PHOTO: S. THANTHONI

ಜಗತ್ತಿನ ಮೊದಲ ಸಂವಿಧಾನ, ಪ್ರಜಾಪ್ರಭುತ್ವದ ಬಗೆಗೆ ಚರ್ಚೆ ನಡೆದಾಗಲೆಲ್ಲ ನಾವು ವಿದೇಶಗಳ ಕಡೆ ಕೈ ತೋರಿಸುತ್ತೇವೆ. ಆದರೆ ವಾಸ್ತವವಾಗಿ ವಿದೇಶಗಳಿಗಿಂತಳೂ ಹಳೆಯ ಪ್ರಜಾಪ್ರಭುತ್ವದ ಮಾದರಿಗಳು ಭಾರತದಲ್ಲಿವೆ. ಅವುಗಳ ಬಗೆಗೆ ಅಧ್ಯಯನ, ಪ್ರಚಾರ ನಡೆಯದೇ ಸುಪ್ತವಾಗಿದೆ. ಹೀಗೆ ಸುಪ್ತವಾಗುಳಿದ ಒಂದು ಮಾದರಿಯ ಬಗೆಗೆ ಪ್ರಧಾನಿ ನರೇಂದ್ರ ಮೋದಿ ಅವರು ಇತ್ತೀಚೆಗೆ ಭಾರತದ ನೂತನ ಸಂಸತ್ ಭವನದ ಭೂಮಿ ಪೂಜೆಯ  ಸಂದರ್ಭದಲ್ಲಿಉಲ್ಲೇಖಿಸಿದರು. ಅದು ತಮಿಳುನಾಡಿನ ಉತಿರಾಮೆರೂರ್.

ಅದರ ವೈಶಿಷ್ಟ್ಯತೆ ಬಗೆಗೆ ನಮಗೆ ತಿಳಿದಿದೆಯೇ?

ತಮಿಳುನಾಡಿನಲ್ಲಿರುವ ಉತಿರಾಮೇರು ಚೆನ್ನೈನಿಂದ 90 ಕಿ.ಮೀ. ದೂರದಲ್ಲಿರುವ ಕಾಂಚೀಪುರಂ ಜಿಲ್ಲೆಯಲ್ಲಿದೆ. ಇದು 1,250 ವರ್ಷಗಳ ಇತಿಹಾಸವನ್ನು ಹೊಂದಿದೆ. ಇಲ್ಲಿ ಮೂರು ಪ್ರಮುಖ ದೇವಾಲಯಗಳು ಹಾಗೂ ಹತ್ತಾರು ಶಾಸನಗಳು ಇವೆ. ಇವುಗಳು ಮುಖ್ಯವಾಗಿ ರಾಜ ರಾಜ ಚೋಳ (ಕ್ರಿ.ಶ. 985-1014), ಅವರ ಮಗ ರಾಜೇಂದ್ರ ಚೋಳ ಮತ್ತು ವಿಜಯನಗರ ಚಕ್ರವರ್ತಿ ಕೃಷ್ಣದೇವರಾಯರ ಆಳ್ವಿಕೆಯ ಕಾಲ ಖಂಡದವುಗಳು. ಪ್ರರಾಂತಕ ಚೋಳ (ಕ್ರಿ.ಶ. 907–955)ನ ಅವಧಿಯಲ್ಲಿ ಈ ಗ್ರಾಮದ ಆಡಳಿತವು ಚುನಾವಣೆಯ ಮೂಲಕ ವ್ಯವಸ್ಥಿತವಾಗಿ ನಡೆಯುತ್ತಿತ್ತು.

ವಾಸ್ತವವಾಗಿ ತಮಿಳುನಾಡಿನ ಹಲವಾರು ಭಾಗಗಳಲ್ಲಿ ದೇವಾಲಯದ ಗೋಡೆಗಳ ಮೇಲಿನ ಶಾಸನಗಳು ಗ್ರಾಮ ಸಭೆಗಳನ್ನು ಉಲ್ಲೇಖಿಸುತ್ತವೆ. ತಮಿಳುನಾಡು ಪುರಾತತ್ವ ಇಲಾಖೆಯ ಶಿಲಾಶಾಸನಕಾರ ಆರ್. ಶಿವಾನಂದಮ್ ಅವರು “ಚುನಾಯಿತ ಗ್ರಾಮಸಭೆ ಹೇಗೆ ಕಾರ್ಯನಿರ್ವಹಿಸುತ್ತಿತ್ತು ಎಂಬುದರ ಕುರಿತ ಸಂಪೂರ್ಣ ಮಾಹಿತಿ ಉತಿರಾಮೇರು ಗ್ರಾಮ ಸಭೆಯ (ಮಂಟಪ) ಗೋಡೆಗಳ ಮೇಲೆ ನಮಗೆ ಕಾಣಸಿಗುತ್ತವೆ. ಅದನ್ನು ನಾವು ಸುಲಭವಾಗಿ ಗುರುತಿಸಬಹುದು” ಎಂದು ಹೇಳುತ್ತಾರೆ.

ಸುಮಾರು 1,100 ವರ್ಷಗಳ ಹಿಂದೆ, ಒಂದು ಹಳ್ಳಿಯು ವಿಸ್ತಾರವಾದ ಮತ್ತು ಅತ್ಯಂತ ಪರಿಷ್ಕೃತ ಚುನಾವಣಾ ವ್ಯವಸ್ಥೆಯನ್ನು ಹೊಂದಿತ್ತು ಹಾಗೂ ಚುನಾವಣೆಯ ಕ್ರಮವನ್ನು ಸೂಚಿಸುವ ಲಿಖಿತ ಸಂವಿಧಾನವನ್ನು ಹೊಂದಿತ್ತು ಎಂಬ ಐತಿಹಾಸಿಕ ಸತ್ಯಕ್ಕೆ ಇದು ಸಾಕ್ಷಿಯಾಗಿದೆ. ಚುನಾಯಿತ ಗ್ರಾಮ ಪ್ರಜಾಪ್ರಭುತ್ವದ ಈ ವ್ಯವಸ್ಥೆಯ ವಿವರಗಳನ್ನು ಗ್ರಾಮ ಸಭೆಯ ಗೋಡೆಗಳ ಮೇಲೆ (ಗ್ರಾಮಸಬೆಯ ಮಂಟಪಗಳಲ್ಲಿ) ಕೆತ್ತಲಾಗಿದೆ. ಈ ಮಂಟಪಗಳು ಗ್ರಾನೈಟ್ ಚಪ್ಪಡಿಗಳಿಂದ ಮಾಡಿದ ಆಯತಾಕಾರದ ರಚನೆಯಾಗಿದೆ. “ಇದು ಭಾರತದ ಇತಿಹಾಸದಲ್ಲಿನ ಮಹೋನ್ನತ ದಾಖಲೆಯಾಗಿದೆ. ಇದು 1,000 ವರ್ಷಗಳ ಹಿಂದೆ ಕಾರ್ಯ ನಿರ್ವಹಿಸಿದ ಗ್ರಾಮ ಸಭೆಯ ನಿಜವಾದ ಲಿಖಿತ ಸಂವಿಧಾನವಾಗಿದೆ”ಎಂದು ಡಾ.ನಾಗಸ್ವಾಮಿ ಪ್ರಸಿದ್ಧ ಪುರಾತತ್ವಶಾಸ್ತ್ರಜ್ಞ ಹೇಳುತ್ತಾರೆ.

ಉತಿರಾಮೇರು ಗ್ರಾಮ ಸಭೆಯ (ಮಂಟಪ) ಗೋಡೆಗಳ ಮೇಲಿನ ಈ ಶಾಸನಗಳಲ್ಲಿ ವಾರ್ಡ್‌ಗಳ ವಿಂಗಡನೆ, ಚುನಾವಣೆಗೆ ನಿಲ್ಲುವ ಅಭ್ಯರ್ಥಿಗಳ ಅರ್ಹತೆ, ಅನರ್ಹತೆ ಮಾನದಂಡಗಳು, ಚುನಾವಣಾ ವಿಧಾನ, ಚುನಾಯಿತ ಸದಸ್ಯರೊಂದಿಗಿನ ಸಮಿತಿಗಳ ಸಂವಿಧಾನ, ಆ ಸಮಿತಿಗಳ ಕಾರ್ಯಗಳು, ತಪ್ಪಿತಸ್ಥರನ್ನು ತೆಗೆದುಹಾಕುವ ಅಧಿಕಾರ, ಇತ್ಯಾದಿಗಳನ್ನು ಸ್ಪಷ್ಟವಾಗಿ ಉಲ್ಲೇಖಿಸಲಾಗಿದೆ. ಚುನಾಯಿತ ಪ್ರತಿನಿಧಿಗಳು ತಮ್ಮ ಕರ್ತವ್ಯದಲ್ಲಿ ವಿಫಲವಾದರೆ ಅವರನ್ನು ಹಿಂದೆ ಕರೆಸಿಕೊಳ್ಳುವ ಹಕ್ಕನ್ನು ಕೂಡಾ ಗ್ರಾಮಸ್ಥರು ಹೊಂದಿದ್ದರು.

ಪ್ರಮುಖ ವೈಶಿಷ್ಟ್ಯಗಳು ಯಾವುವು? ಗ್ರಾಮವನ್ನು 30 ವಾರ್ಡ್‌ಗಳಾಗಿ ವಿಂಗಡಿಸಲಾಗಿದ್ದು, ತಲಾ ಒಬ್ಬ ಪ್ರತಿನಿಧಿಯನ್ನು ಆಯ್ಕೆ ಮಾಡಲಾಗುತ್ತಿತ್ತು. ಸ್ಪರ್ಧಿಸಲು ಬಯಸುವವರು 35 ವರ್ಷಕ್ಕಿಂತ ಮೇಲ್ಪಟ್ಟವರು ಮತ್ತು 70 ವರ್ಷಕ್ಕಿಂತ ಕಡಿಮೆ ವಯಸ್ಸಿನವರಾಗಿರಬೇಕು. ಭೂಮಿಯನ್ನು ಹೋಂದಿರುವ ಮತ್ತು ಭೂಕಂದಾಯ (ತೆರಿಗೆ) ಪಾವತಿಸುತ್ತಿರುವವರು ಮಾತ್ರ ಚುನಾವಣೆಯಲ್ಲಿ ಸ್ಪರ್ಧಿಸಬಹುದಾಗಿತ್ತು. ಅವರು ತಮ್ಮ ಸ್ವಂತ ಜಮೀನಿನಲ್ಲಿ (ಸಾರ್ವಜನಿಕ ಭೂಮಿಯಾಗಿರಬಾರದು) ಕಾನೂನುಬದ್ಧವಾಗಿ ನಿರ್ಮಿಸಿದ ಮನೆಯನ್ನು ಹೊಂದಿರಬೇಕಾಗಿತ್ತು. ಗ್ರಾಮದ ಯಾವುದೇ ಸಮಿತಿಗಳಲ್ಲಿ ಸೇವೆ ಸಲ್ಲಿಸುತ್ತಿರುವ ವ್ಯಕ್ತಿಯು ಮುಂದಿನ ಮೂರು ಅವಧಿಗೆ (ಪ್ರತಿ ಅವಧಿ ಒಂದು ವರ್ಷದ್ದಾಗಿತ್ತು) ಮತ್ತೆ ಸ್ಪರ್ಧಿಸಲು ಅವಕಾಶವಿರಲಿಲ್ಲ. ಲಂಚ ಸ್ವೀಕರಿಸಿದ, ಇತರರ ಆಸ್ತಿಯನ್ನು ದುರುಪಯೋಗಪಡಿಸಿಕೊಂಡ, ಸಾರ್ವಜನಿಕ ಹಿತಾಸಕ್ತಿಗೆ ವಿರುದ್ಧವಾಗಿ ವರ್ತಿಸಿದ ಚುನಾಯಿತ ಸದಸ್ಯರು ಅನರ್ಹತೆಯನ್ನು ಅನುಭವಿಸುತ್ತಿದ್ದರು. ಚುನಾವಣೆಗಳು ನಡೆದಾಗ ಶಿಶುಗಳು ಸೇರಿದಂತೆ ಇಡೀ ಗ್ರಾಮವು ಗ್ರಾಮ ವಿಧಾನಸಭೆ ಮಂಟಪದಲ್ಲಿ ಹಾಜರಾಗಬೇಕಾಗಿತ್ತು. ಅನಾರೋಗ್ಯ ಮತ್ತು ತೀರ್ಥಯಾತ್ರೆಗೆ ತೆರಳಿದವರಿಗೆ ಮಾತ್ರ ವಿನಾಯಿತಿ ನೀಡಲಾಗಿತ್ತು.

ಈ ವಿಚಾರ ಮುನ್ನೆಲೆಗೆ ಬರುವುದರಲ್ಲಿ ಪರಮಾಚಾರ್ಯರ ಕೊಡುಗೆ ಉಲ್ಲೇಖನೀಯ. ಪರಮಾಚಾರ್ಯರ ಬೋಧನೆಗಳನ್ನು ಒಳಗೊಂಡಿರುವ ಪುಸ್ತಕದಲ್ಲಿ ಈ ಶಾಸನಗಳ ಕುರಿತ ಮಾಹಿತಿ ನಮಗೆ  ಸಿಗುತ್ತದೆ. ಮಾಜಿ ಚುನಾವಣಾ ಆಯುಕ್ತರಾದ ಟಿ.ಎನ್. ಶೇಷನ್ ಅವರನ್ನು ಭಾರತದ ಮುಖ್ಯ ಚುನಾವಣಾ ಆಯುಕ್ತರನ್ನಾಗಿ ನೇಮಿಸಿದಾಗ ಶೇಷನ್ ಅವರು ಸ್ವಲ್ಪ ನಿರಾಶೆಗೊಂಡಿದ್ದರು. ಪರಮಾಚಾರ್ಯರನ್ನು ಭೇಟಿಯಾದರು. ನಿರಾಶೆಗೊಂಡ ಶೇಷನ್ ಅವರು ಪರಮಾಚಾರ್ಯರನ್ನು (ಆಗ ಅವರಿಗೆ 97 ವರ್ಷ ವಯಸ್ಸು) ಭೇಟಿಯಾಗಲು ಬಂದರು. ಅವರ ನಿರಾಶೆಯ ಕಾರಣವನ್ನು ತಕ್ಷಣವೇ ಗ್ರಹಿಸಿದ ಪರಮಾಚಾರ್ಯರು, ಭಾರತದ ಸಾರ್ವಜನಿಕರ ಸೇವೆ ಸಲ್ಲಿಸಲು ವರ್ಗಾವಣೆ ದೇವರು ನೀಡಿದ ಅವಕಾಶವೆಂದು ಪರಿಗಣಿಸುವಂತೆ ಸಲಹೆ ನೀಡಿದರು. ಜೊತೆಗೆ ಉತಿರಾಮರೂರು ದೇವಸ್ಥಾನಕ್ಕೆ ಭೇಟಿ ನೀಡಿ, ಅಲ್ಲಿ ಸುಮಾರು 1000 ವರ್ಷಗಳ ಹಿಂದೆ ಭಾರತದಲ್ಲಿ ಚಾಲ್ತಿಯಲ್ಲಿದ್ದ ಚುನಾವಣಾ ನಿಯಮಗಳ ವಿವರಗಳು, ಚುನಾವಣೆಯಲ್ಲಿ ಸ್ಪರ್ಧಿಸಬಹುದಾದ ಅಭ್ಯರ್ಥಿಗಳ ಅರ್ಹತೆಗಳನ್ನು ಸೇರಿದಂತೆ ವಿವರಗಳನ್ನು ಓದಬೇಕೆಂದು ಅವರು ಸೂಚಿಸಿದ್ದರು.

ಶ್ರೀ ಶೇಷನ್ ಅವರ ಮಾತಿನಲ್ಲಿ ಹೇಳುವುದಾದರೆ, ‘ಚುನಾವಣಾ ಸುಧಾರಣೆಗಳ ಮನ್ನಣೆ ಕಂಚಿ ಮಹಸ್ವಾಮಿಗೆ ಹೋಗಬೇಕು. 97 ನೇ ವಯಸ್ಸಿನಲ್ಲಿ, ಅವರು ಅಂತಹ ಸ್ಪಷ್ಟತೆಯನ್ನು ಹೊಂದಿದ್ದರು ಮತ್ತು ಉತಿರಾಮೇರು ದೇವಾಲಯದ ಉತ್ತರದ ಗೋಡೆಗಳ ಮೇಲೆ ಕೆತ್ತಿರುವ ಚುನಾವಣಾ ನಿಯಮಗಳ ಸೂಕ್ಷ್ಮ ವಿವರಗಳನ್ನು ಅವರು ವಿವರಿಸಿದರು. ಮತ್ತು ಈ ಸುಧಾರಣೆಗಳಲ್ಲಿ ಹತ್ತನೇ ಒಂದು ಭಾಗವನ್ನು ಜಾರಿಗೆ ತಂದರೂ ಭಾರತಕ್ಕೆ ಒಂದು ದೊಡ್ಡ ಸೇವೆಯಾಗಲಿದೆ ಎಂದು ನನಗೆ ತಿಳಿಸಿದ್ದರು”. ನಂತರ ನಡೆದದ್ದು ಇತಿಹಾಸ.

ಅಂಕಣಕಾರ ಟಿ.ಜೆ.ಎಸ್. ಜಾರ್ಜ್ ಅವರು “ಪ್ರಜಾಪ್ರಭುತ್ವವು ಹೈಡ್ರಾ-ಹೆಡೆಡ್ ದೈತ್ಯನಾಗದಂತೆ ನೋಡಿಕೊಳ್ಳಲು ಒಬ್ಬ ಮನುಷ್ಯನು ಏನು ಮಾಡಬಹುದೆಂದು ಶೇಷನ್ ತೋರಿಸಿದರು. ಕಾಲಾನಂತರದಲ್ಲಿ ಶೇಷನ್ ನಿವೃತ್ತರಾದರು. ಮತ್ತು ರಾಕ್ಷಸತ್ವಕ್ಕೂ ಅಂಕುಶ ಹಾಕಲಾಯಿತು.” ಎಂದಿದ್ದರು.

ತಮಿಳುನಾಡಿನ ಎಷ್ಟು ರಾಜಕಾರಣಿಗಳಿಗೆ ಇದು ತಿಳಿದಿದೆ ಎಂದು ನನಗೆ ಅನುಮಾನವಿದೆ. ಪ್ರಧಾನ ಮಂತ್ರಿ ಇದನ್ನು ರಾಷ್ಟ್ರೀಯ ವೇದಿಕೆಯಲ್ಲಿ ಹಂಚಿಕೊಳ್ಳುವ ಮೂಲಕ ನಮ್ಮ ಸಂಸ್ಕೃತಿಯ ಶ್ರೀಮಂತಿಕೆಯನ್ನು ದೇಶವಾಸಿಗಳಿಗೆ ಪರಿಚಯಿಸಿರುವುದು ನಿಜಕ್ಕೂ ಶ್ಲಾಘನೀಯ.

ಉತಿರಾಮೆರೂರ್ ನಲ್ಲಿರುವ ವಿಷ್ಣು ದೇವಸ್ಥಾನವು ವಿಶ್ವಕರ್ಮನಿಂದ ನಿರ್ಮಿಸಲ್ಪಟ್ಟಿದ್ದು ಅಪರೂಪದ ದೇವಾಲಯಗಳಲ್ಲಿಒಂದಾಗಿದೆ. ಇದು ಮೊದಲ ಅಷ್ಟಾಂಗ ವಿಮಾನವಾಗಿದೆ. ಚೆನ್ನೈನ ಬೆಸೆಂಟ್ ನಗರದಲ್ಲಿರುವ ಅಷ್ಟಲಕ್ಷ್ಮಿ ದೇವಸ್ಥಾನದಲ್ಲಿರುವ ವಿಮಾನವನ್ನು ಈ ವಿಮಾನದ ಮಾದರಿಯಲ್ಲೇ ವಿನ್ಯಾಸಗೊಳಿಸಲಾಗಿದೆ. ನಮ್ಮ ಶ್ರೀಮಂತಿಕೆಯನ್ನು ತಿಳಿಯಲು ಮತ್ತು ಅರ್ಥಮಾಡಿಕೊಳ್ಳಲು ಖಂಡಿತವಾಗಿಯೂ ಭೇಟಿ ನೀಡಬೇಕಿರುವ ಸ್ಥಳ ಉತಿರಾಮರೂರು.

ಲೇಖಕರು: ಶ್ರೀವತ್ಸ್ ಶೃಂಗೇರಿ

Leave a Reply

Your email address will not be published.

This site uses Akismet to reduce spam. Learn how your comment data is processed.