ಇತ್ತೀಚೆಗೆ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರು ದುಬೈ ಶೇಖ್ ಸಂಪ್ರದಾಯದ ಉಡುಪು ಧರಿಸಿರುವ ವೀಡಿಯೊ ಎಲ್ಲೆಡೆ ವೈರಲ್ ಆಗಿದೆ. ಒಂದು ಕ್ಷಣ ಎಲ್ಲರೂ ನಿಬ್ಬೆರಗಾಗಿ ಇದೇನಪ್ಪ ನಮ್ಮ ಸಿದ್ದರಾಮಯ್ಯನವರು ಈ ರೀತಿ ದುಬೈ ಶೇಖ್ ವೇಷ ಧರಿಸಿದ್ದಾರೆ! ಮೊದಲೇ ಟಿಪ್ಪು ಸುಲ್ತಾನ್ ಅನ್ನು ತಮ್ಮ ಆದರ್ಶವಾಗಿ ಹೊಂದಿರುವ ಇವರು ನಮ್ಮ ರಾಜ್ಯವನ್ನು ಬಿಟ್ಟು ದುಬೈಗೆ ಹೊರಟುಬಿಡುತ್ತಾರೊ ಏನೊ ಎಂದು ಅಚ್ಚರಿಪಟ್ಟರು. ಮಂಡ್ಯದಲ್ಲಿ ಕುರುಬ ಸಮುದಾಯದವರು ಆಯೋಜಿಸಿದ್ದ ಗಣಪತಿ ದೇವಸ್ಥಾನದ ಉದ್ಘಾಟನಾ ಸಮಾರಂಭದಲ್ಲಿ ಭಾಗವಹಿಸಿ, ನಂತರ ಊಟಕ್ಕೆಂದು ಅಲ್ಲಿನ ಕಾಂಗ್ರೆಸ್ ಮುಖಂಡ ಮುನ್ವರ್ ಖಾನ್ ನಿವಾಸಕ್ಕೆ ಭೇಟಿ ನೀಡಿದ್ದರು. ಈ ವೇಳೆ ಅವರಿಗೆ ಆ ಉಡುಪನ್ನು ಹಾಕಿಕೊಳ್ಳುವಂತೆ ಮನವಿ ಮಾಡಿದ್ದರಿಂದ ತಕ್ಷಣ ಅಲ್ಲಿಯೇ ದುಬೈ ಶೇಖ್ ಆಗಿ ಕಾಣಿಸಿಕೊಂಡರು.

ನೋಡಿ, ಸಿದ್ದರಾಮಯ್ಯನವರು ದುಬೈಶೇಖ್ ನ ವೇಷವನ್ನಾದರೂ ಧರಿಸಬಹುದು ಅಥವಾ ಟಿಪ್ಪು ಸುಲ್ತಾನನ ಸಂಕೇತವಾಗಿ ಹುಲಿಯ ಚರ್ಮದ ವಿನ್ಯಾಸದ ಉಡುಗೆಗಳನ್ನಾದರೂ ಧರಿಸಬಹುದು, ಅದನ್ನು ನಾವು ಯಾರೂ ಪ್ರಶ್ನೆ ಮಾಡಬಾರದು. ಏಕೆಂದರೆ, ಅವರ ಪ್ರಕಾರ ಅಲ್ಪಸಂಖ್ಯಾತರ(ಮುಸಲ್ಮಾನರ) ಓಲೈಕೆಗಾಗಿ ಮಾಡುವ ಈ ಎಲ್ಲಾ ಪ್ರದರ್ಶನಗಳು ‘ಜಾತ್ಯಾತೀತತೆ’ ಎಂದು ಕರೆಸಿಕೊಳ್ಳುತ್ತವೆ. ಆದರೆ ಹಿಂದೂಗಳಾಗಿರುವವರು ಸ್ವಧರ್ಮದ ಅಭಿಮಾನದಿಂದಲೋ ಅಥವಾ ಪ್ರತ್ಯೇಕತೆಯ, ಮೂಲಭೂತವಾದ ನಿಲುವುಗಳನ್ನು ತಳೆದಿರುವ ಅಬ್ರಹಾಮಿಕ್ ಮತಗಳ ನಿರಂತರ ಆಕ್ರಮಣದಿಂದ ಸ್ವಧರ್ಮವನ್ನು ರಕ್ಷಿಸಲೆಂದೋ ಹಿಂದುತ್ವದ ಜಾಗೃತಿಗಾಗಿ ತಿಲಕ, ಕೇಸರಿ ಶಲ್ಯಗಳನ್ನು ಧರಿಸಿದರೆ ಅದು ಅವರಿಗೆ ‘ಕೋಮುವಾದ’ವಾಗಿ ಕಾಣುತ್ತದೆ. ಇದೇ ಕಾರಣದಿಂದ ಹಿಂದೂ ಪರ ಸಂಘಟನೆಗಳ ಮೇಲೆ ಹಾಗೂ ಮುಖ್ಯವಾಗಿ ಆ ಸಂಘಟನೆಗಳ ಆದರ್ಶವನ್ನು ಪ್ರತಿನಿಧಿಸುವ ಪ್ರಮುಖ ವ್ಯಕ್ತಿಗಳ ಮೇಲೆ ಅವ್ಯಾಹತ, ಅನಿಯಂತ್ರಿತ ನುಡಿಗಳಿಂದ ಆಕ್ರಮಣ ಮಾಡುತ್ತಲೇ ಇದ್ದಾರೆ. ಚಕ್ರವರ್ತಿ ಸೂಲಿಬೆಲೆ ಅವರನ್ನು ಕೋಮುವಾದಿ ಎಂದದ್ದು, ತೇಜಸ್ವಿ ಸೂರ್ಯ ಅವರನ್ನು ಅಮಾವಾಸ್ಯೆ ಕತ್ತಲು ಎಂದದ್ದು, ಆರ್.ಎಸ್.ಎಸ್ ಅನ್ನು ತಾಲಿಬಾನಿಗೆ ಹೋಲಿಸಿದ್ದು ಹಾಗೂ ಇತ್ತೀಚೆಗೆ ನಮ್ಮ ರಾಜ್ಯದ ಎರಡು ಪೊಲೀಸ್ ಠಾಣೆಗಳಲ್ಲಿ ಆಯುಧಪೂಜೆಯ ಸಂದರ್ಭದಲ್ಲಿ ಪೊಲೀಸರು ಕೇಸರಿ ಶಾಲು ಧರಿಸಿರುವುದನ್ನು ವಿರೋಧಿಸಿದ್ದು ಇವೆಲ್ಲಾ ಅವರ ಆಕ್ರಮಣದ ಕೆಲವು ಮುಖ್ಯ ಉದಾಹರಣೆಗಳು. ಅವರ ಪ್ರಕಾರ ನಾವು ಹಿಂದೂಗಳಾಗಿದ್ದರೂ ಹಿಂದೂಗಳೆಂಬ ಹೆಮ್ಮೆ, ಘನತೆ, ಶ್ರೇಷ್ಠತೆ ನಮ್ಮಲ್ಲಿರಬಾರದು ಹಾಗೂ ಒಂದು ವೇಳೆ ಇದ್ದರೂ ಅದನ್ನು ನಾವು ತೋರ್ಪಡಿಸಿಕೊಳ್ಳಬಾರದು. ಒಟ್ಟಿನಲ್ಲಿ ಹಿಂದೂಗಳು ಜಾಗೃತರಾಗಿರಬಾರದು, ಇವರ ಬಳಗದವರೆಲ್ಲಾ ಸೃಷ್ಟಿಸಿರುವ ಜಾತ್ಯಾತೀತತೆ ಎಂಬ ಭ್ರಮಾಲೋಕದ ಅಸ್ತಿತ್ವಹೀನ ಧ್ಯೇಯದಡಿ ಗುಲಾಮರಾಗಿ ಜೀವಿಸಬೇಕು. ಆದರೆ ಇವರು ಮಾತ್ರ ತಾವು ಹಿಂದುವಾಗಿದ್ದುಕೊಂಡು ಅಲ್ಪಸಂಖ್ಯಾತರ ಓಲೈಕೆಗಾಗಿ ಅವರ ಸಂಪ್ರದಾಯದ ವೇಷಭೂಷಣಗಳನ್ನು ಧರಿಸಬಹುದು. ಹೋಗಲಿ ಅವರಿಗೆ ಅಲ್ಪಸಂಖ್ಯಾತರ ಉದ್ಧಾರವೇ ಮುಖ್ಯವಾಗಿದ್ದರೆ, ಅವರ ಪ್ರೀತಿಗಾಗಿಯೇ ಇದನ್ನೆಲ್ಲಾ ಮಾಡುತ್ತಿದ್ದಾರೆ ಹಾಗೂ ಇದಕ್ಕಾಗಿಯೇ ಹಿಂದುತ್ವವನ್ನು ನಿಂದಿಸುವುದಕ್ಕೂ ಹಿಂಜರಿಯುವುದಿಲ್ಲ ಎಂದಾದರೂ ನಾವು ಅರ್ಥೈಸಿಕೊಳ್ಳಬಹುದೆ? ಖಂಡಿತವಾಗಿಯೂ ಇಲ್ಲ. ಇವರಿಗೆ ಸತ್ಯವಾಗಿಯೂ ಅಲ್ಪಸಂಖ್ಯಾತರ ಮೇಲೆ ಕಾಳಜಿಯಿದ್ದಿದ್ದರೆ ಟಿಪ್ಪುಸುಲ್ತಾನನಂತಹ ಕ್ರೂರಿ, ಅಸಹಿಷ್ಣು, ಮತಾಂಧ ರಾಜನ ಜಯಂತಿಯನ್ನು ಆಚರಿಸಿ ಅವರ ಬೆಳವಣಿಗೆಗೆ ಮಾರಕವಾಗುತ್ತಿರಲಿಲ್ಲ. ಹಾಗೆಯೇ ಮತಾಂಧತೆ, ಅಸಹಿಷ್ಣುತೆಗಳನ್ನು ಆಚರಣೆಗೆ ತಂದ ರಾಜನ ವಿಚಾರಗಳನ್ನು ಪ್ರೇರಣೆ ನೀಡಿ, ಅನರ್ಥ ಆದರ್ಶವನ್ನು ಆ ಸಮುದಾಯದವರಿಗೆ ನೀಡುತ್ತಿರಲಿಲ್ಲ. ಟಿಪ್ಪು ಸುಲ್ತಾನನನ್ನು ಸ್ವಾತಂತ್ರ್ಯ ಹೋರಾಟಗಾರ, ಶಾಂತಿಪ್ರಿಯ, ಕನ್ನಡಪ್ರೇಮಿ ಎಂದು ವಾದಿಸುವ ಇವರ ಗುಂಪಿನವರು ಸ್ವತಃ ಟಿಪ್ಪು ಸುಲ್ತಾನನೇ ಬರೆದಿರುವ ಪತ್ರದಲ್ಲಿ ಆತನ ವಿಚಾರಗಳೇ ಆದ ಆಫ್ಘಾನಿಸ್ತಾನ ರಾಜನಲ್ಲಿ ಭಾರತದ ಮೇಲೆ ಆಕ್ರಮಣ ಮಾಡಿ ಇಸ್ಲಾಮಿಕ್ ರಾಜ್ಯವನ್ನು ಸ್ಥಾಪಿಸುವಂತೆ ಬೇಡಿಕೆ ಇಟ್ಟದ್ದು, ಪಾರ್ಸಿ ಭಾಷೆಯನ್ನು ರಾಜ್ಯದ ಭಾಷೆಯನ್ನಾಗಿ ಮಾಡಿ ಆಡಳಿತ ನಡೆಸಿದ್ದು, ಶ್ರೀರಂಗಪಟ್ಟಣದ ತಮ್ಮ ಜ್ಯೋತಿಷಿಗಳ ದೇಗುಲಗಳನ್ನು ಹೊರತುಪಡಿಸಿ ಉಳಿದ ಸುಮಾರು 8000 ದೇಗುಲಗಳನ್ನು ನಾಶಪಡಿಸಿದ ವರದಿಯನ್ನು ರಾಜ್ಯಸಭೆಯಲ್ಲಿ ಆಲಿಸಿದ್ದು, ಬ್ರಿಟಿಷರಲ್ಲದೆ ಮರಾಠ, ನಿಜಾಮರೊಂದಿಗೂ ಸತಾತವಾಗಿ ಹೋರಾಡಿರುವುದು ಸ್ವಾತಂತ್ರ್ಯ ಹೋರಾಟವೆಂದು ಪರಿಗಣಿಸಲಾಗದ್ದು, ಮತಾಂತರದ ದಾಖಲೆಗಳನ್ನು ಹಾಗೂ ವಶಪಡಿಸಿಕೊಂಡ ಸ್ತ್ರೀಯರ ದಾಖಲೆಗಳನ್ನು ಕುರಿತು ಚರ್ಚಿಸಿದ್ದು, ಈ ಎಲ್ಲಾ ವಿಷಯಗಳ ಬಗೆಗಿನ ವಿಲಿಯಂ ಕರ್ ಪ್ಯಾಟ್ರಿಕ್ ನಿಂದ ಇಂಗ್ಲಿಷ್ ಗೆ ಅನುವಾದಗೊಂಡ ಪತ್ರಗಳ ಕುರಿತು ವಿಶ್ವಾಸವಿಲ್ಲ ಮತ್ತು ಅದನ್ನು ಚರ್ಚಿಸುವುದೂ ಇಲ್ಲ. ಮೊದಲ ಬಾರಿಗೆ ಶಸೆಕ್ಷನ್144ನ್ನು ಜಾರಿಗೊಳಿಸುವ ಮೂಲಕ ಈ ಜಯಂತಿಯನ್ನು ಆಚರಿಸಿದ್ದರಲ್ಲೇ ಅದರ ಸತ್ಯಾಸತ್ಯತೆ ಜಗಜ್ಜಾಹೀರಾಗಿದೆ. ಅಲ್ಪಸಂಖ್ಯಾತರ ಓಲೈಕೆ ಮಾಡುವುದೇ ಆದರೆ, ಅವರ ಸಮುದಾಯದಲ್ಲಿ ಶಾಂತಿಪ್ರಿಯರಾಗಿ ಬಾಳಿ ಭಾರತ ಮಾತೆಯ ಸುಪುತ್ರರೆನಿಸಿಕೊಂಡ ಸಂತ ಶಿಶುನಾಳಶರೀಫ, ಡಾ.ಅಬ್ದುಲ್ ಕಲಾಂರಂತಹ ವ್ಯಕ್ತಿಗಳ ಜಯಂತಿಯನ್ನು ಸಂಭ್ರಮದಿಂದ ಆಚರಿಸಿ ಅವರಿಗೆ ಉತ್ತಮ ಆದರ್ಶವನ್ನು ನೀಡಬಹುದಿತ್ತು.

ಇದರ ಜೊತೆಗೆ ಸಿದ್ದರಾಮಯ್ಯ ಅವರ ಸರ್ಕಾರವು ಆಡಳಿತದಲ್ಲಿದ್ದಾಗ ಎಸ್.ಡಿ.ಪಿ.ಐ ಹಾಗೂ ಪಿ.ಎಫ್. ಐ ಕಾರ್ಯಕರ್ತರ ಮೇಲಿದ್ದ 1500ಕ್ಕೂ ಹೆಚ್ಚು ಕೇಸ್ ಗಳನ್ನು ರದ್ದುಗೊಳಿಸಿ ಅವರ ಭಯೋತ್ಪಾದನಾಕಾರ್ಯಗಳಿಗೆ ಪರೋಕ್ಷವಾಗಿ ಬೆಂಬಲ ನೀಡಿದ್ದು ಅವರ ಸಮುದಾಯದ ಅಭಿವೃದ್ಧಿ ಮಾಡಿದಂತಾಯಿತೆ? ಹಾಗೆಯೇ ಇವರ ಸರ್ಕಾರದ ಆಡಳಿತಾವಧಿಯಲ್ಲಿ ನಡೆದ ರಾಜು, ರುದ್ರೇಶ್, ಸಂತೋಷ್, ಶರತ್ ಮಡಿವಾಳ ಮುಂತಾದ ಹಿಂದೂ ಪರ ಸಂಘಟನೆಗಳ ಕಾರ್ಯಕರ್ತರ ಹತ್ಯೆಯ ಪ್ರಕರಣಗಳಿಗೆ ಅಂಧರಾಗಿದ್ದು ಜಾತ್ಯಾತೀತತೆಯ ಆದರ್ಶವನ್ನು ಎತ್ತಿಹಿಡಿದಂತಾಯಿತೆ? ಹಿಂದೂಗಳು ಲೋಕಕಲ್ಯಾಣಕ್ಕಾಗಿ ಶ್ರದ್ಧಾಭಕ್ತಿಗಳಿಂದ ಆಚರಿಸುವ ಸನಾತನದ ಸಂಸ್ಕಾರ-ವಿಧಿಗಳನ್ನು ಮೂಢನಂಬಿಕೆಯೆಂದು ಜರಿದು ತಾವು ಮಾತ್ರ ತಮ್ಮ ಸ್ವಾರ್ಥತೆಯನ್ನು ಸಾಧಿಸಲು ಕಾಗೆ ಕುಳಿತ ತಮ್ಮ ಕಾರನ್ನು ಬದಲಿಸಿದ್ದು, ಪ್ರಮಾಣವಚನ ಸ್ವೀಕರಿಸುವಾಗ ಮಂತ್ರಿಸಿದ ನಿಂಬೆಹಣ್ಣನ್ನು ಜೊತೆಯಲ್ಲಿರಿಸಿಕೊಂಡದ್ದು ವೈಜ್ಞಾನಿಕತೆಯನ್ನು ಪ್ರದರ್ಶಿಸಿದಂತಾಯಿತೆ? ಶಾಲಾ ಮಕ್ಕಳಿಗೆ ಕ್ಷೀರಭಾಗ್ಯ, ಬಡವರಿಗೆ ಇಂದಿರಾಕ್ಯಾಂಟೀನ್ ಭಾಗ್ಯ ಹಾಗೂ 1ರೂಪಾಯಿಯ ಅಕ್ಕಿ ಭಾಗ್ಯ ಮುಂತಾದ ಆತ್ಮನಿರ್ಭರತೆಯನ್ನು ಮರೆಸಿ ಸರ್ಕಾರದ ಮೇಲೇ ನಿರ್ಭರವಾಗುವ ಅಶಕ್ತ ಪ್ರಜಾವರ್ಗದ ನಿರ್ಮಾಣಕ್ಕೆ ಅಡಿಪಾಯ ಹಾಕುವ ಯೋಜನೆಗಳ ಮೂಲಕ ಹಿಂದುಳಿದ, ಶೋಷಿತರ, ಬಡವರ ಸಬಲೀಕರಣವಾಯಿತೆ? ಟಿಪ್ಪು ಸುಲ್ತಾನ್ ಜಯಂತಿಯ ಆಚರಣೆಗೆ ಶುಭಕೋರುವಾಗ ಇವರು ಆತನು ಬ್ರಿಟಿಷರ ವಿರುದ್ಧ ರಾಜಿಯಾಗದೆ ಹೋರಾಡಿದ ಸ್ವಾತಂತ್ರ್ಯ ಹೋರಾಟಗಾರ ಎಂದು ವೈಭವೀಕರಿಸಿ, ವೀರವನಿತೆ ಒನಕೆ ಓಬವ್ವ ಜಯಂತಿಯ ಆಚರಣೆಗೆ ಶುಭಾಶಯ ಹೇಳುವಾಗ ಆಕೆಯ ಶತ್ರುಗಳ ನಾಮೋಲ್ಲೇಖವನ್ನು ಮಾಡದಿರುವುದು ಶ್ರೇಷ್ಠ ಮಾನವತಾವಾದವಾಯಿತೆ?

“ಒಬ್ಬ ಹಸಿದ ವ್ಯಕ್ತಿಗೆ ಮೀನನ್ನು(ಉಪಹಾರ) ಕೊಡುವುದರ ಮೂಲಕ ಆತನ ಒಂದು ದಿನದ ಹಸಿವನ್ನು ನೀಗಿಸಬಹುದು, ಆದರೆ ಮೀನು ಹಿಡಿಯುವ ಕಲೆಯನ್ನು ಕಲಿಸಿಕೊಡುವುದರ ಮೂಲಕ ಆತನ ಬದುಕು ಕಟ್ಟಿಕೊಳ್ಳಲು ಅವಶ್ಯಕವಾದ ವೃತ್ತಿ-ಕೌಶಲ್ಯದ ಬಗೆಗಿನ ಜ್ಞಾನವನ್ನು ನೀಡಬಹುದು” ಎಂಬ ಮಾತನ್ನು ನಾವು ಕೇಳಿದ್ದೇವೆ. ಈಗ ಹೇಳಿ ಸರ್ಕಾರಗಳು ತಮ್ಮ ಪ್ರಜೆಗಳಿಗೆ ಆತ್ಮನಿರ್ಭರತೆಯನ್ನು ಸಾಧಿಸಲು ಸಹಕರಿಸುವ ಯೋಜನೆಗಳನ್ನು ರೂಪಿಸಬೇಕೊ ಅಥವಾ ಸರ್ಕಾರದ ಮೇಲೇ ಸದಾ ಅವಲಂಬಿತವಾಗುವಂತೆ ವ್ಯವಸ್ಥಿತವಾಗಿ ಯೋಜನೆಗಳನ್ನು ರೂಪಿಸಬೇಕೊ? ಕಳೆದ 70 ವರ್ಷಗಳಿಂದ ಕಾಂಗ್ರೆಸ್ ಸರ್ಕಾರದ ಪ್ರಧಾನಿಗಳಾದ ನೆಹರು, ಇಂದಿರಾ ಗಾಂಧಿ, ರಾಜೀವ್ ಗಾಂಧಿ ಆದಿಯಾಗಿ ಎಲ್ಲರೂ ‘ಗರೀಬಿ ಹಠಾವೊ'(ಬಡತನವನ್ನು ತೊಲಗಿಸಿ) ಎಂಬ ಪ್ರಣಾಳಿಕೆಯನ್ನೇ ಉಚ್ಛರಿಸುತ್ತಿರುವುದು ಏನನ್ನು ತಿಳಿಸುತ್ತದೆ? ದಶಕಗಳ ಕಾಲ ಉದ್ದೇಶಪೂರಕವಾಗಿಯೇ ಭಾರತದ ಬಡತನವನ್ನು ಹಾಗೆಯೇ ಉಳಿಸಿಕೊಂಡು ತಮ್ಮ ವೋಟ್ ಬ್ಯಾಂಕ್ ರಾಜನೀತಿಯನ್ನು ಮುಂದುವರಿಸಿಕೊಂಡಿದ್ದನ್ನೆ? ಇದೇ ವಿಚಾರ ಇವರು ಮಾಡಿಕೊಂಡು ಬಂದಿರುವ ಅಲ್ಪಸಂಖ್ಯಾತರ ಓಲೈಕೆಯ ರಾಜನೀತಿಯಲ್ಲೂ ವ್ಯಕ್ತವಾಗುತ್ತದೆ. ಅವರನ್ನು ಭಾರತದ ಪ್ರಜೆಗಳಾಗಿ ನೋಡಿ, ಅವರನ್ನೂ ಭಾರತದ ಅಭಿವೃದ್ಧಿಯಲ್ಲಿ ತೊಡಗಿಕೊಳ್ಳುವಂತೆ ಮಾಡದೆ ಮತಾಂಧತೆಯ ಅಂಧಕಾರದಲ್ಲೇ ಮುಳುಗಿಸಿ ತಮ್ಮ ರಾಜಕಾರಣದ ಸ್ವಹಿತಾಸಕ್ತಿಯನ್ನು ಸಾಧಿಸುತ್ತಿದ್ದಾರೆಯೆ? ಇಂತಹ ಯಾವುದೇ ರಾಷ್ಟ್ರೋತ್ಥಾನಕ್ಕೆ ಪೂರಕವಲ್ಲದ ವಿಚಾರಗಳಿಗೆ ನಮಗರಿವಿಲ್ಲದೆ ಪರೋಕ್ಷವಾಗಿ ಬೆಂಬಲ ನೀಡಿ ಬಲಿಪಶುಗಳಾಗುವುದರ ಮೊದಲು ಎಚ್ಚೆತ್ತುಕೊಳ್ಳಿ. ವೀರಸಾವರ್ಕರ್ ಅವರ ಉತ್ಕೃಷ್ಟ ವ್ಯಾಖ್ಯಾನವನ್ನು ಆಗಾಗ ಸ್ಮರಿಸಿಕೊಳ್ಳಿ: “ರಾಜಕೀಯವನ್ನು ಸಂಪೂರ್ಣವಾಗಿ ಹಿಂದುತ್ವಮಯಗೊಳಿಸಿ, ಹಿಂದೂಸಮಾಜವನ್ನು ಸಂಪೂರ್ಣವಾಗಿ ಕ್ಷಾತ್ರಮಯಗೊಳಿಸಿ”.

~ಸಿಂಚನ.ಎಂ.ಕೆ ಮಂಡ್ಯ

Leave a Reply

Your email address will not be published.

This site uses Akismet to reduce spam. Learn how your comment data is processed.