ಸುಪ್ರಿಂ ಕೋರ್ಟ್ ಮಹತ್ವದ ತೀರ್ಪು ನೀಡಿದ್ದು ಪೋಲೀಸರು ಇನ್ನು ವೇಶ್ಯಾವೃತ್ತಿಯಲ್ಲಿ ಮೂಗು ತೂರಿಸುವಂತಿಲ್ಲ ಮತ್ತು ಯಾವುದೇ ಕ್ರಿಮಿನಲ್ ಕ್ರಮಗಳನ್ನು ಕೈಗೊಳ್ಳುವಂತಿಲ್ಲ ಎಂದಿದೆ.ಅಲ್ಲದೆ ವೇಶ್ಯಾವೃತ್ತಿಯೂ ಒಂದು ವೃತ್ತಿಯಾಗಿದ್ದು ವೇಶ್ಯೆಯರನ್ನು ಗೌರವದಿಂದ ನಡೆಸಿಕೊಳ್ಳಬೇಕು ಅಲ್ಲದೆ ಕಾನೂನಾತ್ಮಕವಾಗಿ ಅವರಿಗೂ ರಕ್ಷಣೆ ಪಡೆಯುವ ಸಮಾನ ಹಕ್ಕುಗಳು ಲಾಗೂ ಆಗುತ್ತದೆ ಎಂದಿದೆ.

ಎಲ್.ನಾಗೇಶ್ವರರಾವ್ ಅವರನ್ನೊಳಗೊಂಡ ತ್ರಿಸದಸ್ಯಪೀಠವು ವೇಶ್ಯೆಯರ ಹಕ್ಕುಗಳನ್ನು ಕಾಯ್ದುಕೊಳ್ಳುವ ನಿಟ್ಟಿನಲ್ಲಿ ಆರು ನಿರ್ದೇಶನಗಳನ್ನು ನೀಡಿದೆ. ಪೀಠವು ” ವೇಶ್ಯೆಯರಿಗೂ ಸಮಾನ ಕಾನೂನು ರಕ್ಷಣೆ ದೊರೆಯಲಿದೆ.ಕ್ರಿಮಿನಲ್ ಕಾನೂನುಗಳು ಅವರಿಗೂ ಸಮಾನವಾಗಿ ಎಲ್ಲಾ ಮೊಕದ್ದಮೆಗಳಲ್ಲಿ ವಯಸ್ಸು ಮತ್ತು ಒಪ್ಪಿಗೆಗಳ ಆಧಾರದ ಮೇಲೆ ದೊರೆಯಲಿದೆ. ಯಾವುದೇ ವ್ಯಕ್ತಿಯು ವಯಸ್ಕರಾಗಿದ್ದು,ಮತ್ತು ತಮ್ಮ ಸಂಪೂರ್ಣ ಒಪ್ಪಿಗೆಯಿಂದ ವೇಶ್ಯಾವೃತ್ತಿಯಲ್ಲಿ ತೊಡಗಿಕೊಂಡರೆ ಪೋಲೀಸರು ಮಧ್ಯ ಪ್ರವೇಶಿಸುವಂತಿಲ್ಲ ಹಾಗು ಯಾವುದೇ ಕ್ರಿಮಿನಲ್ ಕ್ರಮಗಳನ್ನು ಕೈಗೊಳ್ಳುವಂತಿಲ್ಲ. ಅಲ್ಲದೆ ಈ ದೇಶದ ಎಲ್ಲ ವ್ಯಕ್ತಿಗೂ ಗೌರವಯುತವಾದ ಜೀವನವನ್ನು ನಡೆಸಲು ಸಂವಿಧಾನವು ಆರ್ಟಿಕಲ್ 21ರಲ್ಲಿ ಅವಕಾಶ ಮಾಡಿಕೊಟ್ಟಿರುವುದರಿಂದ ಇದು ವೇಶ್ಯಾವೃತ್ತಿಗೂ ಅನ್ವಯವಾಗಲಿದೆ.

ಪೀಠವು ಈ ನಿಟ್ಟಿನಲ್ಲಿ ವೇಶ್ಯೆಯರನ್ನು ಬಂಧಿಸುವುದು,ಶಿಕ್ಷೆಗೊಳಪಡಿಸುವುದು,ದೌರ್ಜನ್ಯ ನಡೆಸುವುದು ಅಥವಾ ವೇಶ್ಯಾಗೃಹದ ಮೇಲೆ ದಾಳಿ ಮಾಡಿ ಶೋಷಣೆ ನಡೆಸುವುದು ಮಾಡುವಂತಿಲ್ಲ.ಇನ್ನುಮುಂದೆ ವ್ಯಕ್ತಿಯು ಸ್ವಇಚ್ಛೆಯಿಂದ ಮಾಡುವ ವೇಶ್ಯಾವೃತ್ತಿಯು ಕಾನೂನಿಗೆ ಬದ್ಧವಾಗಿರುತ್ತದೆ ಆದರೆ ವೇಶ್ಯಾಗೃಹಗಳನ್ನು ನಡೆಸುವಂತಿಲ್ಲ, ಅದು ಕಾನೂನುಬಾಹಿರ ಎಂದು ಪೀಠವು ಹೇಳಿದೆ‌.

ಅಷ್ಟೇ ಅಲ್ಲದೆ ತಾಯಿ ವೇಶ್ಯಾವೃತ್ತಿಯಲ್ಲಿರುವ ಕಾರಣಕ್ಕಾಗಿ,ಮಗುವನ್ನು ತಾಯಿಯಿಂದ ದೂರ ಮಾಡುವಂತಿಲ್ಲ,ಹಾಗು ತಾಯಿ ಮತ್ತು ಮಗುವಿಗೆ ಸಂವಿಧಾನ ಬದ್ಧವಾದ ಮೂಲಭೂತ ಮಾನವ ಹಕ್ಕುಗಳು ಮತ್ತು ಗೌರವಯುತವಾದ ಜೀವನ ನಡೆಸುವುದಕ್ಕೆ ರಕ್ಷಣೆ ಪಡೆಯುವುದು ಅನ್ವಯವಾಗುತ್ತದೆ ಎಂದು ತ್ರಿಸದಸ್ಯ ಪೀಠ ಹೇಳಿದೆ.

ಹಾಗು 18ವರ್ಷಕ್ಕಿಂತ ಕೆಳಗಿನವರು ವೇಶ್ಯಾಗೃಹಗಳಲ್ಲಿ ಅಥವಾ ವೇಶ್ಯೆಯರ ಜೊತೆ ಇದ್ದರೆ ಅದನ್ನು ಚೈಲ್ಡ್ ಟ್ರಾಫಿಕ್ಕಿಂಗ್ ಎಂದು ಪರಿಗಣಿಸಬೇಕಿಲ್ಲ. ಅಲ್ಲದೆ ಪೀಠವು ಪೋಲೀಸರಿಗೆ ವೇಶ್ಯೆಯರು ದೂರು ನೀಡಿದಾಗ ತಾರತಮ್ಯ ಮಾಡದೆ ದೂರು ತೆಗೆದುಕೊಳ್ಳುವಂತೆ ಆದೇಶಿಸಿದೆ.ಅದರಲ್ಲೂ ಅದು ದೈಹಿಕವಾದ ಹಲ್ಲೆ,ಅತ್ಯಾಚಾರ,ದೌರ್ಜನ್ಯದ ಸ್ವರೂಪ ಪಡೆದಿದ್ದಾಗ ಸಾಮಾನ್ಯ ಜನರಿಗೆ ನೀಡುವಂತೆ ಅವರಿಗೂ ತತ್‌ಕ್ಷಣದ ಮೆಡಿಕಲ್ ಮತ್ತು ಲೀಗಲ್ ಆಗಿರುವ ಸೇವೆಗಳನ್ನು ಒದಗಿಸಿ ಕಾನೂನು ಸಹಾಯ ಮಾಡಬೇಕು ಎಂದಿದೆ.

“ಅನೇಕ ಬಾರಿ ಪೋಲೀಸರು ವೇಶ್ಯೆಯರ ಜೊತೆಗೆ ಅತ್ಯಂತ ಕ್ರೂರವಾಗಿ ಅಮಾನವೀಯವಾಗಿ ನಡೆದುಕೊಳ್ಳುತ್ತಿದ್ದು,ಅವರನ್ನು, ಅವರ ಹಕ್ಕುಗಳನ್ನು ಅತ್ಯಂತ ತುಚ್ಛವಾಗಿ ಕಾಣಲಾಗುತ್ತಿದೆ.” ಎಂದಿರುವ ಪೀಠವು ಅವರ ಕುರಿತಾಗಿ ಸಂವೇದನೆಯಿಂದ ನಡೆದುಕೊಳ್ಳವಂತೆ ಹೇಳಿದೆ.

ಹಾಗು ನ್ಯಾಯಾಲಯದ ತ್ರಿಸದಸ್ಯ ಪೀಠವು ಮಾಧ್ಯಮಗಳಿಗೆ ವೇಶ್ಯಾವೃತ್ತಿಯ ಕುರಿತು ವರದಿ ಮಾಡುವ ಸಂದರ್ಭದಲ್ಲಿ ಅತ್ಯಂತ ನಾಜೂಕಾಗಿ ಯಾವುದೇ ವ್ಯಕ್ತಿಗಳ ಗುರುತು ಪತ್ತೆಯಾಗದಂತೆ,ಅವರ ಮುಖ ಕಾಣುವಂತಹ ಫೋಟೋ ವೀಡಿಯೋಗಳನ್ನು ಹಾಕದಂತೆ,ಹಾಗು ಯಾವುದೇ ಸುಳಿವು ಸಿಕ್ಕದಂತೆ ಬಂಧನ,ರೇಡ್‌ಗಳು,ರೆಸ್ಕ್ಯೂ ಆಪರೇಶನ್ನಿನ ವರದಿ ಮಾಡುವಂತೆ ಹೇಳಿದೆ.

Leave a Reply

Your email address will not be published.

This site uses Akismet to reduce spam. Learn how your comment data is processed.