ಲೇಖಕರು :ಕೆ. ವೆಂಕಟಾಚಲಯ್ಯ ಅವರು ಭಾರತೀಯ ಗಣಿತಶಾಸ್ತ್ರ ಸಂಘದ ಅಧ್ಯಕ್ಷರಾಗಿದ್ದರು.

ಶ್ರೀನಿವಾಸ ರಾಮಾನುಜರವರು ಇಂಗ್ಲೆಂಡ್ ದೇಶದಲ್ಲಿದ್ದದ್ದು ಐದು ವರ್ಷಗಳ ಕಾಲ (1914-1919). ಕೇಂಬ್ರಿಡ್ಜ್ ವಿಶ್ವವಿದ್ಯಾಲಯದ ಪ್ರಾಧ್ಯಾಪಕ ಜಿ.ಎಚ್. ಹಾರ್ಡಿ(G.H. Hardy)ಯವರ ಕೋರಿಕೆಯನ್ನನುಸರಿಸಿ ಮದ್ರಾಸ್ ವಿಶ್ವವಿದ್ಯಾನಿಲಯ ರಾಮಾನುಜರವರಿಗೆ ಸಂಶೋಧನವೇತನ ನೀಡಿತ್ತು. ರಾಮಾನುಜರ ಪರಿಶೋಧನೆಗಳಲ್ಲಿ ಕೆಲವು ಆ ಕಾಲದಲ್ಲಿ ಪ್ರಕಟಗೊಂಡವು; ಕೆಲವು ಪ್ರಕಟನೆಗಳು ಹಾರ್ಡಿಯವರೊಡನೆ ಕಲೆತು ಮಾಡಿದವು. ಈ ಪ್ರಕಟನೆಗಳ ಸಂಕಲನಗ್ರಂಥವು ಕೇಂಬ್ರಿಡ್ಜ್ ವಿಶ್ವವಿದ್ಯಾಲಯದಿಂದ 1927ರಲ್ಲಿ ಪ್ರಚುರಗೊಂಡಿತು. ಇದು ಅವರ ಸಂಶೋಧನೆಗಳ ಅತ್ಯಲ್ಪ ಭಾಗ ಮಾತ್ರವಾಗಿತ್ತು. ಶ್ರೀನಿವಾಸ ರಾಮಾನುಜರಿಗೆ ಭಾರತದಲ್ಲಿದ್ದಾಗಲೇ ಕ್ಷಯರೋಗದ ಲಕ್ಷಣಗಳಿದ್ದುವು. ಇಂಗ್ಲೆಂಡ್ ದೇಶದ ಶೀತ ವಾತಾವರಣದಲ್ಲಿ ಅದು ಉಲ್ಬಣಗೊಂಡಿತು. 1917ರ ಮಾರ್ಚ್ ತಿಂಗಳಿನಿಂದ 1919ರ ಮಾರ್ಚ್‍ವರೆಗೆ ಇಂಗ್ಲೆಂಡಿನ ಹಲವಾರು ಚಿಕಿತ್ಸಾಲಯಗಳಲ್ಲಿ ರಾಮಾನುಜರು ರುಗ್ಣಶಯ್ಯೆಯಲ್ಲೇ ನರಳಿ, ಮತ್ತೆ ನಮ್ಮ ದೇಶಕ್ಕೆ ಬಂದು ಸುಮಾರು ಒಂದು ವರ್ಷ ಪರ್ಯಂತ ಕುಂಭಕೋಣಂ, ಕೊಡುಮುಡಿ ಮತ್ತು ಮದ್ರಾಸ್‍ಗಳಲ್ಲಿದ್ದು 1920ರ ಏಪ್ರಿಲ್ 26ರಂದು ನರಳುತ್ತಾ ಸಾವನ್ನಪ್ಪಿ ಕೀರ್ತಿಶೇಷರಾದರು.

ಕೆಲವು ಕಾಗದಪತ್ರಗಳು

ಇಂಗ್ಲೆಂಡಿನಲ್ಲಿ ರಾಮಾನುಜರ ಪರಿಶೋಧನೆಗಳು, ಅಲ್ಲಿನ ಚಿಕಿತ್ಸಾಲಯಗಳಲ್ಲಿ ಅವರ ಬಾಳು ಹೇಗಿತ್ತು, ಆ ದಾರುಣ ಪರಿಸ್ಥಿತಿಯಲ್ಲಿ ಅವರಿಗೆ ನೆರವಾದ ಸ್ನೇಹಿತರಾರು – ಈ ವಿಚಾರಗಳಲ್ಲಿ ಆಸಕ್ತನಾಗಿ 1979ರ ಮಾರ್ಚ್ ತಿಂಗಳಿನಲ್ಲಿ ನಾನು ಮದ್ರಾಸಿನ ರಾಮಾನುಜ ಪರಿಶೋಧನಾಲಯದಲ್ಲಿದ್ದಾಗ ಡಾ|| ಎಂ.ಎಸ್. ರಂಗಾಚಾರಿಯವರು ರಾಮಾನುಜರಿಗೆ ಸಂಬಂಧಪಟ್ಟ ಕೆಲವು ಕಾಗದಪತ್ರಗಳ ಫೋಟೋ ನಕಲು ಪತ್ರಗಳನ್ನು ನನ್ನ ಅವಗಾಹನೆಗಾಗಿ ಕೊಟ್ಟರು. ಇವುಗಳನ್ನು 1968ರಲ್ಲಿ ರಾನ್ಕಿನ್ (Prof. Rankin) ಎಂಬ ಸ್ಕಾಟ್ಲೆಂಡಿನ (ಗ್ಲಾಸ್ಗೊ) ಗಣಿತಶಾಸ್ತ್ರಜ್ಞರು ಆಗಿನ ಪರಿಶೋಧನಾಲಯದ ಮುಖ್ಯಾಧಿಕಾರಿ ಸಿ.ಟಿ. ರಾಜಗೋಪಾಲರವರಿಗೆ ಕೊಟ್ಟಿದ್ದರು. ಇವರ ಮರಣಾನಂತರ ಇವು ಸಂಸ್ಥೆಯ ರೀಡರ್ ಎಂ.ಎಸ್. ರಂಗಾಚಾರಿಯವರ ಕೈಸೇರಿದವು. ಇವು ಕೇಂಬ್ರಿಡ್ಜಿನ ಟ್ರಿನಿಟಿ ಕಾಲೇಜಿನಲ್ಲಿರುವ ರಾಮಾನುಜರ ಕೈಬರಹದ ಸಂಶೋಧನೆಗಳು ಮತ್ತು ಅವರಿಗೆ ಸಂಬಂಧಪಟ್ಟ ಪತ್ರಗಳ ಬಹು ಅಲ್ಪ ಭಾಗದ ಪ್ರತಿಗಳು ಮಾತ್ರ. ರಾಂಕಿನ್‍ರವರು ಆ ಕಾಲೇಜಿನಲ್ಲಿರುವ ಎಲ್ಲ ರಾಮಾನುಜರ ದಾಖಲೆಗಳ ಪಟ್ಟಿಯೊಂದನ್ನೂ ಕೊಟ್ಟಿದ್ದರು.

ಇದಲ್ಲದೆ ಆಕ್ಸ್‍ಫರ್ಡ್ ವಿಶ್ವವಿದ್ಯಾನಿಲಯದ ಪ್ರೊ|| ಬರ್ಚ್(Prof. Birch)ರವರು ‘Mathematical Proceedings of the Cambridge  Philosophical  Society’ ಪತ್ರಿಕೆಯ 1975ರ ಜೂನ್ ಸಂಚಿಕೆಯಲ್ಲಿ “A Look-Back into Ramanujan’s Notebooks” ಎಂಬ ಪ್ರಬಂಧವೊಂದನ್ನು ಪ್ರಕಟಿಸಿದ್ದರು. ಇವರು ಆ ವಿಶ್ವವಿದ್ಯಾನಿಲಯದ ಗಣಿತಗ್ರಂಥ ಸಂಸ್ಕರಣಗಳಲ್ಲಿ ರಾಮಾನುಜರ ಅದುವರೆಗೂ ಪ್ರಕಟವಾಗದ ಸಂಶೋಧನೆಗಳ ಸ್ಥೂಲ ಪರಿಚಯವನ್ನು ಮಾಡಿಕೊಟ್ಟಿದ್ದರು.  ಇವುಗಳನ್ನು 1965ರಲ್ಲಿ ಗತಿಸಿದ ಆ ವಿಶ್ವವಿದ್ಯಾನಿಲಯದ ಪ್ರೊಫೆಸರ್ ಜಿ.ಎನ್. ವಾಟ್ಸನ್‍ರವರು ಸಂಗ್ರಹಿಸಿದ್ದರೆಂದು ಕಂಡುಬಂದಿತು.

ಅಮೆರಿಕಾದ ಗಣಿತಶಾಸ್ತ್ರಜ್ಞ ಆಂಡ್ರೂಸ್‍ರವರು ಟ್ರಿನಿಟಿ ಕಾಲೇಜಿನಿಂದ ರಾಮಾನುಜರ ಕೆಲವು ಕೈಬರಹದ ಫೋಟೋ ಪ್ರತಿಗಳನ್ನು ಪಡೆದು ಅವುಗಳ ಸಂಶ್ಲೇಷಣೆಯನ್ನು 1979 ರಿಂದೀಚೆಗೆ ಪ್ರಕಟಿಸಿದರು. ಅನಂತರ ನಮ್ಮ ದೇಶದ ಕೆಲವು ವಿದ್ವಾಂಸರೂ ಎಚ್ಚೆತ್ತು ಕೇಂಬ್ರಿಡ್ಜ್ ಮತ್ತು ಆಕ್ಸ್‍ಫರ್ಡ್‍ಗಳಿಂದ ಈ ಎಲ್ಲಾ ಪರಿಶೋಧನೆಗಳ ಮತ್ತು ಅವಕ್ಕೆ ಸಂಬಂಧಪಟ್ಟ ಕಾಗದಪತ್ರಗಳನ್ನು ಪಡೆದು ಪರಿಶೀಲಿಸತೊಡಗಿದರು. ಈ ಕೆಲವು ಪತ್ರಗಳಲ್ಲಿ ರಾಮಾನುಜರ ಚಿಕಿತ್ಸಾಲಯ ಜೀವನ ಎಷ್ಟು ದಾರುಣವಾಗಿತ್ತು, ರಾಮಾನುಜರ ಶಾಕಾಹಾರಿ ಆಹಾರನಿಯಮ ಮುಂತಾದವುಗಳನ್ನು ಕಂಡು ಸೇವಕಸೇವಕಿಯರು ಬೇಸರಪಟ್ಟು ರಾಮಾನುಜರ ಆಹಾರ ಶುಶ್ರೂಷೆಗಳ ಬಗೆಗೆ ಎಷ್ಟು ಅಸಡ್ಡೆ ತೋರಿಸುತ್ತಿದ್ದರು – ಇವೇ ಮೊದಲಾದ ಸಂಗತಿಗಳಿವೆ.

ರಾಮಲಿಂಗಂ

ಈ ಸಂಗತಿಗಳು ಬೆಳಕಿಗೆ ಬಂದದ್ದು ರಾಮಾನುಜರವರ ಕರುಣಾಶಾಲಿ ಗೆಳೆಯ ಎ.ಎಸ್. ರಾಮಲಿಂಗಂ ಎಂಬಾತ ಪ್ರೊ|| ಹಾರ್ಡಿಯವರಿಗೆ 1918ರ ಜೂನ್ ತಿಂಗಳಿನಲ್ಲಿ ಬರೆದ 12 ಪುಟಗಳ ಪತ್ರದಿಂದ. ಈ ಪತ್ರದಲ್ಲಿ ರಾಮಲಿಂಗಂರವರು ಹಾರ್ಡಿಯವರಿಗೆ ತಮ್ಮ ಪರಿಚಯ, ಮ್ಯಾಟ್‍ಲಾಕ್ (Matlock) ಚಿಕಿತ್ಸಾಲಯದಲ್ಲಿ ರಾಮಾನುಜರ ಕಠಿಣ ಪರಿಸ್ಥಿತಿ, ಅದನ್ನು ಸುಧಾರಿಸಲು ತೆಗೆದುಕೊಳ್ಳಬಹುದಾಗಿದ್ದ ಕ್ರಮಗಳು, ಈ ವಿಚಾರವಾಗಿ ವಿವರವಾಗಿ ಬರೆದಿದ್ದಾರೆ. ಈ ಪತ್ರದ ನಕಲು ನಮಗೆ ದೊರಕಿದ್ದರಿಂದ ಮಾತ್ರ ನಮಗೆ ಈ ಸಂಗತಿಗಳೆಲ್ಲ ಈಚೆಗೆ ತಿಳಿದುಬಂದವು. ರಾಮಲಿಂಗಂರವರು ರಾಮಾನುಜರ ಶುಶ್ರೂಷೆಯಲ್ಲಿ ತೋರಿದ ಅಭಿಮಾನ, ಅನುಕಂಪಗಳು ಅತ್ಯಂತ ಪ್ರಶಂಸಾರ್ಹವಾದವು. ಇವರ ಪತ್ರವನ್ನು ಓದುವಾಗ ಕಣ್ಣುಗಳಲ್ಲಿ ನೀರು ಬರುತ್ತದೆ. ರಾಮಾನುಜರವರ  ಪರಿಸ್ಥಿತಿಯನ್ನು ಇವರು ವರ್ಣಿಸುವಾಗ ಮನಸ್ಸಿಗೆ ಬಹಳ ಸಂಕಟವಾಗುತ್ತದೆ.

ರಾಮಲಿಂಗಂರವರ ಕಾರ್ಯ ಅತ್ಯಂತ ಸ್ತುತ್ಯರ್ಹ; ಆದರೆ ಆ ಕಾಗದದಲ್ಲಿರುವ ಅಂಶಗಳಿಂದ ಮಾತ್ರವೇ ನಮಗೆ ರಾಮಲಿಂಗಂರವರ ಪರಿಚಯ. ಇನ್ನು ಯಾವ ಮೂಲಗಳಿಂದಲೂ ರಾಮಾನುಜರವರ ಇಂತಹ ನಿಕಟ ಗೆಳೆಯನ ವಿಚಾರ ಈವರೆಗೆ ನಮಗೆ ತಿಳಿದುಬಂದಿಲ್ಲವೆಂದು ವಿಷಾದದಿಂದ ಬರೆಯಬೇಕಾಗಿದೆ. ರಾಮಾನುಜರು ಇಂಗ್ಲೆಂಡಿನಲ್ಲಿ ಇದ್ದಾಗ ಅನೇಕ ಪ್ರಖ್ಯಾತ ಪುರುಷರ ಸ್ನೇಹಪರಿಚಯಗಳು ಅವರಿಗೆ ಆಗಿದ್ದವು. ಮಾಜಿ ಅರ್ಥಸಚಿವ ಸಿ. ಡಿ. ದೇಶ್‍ಮುಖ್, ಯೋಜನಾ ಇಲಾಖೆಯ ಮಾಜಿ ಮುಖ್ಯಸ್ಥ  ಮಹಲನೊಬಿಸ್,  ಪಣಿಕ್ಕರ್ ಮುಂತಾದ ವ್ಯಕ್ತಿಗಳು ರಾಮಾನುಜರ ಪರಿಚಯಸ್ಥರಾಗಿದ್ದರೆಂದು ನಮಗೆ ತಿಳಿದುಬಂದಿದೆ. ಆದರೆ ಅವರ ಆದರ್ಶ ಕರುಣಾಮಯ ಗೆಳೆಯ ರಾಮಲಿಂಗಂರವರ ವಿಚಾರವಾಗಿ ತಿಳಿದುಬಂದಿರುವುದು ಸ್ವಲ್ಪ ಮಾತ್ರ.

ಶ್ರೀನಿವಾಸ ರಾಮಾನುಜರವರ 32 ವರ್ಷಗಳ ಸಂಕ್ಷಿಪ್ತ ಜೀವನವನ್ನು ಇಲ್ಲಿ ಸಮೀಕ್ಷಿಸಬಹುದು. ಅನಂತರ ಅವರ ಕೊನೆಯ ದಿನಗಳು ಮತ್ತು ಅವರ ಗೆಳೆಯ ರಾಮಲಿಂಗಂರವರ ಬಗ್ಗೆ ತಿಳಿದಿರುವ ವಿಷಯಗಳನ್ನು ಪ್ರಸ್ತಾವಿಸಲಾಗುವುದು.

ಬಾಲ್ಯ, ವ್ಯಾಸಂಗ

ಶ್ರೀನಿವಾಸ ರಾಮಾನುಜರು ತಮಿಳುನಾಡಿನ ಈರೋಡ್ ನಗರದಲ್ಲಿ 1887ರ ಡಿಸೆಂಬರ್ 22ರಂದು ಜನಿಸಿದರು. (ಸರ್ವಜಿತ್ ಸಂವತ್ಸರ, ಮಾರ್ಗಶೀರ್ಷ ಶುಕ್ಲ ನವಮಿ, ಉತ್ತರಾಭಾದ್ರ ನಕ್ಷತ್ರ – ಸಾಯಂಕಾಲ 6 ಗಂಟೆ). ಇವರ ತಂದೆ ಶ್ರೀನಿವಾಸಯ್ಯಂಗಾರ್ಯರು ಕುಂಭಕೋಣದ ಒಬ್ಬ ಸೌರಾಷ್ಟ್ರ ಸಾಹುಕಾರರ ಜವಳಿ ಅಂಗಡಿಯಲ್ಲಿ 15 ರೂ. ಮಾಸಿಕ ಸಂಬಳದ ಗುಮಾಸ್ತೆ. ಇವರು ಭಾರದ್ವಾಜ ಗೋತ್ರ ತೆಂಗಲೆ ಶಾಖೆಯ ಶ್ರೀವೈಷ್ಣವ ಬ್ರಾಹ್ಮಣರು; ಇವರ ಪತ್ನಿ ಕೋಮಲತ್ತಮ್ಮಾಳ್ (ಇವರ ತೌರುಮನೆಯವರು ಶ್ರೀವತ್ಸಗೋತ್ರದ ವಡಗಲೆ ಶಾಖೆಯವರು). ರಾಮಾನುಜರ ಮನೆಯವರು ನಾಮಗಿರಿಯ (Namagiri Town) ನಾಮಗಿರಿ ದೇವಿಯ ಭಕ್ತರು.

ರಾಮಾನುಜರು ಕುಂಭಕೋಣದ ಪುರ ಪ್ರೌಢಶಾಲೆ (ಟೌನ್ ಹೈಸ್ಕೂಲ್) ಮತ್ತು ಅಲ್ಲಿನ ಸರ್ಕಾರಿ ಕಲಾಶಾಲೆಯಲ್ಲಿ ಎಫ್. ಎ. ತರಗತಿಯವರೆಗೆ ಓದಿದರು. ಇವರ ಮನೆ ಸಾರಂಗಪಾಣಿ ಗುಡಿ ಬೀದಿಯಲ್ಲಿತ್ತು. ಮನೆಯಿಂದ ಹೊರಗೆ ಬಂದರೆ ಗಗನವನ್ನು ಚುಂಬಿಸುವ ಈ ಗುಡಿಯ ಉನ್ನತವಾದ ಗೋಪುರ. ರಾಮಾನುಜರು ಪ್ರತಿ ದಿನವೂ ಸಾರಂಗಪಾಣಿ ಗುಡಿಗೆ ಹೋಗಿ ದೇವರ ದರ್ಶನ ಮಾಡುತ್ತಿದ್ದರು.

ಬಾಲ್ಯದಲ್ಲಿಯೇ ರಾಮಾನುಜರ ಅನ್ಯಾದೃಶ ಗಣಿತಶಾಸ್ತ್ರಪ್ರತಿಭೆ ಗೋಚರವಾಯಿತು. 1903 ಡಿಸೆಂಬರಿನಲ್ಲಿ ಎಸ್.ಎಸ್.ಎಲ್.ಸಿ. ಪರೀಕ್ಷೆಯಲ್ಲಿ ಉತ್ತಮ ವರ್ಗದಲ್ಲಿ ತೇರ್ಗಡೆ ಹೊಂದಿ ವಿದ್ಯಾರ್ಥಿ ವೇತನ ಗಳಿಸಿದರು. ಆಗಿನ ವಿದ್ಯಾಶಾಲೆಗಳಲ್ಲಿ ಪರೀಕ್ಷಾನಿಯಮಗಳು ಬಹು ಕಟ್ಟುನಿಟ್ಟಿನವು. ರಾಮಾನುಜರ ನಿರಂತರ ಗಣಿತ ವ್ಯಾಸಂಗದ ಫಲದಿಂದ ಅವರು 2ನೇ ವರ್ಷದ ಎಫ್.ಎ. ತರಗತಿಗೆ (1905) ತೇರ್ಗಡೆ ಹೊಂದಲಿಲ್ಲ. 1906ರಲ್ಲಿ ಮದ್ರಾಸಿನ ಪಚ್ಚೆಯಪ್ಪ ಕಾಲೇಜಿಗೆ ಸೇರಿ ವಿದ್ಯಾಭ್ಯಾಸ ಮುಂದುವರಿಸಲು ಪ್ರಯತ್ನಪಟ್ಟರು. ಎಫ್.ಎ. ಪರೀಕ್ಷೆಯಲ್ಲಿ ತೇರ್ಗಡೆ ಹೊಂದಲಿಲ್ಲ.

ಉದ್ಯೋಗದ ಬೇಟೆ

ಅವರ ಆ ಕಾಲದ ಗಣಿತಶಾಸ್ತ್ರ ಪ್ರತಿಭೆ ಸಾರಂಗಪಾಣಿಗುಡಿಯ ಗೋಪುರದಷ್ಟೇ ಉನ್ನತವಾಗಿತ್ತು. ಆದರೂ ಹೊಟ್ಟೆಪಾಡಿಗಾಗಿ ಅವರು ಕೆಲಸ ಹುಡುಕಬೇಕಾಯಿತು. ಅವರಿಗೆ ಮೊದಲು ಬಾಲಕರಿಗೆ ಗಣಿತ ಪಾಠ ಹೇಳುವ ಕೆಲಸ ಮಾತ್ರ ಆಗಾಗ್ಗೆ ದೊರಕುತ್ತಿತ್ತು. ಮದ್ರಾಸ್ ನಗರದ ನೌಕಾ ನಿಲಯದ ಬಳಿ ಅಲೆಯುತ್ತ ಅಲ್ಲಿ ಬಿದ್ದಿದ್ದ ಸಾಮಾನುಗಳನ್ನು ಕಟ್ಟುವ ಕತ್ತೆಕಾಗದಗಳನ್ನು ಸಂಗ್ರಹಿಸುತ್ತಾ ಇದ್ದ ರಾಮಾನುಜರನ್ನು ಕಂಡ ಸ್ನೇಹಿತನೊಬ್ಬ “ಇದು ಏಕೆ?” ಎಂದು ಕೇಳಿದಾಗ ರಾಮಾನುಜರು “ಸ್ಲೇಟಿನಲ್ಲಿ ಲೆಕ್ಕ ಬರೆದ ಮೇಲೆ ಅದನ್ನು ಕಾಗದದಲ್ಲಿ ಬರೆದು ಸಂಗ್ರಹಿಸುವುದಕ್ಕೆ ಈ ಕಾಗದಗಳೇ ನನಗೆ ಗತಿ” ಎಂದು ಹೇಳಿದರಂತೆ.

1909ರಲ್ಲಿ 9 ವರ್ಷ ವಯಸ್ಸಿನ ಶ್ರೀಮತಿ ಜಾನಕಿಯ ಜೊತೆ ಮದುವೆ ಆಯಿತು. ಕೆಲಸಕ್ಕಾಗಿ ಅಲೆದಾಟ ಇನ್ನೂ ಅವಶ್ಯವಾಯಿತು. ಆ ಸಮಯದಲ್ಲೇ ಮದ್ರಾಸಿನಲ್ಲಿ ಅವರಿಗೆ ಕ್ಷಯರೋಗದ ಲಕ್ಷಣಗಳು ಕಾಣಿಸಿಕೊಂಡವು. ಇದನ್ನು ಗಮನಿಸಿದ ಅವರ ಸ್ನೇಹಿತ ತಂಜಾವೂರಿನ ನ್ಯಾಯವಾದಿ ರಾಧಾಕೃಷ್ಣರವರು ಡಾ|| ನಾರಾಯಣಸ್ವಾಮಿ ಐಯರ್‍ರವರಿಂದ ವೈದ್ಯಪರೀಕ್ಷೆ ಮಾಡಿಸಿದರು. ಡಾಕ್ಟರು ಈ ರೋಗಕ್ಕೆ ಒಳ್ಳೆಯ ಆಹಾರ, ಉಪಚಾರ, ಬಳಿಕ ಶುಶ್ರೂಷೆ ಅಗತ್ಯವೆಂದರು. ಬಳಿಕ ಆ ಸ್ನೇಹಿತರು ಒಳ್ಳೆಯ ಸ್ನೇಹಿತನೊಬ್ಬನ ಜೊತೆ ರಾಮಾನುಜರವರನ್ನು ಮದ್ರಾಸಿನಿಂದ ರೈಲಿನಲ್ಲಿ ಕುಂಭಕೋಣಕ್ಕೆ ಕಳುಹಿಸಿದರು. ಆಗ ರಾಮಾನುಜರು ಎರಡು ದೊಡ್ಡ ಕೈ ಬರಹದ ಪುಸ್ತಕಗಳನ್ನು ರಾಧಾಕೃಷ್ಣರ ಕೈಗೆ ಕೊಟ್ಟು, ತಾನು ಏನಾದರೂ ರೋಗದಿಂದ ನಿಧನಹೊಂದಿದ ಪಕ್ಷದಲ್ಲಿ ಆ ಎರಡು ಪುಸ್ತಕಗಳನ್ನೂ ಕ್ರಿಶ್ಚಿಯನ್ ಕಾಲೇಜಿನ ಪ್ರೊ|| ರಾಸ್ ಅಥವಾ ಪಚ್ಚೆಯಪ್ಪ ಕಾಲೇಜಿನ ಸಿಂಗಾರವೇಲು ಮೊದಲಿಯಾರ್ ಅವರ ಕೈಗೆ ಕೊಡುವಂತೆ ಹೇಳಿದ್ದರಂತೆ.

ಆರೋಗ್ಯ ಸ್ವಲ್ಪ ಸುಧಾರಿಸಿದ ಮೇಲೆ ಮದ್ರಾಸಿನಲ್ಲಿ ಮತ್ತೆ ಕಾರ್ಯಾನ್ವೇಷಣೆ ಆರಂಭಿಸಿದರು. ಆ ಸಮಯದಲ್ಲಿ ವಿ. ರಾಮಸ್ವಾಮಯ್ಯರ್ ಎಂಬವರು ತಿರುಕ್ಕೋಯಿಲೂರಿನಲ್ಲಿ ಡೆಪ್ಯುಟಿ ಕಲೆಕ್ಟರ್ ಆಗಿದ್ದರು. (ಇವರು ಇದಕ್ಕೆ ಮೊದಲು ಮೈಸೂರು ಮಹಾರಾಜಾ ಕಾಲೇಜಿನಲ್ಲಿ ಗಣಿತ ಪ್ರಾಧ್ಯಾಪಕರಾಗಿದ್ದರು.) ಇವರು ಗಣಿತಶಾಸ್ತ್ರವೇತ್ತರು. 1907ರಲ್ಲಿ ಈ ಮಹನೀಯರು ಇಂಡಿಯನ್ ಮ್ಯಾತಮ್ಯಾಟಿಕಲ್ ಸೊಸೈಟಿ (ಮೊದಲ ಹೆಸರು – ಅನಲಿಟಿಕಲ್ ಕ್ಲಬ್) ಸಂಸ್ಥೆಯನ್ನು ಸ್ಥಾಪಿಸಿ ಗಣಿತಶಾಸ್ತ್ರಾನ್ವೇಷಣ ಪತ್ರಿಕೆಯೊಂದನ್ನು ಆ ಸಂಸ್ಥೆ ಪ್ರಕಟಿಸುವಂತೆ ಏರ್ಪಾಡು ಮಾಡಿದ್ದರು. ಇವರನ್ನು ಒಂದು ಚಿಕ್ಕ ಗುಮಾಸ್ತೆ ಕೆಲಸ ಕೊಡುವಂತೆ ಪ್ರಾರ್ಥಿಸಿದರು, ರಾಮಾನುಜರು. ಇದು ದೊರಕಿದರೆ ತನ್ನ ಸರಳ ಜೀವನವನ್ನು ಹೇಗಾದರೂ ಸಾಗಿಸಿಕೊಂಡು  ಗಣಿತಶಾಸ್ತ್ರಪರಿಶೋಧನೆಗಳನ್ನು ಮುಂದುವರಿಸುವುದಾಗಿ ಹೇಳಿದರು.

ಆ ಚಿಕ್ಕ ನಗರದಲ್ಲಿ ಗಣಿತಶಾಸ್ತ್ರಾಭ್ಯಾಸ ಸಾಧ್ಯವಾಗುವುದಿಲ್ಲವೆಂದು ಭಾವಿಸಿ ರಾಮಸ್ವಾಮಿ ಐಯ್ಯರ್ ಅವರು ತಮ್ಮ ಸ್ನೇಹಿತರಾದ ನೆಲ್ಲೂರು ಕಲೆಕ್ಟರ್ ರಾಮಚಂದ್ರರಾವ್‍ರವರಿಗೆ ಪರಿಚಯಪತ್ರವನ್ನು ಕೊಟ್ಟು ಅವರನ್ನು ಭೇಟಿ ಮಾಡುವಂತೆ ರಾಮಾನುಜರಿಗೆ ಹೇಳಿದರು. ರಾಮಚಂದ್ರರಾವ್‍ರವರು ಅನೇಕ ಸಂಸ್ಥಾನಗಳ ದಿವಾನರಾಗಿದ್ದ ರಾಜಾ ಸರ್ ಟಿ. ಮಾಧವರಾಯರ ಸಮೀಪಬಂಧು ಮತ್ತು ಇಂಡಿಯನ್ ಮ್ಯಾತಮ್ಯಾಟಿಕಲ್ ಸೊಸೈಟಿಯ ಮೂಲಸ್ಥಾಪಕರಲ್ಲೊಬ್ಬರು. ರಾಮಚಂದ್ರರಾಯರು ಮದ್ರಾಸಿಗೆ ಬಂದಿದ್ದಾಗ ಹಲವರು ಸ್ನೇಹಿತರ ಮುಖಾಂತರ ರಾಮಾನುಜರು ಕೈಬರಹದ ಪುಸ್ತಕಗಳೊಂದಿಗೆ ಅವರನ್ನು ಸಂದರ್ಶಿಸಿದರು.

ಪ್ರತಿಭೆಯ ದರ್ಶನ

ರಾಮಚಂದ್ರರಾಯರಿಗೆ ಮೊದಲು ಆ ಕ್ಲಿಷ್ಟ ಗಣಿತ ಸಂಶೋಧನೆ ಯಾವ ಮಟ್ಟದ್ದೆಂಬುದೇ ತಿಳಿಯಲಿಲ್ಲ. ಅದನ್ನು ತಿಳಿದ ರಾಮಾನುಜರು ಕೆಲವು ಸುಲಭವಾದ ಪರಿಶೋಧನೆಗಳನ್ನು ಅವರ ಮುಂದಿಟ್ಟರು. ಆಗ ರಾಮಚಂದ್ರರಾಯರಿಗೆ  ರಾಮಾನುಜರು ಎಂತಹ ಅದ್ಭುತ ಪ್ರತಿಭಾಶಾಲಿ ಎಂದು ಅರಿವಾಯಿತು. ಕೆಲವು ತಿಂಗಳು ಅವರ ಸ್ವಂತ ಹಣದಿಂದ ಮೂವತ್ತು ರೂಪಾಯನ್ನು ರಾಮಾನುಜರಿಗೆ ತಿಂಗಳು ತಿಂಗಳೂ ಕಳುಹಿಸಿ, ಇನ್ನು ಸ್ವಲ್ಪ ದಿವಸಗಳಲ್ಲೇ ಕೆಲಸ ಕೊಡಿಸುವುದಾಗಿ ಭರವಸೆ ಕೊಡುತ್ತಿದ್ದರು. ಅವರ ಉದ್ದೇಶ ರಾಮಾನುಜರು ಅವರ ಕಾಲವನ್ನೆಲ್ಲ ಗಣಿತ ಶಾಸ್ತ್ರಪರಿಶೋಧನೆಯಲ್ಲೇ ಕಳೆಯಬೇಕೆಂಬುದಾಗಿತ್ತು.

ಆದರೆ ಸ್ವಾಭಿಮಾನಿಯಾದ ರಾಮಾನುಜರು ಒಂದುಸಲ ಮನಿಯಾರ್ಡರ್ ಹಿಂತಿರುಗಿಸಿಬಿಟ್ಟರು! ಆ ಸಮಯದಲ್ಲಿ ರಾಮಾನುಜರಿಗೆ ಪ್ರೊ|| ಶ್ರೀನಿವಾಸಪಾಟ್ರಾಚಾರ್ಯರೆಂಬವರ ಮನೆಯಲ್ಲಿ ಅವರೊಡನೆ ನಿತ್ಯಭೋಜನ. ರಾಮಾನುಜರು ಹಣ ಹಿಂತಿರುಗಿಸಿದ ವಿಚಾರ ಪಾಟ್ರಾಚಾರ್ಯರಿಗೆ ತಿಳಿದಾಗ ರಾಮಾನುಜರನ್ನು ಮೂರ್ಖನೆಂದು ಬೈದರು. ರಾಮಾನುಜರು ಭೋಜನಸೌಕರ್ಯಕ್ಕೆ ಪೆಟ್ಟು

ಬಿದ್ದಿತೆಂದು ವ್ಯಥೆಪಟ್ಟಾಗ ಪಾಟ್ರಾಚಾರ್ಯರವರ ಮಲತಾಯಿ ರಾಮಾನುಜರನ್ನು ಕರೆದು “ಅಯ್ಯಾ ಹುಡುಗ, ನನ್ನ ಮಗ ಪಾಟ್ರಾಚಾರಿ ಊಟ ಮಾಡಿ ಕಾಲೇಜಿಗೆ ಹೋದ ನಂತರ ಬಾ. ಪಾತ್ರೆಗಳಲ್ಲಿ ಅನ್ನಸಾರು ಇದ್ದೇ ಇರುತ್ತದೆ. ನಿನಗೂ ಬಡಿಸುತ್ತೇನೆ” ಅಂದರಂತೆ. ಆ ಬಳಿಕ ಅಕೌಂಟೆಂಟ್-ಜನರಲ್ ಆಫೀಸಿನಲ್ಲಿ 1912ರಲ್ಲಿ 20 ರೂ. ಮಾಸಿಕ ಸಂಬಳದ ಕೆಲಸ, ಕೆಲವು ದಿನ ಮಾತ್ರ.

ಮಾಸ ವೇತನ

ರಾಮಚಂದ್ರರಾಯರ ಪ್ರಭಾವದಿಂದ ಮದ್ರಾಸ್ ನೌಕಾ ನಿಲ್ದಾಣದಲ್ಲಿ (Port Trust) 30 ರೂ. ಮಾಸಿಕ ವೇತನದ ಕೆಲಸ ದೊರಕಿತು. ಆಗ ಪೋರ್ಟ್ ಟ್ರಸ್ಟ್ ಅಧ್ಯಕ್ಷ ಸರ್ ಫ್ರಾನ್ಸಿಸ್ ಸ್ಪ್ರಿಂಗ್ ಎನ್ನುವ ಗಣಿತಶಾಸ್ತ್ರಪ್ರೇಮಿ. ಆ ಸಂಸ್ಥೆಯ ಮ್ಯಾನೇಜರ್ ಎಸ್. ನಾರಾಯಣಯ್ಯರ್ ಎಂಬವರೂ ಗಣಿತಶಾಸ್ತ್ರ ಪ್ರವೀಣರಾಗಿದ್ದರು. ಇವರಿಬ್ಬರಿಗೂ ರಾಮಚಂದ್ರರಾಯರು ರಾಮಸ್ವಾಮಿ ಐಯ್ಯರವರಿಗೂ ತಾನು ಚಿರಋಣಿಯಾಗಿರುವೆನೆಂದು ರಾಮಾನುಜರು ಇಂಗ್ಲೆಂಡಿನಿಂದ ಹಲವಾರು ಪತ್ರಗಳನ್ನು ಬರೆದಿದ್ದಾರೆ. ಇವರ ಸಹಾಯದಿಂದ ಮದ್ರಾಸ್ ವಿಶ್ವವಿದ್ಯಾನಿಲಯ ರಾಮಾನುಜರವರಿಗೆ 75 ರೂ. ಗಣಿತ ಪರಿಶೋಧನ ಮಾಸಿಕ ವೇತನವನ್ನು ನೀಡಿತು. ಇದೇ ಈ ಸಂಸ್ಥೆ ನೀಡಿದ ಮೊದಲ ಪರಿಶೋಧನ ವೇತನ. (ಮದ್ರಾಸ್ ವಿಶ್ವವಿದ್ಯಾನಿಲಯ ಮಸೂದೆ ಇಂಗ್ಲೆಂಡಿನ ಪಾರ್ಲಿಮೆಂಟಿನಲ್ಲಿ ಮಂಡಿತವಾದಾಗ ಪ್ರಾರಂಭದಲ್ಲಿ “ಈ ವಿಶ್ವವಿದ್ಯಾಲಯವು ವಿದ್ವತ್ತನ್ನು ಮುಂದುವರಿಸಿ ಮತ್ತು ಪರಿಶೋಧನಗಳನ್ನು ಪ್ರೋತ್ಸಾಹಿಸುವುದಕ್ಕೋಸ್ಕರ …” ಎಂದಿದೆ.)

1-5-1913ರಿಂದ 14-3-1914ರವರೆಗೆ ರಾಮಾನುಜರು ಪರಿಶೋಧನ ವಿದ್ಯಾರ್ಥಿಯಾಗಿದ್ದರು. ಇದಕ್ಕೆ ಕೆಲವು ತಿಂಗಳ ಹಿಂದೆ ಕೇಂಬ್ರಿಡ್ಜ್‍ನಲ್ಲಿದ್ದ ಗಣಿತಶಾಸ್ತ್ರಜ್ಞ ಜಿ.ಎಚ್. ಹಾರ್ಡಿಯವರಿಗೆ ರಾಮಾನುಜರು ತನ್ನ ಸಂಶೋಧನೆಗಳಲ್ಲಿ ಕೆಲವು ಪ್ರಮೇಯಗಳನ್ನು ಕಳುಹಿಸಿದ್ದರು. ಹಾರ್ಡಿ ಮತ್ತು ಅವರ ಸಹೋದ್ಯೋಗಿಗಳಿಗೆ ಮಹದಾಶ್ಚರ್ಯವಾಯಿತು. ಹಾರ್ಡಿಯ ಸಹೋದ್ಯೋಗಿ ಇ.ಎಚ್. ನೆವಿಲ್ (E. H. Neville) ಎಂಬವರು ಆ ಸಮಯದಲ್ಲಿ ಮದ್ರಾಸಿನಲ್ಲಿ ಉಪನ್ಯಾಸಕ್ಕಾಗಿ ಆಹ್ವಾನಿಸಲ್ಪಟ್ಟರು. ಇವರುಗಳ ಸಲಹೆಗಳ ಪ್ರಭಾವದಿಂದ ಮದ್ರಾಸ್ ವಿಶ್ವವಿದ್ಯಾನಿಲಯವು ರಾಮಾನುಜರಿಗೆ ಕೇಂಬ್ರಿಡ್ಜ್‍ನಲ್ಲಿ ಗಣಿತವ್ಯಾಸಂಗ ಪರಿಶೋಧನೆಗೋಸ್ಕರ ವೇತನ ನೀಡಿತು.

ಪಯಣ

ರಾಮಾನುಜರವರು ತಾಯಿಯವರ ಮಾತು ಮೀರುವಂತಿರಲಿಲ್ಲ. ಒಂದು ದಿನ ಆಕೆಗೆ ಸ್ವಪ್ನವಾಗಿ ತನ್ನ ಮಗ ಅನೇಕ ಪಾಶ್ಚಾತ್ಯ ವಿದ್ವಾಂಸರ ನಡುವೆ ಇರುವಂತೆ ಕಂಡಿತಂತೆ. ಇದರ ಫಲವಾಗಿ 17-3-1914ರಂದು ರಾಮಾನುಜರು ಮದ್ರಾಸಿನಿಂದ ನೆವಾಸಾ (Nevasa) ಎಂಬ ಜಹಜಿನಲ್ಲಿ ಇಂಗ್ಲೆಂಡಿಗೆ ಪ್ರಯಾಣ ಮಾಡಿದರು.

ರಾಮಾನುಜರಿಗೆ ಮೊದಲೇ ಕ್ಷಯರೋಗದ ಸೂಚನೆಗಳಿರುವಾಗ, ಆತನ ಇಂಗ್ಲೆಂಡ್ ಪ್ರವಾಸ ಅಷ್ಟೇನೂ ಸೂಕ್ತವಲ್ಲವೆಂಬ ಸಂಶಯ ಕೆಲವರಿಗೆ, ಮುಖ್ಯವಾಗಿ ರಾಮಚಂದ್ರರಾಯರ ಮನಸ್ಸಿನಲ್ಲಿತ್ತು. (ಇದನ್ನು ಅವರು ‘ಜರ್ನಲ್ ಆಫ್ ಇಂಡಿಯನ್ ಮ್ಯಾತಮ್ಯಾಟಿಕಲ್ ಸೊಸೈಟಿ’ ಪತ್ರಿಕೆಯ ರಾಮಾನುಜ ಸ್ಮಾರಕ ಸಂಚಿಕೆಯಲ್ಲಿ ವಿಷಾದದಿಂದ ವ್ಯಕ್ತಪಡಿಸಿದ್ದಾರೆ) ಆದರೂ ಅದೇ ಹಡಗಿನಲ್ಲಿ ಡಾ|| ಮುತ್ತು (Dr. Muthu ಇವರ ಪತ್ನಿ ಪ್ರಖ್ಯಾತ ಸಮಾಜ ಕಾರ್ಯಕರ್ತೆ ದಿ|| ಮುತ್ತುಲಕ್ಷ್ಮಿರೆಡ್ಡಿ) ಎಂಬ ಕ್ಷಯರೋಗ ಚಿಕಿತ್ಸಾ ಪರಿಣತನಿದ್ದುದರಿಂದ ಮನಸ್ಸನ್ನು ಸಮಾಧಾನ ಮಾಡಿಕೊಂಡಂತೆ ಕಾಣುತ್ತದೆ. ಪ್ರೊ|| ನೆವಿಲ್‍ರವರು ರಾಮಾನುಜರ ನಿಧನ ಪ್ರಯುಕ್ತ ಪ್ರಕಟವಾದ ಲೇಖನದಲ್ಲಿ “If Ramanuja had not come to England he would have been alive today – (ರಾಮಾನುಜರವರು ಇಂಗ್ಲೆಂಡಿಗೆ ಬರದಿದ್ದಿದ್ದರೆ ಅವರಿನ್ನೂ ಜೀವಿಸಿರುತ್ತಿದ್ದರು)” ಎಂದು ಬರೆದಿದ್ದಾರೆ. ಪ್ರಖ್ಯಾತ ವಿಜ್ಞಾನಿ ಹಾಲ್ದೇನ್‍ರವರೂ ಇದೇ ಅಭಿಪ್ರಾಯವನ್ನು ಹೊಂದಿದ್ದರು.

ಒಗ್ಗದ ಪರಿಸರ

ರಾಮಾನುಜರಿಗೆ ತಮ್ಮ ಜುಟ್ಟು ತೆಗೆಸಿ ಕ್ರಾಪ್ ಮಾಡಿಸಿಕೊಂಡು ಪಾಶ್ಚಾತ್ಯ ಉಡುಪನ್ನು ಧರಿಸುವುದು ಮನಸ್ಸಿಗೆ ಬಹಳ ಬೇಸರವುಂಟುಮಾಡಿತು. ಈ ವಿಚಾರವನ್ನು ಪ್ರೊ|| ನೆವಿಲ್‍ರ ಪತ್ನಿಯ ಬಳಿ ಅವರು ಬಹು ವ್ಯಸನದಿಂದ ಹೇಳಿದ್ದರು. ಬಹು ಕಟ್ಟುನಿಟ್ಟಿನಿಂದ ಶಾಕಾಹಾರಿ ಆಹಾರವನ್ನೇ ಅವರೇ ಬೇಯಿಸಿ ಕೇಂಬ್ರಿಡ್ಜ್ ಹಾಸ್ಟೆಲ್‍ಗಳಲ್ಲಿ ವಾಸ ಮಾಡುತ್ತಿದ್ದರು. ಅಲ್ಲಿ ಪ್ರೊ|| ಹಾರ್ಡಿಯವರೊಡನೆ ಕಲೆತು ಹಲವಾರು ಪ್ರಬಂಧಗಳನ್ನು ಅಚ್ಚು ಹಾಕಿಸಿದರು. ಅವರು ಆಗ ಊಹಿಸಿದ ಒಂದು ಮುಖ್ಯ ಪ್ರಮೇಯವನ್ನು ಬೋಧಿಸುವುದಕ್ಕಾಗಿ ಬಹು ಜನ ಗಣಿತಶಾಸ್ತ್ರಜ್ಞರು ಬಹಳ ವರ್ಷ ಕಷ್ಟಪಟ್ಟರು. 60 ವರ್ಷಗಳ ನಂತರ ಡಿಲೈನ್ (Deligne) ಎಂಬ ಫ್ರೆಂಚ್ ಗಣಿತಶಾಸ್ತ್ರಜ್ಞರು ಆ ಪ್ರಮೇಯ ನಿಜವೆಂದು ಬೋಧಿಸಿದರು.

ರಾಮಾನುಜರು ಭಾರತದಲ್ಲಿದ್ದಾಗ ಮಾಡಿದ್ದ ಪರಿಶೋಧನ ಕಾಗದಪತ್ರಗಳ ಎರಡು ಕೈಬರಹದ ಪುಸ್ತಕಗಳಿವೆ. ಇವುಗಳ ಫೋಟೋಸ್ಟಾಟ್ ಪ್ರತಿಗಳನ್ನು ಮುಂಬೈ ಟಾಟಾ ಮೂಲವಿಜ್ಞಾನ ಪರಿಶೋಧನ ಸಂಸ್ಥೆ (Tata Institute  of Fundamental Research, Bombay)  1956ರಲ್ಲಿ ಪ್ರಕಟಿಸಿತು. ಇದಲ್ಲದೆ ಇನ್ನೂ ಹಲವಾರು ಕೈಬರಹದ ಪುಸ್ತಕಗಳಿದ್ದುವೆಂಬುದಕ್ಕೆ ದಾಖಲೆಗಳಿವೆ. ಇವು ಇನ್ನೂ ಸಿಕ್ಕದಿರುವುದು ನಮ್ಮ ದುರದೃಷ್ಟ. 1914ರಿಂದ 1918ರವರೆಗಿನ ರಾಮಾನುಜರ ಕೈಬರಹದ ಸಂಶೋಧನ ಪತ್ರಗಳು 1980ರಲ್ಲಷ್ಟೆ ಭಾರತೀಯ ಗಣಿತ ಪ್ರೇಮಿಗಳಿಗೆ ದೊರಕಿರುವುದು.

ರಾಮಾನುಜರ ಕಾಯಿಲೆ 1917ರಲ್ಲಿ ಉಲ್ಬಣಗೊಂಡು Wells, Matlock, Putney ಸ್ಥಳಗಳ ಚಿಕಿತ್ಸಾಲಯಗಳಲ್ಲಿ 1918ರವರೆಗೆ ಶುಶ್ರೂಷೆ ಪಡೆಯುತ್ತಿದ್ದರು. ಆಗ ಬಹುಕಾಲ ಹಾಸಿಗೆಯಲ್ಲಿಯೆ ಮಲಗಿರಬೇಕಾಗಿತ್ತು.

 ಆಗ ಕೂಡ ಅವರು ಉನ್ನತ ಮಟ್ಟದ ಪರಿಶೋಧನೆಯಲ್ಲಿಯೇ ಮಗ್ನರಾಗಿದ್ದುದು, ಅವರು ಹಾರ್ಡಿಯವರಿಗೆ 1917ರ ಜೂನ್ ತಿಂಗಳಲ್ಲಿ ಬರೆದ ಪತ್ರಗಳ ಮೂಲಕ ತಿಳಿದುಬರುತ್ತದೆ. ಈ ಪತ್ರಗಳಲ್ಲಿರುವ ಸಂಶೋಧನೆಗಳು ಹಾರ್ಡಿಯವರಿಗೆ ಪರಿಚಯವಿದ್ದ ಗಣಿತಶಾಸ್ತ್ರ ಶಾಖೆಗಳಿಗೆ ಸಂಬಂಧಪಟ್ಟವು; ಬೇರೆ ಕೈಬರಹದ ಪರಿಶೋಧನೆಗಳನ್ನು ರಾಮಾನುಜರು ಹಾರ್ಡಿಯವರಿಗೆ ತಿಳಿಸಲಿಲ್ಲ; ಏಕೆಂದರೆ ಅವುಗಳು ಅಮೂಲ್ಯವಾದರೂ ಹಾರ್ಡಿಯವರಿಗೆ ಆ ಭಾಗದಲ್ಲಿ ಪರಿಶ್ರಮವಿಲ್ಲವೆಂಬುದನ್ನು ರಾಮಾನುಜರು ಅರಿತಿದ್ದರು.

ಮರಳಿ ಭಾರತಕ್ಕೆ

ರಾಮಾನುಜರು 1919ರ ಮಾರ್ಚ್ 27ರಂದು ಮುಂಬೈಗೆ ಹಿಂತಿರುಗಿದರು. ಅವರ ತಾಯಿ ಕೋಮಲತ್ತಮ್ಮ ಮತ್ತು ಅವರ ತಮ್ಮ ತಿರುನಾರಾಯಣರು ಮುಂಬೈಯಿಂದ ಮದ್ರಾಸಿಗೆ ಅವರನ್ನು ಜೊತೆಯಲ್ಲಿ ಕರೆತಂದರು. ರಾಮಾನುಜರು ಆಗ ತಾಯಿಯನ್ನು, ತನ್ನ ಪತ್ನಿ ಜಾನಕಿಯನ್ನೇಕೆ ಮುಂಬೈಗೆ ಕರೆದುಕೊಂಡು ಬರಲಿಲ್ಲವೆಂದು ಆಕ್ಷೇಪಿಸಿ ಕೇಳಿದರು. ಕೋಮಲತ್ತಮ್ಮನವರು ರಾಮಾನುಜರವರ ಜಾತಕವನ್ನು ಪರಿಶೀಲಿಸಿ, ಅವರು ಸ್ವಲ್ಪ ದಿನ ಜಾನಕಿಯನ್ನು ಬಿಟ್ಟಿದ್ದರೆ ಅವರ ರೋಗ ವಾಸಿಯಾಗುವುದೆಂಬ ಮೂಢನಂಬಿಕೆ ಹೊಂದಿದ್ದರು. ಇದನ್ನು ರಾಮಾನುಜರಿಗೆ ತಿಳಿಸಿದಾಗ ಅವರು ತಾಯಿಯ ಮಾತನ್ನು ಕಡೆಗಣಿಸಿ ಪತ್ನಿಯೊಡನೆಯೇ ಇದ್ದು ಸುಮಾರು ಒಂದು ವರ್ಷ ಆಕೆಯಿಂದ ಅವಿರತ ಶುಶ್ರೂಷೆ ಪಡೆದು 1920ರ ಏಪ್ರಿಲ್ 16ರಂದು ಮದ್ರಾಸ್‍ನ ಚೆಟ್‍ಪಟ್‍ನಲ್ಲಿ ನಂಬೆರುಮಾಳ್‍ಚೆಟ್ಟಿಯವರ ಉಚಿತ ಬಿಡಾರದಲ್ಲೇ ಕೊನೆಯುಸಿರೆಳೆದರು. ಅವರ ಹಾಸಿಗೆಯ ಬಳಿ ಆಗ ಇದ್ದವರು ಹೆಂಡತಿ ಜಾನಕಿ ಮತ್ತು ಜಾನಕಿಯ ಕಿರಿಯ ತಮ್ಮ ಶ್ರೀನಿವಾಸನ್ (ಆದಾಯ ತೆರಿಗೆ ಅಧಿಕಾರಿಯಾಗಿದ್ದವರು) ಮಾತ್ರ. ಶ್ರೀಮತಿ ಜಾನಕಿಯವರು ಮದ್ರಾಸಿನ ತಿರುವಲ್ಲಿಕ್ಕೇಣಿಯ ಒಂದು ಚಿಕ್ಕ ಮನೆಯಲ್ಲಿ ಸರ್ಕಾರದವರು ಕೊಡುತ್ತಿರುವ 300 ರೂ. ಮಾಸಾಶನದಿಂದ ಜೀವಿಸತೊಡಗಿದರು. ಅವರ ತಮ್ಮ ಪುದುಚೇರಿಯ ಅರವಿಂದಾಶ್ರಮದಲ್ಲಿದ್ದರು.

ಸ್ವಾಗತ, ದಿಗ್ಭ್ರಾಂತಿ

ರಾಮಾನುಜರು ಮದ್ರಾಸ್ ಮಧ್ಯ ರೈಲ್ವೆ ನಿಲ್ದಾಣದಲ್ಲಿ 1919ರ ಏಪ್ರಿಲ್ 2ರಂದು ಇಳಿದಾಗ ಅವರ ಹಿತೈಷಿ ರಾಮಚಂದ್ರರಾಯರೊಡನೆ ಅನೇಕ ಸ್ನೇಹಿತರೂ ಗಣ್ಯ ವ್ಯಕ್ತಿಗಳೂ ಅವರನ್ನು ಆದರದಿಂದ ಬರಮಾಡಿಕೊಂಡರು. ರಾಮಾನುಜರ ದೇಹಸ್ಥಿತಿ ನೋಡಿದೊಡನೆ ಅವರಿಗೆಲ್ಲ್ಲ ದಿಗ್ಭ್ರಾಂತಿಯಾಯಿತು. ಪುಷ್ಟವಾಗಿ ಬೆಳೆದಿದ್ದ ರಾಮಾನುಜರು 1914ರಲ್ಲಿ ಇಂಗ್ಲೆಂಡಿಗೆ ತೆರಳಿ 1919ರಲ್ಲಿ ರೋಗಗ್ರಸ್ತ ಕೃಶ ದೇಹದೊಂದಿಗೆ ಮರಳಿ ಬಂದಿದ್ದು ಅವರಿಗೆಲ್ಲ್ಲ ಸಂಕಟವಾಯಿತು. ರಾಮಾನುಜರನ್ನು ನ್ಯಾಯವಾದಿ ಆದಿನಾರಾಯಣ ಚೆಟ್ಟಿಯಾರರ ಬಂಗಲೆಗೆ ಅವರ ಸ್ನೇಹಿತರು ಮದ್ರಾಸ್ ಸ್ಟೇಷನ್ನಿನಿಂದ ಕರೆತಂದು, ಅವರಿಗೆ ಸಾಂಬಾರ್ ಮೊಸರನ್ನ ಭೋಜನ ಮಾಡಿಸಿದರು. ಆಗ ರಾಮಾನುಜರು ಅವರ ಸ್ನೇಹಿತ ವಿಶ್ವನಾಥ ಶಾಸ್ತ್ರಿಯವರಿಗೆ “ನನಗೆ ಇಂತಹ ಭೋಜನ ಇಂಗ್ಲೆಂಡಿನಲ್ಲಿ ದೊರಕಿದ್ದಿದ್ದರೆ ನಾನು ಈ ಸ್ಥಿತಿಗೆ ಬರುತ್ತಿರಲಿಲ್ಲ” ಎಂದು ಸಂಕಟದಿಂದ ಹೇಳಿದರಂತೆ.

ರಾಮಾನುಜರು 1918ರ ಫೆಬ್ರುವರಿ 28ರಂದು ಎಫ್.ಆರ್.ಎಸ್. (F.R.S.) ಎಂಬ ಅತ್ಯುನ್ನತ ಪ್ರಶಸ್ತಿ ಗಳಿಸಿದ್ದರು. ಭಾರತೀಯ ಶಾಸ್ತ್ರಜ್ಞರಲ್ಲಿ ಈ ಪ್ರಶಸ್ತಿ ಗಳಿಸಿದವರಲ್ಲಿ ಇವರೇ ಪ್ರಥಮರು. 1918ರ ಅಕ್ಟೋಬರ್ 18ರಂದು ಕೇಂಬ್ರಿಡ್ಜ್ ಟ್ರಿನಿಟಿ ಕಾಲೇಜಿನ ‘ಫೆಲೋ’ ಆಗಿ ಚುನಾಯಿತರಾದರು. ಇದರಿಂದ 5 ವರ್ಷಗಳವರೆಗೆ 250 ಪೌಂಡ್ ವರ್ಷಾಶನ ಇವರಿಗೆ ದೊರಕಿತು. ಇದಲ್ಲದೆ ಮದ್ರಾಸ್ ವಿಶ್ವವಿದ್ಯಾನಿಲಯವೂ ಇದೇ ಮೊತ್ತದ ಪಾರಿತೋಷಿಕವನ್ನು ಇವರಿಗಿತ್ತಿತು. ಈ ಸಮಯದಲ್ಲಿ ರಾಮಾನುಜರು ವಿಶ್ವವಿದ್ಯಾಲಯದ ಅಧಿಕಾರಿಗೆ ಆ ಹಣದ ಒಂದು ಭಾಗವನ್ನು ಬಡ ವಿದ್ಯಾರ್ಥಿಗಳ ಸಹಾಯಕ್ಕಾಗಿ ವಿನಿಯೋಗಿಸಬೇಕೆಂದು ಪತ್ರ ಬರೆದರು.

ಅವಿತುಕೊಂಡ ಬರಹಗಳು

ರಾಮಾನುಜರು ಕೊನೆಯುಸಿರಿನವರೆಗೂ ಸಂಶೋಧನೆಯಲ್ಲೇ ನಿರತರಾಗಿದ್ದರೆಂದು ಅವರ ಭಾವಮೈದುನ ಶ್ರೀನಿವಾಸನ್ ಬರೆದಿದ್ದಾರೆ. ಆಗ ಅವರ ವಶದಲ್ಲಿದ್ದ ಕಾಗದಪತ್ರಗಳನ್ನೆಲ್ಲ ಮದ್ರಾಸ್ ವಿಶ್ವವಿದ್ಯಾಲಯ ತನ್ನ ವಶಕ್ಕೆ 1920ರಲ್ಲಿ ತೆಗೆದುಕೊಂಡಿತು. ರಾಮಾನುಜರು ಎರಡು ದೊಡ್ಡ ಕೈಬರಹದ ಪುಸ್ತಕಗಳನ್ನು ಪ್ರೊ|| ಹಾರ್ಡಿಯವರ ಬಳಿಯೇ ಬಿಟ್ಟಿದ್ದರು. 1925ರ ಮಾರ್ಚ್ ತಿಂಗಳಲ್ಲಿ ಗ್ರಂಥಾಲಯ ವಿಜ್ಞಾನಿ ದಿವಂಗತ ಎಸ್.ಆರ್. ರಂಗನಾಥ್‍ರವರು ಹಾರ್ಡಿಯವರ ಭೇಟಿಯಾಗಿ ಈ ಪುಸ್ತಕದ ವಿಚಾರ ಕೇಳಿದಾಗ ಹಾರ್ಡಿಯವರು ಆ ಪುಸ್ತಕವನ್ನು ಹಿಂತಿರುಗಿಸಿ, “ರಾಮಾನುಜರು ಭಾರತೀಯರು, ಆದುದರಿಂದ ಇದು ಮದ್ರಾಸ್ ವಿಶ್ವವಿದ್ಯಾಲಯದಲ್ಲೇ ಇರಬೇಕು” ಎಂದು ಹೇಳಿದರು. ಉತ್ತರೋತ್ತರ ಇದರ ನಕಲೊಂದನ್ನು ಹಾರ್ಡಿಯವರಿಗೆ ಮದ್ರಾಸ್ ವಿಶ್ವವಿದ್ಯಾಲಯ ಕಳುಹಿಸಿತು.

ಹಾರ್ಡಿಯವರಲ್ಲಿ ಇದಲ್ಲದೆ ಬೇರೆ ರಾಮಾನುಜರ ಕೈಬರಹದ ಸಂಶೋಧನೆಗಳಿದ್ದುವು. ಇವುಗಳನ್ನೂ ಹಿಂತಿರುಗಿಸಿ ಭಾರತೀಯರಿಗೆ ಕೊಡಬೇಕೆಂಬುದು ಹಾರ್ಡಿಯವರಿಗೆ ‘ಜ್ಞಾಪಕ ಬರದಿದ್ದುದು’ ವಿಷಾದಕರ!

ಇದಲ್ಲದೆ 1930ರಲ್ಲಿ ಮಿಸ್ ಜಿ.ಕೆ. ಸ್ಟ್ಯಾನ್ಲೀ ಎಂಬವರು ರಾಮಾನುಜರ ಕೈಬರಹದ ಸಂಶೋಧನೆಗಳ ದೊಡ್ಡ ಕಟ್ಟೊಂದನ್ನು ಹಾರ್ಡಿಯವರಿಗೆ ತಲಪಿಸಿದರು. ಇವುಗಳು ಈಕೆಗೆ ಹೇಗೆ ದೊರಕಿದವೆಂಬುದು ಇನ್ನೂ ಸಮಸ್ಯೆಯಾಗಿಯೇ ಉಳಿದಿದೆ.

ಹಾರ್ಡಿಯವರ ಬಳಿ ಇದ್ದ ಈ ರಾಮಾನುಜರ ಸಂಶೋಧನೆಗಳನ್ನೆಲ್ಲ ಆಕ್ಸ್‍ಫರ್ಡ್ ವಿಶ್ವವಿದ್ಯಾಲಯದ ಪ್ರೊ|| ಜಿ. ಎನ್. ವಾಟ್ಸನ್‍ರಿಗೆ ಹಾರ್ಡಿಯವರು ಕಳುಹಿಸಿದರು. ವಾಟ್ಸನ್‍ರು ರಾಮಾನುಜರ ಎರಡು ಕೈಬರಹದ ದೊಡ್ಡ ಪುಸ್ತಕಗಳಲ್ಲಿರುವ ಕೆಲವು ಪ್ರಮೇಯಗಳ ವಿಷಯವಾಗಿ 1930ರಿಂದ 1940ರ ವರೆಗೂ ಸಂಶೋಧನೆ ನಡೆಸಿ ಕೆಲವು ಭಾಗಗಳನ್ನು ಪ್ರಕಟಿಸಿದ್ದಾರೆ. ಆದರೆ ತಮ್ಮ ಬಳಿ ರಾಮಾನುಜರ ಇನ್ನೂ ಹಲವು ಕೈಬರಹದ ಸಂಶೋಧನೆಗಳು ಇರುವುವೆಂದು ಅವರು ತಿಳಿಸಲೇ ಇಲ್ಲ! 1965ರಲ್ಲಿ ಅವರ ನಿಧನದ ನಂತರ ಅವರ ಪತ್ನಿಯವರು ಪ್ರೊ|| ರಾನ್‍ಕಿನ್ (Prof. Rankin) ಅವರ ಸಲಹೆಯನುಸಾರ ವಾಟ್ಸನ್‍ರ ಬಳಿಯಿದ್ದ ಕೈಬರಹದ ಹೊತ್ತಿಗೆಯನ್ನೆಲ್ಲ ಕೇಂಬ್ರಿಡ್ಜ್ ಟ್ರಿನಿಟಿ ಕಾಲೇಜಿಗೆ ಕೊಟ್ಟಿದ್ದನ್ನೂ ಮತ್ತು ವಾಟ್ಸನ್‍ರು ಆಕ್ಸ್‍ಫರ್ಡ್ ವಿಶ್ವವಿದ್ಯಾಲಯದ ಗಣಿತಶಾಸ್ತ್ರ ವಿಭಾಗ ಪುಸ್ತಕಾಲಯದಲ್ಲಿ ಬಿಟ್ಟು ಹೋದ ರಾಮಾನುಜರ ಕೈಬರಹ ಸಂಶೋಧನೆಗಳ ಸಾರಾಂಶವನ್ನೂ ಪ್ರೊ|| ಬರ್ಚ್ (Prof. Birch) 1975ರಲ್ಲಿ ಪ್ರಚುರಪಡಿಸಿದರು.

ರಾಮಲಿಂಗಂ ಪತ್ರವ್ಯವಹಾರ

ಹಾರ್ಡಿಯವರು ವಾಟ್ಸನ್‍ರಿಗೆ ರಾಮಾನುಜರ ಕೈಬರಹದ ಕಟ್ಟನ್ನು ಕಳುಹಿಸಿದರೆಂದು ಹೇಳಿದೆವಷ್ಟೆ. ಕೆಲವು ಕಾಗದಗಳು ಮಾತ್ರ ಹಾರ್ಡಿಯವರ ಬಳಿಯಲ್ಲಿಯೇ ಉಳಿದಿದ್ದವು. ಇವುಗಳಲ್ಲಿ ಮುಖ್ಯವಾದವು – ರಾಮಾನುಜರ ಗೆಳೆಯ ಎ.ಎಸ್. ರಾಮಲಿಂಗಂರವರು ಹಾರ್ಡಿಯವರಿಗೆ 23-6-1918ರಲ್ಲಿ ಬರೆದ 12 (foolscap) ಪುಟಗಳ ಒಂದು ಪತ್ರ; ರಾಮಾನುಜರು ರಾಮಲಿಂಗಂರಿಗೆ 19-6-1918ರಲ್ಲಿ ಬರೆದ ಪತ್ರ; ರಾಮಲಿಂಗಂರವರು ಹಾರ್ಡಿಯವರ ಮೂಲಕ ರಾಮಾನುಜರಿಗೆ ಆಹಾರನಿಯಮಗಳನ್ನು ಸ್ವಲ್ಪ ಸಡಿಲಿಸುವಂತೆ ಬರೆದ ಸ್ನೇಹಪೂರ್ವಕ ಪತ್ರ (ಇದನ್ನು ಹಾರ್ಡಿಯವರು ರಾಮಾನುಜರಿಗೆ ಕಳುಹಿಸಲಿಲ್ಲವೆಂದೇ ತೋರುತ್ತದೆ); ಮತ್ತು ರಾಮಾನುಜರು ಮ್ಯಾಟ್‍ಲಾಕ್ ಚಿಕಿತ್ಸಾಲಯದಲ್ಲಿ ಹಾಸಿಗೆ ಹಿಡಿದಿದ್ದಾಗ ಕಂಡುಹಿಡಿದ ಸಂಶೋಧನೆಗಳನ್ನು ಹಾರ್ಡಿಯವರಿಗೆ ಬರೆದು ಕಳುಹಿಸಿರುವ ಪತ್ರಗಳು – ಇವು ಮುಖ್ಯವಾದವು.

ಹಾರ್ಡಿಯವರ ನಿಧನಾನಂತರ ಅವರ ಸ್ನೇಹಿತ ಗಣಿತಶಾಸ್ತ್ರಜ್ಞ ಜೆ.ಇ. ಲಿಟ್ಲ್‍ವುಡ್ (J.E. Littlewood) ಎಂಬವರು ಇವನ್ನು 1947ರಲ್ಲಿ ಜಿ.ಎನ್. ವಾಟ್ಸನ್‍ರಿಗೆ ಕಳುಹಿಸಿದರು. ಈ ವಿವರಗಳೆಲ್ಲ 1979ರಲ್ಲಷ್ಟೆ ನಮಗೆ ತಿಳಿದುಬಂದಿರುವುದು.

ಎ.ಎಸ್. ರಾಮಲಿಂಗಂರವರು ಹಾರ್ಡಿಯವರಿಗೆ ಬರೆದಿರುವ ಪತ್ರದಿಂದ ನಮಗೆ ತಿಳಿದುಬಂದಿರುವ ವಿಷಯಗಳು ಸಂಕ್ಷೇಪವಾಗಿ ಹೀಗಿವೆ: ಈ ಮಹನೀಯರ ತಂದೆ-ತಾಯಿ ತಮಿಳುನಾಡಿನ ಕಡಲೂರಿನಲ್ಲಿ ವಾಸವಾಗಿದ್ದವರು. ಇವರು ಕುಲ ರೂಢಿಯಿಂದ ಶಾಕಾಹಾರಿಗಳಲ್ಲದಿದ್ದರೂ ರಾಮಲಿಂಗಂರವರೂ ಮತ್ತು ಅವರ ಅನೇಕ ಬಂಧುಗಳೂ ಶಾಕಾಹಾರಿಗಳೇ ಆಗಿದ್ದರು.

1910ರಲ್ಲಿ ರಾಮಲಿಂಗಂ ಲಂಡನ್ ನಗರಕ್ಕೆ ಬಂದು ಕಿಂಗ್ಸ್ ಕಾಲೇಜಿನಲ್ಲಿ ಇಂಜಿನಿಯರಿಂಗ್ ವಿದ್ಯಾರ್ಥಿಯಾಗಿ ನಾಲ್ಕು ವರ್ಷ ವ್ಯಾಸಂಗ ಪೂರೈಸಿ ಪರೀಕ್ಷೆಯಲ್ಲಿ ತೇರ್ಗಡೆ ಹೊಂದಿ New Stafford Railwayಯಲ್ಲಿ ಮೆಕ್ಯಾನಿಕಲ್ ಇಂಜಿನಿಯರಾದರು.

ಹಿತಾಕಾಂಕ್ಷೆ, ನೆರವು

ರಾಮಾನುಜರೆಂಬ ಅದ್ಭುತ ಗಣಿತಶಾಸ್ತ್ರಜ್ಞರು ಲಂಡನ್ನಿಗೆ ಬಂದಿರುವುದನ್ನು ತಿಳಿದು 1914ರಲ್ಲಿ ರಾಮಲಿಂಗಂ ಲಂಡನ್ನಿಗೆ ತೆರಳಿ ಅವರನ್ನು ಭೇಟಿ ಮಾಡಿ ಶುಭ ಹಾರೈಸಿದರು; ಮತ್ತು ರಾಮಾನುಜರಿಗೆ ಬೇಕಾದ ತುಪ್ಪ, ಎಳ್ಳೆಣ್ಣೆ, ಹಪ್ಪಳ, ಚಟ್ಣಿಪುಡಿ ಮುಂತಾದವನ್ನು ಕೊಟ್ಟು ಅವರಿಗೆ ಬೇಕಾದ ಎಲ್ಲ ವಸ್ತುಗಳನ್ನು ಕಡಲೂರಿನಿಂದ ತರಿಸಿಕೊಡುವುದಾಗಿ ಭರವಸೆ ಕೊಟ್ಟು ಪ್ರೋತ್ಸಾಹಿಸಿದರು.

1914ರ ಕೊನೆಯಲ್ಲಿ ಮೊದಲನೆ ಮಹಾಯುದ್ಧ ನಡೆಯುತ್ತಿದ್ದಾಗ ರಾಮಲಿಂಗಂ ಯೋಧರಾಗಿ ಸೇರಿ ಅನೇಕ ಕಡೆ ಹೋರಾಟದಲ್ಲಿ ಭಾಗವಹಿಸಿ, ಕೆಲವು ವರ್ಷಗಳ ನಂತರ ಸ್ಕಾಟ್ಲೆಂಡ್ ದೇಶದ Newcastle-on-Tyne ಬಳಿಯಿರುವ Jarrow-on-Tyne ಪಟ್ಟಣದಲ್ಲಿ ಪಾಮರ್ ಅಂಡ್ ಕಂಪೆನಿ ಎಂಬ ಹಡಗು ತಯಾರಿಕೆ ಕಾರ್ಖಾನೆಯಲ್ಲಿ ಮದ್ದು ಗುಂಡು ತಯಾರಿಕೆ ವಿಭಾಗದಲ್ಲಿ ತಮ್ಮ ಯೋಧಸೇವೆಯನ್ನು ಕಳೆಯುತ್ತಿದ್ದರು. ಇವರಿಗೆ 1918ನೇ ವರ್ಷದ ಮೇ ತಿಂಗಳಿನಿಂದ ಸ್ವಲ್ಪ ವಿರಾಮ ದೊರಕಿತು. ಯುದ್ಧದಲ್ಲಿ ಇಂಗ್ಲೆಂಡ್ ಜಯ ಗಳಿಸುವುದರಲ್ಲಿತ್ತು. ಆಗ ರಾಮಲಿಂಗಂರವರು ರಾಮಾನುಜರ ಯೋಗಕ್ಷೇಮ ವಿಚಾರಿಸಿ ಪ್ರೊ|| ಹಾರ್ಡಿಯವರ ದ್ವಾರಾ ಪತ್ರ ಬರೆದರು. ಏನೂ ಉತ್ತರ ಬಾರದಿದ್ದುದರಿಂದ ಹಾರ್ಡಿಯವರಿಗೇ ನೇರ ಪತ್ರ ಬರೆದಾಗ ಹಾರ್ಡಿಯವರು ಉತ್ತರಿಸಿದರು – ರಾಮಾನುಜರು ರುಗ್ಣಶಯ್ಯೆಯಲ್ಲಿ ಇಂಗ್ಲೆಂಡ್ ದೇಶದ ಮಧ್ಯಭಾಗದಲ್ಲಿರುವ Matlock (Railway Station Belpar) Sanatorium ಚಿಕಿತ್ಸಾಲಯದಲ್ಲಿ ಶುಶ್ರೂಷೆ ಪಡೆಯುತ್ತಿರುವ ವಿಷಯವನ್ನು ತಿಳಿಸಿದರು. ರಾಮಲಿಂಗಂರವರಿಗೆ ಆಗ ಇಂಡಿಯಾ ಸರ್ಕಾರವು ಉನ್ನತ ಹುದ್ದೆ ನೀಡಿತ್ತು. ಅವರು ಅದಕ್ಕೋಸ್ಕರ ಕುದುರೆ ಸವಾರಿ ಪರೀಕ್ಷೆಯಲ್ಲಿ ಜುಲೈ ತಿಂಗಳ ಕೊನೆಯಲ್ಲಿ ತೇರ್ಗಡೆ ಹೊಂದಿ ಅದಾದ 2-3 ತಿಂಗಳುಗಳಲ್ಲಿ ಯೋಧಸೇವೆಯಿಂದ ಬಿಡುಗಡೆಯಾಗಿ ಭಾರತಕ್ಕೆ ಹೊರಡುವುದರಲ್ಲಿದ್ದರು. ಅವರು ಮೇ-ಜೂನ್ ತಿಂಗಳುಗಳಲ್ಲಿ ರಾಮಾನುಜರಿಗೆ ಬರೆದ ಪತ್ರಗಳಿಗೆ ರಾಮಾನುಜರವರು ಒಂದೆರಡು ವಾಕ್ಯಗಳ ಕಾಗದಗಳನ್ನಷ್ಟೇ ಬರೆದು ಕಳುಹಿಸಿದರು.

ರಾಮಲಿಂಗಂರವರು ರಾಮಾನುಜರ ರೋಗ ಬಹಳ ಉಲ್ಬಣಸ್ಥಿತಿಯಲ್ಲಿರುವುದೆಂದು ಊಹಿಸಿ, ಸ್ವಲ್ಪ ವಿರಾಮ ಪಡೆದು ತಮ್ಮ ಕುದುರೆ ಸವಾರಿ ಅಭ್ಯಾಸವನ್ನು ಮುಗಿಸಿ 15-6-1918ರ ರಾತ್ರಿ ಮ್ಯಾಟ್‍ಲಾಕಿಗೆ ಪ್ರಯಾಣ ಮಾಡಿ ಮರುದಿನ ಬೆಳಗ್ಗೆ 8 ಗಂಟೆಯ ವೇಳೆಗೆ ಚಿಕಿತ್ಸಾಲಯ ತಲಪಿದರು. ಆಗ ಅವರು ತಾವು ಮೊದಲು ನೋಡಿದ್ದ ಪುಷ್ಟದೇಹದ ರಾಮಾನುಜ ಈಗ ಅತ್ಯಂತ ಕೃಶನಾಗಿ, ಶರೀರದ ಬಣ್ಣ ಬಿಳುಪೇರಿರುವುದನ್ನು ನೋಡಿ ಬಹಳ ವ್ಯಸನಪಟ್ಟರು. ಆ ಬಳಿಕ ಮೂರು ದಿನಗಳ ಕಾಲ ಅದೇ ಚಿಕಿತ್ಸಾಲಯದಲ್ಲಿ ವಾಸ ಮಾಡುತ್ತ ರಾಮಾನುಜರ ದೇಹಸ್ಥಿತಿಯ ವಿವರಗಳನ್ನು ಚೆನ್ನಾಗಿ ತಿಳಿದುಕೊಂಡರು – ಈ ವಿವರಗಳು ವೈದ್ಯಮಿತ್ರರ ಬಳಿ ಚರ್ಚಿಸಿ ಸಲಹೆ ಪಡೆಯುವುದಕ್ಕೋಸ್ಕರ.

ಅಸೀಮ ಔದಾಸೀನ್ಯ

ರಾಮಾನುಜರು ಹಿಂದೆ ಹೇಳಿದಂತೆ ಅಪ್ಪಟ ಶಾಕಾಹಾರಿ. ಅವರಿಗೆ ಬೇಕಾದ ಆಹಾರವನ್ನು ಅಲ್ಲಿನ ಸೇವಕ ಸೇವಕಿಯರು ಕೊಡುತ್ತಿರಲಿಲ್ಲ. ರಾಮಲಿಂಗಂರವರು ರಾಮಾನುಜರವರು ಏಕೆ ಶಾಕಾಹಾರೀ ಚಿಕಿತ್ಸಾಲಯವನ್ನು ಸೇರಲಿಲ್ಲವೆಂದು ಪ್ರಶ್ನೆ ಮಾಡಿದರೆ ಅದಕ್ಕೆ ದೊರೆತ ಉತ್ತರ –

ಇಂಡಿಯಾ ಆಫೀಸ್ (India Office) ಸಂಸ್ಥೆ ಭಾರತೀಯ ವಿದ್ಯಾರ್ಥಿಗಳ ಸೌಕರ್ಯ ಮುಂತಾದವುಗಳನ್ನು ಈ ಸಂಸ್ಥೆಯೇ ನೋಡಿಕೊಳ್ಳಬೇಕೆಂಬ ನಿಯಮಗಳು ಆ ಕಾಲದಲ್ಲಿದ್ದುವು)ಯವರು ಶಾಕಾಹಾರಿ ಚಿಕಿತ್ಸಾಲಯಗಳು ಇಂಗ್ಲೆಂಡಿನಲ್ಲಿಲ್ಲ’ ಎಂದು ತಿಳಿಸಿದರಂತೆ! ನಾಲ್ಕಾರು ಅಂತಹ ಚಿಕಿತ್ಸಾಲಯಗಳಿದ್ದುವೆಂದು ರಾಮಲಿಂಗಂರವರಿಗೆ ಆಮೇಲೆ ತಿಳಿದುಬಂತು.

ರಾಮಾನುಜರವರು F.R.S.ನಂಥ ಉನ್ನತ ಪ್ರಶಸ್ತಿ ಗಳಿಸಿದ್ದರೂ ಈ ವಿಷಯದ ಬಗ್ಗೆ ಆಂಗ್ಲ ಅಧಿಕಾರಿಗಳು ತುಂಬಾ ಅಸಡ್ಡೆ ತೋರಿಸಿದ್ದರೆಂಬುದು ಶೋಚನೀಯ ಮತ್ತು ಖಂಡನಾರ್ಹ. ಚಿಕಿತ್ಸಾಲಯವನ್ನು ಸೇರುವಂತೆ ರಾಮಾನುಜರವರಿಗೆ ಸಲಹೆಯನ್ನು ಮಾಡಿದವರು ಆ ಊರಿನ ಸಮೀಪದಲ್ಲಿ ವೈದ್ಯರಾಗಿದ್ದ ಎಲ್. ರಾಮ್ ಎಂಬ ಭಾರತೀಯ. ಇವರನ್ನು ರಾಮಲಿಂಗಂರವರು ಭೇಟಿ ಮಾಡಿ ರಾಮಾನುಜರ ವ್ಯಾಧಿ ಚಿಕಿತ್ಸೆಗಳ ವಿಚಾರವಾಗಿ ಪ್ರಶ್ನೆ ಮಾಡಿದರು. ಅವರು, ರಾಮಾನುಜರ ವ್ಯಾಧಿ ನಿವಾರಣೆಯಾಗಬೇಕಾಗಿದ್ದರೆ ಒಳ್ಳೆಯ ಪುಷ್ಟ ಆಹಾರ, ನಿರ್ಮಲ ಗಾಳಿ ಸೇವನೆಯೇ ಮಾರ್ಗ ಎಂದು ಹೇಳಿ ಆಹಾರ ಪಥ್ಯವೇನೂ ಬೇಕಾಗಿಲ್ಲ ಎಂದು ಹೇಳಿದರು.

ಆದರೆ ರಾಮಾನುಜರಿಗೆ ಬೇಕಾದ ಆಹಾರವನ್ನು ಚಿಕಿತ್ಸಾಲಯದವರು ಕೊಡುತ್ತಿರಲಿಲ್ಲ. ಅನ್ನ “ಅಕ್ಷತೆ”ಯಂತೆ ಇರುತ್ತಿತ್ತೆಂದೂ ಹಪ್ಪಳ ಮುಂತಾದುವನ್ನು ಅರ್ಧಂಬರ್ಧ ಕರಿಯುತ್ತಿದ್ದರೆಂದೂ ರಾಮಾನುಜರು ಹೇಳಿದುದನ್ನು ಕೇಳಿ ರಾಮಲಿಂಗಂರವರು ತಾವೇ ಸ್ವತಃ ಅನ್ನ ಮುಂತಾದುವನ್ನು ಮಾಡುವ ವಿಧಾನಗಳನ್ನು ಚಿಕಿತ್ಸಾಲಯದ ಅಡಿಗೆಮನೆಯಲ್ಲಿ ಸೇವಕಿಗೆ ತೋರಿಸಿಕೊಡುವುದಾಗಿ ಅಲ್ಲಿನ ಮ್ಯಾಟ್ರನ್ನಿಗೆ ಹೇಳಿದಾಗ ಆಕೆ “ನೀವು ಅಡಿಗೆಮನೆಗೆ ಹೋಗುವುದಕ್ಕೆ ಅಪ್ಪಣೆ ಕೊಡಲಾರೆ” ಎಂದು ಹೇಳಿದಳಂತೆ. ಸೇವಿಗೆಯನ್ನು ಕರಿಯಲು ‘ಚೀಸ್’ ಅಲ್ಲಿ ದೊರಕುವುದಿಲ್ಲವೆಂದೂ ಹೇಳಿದಳಂತೆ! ರಾಮಲಿಂಗಂರವರಿಗೆ ಮಹದಾಶ್ಚರ್ಯ. ಏಕೆಂದರೆ ಅವರಿಗೆ ದೊರಕುತ್ತಿದ್ದ ಚೀಸ್ ರೇಷನ್ನಿನಲ್ಲೆ ಒಂದು ಪೌಂಡಿನಷ್ಟನ್ನು ಉಳಿಸಿ ಅವರು ಅಲ್ಲಿಗೆ ತಂದಿದ್ದರು. ಇಂತಹ ಉಲ್ಬಣರೋಗಿಗಳಿಗೆ ಚೀಸ್ ರೇಷನ್ ಇರಲಿಲ್ಲ್ಲವೆಂಬುದಂತೂ ಸತ್ಯಕ್ಕೆ ದೂರವಾದ ಮಾತು.

ನಿರ್ಲಕ್ಷ್ಯ, ಅಸಡ್ಡೆ

ಬಾಳೆಹಣ್ಣನ್ನು ರಾಮಾನುಜರವರು ತಿನ್ನಬಹುದೆಂದು ವೈದ್ಯರಿಂದ ತಿಳಿಯಿತು. ಅದನ್ನು ಏಕೆ ಕೊಡುವುದಿಲ್ಲ ಎಂದು ಚಿಕಿತ್ಸಾಲಯದ ಅಧಿಕಾರಿಗಳನ್ನು ಕೇಳಿದಾಗ ರಾಮಾನುಜರಿಗೆ ದೊರಕಿದ ಉತ್ತರ – ‘ಬಾಳೆಹಣ್ಣು ಇಲ್ಲಿ ಸಿಕ್ಕುವುದಿಲ್ಲ’ ಎಂದು! ರಾಮಾನುಜರವರ ವಾರ್ಡಿನಲ್ಲಿದ್ದ ಮತ್ತೊಬ್ಬ ರೋಗಿಗೆ 12 ಬಾಳೆಹಣ್ಣುಗಳ ಗೊಂಚಲೊಂದನ್ನು ಒಬ್ಬರು ಕೊಡುವುದನ್ನು ನೋಡಿ ಅದನ್ನು ಎಲ್ಲಿಂದ ತಂದಿರಿ ಎಂದು ಪ್ರಶ್ನಿಸಿದಾಗ – ‘ಈ ಊರಿನಲ್ಲಿ 4 ಪೆನ್ನಿಗಳಿಗೊಂದರಂತೆ ಮಾರಾಟವಾಗುತ್ತದೆ’ ಎಂದು ಉತ್ತರ ಬಂತು.

ರಾಮಾನುಜರವರಿಗೆ ಬರೀ ಬ್ರೆಡ್, ಹಾಲು, ಪೋರಿಡ್ಜ್, ಓಟ್‍ಮೀಲ್ ಬೇಸರವನ್ನುಂಟು ಮಾಡಿತ್ತು. ಆದರೆ ಅಕ್ಕಿ ಅಥವಾ ಸೋಜಿ (Pudding) ಸಜ್ಜಿಗೆ ತುಂಬಾ ಇಷ್ಟ. ರಾಮಲಿಂಗಂರವರಿಗೆ ಮಧ್ಯಾಹ್ನ ಭೋಜನದಲ್ಲಿ ಸಜ್ಜಿಗೆ ಕೊಟ್ಟಿದ್ದರು; ರಾಮಾನುಜರವರಿಗೆ ಅದನ್ನು ಕೊಟ್ಟಿರಲೇ ಇಲ್ಲ! ಇನ್ನು ಮುಂದಾದರೂ ಸಜ್ಜಿಗೆ ಮಾಡಿದಾಗ ರಾಮಾನುಜರವರಿಗೆ ಕೊಡಬೇಕೆಂದು ಚಿಕಿತ್ಸಾಲಯದ ಅಧಿಕಾರಿಗಳಿಗೆ ರಾಮಲಿಂಗಂ ಬೇಡಿಕೆ ಸಲ್ಲಿಸಿದರು.

ಈ ವಿಚಾರದಲ್ಲಿ ರಾಮಾನುಜರವರು ರಾಮಲಿಂಗಂರವರಿಗೆ ತಿಳಿಸಿದ ವಿಷಯ ಚಿಕಿತ್ಸಾಲಯದವರ ಅಸಡ್ಡೆಯನ್ನು ಚೆನ್ನಾಗಿ ತೋರಿಸುತ್ತದೆ. ಡಾ|| ಎಲ್. ರಾಮ್‍ರವರು ರಾಮಾನುಜರನ್ನು ಪರೀಕ್ಷೆ ಮಾಡುವ ದಿನಗಳಲ್ಲಿ ಮಾತ್ರ ರುಚಿಯಾದ ಸಜ್ಜಿಗೆಯನ್ನು ಕೊಡುತ್ತಿದ್ದರೆಂದು ರಾಮಾನುಜರು ರಾಮಲಿಂಗಂರವರಿಗೆ ತಿಳಿಸಿದರು.

ಆ ಚಿಕಿತ್ಸಾಲಯದ ಮುಖ್ಯ ವೈದ್ಯ ಮೇಜರ್ ಕಿನ್‍ಸೇರ್ಡ್ (Major Kincaird) ಎಂಬವರನ್ನು ರಾಮಾನುಜರವರ ಆರೋಗ್ಯದ ವಿಚಾರವಾಗಿ ರಾಮಲಿಂಗಂರವರು ಪ್ರಶ್ನಿಸಬೇಕೆಂದು ಮಾಡಿದ ಪ್ರಯತ್ನ ಫಲಕಾರಿಯಾಗಲಿಲ್ಲ. ಅವರೂ ಕೂಡ ರಾಮಾನುಜರವರು ಯಾವ ಆಹಾರವನ್ನಾದರೂ ಸ್ವೀಕರಿಸಬಹುದೆಂದು ರಾಮಲಿಂಗಂರವರಿಗೆ ಹೇಳಿದರು. ರಾಮಾನುಜರವರು ಇನ್ನೇನು ಮರಣ ಹೊಂದುವರೆಂದೇ ತಿಳಿದು ಹೀಗೆ ಹೇಳುತ್ತಿರಬಹುದೆಂದು ರಾಮಲಿಂಗಂರವರಿಗೆ ಅನ್ನಿಸಿತು. ಇವರು ಹಾರ್ಡಿಯವರಿಗೆ ಬರೆದ ಪತ್ರದಲ್ಲಿ ಈ ವಾಕ್ಯ ಗಮನಾರ್ಹ:

“It is anguishing and breaking one’s heart to feel that Ramanujan, with his wonderful capabilities for such valuable contributions, should be given up as hopeless. War with all its horror might have made us callous to the wholesale slaughter and loss of lives, but surely, should Ramanujan be given up?”

ಹಾರ್ಡಿಯವರು ಮೇಜರ್ ಕಿನ್‍ಸೇರ್ಡ್‍ರಿಂದ ವಿವರವಾದ ವೈದ್ಯಪರೀಕ್ಷೆ ವರದಿಯನ್ನು ಪಡೆದು ಅದನ್ನು ತಮಗೆ ಕಳುಹಿಸಬೇಕೆಂದು ರಾಮಲಿಂಗಂ ಪ್ರಾರ್ಥಿಸಿದರು ಮತ್ತು ಅದನ್ನು ಗೋಪ್ಯವಾಗಿ ನ್ಯೂಕ್ಯಾಸಲಿನ ಪ್ರಖ್ಯಾತ ತೊರಾಸಿಕ್ ಸರ್ಜನ್ ಡಾ|| ಬಾಯ್ಡ್ ಎಂಬವರಿಗೂ ಮತ್ತೆ ಕೆಲವು ವೈದ್ಯರಿಗೂ ತೋರಿಸಿ ಸಲಹೆ ಪಡೆಯುವುದಾಗಿ ಬರೆದರು.

ಅವಸಾನ

ಹಾರ್ಡಿಯವರು ಅವರಿಗೆ ಉತ್ತರ ಬರೆದರೋ ಇಲ್ಲವೋ ನಮಗೆ ತಿಳಿದುಬಂದಿಲ್ಲ. ರಾಮಾನುಜರವರು ಭಾರತಕ್ಕೆ ಹಿಂತಿರುಗುವ ಸಂದರ್ಭದಲ್ಲಿ ಹಾರ್ಡಿಯವರು ಮದ್ರಾಸ್ ವಿಶ್ವವಿದ್ಯಾಲಯದ ಅಧಿಕಾರಿಗಳಿಗೆ ಬರೆದ ಪತ್ರದಲ್ಲಿ – “ರಾಮಾನುಜರವರು ರುಧಿರ ದೋಷದಿಂದ (a kind of blood poisoning) ಬಾಧಿತರಾಗಿದ್ದರೆಂದು ವೈದ್ಯರ ವರದಿ ತಿಳಿಸುತ್ತದೆ. ಇದಕ್ಕೆ ಮೂಲ ಪತ್ತೆಯಾಗಲಿಲ್ಲ. ಆದರೆ ಅದು ಈಗ ಬತ್ತಿಹೋಗಿ ರಾಮಾನುಜರವರ ಭಾರ 14 ಪೌಂಡು ಹೆಚ್ಚಾಗಿದೆ” – ಎಂಬುದಾಗಿ ಬರೆದಿದ್ದಾರೆ. ರಾಮಲಿಂಗಂರವರ ಪ್ರಸ್ತಾಪವನ್ನು ಆ ಪತ್ರದಲ್ಲಿ ಮಾಡಲೇ ಇಲ್ಲ. ಆದರೆ ರಾಮಾನುಜರವರನ್ನು ಪರೀಕ್ಷಿಸಿದ ಡಾ|| ಚಂದ್ರಶೇಖರನ್ (ಇವರು ಪ್ರಖ್ಯಾತ ನ್ಯಾಯವಾದಿ ಪಿ.ಎಸ್. ಶಿವಸ್ವಾಮಿ ಅಯ್ಯರ್ ಅವರ ಸಹೋದರರು) ಕ್ಷಯರೋಗ ಉಲ್ಬಣ ಸ್ಥಿತಿಯಲ್ಲೇ ಇರುವುದೆಂದೂ ಉತ್ತಮ ಚಿಕಿತ್ಸೆ ಶುಶ್ರೂಷೆ ಅಗತ್ಯವೆಂದೂ ಅಭಿಪ್ರಾಯಪಟ್ಟರು. ಅನೇಕ ಮಹನೀಯರು ಮದ್ರಾಸ್, ಕೊಯಮತ್ತೂರು ಮುಂತಾದ ಸ್ಥಳಗಳಲ್ಲಿ ಉಚಿತ ಉನ್ನತ ಮಟ್ಟದ ಗೃಹಗಳನ್ನು ರಾಮಾನುಜರವರಿಗೋಸ್ಕರ ಕೊಡಲು ಸಿದ್ಧರಾಗಿದ್ದರು. ಮಾಜಿ ಕಾಂಗ್ರೆಸ್ ಅಧ್ಯಕ್ಷ ಪ್ರಸಿದ್ಧ ನ್ಯಾಯವಾದಿ ಎಸ್. ಶ್ರೀನಿವಾಸಯ್ಯಂಗಾರ್ಯರವರು ಚಿಕಿತ್ಸೆಯ ವೆಚ್ಚವನ್ನೆಲ್ಲಾ ವಹಿಸಿಕೊಂಡರು. ಆದರೆ ದೈವವು ರಾಮಾನುಜರವರನ್ನು 26-4-1920ರಂದು ತನ್ನ ಬಳಿಗೆ ಕರೆದುಕೊಂಡಿತು.

ರಾಮಲಿಂಗಂರವರು ಹಾರ್ಡಿಯವರಿಗೆ ರಾಮಾನುಜರವರನ್ನು ಬೇರೆ ಊರಿನ (ದಕ್ಷಿಣ ಇಂಗ್ಲೆಂಡ್, ಫ್ರಾನ್ಸ್ ಅಥವಾ ಇಟಲಿ) ಚಿಕಿತ್ಸಾಲಯಕ್ಕೋ ಅಥವಾ ಬೇರೆ ಮನೆಗೋ ಕರೆದುಕೊಂಡು ಹೋಗುವುದು ಮೇಲೆಂದು ಸಲಹೆ ಮಾಡಿದ್ದರು. ಈ ಸಂದರ್ಭದಲ್ಲಿ ರಾಮಲಿಂಗಂರವರು ತಾವು ಸೈನ್ಯದಲ್ಲಿದ್ದಾಗ

Ambulance ವಾಹನ ನಡೆಸುವ ಪರೀಕ್ಷೆಯಲ್ಲಿ ತೇರ್ಗಡೆ ಹೊಂದಿರುವುದಾಗಿಯೂ ರಾಮಾನುಜರವರನ್ನು ತಾವೇ ಅಂತಹ ವಾಹನದಲ್ಲಿ ಕರೆದುಕೊಂಡು ಹೋಗುವುದಕ್ಕೆ ಸಿದ್ಧನಾಗಿರುವುದಾಗಿಯೂ ಮತ್ತು ಆವಶ್ಯಕವಾದಲ್ಲಿ Nursing Training ತರಬೇತಿಯನ್ನೂ ತಾವು ಪಡೆಯುವುದಾಗಿಯೂ ತಿಳಿಸಿದ್ದರು.

ರಾಮಲಿಂಗಂ ಏನಾದರು?

ಈ ವಿಷಯಗಳ ಹೊರತು ಮತ್ತೇನೂ ರಾಮಲಿಂಗಂರಂಥ ಉದಾತ್ತ ವ್ಯಕ್ತಿಯ ವಿಚಾರದಲ್ಲಿ ನಮಗೆ ತಿಳಿಯದಿರುವುದು ತುಂಬ ವಿಷಾದಕರ.

ರಾಮಲಿಂಗಂರವರು 1918ರ ಕೊನೆಯ ತಿಂಗಳುಗಳಲ್ಲಿ ನಮ್ಮ ದೇಶಕ್ಕೆ ಹಿಂತಿರುಗಿದಾಗ ಅವರ ಹಡಗು ಸಬ್‍ಮೆರೀನ್‍ನಿಂದ ಬಹುಶಃ ಮುಳುಗಿಸಲ್ಪಟ್ಟಿರಬೇಕು. ಅವರು ಅನಂತರ ಬದುಕಿದ್ದ ಪಕ್ಷದಲ್ಲಿ ರಾಮಾನುಜರವರು 27-3-1919ರಲ್ಲಿ ಹಿಂತಿರುಗಿದಾಗ ಅವರನ್ನು ಭೇಟಿ ಮಾಡಿರುತ್ತಿದ್ದರು. ಮತ್ತು ಭಾರತೀಯರಿಗೆ ಅವರ ರೋಗ ಶುಶ್ರೂಷೆಯ ವಿಚಾರಗಳನ್ನು ವಿವರವಾಗಿ ತಿಳಿಸುತ್ತಿದ್ದುದು ಖಂಡಿತ. ಹಾಗಾಗಿದ್ದರೆ ರಾಮಾನುಜರವರು ಇನ್ನೂ ಕೆಲವು ಕಾಲ ಜೀವಿಸಿ ಗಣಿತರಂಗಕ್ಕೆ ಮತ್ತಷ್ಟು ಉತ್ತಮ ಸೇವೆ ಸಲ್ಲಿಸುತ್ತಿದ್ದರು.

ಅದೇ ದಿನಗಳಲ್ಲಿ ನಡೆದ ಮತ್ತೊಂದು ದಾರುಣ ಘಟನೆ ಇಲ್ಲಿ ಉಲ್ಲೇಖನೀಯವಾಗಿದೆ. ಪುದುಚೇರಿಯ (ಕಡಲೂರ್-ಪುದುಚೇರಿಗಳು ಪಕ್ಕದ ಊರುಗಳು) ಒಬ್ಬ ದೊಡ್ಡ ಜಮೀನುದಾರರು 1900-1920ನೇ ವರ್ಷಗಳಲ್ಲಿ ಸ್ವದೇಶೀ ಬೀದಿಯಲ್ಲಿ ವಾಸಿಸುತ್ತಿದ್ದರು. ಇದೇ ಬೀದಿಯಲ್ಲಿ ಭಾರತೀಯ ಉಜ್ಜಲ ದೇಶಾಭಿಮಾನಿ ಸುಬ್ರಹ್ಮಣ್ಯ ಭಾರತಿ, ವಿ.ವಿ.ಎಸ್. ಐಯರ್, ಶ್ರೀನಿವಾಸಾಚಾರ್ಯರು ಮುಂತಾದವರೂ ವಾಸಿಸುತ್ತಿದ್ದರು.

ಆ ಜಮೀನುದಾರರ ಮಗ ವಿದೇಶದಲ್ಲಿ ಇಂಜಿನಿಯರಿಂಗ್ ವಿದ್ಯಾಭ್ಯಾಸ ಪೂರೈಸಿ ಹಿಂತಿರುಗುವ ಸಂದರ್ಭದಲ್ಲಿ ತಂದೆಯವರು ಆ ಗಣ್ಯ ಭಾರತೀಯರನ್ನೆಲ್ಲ್ಲ ಪುತ್ರಾಗಮನ ಸತ್ಕಾರ ಕೂಟಕ್ಕೆ ಆಹ್ವಾನಿಸಿದ್ದರು. ಪುತ್ರಾಗಮನವನ್ನು ನಿರೀಕ್ಷಿಸುತ್ತಿದ್ದ ತಂದೆಗೆ ಆ ಸಂದರ್ಭದಲ್ಲಿ ಒಂದು ಕೇಬಲ್ ಬಂತು. ಅದರಲ್ಲಿ ಪುತ್ರನು ಹಡಗು ಮುಳುಗಿ ಮೃತನಾದ ಸಮಾಚಾರವಿತ್ತು. ತಂದೆಯು ಅನಂತರ ಸಾಯುವವರೆಗೂ ಜ್ಞಾನಶೂನ್ಯನಾಗಿಯೇ ಇರುವಂತೆ ವಿಧಿ ಇತ್ತು. ಈ ಪುತ್ರನೇ ರಾಮಲಿಂಗಂ ಇರಬಹುದು ಎಂಬ ಊಹೆ ಸಹಜವಾಗಿ ಉದ್ಭವವಾಗುತ್ತದೆ. [ಈ ಸಂಗತಿಯು ಮದರಾಸ್ ಅಮುದ ನಿಲಯಂ ಪ್ರಚುರಪಡಿಸಿದ್ದ “ಭಾರತೀಯ ನಿನೈವುಗಳ್” ಎಂಬ ತಮಿಳು ಪುಸ್ತಕದಲ್ಲಿದೆ. ಇದನ್ನು ಬರೆದವರು ಶ್ರೀ ಶ್ರೀನಿವಾಸಾಚಾರ್ಯರ ಪುತ್ರಿ ದಿ|| ಯದುಗಿರಿ. ಈ ಚಿಕ್ಕ ಪುಸ್ತಕವನ್ನು ಮತ್ತೆ ಅಚ್ಚು ಮಾಡುವುದಾಗಿ ಆ ಸಂಸ್ಥೆಯು ತಿಳಿಸಿತ್ತು.]

ರಾಮಾನುಜರವರ ಪರಿಶೋಧನೆಯ ಕೆಲವು ವಿಷಯಗಳನ್ನು ಗಣಿತಶಾಸ್ತ್ರ ಅಲ್ಪಪರಿಚಯವಿರುವವರಿಗೂ (ಪ್ರೌಢಶಾಲೆಯ ವಿದ್ಯಾರ್ಥಿ ಮಟ್ಟದವರಿಗೆ) ತಿಳಿಸಬಹುದು. ನಿದರ್ಶನಾರ್ಥವಾಗಿ ಒಂದು ವಿಷಯವನ್ನು ಇಲ್ಲಿ ಪ್ರಸ್ತಾವಿಸುತ್ತೇನೆ.

e ಮತ್ತು (ಪೈ) ಎಂಬ ಎರಡು ಸಂಖ್ಯೆಗಳು ಗಣಿತಶಾಸ್ತ್ರದಲ್ಲಿ ಬಹು ಪ್ರಸಿದ್ಧಿ ಪಡೆದಿವೆ. e = 2.718281828……, =

3.1415926535……, [d ವೃತ್ತದ ವ್ಯಾಸದ ಅಳತೆಯಾದರೆ ಅದರ ಪರಿಧಿಯ ಅಳತೆ d] ರಾಮಾನುಜರವರ √163

e ಸಂಖ್ಯೆ ಒಂದು ಪೂರ್ಣಾಂಕಕ್ಕೆ ಬಹಳ ಹತ್ತಿರವಿರುವ ಸಂಖ್ಯೆ ಎಂದೂ ಈ ಪೂರ್ಣಾಂಕ 262, 537, 412, 640, 768, 000 ಎಂದೂ ರಾಮಾನುಜರು 1905ರಲ್ಲಿ ಗಣಕ ಯಂತ್ರದ ಸಹಾಯವಿಲ್ಲದೇ ಕಂಡುಹಿಡಿದಿದ್ದರು. ಇದರ ಅರಿವಿಲ್ಲದೆ ಮತ್ತೊಬ್ಬ ಅಮೆರಿಕ ವಿಜ್ಞಾನಿ 1973ರಲ್ಲಿ ಮತ್ತೆ ಇದನ್ನು ಯಂತ್ರ ಸಹಾಯದಿಂದ ‘ಕಂಡುಹಿಡಿ’ದಿದ್ದಾರೆ. ಈ ಲೇಖನದ ಲೇಖಕ ಕೆ. ವೆಂಕಟಾಚಲಯ್ಯಂಗಾರ್ ಭಾರತೀಯ ಗಣಿತಶಾಸ್ತ್ರ ಸಂಘದ (ಇಂಡಿಯನ್ ಮ್ಯಾತಮ್ಯಾಟಿಕಲ್ ಸೊಸೈಟಿ) ಅಧ್ಯಕ್ಷರಾಗಿದ್ದವರು; ಮೈಸೂರು ವಿಶ್ವವಿದ್ಯಾನಿಲಯದ ಗಣಿತಶಾಸ್ತ್ರ ವಿಭಾಗದ ನಿವೃತ್ತ ಪ್ರಾಧ್ಯಾಪಕರು

ಲೇಖಕ: ಕೆ. ವೆಂಕಟಾಚಲಯ್ಯ ಅವರು ಭಾರತೀಯ ಗಣಿತಶಾಸ್ತ್ರ ಸಂಘದ (ಇಂಡಿಯನ್ ಮ್ಯಾತಮ್ಯಾಟಿಕಲ್ ಸೊಸೈಟಿ) ಅಧ್ಯಕ್ಷರಾಗಿದ್ದರು. ಮೈಸೂರು ವಿಶ್ವವಿದ್ಯಾಲಯದ ಗಣಿತಶಾಸ್ತ್ರ ವಿಭಾಗದ ನಿವೃತ್ತ ಪ್ರಾಧ್ಯಾಪಕರು. ಕೃಪೆ: ಉತ್ಥಾನ

Leave a Reply

Your email address will not be published.

This site uses Akismet to reduce spam. Learn how your comment data is processed.