ಹೊಸದಾಗಿ ಸ್ವಾತಂತ್ರ್ಯ ಪಡೆದುಕೊಂಡ ಯಾವುದೇ ದೇಶದ ವಿದೇಶಾಂಗ ನೀತಿಯನ್ನು ರೂಪಿಸುವುದು ಬಹಳ ಕ್ಲಿಷ್ಟಕರ ಕೆಲಸ. ಅದರಲ್ಲೂ ಭಾರತದಂತಹ ದೇಶದ್ದೆಂದರೆ ಬಹಳ ಸಂಕೀರ್ಣತೆಯದ್ದಾಗಿತ್ತು. ಸ್ವಾತಂತ್ರೋತ್ತರ ಭಾರತದ ವಿದೇಶಾಂಗ ನೀತಿಯ ಬಗೆಗೆ ಮಾತನಾಡುವಾಗ ನೆಹರುರವರನ್ನು ವಿದೇಶಾಂತ ನೀತಿಯ ಶಿಲ್ಪಿ ಎನ್ನುವಂತೆಯೇ ಬಿಂಬಿಸಲಾಗುತ್ತಿದೆ. ಆದರೆ ಭಾರತದ ವಿದೇಶಾಂಗ ನೀತಿಯ ಬಗ್ಗೆ ಬಹಳ ದೂರದೃಷ್ಟಿಯ ಸವಾಲುಗಳಿಗೆ ಉತ್ತರಿಸಬಲ್ಲವರು ಅಪಾರ ಜ್ಞಾನವುಳ್ಳವರು, ಯಾರಾದರೂ ವ್ಯಕ್ತಿಯಿದ್ದರು ಎಂದರೆ ಅದು ಬಾಬಾ ಸಾಹೇಬ್ ಅಂಬೇಡ್ಕರರು. ಆಲಿಪ್ತ ನೀತಿಯಾಗಿರಬಹುದು, ಸೇನೆಯನ್ನು ಸಶಸ್ತ್ರವಾಗಿ ಸನ್ನದ್ಧವಾಗಿಡುವುದರ ವಿಚಾರವಿರಬಹುದು ಅಥವಾ ಇಸ್ಲಾಂ ರಾಷ್ಟ್ರಗಳ ಸಮಸ್ಯೆಯ ವಿಷಯವಾಗಿ ಭಾರತ ಹೇಗೆ ವ್ಯವಹರಿಸಬೇಕೆಂಬ ಕುರಿತಾಗಿರಬಹುದು ಅಂಬೇಡ್ಕರ್ರು ಇವತ್ತಿಗೂ ಅತ್ಯಂತ ಪ್ರಸ್ತುತವಾಗಿ ನಿಲ್ಲಬಲ್ಲ ನಿಲುವುಗಳನ್ನು ಅಂದೇ ತಳೆದಿದ್ದರು.
ಭಾರತದಲ್ಲಿ ದಲಿತರ ಉದ್ಧಾರಕ್ಕಾಗಿ, ಹಿಂದುಳಿದವರ, ಶೋಷಿತರ ಪರವಾಗಿ ದನಿಯೆತ್ತಿ ಅವರಿಗೂ ಉತ್ತಮ ಸ್ಥರದ ಜೀವನದ ಬೆಳಕಾಗಿ ಬೆನ್ನಿಗೆ ನಿಂತವರು ಮತ್ತು ಅಂಬೇಡ್ಕರ್ ದಲಿತರ ನಾಯಕಾಗಿದ್ದಾರೆಂಬುದಕ್ಕೆ ಎರಡು ಮಾತಿಲ್ಲ. ಆದರೆ ವಿದೇಶಾಂತ ನೀತಿಯ ವಿಚಾರ ಬಂದಾಗ ಕೇವಲ ದಲಿತನಾಯಕರಾಗಿ ಮಾತ್ರವಲ್ಲ, ರಾಷ್ಟ್ರದ ಹಿತದ ದೃಷ್ಟಿಯಿಂದ ಭವಿತವ್ಯದ ನೆಲೆಯಿಂದ ನೋಡಿದಾಗ ಅತ್ಯಂತ ದೂರದೃಷ್ಟಿಯುಳ್ಳ ಹಾಗೂ ನೆಹರುರವರ ವಿದೇಶಾಂಗ ನೀತಿಯಲ್ಲಿನ ಸಮಸ್ಯೆಗಳಿಗೆ ಪರಿಹಾರ ನೀಡುವಂತಹ ಪರ್ಯಾಯ ಸಿದ್ದಾಂತವನ್ನು ನೀಡಿದಂತಹ ನಾಯಕರು ಅಂಬೇಡ್ಕರ್ .
ಅಂಬೇಡ್ಕರರ ವಾಸ್ತವವಾದಿ ನಿಲುವು
ನೆಹರುರವರ ಬಹಳಷ್ಟು ನಡೆಗಳನ್ನು ಬಾಬಾ ಸಾಹೇಬರು ಒಪ್ಪುತ್ತಿರಲಿಲ್ಲ, ಅತ್ಯಂತ ಕಟುವಾಗಿ ಅನೇಕ ಬಾರಿ ಟೀಕಿಸಿಯೂ ಇದ್ದರು. ಅವರ ಸಚಿವ ಪದವಿಯಿಂದ ರಾಜಿನಾಮೆ ನೀಡುವಾಗಲಂತೂ ನೆಹರುರವರು ವಿದೇಶಾಂತ ನೀತಿಯನ್ನು ಕರಾರುವಾಕ್ಕಾಗಿ ಒಂದೊಂದೇ ತಪ್ಪು ಹೆಜ್ಜೆಗಳನ್ನು ಗುರುತಿಸುತ್ತಾರೆ. ಅವರು ದೇಶ ವಿದೇಶಾಂಗ ನೀತಿಯಲ್ಲಿ ತಳೆಯುತ್ತಿರುವ ನಿಲುವು ಮತ್ತು ಸಾಗುತ್ತಿರುವ ಹಾದಿಯ ಬಗ್ಗೆ ಅತ್ಯಂತ ಅಸಂತುಷ್ಟರಾಗಿದ್ದರು ಮಾತ್ರವಲ್ಲದೇ ಈ ಬಗ್ಗೆ ಬಹಳ ಚಿಂತಿತರಾಗಿದ್ದರು.
“ಜಗತ್ತಿನ ಇತರ ರಾಷ್ಟ್ರಗಳು ನಮ್ಮೊಂದಿಗೆ ಹೊಂದಿದ್ದ ಬಾಂಧವ್ಯ ಮತ್ತು ಪ್ರಸ್ತುತ ಭಾರತದ ವಿದೇಶಾಂಗ ನೀತಿಯನ್ನು ಸೂಕ್ಷ್ಮವಾಗಿ ಗಮನಿಸುವ ಯಾರಿಗಾದರೂ ಇತರ ರಾಷ್ಟ್ರಗಳ ಬಾಂಧವ್ಯವು ಭಾರತದ ಜೊತೆ ಇದ್ದಕ್ಕಿದ್ದಂತೆ ಬದಲಾಗಿರುವುದು ಸುಸ್ಪಷ್ಟವಾಗಿ ಕಾಣುತ್ತದೆ. ೧೫ ಆಗಸ್ಟ್ ೧೯೪೭ರಂದು ಭಾರತ ಸರ್ವತಂತ್ರ ಸ್ವತಂತ್ರವಾದಾಗ ಯಾವ ದೇಶವೂ ನಮ್ಮ ಮೇಲೆ ಹಗೆ ಕಾರಿರಲಿಲ್ಲ. ಜಗತ್ತಿನ ಎಲ್ಲ ರಾಷ್ಟ್ರಗಳೂ ನಮ್ಮ ಜೊತೆ ಸ್ನೇಹ ಸಂಬಂಧವನ್ನು ಹೊಂದಿದ್ದವು. ಹಾಗಾದರೆ ಈ ನಾಲ್ಕು ವರ್ಷಗಳಲ್ಲಿ ಎಲ್ಲ ಉತ್ತಮ ಬಾಂಧವ್ಯಗಳೂ ಕಳಚಿಬಿದ್ದವೆ? ಯಾವುದೇ ಸ್ನೇಹ ಸಂಬಂಧಗಳು ಈಗ ಉಳಿದಿಲ್ಲ. ಭಾರತ ಏಕಾಂಗಿಯಾಗಿ ನಿಲ್ಲಬೇಕಾದ ಪರಿಸ್ಥಿತಿ ನಿರ್ಮಾಣವಾಗಬೇಕಿದೆ. ವಿಶ್ವಸಂಸ್ಥೆಯ ನಿರ್ಣಯಗಳಲ್ಲಿ ನಮ್ಮ ನಿಲುವಿಗೆ ಬೆಂಬಲವಾಗಿ ನಿಲ್ಲಬಲ್ಲ ಯಾವುದೇ ರಾಷ್ಟ್ರಗಳಿಲ್ಲ. ವಿದೇಶಾಂಗ ನೀತಿಯ ಬಗ್ಗೆ ಯೋಚಿಸುವಾಗಲೆಲ್ಲ ಬರ್ನಾಡ್ ಶಾ ಮತ್ತು ಬಿಸ್ಮಾರ್ಕ್ರವರ ಮಾತುಗಳು ನೆನಪಾಗುತ್ತವೆ. “Politics is not a game of realising the ideal,politics is a game of possible”, ಎನ್ನುತ್ತಾರೆ ಬಿಸ್ಮಾರ್ಕ್.
“ಒಳ್ಳೆಯ ಸಿದ್ದಾಂತಗಳೂ ಒಳ್ಳೆಯವೇ ಆದರೆ ಅತಿಯಾಧ ಒಳ್ಳೆಯತನ ಯಾವತ್ತಿಗೂ ಅಪಾಯಕರವೇ ಎಂಬುದನ್ನು ಮರೆಯಬಾರದು.” ಎಂಬ ಬುದ್ಧಿಮಾತು ಬರ್ನಾಡ್ ಶಾ ಇದನ್ನು ಬಹಳ ಹಿಂದೆಯೇನೋ ಹೇಳಿದ್ದಲ್ಲ. ಆದರೆ ಇವತ್ತಿನ ನಮ್ಮ ವಿದೇಶಾಂಗ ನೀತಿ ಈ ಇಬ್ಬರು ಮಹಾನುಭಾವರು ಹೇಳಿದ ವಿರುದ್ಧ ದಿಕ್ಕಿನಲ್ಲೇ ಸಾಗುತ್ತಿರುವುದು ವಿಪರ್ಯಾಸ.”ಎಂದು ಸ್ಪಷ್ಟವಾಗಿ ನುಡಿದ್ದರು.ಅಂಬೇಡ್ಕರ್ರವರು ಹೆಚ್ಚು ಸ್ಪಷ್ಟವಾದ, ವಾಸ್ತವ ನೆಲೆಗಟ್ಟಿನ ಮೇಲೆ ದೇಶದ ಹಿತದೃಷ್ಟಿಯಿಂದ ವಿದೇಶಾಂತ ನೀತಿಯನ್ನು ಎದುರು ನೋಡುತ್ತಿದ್ದರೆಂದು ಈ ವಾಕ್ಯಗಳೇ ಸಾರಿ ಹೇಳುತ್ತವೆ.ಮತ್ತು ನೆಹರುರವರು ಪ್ರತಿಪಾದಿಸಿದ ವಿದೇಶಾಂಗ ನೀತಿಯ ಸಿದ್ದಾಂತಗಳು ದೇಶದ ಮುಂದಿನ ಅಭಿವೃದ್ಧಿಗೆ ಅಡಿಪಾಯದವಾಗಲಾರದು ಎಂಬುದನ್ನೂ ಅಂಬೇಡ್ಕರ್ರು ನುಡಿದಿದ್ದರು.
ಅಂಬೇಡ್ಕರ್ ಇನ್ನೂ ಹಲವಾರು ವಿಚಾರವಾಗಿ ನೆಹರುರವರ ವಿದೇಶಾಂಗ ನೀತಿಯನ್ನು ಕಟುವಾಗಿ ಟೀಕಿಸಿದ್ದರು. ಅದರಲ್ಲೂ ಮೂರು ವಿಚಾರಗಳು ಬಹಳ ಪ್ರಮುಖವಾದವುಗಳು ಮೊದಲನೆಯದಾಗಿ ಶಾಂತಿ, ಎರಡನೆಯದು ಕಮ್ಯುನಿಸಂ ಮತ್ತು ಪ್ರಜಾಪ್ರಭುತ್ವದ ವ್ಯವಸ್ಥೆಯನ್ನು ಒಟ್ಟಿಗೆ ತೆಗೆದುಕೊಂಡು ಹೋಗುವುದರ ಬಗ್ಗೆ ಮತ್ತು ಮೂರನೆಯದಾಗಿ SEATOಗೆ ಭಾರತದ ವಿರೋಧದ ಬಗ್ಗೆ.
ಶಾಂತಿ ಮಾತುಕತೆಗಳು ಒಪ್ಪಂದಗಳು ಎಷ್ಟೇ ಇದ್ದರೂ ವಿದೇಶಾಂಗ ವ್ಯವಹಾರದಲ್ಲಿ ಸೈನ್ಯದ ಅವಶ್ಯಕತೆಯನ್ನು ಕಡೆಗಣಿಸಲಾಗದು ಮತ್ತು ಸೈನ್ಯ ಈ ನಿಟ್ಟಿನಲ್ಲಿ ಅತ್ಯಂತ ಪ್ರಮುಖವಾದ ಅಸ್ತ್ರವೆಂದು ಅಂಬೇಡ್ಕರ್ ಯಾವಾಗಲೂ ನಂಬಿದ್ದರು. ಅದರಲ್ಲೂ ಭಾರತದ ಮಟ್ಟಿಗೆ ಶಸ್ತ್ರಸಜ್ಜಿತವಾದ ಸೈನ್ಯವನ್ನು ಸದಾ ಸನ್ನದ್ಧವಾಗಿಡುವುದನ್ನು ಕಡೆಗಣಿಸಲಾರದೆಂದು ನಂಬಿದ್ದರು. “ಅಶಾಂತಿಯ ಮೂಲ ಸೈನ್ಯದ ಉಪಯೋಗದಲ್ಲಿ ಬದಲಾಗಿ ಅದರ ಜಯದ ದುರುಪಯೋಗದಲ್ಲಿದೆ” ಎಂಬುದನ್ನು ಒತ್ತಿ ಹೇಳಿದ್ದರು. ಎರಡನೆಯ ಮಹಾಯುದ್ಧದ ಸಂದರ್ಭದಲ್ಲೂ ಅಂಬೇಡ್ಕರ್ ಬಿಟೀಷರಿಗೆ ಭಾರತದ ರಕ್ಷಣೆಯನ್ನು ಭಾರತೀಯರಿಗೇ ಮಾಡಿಕೊಳ್ಳುವಂತೆ ಅಣಿಮಾಡಲು ಶಿಫಾರಸ್ಸು ಮಾಡಿದ್ದರು.
೧೯೫೧ರ ನವೆಂಬರ್ನಲ್ಲಿ ಲಕ್ನೋ ವಿಶ್ವವಿದ್ಯಾಲಯದಲ್ಲಿ ಮಾತನಾಡುತ್ತಾ, ‘ಭಾರತವನ್ನು ಸದೃಢವಾಗಿ ಮಾಡಲು ಸರಕಾರದ ವಿದೇಶಾಂಗ ನೀತಿ ಸೋತುಹೋಗಿದೆ, ಭಾರತ ವಿಶ್ವಸಂಸ್ಥೆಯ ಭದ್ರತಾ ಮಂಡಳಿಯಲ್ಲಿ ಶಾಶ್ವತ ಸ್ಥಾನ ಪಡೆಯಲು ಸಾಧ್ಯವಾಗಿಲ್ಲ ಏಕೆ? ಯಾಕೆ ಈ ಬಗ್ಗೆ ಪ್ರಧಾನಮಂತ್ರಿಯವರು ಪ್ರಯತ್ನ ಮಾಡುತ್ತಿಲ್ಲ? ಸಂಸದೀಯ ವ್ಯವಸ್ಥೆಯ ಪ್ರಜಾಪ್ರಭುತ್ವ ಮತ್ತು ಸರ್ವಾಧಿಕಾರಿ ಮನೋಭಾವದ ಗಳ ನಡುವೆ ಭಾರತ ಒಂದನ್ನು ಆಯ್ಕೆಮಾಡಿ ಅಂತಿಮವಾಗಿ ನಿರ್ಣಯ ತೆಗೆದುಕೊಳ್ಳಬೇಕಿದೆ” ಎಂದಿದ್ದರು.
ಕಮ್ಯೂನಿಸಂ ವಿರುದ್ಧ ಪ್ರಜಾಪ್ರಭುತ್ವವನ್ನು ಆರಿಸಿದ ಅಂಬೇಡ್ಕರ್
ಆಲಿಪ್ತ ನೀತಿಯಿಂದ ನೆಹರುರವರಿಗೆ ಇದ್ದ ಕಮ್ಯುನಿಸ್ಟ್ ಬಗೆಗಿನ ಮೋಹ ಮತ್ತು ಅದೇ ನಿಲುವುಗಳ ಗಟ್ಟಿಗೊಳ್ಳತೊಡಗಿದ್ದವು. ಆದರೆ ಇದು ದೂರಗಾಮಿಯಾಗಿ ಭಾರತದಲ್ಲಿನ ಸಂವಿಧಾನಾತ್ಮಕವಾಧ ಪ್ರಜಾಪ್ರಭುತ್ವ ವ್ಯವಸ್ಥೆಗೆ ಅಪಾಯ ತರಬಲ್ಲದು ಎಂದು ಅಂಬೇಡ್ಕರ್ ಚಿಂತಿಸಿದ್ದರು.
ಕಮ್ಯುನಿಷ್ಟ್ ರಷ್ಯಾದ ಬಗೆಗೆ ನುಡಿಯುತ್ತಾ ಅಂಬೇಡ್ಕರ್ ‘ಸ್ವಾತಂತ್ರ್ಯದ ಹೆಸರಿನಲ್ಲಿ ಬಿಡುಗಡೆಯ ಹೆಸರಿನಲ್ಲಿ, ಎಲ್ಲರನ್ನು ತನ್ನ ತೆಕ್ಕೆಗೆ ತೆಗೆದುಕೊಳ್ಳುತ್ತಾ, ಈ ದೊಡ್ಡ ದೇಶ ನಿರಂತರವಾಗಿ ಜನರನ್ನು ನಾಶಮಾಡುತ್ತಿದೆ’ ಹಾಗೂ ಕಮ್ಯುನಿಸಂ ಬಗ್ಗೆ ಹೇಳುತ್ತಾ ‘ಅದು ಕಾಳ್ಗಿಚ್ಚಿನಂತೆ ತನ್ನ ದಾರಿಯಲ್ಲಿ ಬರುವ ಎಲ್ಲವನ್ನೂ ಮತ್ತು ಎಲ್ಲರನ್ನೂ ಅದು ಸುಟ್ಟುಬೂದಿ ಮಾಡುತ್ತದೆ. ಅದರ ಅಕ್ಕಪಕ್ಕ ಬಂದ ದೇಶಗಳೂ ಅದರ ಅಪಾಯಕ್ಕೆ ಸಿಲುಕಬೇಕಾಗುತ್ತದೆ. ಆದುದರಿಂದ ಆಲಿಪ್ತ ನೀತಿಯು ಅರ್ಥಹೀನ ಮತ್ತು ಕಮ್ಯುನಿಸಂ ಹಾಗೂ ಪ್ರಜಾಪ್ರಭುತ್ವ ಎಂದಿಗೂ ಜೊತೆಯಾಗಿ ಸಾಗಲಾರವೆಂದು ಅಂಬೇಡ್ಕರ್ ದೃಢವಾಗಿ ಹೇಳಿದ್ದರು.
ಇಂದು ಅಮೆರಿಕ ಮತ್ತು ಭಾರತದ ಸಂಬಂಧ ವೃದ್ಧಿಸಿದೆ, ಅದರಲ್ಲೂ ಶೀತಲ ಸಮರದ ನಂತರ ಗಟ್ಟಿಯಾಗಿದೆ. ರಷ್ಯಾದ ಕಮ್ಯುನಿಸಂಗಿಂತ ಅಮೆರಿಕೆಯ ಪ್ರಜಾಪ್ರಭುತ್ವಕ್ಕೆ ಹೆಚ್ಚು ಪ್ರಾಶಸ್ತ್ಯವನ್ನು ನೀಡಬೇಕೆಂಬ ಅಂಬೇಡ್ಕರ್ ನಿಲುವು ತಳೆದಿದ್ದರು. ಈ ನಿಟ್ಟಿನಲ್ಲಿ ಅವರು ಅತ್ಯಂತ ಸ್ತುತ್ಯಾರ್ಹರು. SEATOಗೆ ಸಂಬಂಧಿಸಿದ ಹಾಗೆ ಅಂಬೇಡ್ಕರ್ರವರು ಕೇವಲ ಸಂಸ್ಥೆಯೆಂಬಂತೆ ಮಾತ್ರವಲ್ಲದೆ ಜಗತ್ತಿನ ಯಾವುದೇ ಭಾಗವನ್ನು ಚೀನಾ ಮತ್ತು ರಷ್ಯಾದ ಆಕ್ರಮಿತ ಕಪಿಮುಷ್ಠಿಯಿಂದ ತಪ್ಪಿಸುವ ಆಯುಧವೆಂದು ಹೇಳಿದ್ದರು.
ಅಮೆರಿಕೆಯ ಬಗೆಗಿದ್ದ ನೀತಿ ಮತ್ತು ರಷ್ಯಾದ ಬಗೆಗಿದ್ದ ಭೀತಿಯಿಂದ ನೆಹರು ಆಲಿಪ್ತ ನೀತಿಯೆಂಬ ಮಾತೆತ್ತಿದ್ದರೇ ವಿನಃ ಯಾವುದೇ ಸೈದ್ಧಾಂತಿಕ ಪ್ರತಿಪಾದನೆ ಆದಾಗಿರಲಿಲ್ಲ. ಸ್ವಾಭಾವಿಕವಾದ ಪ್ರಜಾಪ್ರಭುತ್ವ ವ್ಯವಸ್ಥೆ ನಮಗೆ ದಾರಿದೀಪವಾಗಬೇಕಿತ್ತೇ ವಿನಃ ಈ ರೀತಿಯ ಎಡಬಿಡಂಗಿತನಗಳಲ್ಲವೆಂಬುದು ಬಾಬಾ ಸಾಹೇಬರ ನಿಲುವಾಗಿತ್ತು.
ಪ್ರಜಾಪ್ರಭುತ್ವ ದೇಶಗಳ ಏಷಿಯಾದ ಒಂದು ಸಂಸ್ಥೆ ಆರಂಭವಾಗಬೇಕೆಂದು ಅಂಬೇಡ್ಕರ್ರ ಆಸೆಯಾಗಿತ್ತು ಮತ್ತು ಅದರಾಚೆಗೂ ‘Look East and Act East’ಎನ್ನುವ ನೀತಿಗೆ ಬದಲಾಗಬೇಕೆಂಬುದು ಅವರ ಆಸೆಯಾಗಿತ್ತು.
ಜಿಯೋ ಸ್ಟ್ರಾಟೆಜಿಕ್ ನಡೆಗಳು
ಬಾಬಾ ಸಾಹೇಬರು ವಿದೇಶಾಂತ ನೀತಿಯನ್ನು ಭೌಗೋಳಿಕ ನೆಲೆಗಟ್ಟಿನಲ್ಲಿ ನಿಂತು ಆಲೋಚಿಸುವ ಮುತ್ಸದ್ಧಿಯಾಗಿದ್ದರು. ವಿದೇಶಾಂಗ ನೀತಿಯನ್ನು ರೂಪಿಸುವಾಗ ಭೌಗೋಳಿಕ ರಚನೆಯೂ ಮುಖ್ಯವಾದ ಪಾತ್ರವಹಿಸುತ್ತದೆಂದು ಅಂಬೇಡ್ಕರರು ಮನಗಂಡಿದ್ದರು. ಮತ್ತದು ಅವರ ದೃಢ ನಿಲುವಾಗಿತ್ತು ಕೂಡ.
ಸಂಸತ್ತಿನಲ್ಲಿ ಈ ಬಗ್ಗೆ ಗಮನ ಸೆಳೆಯುತ್ತಾ, “ಭಾರತದ ಒಂದು ಭಾಗದಲ್ಲಿ ಪಾಕಿಸ್ಥಾನ ಮತ್ತಿತರ ಇಸ್ಲಾಂ ರಾಷ್ಟ್ರಗಳು ಸಂಪೂರ್ಣ ಸುತ್ತವರೆದಿದ್ದು ಇತ್ತ ಇನ್ನೊಂದು ಭಾಗದಲ್ಲಿನ ಟಿಬೆಟ್ ಚೀನಾದ ಕಬಂಧ ಬಾಹುಗಳಲ್ಲಿ ಸಿಲುಕಿದೆ.ಲಾಸಾ ಅದಾಗಲೇ ನೆರೆಯವರ ವಶವಾಗಿದೆ. ಪ್ರಧಾನಮಂತ್ರಿಗಳೇ ಚೀನಾದ ಗಡಿಯನ್ನು ಭಾರತದ ಗಡಿಗಳ ಪಕ್ಕಕ್ಕೆ ಬರುವಂತೆ ಸಹಾಯ ಮಾಡಿದ್ದಾರೆ. ಇವೆಲ್ಲವುಗಳನ್ನು ನೋಡುತ್ತಾ ನನಗನಿಸುತ್ತಿದೆ, ಭಾರತ ಯಾವುದೋ ಅಪಾಯದಲ್ಲಿ ಸಿಲುಕುವುದು ಖಂಡಿತ, ಈಗಲ್ಲದಿದ್ದರೂ ಮುಂದೊಮ್ಮೆ ಅಪಾಯವನ್ನೇ ಹವ್ಯಾಸ ಮಾಡಿಕೊಂಡಿರುವ ಜನರಿಂದ ಅಪಾಯ ಕಟ್ಟಿಟ್ಟ ಬುತ್ತಿ. ಮಾನ್ಯ ಪ್ರಧಾನಮಂತ್ರಿಗಳೇ ಮಾವೋ ಒಪ್ಪಿಕೊಂಡ ಪಂಚಶೀಲ ತತ್ವಗಳ ಮೇಲೆ ಹೆಚ್ಚು ಅವಲಂಬಿಸದಿರಿ, ಮಾಓಗೇನಾದರೂ ಪಂಚಶೀಲ ತತ್ವಗಳ ಮೇಲೆ ವಿಶ್ವಾಸವಿದ್ದಿದ್ದರೆ ಅವರ ನಾಡಿನಲ್ಲಿ ಬೌದ್ಧ ಧರ್ಮೀಯರನ್ನು ನಡೆಸಿಕೊಳ್ಳುವ ರೀತಿಯೇ ಬೇರೆಯದಾಗಿರುತ್ತಿತ್ತು.
ಪಂಚಶೀಲ ತತ್ವಕ್ಕೆ ರಾಜಕೀಯದಲ್ಲಿ ಸ್ಥಾನವಿಲ್ಲ. ಅದರಲ್ಲೂ ಕಮ್ಯುನಿಸ್ಟ್ ದೇಶದಲ್ಲಿ ಬೆಲೆಯೇ ಇಲ್ಲ” ಎನ್ನುವುದನ್ನು ಬಾಬಾ ಸಾಹೇಬರು ನುಡಿದಿದ್ದರು.
ಈ ಮಾತುಗಳು ಬಾಬಾ ಸಾಹೇಬರ ಇಂಡೋ ಚೀನಾ ನೀತಿಯ ಬಗೆಗಿನ ದೂರಗಾಮಿ ಚಿಂತನೆಯನ್ನು ನೀಡುತ್ತದೆ.
ಇಂದು ಇಡೀ ಜಗತ್ತೇ ಇಸ್ಲಾಮಿಕ್ ಭಯೋತ್ಫಾದನೆಯ ಕರಿನೆರಳಿನಲ್ಲಿ ನಲುಗುತ್ತಿರುವಾಗ, ಅದರಲ್ಲೂ ಇದೆಲ್ಲವೂ ಪಾಪಿ ಪಾಕಿಸ್ಥಾನದ ಕೃಪಾಪೋಷಿತವಾಗಿ, ಅದೇ ನೆಲದಲ್ಲಿ ನಡೆಯುತ್ತಿರುವಾಗ ಹಿಂದೆ ಸಾವರ್ಕರ್ ಮತ್ತು ಅಂಬೇಡ್ಕರ್ ಈ ಅಪಾಯದ ಕುರಿತು ಎಚ್ಚರಿಕೆ ನೀಡಿ ಪಾಕ್-ಇಸ್ಲಾಮಿಕ್ ಸಹೋದರತ್ವದ ಬಗ್ಗೆ ವಿರೋಧ ಮಾಡಿದ್ದರು.
ಅವರ ಪುಸ್ತಕ ‘pakistan or the partition of India’ ಹಾಗೂ ಅಕ್ಟೋಬರ್ ೧೦, ೧೯೫೧ ರಂದು ಅವರು ರಾಜಿನಾಮೆ ನೀಡುವ ಸಂದರ್ಭದಲ್ಲಿ ಸಂಸತ್ತಿನಲ್ಲಿ ಮಾಡಿದ ಭಾಷಣ ಈ ಎರಡೂ ಅವರ ನಿಲುವುಗಳ ಬಗ್ಗೆ ಸ್ಪಷ್ಟವಾಗಿ ತಿಳಿಸುತ್ತದೆ. ಆ ಪುಸ್ತಕದಲ್ಲಿ ಸುಧಾರಣೆಯ ವಿರೋಧವಾಗಿ ನಿಂತ ಇಸ್ಲಾಂ ಧರ್ಮವನ್ನು ಕಟುವಾಗಿ ಟೀಕಿಸುತ್ತಾರೆ. “ಮುಸಲ್ಮಾನರ ಮುಂದಾಳತ್ವವೇ ಪ್ರಜಾಪ್ರಭುತ್ವವಲ್ಲ. ಅವರ ಮೊದಲ ಆದ್ಯತೆ ಎಂದಿಗೂ ಧರ್ಮವೇ, ರಾಜಕೀಯವೇನಿದ್ದರೂ ವ್ಯವಹಾರಿಕವಷ್ಟೇ. ಮುಸಲ್ಮಾನನಿಗೆ ಧರ್ಮಗ್ರಂಥವೇ ಹೇಳುತ್ತದೆ ‘ಇಸ್ಲಾಂ ಒಂದು ವಿಶ್ವಧರ್ಮ, ಅದು ಎಲ್ಲ ಜನರಿಗೂ, ಎಲ್ಲ ಕಾಲಕ್ಕೂ, ಎಲ್ಲ ಸಂದರ್ಭಕ್ಕೂ ಸೂಕ್ತವಾಗಿದೆ’. ಇಸ್ಲಾಮಿನ ಸಹೋದರತ್ವ ಇಸ್ಲಾಮಿನದ್ದು ಮಾತ್ರ, ಮಾನವಕುಲದ ಸಹೋದರತೆಯಲ್ಲ. ಇಸ್ಲಾಮಿನವರಲ್ಲದವರಿಗೆ ಬರಿ ಅಸಡ್ಡೆ ಮತ್ತು ದ್ವೇಷ ಮಾತ್ರ ಲಭ್ಯ. ಒಬ್ಬ ಮುಸಲ್ಮಾನ ಎಂದಿಗೂ ಇಸ್ಲಾಂ ಧರ್ಮಕ್ಕೆ ಮಾತ್ರ ನಿಷ್ಠೆಯಿಂದಿರುತ್ತಾನೆ. ಬೇರೆ ಎಲ್ಲಾ ದೇಶಗಳೂ ಅವನಿಗೆ ವೈರಿ ದೇಶವೇ. ಇಸ್ಲಾಂ ಯಾವ ನಿಜವಾದ ಮುಸಲ್ಮಾನನಿಗೂ ಭಾರತ ತನ್ನ ಮಾತೃಭೂಮಿ ಎಂದು ಒಪ್ಪಿಕೊಳ್ಳಲು ಬಿಡುವುದಿಲ್ಲ ಮತ್ತು ಹಿಂದು ಸಹೋದರರೆಂದು ಅಪ್ಪಿಕೊಳ್ಳಲು ಬಿಡುವುದಿಲ್ಲ. ದಂಗೆ ಮಾಡುವ ಪ್ರವೃತ್ತಿ ಆತನಿಗೆ ಸ್ವಾಭಾವಿಕವಾಗಿ ಬಂದುಬಿಡುತ್ತದೆ. ಹಿಂದುಗಳ ದೌರ್ಬಲ್ಯವನ್ನು ಉಪಯೋಗಿಸಿಕೊಂಡು ಗುಂಪುಗಾರಿಕೆ ಶುರುಮಾಡುತ್ತಾನೆ. ‘ಇವೆಲ್ಲಗಳಿಂದ ಬಾಬಾ ಸಾಹೇಬರು ಮುಸಲ್ಮಾನ ವಿರೋಧಿಯೋ, ಕೋಮುವಾದಿಯೋ ಆಗಿದ್ದರೆ?’ ಎಂಬ ಪ್ರಶ್ನೆ ಬರಬಹುದು. ‘ಅವರು ವಿಭಜನೆಯ ದಿನಗಳಲ್ಲಿ ಕಣ್ಣಿಗೆ ಕಂಡ ಸತ್ಯವನ್ನು ಹೇಳಿ ಜನರನ್ನು ಮುಂದಿನ ಕೆಡುಕಿನ ಬಗೆಗೆ ಎಚ್ಚರಿಸಿದ್ದರು.
ಹಾಗಾಗಿ ಅಂಬೇಡ್ಕರ್ ಅವರ ವಿದೇಶಾಂಗ ನೀತಿಯ ಚಿಂತನೆಗಳು ಉತ್ತರ ಹುಡುಕುವ ಪ್ರಯತ್ನವಾಗಿದ್ದವು.ಪ್ರಜಾಪ್ರಭುತ್ವ ಮತ್ತು ಅಭಿವೃದ್ಧಿಗೆ ಪೂರಕವಾದ ಸ್ಟ್ರಾಟೆಜಿಕ್ ನಡೆಗಳು ಅವರ ವಿದೇಶಾಂಗ ನೀತಿಯ ಎರಡು ಮುಖ್ಯವಾದ ಅಂಶಗಳು. ಅವರು ಜಗತ್ತಿನ ರಾಜಕೀಯವನ್ನು ಬಹಳ ವಾಸ್ತವವಾದಿ ನೆಲೆಗಟ್ಟಿನಲ್ಲಿ ಅರ್ಥ ಮಾಡಿಕೊಂಡಿದ್ದರಲ್ಲದೆ, ಅದು ‘ದೇಶದ ಹಿತದೃಷ್ಟಿಯ’ ಕುರಿತಾದ ನಿಲುವುಗಳಿಗೆ ಬದ್ಧವಾಗಿತ್ತು. ಅವರು ಕಾನೂನು ಮತ್ತು ಕಾರ್ಮಿಕ ಇಲಾಖೆಯ ಮಂತ್ರಿಗಳಾಗಿ ಸಂವಿಧಾನ ರಚನೆಯ ಜವಾಬ್ದಾರಿ ಹೊತ್ತಿದ್ದರಿಂದ ವಿದೇಶಾಂಗ ನೀತಿಯ ಕುರಿತಾಗಿ ಹೆಚ್ಚು ಬರೆಯಲು ಅಭಿಪ್ರಾಯ ವ್ಯಕ್ತಪಡಿಸಲು ಸಮಯ ದೊರೆಯಲಿಲ್ಲ. ಈ ಕುರಿತು ಅವರೂ ಅನೇಕ ಬಾರಿ ತಮ್ಮ ಬೇಸರವನ್ನು ವ್ಯಕ್ತ ಪಡಿಸಿದ್ದರು.ಆದರೂ, ಅವರು ಪ್ರತಿಪಾದಿಸಿದ ಅನೇಕ ವಿದೇಶಾಂಗ ನೀತಿಯ ಅಂಶಗಳು ಇಂದಿಗೂ ಪ್ರಸ್ತುತವೆನಿಸಿದ್ದು, ಭಾರತೀಯ ದೃಷ್ಟಿಕೋನದ ನೀತಿ ನಿರೂಪಣೆಯಲ್ಲಿ ಮಹತ್ವದ್ದೆನಿಸಿದೆ.
ಮೂಲ : ಪ್ರಫುಲ್ಲ ಕೇಟ್ಕರ್ ಅವರ ಲೇಖನ ಆರ್ಗನೈಸರ್, ಅಂಬೇಡ್ಕರ್ ವಿಶೇಷಾಂಕ