ಪ್ರಕೃತಿಯ ವರ್ಣವೈಭವ ಕೇವಲ ಹಸುರಿನ ವಿನ್ಯಾಸ ವೈವಿಧ್ಯದಿಂದಷ್ಠೇ ಅಲ್ಲ; ಅದರ ಪತ್ತಲಗಳಲ್ಲಡಗಿರುವ ಪ್ರಾಣಿ-ಪಕ್ಷಿ ಸಮೂಹ ಸಹ ಆ ಚೆಲುವಿಗೆ ಪೂರಕವಾಗಿವೆ. ಆ ಚೆಲುವನ್ನು ಇಮ್ಮಡಿಗೊಳಿಸಿವೆ. ಮೇಲೆ ನೀಲಾಕಾಶ, ಕೆಳಗೆ,ಅತ್ತ, ಇತ್ತ,ಸುತ್ತಮುತ್ತ ಆವರಿಸುವ ಹಸುರಿನ ಮಧೆÀ್ಯ ಮಂಜುಳ ನಿನಾದದೊಂದಿಗೆ ತುಂಗೆ ಹರಿಯುತ್ತಾ, ಅದರಲ್ಲಿ ಸ್ನಾನಕ್ಕಿಳಿದ ಕವಿ ಕುವೆಂಪುಗೆ ನೀಲ ನಭದಲಿ ಬೆಳ್ಳಕ್ಕಿಯ ಹಿಂಡು ವಿವಿಧಾಕಾರ ತಾಳುತ್ತಾ ಹಾರಿಹೋಗುತ್ತಿದ್ದುದನು ಕಂಡಾಕ್ಷಣ ಅವರ ಕವಿ ಹೃದಯ ಉಲಿಯುವುದು

ಕಿಕ್ಕಿರಿದಟವಿಗಳಂಚಿನ ನಡುವೆ
ಮೆರೆದಿರೆ ಜಲಸುಂದರಿ ತುಂಗೆ
ದೇವರು ರುಜು ಮಾಡಿದನು
ರಸವಶವಾಗುತ ಕವಿ ಅದ ನೋಡಿದನು.
ಎಂದು. ಪಕ್ಷಿ ಪ್ರಪಂಚವೇ ಹಾಗೇ ತನ್ನ ಬಣ್ಣ,ವಿವಿಧಾಕಾರ,ಮನಸೆಳೆಯುವ ಕೂಗು ಉಂಟು ಮಾಡುವ ಪರಿಣಾಮಗಳು ವರ್ಣಿಸಲಸದಳ. ಹಕ್ಕಿಯೊಂದರ ಹಾರಾಟವನ್ನು ನೋಡುತ್ತಾ ನಿಂತರೆ ಪ್ರಕೃತಿಯೊಂದಿಗೆ ಬೆರೆತು,ಅದರೊಳಗೆ ತನ್ನನ್ನು ಮರೆತು ಅದ್ವೈತ ಸ್ಥಿತಿಗೆ ಜಾರುವ ಪರಿ.

ಈ ರೆಕ್ಕೆಯ ದ್ವಿಪಾದಿಗಳ ಬದುಕನ್ನು ತಡಕುತ್ತಾ ಸಾಗಿದರೆ,ನಾವು ೧೪೦ದಶಲಕ್ಷ ವರ್ಷಗಳ ಹಿಂದಕ್ಕೆ ಸಾಗಬೇಕಾಗುತ್ತದೆ. ಪಕ್ಷಿಗಳ ಉಗಮದ ಕುರುಹನ್ನೊದಗಿಸುವ ಪಳಿಯುಳಿಕೆ ದಕ್ಷಿಣ ಜರ್ಮನಿಯಲ್ಲಿ 1800ರ ಮಧ್ಯಭಾಗದಲ್ಲಿ ದೊರೆತ್ತಿದ್ದು ಅದನ್ನು -ಆರ್ಕಿಯೊಪ್ಟೇರಿಕ್ಷ್ -ಎಂದು ಗುರುತಿಸಲಾಯಿತು. ಸರಿಸೃಪದ ಹೋಲಿಕೆಯಿದ್ದರೂ ಅದಕ್ಕಿದ್ದ ಪುಕ್ಕ ಮತ್ತು ರೆಕ್ಕೆಯಿಂದ ಅದನ್ನು ಪಕ್ಷಿಗಳ ಮೂಲವೆಂದು ಪರಿಗಣಿಸಲಾಯಿತು. ಹಲ್ಲುಗಳನ್ನೂ ಹೊಂದಿದ್ದು,ಅದರ ರೆಕ್ಕೆಗಳಲ್ಲಿ ಉಗುರುಗಳೂ ಇದ್ದವು. ಆ ನಂತರ 65ದಶಲಕ್ಷ ವರ್ಷಗಳ ಹಿಂದೆ ಇಂದಿನ ಆಧುನಿಕ ಪಕ್ಷಿಗಳು ಉಗಮವಾಯಿತೆಂದು ತಜ್ಞರು ನಿರ್ಧರಿಸಿದ್ದಾರೆ. ಹಲ್ಲುಗಳಿಲ್ಲದ ಇಂದಿನ ಬಾತುಕೋಳಿ ಸೇರಿದಂತೆ, ಫ್ಲೆಮಿಂಗೋ, ಹೆಜ್ಜಾರ್ಲೆಗಳಂತಹ ನೀರುಹಕ್ಕಿಗಳ ಪೂರ್ವಜರೆನ್ನಬಹುದು. ಆ ಮೂಲಕ ಹಕ್ಕಿಗಳ ವೈವಿಧ್ಯಮಯ ಪ್ರಭೇದಗಳು ಇಂದು ಗೋಚರಿಸುತ್ತಿವೆ.

ಹಕ್ಕಿಗಳು ಅವುಗಳ ಬಣ್ಣ, ಆಕಾರ, ಚಿಲಿಪಿಲಿಯಿಂದ ಮನುಷ್ಯನ ಮನಸ್ಸಿಗೆ ಸಂತಸ ನೀಡುವುದರ ಜೊತೆಗೆ ಅವನ ಬದುಕಿಗೂ ಅತ್ಯಂತ ಸಹಾಯಕವಾಗಿವೆ. ದಟ್ಟ ಹಸುರಿನ ವೃಷ್ಠಿವನದಿಂದ ಹಿಡಿದು, ಉದುರೆಲೆಕಾಡು,ಕುರುಚಲು ಗುಡ್ಡ, ಒಣಭೂಮಿಗಳಲ್ಲೂ ತಮ್ಮ ಆವಾಸ ಸ್ಥಾನದಲ್ಲಿ ದೊರಕುವ ಆಹಾರ ಪದ್ಧತಿಗೆ ತಮ್ಮನ್ನು ಒಳಗೊಳಿಸಿಕೊಂಡು ಬದುಕುತ್ತಿವೆ.

ನಿಸರ್ಗ ಸಮತೋಲನದಲ್ಲಿ ಹಕ್ಕಿಗಳ ಪಾತ್ರ ಬಹುಮುಖ್ಯ. ಕೆಲವು ಹಕ್ಕಿಗಳು ನಿಸರ್ಗದಲ್ಲಿ ದೊರಕುವ ಹಣ್ಣುಗಳನ್ನು,ಚಿಗುರನ್ನು ತಿಂದು ಜೀವಿಸಿದರೆ,ಮತ್ತೆ ಕೆಲವು ಸಣ್ಣ ಹಲ್ಲಿ ಜಾತಿಯ ಪ್ರಾಣಿ, ಇಲಿ, ಸಣ್ಣ ಹಾವುಗಳನ್ನು ಬೇಟೆಯಾಡಿ ಬದುಕುತ್ತಿವೆ. ಅನೇಕ ಹಕ್ಕಿಗಳು ಕೀಟ ಭಕ್ಷಕಗಳಾಗಿದ್ದರೆ,ಮತ್ತೆ ಕೆಲವು ಹೂವಿನ ಮಕರಂದವನ್ನು ತಮ್ಮ ಭೋಜನವಾಗಿಸಿಕೊಂಡು ಜೀವಿಸಿವೆ.

ಹಣ್ಣು ತಿನ್ನುವ ಪಕ್ಷಿಗಳು ಹಣ್ಣಿನ ತಿರುಳಿನಿಂದ ಉದರ ತುಂಬಿಸಿಕೊಡು ಹಿಕ್ಕೆಯ ಮೂಲಕ ಬೀಜ ಹೊರಹಾಕಿ ಬೀಜ ಪ್ರಸಾರದಿಂದ ಕಾಡನ್ನು ವೈವಿಧ್ಯಮಯವಾಗಿ ಬೆಳೆಸಿದರೆ,ರೈತನಿಗೆ ಉಪದ್ರವ ನೀಡುವ ಕೀಟಗಳನ್ನು ಭಕ್ಷಿಸಿ, ಬೆಳೆಗಳನ್ನುಳಿಸುವ ಕೀಟಾಹಾರಿ ಹಕ್ಕಿಗಳಾಗಿ ರೈತನ ಮಿತ್ರನೆನಿಸಿಕೊಂಡಿವೆ. ನತ್ತಿಂಗ,ಗೂಬೆಯಂತಹ ಪಕ್ಷಿಗಳು ರಾತ್ರಿ ವೇಳೆಯಲ್ಲಿ ಚುರುಕಾಗಿದ್ದು ಇಲಿ ಸೇರಿದಂತೆ ಹಲವು ಕೀಟಗಳ ಸಂಖ್ಯೆ ನಿಯಂತ್ರಿಸುತ್ತವೆ. ಪಕ್ಷಿಗಳು ಮಾಡುವ ಅತ್ಯಂತ ಉಪಯುಕ್ತವಾದ ಕಾರ್ಯವೆಂದರೆ ಪರಾಗ ಸ್ಪರ್ಶಕ್ರಿಯೆ. ಕೆಲವು ಹಕ್ಕಿಗಳು ಬೇಡದ ಬಳ್ಳಿಗಳನ್ನೂ ಭಕ್ಷಿಸುತ್ತವೆ.

ಒಂದು ವರ್ಗದ ಅಥವಾ ಪ್ರಭೇದದ ಹಕ್ಕಿಯ ನಾಶವೆಂದರೆ ನಿಸರ್ಗದ ಒಂದು ಜಾತಿಯ ಸಸ್ಯವರ್ಗದ ನಾಶವೂ ಸಂಭವಿಸುತ್ತದೆಂಬುದು. ಕೆಲವೊಂದು ಪಕ್ಷಿಗಳು ಕೆಲವೇ ಸಸ್ಯಗಳನ್ನು ತಮ್ಮ ಬದುಕಿಗೆ ಆಸರೆಯಾಗಿಸಿಕೊಂಡಿರುತ್ತವೆ. ವಿಶ್ವದಲ್ಲಿ ಅತ್ಯಂತ ಜ್ವಲಂತ ಉದಾಹರಣೆಯೆಂದರೆ ಮಾರಿಷಸ್ ದ್ವೀಪ ಸಮೂಹದಲ್ಲಿದ್ದ ಡೋಡೋ ಹಕ್ಕಿಗಳು ಮತ್ತು ಕ್ಯಾಲ್ವೇರಿಯ ಮೇಜರ್ ಮರಗಳು. 17ನೆಯ ಶತಮಾನದ ಮಧ್ಯಭಾಗದವರೆಗೂ ಕಾಣಸಿಗುತ್ತಿದ್ದ ಈ ಹಾರಲಾರದ ಟರ್ಕಿ ಕೋಳಿಯ ಗಾತ್ರದ,ದಪ್ಪ ಕೊಕ್ಕಿನ ಈ ಹಕ್ಕಿಯನ್ನು ಅಲ್ಲಿ ಬಂದ ನಾವಿಕರು ಕೊಂದು ತಿಂದರೆ,ಅವರ ನಾಯಿಬೆಕ್ಕುಗಳು ಅವುಗಳ ಮೊಟ್ಟೆ,ಮರಿಯನ್ನು ತಿಂದು ಸಂತತಿಯನ್ನೇ ನಾಶಗೊಳಿಸಿದವು. ಈ ಹಕ್ಕಿ ನಿರ್ನಾಮವಾಯಿತು. ಆಶ್ಚರ್ಯವೆಂದರೆ, ಅಲ್ಲಿ ಬೆಳೆದು ನಿಂತಿದ್ದ ಹಣ್ಣು ನೀಡುವ ಕ್ಯಾಲ್ವೇರಿಯಾ ಮೇಜರ್ ಮರಗಳ ಹಣ್ಣಿನ ಬೀಜ ಮತ್ತೆ ಮೊಳಕೆಯೊಡೆಯಲೇ ಇಲ್ಲ. ಸಸ್ಯ ಶಾಸ್ತ್ರಜ್ಞರು ಕಾರಣ ತಪಾಸಣೆಗೆ ಮುಂದಾದಾಗ, ಈ ಡೋಡೋ ಹಕ್ಕಿಗಳು ಹಣ್ಣು ತಿಂದು,ಅದರ ಬೀಜ ಒಂದು ನಿರ್ದಿಷ್ಟ ತಾಪಮಾನದಲ್ಲಿ ಹಿಕ್ಕೆ ರೂಪದಲ್ಲಿ ಹೊರ ಬೀಳುತ್ತಿದ್ದು ಭೂಮಿಯ ಸಾರ ಹೀರಿ ಮತ್ತೆ ಮೊಳಕೆಯೊಡೆಯುತ್ತಿದ್ದವು. ಆದರೆ ಆ ತಾಪಮಾನ ಎಷ್ಟೆಂದು ಅರಿವಾಗದೆ ಹಕ್ಕಿಗಳೂ ಸಾವಪ್ಪಿತು ಮರವೂ ನಾಶವಾಯಿತು. ನಿಸರ್ಗದಲ್ಲಿ ಸ್ವಾವಲಂಬನೆ,ಪರಾವಲಂಬನೆಯ ಜೊತೆಗೆ ಪರಸ್ಪರಾವಲಂಬನೆ ಹೆಚ್ಚು ಪ್ರಚಲಿತವಾಗಿರುತ್ತದೆ. ಒಂದು ಪಕ್ಷಿಯ ಅವನತಿ ಒಂದು ಕೀಟದ ಉನ್ನತಿಗೆ ಕಾರಣವಾಗುತ್ತದೆ; ಹಾಗೆಯೇ ಒಂದು ಸಸ್ಯದ ಅವನತಿಗೂ ಕಾರಣವಾಗಬಹುದು.

ವಿಶ್ವದಲ್ಲಿ 9300 ಪ್ರಭೇದದ ಪಕ್ಷಿಗಳಿವೆ. ಇವುಗಳಲ್ಲಿ ಅತ್ಯಂತ ಚಿಕ್ಕ ಪಕ್ಷಿ ಎಂದರೆ ೫ಸೆ.ಮೀ. ಉದ್ದದ ಬೀ ಹಮ್ಮಿಂಗ್ ಬರ್ಡ್,ಅತಿ ಎತ್ತರ ಗಾತ್ರದ ಪಕ್ಷಿ ಎಂದರೆ ಹಾರಲಾರದ ಆಸ್ಟಿಚ್. ಕೆಲವು ಪಕ್ಷಿಗಳು ಹಿಮ ಯುಗದಲ್ಲಿ ಸಾವಪ್ಪಿದವು. ವಾತಾವರಣದ ಏರುಪೇರಿನಿಂದ ಆಗ ಸಾವಪ್ಪಿ ನಿರ್ನಾಮವಾದ ಪಕ್ಷಿ ಪ್ರಭೇದಕ್ಕಿಂತ, ಆಧುನಿಕ ಯುಗದಲಿ ಸತತ ಬೇಟೆ,ಅವುಗಳ ಆವಾಸಸ್ಥಾನ ನಾಶದಿಂದ ಕಣ್ಮರೆಯಾದ ಪಕ್ಷಿ ಸಂಕುಲ ಅತ್ಯಂತ ಅಧಿಕ. 17ನೆಯ ಶತಮಾನದಿಂದಲೂ ನಾಶವಾದ ಪಕ್ಷಿ ಪ್ರಭೇದ 80 ;ಇದರಲ್ಲಿ ನೈಸರ್ಗಿಕ ಕಾರಣಗಳಿಂದ ಅಂತ್ಯಗೊಂಡವು ಅಲ್ಪವಾದರೆ,ಮನುಷ್ಯನ ಉಪಟಳದಿಂದ ನಾಶವಾದವೇ ಅಧಿಕ. ನ್ಯೂಜಿಲೆಂಡ್‌ನಲ್ಲಿದ್ದ ಮೋವಾ,ಮಾರಿಷಸ್‌ನ ಡೋಡೋ,ಉತ್ತರ ಅಮೇರಿಕಾದಲ್ಲಿ ಕಾಣ ಸಿಗುತ್ತಿದ್ದ ಗ್ರೇಟ್ ಆಕ್ ಮತ್ತು ಪ್ಯಾಸೆಂಜರ್ ಪಿಜನ್ ಅತ್ಯಂತ ಮುಖ್ಯ. ಇತ್ತೀಚಿನ ದಶಕಗಳಲ್ಲಿ ಅತಿಯಾದ ಕೀಟನಾಶ ಬಳಕೆ ಅನೇಕ ಪಕ್ಷಿ ಸಂಕುಲಗಳ ನಾಶಕ್ಕೆ ಕಾರಣವಾಗುತ್ತಿದೆ. ಕಾಡುನಾಶ ಸಹ ಅನೇಕ ಪಕ್ಷಿಗಳ ಅಳಿವಿಗೆ ಕಾರಣ. ವೃಷ್ಟಿವನ ಅಥವಾ ಮಳೆಕಾಡುಗಳಲ್ಲಿರುವ ಈ ರೆಕ್ಕೆಯ ಜೀವಿಗಳೇ ಅಧಿಕ ಸಂಖ್ಯೆಯಲ್ಲಿ ಈ ಭೂಮಿಯಿಂದ ಮರೆಯಾಗತ್ತಿರುವುದು ಆತಂಕದ ಸಂಗತಿ. ಹಕ್ಕಿಗಳ ಅತ್ಯಂತ ಆಕರ್ಷಕ ಬಣ್ಣ,ಅವುಗಳ ಸುಂದರ ದೇಹ ವಿನ್ಯಾಸ ಸಹ ಅವು ಮನೆ,ಕಛೇರಿಗಳ ಪ್ರದರ್ಶನದ ವಸ್ತುಗಳಾಗಿ ಜೀವಂತವಾಗಿ ಬಲೆಗೆ ಸಿಕ್ಕಿ ಪಂಜರ ಸೇರುತ್ತಿವೆ. ಹಾವಾಯಿ ದ್ವೀಪದಲ್ಲಿರುವ 24 ಪ್ರಭೇದದ ಹನಿಕ್ರೀಪರ್ ಪಕ್ಷಿಗಳಲ್ಲಿ 10 ಪ್ರಭೇದ ನಾಶವಾಗಿವೆ. ಉಳಿದ 14 ವಿನಾಶದಂಚು ತಲುಪಿ,ದಿನ ನೂಕುತ್ತಿವೆ. ಯುರೋಪಿನ ಬಿಳಿಬಾಲದ ಸೀ ಈಗಲ್ ನಿರ್ನಾಮವಾಗಿದೆ. ಏಷ್ಯಾ ಖಂಡದಲ್ಲಿ ಹಸಿರು ಪೀಫೌಲ್ ಕಾಣ ಸಿಗುತ್ತಿಲ್ಲ,ಕಾಡಿನ ಗೂಬೆ,ಬೆಂಗಾಲ್ ಫ್ಲೋರಿಕಾನ್,ಆಂಧ್ರದ ಹುಲ್ಲಗಾವಲಿನ ಹಲವು ಹಕ್ಕಿಗಳು ಕೆಂಪು ಕತ್ತಿನ ರಣಹದ್ದು,ಹಿಮಾಲಯ ಪರ್ವತ ಪ್ರದೇಶದ ಪಿಂಕ್ ಹೆಡೆಡ್ ಡಕ್, ವೈಟ್ ವಿಂಗ್‌ಡ್ ಡಕ್,ಟ್ರೋಗೋ ಪ್ಯಾನ್, ಮೌಂಟೇನ್ ಕ್ವೈಲ್, ಜೋರ್ಡಾನ್ ಕರ್ಸರ್ ಈ ಹಕ್ಕಿಗಳು ಕಾಣ ಸಿಗುತ್ತಿಲ್ಲ. ಆಫ್ರಿಕಾ ಖಂಡ ಹಲವು ಬಣ್ಣದ ಹಕ್ಕಿಗಳಿಗೆ ಆವಾಸ ಸ್ಥಾನವಾಗಿತ್ತು. ಇಂದು ಇತೋಂಬೆ ಗೂಬೆ, ಅಲ್ಜೇರಿಯನ್ ನತ್‌ಹ್ಯಾಜ್ ಪಕ್ಷಿಗಳೂ ಸಹ ದೃಷ್ಠಿ ಗೋಚರವಾಗುತ್ತಿಲ್ಲ.

ಹಲವು ಪಕ್ಷಿಗಳು ಇತಿಹಾಸದ ಪುಸ್ತಕ ಸೇರಿದ್ದರೆ ಇನ್ನೂ ಹಲವು ಪಕ್ಷಿಗಳು ವಿನಾಶದಂಚು ತಲುಪಿವೆ. ಏಷ್ಯಾಯಾದ ಹಸುರು ಪೀಪೌಲ್,ಡಾಲ್ಮೀಷಿಯನ್ ಹೆಜ್ಜಾರ್ಲೆ, ಮಾರ್ಬೀಲ್ಡ್ ಟೇಲ್ ಮತ್ತು ಕರ್ನಾಟಕ ಸೇರಿದಂತೆ ದೇಶದ ಹುಲ್ಲುಗಾವಲಿನಲ್ಲಿ ಬಹು ಸಂಖ್ಯೆಯಲ್ಲಿದ್ದ ಗುರುವಾಯನ ಹಕ್ಕಿ (ಬಸ್ಟರ್ಡ್)ಇಂದು ನಮ್ಮನ್ನಗಲುವ ಹಂತ ತಲುಪಿವೆ. ಆಫ್ರಿಕಾದಲ್ಲಿ 170 ಪಕ್ಷಿ ಪ್ರಭೇದ ವಿನಾಶದಂಚಿನಲ್ಲಿವೆ. ಅಮೇರಿಕಾ ಮತ್ತು ಕೆನಡಾದಲ್ಲಿ 15 ಪ್ರಭೇದದ ಪಕ್ಷಿಗಳ ಸಂಖ್ಯೆ ಕುಸಿದಿದೆ. ಕೆರೇಬಿಯನ್ ನಿಂದ ಮಧ್ಯ ಹಾಗು ದಕ್ಷಿಣ ಅಮೇರಿಕಾದವರೆಗೆ ನೂರಾರು ಪಕ್ಷಿಗಳು ವಿನಾಶದಂಚು ತಲುಪಿವೆ;ಇದರಲ್ಲಿ ವಿಶ್ವದ ಅತೀ ಸಣ್ಣ ಪಕ್ಷಿ ಬೀ ಹಮ್ಮಿಂಗ್ ಬರ್ಡ್ ಸಹ ಸೇರಿದೆ. ಒಮ್ಮೆ ಅತೀ ಹೆಚ್ಚಿನ ಸಂಖ್ಯೆಯಲ್ಲಿದ್ದ ಮತ್ತು ವಿಶ್ವದ ಬೃಹತ್ ಗಿಳಿ ಎಂದು ಹೆಸರು ಪಡೆದಿರುವ ಹೈಸಿಂತ್ ಮೆಕಾವ್ ಬ್ರೆಜಿಲ್ ಉಷ್ಣವಲಯದ ಕಾಡುಗಳಿಗೆ ಸೀಮಿತವಾಗಿದೆ. ಆಸ್ಟ್ರೇಲಿಯಾ ಖಂಡದಲ್ಲೂ ಪರಿಸ್ಥಿತಿ ಇದೇ ರೀತಿ ಇದೆ. ಹಲವು ರೀತಿ ಗಿಳಿಫ್ಲೆಕ್ಸ್ಡ್ ಡಕ್, ಮೆಲೀಫೌಲ್, ನಾಯ್ಸಿಸ್ಕ್ರಬ್ ಹಕ್ಕಿಗಳ ಸಂಖ್ಯೆ ಸಹ ಇಳಿಮುಖವಾಗಿದೆ. ನ್ಯೂಜಿಲೆಂಡ್‌ನಲ್ಲೂ ಪರಿಸ್ಥಿತಿ ಭಿನ್ನವಾಗಿಲ್ಲ.

ಪಕ್ಷಿಗಳು ಈ ವಿಶ್ವದ ಅತ್ಯಂತ ಸುಂದರ ಹಾಗೂ ಮನುಷ್ಯನಿಗೆ ಉಪಕಾರಿಯಾದ ಜೀವಿಗಳು. ಇವುಗಳು ನಮ್ಮ ಊಟದ ತಟ್ಟೆಯಲ್ಲಿ ಖಾದ್ಯವಾಗಿ ಬರಲೆಂಬ ಕೆಟ್ಟ ಚಪಲ,ಕೀಟನಾಶಕದ ಅತಿ ಬಳಕೆ, ಅವುಗಳ ವಾಸ ಸ್ಥಳದ ಹನನ ಹಾಗು ಅತಿಯಾದ ಮನುಷ್ಯ ಕೇಂದ್ರಿತ ಚಿಂತನೆ ಮತ್ತು ಜೀವಿ ಕೇಂದ್ರಿತ ಚಿಂತನೆಯ ಕಡೆಗಣನೆ ಈ ಖಗಗಳ ಬದುಕಿಗೆ ಮಾರಕವಾಗುತ್ತಿವೆ. ಅವು ಮನುಷ್ಯ ಪ್ರಾಣಿಯ ಪೂರ್ವಜರು. ಅವುಗಳನ್ನು ಸಂರಕ್ಷಿಸುವುದು ಮನುಷ್ಯನ ಕರ್ತವ್ಯ. ನಾವಿಲ್ಲದೆ ಅವು ಬದುಕುತ್ತವೆ. ಆದರೆ ಅವುಗಳಿಲ್ಲದೆ ನಮ್ಮ ಬದುಕು ಸಹ್ಯವಾಗಿರದು.

ಸ.ಗಿರಿಜಾಶಂಕರ,ಪರಿಸರ ತಜ್ಞರು, ಹಿರಿಯ ಪತ್ರಕರ್ತರು ಸದಸ್ಯರು,ಕುವೆಂಪು ಭಾಷಾ ಭಾರತಿ,ಬೆಂಗಳೂರು

Leave a Reply

Your email address will not be published.

This site uses Akismet to reduce spam. Learn how your comment data is processed.