
ಎಲ್ಲಾ ಭಾರತೀಯ ಭಾಷೆಗಳ ಉನ್ನತಿಗಾಗಿ ಕೇಂದ್ರ ಸರ್ಕಾರದಿಂದ ಉನ್ನತಾಧಿಕಾರದ ಸಮಿತಿ ರಚನೆ; ಅಧ್ಯಕ್ಷರಾಗಿ ಪದ್ಮಶ್ರೀ ಪುರಸ್ಕೃತ, ವಿದ್ವಾಂಸ ಶ್ರೀ ಚಮೂ ಕೃಷ್ಣಶಾಸ್ತ್ರೀ ನಿಯುಕ್ತಿ
15 ನವೆಂಬರ್ 2021: ಎಲ್ಲಾ ಭಾರತೀಯ ಭಾಷೆಗಳ ಉನ್ನತಿಗಾಗಿ ಕೇಂದ್ರ ಸರ್ಕಾರವು ಇಂದುರಚಿಸಿರುವ ಉನ್ನತಾಧಿಕಾರದ ಸಮಿತಿಗೆ ಪದ್ಮಶ್ರೀ ಪುರಸ್ಕೃತ ಶ್ರೀ ಚಮೂ ಕೃಷ್ಣಶಾಸ್ತ್ರೀ ಅವರು ಅಧ್ಯಕ್ಷರಾಗಿ ನಿಯುಕ್ತಿಗೊಂಡಿದ್ದಾರೆ.
ಕೇಂದ್ರ ಶಿಕ್ಷಣ ಇಲಾಖೆಯ ಜಂಟಿ ಕಾರ್ಯದರ್ಶಿ (ಭಾಷೆಗಳು), ಮೈಸೂರಿನ ಭಾರತೀಯ ಭಾಷಾ ಸಂಸ್ಥಾನದ ನಿರ್ದೇಶಕರು ಮತ್ತು ಈ ಸಮಿತಿಗೆ ಅಗತ್ಯ ಸೌಕರ್ಯಗಳನ್ನು ಒದಗಿಸುವ ಹೊಣೆಗಾರಿಕೆ ಇರುವ ದಿಲ್ಲಿಯ ಶ್ರೀ ಲಾಲ್ ಬಹಾದುರ್ ಶಾಸ್ತ್ರಿ ರಾಷ್ಟ್ರೀಯ ಸಂಸ್ಕೃತ ವಿಶ್ವವಿದ್ಯಾಲಯದ ಕುಲಪತಿಯವರು ಪದನಿಮಿತ್ತ ಸದಸ್ಯರಾಗಿರುವ ಈ ಸಮಿತಿಗೆ ತಜ್ಞ ಸದಸ್ಯರನ್ನು ಕಾಲಾನುಕ್ರಮದಲ್ಲಿ ಸಮಿತಿಯ ಅಧ್ಯಕ್ಷರ ಶಿಫಾರಸಿನಂತೆ ನೇಮಿಸಲಾಗುತ್ತದೆ ಎಂದು ಶಿಕ್ಷಣ ಇಲಾಖೆಯ ಪ್ರಕಟಣೆ ತಿಳಿಸಿದೆ.

ಸಂವಿಧಾನದ 8 ನೆಯ ಪರಿಚ್ಛೇದದಲ್ಲಿರುವ ಭಾಷೆಗಳಲ್ಲದೆ, ಅಪಾಯದ ಅಂಚಿನಲ್ಲಿರುವ ಭಾಷೆಗಳು, ಪರಿಚ್ಛೇದದಲ್ಲಿ ಇಲ್ಲದ ಭಾಷೆಗಳು, ಅಲ್ಪಸಂಖ್ಯಾತ, ಬುಡಕಟ್ಟು ಮತ್ತು ಶಾಸ್ತ್ರೀಯ ಭಾಷೆಗಳ ಕುರಿತಾಗಿ ಈ ಸಮಿತಿಯು ಕೆಲಸ ಮಾಡಲಿದೆ.
ಭಾರತೀಯ ಭಾಷೆಗಳ ತಂತ್ರಜ್ಞಾನ ಸಂಬಂಧಿತ ಸಾಧನಗಳು, ಭಾಷಾ ಶೀಕ್ಷಣ, ಭಾಷಾ ವಿದ್ಯಾರ್ಥಿಗಳ ಉದ್ಯೋಗಾವಕಾಶ, ರಾಷ್ಟ್ರೀಯ ಶಿಕ್ಷಣ ನೀತಿಯನ್ವಯ ಭಾರತೀಯ ಭಾಷೆಗಳಿಗೆ ಶಿಕ್ಷಣರಂಗದಲ್ಲಿ ಬೇಕಾದ ನೀಲ ನಕಾಶೆ, ಭಾಷಾ ಸಂಸ್ಥೆಗಳ ಶಕ್ತಿವರ್ಧನೆ, ಭಾಷಾ ಶಿಕ್ಷಣ, ಸಂಶೋಧನೆ, ಭಾಷಾ ದತ್ತ ಸಂಚಯ, ಅನುವಾದ, ಭಾಷಾಂತರ, – ಹೀಗೆ ಸಮಿತಿಯು ವಿಶಾಲ ಕಾರ್ಯಚೌಕಟ್ಟನ್ನು ಹೊಂದಿದೆ.
ಸಮಿತಿಯು ಎರಡು ವರ್ಷಗಳ ಅವಧಿಯಲ್ಲಿ ಸೂಕ್ತ ಸಮಿತಿ / ಉಪ ಸಮಿತಿಗಳನ್ನು ರಚಿಸಿ, ಕಾರ್ಯಕ್ರಮಗಳನ್ನು ನಡೆಸಿ, ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಭಾಷಾಸಂಬಂಧೀ ಸಂಸ್ಥೆಗಗಳ ಜೊತೆ ಸಮನ್ವಯ ಸಾಧಿಸಿ ಸೂಕ್ತವಾದ ಕ್ರಿಯಾ ಯೋಜನೆಗಳನ್ನು ರೂಪಿಸುವ ಹೊಣೆಗಾರಿಕೆಯನ್ನು ಹೊಂದಿದೆ.
ಈ ಸಮಿತಿಯ ರಚನೆಯಿಂದ ಕೇಂದ್ರ ಸರ್ಕಾರವು ಎಲ್ಲಾ ಭಾರತೀಯ ಭಾಷೆಗಳ ಬಗ್ಗೆ ತನಗಿರುವ ಕಾಳಜಿಯನ್ನು ವ್ಯಕ್ತಪಡಿಸಿದೆ. ಈ ಸಮಿತಿಯನ್ನು ಸದುಪಯೋಗಪಡಿಸಿಕೊಂಡು ಸಾರ್ವಜನಿಕರು, ಭಾಷಾಭಿಮಾನಿಗಳು, ಭಾಷಾ ತಂತ್ರಜ್ಞರು ಸೂಕ್ತವಾಗಿ ಮತ್ತು ರಚನಾತ್ಮಕವಾಗಿ ಭಾಗವಹಿಸಿ ಸಾವಿರಾರು ಭಾಷೆಗಳ ಸಮೃದ್ಧ ನಾಡಾದ ಭಾರತದಲ್ಲಿ ಸರ್ವಭಾಷಾ ಸಾಮರಸ್ಯ ಮತ್ತು ಸಂವರ್ಧನೆ – ಎರಡನ್ನೂ ಸಾಧಿಸಲು ಹೆಜ್ಜೆಗೂಡಲಿ