– ನಾರಾಯಣ ಶೇವಿರೆ, ಚಿಂತಕರು
ನಮ್ಮ ದೇಶಕ್ಕೆ ಇರುವ ಹಲವು ಹೆಸರುಗಳಲ್ಲಿ ‘ಭಾರತ’ವೂ ಒಂದು. ಭಾರತ – ಜ್ಞಾನಸಂಬಂಧಿತ ಹೆಸರು. ಭಾ ಎಂದರೆ ಬೆಳಕು. ಬೆಳಕು ಜ್ಞಾನದ ಸಂಕೇತವಿರಲಾಗಿ, ಜ್ಞಾನದಲ್ಲಿ ರಮಿಸುವ ದೇಶವೆಂಬ ಅರ್ಥವನ್ನು ಹೊತ್ತುಕೊಂಡಿದೆ ನಮ್ಮೀ ದೇಶ.
ಜ್ಞಾನವು ಇಂದು ಮಾಹಿತಿಯ ಧ್ವನಿಯನ್ನು ಹೊತ್ತುಕೊಂಡಿದೆ. ವಿಶಿಷ್ಟ ಜ್ಞಾನ ಎಂಬ ಅರ್ಥದಲ್ಲಿ ವಿಜ್ಞಾನವೂ ನಿಜ ಜ್ಞಾನದ ಧ್ವನಿಯನ್ನೇ ಹೊಂದಿದೆ. ಆದರೆ ಇಂದು ವಿಜ್ಞಾನವು ಆತ್ಮನಿಷ್ಠ ಜ್ಞಾನದ ಅರ್ಥವನ್ನು ಕಳಕೊಂಡು ಬಾಹ್ಯಪ್ರಪಂಚವನ್ನು ಕುರಿತಾದ ಮಾಹಿತಿಯಾಗಿ ಸಂಕೋಚಗೊಂಡಿದೆ.
ಆಧುನಿಕ ಅರ್ಥದ ವಿಜ್ಞಾನವೂ ಒಂದು ಮಾಹಿತಿಯೇ. ಆಧುನಿಕ ಕಾಲಕ್ಕೆ ಮಾಹಿತಿಯುಗ ಎಂಬ ಹೆಸರೂ ಇದೆಯಷ್ಟೆ. ಮಾಹಿತಿ ಬಹಿರ್ಮುಖಿಯಾಗಿದೆ. ಜ್ಞಾನವು ಅಂತರ್ಮುಖಿಯಾದುದು. ಶಿಕ್ಷಣವು ಸಹಕಾರಿಯಾಗಬೇಕಾದುದು ಜ್ಞಾನದ ಸಿದ್ಧಿಗೇ ವಿನಾ ಮಾಹಿತಿಯ ಲಭ್ಯತೆಗಲ್ಲ.
ಜನರ ಬಾಯಲ್ಲಿ ತತ್ತ್ವ-ದರ್ಶನ
ವಿವೇಕಾನಂದರು ಅಮೆರಿಕದ ವಿಶ್ವವಿದ್ಯಾಲಯವೊಂದರಲ್ಲಿ ತತ್ತ್ವಶಾಸ್ತ್ರದ ವಿದ್ವಾಂಸರನ್ನು ಉದ್ದೇಶಿಸಿ ಮಾತನಾಡುತ್ತ; ಭಾರತದ ಸಾಮಾನ್ಯ ಜನರು ದಾರ್ಶನಿಕ ವಿಚಾರಗಳನ್ನು ತಿಳಕೊಂಡಷ್ಟು ಅಮೆರಿಕದ ಯಾವುದೇ ಉನ್ನತ ವಿಶ್ವವಿದ್ಯಾಲಯದ ತತ್ತ್ವಶಾಸ್ತ್ರದ ಮುಖ್ಯಸ್ಥರು ತಿಳಿದಿರಲಾರರು ಎಂದು ಹೇಳಿದ್ದರು.
ಮೇಲುನೋಟಕ್ಕೆ ಅಹಂಕಾರದ ಮಾತೆನಿಸೀತು. ಸ್ವಾಭಿಮಾನವನ್ನು ಅಭಿವ್ಯಕ್ತಿಸಿದ ಮಾತು ಎಂದೂ ಅನಿಸೀತು. ಇವೆರಡೂ ಭಾವಗಳನ್ನು ದಾಟಬಲ್ಲ ಸ್ಥಿತಿಯಲ್ಲಿದ್ದ ಸ್ವಾಮೀಜಿಯ ಮುಂದಿದ್ದದ್ದು ಸತ್ಯವನ್ನರುಹುವ ಕಾಯಕವಷ್ಟೆ.
ಇತ್ತೀಚಿನ ತನಕವೂ, ವಾಣಿಜ್ಯೋದ್ದೇಶದ ಬದುಕನ್ನು ಕಟ್ಟಿಕೊಳ್ಳುವ ಹಿಂದಿನ ಕಾಲದ ತನಕವೂ; ನಮ್ಮ ರೈತಾಪಿ ಮಂದಿ ಇರಬಹುದು, ಚಮ್ಮಾರ ಕಮ್ಮಾರ ಕುಂಬಾರ ಮುಂತಾದ ಪಾರಂಪರಿಕ ಜ್ಞಾನದ ಆಧಾರದಲ್ಲಿ ಸಮಾಜದ ಆವಶ್ಯಕತೆಗಳನ್ನು ಪೂರೈಸುತ್ತಿದ್ದ ಮಂದಿ ಇರಬಹುದು – ಎಲ್ಲೋ ಅನೌಪಚಾರಿಕವಾಗಿ ಸೇರಿದಾಗ ಹರಟೆಯೆಂದು ಮಾತನಾಡುತ್ತಿದ್ದುದು ಆಧ್ಯಾತ್ಮಿಕ ತತ್ತ್ವಗಳ ಬುನಾದಿಯ ಮೇಲೆಯೇ ಆಗಿತ್ತಲ್ಲ! ತಾವು ಮಾಡಿದ ಕಾರ್ಯಗಳ ಕುರಿತು ಹೇಳುವಾಗ ತನ್ನಿಂದ ಮಾಡಿಸಿತು ಎಂಬ ಧ್ವನಿಯೇ ವ್ಯಕ್ತವಾಗುತ್ತಿತ್ತಲ್ಲ!
ಹಿರಿಯರಿಂದ ಇಂಥ ಮಾಹಿತಿಗಳನ್ನು ಕೇಳುವಾಗ, ಅಂದು ಸ್ವಾಮೀಜಿ ಹೇಳಿದ್ದು ಅತಿಶಯೋಕ್ತಿಯೂ ಅಲ್ಲ, ಮಾಹಿತಿದೋಷವೂ ಅಲ್ಲ ಎನ್ನುವುದು ಸ್ಪಷ್ಟವಾಗುತ್ತದೆ. ಅವರು ಅಂದು ಅಮೆರಿಕದ ಒಂದಷ್ಟು ತತ್ತ್ವಶಾಸ್ತ್ರದ ಪ್ರಮುಖರ ಸಂಪರ್ಕದಲ್ಲಂತೂ ಇದ್ದರು. ಅಮೆರಿಕಕ್ಕೆ ಹೋಗುವ ಮುನ್ನ ಭಾರತವನ್ನು ಉದ್ದಕ್ಕೂ ಪರಿಕ್ರಮಿಸಿದ್ದರು. ರಾಜಮಹಾರಾಜರಿಂದ ಹಿಡಿದು ಸಾಮಾನ್ಯರ ತನಕ ಎಲ್ಲರನ್ನೂ ಹತ್ತಿರದಿಂದ ಕಂಡಿದ್ದರು. ಸತ್ಯವನ್ನರುಹುವ ಸ್ವಾಮೀಜಿಯ ಮಾತಿನಲ್ಲಿ ಈ ಹಿನ್ನೆಲೆಯಲ್ಲಿ ಕೂಡಾ ಸತ್ಯದ ಅಭಿವ್ಯಕ್ತಿಗೆ ಬೇಕಾದ ಆಧಾರಗಳನ್ನು ಕಾಣಬಹುದಾದುದು ಸಹಜ.
ಸಾಮಾನ್ಯರನ್ನು ಪ್ರತಿನಿಧಿಸಿದ್ದ ವಚನಕಾರರು
ಸಾಮಾನ್ಯರೂ ಅಧ್ಯಾತ್ಮದ ಪರಿಭಾಷೆಯಲ್ಲಿ ಮಾತನಾಡುತ್ತಿದ್ದ ದೇಶದ ಈ ದೃಶ್ಯಕ್ಕೂ ದೇಶದ ಹೆಸರು ಜ್ಞಾನಸಂಬಂಧಿಯಾಗಿರುವುದಕ್ಕೂ ಒಂದು ಅವಿನಾಭಾವ ನಂಟಿದೆ. ಯಾಕೆಂದರೆ ನಮ್ಮ ಪರಂಪರೆಯ ಶ್ರದ್ಧೆಯಂತೆ ಜ್ಞಾನ ಬೇರೆಯಲ್ಲ, ಆತ್ಮಸಂಬಂಧಿಯಾದ ಅರಿವು ಬೇರೆಯಲ್ಲ.
ಜನರು ತಮ್ಮ ದೈನಂದಿನ ಆಗುಹೋಗುಗಳನ್ನು ಆತ್ಮದ ಪರಿಭಾಷೆಯಲ್ಲಿ ಮಾತನಾಡುತ್ತಿದ್ದರು ಎನ್ನುವುದು ಅವರ ಗ್ರಹಿಕೆಯ ಎತ್ತರವನ್ನು ಸೂಚಿಸುತ್ತದೆ. ಇಂಥ ಎತ್ತರದ ಗ್ರಹಿಕೆಯಲ್ಲಿ ಕೆಲಸಮಾಡುತ್ತಿದ್ದುದು ತಾತ್ತ್ವಿಕ ವಿಚಾರಗಳೇ ವಿನಾ ವ್ಯಾವಹಾರಿಕ ಸಂಗತಿಗಳಲ್ಲ.
ವಚನಸಾಹಿತ್ಯದ ಸಾಧ್ಯತೆಯನ್ನು ಈ ಹಿನ್ನೆಲೆಯಲ್ಲಿ ನೋಡಿದಾಗ ಸಮಾಜದ ತಾತ್ತ್ವಿಕ ಗ್ರಹಿಕೆಯ ಎತ್ತರ ಗೊತ್ತಾದೀತು. ಬೆರಳೆಣಿಕೆಯ ಕೆಲವರನ್ನು ಬಿಟ್ಟರೆ ಯಾವ ವಚನಕಾರರೂ ವಿದ್ವಾಂಸರಾಗಿರಲಿಲ್ಲ. ಈಗಿನ ಅರ್ಥದಲ್ಲಿ ಶಿಕ್ಷಿತರಲ್ಲ. ಅಂಥವರೆಲ್ಲ ತಾತ್ತ್ವಿಕ ನೆಲೆಗಟ್ಟಿನ ವಚನಗಳನ್ನು ಬರೆದರಲ್ಲ, ಅದನ್ನು ಇಂದಿನ ಸನ್ನಿವೇಶದಲ್ಲಿ ನಿಂತು ನೋಡಿದಾಗ ಅಚ್ಚರಿಯಾಗುತ್ತದೆ.
ಅವರೆಲ್ಲ ಬದುಕಿದ್ದನ್ನೇ ಬರೆದರು. ಆಚರಿಸುತ್ತಿದ್ದುದನ್ನು ಅಭಿವ್ಯಕ್ತಿಸಲು ಅಧ್ಯಯನ ಮತ್ತಿತರ ಪ್ರಯಾಸಸಹಸ್ರ ಬೇಕಿಲ್ಲವಷ್ಟೆ. ಅವರಿಗೆಲ್ಲ ಒಂದು ನೇತೃತ್ವ ಸಿಕ್ಕಿತು. ಒಂದು ವೇದಿಕೆ ಸಿಕ್ಕಿತು. ಚಳವಳಿಯ ಸ್ಫೂರ್ತಿ ಸಿಕ್ಕಿತು. ತಮ್ಮದಾದುದನ್ನು ಅಭಿವ್ಯಕ್ತಿಸಿದರು. ಅಭಿವ್ಯಕ್ತಿಸಿದ್ದು ದಾಖಲೆಯಾಯಿತು.
ಲಾಗಾಯ್ತಿನಿಂದ ಇಲ್ಲಿ ಜನ ತಮ್ಮದೇ ಬಳಗದ ಮಧ್ಯೆ ಹರಟೆಯ ರೀತಿಯಲ್ಲಿ ಇದೇ ವಿಚಾರಗಳನ್ನು ಅಭಿವ್ಯಕ್ತಿಸುತ್ತಲೇ ಬಂದಿದ್ದಾರೆ. ಅದಕ್ಕೆ ಚಳವಳಿಯ ಆವೇಶವಿರಲಿಲ್ಲ, ದಾಖಲೆಯಾಗಿಲ್ಲ, ಅಷ್ಟೆ.
ಭಾರತವಿದು, ಅಂದರೆ ಜ್ಞಾನದ ದೇಶವಿದು ಎಂಬುದನ್ನು ಈ ಹಿನ್ನೆಲೆಯಲ್ಲಿ ನೋಡಬಹುದೆನಿಸುತ್ತದೆ.
ಮಗುವಿಗೆ ಸಿಕ್ಕ ಸನ್ನಿವೇಶ
ಬದುಕನ್ನು ವಾಣಿಜ್ಯದೃಷ್ಟಿಯಿಂದ ನೋಡುವ ಮುನ್ನ ಜ್ಞಾನದೃಷ್ಟಿಯಿಂದಲೇ ನೋಡುವ ಕಲೆ ಇಲ್ಲಿ ಜನಸಾಮಾನ್ಯರ ತನಕವೂ ಕರಗತವಾಗಿತ್ತಲ್ಲ, ಅದು ಹೇಗೆ ಸಂಭವಿಸಿತು ಎನ್ನುವುದು ಚಿಂತನೀಯ ವಿಷಯವೇ. ಅದಕ್ಕೆ ಇಲ್ಲಿಯ ವ್ಯಷ್ಟಿಬದುಕು ಮತ್ತು ಸಮಷ್ಟಿಬದುಕು ಎರಡೂ ಶಿಕ್ಷಾಸಮೃದ್ಧವಾಗಿದ್ದುದು ಕಾರಣವಿರಬೇಕು.
ಮನೆಯೆ ಮೊದಲ ಪಾಠಶಾಲೆ ಅನ್ನುವುದು ಬರಿಯ ಕವಿಸಮಯದ ಮಾತಾಗಿರಲಾರದು, ಅದು ಹಿಂದಿನ ನಮ್ಮೆಲ್ಲ ಮನೆಗಳ ಒಂದು ವಾಸ್ತವ ಚಿತ್ರಣವೇ ಆಗಿರಲಿಕ್ಕೆ ಬೇಕು. ಈಗಲೂ ಹಳ್ಳಿಯ ಕೆಲವು ಮನೆಗಳು ಹಾಗೆ ಬದುಕುತ್ತಿವೆ. ಮಾತೃ ದೇವೋ ಭವ, ಪಿತೃ ದೇವೋ ಭವ ಇತ್ಯಾದಿಗಳು ಅಲ್ಲಿ ಬರಿಯ ಪಾಠದ ವಿಷಯಗಳಲ್ಲ, ಬದುಕಿನ ರೀತಿಯೇ ಆಗಿವೆ. ಅತಿಥಿ ದೇವೋ ಭವ ಎನ್ನುವುದಕ್ಕೆ ಭಾಷ್ಯಬರೆದಂತೆ ಇವೆ ಅಂಥ ಮನೆಗಳು.
ಅಂಥ ಸನ್ನಿವೇಶದಲ್ಲಿ ಹುಟ್ಟಿಬೆಳೆದ ಮಗು ಮತ್ತಿನ್ನೇನು ಯೋಚಿಸಲು ಸಾಧ್ಯ! ಪಾಠವಾಗದೆಯೇ ಪಾಠವನ್ನು ಬದುಕುವುದಾಗುತ್ತದೆ. ಬದುಕುವುದನ್ನೇ ಹೇಳುವುದಾಗುತ್ತದೆ. ತತ್ತ್ವಜ್ಞಾನದ ಅ ಆ ಇ ಈ ಮನೆಯಲ್ಲೇ ಸಿಗುತ್ತಿದ್ದ ಬಗೆ ಇದು.
ಎಲ್ಲರನ್ನೊಳಗೊಳ್ಳುವ ಶಿಕ್ಷಾಪ್ರಕಾರ
ಇದೇ ತಾತ್ತ್ವಿಕ ವಿಚಾರಗಳನ್ನು ಅರುಹುವ ಬಗೆಯಲ್ಲೇ ಸಮಷ್ಟಿಬದುಕು ಕೂಡಾ ರೂಪಿತವಾಗಿತ್ತು. ಮಠ-ದೇವಳಗಳು ನಡೆಸುತ್ತಿದ್ದ ಪ್ರವಚನಾದಿ ಕಾರ್ಯಕ್ರಮಗಳು, ಹಬ್ಬ ಜಾತ್ರೆ ಮತ್ತಿತರ ಸಂದರ್ಭಗಳಲ್ಲಿ ಆಯೋಜಿತವಾಗುತ್ತಿದ್ದ ಗಮಕ ಹರಿಕಥೆ ಮುಂತಾದ ಕಾರ್ಯಕ್ರಮಗಳು – ಇವು ನೇರವಾಗಿ ತಾತ್ತ್ವಿಕ ವಿಚಾರಗಳನ್ನು ಹೇಳುವ ವೇದಿಕೆಗಳೇ ಆಗಿದ್ದುವು. ಎಲ್ಲರೂ ಪಾಲ್ಗೊಳ್ಳಬಹುದಾಗಿದ್ದ ರೀತಿಯ ವಿನ್ಯಾಸವನ್ನು ಇವು ಹೊಂದಿದ್ದವು.
ಇನ್ನು ಎಲ್ಲರಿಗೂ ತೆರೆದ ಪ್ರವೇಶವಿರುವಂತೆ ಆಯೋಜನೆಗೊಳ್ಳುತ್ತಿದ್ದ ನಾಟಕ, ಯಕ್ಷಗಾನ ಮುಂತಾದ ಕಲಾಪ್ರಕಾರಗಳು ಪರೋಕ್ಷವಾಗಿ ಹೇಳುತ್ತಿದ್ದುದು ಜ್ಞಾನಸಂಬಂಧಿತ ತಾತ್ತ್ವಿಕ ವಿಚಾರಗಳನ್ನೇ. ಕಥಾನಕಗಳ ಮಾತಿನ ಅಭಿವ್ಯಕ್ತಿಯಿಂದಲೋ ಸಂಗೀತದ ಅಭಿವ್ಯಕ್ತಿಯಿಂದಲೋ ಇಲ್ಲವೇ ನೃತ್ಯದ ಮೂಲಕವೋ ಅವು ಈ ಕಾರ್ಯವನ್ನು ಅತ್ಯಂತ ಆಕರ್ಷಕವಾಗಿ ಮನಗೊಂಬುವಂತೆ ಮಾಡುತ್ತಿದ್ದವು.
ಪ್ರವಚನದಂಥ ಕಾರ್ಯಕ್ರಮಗಳಿರಬಹುದು, ವಿವಿಧ ಕಲಾಪ್ರಕಾರಗಳ ಕಾರ್ಯಕ್ರಮಗಳಿರಬಹುದು – ಇವು ವ್ಯಕ್ತಿಯಲ್ಲಿ ಬುದ್ಧಿಪ್ರಚೋದನೆಯ ಮೂಲಕ ಇಲ್ಲವೇ ಭಾವಪ್ರಚೋದನೆಯ ಮೂಲಕ ತಾತ್ತ್ವಿಕ ಗಟ್ಟಿತನವನ್ನು ಉಂಟುಮಾಡುತ್ತಿದ್ದುವು.
ಮತ್ತು ಸಮಾಜದಲ್ಲಿರುವ ಪ್ರತಿಯೊಬ್ಬನೂ ಇಂಥ ಒಂದಲ್ಲ ಒಂದು ಕಾರ್ಯಕ್ರಮದ ಜತೆಗೆ ಆಸಕ್ತಿಯ ನಂಟನ್ನು ಹೊಂದಿರುತ್ತಿದ್ದ. ಸಮಷ್ಟಿಯ ಶಿಕ್ಷಾಪ್ರಕಾರವು ಎಲ್ಲರನ್ನೂ ಒಳಗೊಳ್ಳುವ ಮತ್ತು ವಿಚಾರವನ್ನು ಪ್ರಚೋದಿಸುವ ನಿಟ್ಟಿನಲ್ಲಿ ಇಲ್ಲಿ ನಡೆದ ಇಂಥ ಪ್ರಯೋಗಗಳು ನಿಜಕ್ಕೂ ಚಿಂತನೀಯ.
ಸಲ್ಲುವ ಅನೌಪಚಾರಿಕ ಶಿಕ್ಷಣ
ಮನೆ-ಮಠ-ಸಮಾಜ ಹೀಗೆ ವಿವಿಧ ಸ್ತರಗಳಲ್ಲಿ ಇದ್ದ ಇಂಥ ಶಿಕ್ಷಣದ ವ್ಯವಸ್ಥೆಯು ಅನೌಪಚಾರಿಕ ನೆಲೆಯದ್ದು. ಪ್ರಾರಂಭದಲ್ಲಿಯೇ ಇವುಗಳನ್ನು ವಿವರಿಸಹೊರಟದ್ದು ಅವೂ ಶಿಕ್ಷಣದ ಪ್ರಯಾಸಗಳೇ ಎಂಬುದನ್ನು ಅವಲೋಕಿಸಲು.
ಶಿಕ್ಷಣವು ಅನೌಪಚಾರಿಕವಾಗಿತ್ತು ಎಂದಾಗ ಮೂಗುಮುರಿವ ಸಾಧ್ಯತೆಗಳೇ ಅಧಿಕ. ಇದರ ಹಿಂದೆ ಆಧುನಿಕ ಔಪಚಾರಿಕ ಶಿಕ್ಷಣದ ಪ್ರಭಾವವಿದೆ. ಆದರೆ ಇಲ್ಲಿದ್ದ ಅನೌಪಚಾರಿಕ ಶಿಕ್ಷಣವು ವ್ಯಕ್ತಿವ್ಯಕ್ತಿಯಲ್ಲಿಯೂ ಬೀರಿದ ಪರಿಣಾಮವನ್ನು ನೋಡಿದಾಗ ಅದರ ಮಹತ್ತ್ವವು ಅರಿವಾಗದಿರದು.
ನಿಜಕ್ಕಾದರೆ ಶಿಕ್ಷಣವು ಘಟಿಸಬೇಕಾದುದು ಅನೌಪಚಾರಿಕವಾಗಿಯೇ. ಔಪಚಾರಿಕತೆಯಲ್ಲಿ ಒಂದು ಎಚ್ಚರ ಸದಾ ಸಕ್ರಿಯವಿರುತ್ತದೆ. ತಾನು ಯಾವ ಶಿಕ್ಷಣವನ್ನು ಪಡೆಯಬೇಕು, ಯಾವಾಗ ಪಡೆಯಬೇಕು, ಯಾವುದು ಆದ ನಂತರ ಯಾವುದನ್ನು ಪಡೆಯಬೇಕು ಇತ್ಯಾದಿ ಕ್ರಮಬದ್ಧತೆಯು ಔಪಚಾರಿಕ ವ್ಯವಸ್ಥೆಯಲ್ಲಿ ಇರುವುದು ಸಹಜ.
ನಿಜಕ್ಕಾದರೆ ಶಿಕ್ಷಣವನ್ನು ಪಡೆಯುತ್ತಿದ್ದೇನೆ ಎಂಬ ಎಚ್ಚರವೇ ಅದನ್ನು ಪಡೆಯುವಲ್ಲಿ ಇರುವ ದೊಡ್ಡ ತೊಡಕು. ಶಿಕ್ಷಣವನ್ನು ಸಹಜವಾಗಿ ಪಡೆಯಬೇಕು, ಪಡೆಯುತ್ತಿದ್ದೇನೆ ಎಂಬ ಭಾವ ಇಲ್ಲದೆ ಪಡೆಯಬೇಕು, ಪಡೆಯುತ್ತಿದ್ದೇನೆಂಬ ಅಹಂಕಾರವು ಕಾಡದಂತೆ ಪಡೆಯಬೇಕು. ಹೀಗೆ ಪಡೆಯಲು ಅನೌಪಚಾರಿಕ ಶಿಕ್ಷಣದ ವ್ಯವಸ್ಥೆಯು ಬಲು ಪೂರಕ.
ಹೀಗೆಂದ ಮಾತ್ರಕ್ಕೆ ಔಪಚಾರಿಕ ಶಿಕ್ಷಣವು ಕಡಮೆ ಎಂದಾಗಲೀ ಸಲ್ಲದು ಎಂದಾಗಲೀ ಇಲ್ಲಿಯ ವಾದವಲ್ಲ. ಮಹತ್ತ್ವವಿರುವ ಶಿಕ್ಷಣ ಪದ್ಧತಿಯೇ ಅದು. ಮತ್ತು ಪ್ರಾಚೀನದ ನಮ್ಮ ಶಿಕ್ಷಣಪದ್ಧತಿಯು ಔಪಚಾರಿಕ ನೆಲೆಯಲ್ಲಿಯೂ ಚೆನ್ನಾಗಿಯೇ ಕಾರ್ಯನಿರ್ವಹಿಸುತ್ತಿತ್ತು.
ಗಟ್ಟಿಯಾಗಿದ್ದ ಪದ್ಧತಿದ್ವಯ
ಸಭ್ಯತೆಯ ದೃಷ್ಟಿಯಿಂದ ಪ್ರಪಂಚವು ಇನ್ನೂ ಶೈಶವಾವಸ್ಥೆಯಲ್ಲಿದ್ದಾಗ ಇಲ್ಲಿ ಗುರುಕುಲ ಪದ್ಧತಿಯ ಶಿಕ್ಷಣವು ಉನ್ನತಸ್ಥಿತಿಯಲ್ಲಿ ಕಾರ್ಯನಿರ್ವಹಿಸುತ್ತಿತ್ತು ಎನ್ನುವುದನ್ನು ವಿದೇಶೀ ಪ್ರವಾಸಿಗರೇ ದಾಖಲಿಸಿದ್ದಾರೆ. ನಲಂದಾ ತಕ್ಷಶಿಲಾದಂಥ ಪ್ರಾಚೀನ ವಿಶ್ವವಿದ್ಯಾಲಯಗಳ ಹೆಸರನ್ನು ಕೇಳದವರು ಯಾರು! ಇಂಥ ವಿಶ್ವವಿದ್ಯಾಲಯಗಳು ಮತ್ತು ಗುರುಕುಲಗಳು ನಮ್ಮ ಔಪಚಾರಿಕ ಶಿಕ್ಷಣದ ಉತ್ತಮ ದೃಷ್ಟಾಂತಗಳು.
ಈ ವ್ಯವಸ್ಥೆಯಲ್ಲಿ ಅಷ್ಟಿಷ್ಟು ರೂಪಾಂತರಗಳು ಘಟಿಸಿದ್ದಿರಬಹುದು. ಆದರೆ ಅವುಗಳ ಸ್ಫೂರ್ತಿ ನಿರಂತರ ಹರಿದು ಒಂದು ಗಟ್ಟಿಯಾದ ಶಿಕ್ಷಣಪದ್ಧತಿ ಇಲ್ಲಿ ಅನೂಚಾನವಾಗಿ ನಡೆದುಬಂದಿತ್ತು. ಅದನ್ನು ಗಾಂಧೀಜಿಯವರು ‘ಸುಂದರವೃಕ್ಷ’ ಎಂದು ಕರೆದರು. ಈ ಸುಂದರವೃಕ್ಷವನ್ನು ನಷ್ಟಗೊಳಿಸಿದಿರಿ ಎಂದು ಆಂಗ್ಲರ ನಾಡಿನಲ್ಲೇ ಹೇಳಿಬಂದರು.
ಪ್ರಸಿದ್ಧ ಗಾಂಧಿವಾದಿ ಚಿಂತಕ ಧರ್ಮಪಾಲ್ ನಂತರದ ದಿನಗಳಲ್ಲಿ ಈ ಕುರಿತು ಆಂಗ್ಲರೇ ಸಮೀಕ್ಷಿಸಿ ಕಲೆಹಾಕಿದ ದಾಖಲೆಗಳನ್ನು ಅಧ್ಯಯಿಸಿ ಆ ಸುಂದರವೃಕ್ಷ ಹೇಗಿತ್ತೆನ್ನುವುದನ್ನು ದಾಖಲೆಸಹಿತ ಒಂದು ಪುಸ್ತಕ ಬರೆದರು. ತಥಾಕಥಿತ ದಲಿತರು, ಶೂದ್ರರು, ಮಹಿಳೆಯರು ಸೇರಿದಂತೆ ಎಲ್ಲರೂ ತಮ್ಮ ತಮ್ಮ ಆಸಕ್ತಿಯ ವಿಷಯಗಳನ್ನು ಹೇಗೆ ಅಧ್ಯಯನ ಮಾಡುತ್ತಿದ್ದರು ಎನ್ನುವುದನ್ನು ಅವರ ಈ “ದಿ ಬ್ಯೂಟಿಫುಲ್ ಟ್ರೀ” ಗ್ರಂಥ ದೃಷ್ಟಾಂತಸಮೇತ ವಿವರಿಸಿದೆ.
ಇದು ಈಚಿನವರೆಗೆ ಅಂದರೆ ಹದಿನೆಂಟನೆಯ ಶತಮಾನದವರೆಗೆ ಇದ್ದ ನಮ್ಮ ಔಪಚಾರಿಕ ಶಿಕ್ಷಣವ್ಯವಸ್ಥೆಯ ಕಥೆ.
ನಮ್ಮಲ್ಲಿಯ ಅನೌಪಚಾರಿಕ ಶಿಕ್ಷಣಪದ್ಧತಿಯೂ ಗಟ್ಟಿತನದಿಂದ ಕೂಡಿತ್ತು, ಔಪಚಾರಿಕ ಶಿಕ್ಷಣಪದ್ಧತಿಯೂ ಗಟ್ಟಿತನದಿಂದ ಕೂಡಿತ್ತು ಮತ್ತು ಅವೆರಡೂ ಎಲ್ಲರನ್ನೂ ಒಳಗೊಂಡೇ ಸಕ್ರಿಯವಿದ್ದವು.
ಶಿಕ್ಷಣದ ಎರಡು ಆಯಾಮಗಳು
ಶಿಕ್ಷಣವು ಮನುಷ್ಯನನ್ನು ಹೇಗೆ ರೂಪಿಸಬೇಕು, ಶಿಕ್ಷಣದಿಂದ ಮನುಷ್ಯ ಏನನ್ನು ಪಡೆಯಬೇಕು ಎನ್ನುವುದು ಶಿಕ್ಷಣದ ಕುರಿತು ನಾವು ಯಾವ ದೃಷ್ಟಿಕೋನವನ್ನು ಹೊಂದಿದ್ದೇವೆ ಎನ್ನುವುದನ್ನು ಸ್ಪಷ್ಟಪಡಿಸುತ್ತದೆ.
ಇಲ್ಲಿ ಎರಡು ಬಿಂದುಗಳಿವೆ; ಮನುಷ್ಯನು ಹೇಗೆ ರೂಪುಗೊಳ್ಳಬೇಕು ಮತ್ತು ಏನನ್ನು ಪಡೆಯಬೇಕು. ಹೇಗೆ ರೂಪುಗೊಳ್ಳಬೇಕು ಎನ್ನುವುದು ಸಂಸ್ಕಾರಕ್ಕೆ ಸಂಬಂಧಿಸಿದ್ದು. ಏನನ್ನು ಪಡೆಯಬೇಕು ಎನ್ನುವುದು ಜ್ಞಾನಕ್ಕೆ ಸಂಬಂಧಿಸಿದ್ದು.
ಭಾರತೀಯ ಶಿಕ್ಷಣವು ಇವೆರಡಕ್ಕೆ ಒತ್ತುಕೊಟ್ಟು ಬಂದ ಪದ್ಧತಿ ಎನ್ನಬಹುದು. ಮತ್ತಿವೆರಡು ಪರಸ್ಪರ. ಜ್ಞಾನವನ್ನು ಪಡೆಯಲು ಒಂದು ಅಧಿಕಾರ ಬೇಕು. ಅದಕ್ಕಾಗಿ ಸಂಸ್ಕಾರ. ಸುಸಂಸ್ಕೃತನು ಶಿಕ್ಷಣದಿಂದ ಪಡೆಯಬೇಕಾದುದು ಜ್ಞಾನವನ್ನೇ.
ಬದುಕು ವಾಣಿಜ್ಯೀಕರಣಗೊಳ್ಳುವ ಮುಂಚಿನ ಶಿಕ್ಷಾದೃಷ್ಟಿಯಿದು. ನಂತರದಲ್ಲಿ ವಾಣಿಜ್ಯದೃಷ್ಟಿಯು ಬದುಕಿನ ಎಲ್ಲ ಆಯಾಮಗಳಲ್ಲಿ ವಿಸ್ತರಿಸಿತು. ಶಿಕ್ಷಣದ ಉದ್ದೇಶವೂ ಸಂಪಾದನೆಯ ದಾರಿಯನ್ನು ಕಂಡುಕೊಳ್ಳುವುದೇ ಆಯಿತು.
ಜ್ಞಾನೈಕದೃಷ್ಟಿಯ ಭಾರತೀಯ ಶಿಕ್ಷಣಪದ್ಧತಿಯು ವಾಣಿಜ್ಯೈಕದೃಷ್ಟಿಯತ್ತ ಕುಸಿದ ಪರಿಯೇ ದುರಂತಮಯವಾದುದು.
ಲಾಭೈಕದೃಷ್ಟಿಯ ಶಿಕ್ಷಣ
ಆಂಗ್ಲರು ಮೂಲತಃ ವ್ಯಾಪಾರಿಗಳು. ವಿತರಣೆಯೇ ಪ್ರಧಾನವಾದ ಸಮಷ್ಟಿಹಿತದ ವ್ಯಾಪಾರಿಗಳಲ್ಲ, ಲಾಭವೇ ಪ್ರಧಾನವಾದ ಸ್ವಾರ್ಥಪರವಾದ ವ್ಯಾಪಾರಿಗಳು. ವ್ಯಾಪಾರವನ್ನು ನಾವು ಕಂಡ ದೃಷ್ಟಿಗೂ ಅವರು ಕಂಡ ದೃಷ್ಟಿಗೂ ಹೀಗೆ ವ್ಯತ್ಯಾಸವಿದೆ.
ಲಾಭೈಕದೃಷ್ಟಿಯ ವ್ಯಾಪಾರಿಯು ಆಡಳಿತಸೂತ್ರಹಿಡಿದರೆ ಆಡಳಿತದ ಪ್ರತಿಯೊಂದು ಆಯಾಮವನ್ನೂ ಲಾಭಾನ್ವಿತಗೊಳಿಸುವ ಕುರಿತೇ ಯೋಚಿಸುವುದು ಸಹಜ. ಇಂಥ ಸಹಜತೆಯಿಂದ ಇನಿತೂ ಮುಕ್ತರಾಗದ ಆಂಗ್ಲರು ಇಲ್ಲಿಯ ಜ್ಞಾನೈಕದೃಷ್ಟಿಯ ಶಿಕ್ಷಣಪದ್ಧತಿಯನ್ನು ನಷ್ಟಪಡಿಸಿ ಅದನ್ನು ಲಾಭೈಕದೃಷ್ಟಿಯ ಪದ್ಧತಿಯಾಗಿ ರೂಪಿಸಿದರು. ಅಂಥ ಪದ್ಧತಿಯು ಅವರಿಗೆ ಬೇಕಾದ ಕಾರಕೂನರನ್ನು ನಿರ್ಮಿಸುವ ಕೇಂದ್ರಗಳಾದವು.
ಅವರು ಕಾಲ್ತೆಗೆದ ಬಳಿಕವೂ ಶಿಕ್ಷಣದ ದೃಷ್ಟಿಕೋನ ಬದಲಾಗಲಿಲ್ಲ. ಒಟ್ಟಾರೆ ಶಿಕ್ಷಣದಿಂದ ಕಂಡುಕೊಳ್ಳಬೇಕಾದುದು ಉದ್ಯೋಗದ ಒಂದು ದಾರಿ ಎನ್ನುವ ಹಂತಕ್ಕೆ ಅದು ಬಂದು ತಲುಪಿತು. ಇಂದಿಗೂ ಇದೇ ದೃಷ್ಟಿ ಚಾಲ್ತಿಯಲ್ಲಿದೆ.
ನಿಜಕ್ಕಾದರೆ ಉದ್ಯೋಗಿಗಳ ನಿರ್ಮಾಣಕ್ಕೆ ಬೇಕಾದುದು ಶಿಕ್ಷಣವಲ್ಲ, ತರಬೇತಿ. ಆದರೆ ಉದ್ಯೋಗಿಗಳ ನಿರ್ಮಾಣದ ಲಕ್ಷ್ಯದಲ್ಲಿ ಇಂದಿನ ಶಿಕ್ಷಣವು ಅತ್ತ ಸೂಕ್ತ ತರಬೇತಿಯನ್ನೂ ಕೊಡುತ್ತಿಲ್ಲ, ಇತ್ತ ಜ್ಞಾನದ ಧ್ಯೇಯವನ್ನೂ ಕೈಬಿಟ್ಟಿದೆ.
ಯೋಗ್ಯತೆಯಲ್ಲ, ಅರ್ಹತೆ!
ಬಹುತೇಕ ಯಾವುದೇ ಉದ್ಯೋಗಕ್ಕೆ ಕೆಲವೇ ತಿಂಗಳ ತರಬೇತಿ ಸಾಕು. ವರ್ಷಾನುಗಟ್ಟಲೆ ಕಲಿಯುವಂಥ ಅಗತ್ಯ ಇರುವುದಿಲ್ಲ. ಆದರೆ ಈಗ ಹಾಗೆ ಕಲಿತೂ ಕೂಡಾ ಉದ್ಯೋಗಕ್ಕೆ ಸೇರುವಾಗ ತರಬೇತಿ ಅವಶ್ಯವೇ ಆಗಿಬಿಟ್ಟಿದೆ. ಅಲ್ಲದೆ ವರ್ಷಾನುಗಟ್ಟಲೆ ಕಲಿತದ್ದು ಉದ್ಯೋಗಕ್ಷೇತ್ರದಲ್ಲಿಯೂ ಉಪಯೋಗಕ್ಕಿಲ್ಲ, ಬದುಕಿಗೂ ಉಪಯೋಗಕ್ಕಿಲ್ಲ ಎಂಬಂತೆ ಆಗಿಬಿಟ್ಟಿದೆ.
ವಸ್ತುತಃ ಇದು ಶಿಕ್ಷಣದ ಸೋಲು. ಆದರೆ ಇದನ್ನು ಸೋಲೆಂದು ಒಪ್ಪಿಕೊಳ್ಳುವ ಪ್ರಾಮಾಣಿಕತೆಯಾಗಲೀ ಸೋಲನ್ನು ಕಂಡುಕೊಳ್ಳುವ ಶೋಧಬುದ್ಧಿಯಾಗಲೀ ಇಂದಿನ ಶಿಕ್ಷಣದಿಂದ ಲಭ್ಯವಾಗುತ್ತಿಲ್ಲ.
ಇಂದಿನ ಶಿಕ್ಷಣಕ್ಕೆ ಪ್ರವೇಶಪಡೆಯುತ್ತಿರುವುದು ಉದ್ಯೋಗಾರ್ಥಿಯೇ ವಿನಾ ಶಿಕ್ಷಾರ್ಥಿ ಅಲ್ಲವಲ್ಲ! ಈ ಸೋಲನ್ನು ಶಿಕ್ಷಾರ್ಥಿ ಕಂಡುಕೊಂಡಾನೇನೋ, ಉದ್ಯೋಗಾರ್ಥಿಯಿಂದ ಅದು ಕಷ್ಟಸಾಧ್ಯ.
ಪರೀಕ್ಷಾಧಾರಿತ, ಪ್ರಮಾಣಪತ್ರಾಧಾರಿತ ಶಿಕ್ಷಣಕ್ರಮವಲ್ಲವೆ ಇದು. ಪರೀಕ್ಷೆಗೆ ಬರೆಯಲು ಇರುವ ಅರ್ಹತೆಯೇ ಪ್ರಶ್ನಾರ್ಹವಾಗಿದೆ. ಹಾಜರಾತಿ, ಶುಲ್ಕಪಾವತಿ ಇತ್ಯಾದಿಗಳಲ್ಲವೆ ಆ ಅರ್ಹತೆಗಳು! ಅವನ ಗುಣಸ್ವಭಾವಗಳು ಇಲ್ಲಿ ಅತ್ಯಂತ ಅಮುಖ್ಯ. ಅಂದರೆ; ಸೂಚಿತ ಅರ್ಹತೆಗಳಿದ್ದರೆ ಒಬ್ಬ ಕೊಲೆಗಾರನೂ ದರೋಡೆಕೋರನೂ ಪರೀಕ್ಷೆ ಬರೆಯಬಹುದು. ಅಂದರೆ; ಅದು ಅರ್ಹತೆಯನ್ನಷ್ಟೆ ನೋಡುತ್ತದೆ, ಯೋಗ್ಯತೆಯನ್ನಲ್ಲ.
ಮನುಷ್ಯನು ಹೇಗೆ ರೂಪುಗೊಳ್ಳಬೇಕು ಎಂಬುದು ಇಲ್ಲಿ ಗೌಣವಿದೆ. ಏನನ್ನು ಪಡೆಯಬೇಕು ಎನ್ನುವಲ್ಲಿ ಉದ್ಯೋಗಕ್ಷೇತ್ರಕ್ಕೆ ಬೇಕಾದ ಅರ್ಹತೆಯನ್ನು ಎಂಬುದಷ್ಟೆ ಪ್ರಧಾನವಿದೆ.
ಕಂಠಸ್ಥೀಕರಣದ ಮಹತ್ತ್ವ
ಭಾರತೀಯ ಶಿಕ್ಷಣಪದ್ಧತಿಯು ಈ ನಿಟ್ಟಿನಲ್ಲಿ ಒಂದು ಸ್ಪಷ್ಟತೆಯನ್ನು ಹೊಂದಿದೆ; ಶಿಕ್ಷಣದಿಂದ ಪಡೆಯಬೇಕಾದುದೇನು ಮತ್ತು ಪಡೆಯಲು ಇರಬೇಕಾದ ಯೋಗ್ಯತೆಯೇನು?
ಶಿಕ್ಷಣದಿಂದ ಪಡೆಯಬೇಕಾದುದು ಜ್ಞಾನವನ್ನೇ. ಅದು ಆತ್ಮನಿಷ್ಠ ಜ್ಞಾನ. ಸ್ವಸ್ವರೂಪದ ಕುರಿತಾದ, ತನಗೂ ಹೊರಗೆ ಕಾಣುವ ಪ್ರಪಂಚಕ್ಕೂ ತನಗೂ ಕಾಣದ ಅತೀತಕ್ಕೂ ಇರುವ ಸಂಬಂಧದ ಕುರಿತಾದ ಜ್ಞಾನ.
ಉದ್ಯೋಗೋನ್ಮುಖಿಯಾದ ಆಧುನಿಕ ಶಿಕ್ಷಣಕ್ಕೆ ಜ್ಞಾನದ ಬಗೆಗೆ ಆಸಕ್ತಿಯಿಲ್ಲ. ಅದು ಮಾಹಿತಿಗಳ ಮಹಾಪೂರವನ್ನೇ ಪಾಠ್ಯದಲ್ಲಿ ಸುರಿದುಬಿಡುತ್ತದೆ.
ಜ್ಞಾನವೆಂದರೆ ಮಾಹಿತಿಗಳಲ್ಲ ಎನ್ನುವುದು ಸರಿ. ಆದರೆ ಮಾಹಿತಿಗಳ ನಡುವಿನ ಸಂಬಂಧದ ಕುರಿತು ಅವಲೋಕನ ನಡೆದರೆ ಅದು ಜ್ಞಾನದೆಡೆಗಿನ ನಡೆಯೇ ಆದೀತು.
ಮಾಹಿತಿಗಳನ್ನು ತಿಳಿದುಕೊಳ್ಳಲು ಬೇಕಾದುದು ಬಹಿರ್ಯಾನ. ಜ್ಞಾನನಿಷ್ಠ ನಡೆಗೆ ಬೇಕಾದುದು ಅಂತರ್ಯಾನ. ಇರುವ ಜ್ಞಾನೇಂದ್ರಿಯಗಳನ್ನೇ ಎರಡಕ್ಕೂ ಬಳಸುವುದಾಗುತ್ತದೆ. ಸ್ವಭಾವತಃ ಅವು ಬಹಿರ್ಮುಖಿಯಾಗಿವೆ. ಅವುಗಳನ್ನು ಅಂತರ್ಮುಖಿಯಾಗಿಸಲು ಒಂದು ಸಂಸ್ಕಾರ ಅವಶ್ಯ. ಜ್ಞಾನದೆಡೆಗಿನ ನಡೆಗೆ ಯೋಗ್ಯತೆ ಬರುವುದು ಇಂಥ ಸಂಸ್ಕಾರವನ್ನು ಪಡೆದಾಗ.
ದೃಷ್ಟಾಂತಕ್ಕೆ ಹೇಳುವುದಾದರೆ; ಕಂಠಸ್ಥೀಕರಣವು ಒಂದು ಸಂಸ್ಕಾರ. ಬಾಲ್ಯದಲ್ಲಿ ಇದರ ಸಾಮರ್ಥ್ಯ ಅಧಿಕ. ಮನಸ್ಸಿನ ಏಕಾಗ್ರತೆಯು ಇದರಿಂದ ಸುಲಭವಾಗಿ ಲಭಿಸುತ್ತದೆ. ಬಾಲ್ಯದಲ್ಲಿ ಕಂಠಸ್ಥಗೊಳಿಸಿದ್ದನ್ನೇ ಮುಂದೆ ಅರ್ಥಸಹಿತ ತಿಳಕೊಳ್ಳುವುದು, ಭಾಷ್ಯಸಹಿತ ಅವಗತಮಾಡಿಕೊಳ್ಳುವುದು ನಡೆಯುತ್ತದೆ.
ಭಾರತೀಯ ಶಿಕ್ಷಣದಲ್ಲಿ ಕಂಠಸ್ಥೀಕರಣಕ್ಕೆ ಒತ್ತು ಇತ್ತು. ಆಧುನಿಕ ಶಿಕ್ಷಣದಲ್ಲಿ ಅದನ್ನು ಬಹುತೇಕ ಕೈಬಿಡಲಾಗಿದೆ.
ಸಮೃದ್ಧವಾಗಿದ್ದ ಕೌಶಲಸಂಬಂಧೀ ಜ್ಞಾನ
ಉದ್ಯೋಗನಿಷ್ಠವಾದ ಶಿಕ್ಷಣವ್ಯವಸ್ಥೆ ಇಲ್ಲಿ ಇರಲೇ ಇಲ್ಲ ಎಂದೂ ತರ್ಕಿಸಬೇಕಿಲ್ಲ.
ಇಲ್ಲಿ ನಡೆದ ಕೌಶಲವೃದ್ಧಿಯ ಪ್ರಯಾಸಗಳಿಗೆ ಮಿತಿಯಿರದು. ಕೌಶಲವು ಸ್ವಭಾವ ಸಾಮರ್ಥ್ಯ ಆಸಕ್ತಿಗಳಿಗೆ ತಕ್ಕಂತೆ ಸಿದ್ಧಿಸುತ್ತದೆ. ವಂಶವಾಹಿ ಗುಣದಿಂದ ಅವು ಸಹಜವಾಗಿ ಸಿದ್ಧಿಸುತ್ತವೆ. ಕುಂಬಾರನ ಮನೆಯಲ್ಲಿ ಕುಂಬಾರನೇ ತಯಾರಾಗುವ ಪರಿ ಇದು. ಇದನ್ನು ವೈಜ್ಞಾನಿಕವೆಂದು ಅವಲೋಕಿಸಲೂ ಬರುತ್ತದೆ, ಜಾತೀಯವೆಂದು ಖಂಡಿಸಲೂ ಬರುತ್ತದೆ. ಆದರೆ ವಂಶವಾಹಿಯಾಗಿ ಸಿದ್ಧಿಸುವ ಸ್ವಭಾವ ಸಾಮರ್ಥ್ಯಗಳನ್ನು ಇಲ್ಲವಾಗಿಸಲಾಗದು.
ಇಲ್ಲಿ ಇಂಥ ಸಿದ್ಧಿಯನ್ನೇ ಬಳಸಿಕೊಂಡು ಪಾರಂಪರಿಕ ಜ್ಞಾನವು ಅಚ್ಚರಿಪಡುವಷ್ಟು ಬೆಳೆಯಿತು. ಬೆಂಕಿಪೊಟ್ಟಣದಲ್ಲಿ ಮಡಚಿಡುವಂಥ ಸೀರೆಯನ್ನು ತಯಾರುಮಾಡುತ್ತಿದ್ದರಲ್ಲವೆ ಇಲ್ಲಿಯ ನೇಕಾರರು. ಅಂಥ ನೇಕಾರರ ಬೆರಳುಗಳನ್ನೇ ಕತ್ತರಿಸಿಹಾಕಿದರು ಆಂಗ್ಲರು. ಕೌಶಲವಿರುವ ಬಹುತೇಕ ಎಲ್ಲರ ಬದುಕನ್ನೇ ಕತ್ತರಿಸಿಹಾಕುವ ಕೆಲಸವನ್ನು ಆಂಗ್ಲರು ಪ್ರತ್ಯಕ್ಷವಾಗಿ ಇಲ್ಲವೇ ಪರೋಕ್ಷವಾಗಿ ಸಾಧಿಸಿಬಿಟ್ಟರು. ಅವರು ಹೋದಬಳಿಕ ಅವರ ಭಾರತೀಯ ಉತ್ತರಾಧಿಕಾರಿಗಳು ಅದನ್ನು ಪೂರೈಸಿದರು.
ಇಂದು ಅಂಥ ಪಾರಂಪರಿಕ ಜ್ಞಾನವು ಮರೆಗೆ, ಮರೆವಿಗೆ ಸಲ್ಲುವಷ್ಟು ವಿರಳವಾಗಿದೆ. ಪರಕೀಯರ ಆಳ್ವಿಕೆಯಲ್ಲೂ ಪರಕೀಯ ಶೈಲಿಯ ಸ್ವಕೀಯ ಆಳ್ವಿಕೆಯಲ್ಲೂ ಶಿಕ್ಷಣಕ್ಕೆ ಸಂಬಂಧಿಸಿದಂತೆ ಆದುದೇನೆಂದರೆ; ಅತ್ತ ಜ್ಞಾನಸಂಬಂಧೀ ಶಿಕ್ಷಣಪದ್ಧತಿಯೂ ಕುಸಿತಕಂಡಿತು, ಇತ್ತ ಕೌಶಲಸಂಬಂಧೀ ಪಾರಂಪರಿಕ ಜ್ಞಾನಸಂವಹನ ವ್ಯವಸ್ಥೆಯೂ ಪತನಕಂಡಿತು.
ಜ್ಞಾನಸಿದ್ಧಿಯ ಕಲಿಕೆ
ಶಿಕ್ಷಣವೆಂದರೆ ಕಲಿಕೆ. ಕಲಿಕೆಗೆ ಅಂತ್ಯವಿಲ್ಲ. ಎಲ್ಲರಿಂದಲೂ ಎಲ್ಲದರಿಂದಲೂ ಕಲಿಯುವುದಿರುತ್ತದೆ.
ಗುರು ದತ್ತಾತ್ರೇಯನಿಗೆ ಇಪ್ಪತ್ತನಾಲ್ಕು ಗುರುಗಳು. ಅವುಗಳಲ್ಲಿ ಪಂಚಭೂತಗಳೂ ಇವೆ, ಸೃಷ್ಟಿಸಮಸ್ತವೂ ಇವೆ. ಅವಧೂತಗೀತೆಯಲ್ಲಿ ಅಜಗರದಿಂದ, ವೇಶ್ಯೆಯಿಂದ ಮತ್ತಿತರರಿಂದ ಒಂದೊಂದು ಗುಣವನ್ನು ಕಲಿತ ದೃಷ್ಟಾಂತಗಳ ವಿವರಗಳಿವೆ.
ಇಂಥ ಕಲಿಕೆಯಲ್ಲಿ ಸಂಸ್ಕಾರದ ಅಂಶವೂ ಲಭಿಸುವುದಿದೆ, ಜ್ಞಾನದ ಹೊಳಹೂ ಸಿದ್ಧಿಸುವುದಿದೆ.
ಒಬ್ಬನೇ ಗುರುವಿನಿಂದ ಕಲಿಯುವ ಪದ್ಧತಿಯೂ ಇದೆ, ಸೃಷ್ಟಿಯ ಎಲ್ಲದರಿಂದಲೂ ಎಲ್ಲರಿಂದಲೂ ಕಲಿಯುವ ಪದ್ಧತಿಯೂ ಇದೆ.
ಬದುಕನ್ನೇ ಒಂದು ಕಲಿಕೆ ಎಂದು ಪರಿಭಾವಿಸುವ ಸನ್ನಿವೇಶವೂ ಇದೆ. ಆಗ ಕಲೆ, ಸಾಹಿತ್ಯ, ವೃತ್ತಿ ಇತ್ಯಾದಿ ಬದುಕಿನ ಸರ್ವರಂಗಗಳೂ ಕಲಿಕೆಯ ವೇದಿಕೆಗಳೇ ಆಗುತ್ತವೆ.
ಕಲಿಕೆಯ ಪರಿಣಾಮವಾಗಿ ಸಿದ್ಧಿಸಬೇಕಾದುದು ಜ್ಞಾನ. ಆತ್ಮಜ್ಞಾನ.
ನಮ್ಮೆಲ್ಲ ಕಲೆ, ಸಾಹಿತ್ಯ ಮತ್ತಿತರ ಬದುಕಿನ ಅಂಗಗಳು ಸಾಗಬೇಕಾದುದು ಮನುಷ್ಯನಿಗೆ ಈ ಜ್ಞಾನವನ್ನು ಒದಗಿಸುವ ಸಾಧನವಾಗಿ. ಹಾಗಾಗಿ ಇವೆಲ್ಲವೂ ಇರಬೇಕಾದುದು ಮನುಷ್ಯನ ಸೌಕರ್ಯವಾಗಿಯೋ ಮನೋರಂಜಕ ಪರಿಕರವಾಗಿಯೋ ಬೌದ್ಧಿಕ ಮೇಲ್ಮೆಯ ಸಾಧನವಾಗಿಯೋ ಆಗಿರದೆ ಜ್ಞಾನೈಕನಿಷ್ಠ ಧ್ಯೇಯವನ್ನು ಹೊಂದಿರುವವುಗಳಾಗಿವೆ. ಅವೆಲ್ಲವನ್ನೂ ಹಾಗೆಯೇ ಉಳಿಸಿ ಬೆಳೆಸಬೇಕಾದುದು ಭಾರತೀಯರ ಕರ್ತವ್ಯವೇ ಆಗಿದೆ.
(‘ಸ್ವರ್ಣವಲ್ಲಿ ಮಠದ ಗುರುಗಳ ಪೀಠಾರೋಹಣದ ರಜತವರ್ಷ ಸಂದರ್ಭ ಬಂದ “ರಜತಪ್ರಭ” ಸಂಚಿಕೆಗಾಗಿ ಬರೆದುದು)