ಮಾತ್ರ ಜೈಲಿನಲ್ಲಿ ತೀವ್ರ ಹಿಂಸಾಚಾರ, ಚಿಕಿತ್ಸೆಗೇ ತತ್ವಾರ. ಒಂದು ಕಣ್ಣಿಗೆ ಬೆಣ್ಣೆ , ಇನ್ನೊಂದು ಕಣ್ಣಿಗೆ ಸುಣ್ಣ. ಸಾಧ್ವಿ ಪ್ರಜ್ಞಾಸಿಂಗ್ ಒಂದು ವೇಳೆ ನಿಜಕ್ಕೂ ಅಪರಾಧಿಯಾಗಿದ್ದರೆ ಖಂಡಿತ ಆಕೆಗೆ ಸೂಕ್ತ ಶಿಕ್ಷೆ ವಿಧಿಸಲು ಯಾರ ಅಡ್ಡಿಯೂ ಇಲ್ಲ. ಒಬ್ಬ ಮುಸ್ಲಿಂ, ಹಿಂದು, ಕ್ರೈಸ್ತ, ಪಾರ್ಸಿ ಯಾರೇ ಆಗಲಿ ದೇಶದ್ರೋಹ ಎಸಗಿದರೆ ಅದು ಅಕ್ಷಮ್ಯ ಅಪರಾಧವೇ. ದೇಶದ್ರೋಹವೆಂದರೆ ದೇಶಕ್ಕೆ ಮಾರಕವಾಗಿ ನಡೆದುಕೊಳ್ಳುವುದು. ಆದರೆ ಸಾಧ್ವಿ ಪ್ರಕರಣದಲ್ಲಿ ಆಕೆ ದೇಶಕ್ಕೆ ಮಾರಕವಾಗಿ ನಡೆದುಕೊಂಡದ್ದಕ್ಕೆ ಸಾಕ್ಷಿಯೆಲ್ಲಿದೆ? ಇಷ್ಟಕ್ಕೂ ಬಂಧಿಸಿ 5 ವರ್ಷಗಳಾದರೂ ಸಾಧ್ವಿಯ ಮೇಲಿನ ಆರೋಪಗಳನ್ನು ಸಾಬೀತುಪಡಿಸುವ ಒಂದೇ ಒಂದು ಪುರಾವೆಯೂ ಎಟಿಎಸ್ ಬಳಿ ಇಲ್ಲವೆಂದರೆ ಏನರ್ಥ? ಈ ಆರೋಪಗಳ ಕುರಿತು ಏಕೆ ಇನ್ನೂ ವಿಚಾರಣೆಯನ್ನು ನಡೆಸುತ್ತಿಲ್ಲ? ಮಾನವೀಯ ದೃಷ್ಟಿಯಿಂದಲಾದರೂ ಆಕೆಗೆ ಜಾಮೀನು ನೀಡಿ, ತೀವ್ರ ಅನಾರೋಗ್ಯದಿಂದ ಕಂಗೆಟ್ಟಿರುವ ಆಕೆಗೆ ಸೂಕ್ತ ಚಿಕಿತ್ಸೆ ಏಕೆ ನೀಡಬಾರದು? ಹಾಗೆ ನೀಡಿದರೆ ಅದೇನು ಅಪರಾಧವಾಗುತ್ತದೆಯೆ? ಪರಪ್ಪನ ಅಗ್ರಹಾರದಲ್ಲಿ ಬಂಧಿತನಾಗಿರುವ ಮದನಿಗೆ ಕೊಂಚ ಕಾಲು ನೋವಾದರೂ ತಕ್ಷಣ ತಜ್ಞ ವೈದ್ಯರ ತಂಡ ಧಾವಿಸಿ ಬರುತ್ತದೆ. ಆತನನ್ನು ಕಾಡದಿರುವ ಖಾಯಿಲೆಗಳ ಪತ್ತೆಗೆ ಇನ್ನಿಲ್ಲದಂತೆ ಆ ತಂಡ ಶ್ರಮಿಸುತ್ತದೆ! ಆದರೂ ಮದನಿಗೆ ಸೂಕ್ತ ಚಿಕಿತ್ಸೆ ದೊರೆಯುತ್ತಿಲ್ಲವೆಂದು ಆತನ ಅನುಯಾಯಿಗಳು ಹೊರಗೆ ಬೊಬ್ಬೆ ಹೊಡೆಯುತ್ತಾರೆ. ಸಾಧ್ವಿ ಪ್ರಜ್ಞಾಸಿಂಗ್ ಕ್ಯಾನ್ಸರ್ ಪೀಡಿತಳಾಗಿ ಈಗಲೋ ಆಗಲೋ ಎಂಬ ಜೀವಚ್ಛವ ಸ್ಥಿತಿಗೆ ತಲುಪಿದ್ದರೂ ಜೈಲು ಅಧಿಕಾರಿಗಳಿಗಾಗಲಿ, ಸರ್ಕಾರಕ್ಕಾಗಲಿ ಯಾವುದೇ ಕರುಣೆ ಉಕ್ಕುತ್ತಿಲ್ಲ. ಸಾಧ್ವಿ ಪ್ರಜ್ಞಾಸಿಂಗ್ ಒಬ್ಬ ಹಿಂದು ಎನ್ನುವುದೊಂದೇ ಇದಕ್ಕೆ ಕಾರಣ. ಆಕೆಯೇನಾದರೂ ಮುಸ್ಲಿಂ ಆಗಿದ್ದರೆ ಜೈಲಿನಲ್ಲಿ ರಾಜೋಪಚಾರವೇ ಸಿಗುತ್ತಿತ್ತು! ಸಾಧ್ವಿಗೆ ಸೂಕ್ತ ಚಿಕಿತ್ಸೆ ಕೊಡಿಸುವುದರಿಂದ ಕೇಂದ್ರ ಸರ್ಕಾರಕ್ಕೆ ಯಾವ ರಾಜಕೀಯ ಲಾಭವೂ ಇಲ್ಲ. ಲಾಭವೇ ಆಗದ ಮೇಲೆ ಆಕೆಗೇಕೆ ಚಿಕಿತ್ಸೆ? ಇದು ಯುಪಿಎ ಸರ್ಕಾರದ ರಾಜಕೀಯ ಲೆಕ್ಕಾಚಾರ.

ಒಟ್ಟಾರೆ ಈ ರಾಜಕೀಯ ಲೆಕ್ಕಾಚಾರ ಮುಗಿಯುವುದರಲ್ಲಿ ಸಾಧ್ವಿಯ ಆರೋಗ್ಯ ಇನ್ನಷ್ಟು ಹದಗೆಟ್ಟು ಹೋಗುವುದು ನಿಶ್ಚಿತ. ಪರಿಸ್ಥಿತಿ ಹೀಗೇ ಮುಂದುವರಿದರೆ ಆಕೆ ಒಂದು ದಿನ ಜೈಲಿನಿಂದ ಹೆಣವಾಗಿ ಹೊರಗೆ ಬರಬೇಕಾಗುತ್ತದೆ. ಸರ್ಕಾರದ ಇಚ್ಛೆಯೂ ಅದೇ ಆಗಿದೆಯೆ?

Leave a Reply

Your email address will not be published.

This site uses Akismet to reduce spam. Learn how your comment data is processed.